Tag: ದಸರಾ

  • ಮೈಸೂರಿಗೆ ಮಾಜಿ ಸಿಎಂ ಗುಡ್ ಬೈ?

    ಮೈಸೂರಿಗೆ ಮಾಜಿ ಸಿಎಂ ಗುಡ್ ಬೈ?

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಅರಮನೆ ನಗರಿ ಮೈಸೂರಾಗಿದೆ. ಆದರೆ ಈಗ ದಸರಾ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ದೂರ ಇದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ, ಮುಂದಿನ ದಸರಾ ಕೂಡ ನನ್ನ ನೇತೃತ್ವದಲ್ಲಿ ನಡೆಯುತ್ತದೆ ನೋಡಿ ಎಂದು ಕಳೆದ ದಸರಾದಲ್ಲಿ ಅಬ್ಬರಿಸಿದ್ದರು. ಆದರೆ ಈಗ ಅದೇ ಮೈಸೂರಿಗೆ ಹೋಗಲು ನಿರಾಸಕ್ತಿ ತೋರುತ್ತಿದ್ದಾರೆ.

    ಸಿದ್ದರಾಮಯ್ಯ ವೈಯುಕ್ತಿವಾಗಿಯೂ ಕೂಡ ಮೈಸೂರು ಪ್ರವಾಸ ಕೈಗೊಳ್ಳುತ್ತಿಲ್ಲ. ಮುಂದಿನ ವಾರ ಬಾಗಲಕೋಟೆ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಮಂಗಳವಾರ ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ನಾಪಮತ್ರ ಸಲ್ಲಿಕೆ ಇದೆ. ಆದ್ದರಿಂದ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ನವರಾತ್ರಿ ದಿನಗಳಲ್ಲಿ ಮೈಸೂರಿಗೆ ತೆರಳದಿರಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಮೈಸೂರು ದಸರಾಗಳನ್ನ ನೋಡಿದ ಬೆಳೆದ ಸಿದ್ದರಾಮಯ್ಯಗೆ ಈಗ ನಿರಾಸಕ್ತಿ ಏಕೆ? ಎಂಬ ಪ್ರಶ್ನೆ ಕೇಳಿಬರುತ್ತಿದೆ. ಸಿದ್ದರಾಮಯ್ಯ ಅವರು ಉಪಚುನಾವಣೆಯ ನೆಪ ಹೇಳಿ ಮೈಸೂರು ಪ್ರವಾಸಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ಸೋತಿದ್ದರು. ಆದ್ದರಿಂದ ಮುಜುಗರದಿಂದ ಮೈಸೂರಿಗೆ ಹೋಗುತ್ತಿಲ್ಲ ಎನ್ನಲಾಗಿದೆ.

    ಸಿದ್ದರಾಮಯ್ಯ ಜಿ.ಟಿ.ದೇವೇಗೌಡರ ವಿರುದ್ಧ ನಿಂತು ಸೋತಿದ್ದರು. ಈಗ ಜಿ.ಟಿ.ದೇವೇಗೌಡರು ಮೈಸೂರು ಉಸ್ತುವಾರಿ ಸಚಿವರು ಇವರ ನೇತ್ವದಲ್ಲಿಯೇ ದಸರಾ ನಡೆಯುತ್ತಿದೆ. ಸಮ್ಮಿಶ್ರ ಸರ್ಕಾರದ ದಸರಾದಲ್ಲಿ ಕಾಂಗ್ರೆಸ್ ಮಂಕಾಗಿ ಜೆಡಿಎಸ್ ರಂಗಾಗಿದೆ. ಯಾಕೆಂದರೆ ಕಾಂಗ್ರೆಸ್ಸಿನ ಮೂವರು ಸಚಿವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕೆಲ ಶಾಸಕರು ಆರೋಪಿಸಿದ್ದರು. ದಸರಾ ಉದ್ಘಾಟನೆಯ ದಿನವೂ ಕೆಲ ಕೈ ಶಾಸಕರುಗಳೇ ಗೈರು ಹಾಜರಾಗಿದ್ದರು. ಆನಂತರ ಕಾರ್ಯಕ್ರಮಗಳಲ್ಲೂ ಕಾಂಗ್ರೆಸ್ ಶಾಸಕರು ಬಂದಿರಲಿಲ್ಲ.

    ಇವೆಲ್ಲವನ್ನು ಗಮನಿಸಿದ ಸಿದ್ದರಾಮಯ್ಯ ಅವರು, ಜಿ.ಟಿ. ದೇವೇಗೌಡರು ಇರಬೇಕಾದರೆ ನಾನು ಅಲ್ಲಿಗೆ ಹೋಗುವುದು ಸರಿಯಿಲ್ಲ. ನಾನು ಮೈಸೂರಿಗೆ ಹೋಗಿ ಮುಜುಗರ ಆಗೋದು ಬೇಡ ಎಂದು ನಿರ್ಧಾರ ಮಾಡಿದ್ದಾರೆ ಅಂತ ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಎಚ್‍ಡಿಕೆ ಮಾತು ನಿಜವಾಯಿತೇ? ಜೆಡಿಎಸ್ ಕಡೆ ಒಲವು ತೋರಿಸುತ್ತಿದ್ದಾರಾ ಬಿಜೆಪಿ ಶಾಸಕ!

    ಸಿಎಂ ಎಚ್‍ಡಿಕೆ ಮಾತು ನಿಜವಾಯಿತೇ? ಜೆಡಿಎಸ್ ಕಡೆ ಒಲವು ತೋರಿಸುತ್ತಿದ್ದಾರಾ ಬಿಜೆಪಿ ಶಾಸಕ!

    ಮೈಸೂರು: ಬಿಜೆಪಿಯವರು ಆಪರೇಷನ್‍ಗೆ ಮುಂದಾದರೆ, ನಾವು ಕೂಡಾ ಅವರ ಕೆಲವು ಶಾಸಕರನ್ನು ನಮ್ಮತ್ತ ಸೆಳೆದುಕೊಳ್ಳುತ್ತೇವೆ ಅಂತಾ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಾತು ಸತ್ಯವಾಯಿತೇ ಎನ್ನುವ ಚರ್ಚೆ ಭಾರೀ ಸದ್ದು ಮಾಡುತ್ತಿದೆ.

    ಹೌದು, ಮೈಸೂರು ದಸರಾದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಪ್ರತಿ ಕಾರ್ಯಕ್ರಮದಲ್ಲಿಯೂ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಶಾಸಕರ ದಸರಾ ಕಾರ್ಯಕ್ರಮ ಬಹಿಷ್ಕಾರ ಭರಾಟೆಯಲ್ಲಿಯೂ ನಿರಂಜನ್ ಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ಬಿಜೆಪಿ ನಾಯಕರಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

    ಶುಕ್ರವಾರ ನಡೆದ ಯುವ ದಸರಾ ಕಾರ್ಯಕ್ರಮವನ್ನು ಬಿಜೆಪಿ ಶಾಸಕರು ಬಹಿಷ್ಕಾರ ಮಾಡಿದ್ದರು. ಇತ್ತ ನನಗೆ ಆಹ್ವಾನ ಪತ್ರಿಕೆಯೇ ಬಂದಿಲ್ಲ ಅಂತಾ ಶಾಸಕ ಎಲ್.ನಾಗೇಂದ್ರ ಆಹ್ವಾನ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ದಸರಾ ಉದ್ಘಾಟನೆಗೆ ಎಚ್.ಡಿ.ಕುಮಾರಸ್ವಾಮಿ ಅವರು ತಡವಾಗಿ ಆಗಮಿಸಿದರು ಅಂತಾ ನಂಜನಗೂಡು ಶಾಸಕ ಹರ್ಷವರ್ಧನ್ ಬಹಿಷ್ಕಾರ ಮಾಡಿದ್ದರು. ಆದರೆ ಶಾಸಕ ನಿರಂಜನ್ ಕುಮಾರ್ ಅವರು ಮಾತ್ರ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸುವ ಬಹುತೇಕ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ.

    ಈ ಹಿಂದೆ ಶಾಸಕ ನಿರಂಜನ್ ಕುಮಾರ್ ಅವರನ್ನು ಜೆ.ಡಿ.ಎಸ್ ನಾಯಕರು ಸಂಪರ್ಕ ಮಾಡಿದ್ದಾರೆ ಎಂದು ಚರ್ಚೆ ನಡೆದಿತ್ತು. ಇದಕ್ಕೆ ಸ್ಪಷ್ಟಣೆ ನೀಡಿದ್ದ ಶಾಸಕರು, ನನ್ನನ್ನ ಯಾರೂ ಸಂಪರ್ಕಿಸಿಲ್ಲ ಅಂತಾ ಹೇಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅದ್ಧೂರಿಯಾಗಿ ಆರಂಭಗೊಂಡ ಯುವ ದಸರಾ

    ಅದ್ಧೂರಿಯಾಗಿ ಆರಂಭಗೊಂಡ ಯುವ ದಸರಾ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಅಕ್ಷರಶಃ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ತೋರ್ಪಡಿಸುತ್ತಿದೆ. ದಸರಾ ಆರಂಭವಾಗಿ ಮೂರು ದಿನಗಳು ಕಳೆದಿದ್ದು, ಪ್ರತಿದಿನ ಒಂದೊಂದು ವಿಭಿನ್ನ ಕಾರ್ಯಕ್ರಮದ ಮೂಲಕ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

    ಮೈಸೂರಿನ ಮಹಾರಾಜ ಮೈದಾನದಲ್ಲಿ ಶುಕ್ರವಾರ ರಾತ್ರಿ ಆರಂಭಗೊಂಡ ಯುವ ದಸರಾ ಕಾರ್ಯಕ್ರಮ ಅಕ್ಷರಶಃ ಮನರಂಜನೆಯೆ ಭೋಜನವನ್ನೇ ಉಣಬಡಿಸಿದೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ವೇದಿಕೆಯ ಮೇಲೆ ಬಂದ ಜಾನಪದ, ಭಾವಗೀತೆ ಭಕ್ತಿಗೀತೆಗಳಲ್ಲಿ ಭಕ್ತಹೂರಣವೇ ತುಂಬಿತ್ತು. ಹಾಡನ್ನು ಕೇಳಿ ಸುಸ್ತಾಗಿದ್ದ ಯುವಸ್ತೋಮವನ್ನು ‘ತರ ತರ ಹಿಡಿಸಿದೆ ಮನಸಿಗೆ ನೀನು’ ಮತ್ತು ‘ಅಕ್ಕ ನಿನ್ ಮಗಳು ನಂಗ್ ಚಿಕ್ಕೋಳ್ ಆಗಲ್ವಾ’ ಎಂದು ಎಂಟ್ರಿಕೊಟ್ಟ ನಟಿ ರಾಗಿಣಿ ರಂಜಿಸಿದ್ದಾರೆ. ನಟಿ ಸಾನ್ವಿ ಪಡ್ಡೆ ಹೈಕ್ಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಇದಾದ ಬಳಿಕ ಕಾಲೇಜು ವಿದ್ಯಾರ್ಥಿಗಳ ತಂಡ ಮಾಡಿದ ಚಾಮುಂಡೇಶ್ವರಿ ವೃತ್ತಾಂದ ಮತ್ತು ಶಿವತಾಂಡವದ ನೃತ್ಯ ನೆರೆದಿದ್ದವರನ್ನು ಭಕ್ತಿಯ ಪರಕಾಷ್ಠೆಯಲ್ಲಿ ತೇಲುವಂತೆ ಮಾಡಿತು.

    ಸಿಎಂ ಕುಮಾರಸ್ವಾಮಿ ತಮ್ಮ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಓಪನ್ ಬಸ್ಸಿನಲ್ಲಿ ಮೈಸೂರಿನ ವಿದ್ಯುತ್ ಅಲಂಕಾರವನ್ನು ವೀಕ್ಷಣೆ ಮಾಡಿ ಯುವ ದಸರಾ ವೇದಿಕೆಗೆ ಬಂದಿದ್ದರು. ಕಾರ್ಯಕ್ರಮವನ್ನು ಸುಧಾಮೂರ್ತಿ ಅವರಿಗೆ ಹೇಳಿ ಉದ್ಘಾಟನೆ ಮಾಡಿಸಿದ್ದಾರೆ. ನಂತರ ಜನರ ಮಧ್ಯ ಭಾಗದಲ್ಲಿ ಹಾಕಿದ್ದ ಚೇರ್ ನಲ್ಲಿ ಸುಧಾಮೂರ್ತಿ ಅವರೊಂದಿಗೆ ಕಾರ್ಯಕ್ರಮ ವೀಕ್ಷಣೆ ಮಾಡಲು ಕುಳಿತ್ರು. ಇದಾದ ಬಳಿಕ ಯುವ ದಸರಾ ವೇದಿಕೆಯಲ್ಲಿ ಸಂಗೀತದ ಮಿಂಚೆ ಪಸರಿಸಿದಂತೆ ಆಗಿತ್ತು.

    ಮೊದಲಿಗೆ ವಿಜಯ್ ಪ್ರಕಾಶ್ ಕಂಠ ಸಿರಿಯಲ್ಲಿ ಬಂದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಗೀತೆಗೆ ಜನರು ಫುಲ್ ಫೀದಾ ಆಗಿದ್ದರು. ಮೊಬೈಲ್ ನಲ್ಲಿ ಟಾರ್ಚ್ ಹಾಕಿ ವಿಜಯ್ ಪ್ರಕಾಶ್ ಕಡೆ ಹಿಡಿದು ತಲೆದೂಗಿಸಿದ್ದಾರೆ. ಬೆಳಗ್ಗೆ ಎದ್ದು ಯಾರಾ ಮುಖ ನಾನು ನೋಡಿದೆ ಗೀತೆಗೆ ಯುವಕರು ದನಿಗೂಡಿಸಿ ಫುಲ್ ಎಂಜಾಯ್ ಮಾಡಿದ್ದಾರೆ. ನಂತರ ಸಿಎಂ ಕುಮಾರಸ್ವಾಮಿ ಅವರು ವಿಜಯ್ ಪ್ರಕಾಶ್ ಗೆ ಒಳಿತು ಮಾಡು ಮನುಸ ಗೀತೆ ಹಾಡುವಂತೆ ಮನವಿ ಮಾಡಿದ್ದು, ಅದರಂತೆ ವಿಜಯ್ ಪ್ರಕಾಶ್ ಒಳಿತು ಮಾಡು ಮನಸು ಗೀತೆ ಹಾಡೋಕೆ ಪ್ರಾರಂಭ ಮಾಡಿದ್ರು. ಈ ವೇಳೆ ಸಿಎಂ ಕುಮಾರಸ್ವಾಮಿ ವಿಜಯ್ ಪ್ರಕಾಶ್ ಕಂಠದಲ್ಲಿ ಬಂದ ಒಳಿತು ಮಾಡು ಮನಸು ಗೀತೆ ಕೇಳಿ ಕಣ್ಣೀರು ಹಾಕಿದ್ದಾರೆ.

    ದಸರೆಯ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಇನ್ನೂ ಐದು ದಿನಗಳ ಕಾಲ ಯುವ ದಸರಾ ಮೂಲಕ ಯುವಸ್ತೋಮಕ್ಕೆ ಸಖತ್ ಮಜಾ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಸಿ ಬಿಸಿ ರಾಗಿಮುದ್ದೆ, ನಾಟಿಕೋಳಿ ಸೇವಿಸಿದ್ರು ಸ್ಪರ್ಧಿಗಳು!

    ಬಿಸಿ ಬಿಸಿ ರಾಗಿಮುದ್ದೆ, ನಾಟಿಕೋಳಿ ಸೇವಿಸಿದ್ರು ಸ್ಪರ್ಧಿಗಳು!

    ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳದಲ್ಲಿ ಪ್ರತಿದಿನ ಒಂದೊಂದು ಸ್ಪರ್ಧೆ ನಡೆಸುತ್ತಿದ್ದು, ಜನರು ಸ್ಪರ್ಧೆಯಲ್ಲಿ ಪಾಲ್ಗೊಂಡು ಫುಲ್ ಎಂಜಾಯ್ ಮಾಡುತ್ತಿದ್ದಾರೆ.

    ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಇಂದು ನಡೆದ ರಾಗಿ ಮುದ್ದೆ ಮತ್ತು ನಾಟಿ ಕೋಳಿ ತಿನ್ನೋ ಸ್ಪರ್ಧೆಯಲ್ಲಿ ಸ್ಪರ್ಧಿಗಳು ರಾಗಿ ಮುದ್ದೆಯನ್ನು ತಾ ಮುಂದು ತಾ ಮುಂದು ಎಂದು ತಿಂದರು. ಒಬ್ಬ ಸ್ಪರ್ಧಿಗೆ ನಾಲ್ಕು ಮುದ್ದೆ ನಾಟಿ ಕೋಳಿ ಸಾಂಬರ್ ಮತ್ತು ಮೂರು ಮಾಂಸದ ಪೀಸ್ ಗಳನ್ನು ನೀಡಲಾಗಿತ್ತು.

    ಸ್ಪರ್ಧೆಯಲ್ಲಿ 10 ಮಂದಿಯನ್ನು ಲಾಟರಿ ಚೀಟಿ ಮೂಲಕ ಆಯ್ಕೆ ಮಾಡಲಾಗಿತ್ತು. ನೋಡು ನೋಡುತ್ತಿದ್ದ ಹಾಗೇ ಸ್ಪರ್ಧಿಗಳು ಮುದ್ದೆಯನ್ನು ನಾಟಿ ಕೋಳಿಗೆ ನೆಂಚಿಕೊಂಡು ಬಾಯಿ ಚಪ್ಪರಿಸಿದರೆ, ಮಾಂಸದ ಪೀಸ್ ಗಳನ್ನು ಮಸ್ತ್ ಆಗಿ ತಿಂದಿದ್ದಾರೆ. ಮೂರು ನಿಮಿಷದಲ್ಲಿ ಶ್ರೀರಂಗಪಟ್ಟಣ ಕೌಶಿಕ್ ರಾಗಿ ಮುದ್ದೆ ನಾಟಿ ಕೋಳಿ ತಿನ್ನೋ ಮೂಲಕ ಮೊದಲ ಸ್ಥಾನ ಪಡೆದರೆ, ಮೈಸೂರಿನ ಶಿವಾನಂದ್ ಮೂರುವರೆ ನಿಮಿಷದಲ್ಲಿ ತಿನ್ನೋ ಮೂಲಕ ಎರಡನೇ ಸ್ಥಾನ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ರೈತ ದಸರಾಕ್ಕೆ ಚಾಲನೆ: ಏನೆಲ್ಲ ಸ್ಪರ್ಧೆ ನಡೆಯುತ್ತದೆ?

    ಮೈಸೂರು ರೈತ ದಸರಾಕ್ಕೆ ಚಾಲನೆ: ಏನೆಲ್ಲ ಸ್ಪರ್ಧೆ ನಡೆಯುತ್ತದೆ?

    ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ ದಿನದಿಂದ ಮೈಸೂರಿನಲ್ಲಿ ಸಂಸ್ಕೃತಿಯ ಅನಾವರಣವಾಗುತ್ತಿದೆ. ದಸರಾ ಮಹೋತ್ಸವದ ಮೂರನೇ ದಿನವಾದ ಇಂದು ರೈತ ದಸರಾಗೆ ಚಾಲನೆ ಸಿಕ್ಕಿತು.

    ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಚಾಲನೆ ನೀಡಿದರು. ನಂತರ ಸಚಿವ ಶಿವಕುಮಾರ್ ರೆಡ್ಡಿ ಎತ್ತಿನಗಾಡಿ ಹತ್ತಿ ಎತ್ತಿನ ಹಗ್ಗ ಮತ್ತು ಚಾವಟಿ ಹಿಡಿದು ಎತ್ತಿನಗಾಡಿಯ ಸಾರಥಿಯಾದರು. ಈ ವೇಳೆ ಸಚಿವರಾದ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ಶಿವಶಂಕರ್ ರೆಡ್ಡಿಗೆ ಸಾಥ್ ನೀಡಿದರು.

    ಮೆರವಣಿಗೆಯಲ್ಲಿ ಅಲಂಕಾರಗೊಂಡ ಎತ್ತಿನಗಾಡಿಗಳು, ಬಂಡೂರು ಕುರಿಗಳು, ಗ್ರಾಮೀಣ ಸೋಬಗು ಸಾರುವ ಮತ್ತು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯುಳ್ಳ ಸ್ತಬ್ಧ ಚಿತ್ರಗಳು ಗ್ರಾಮೀಣ ಸೊಬಗನ್ನು ಬಿಂಬಿಸಿದವು. ಕಂಸಾಳೆ, ಕೋಲಾಟ, ಗಾರು ಗೊಂಬೆ, ಹುಲಿವೇಶ, ಪೂಜಾ ಕುಣಿತ, ನಂದಿ ಧ್ವಜ ಕುಣಿತ, ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ರಂಗು ತಂದವು.

    ಮೆರವಣಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಅರಸು ರಸ್ತೆ ಮೂಲಕ ಜೆಕೆ ಮೈದಾನ ತಲುಪಿತು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಮುಂದಿನ ದಿನಗಳಲ್ಲಿ ರೈತರಿಗೆ ಉಪಯುಕ್ತವಾಗುವ ಯೋಜನೆಗಳನ್ನು ಜಾರಿಗೆ ಮಾಡಲಾಗುತ್ತದೆ. ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ಸಾಲವನ್ನು ಡಿಸೆಂಬರ್ ತಿಂಗಳಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಎರಡನೇ ಹಂತದ ಮೂಲಕ ಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.

    ಶುಕ್ರವಾರದಿಂದ ಭಾನುವಾರದವರೆಗೆ ರೈತ ದಸರಾ ನಡೆಯಲಿದ್ದು, ವಸ್ತು ಪ್ರದರ್ಶನ, ಗ್ರಾಮೀಣ ಕ್ರೀಡಾಕೂಟ, ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಆರಂಭವಾಗಿದೆ. ಇಂದು ದಸರಾ ಹಬ್ಬದ ಮೂರನೇ ದಿನದ ಹಬ್ಬ-ಆಚರಣೆಗಳು ಶುರುವಾಗಿದೆ. ದಸರಾ ಅಂದರೆ ಒಂಬತ್ತು ದಿನ ಒಂದೊಂದು ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಹಬ್ಬ ಅಂದರೆ ಸಿಹಿ ಮಾತ್ರವಲ್ಲದೇ ಬೇರೆ ತಿಂಡಿಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಮೈಸೂರು ಬೋಂಡಾ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಗ್ರಿಗಳು:
    1. ಮೈದಾ ಹಿಟ್ಟು – 1.5 ಬಟ್ಟಲು
    2. ಅಕ್ಕಿ ಹಿಟ್ಟು – 1 ಬಟ್ಟಲು
    3. ಗಟ್ಟಿ ಮೊಸರು – 1/4 ಲೀಟರ್
    4. ಜೀರಿಗೆ -ಸ್ವಲ್ಪ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಎಣ್ಣೆ – ಕರಿಯಲು
    7. ಅಡುಗೆ ಸೋಡಾ – ಚಿಟಿಕೆ

    ಮಾಡುವ ವಿಧಾನ:
    * ಒಂದು ಬಟ್ಟಲಿಗೆ ಮೈದಾ ಹಿಟ್ಟು, ಅಕ್ಕಿಹಿಟ್ಟನ್ನು ಜರಡಿ ಹಿಡಿದು ಹಾಕಿಕೊಳ್ಳಿ
    * ಅದಕ್ಕೆ ಜೀರಿಗೆ, ಉಪ್ಪು, ಸೋಡಾ ಹಾಕಿ ಮಿಕ್ಸ್ ಮಾಡಿ.
    * ಈಗ ಗಟ್ಟಿ ಮೊಸರು ಹಾಕಿ ಬೋಂಡಾ ಹದಕ್ಕೆ ಕಲಸಿ. (ಹಿಟ್ಟು ಕಲಸಲು ನೀರು ಬಳಸಬೇಡಿ)
    * ಕಾದ ಎಣ್ಣೆಗೆ ಬೋಂಡಾ ರೀತಿ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಕರಿಯಿರಿ.
    * ಸಿಂಪಲ್ ಮೈಸೂರು ಬೋಂಡಾ ಸವಿಯಲು ಸಿದ್ಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸಿಗರು ಫಿದಾ – 8 ಕೋಟಿಯಲ್ಲಿ ಗಾಜಿನ ಮನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ದಿನೇ ದಿನೇ ಕಳೆಗಟ್ಟುತ್ತಿದೆ. ಅದರಲ್ಲೂ ದಸರಾ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ಪ್ರದರ್ಶನ ಎಲ್ಲರ ಕಣ್ಮನಸೆಳೆಯುತ್ತಿದೆ.

    ಮೈಸೂರಿನ ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಇಲ್ಲಿ ಗುಲಾಬಿ ರಂಗಿನಲ್ಲಿ ಅನಾವರಣಗೊಂಡಿರುವ ಬಲರಾಮ ದ್ವಾರ, ಕೈ ಬೀಸಿ ಕರೀತಿರುವ ಆನೆ ಗಾಡಿ, ಕಣ್ಣುಕುಕ್ಕುತ್ತಿರುವ ಡಾಲ್ಫಿನ್ ಗೆ ಸಾಥ್ ನೀಡಿರುವ ಮಶ್ರೂಮ್ ಕಲಾಕೃತಿ, ಪುಷ್ಪನಮನ ಸ್ವೀಕರಿಸುತ್ತಾ ಇರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಇವುಗಳ ನಡುವೆ ಚೆಲುವಿನ ನಗೆ ಬೀರುತ್ತಿರುವ ಗ್ಲಾಸ್ ಹೌಸ್, ಗಾಜಿನ ಮನೆಗೆ ಕಳೆ ತುಂಬಿರುವ ದೆಹಲಿಯ ಲೋಟಸ್ ಟೆಂಪಲ್ ಕಲಾಕೃತಿ ಇದೆಲ್ಲವನ್ನು ಫಲಪುಷ್ಪ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

    ದಸರಾ ಹಿನ್ನೆಲೆಯಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಶೋನಲ್ಲಿ ಡಿಫರೆಂಟ್ ಟೈಪ್ ಆಫ್ ಫ್ಲವರ್ಸ್ ಲಗ್ಗೆ ಇಟ್ಟಿದ್ದು, ಉದ್ಯಾನವನಕ್ಕೆ ಕಳೆ ತುಂಬಿದ್ದಾರೆ. ಡಿಫರೆಂಟ್ ಡಿಫರೆಂಟ್ ಕಲಾಕೃತಿಗಳಿಗೆ ಸಿಟಿ ಮಂದಿ ಫಿದಾ ಆಗಿದ್ದಾರೆ. ಇಡೀ ಉದ್ಯಾನವನ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಫಿದಾ ಆಗಿರೋದಾಗಿ ಪ್ರವಾಸಿಗರು ಹೇಳಿದ್ದಾರೆ.

    ಬಣ್ಣ ಬಣ್ಣದ ದೇಶ-ವಿದೇಶಿಯ ಹೂಗಳಿಂದ ಕುಪ್ಪಣ್ಣ ಪಾರ್ಕ್ ಸಿಂಗಾರಗೊಂಡಿದೆ. ಅಮರ್ ಜವಾನ್, ರೊಮಿಯೋ ಜೂಲಿಯಟ್ ಸೇರಿದಂತೆ ವಿಭಿನ್ನ ಕಲಾಕೃತಿ ಪ್ರವಾಸಿಗರ ಮನಸೊರೆಗೊಳಿಸುತ್ತಿವೆ. 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆ ಎಲ್ಲರ ಗಮನ ಸೆಳೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು: ನಗರದಲ್ಲಿ ಆಯೋಜಿಸಿದ್ದ ಆಹಾರ ಮೇಳದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಹಿಳಾ ಮಣಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು.

    ನಾಡಹಬ್ಬ ದಸರಾಗೆ ಚಾಲನೆ ಸಿಕ್ಕ ನಂತರ ಅರಮನೆ ನಗರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ವಿಶಿಷ್ಟ ಕಾರ್ಯಕ್ರಮಗಳು ನಾಡಿನ ಜನರನ್ನು ಕೈಬೀಸಿ ಕರೆಯುತ್ತಿವೆ. ಬುಧವಾರ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಶಿಷ್ಟವಾಗಿ ಮಹಿಳೆಯರಿಗಾಗಿಯೇ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಕರು ಹಮ್ಮಿಕೊಂಡಿದ್ದರು. ಈ ಸ್ಪರ್ಧೆಗೆ ಲಕ್ಕಿ ಡಿಪ್ ಮೂಲಕ 10 ಜನರನ್ನು ಆಯ್ಕೆ ಮಾಡಿ ಇಡ್ಲಿ ತಿನ್ನುವ ಸ್ಪರ್ಧೆಗೆ ಆರಿಸಲಾಗಿತ್ತು.

    ಮಹಿಳೆಯರು ಅಡುಗೆ ಮಾಡಲು ಸೈ, ತಿನ್ನುವುದಕ್ಕೆ ಸೈ ಎನ್ನುವಂತೆ ತಾ ಮುಂದು ನಾ ಮುಂದು ಎಂಬಂತೆ ಗಬಗಬನೆ ಇಡ್ಲಿಯನ್ನು ತಿಂದರು. ಆದರೆ ಪಡುವಾರಹಳ್ಳಿಯ ಲಲಿತ ಪುಟ್ಟೇಗಾಡ ಎಂಬವರು ಎಲ್ಲರಿಗಿಂತ ಮೊದಲು ಇಡ್ಲಿಯನ್ನು ತಿಂದು ಮುಗಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಮಣಿಯರು ಇಡ್ಲಿಯನ್ನು ತಿನ್ನುವ ಸ್ಪರ್ಧೆಯನ್ನು ನೋಡಲು ಜನ ಮುಗಿಬಿದ್ದಿದ್ದರು.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಶಾಸ್ತ್ರೋಕ್ತವಾಗಿ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದ್ದರು.

    ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ದರು. ಇದಲ್ಲದೇ ಬುಧವಾರ ಬೆಳಗ್ಗೆ 11 ಗಂಟೆಗೆ ಅರಮನೆಯಲ್ಲಿ ಅದ್ಧೂರಿಯಾಗಿ ಖಾಸಗಿ ದರ್ಬಾರ್ ಸಹ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಲಪ್ರಳಯದ ನಂತ್ರ ಮಡಿಕೇರಿಯಲ್ಲಿ 9 ದಿನ ಸರಳ ದಸರಾ ಆಚರಣೆ

    ಜಲಪ್ರಳಯದ ನಂತ್ರ ಮಡಿಕೇರಿಯಲ್ಲಿ 9 ದಿನ ಸರಳ ದಸರಾ ಆಚರಣೆ

    ಮಡಿಕೇರಿ: ನಾಡಹಬ್ಬ ಐತಿಹಾಸಿಕ ದಸರಾಕ್ಕೆ ಮಡಿಕೇರಿಯಲ್ಲಿ ಚಾಲನೆ ಸಿಕ್ಕಿದೆ. ನಗರದ ನಾಲ್ಕು ಶಕ್ತಿದೇವತೆಯ ಕರಗಗಳು ಸಾಂಪ್ರದಾಯಿಕವಾಗಿ ನಗರ ಪ್ರದಕ್ಷಿಣೆ ಆರಂಭಿಸಿವೆ. ಜಲಪ್ರಳಯ ಹಿನ್ನಲೆ ಇದೇ ಮೊದಲ ಬಾರಿಗೆ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಗ್ತಿದ್ದು, 10 ದಿನಗಳ ಕಾಲ ಅದ್ಧೂರಿಯಿಂದ ನಡೆಯುತ್ತಿದ್ದ ದಸರಾ ಆಚರಣೆ ಕಾರ್ಯಕ್ರಮಗಳು 2 ದಿನಗಳಿಗೆ ಸೀಮಿತವಾಗಿವೆ. ಅದ್ಧೂರಿ ಇಲ್ಲದಿದ್ರೂ ಸರಳ ಹಾಗೂ ಸಾಂಪ್ರದಾಯಿಕವಾಗಿ ಮಡಿಕೇರಿ ದಸರಾ ಕೊಡಗಿನಲ್ಲಿ ಆಚರಣೆಯಾಗುತ್ತಿದೆ.

    ಕೊಡಗು ಕೇವಲ ಟೂರಿಸ್ಟ್ ಹಾಟ್ ಸ್ಪಾಟ್ ಮಾತ್ರ ಅಲ್ಲ. ಕೊಡಗಿನ ಹಬ್ಬ ಹರಿದಿನ ಹಾಗೂ ಆಚರಣೆಗಳು ವಿಭಿನ್ನವಾಗಿದ್ದು ಎಲ್ಲರ ಗಮನ ಸೆಳೆಯುತ್ತವೆ. ಅದರಲ್ಲೂ ಮಡಿಕೇರಿ ದಸರಾ ಅಂತೂ ಕೊಡಗಿನ ಪಾಲಿಗೆ ಅದ್ಧೂರಿಯ ಹಬ್ಬದಾಚರಣೆ. ಬೃಹತ್ತಾದ ವೇದಿಕೆ, ದಶದಿನಗಳು ಮನಸೂರೆಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳು, ದಶಮಂಟಪಗಳ ಶೋಭಾಯಾತ್ರೆ, ಡಿಜೆ ಸೌಂಡ್ಸ್, ಜನಸಾಗರ. ಇದು ಮಡಿಕೇರಿ ದಸರಾದ ಅದ್ಧೂರಿತನಕ್ಕೆ ಸಾಕ್ಷಿಯಾಗಿದ್ದವು.

    ಆದರೆ ಈ ಬಾರಿ ಮಡಿಕೇರಿಯ ಅದ್ಧೂರಿ ದಸರಾ ಆಚರಣೆಗೆ ಬ್ರೇಕ್ ಬಿದ್ದಿದೆ. ಪ್ರಾಕೃತಿಕ ವಿಕೋಪದಿಂದ ಕೊಡಗು ತತ್ತರಿಸಿರೋದರಿಂದ ಸರಳವಾಗಿ ಸಾಂಪ್ರದಾಯಿಕ ದಸರಾ ಆಚರಣೆಗೆ ದಸರಾ ಕಮೀಟಿ ಮುಂದಾಗಿದೆ. ಜಳಪ್ರಳಯದಿಂದ ಇಡೀ ಜಿಲ್ಲೆಯಲ್ಲೇ ಸೂತಕದ ಛಾಯೆ ಆವರಿಸಿದ್ದು, ಜನರು ಸಂಕಷ್ಟದಲ್ಲಿ ಕೈ ತೊಳೆಯುತ್ತಿದ್ದಾರೆ. ಈ ವೇಳೆ ಅದ್ಧೂರಿ ದಸರಾ ಆಚರಣೆ ಮುಂದಾಗದೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷ ಮಹೇಶ್ ಜೈನ್ ತಿಳಿಸಿದ್ದಾರೆ.

    ಮಡಿಕೇರಿ ದಸರಾ ಆಚರಣೆಯ ಕಾರ್ಯಕ್ರಮಗಳನ್ನು 10 ದಿನಗಳ ಬದಲಾಗಿ 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಸರ್ಕಾರದಿಂದ 50 ಲಕ್ಷ ಅನುದಾನ ಸಿಕ್ಕಿದ್ದು, ಅದರಲ್ಲೇ ದಸರಾ ಆಚರಣೆ ನಡೆಯುತ್ತಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ನಡೆಸುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

    ವಿಜಯದಶಮಿಯ ಪ್ರಮುಖ ಆಕರ್ಷಣೆಯಾಗಿದ್ದ ದಶಮಂಟಪಗಳ ಶೋಭಾಯಾತ್ರೆಯನ್ನು ಸರಳವಾಗಿ ಮಾಡಲು ತಯಾರಿ ನಡೆಯುತ್ತಿದೆ. ಮೈಸೂರು ದಸರಾ ಬಿಟ್ಟರೆ ಮಡಿಕೇರಿ ದಸರಾ ಸೂಪರ್ ಎಂದು ಹೇಳುತ್ತಿದ್ದ ಮಂದಿ ಇದೀಗ ಸರಳ ದಸರಾ ಆಚರಣೆ ಆಗುತ್ತಿರುವುದನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಪ್ರಾಕೃತಿಕ ವಿಕೋಪದ ಸೂತಕದ ಛಾಯೆಯಿಂದ ಕೊಡಗು ಜನರು ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಅದ್ಧೂರಿ ಹಾಗೂ ವಿಭಿನ್ನವಾಗಿ ದಸರಾ ಆಚರಿಸುವ ಮೂಲಕ ಗಮನ ಸೆಳೆಯುತ್ತಿದ್ದ ಮಡಿಕೇರಿ ದಸರಾ ಇದೇ ಮೊದಲ ಬಾರಿಗೆ ಸರಳವಾಗಿ ಆಚರಣೆ ಆಗುತ್ತಿರುವುದಿಂದ ಜನಸಾಮಾನ್ಯರಿಗೆ ನಿರಾಸೆ ಉಂಟು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv