Tag: ದಸರಾ

  • ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಚಾಮರಾಜನಗರ: ಆಪ್ತ ಸಹಾಯಕನಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಕಾರಿನಲ್ಲಿದ್ದ ಚಪ್ಪಲಿಯನ್ನು ಆತ ನನ್ನ ಬಳಿ ತಂದಾಗ ಹಾಗೆ ತರಬಾರದು ಎಂದು ಹೇಳಿದೆ. ನನ್ನ ಚಪ್ಪಲಿ ಮುಟ್ಡಿದ್ದ ಆತನನ್ನು ಮುಟ್ಟಿ ನಮಸ್ಕರಿಸಿ ನಾನೇ ಚಪ್ಪಲಿ ಧರಿಸಿಕೊಂಡಿದ್ದೇನೆ. ನಾನು ಮಾನವೀಯತೆಗೆ ಬೆಲೆ ಕೊಡುವ ಮನುಷ್ಯ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲರನ್ನು ಸರಿಸಮನಾಗಿ ಕಾಣುವ ಗುಣ ನನ್ನದು. ಮಾಧ್ಯಮಗಳಲ್ಲಿ ಬಂದ ವರದಿಯಿಂದ ಮನ ನೊಂದಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಆದರೆ ಪುಟ್ಟರಂಗಶೆಟ್ಟಿ ಚಪ್ಪಲಿ ಹಾಕಿಸಿಕೊಳ್ಳುವಾಗ ಪಿಎಗೆ ನಮಸ್ಕಾರ ಮಾಡಿಕೊಂಡಿಲ್ಲ. ಹೀಗಿದ್ದರೂ ಸಹ ನಾನು ನಮಸ್ಕಾರ ಮಾಡಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ಸೋಮವಾರ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು ಚಾಲನೆ ಮಾಡಿದ ನಂತರ ಅವರು ಕೆಳೆಗಿಳಿದು ನಡೆದು ಬರುತ್ತಿದ್ದಂತೆ ಅವರ ಆಪ್ತ ಸಹಾಯಕ ಪುಟ್ಟರಂಗಶೆಟ್ಟಿಗೆ ಚಪ್ಪಲಿ ತಂದು ತೊಡಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಚಿವ ಸಿ. ಪುಟ್ಟರಂಗಶೆಟ್ಟಿ ಸೌಜನ್ಯಕ್ಕಾದರೂ ಚಪ್ಪಲಿ ತೊಡಿಸುವ ತಮ್ಮ ಆಪ್ತ ಸಹಾಯಕನಿಗೆ ಬೇಡ ಎನ್ನದೇ ಸರ್ವಾಧಿಕಾರಿಯಂತೆ ಚಪ್ಪಲಿ ತೊಡಿಸಿಕೊಂಡು ಏನೂ ಆಗಿಲ್ಲವಂತೆ ನಡೆದು ಮುಂದೆ ಸಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=lPjIVJAvrF8

  • ಮಂಡ್ಯ ಜಿಲ್ಲೆಗೆ ಸಿಎಂ ಹೆಚ್‍ಡಿಕೆ, ಮಾಜಿ ಸಿಎಂ ಬಿಎಸ್‍ವೈ ಪ್ರವಾಸ!

    ಮಂಡ್ಯ ಜಿಲ್ಲೆಗೆ ಸಿಎಂ ಹೆಚ್‍ಡಿಕೆ, ಮಾಜಿ ಸಿಎಂ ಬಿಎಸ್‍ವೈ ಪ್ರವಾಸ!

    ಮಂಡ್ಯ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಪ್ರಚಾರಕ್ಕಾಗಿ ಇಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.

    ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಆಯೋಜನೆ ಮಾಡಿರುವ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಆರ್ ಅಶೋಕ್, ತೇಜಸ್ವಿನಿ ರಮೇಶ್ ಹಾಗೂ ಜಿಲ್ಲೆಯ ಸ್ಥಳೀಯ ನಾಯಕರು ಕೂಡ ಪಾಲ್ಗೊಳ್ಳಲಿದ್ದಾರೆ. ಸಭೆಯ ನಂತರ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮುಖಂಡರು ಮತ್ತೊಮ್ಮೆ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

    ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಆಗಮಿಸುತ್ತಿದ್ದು, ಮಧ್ಯಾಹ್ನ 2.30 ಕ್ಕೆ ಶ್ರೀರಂಗಪ್ಟಣದ ಕಿರಂಗೂರು ಬನ್ನಿ ಮಂಟಪದ ಬಳಿ ಚಾಲನೆ ನೀಡಲಿದ್ದಾರೆ. ಈಗಾಗಲೇ ಮೈಸೂರಿನ ದಸರಾ ಆನೆಗಳಾದ ಅಭಿಮನ್ಯು, ವರಲಕ್ಷ್ಮಿ ಹಾಗೂ ಕಾವೇರಿ ಆನೆಗಳು ಶ್ರೀರಂಗಪಟ್ಟಣದಲ್ಲಿ ಬೀಡು ಬಿಟ್ಟಿವೆ. ಉಪ ಚುನಾವಣೆ ನೀತಿ ಸಂಹಿತೆ ಇರುವುದರಿಂದ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ಸರ್ಕಾರದ ಸಾಧನೆ ಕುರಿತು ಹಾಗೂ ಮತದಾರರಿಗೆ ಯಾವುದೇ ರೀತಿಯ ಭರವಸೆ ನೀಡಬಾರದು ಎಂದ ಚುನಾವಣಾ ಆಯೋಗ ಷರತ್ತು ವಿಧಿಸಿದೆ. ಹೀಗಾಗಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಪಾಲ್ಗೊಂಡರೂ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯವಾಗಿ ಏನನ್ನು ಮಾತನಾಡುವಂತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು: ನಾಡಹಬ್ಬ ದಸರಾಗೆ ಚಾಲನೆ ಸಿಕ್ಕಾಗಿನಿಂದಲೂ ಅರಮನೆ ನಗರಿಯಲ್ಲಿ ದಿನಕ್ಕೊಂದು ಸ್ಪರ್ಧೆಗಳು ಗಮನಸೆಳೆಯುತ್ತಲೇ ಇದ್ದು, ಇಂದು ನಗರದ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಬಾಳೆಹಣ್ಣು ತಿನ್ನುವ ಸ್ಪರ್ಧೆ ಜನರಿಗೆ ಮನರಂಜನೆ ನೀಡಿತ್ತು.

    ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಮೊದಲನೆಯದಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು, ನಂತರ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿತ್ತು. ಲಾಟರಿ ಮೂಲಕ ಪ್ರತಿ ವಿಭಾಗಗಳಲ್ಲಿ 10 ಮಂದಿ ಸ್ಪರ್ಧಿಸಿದ್ದರು. ಸ್ಪರ್ಧೆಗೆ ಪಚ್ ಬಾಳೆಯನ್ನು ಬಳಸಲಾಗಿತ್ತು.

    ಶಾಲಾ ಮಕ್ಕಳ ವಿಭಾಗದಲ್ಲಿ 1.10 ನಿಮಿಷದಲ್ಲಿ ನಾಲ್ಕು ಬಾಳೆಹಣ್ಣು ತಿನ್ನುವ ಮೂಲಕ ಪಿರಿಯಾಪಟ್ಟಣದ ಭರತ್ ಮೊದಲನೇ ಸ್ಥಾನ ಪಡೆದುಕೊಂಡರೆ, 1.15 ನಿಮಿಷಗಳ ಮೂಲಕ ಯುಕ್ತ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ಪುರುಷರ ವಿಭಾಗದಲ್ಲಿ, 1.30 ನಿಮಿಷದಲ್ಲಿ 5 ಬಾಳೆಹಣ್ಣು ತಿಂದ ಮಹದೇವಸ್ವಾಮಿ ಪ್ರಥಮ ಸ್ಥಾನ ಗೆದ್ದರೆ, 1.45 ನಿಮಿಷಗಳ ಮೂಲಕ ಆಲಾಮ್ ಎರಡನೇ ಸ್ಥಾನ ಪಡೆದರು. ಅಲ್ಲದೇ ಮಹಿಳೆಯರ ವಿಭಾಗದಲ್ಲಿ ಪ್ರತಿಯೊಬ್ಬರಿಗೂ 4 ಬಾಳೆಹಣ್ಣುಗಳನ್ನು ನೀಡಲಾಗಿತ್ತು. 1.2 ನಿಮಿಷದಲ್ಲಿ ನಾಲ್ಕೂ ಬಾಳೆಹಣ್ಣು ತಿನ್ನುವ ಮೂಲಕ ಅಮೃತ ಪ್ರಥಮ ಸ್ಥಾನ ಪಡೆದರೆ, 1.8 ನಿಮಿಷದಲ್ಲಿ ತಿಂದ ಶೋಭಾ ಎರಡನೇ ಸ್ಥಾನ ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾದಲ್ಲೂ #Metoo ಸದ್ದು- ಸ್ತನ ಮುಟ್ಟಿ, ಪ್ರೈವೇಟ್ ಪಾರ್ಟ್ ಚೆನ್ನಾಗಿದೆ ಅಂತ ಅನುಚಿತ ವರ್ತನೆ

    ಮೈಸೂರು ದಸರಾದಲ್ಲೂ #Metoo ಸದ್ದು- ಸ್ತನ ಮುಟ್ಟಿ, ಪ್ರೈವೇಟ್ ಪಾರ್ಟ್ ಚೆನ್ನಾಗಿದೆ ಅಂತ ಅನುಚಿತ ವರ್ತನೆ

    ಮೈಸೂರು: ಸಾಂಸ್ಕೃತಿಕ ನಗರಿ ನಾಡಹಬ್ಬ ಮೈಸೂರು ದಸರಾದಲ್ಲೂ ಮೀಟೂ ಸದ್ದು ಕೇಳು ಬರುತ್ತಿದೆ. ಯುವತಿಯರ ಸ್ತನ ಹಾಗೂ ಪ್ರೈವೇಟ್ ಪಾರ್ಟ್ ಮುಟ್ಟಿ ಚೆನ್ನಾಗಿದೆ ಅಂತ ಕಾಮುಕರು ಅನುಚಿತವಾಗಿ ವರ್ತಿಸಿದ್ದಾರೆ.

    ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಅಕ್ಟೋಬರ್ 13ರಂದು ಈ ಘಟನೆ ನಡೆದಿದೆ. ಓಪನ್ ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದ್ದು, ಸ್ಟ್ರೀಟ್ ಫೆಸ್ಟಿವಲ್‍ಗೆ ಬಂದಿದ್ದ ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.

                                                                                     ಸಾಂದರ್ಭಿಕ ಚಿತ್ರ

    ಇಬ್ಬರು ಯುವತಿಯನ್ನು ಸ್ಪರ್ಶಿಸಿ ಕ್ಷಮೆ ಕೇಳುವಂತೆ ಪುಂಡ ಯುವಕ ಗುಂಪು ನಾಟಕವಾಡಿದೆ. ಸದ್ಯ ಈ ಬಗ್ಗೆ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನೊಂದ ಯುವತಿಯರ ಪೋಸ್ಟ್ ಗೆ ಹಲವು ಯುವತಿಯರು ದನಿಗೂಡಿಸಿದ್ದಾರೆ. ನಮಗೂ ಇದೇ ರೀತಿಯ ತೊಂದರೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಯುವತಿಯರು ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರಿನಲ್ಲಿ ಟ್ಯಾಗ್ ಮಾಡಿ ಯುವತಿಯರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಯುವತಿಯೊಬ್ಬರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

                                                                                          ಸಾಂದರ್ಭಿಕ ಚಿತ್ರ

    ನಾನು ಇಬ್ಬರು ವಿದೇಶಿ ಪ್ರಜೆಗಳ ಜೊತೆ ಇದ್ದೆ. ಈ ವೇಳೆ ಯುವಕರು ನಮ್ಮ ಹತ್ತಿರ ಬಂದು ನಮ್ಮ ದೇಹದ ಅಂಗಗಳ ಬಗ್ಗೆ ಮಾತನಾಡಲು ಶುರು ಮಾಡಿದರು. ಅಲ್ಲದೇ ಯಾರಿಗೆ ಯಾವ ದೇಹದ ಅಂಗ ಚೆನ್ನಾಗಿದೆ ಎಂದು ಮಾತನಾಡಲು ಶುರು ಮಾಡಿದರು. ಆ ಯುವಕರು ಮಾತನಾಡುತ್ತಿರುವುದು ವಿದೇಶಿ ಪ್ರಜೆಗಳಿಗೆ ಅರ್ಥವಾಗಲಿಲ್ಲ. ನಾನು ಆ ಯುವಕರನ್ನು ತರಾಟೆಗೆ ತೆಗೆದುಕೊಳ್ಳುವ ಮೊದಲೇ ಅವರು ಅಲ್ಲಿಂದ ಹೊರಟು ಹೋದರು. ನಂತರ ಅವರು ಮತ್ತೆ ಕಾಣಿಸಿಕೊಂಡಾಗ ಪ್ರಶ್ನಿಸಿದ್ದಾಗ ಅವರು ಏನು ತಿಳಿಯದಂತೆ ನಡೆದುಕೊಂಡರು ಎಂದು ಯುವತಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

                                                                                ಸಾಂದರ್ಭಿಕ ಚಿತ್ರ

    ಸದ್ಯ ಸುರಕ್ಷತಾ ದೃಷ್ಟಿಯಿಂದ ಪೋಸ್ಟ್ ಮಾಡಿದ ಯುವತಿಯರ ಹೆಸರುಗಳನ್ನು ಮೈಸೂರು ಮೀಮ್ಸ್ ಬಹಿರಂಗಗೊಳಿಸದೇ ಪೋಸ್ಟ್ ಗಳನ್ನು ಹಾಕಿದೆ. ಜಿಲ್ಲಾಧಿಕಾರಿ, ಸಚಿವರು ಹಾಗೂ ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಸಾಂಪ್ರದಾಯಿಕ ದಸರಾದಲ್ಲಿ ಇದು ಸರಿಯೇ ಎಂದು ಪ್ರಶ್ನಿಸಿ ಪೋಸ್ಟ್ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುರಿಯುತ್ತಿದ್ದ ಮಳೆಯಲ್ಲೂ ಯುವ ದಸರಾದಲ್ಲಿ ವಿದ್ಯಾರ್ಥಿಗಳ ಮಸ್ತ್ ಮಸ್ತ್ ಡ್ಯಾನ್ಸ್

    ಸುರಿಯುತ್ತಿದ್ದ ಮಳೆಯಲ್ಲೂ ಯುವ ದಸರಾದಲ್ಲಿ ವಿದ್ಯಾರ್ಥಿಗಳ ಮಸ್ತ್ ಮಸ್ತ್ ಡ್ಯಾನ್ಸ್

    ಮೈಸೂರು: ಸಂಡೇಯ ರಜೆಯಲ್ಲಿ ಫುಲ್ ಎಂಜಾಯ್ ಮಾಡಬೇಕು ಅನ್ನೋರಿಗೆ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಯುವ ದಸರಾ ಅಕ್ಷರಶಃ ರಾತ್ರಿ ಮನರಂಜನೆಯ ಔತಣವನ್ನೆ ಉಣ ಬಡಿಸಿತು. ಸುರಿಯುತ್ತಿದ್ದ ಮಳೆಯಲ್ಲೂ ಯುವ ದಸರಾದಲ್ಲಿ ವಿದ್ಯಾರ್ಥಿಗಳು ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.

    ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮ ರಾತ್ರಿ ಅಕ್ಷರಶಃ ಸಂಗೀತದ ಕಂಪು ಸೂಸಿತ್ತು. ಈ ಸಂಗೀತ ಕಂಪಿಗೆ ಖ್ಯಾತ ಹಿನ್ನೆಲೆ ಗಾಯಕರಾದ ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಗೂ ಅರ್ಮಾನ್ ಮಲ್ಲಿಕ್ ಕಾರಣರಾದರು. ವೇದಿಕೆಗೆ ಎಂಟ್ರಿ ಕೊಟ್ಟಾಗಿನಿಂದ ಕನ್ನಡ ಹಿಂದಿ ಚಲನಚಿತ್ರಗಳ ಮೆಲೋಡಿ ಹಾಡುಗಳನ್ನು ಪ್ರಸ್ತುತ ಪಡಿಸಿದರು.

    ಇಬ್ಬರು ಘಟಾನುಘಟಿ ಗಾಯಕರ ಕಂಠಸಿರಿಗೆ ಯುವ ಜನತೆ ಶಿಳ್ಳೆ ಚಪ್ಪಾಳೆ ಹೊಡೆದು ಕುಣಿದು ಕುಪ್ಪಳಿಸಿದರು. ವೇದಿಕೆಯ ಹೊರ ಭಾಗದಲ್ಲಿ ತುಂತುರು ಮಳೆ ಬರುತ್ತಿದ್ದರು, ಕೂಡ ಸಂಗೀತ ಮಾಂತ್ರಿಕನ ಹಾಡಿಗೆ ತಮ್ಮನ್ನೇ ತಾವು ಮರೆತರು. ಇವರಷ್ಟೇ ಅಲ್ಲ ಗಾಯಕಿ ಅನುರಾಧ ಭಟ್ ಧ್ವನಿಯಲ್ಲಿ ಮೂಡಿ ಬಂದ ‘ಅಪ್ಪ ಐ ಲವ್ ಯು ಪಾ’ ಹಾಡಿಗಂತು ಜನ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

    ಇದಕ್ಕೂ ಮೊದಲು ನಡೆದ ಕಾಲೇಜು ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ಎಲ್ಲರನ್ನು ಕೈ ಕಾಲು ಕುಣಿಸುವಂತೆ ಮಾಡಿತು. ಇದಾದ ಬಳಿಕ ವೇದಿಕೆ ಮೇಲೆ ನಾರಿ ಮಣಿಯರ ರ‍್ಯಾಂಪ್‍ ವಾಕ್ ಪಡ್ಡೆ ಹೈಕಳನ್ನು ನಿದ್ದೆ ಕೆಡಿಸಿತು. ಅರಮನೆ ಆವರಣದಲ್ಲಿ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 500ಕ್ಕೂ ಹೆಚ್ಚು ಕಲಾವಿದರು 38 ಪೊಲೀಸ್ ಬ್ಯಾಂಡ್ ತಂಡಗಳು ವಿವಿಧ ರಚನೆಯ ಗೀತೆಗಳನ್ನು ನುಡಿಸಿದರು. ಕರ್ನಾಟಕ ಶಾಸ್ತ್ರೀಯ ವಾಂದ್ಯ ವೃಂದ ಹಾಗೂ ಇಂಗ್ಲೀಷ್ ಬ್ಯಾಂಡ್ ನಡುವಿನ ಜುಗಲ್ ಬಂದಿ ಸಂಗೀತಾಸಕ್ತರಿಗೆ ಮುದ ನೀಡಿತು.

    ಸದ್ಯ ದಿನಕ್ಕೊಂದು ಕಾರ್ಯಕ್ರಮ ದಸರಾ ಮಹೋತ್ಸವದ ರಂಗು ಹೆಚ್ಚಿಸುತ್ತಿದೆ. ಇಂದು ಕೂಡ ವಿವಿಧ ಕಾರ್ಯಕ್ರಮಗಳು ಸಾಂಸ್ಕೃತಿಕ ನಗರಿಯಲ್ಲಿ ಮೇಳೈಸಲಿದೆ.

    ದಸರಾ ಇಂದಿನ ಕಾರ್ಯಕ್ರಮಗಳು (15.10.2018)

    1. ಬೆಳಗ್ಗೆ 9 ಕ್ಕೆ ದಸರಾ ದರ್ಶನ. ಸ್ಥಳ : ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ
    2. ಬೆಳಗ್ಗೆ 11 ಕ್ಕೆ ಜಾನಪದ ಸಿರಿ. ಸ್ಥಳ : ಜೆಕೆ ಮೈದಾನ
    3. ಅರಮನೆ ವೇದಿಕೆ : ಶ್ರೀ ವಿದ್ಯಾಭೂಷಣ ಅವರಿಂದ ಸಂಗೀತ ಕಾರ್ಯಕ್ರಮ. ರಾತ್ರಿ 8.30 ಕ್ಕೆ
    4. ಮಹಿಳಾ ದಸರಾ : ಮಂಗಳ ಮುಖಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ. ಮಧ್ಯಾಹ್ನ 3 ಕ್ಕೆ
    5. ಯುವ ದಸರಾ : ಸ್ಯಾಂಡಲ್‍ವುಡ್ ನಟ – ನಟಿಯರಿಂದ ಕಾರ್ಯಕ್ರಮ. ರಾತ್ರಿ 8 ಕ್ಕೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಯದುವೀರ್ ಒಡೆಯರಿಂದ ಸರಸ್ವತಿ ಪೂಜೆ- ಏರ್‌ಶೋ ಕಣ್ತುಂಬಿಕೊಂಡ ಪ್ರವಾಸಿಗರು

    ಮೈಸೂರು: ವಿಶ್ವ ವಿಖ್ಯಾತ ದಸರಾದ ಹಿನ್ನೆಲೆ ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ಮಾಡಿದರು.

    ಬೆಳಗ್ಗೆ 10:15 ರಿಂದ 10:45 ರ ವರೆಗೆ ಸಲ್ಲುವ ಶುಭಲಗ್ನದಲ್ಲಿ ಕನ್ನಡಿ ತೊಟ್ಟಿಯಲ್ಲಿ ಸರಸ್ವತಿ ಭಾವಚಿತ್ರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು. ನವರಾತ್ರಿ ಪೂಜಾ ಕೈಂಕರ್ಯಗಳಲ್ಲಿ ಸರಸ್ವತಿ ಪೂಜಾ ಪ್ರಧಾನವಾದ ಆಚರಣೆಯಾಗಿದೆ. ಇಂದು ಸಂಜೆ ದರ್ಬಾರ್ ನಂತರ ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ, ಮಹಿಷಾಸುರನ ಸಂಹಾರ ನಡೆಯಲಿದೆ.

    ದಸರಾದ ಪ್ರಮುಖ ಅಕರ್ಷಣೆಯಾದ ಏರ್ ಶೋವನ್ನು ಸಚಿವ ಜಿಟಿ ದೇವೇಗೌಡ ಹಾಗೂ ಸಾರಾ ಮಹೇಶ್ ಉದ್ಘಾಟಿಸಿದರು. ನಗರದ ಬನ್ನಿ ಮಂಟಪದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ.

    ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಲರವದಿಂದ ಕೂಡಿದ್ದು, ಆಗಸದಲ್ಲಿ ಭಾರತದ ತ್ರಿವರ್ಣ ಧ್ವಜ ಮೂಡಿತು. ಆಗಸದಲ್ಲಿ ಯೋಧರಿಂದ ಸ್ಕೈ ಡೈವಿಂಗ್, ಸರ್ಜಿಕಲ್ ಆಪರೇಷನ್ ಸೇರಿದಂತೆ ನಾನಾ ಸಾಹಸ ಪ್ರದರ್ಶನ ನಡೆಯಿತು. ಬಾನೆತ್ತರದ ಸ್ಕೈಡೈವಿಂಗ್ ನೆರೆದಿದ್ದ ಪ್ರವಾಸಿಗರ ಮೈ ನವಿರೇಳಿಸಿತು. ಹೆಲಿಕಾಪ್ಟರ್ ನಿಂದ 115 ಅಡಿ ಎತ್ತರದಿಂದ ಯೋಧರು ಪುಷ್ಪಾರ್ಚನೆ ಮಾಡಿದರು.

    ಮೈಸೂರಿನ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಾಕು ಪ್ರಾಣಿಗಳು ಪ್ರದರ್ಶನ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿತು. ಈ ಪ್ರದರ್ಶನದಲ್ಲಿ ಡಾಬರ್ ಮನ್, ಜರ್ಮನ್ ಶೆಫರ್ಡ್, ಮುದೋಳ, ಡ್ಯಾಷೆಂಡ್, ಲ್ಯಾಬ್ರಡಾರ್, ರಾರಯಟ್, ವ್ಹೀಲರ್, ಪಿಟ್‍ಬುಲ್, ಸೇಂಟ್ ಬರ್ನಾಟ್, ಸೈಬೀರಿಯನ್ ಹಸ್ಕಿ ಸೇರಿದಂತೆ 21 ಜಾತಿಯ ನಾಯಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಾಣಿ ಪ್ರೀಯರ ಮನಸ್ಸು ಗೆದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಂಚೆಯಲ್ಲಿಯೇ ಓಡಿ ಬಿದ್ರು ಸಚಿವರು: ವಿಡಿಯೋ

    ಪಂಚೆಯಲ್ಲಿಯೇ ಓಡಿ ಬಿದ್ರು ಸಚಿವರು: ವಿಡಿಯೋ

    ಮೈಸೂರು: ಪಂಚೆಯಲ್ಲೇ ಓಡುತ್ತಿದ್ದ ಉನ್ನತ ಶಿಕ್ಷಣ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ರಸ್ತೆ ಮಧ್ಯದಲ್ಲಿಯೇ ಬಿದ್ದಿದ್ದಾರೆ. ಅದೃಷ್ಟವಶಾತ್ ಸಚಿವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

    ದಸರಾ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ಓವಲ್ಸ್ ಮೈದಾನದಲ್ಲಿ ಮ್ಯಾರಥಾನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಸಚಿವರಾದ ಸಾರಾ ಮಹೇಶ್ ಹಾಗೂ ಜಿ.ಟಿ.ದೇವೇಗೌಡ, ಶ್ರೀನಿವಾಸ್ ಮ್ಯಾರಥಾನ್‍ಗೆ ಚಾಲನೆ ನೀಡಿದರು.

    ಮ್ಯಾರಥಾನ್ ಚಾಲನೆ ಬಳಿಕ ಸಚಿವರು ಓಟಗಾರರ ಜೊತೆಗೆ ಸ್ಪರ್ಧೆ ನೀಡಲು ಮುಂದಾದರು. ಆದರೆ ಪಂಚೆ ಧರಿಸಿದ್ದ ಜಿ.ಟಿ.ದೇವೇಗೌಡ ಅವರು, ಪಂಚೆಯನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ವೇಗವಾಗಿ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಕಾಲು ತೊಡರಾಗಿ ನೆಲಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯವಾಗಿಲ್ಲ. ಸಚಿವರು ಬೀಳುತ್ತಿದ್ದಂತೆ ಇಬ್ಬರು ಕ್ಯಾಮೆರಾ ಮೆನ್ ಹಾಗೂ ಒಬ್ಬರು ಮ್ಯಾರಥಾನ್ ಸ್ಪರ್ಧಿ ಅವರ ಕೈ ಹಿಡಿದು ಮೇಲೆತ್ತಿದ್ದಾರೆ.

    ಇದಕ್ಕೂ ಮುನ್ನ ಮ್ಯಾರಥಾನ್ ಉದ್ಘಾಟನೆಗೆ ಸಚಿವರಾದ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ಒಂದೂವರೇ ಗಂಟೆ ತಡವಾಗಿ ಬಂದಿದ್ದರು. ಇದರಿಂಗಾಗಿ ಸ್ಪರ್ಧಿಗಳು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=rcI0vmfDiW0

  • ಮೈಸೂರು ದಸರಾ 2018: ಇಂದು ಹಾಫ್ ಮ್ಯಾರಥಾನ್ ಆಯೋಜನೆ!

    ಮೈಸೂರು ದಸರಾ 2018: ಇಂದು ಹಾಫ್ ಮ್ಯಾರಥಾನ್ ಆಯೋಜನೆ!

    ಮೈಸೂರು: ಮೈಸೂರು ದಸರಾದ ಹಿನ್ನೆಲೆ ದಿನವೂ ಒಂದೊಂದು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಇಂದು ಐದನೇ ದಿನವಾಗಿದ್ದು, ಮ್ಯಾರಥಾನ್ ಓಟ ಆಯೋಜನೆ ಮಾಡಲಾಗಿದೆ.

    ದಸರಾ ಹಿನ್ನೆಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹಾಗೂ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್ ಮ್ಯಾರಥಾನ್‍ಗೆ ಚಾಲನೆ ನೀಡಿದರು. ಮ್ಯಾರಥಾನ್ ನಲ್ಲಿ ಮೈಸೂರಿನ ಜನತೆ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳು, ಯುವಕ, ಯುವತಿಯರು ಭಾಗಿಯಾಗಿದ್ದಾರೆ.

    ಮೈಸೂರಿನ ಓವಲ್ಸ್ ಮೈದಾನದಲ್ಲಿ ಮ್ಯಾರಥಾನ್ ಓಟವನ್ನು ಪ್ರಾರಂಭ ಮಾಡಲಾಗಿದ್ದು, ಮೈಸೂರಿನ ಪ್ರಮುಖ ರಸ್ತೆಯಲ್ಲಿ ಮ್ಯಾರಥಾನ್ ಓಟವನ್ನು ಏರ್ಪಡಿಸಲಾಗಿದೆ.

    ಮ್ಯಾರಥಾನ್ ಉದ್ಘಾಟನೆಗೆ ತಡವಾಗಿ ಬಂದ ಸಚಿವರ ವಿರುದ್ಧ ಮೈಸೂರಿಗರು ಅಸಮಾಧಾನ ಹೊರ ಹಾಕಿದ್ರು. ಬೆಳ್ಳಗ್ಗೆ ಆರು ಗಂಟೆಗೆ ಪ್ರಾರಂಭವಾಗಬೇಕಿದ್ದ ಮ್ಯಾರಥಾನ್ ಓಟ ಸಚಿವರಾದ ಜಿಟಿ ದೇವೇಗೌಡ ಮತ್ತು ಸಾರಾ ಮಹೇಶ್ ಒಂದೂವರೇ ಗಂಟೆ ತಡವಾಗಿ ಬಂದ ಕಾರಣ ಬಿಸಿಲಿನಲ್ಲಿ ಓಡಬೇಕಾ ಅಂತ ಮೈಸೂರಿಗರು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ಭಾನುವಾರ ನಡೆಯಲಿದೆ ಏರ್ ಶೋ

    ಮೈಸೂರು ದಸರಾ: ಭಾನುವಾರ ನಡೆಯಲಿದೆ ಏರ್ ಶೋ

    ಮೈಸೂರು: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಏರ್ ಶೋ ಕಾರ್ಯಕ್ರಮದ ನಿಮಿತ್ತ ವಾಯುಪಡೆಯ ಹೆಲಿಕಾಪ್ಟರ್ ಗಳು ಶನಿವಾರ ಬನ್ನಿಮಂಟಪದಲ್ಲಿ ತಾಲೀಮು ನಡೆಸಿದವು.

    ಈ ಬಾರಿ ಮೈಸೂರು ದಸರಾ ಮಹೋತ್ಸವ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಬಾರಿ ವಿಶೇಷವಾಗಿ ವಾಯುಸೇನಾ ಪಡೆಗಳು ಏರ್ ಶೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇಂದು ಬನ್ನಿಮಂಟಪದಲ್ಲಿ ಇದರ ಪ್ರಾಯೋಗಿಕ ತಾಲೀಮನ್ನು ಕೈಗೊಂಡಿದ್ದವು. ಏರ್ ಫೋರ್ಸ್ ನ ವೀರಯೋಧರು ಅಗಸದಲ್ಲಿ ತ್ರಿವರ್ಣ ಧ್ವಜ ಮೂಡಿಸಿದ್ದರು. ಇದು ಪ್ರೇಕ್ಷಕರ ಗಮನವನ್ನು ಸೆಳೆದಿತ್ತು. ತಾಲೀಮಿನಲ್ಲೇ 5 ರಿಂದ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಲೋಹದ ಹಕ್ಕಿಗಳ ಹಾರಾಟವನ್ನು ವೀಕ್ಷಣೆ ಮಾಡಿದ್ದಾರೆ.

    ಭಾನುವಾರ 11 ಗಂಟೆಗೆ ಬನ್ನಿಮಂಟಪದಲ್ಲಿ ಲೋಹದ ಹಕ್ಕಿಗಳು ಆರ್ಭಟಿಸಲಿದ್ದು, ಏರ್ ಫೋರ್ಸ್ ಎರಡು ಯುದ್ಧ ವಿಮಾನಗಳು ಸಹ ಏರ್‍ಶೋನಲ್ಲಿ ಭಾಗಿಯಾಗಲಿವೆ. ಏರ್ ಶೋ ವೇಳೆ 1,130 ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಹಾಗೂ 1,130 ಅಡಿ ಎತ್ತರದಿಂದ ಹಗ್ಗದ ಮೂಲಕ ವಿಮಾನದಿಂದ ಸೈನಿಕರು ಇಳಿಯುವ ಪ್ರದರ್ಶನವೂ ಕೂಡ ಇರುತ್ತದೆ. ಇದರ ಜೊತೆ 1,105 ಅಡಿ ಎತ್ತರದಿಂದ ಚಾಮುಂಡೇಶ್ವರಿ ಪುಷ್ಪಾರ್ಚನೆಯನ್ನು ಸಲ್ಲಿಸಲಿವೆ. ಹೀಗಾಗಿ ಬನ್ನಿಮಂಟಪಕ್ಕೆ ಜನಸಾಗರವೇ ಹರಿದು ಬರವು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ಭರ್ಜರಿ ರೆಸ್ಪಾನ್ಸ್ – ನಡುರಸ್ತೆಯಲ್ಲಿ ಯುವಕ, ಯುವತಿಯರ ಡ್ಯಾನ್ಸ್

    ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ಭರ್ಜರಿ ರೆಸ್ಪಾನ್ಸ್ – ನಡುರಸ್ತೆಯಲ್ಲಿ ಯುವಕ, ಯುವತಿಯರ ಡ್ಯಾನ್ಸ್

    ಮೈಸೂರು: ದಸರಾ ಹಬ್ಬದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಡುರಸ್ತೆಯಲ್ಲಿ ಯುವಕ-ಯುವತಿಯರು ಫುಲ್ ಜೋಶಾಗಿ ಡ್ಯಾನ್ಸ್ ಮಾಡಿದ್ದಾರೆ. ತಮಟೆ ನಗಾರಿ ಶಬ್ದಕ್ಕೆ ಯುವ ಸಮೂಹ ಹುಚ್ಚೆದ್ದು ಕುಣಿದಿದೆ.

    ದಸರಾ ಅಂಗವಾಗಿ ಇಂದು ಮೈಸೂರಿನಲ್ಲಿ ನ್ಯಾಯಾಲಯದ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಫೆಸ್ಟ್ ಆಯೋಜನೆ ಮಾಡಲಾಗಿತ್ತು. ದಸರಾದ ನಾಲ್ಕನೇ ದಿನವಾದ ಇಂದು ಮೈಸೂರಿನ ನ್ಯಾಯಾಲಯದ ರಸ್ತೆಯಲ್ಲಿ ವಿದೇಶದಲ್ಲಿ ನಡೆಯುವ ಕಾರ್ನಿವಲ್ ಫೆಸ್ಟ್ ಮಾದರಿಯಲ್ಲೇ ಈ ಓಪನ್ ಫೆಸ್ಟ್ ಆಯೋಜನೆ ಮಾಡಲಾಗಿತ್ತು.

    ಕಳೆದ ವರ್ಷದಂತೆ ಈ ಬಾರಿಯು ಓಪನ್ ಫೆಸ್ಟ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಯುವ ಸಮೂಹ ಸಖತ್ ಎಂಜಾಯ್ ಮಾಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾಗಿದ್ದ ಫೆಸ್ಟ್ ಅನ್ನು ಸಚಿವ ಸಾ.ರಾ. ಮಹೇಶ್ ನಗಾರಿ ಬಾರಿಸುವ ಮೂಲಕ ಉದ್ಘಾಟನೆ ಮಾಡಿದರು.

    ಓಪನ್ ಫೆಸ್ಟಿವಲ್‍ನ ವೆರೈಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಒಂದು ಕಡೆ ಯುವಕ ಯುವತಿಯರ ಬಿಂದಾಸ್ ಡ್ಯಾನ್ಸ್ ಭರ್ಜರಿಯಾಗಿತ್ತು. ಮತ್ತೊಂದು ಕಡೆ ನಮ್ಮ ಸಂಸ್ಕೃತಿ ಬಿಂಬಿಸುವ ಡೊಳ್ಳು ಕುಣಿತ, ವೀರಗಾಸೆ ಕುಣಿತ, ಕಂಸಾಳೆ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

    ರಸ್ತೆಯುದ್ದಕ್ಕೂ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಭಿನ್ನ ವಿಭಿನ್ನ ವಸ್ತುಗಳ ಮಾರಾಟ ಮಾಡಿದರು. ಕಲಾವಿದರ ಕೈ ಚಳಕದಲ್ಲಿ ಚಿತ್ರಗಳು ಮೂಡಿತ್ತು. ಇದರರಿಂದ ನ್ಯಾಯಾಲಯದ ಮುಂಭಾಗದ ರಸ್ತೆ ಇಂದು ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಓಪನ್ ಸ್ಟ್ರೀಟ್ ಫೆಸ್ಟಿವಲ್‍ಗಾಗಿ ನ್ಯಾಯಾಲಯ ಮುಂಭಾಗದ ರಸ್ತೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ವಾಹನಗಳಿಲ್ಲದೇ ಖಾಲಿಯಾಗಿದ್ದ ರಸ್ತೆಯಲ್ಲಿ ವಿವಿಧ ತಿಂಡಿ ತಿನಿಸುಗಳು ಸೇರಿದಂತೆ ಹಲವು ಸ್ಟಾಲ್ ಗಳನ್ನು ಹಾಕಲಾಗಿತ್ತು. ಸಂಚಾರ ಮುಕ್ತವಾಗಿದ್ದ ರಸ್ತೆಯಲ್ಲಿ ಮೈಸೂರಿನ ಜನತೆ ಕುಣಿ ಕುಪ್ಪಳಿಸಿದರು.

    ಕಳೆದ ಬಾರಿ ದಸರಾ ಸಂದರ್ಭದಲ್ಲಿ ಆಯೋಜನೆ ಮಾಡಲಾಗಿದ್ದ ಓಪನ್ ಸ್ಟ್ರೀಟ್ ಪೆಸ್ಟ್ ಈ ಬಾರಿ ಮತ್ತಷ್ಟು ಕಲರ್ ಫುಲ್ ಆಗಿದ್ದು, ಯುವ ಸಮೂಹ ಸಖತ್ ಎಂಜಾಯ್ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv