Tag: ದಸರಾ

  • ಅರಮನೆಯಲ್ಲಿ ನಡೆಯಬೇಕಿದ್ದ ಜಟ್ಟಿ ಕಾಳಗ ರದ್ದು

    ಅರಮನೆಯಲ್ಲಿ ನಡೆಯಬೇಕಿದ್ದ ಜಟ್ಟಿ ಕಾಳಗ ರದ್ದು

    ಮೈಸೂರು: ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಾಯಿ ನಿಧನ ಹಿನ್ನೆಲೆಯಲ್ಲಿ ಅಂಬಾ ವಿಲಾಸ ಅರಮನೆಯಲ್ಲಿ ನಡೆಯಬೇಕಿದ್ದ ಜಟ್ಟಿ ಕಾಳಗ ರದ್ದು ಮಾಡಲಾಗಿದೆ.

    ಗಣಪತಿ ಪೂಜೆ, ಬನ್ನಿ ಪೂಜೆ ಸೇರಿ ವಿಜಯರಥ ಮೆರವಣಿಗೆಯೂ ರದ್ದಾಗುವ ಸಾಧ್ಯತೆ ಇದೆ. ಅದು ಕೂಡ ಅನುಮಾನವಾಗಿದೆ. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೂತಕ ಬಂದು ಎಲ್ಲ ಪೂಜಾ ಕೈಂಕರ್ಯಗಳು ರದ್ದಾಗಿದೆ. ಅಜ್ಜಿ ಸಾವಿನಲ್ಲಿ ಯದುವೀರ್ ಸರಳವಾಗಿ ಪೂಜೆ ಸಲ್ಲಿಸಲಿದ್ದು, ಬೆಳ್ಳಿ ಪಲ್ಲಕ್ಕಿ ಏರಿ ವಿಜಯ ಯಾತ್ರೆ ಮಾಡುವುದು ಅನುಮಾನವಾಗಿದೆ.

     

    ಇಂದು ನಡೆಯಬೇಕಿದ್ದ ಜಟ್ಟಿ ಕಾಳಗ ಅಕ್ಟೋಬರ್ 22ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇಂದು ಅನಾರೋಗ್ಯದ ಬಳಲುತ್ತಿದ್ದ ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ. ಇದರಿಂದ ಅರಮನೆಯಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.

    ಧಾರ್ಮಿಕ ಪೂಜಾ ವಿಧಾನಗಳ ಬಗ್ಗೆ ಅರಮನೆಯ ಪುರೋಹಿತರೊಂದಿಗೆ ಪ್ರಮೋದಾ ದೇವಿ ಚೆರ್ಚೆ ನಡೆಸುತ್ತಿದ್ದು, ವಿಜಯ ದಶಮಿ ಪೂಜೆಯಲ್ಲಿ ಪ್ರಮೋದಾ ದೇವಿ ಒಡೆಯರ್ ಭಾಗವಹಿಸುವುದು ಅನುಮಾನವಾಗಿದೆ. ಈಗಾಗಲೇ ಸಮರ್ ಪ್ಯಾಲೇಸ್ ನಲ್ಲಿ ಅಂತಿಮ ಸಂಸ್ಕಾರ ನಡೆಸುವ ಬಗ್ಗೆ ಚೆರ್ಚೆ ಮಾಡುತ್ತಿದ್ದಾರೆ. ಇದನ್ನೂ ಓದಿ:  ರಾಜಮಾತೆಗೆ ಮಾತೃವಿಯೋಗ- ಇದು ಯಾವುದರ ಸಂಕೇತ…? ಶ್ರೀ ರೇಣುಕಾರಾಧ್ಯ ಗುರೂಜಿ ಸ್ಪಷ್ಟನೆ

    ಅರಮನೆ ಉಪ ನಿರ್ದೇಶಕ ಸುಬ್ರಮಣ್ಯ ಅವರು ಗೋಪಾಲಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣ್ಣಿ ಪಾರ್ಥಿವ ಶರೀರ ರವಾನೆಗೆ ಸಿದ್ಧತೆ ಮಾಡಲಾಗುತ್ತಿದೆ. ಅಂಬ್ಯುಲೆನ್ಸ್ ನಲ್ಲಿ ಕೆಫಿನ್ ಬಾಕ್ಸ್ ಇಟ್ಟು ಪಾರ್ಥಿವ ಶರೀರ ರವಾನೆಗೆ ಆಸ್ಪತ್ರೆ ಸಿಬ್ಬಂದಿ ಸಿದ್ಧ ಮಾಡುತ್ತಿದ್ದಾರೆ. ಆಸ್ಪತ್ರೆಯಿಂದ ಸಮ್ಮರ್ ಪ್ಯಾಲೇಸ್ ಗೆ ಚಿನ್ನಮ್ಮಣ್ಣಿ ಪಾರ್ಥಿವ ಶರೀರ ರವಾನೆ ಸಾಧ್ಯತೆ ಇದೆ.

    ಸಚಿವ ಸಾರಾ ಮಹೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಪ್ರಮೋದಾ ದೇವಿ ಅವರ ತಾಯಿಯ ದರ್ಶನ್ ಪಡೆದು ಬಳಿಕ, ರಾಜಮಾತೆಯವರ ತಾಯಿ ನಿಧನರಾಗಿದ್ದಾರೆ. ಸಮ್ಮರ್ ಪ್ಯಾಲೇಸ್ ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ರಾಜಮಾತೆಯವರು ಸಮ್ಮರ್ ಪ್ಯಾಲೇಸ್‍ಗೆ ಆಗಮಿಸುತ್ತಾರೆ. ಪರಕಾಲ ಮಠದ ಅಭಿಪ್ರಾಯವನ್ನು ಕೇಳಿದ್ದಾರೆ. ಪರಕಾಲ ಮಠ ಯಾವ ರೀತಿ ಶಾಸ್ತ್ರ ವಿಧಿ-ವಿಧಾನ ಸೂಚಿಸುತ್ತಾರೋ ಹಾಗೆ ಕಾರ್ಯಕ್ರಮಗಳು ನಿರ್ಧಾರವಾಗಲಿವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಡಿನೆಲ್ಲೆಡೆ ವಿಜಯದಶಮಿ ಸಂಭ್ರಮ – ಇಂದು ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ

    ನಾಡಿನೆಲ್ಲೆಡೆ ವಿಜಯದಶಮಿ ಸಂಭ್ರಮ – ಇಂದು ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮೆರವಣಿಗೆ ನೋಡಲು ದೇಶ-ವಿದೇಶದಿಂದ ಪ್ರವಾಸಿಗರು ಬಂದು ತುದಿಗಾಲಲ್ಲಿ ನಿಂತಿದ್ದಾರೆ. ಅದ್ಧೂರಿ ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.

    ಮಧ್ಯಾಹ್ನ 2.30 ರಿಂದ 3.16 ರೊಳಗೆ ಅರಮನೆ ಉತ್ತರ ದ್ವಾರವಾದ ಬಲರಾಮ ದ್ವಾರದಲ್ಲಿ ನಂದಿ ಪೂಜೆ ಮಾಡಿ ಬಳಿಕ ಮಧ್ಯಾಹ್ನ 3.40 ರಿಂದ 4.10 ರೊಳಗೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

    ಜಂಬೂ ಸವಾರಿಯಲ್ಲಿ ಸತತ 5ನೇ ಬಾರಿಗೆ ಅರ್ಜುನ 750 ಕೆಜಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತು ರಾಜ ಗಾಂಭೀರ್ಯದಲ್ಲಿ ಸಾಗಲಿದ್ದಾನೆ. ಅರ್ಜುನನಿಗೆ ಕಾವೇರಿ ಮತ್ತು ವರಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ. ನಿಶಾನೆ ಮತ್ತು ನೌಪತ್ ಆನೆಗಳಾಗಿ ಅಭಿಮನ್ಯು, ಬಲರಾಮ, ಕ್ರಮ, ದ್ರೋಣ, ಕಾವೇರಿ, ವಿಜಯ, ಚೈತ್ರ, ಗೋಪಿ ಪ್ರಶಾಂತ, ನಂಜಯ ಆಣೆಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿವೆ. ಜಂಬೂ ಸವಾರಿಗೂ ಮೊದಲು ವಜ್ರಮುಷ್ಠಿ ಜಟ್ಟಿ ಕಾಳಗ ನಡೆಯಲಿದೆ.

    ದಸರಾ ಮೆರವಣಿಗೆಯಲ್ಲಿ ಏನೆಲ್ಲಾ ಇರಲಿದೆ?
    * 42 ಸ್ತಬ್ಧ ಚಿತ್ರಗಳು, 40 ವಿವಿಧ ಜಾನಪದ ಕಲಾತಂಡಗಳು
    * 10 ವಿಶೇಷ ಕಲಾ ತಂಡ, ಉತ್ತರ ಭಾರತದ ವಿವಿಧ ರಾಜ್ಯಗಳ 5 ಕಲಾ ತಂಡ
    * 1, 675 ಕಲಾವಿದರು ಸೇರಿದಂತೆ ಜಂಬೂಸವಾರಿಯಲ್ಲಿ ಒಟ್ಟು 2 ಸಾವಿರ ಮಂದಿ ಭಾಗಿಯಾಗಲಿದ್ದಾರೆ.

    ಜಂಬೂಸವಾರಿಗೆ ನಗರದ ಎಲ್ಲೆಡೆ ಖಾಕಿ ಕಣ್ಣು:
    * ಅರಮನೆ ಹಾಗೂ ಜಂಬೂ ಸವಾರಿ ಮೆರವಣಿಗೆ 70 ಮಂದಿ ಕಮಾಂಡೋಗಳ ನಿಯೋಜನೆ
    * ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ 86 ಸಿಸಿ ಕ್ಯಾಮೆರಾ ಅಳವಡಿಕೆ
    * 11 ಎಸ್‍ಪಿ, ಡಿಸಿಪಿ, 43 ಎಸಿಪಿ, 131 ಪೊಲೀಸ್ ಇನ್ಸ್ ಪೆಕ್ಟರ್
    * 328 ಸಬ್ ಇನ್ಸ್ ಪೆಕ್ಟರ್, 521 ಸಹಾಯಕ ಸಬ್ ಇನ್ಸ್ ಪೆಕ್ಟರ್
    * 304 ಮಹಿಳಾ ಪೊಲೀಸರು, 1600 ಹೋಂ ಗಾರ್ಡ್
    * 3944 ಮಂದಿ ಪೊಲೀಸ್ ಪೇದೆಗಳ ನಿಯೋಜನೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಲ್ಯದ ಮೈಸೂರು ದಸರಾ ಮೆಲುಕು: ಯಶ್, ದರ್ಶನ್ ಮಾತಿನ ಮೋಡಿ ಹೀಗಿತ್ತು

    ಬಾಲ್ಯದ ಮೈಸೂರು ದಸರಾ ಮೆಲುಕು: ಯಶ್, ದರ್ಶನ್ ಮಾತಿನ ಮೋಡಿ ಹೀಗಿತ್ತು

    ಬೆಂಗಳೂರು: ದಸರಾ ವಿಶೇಷ ಸಂಚಿಕೆಯಾಗಿ ಪಬ್ಲಿಕ್ ಟಿವಿಯಲ್ಲಿ ಸಿನಿ ದಿಗ್ಗಜರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಇಬ್ಬರ ಮಾತಿನ ಸಮಾಗಮಕ್ಕೆ ಪಬ್ಲಿಕ್ ಟಿವಿ ವೇದಿಕೆಯಾಗಿತ್ತು. ಇಬ್ಬರೂ ದೊಡ್ಡ ನಟರಾಗಿ ಇಂದು ಸಿನಿ ಅಭಿಮಾನಿಗಳನ್ನು ರಂಜಿಸುತ್ತಿದ್ದು, ದಸರಾ ಅಂಗವಾಗಿ ಇಬ್ಬರ ಹಳೆಯ ನೆನಪಿನ ಬುತ್ತಿಯನ್ನು ತೆರೆದಿಟ್ಟರು.

    90 ದಶಕದಲ್ಲಿ ಎಲ್ಲರ ಮನೆಯಲ್ಲೂ ದೇವರಿಗೆ ಪೂಜೆ ಮಾಡಿ ಭರ್ಜರಿ ಊಟ ನೀಡುತ್ತಿದ್ದರು, ಮೈಸೂರಿನ ಪ್ರಕಾಶ್ ಹೋಟೆಲ್ ಬಳಿಯ ವಠಾರದಲ್ಲಿ ನಮ್ಮ ಮನೆ ಇತ್ತು. ಆ ವೇಳೆ ದಸರಾ ನೋಡಲು ಮೊದಲು ಸ್ಥಳ ಕಾಯ್ದಿರಿಸಲು ಬೆಳಗ್ಗೆಯೇ ಮಕ್ಕಳು ತೆರಳುತ್ತಿದ್ದರು. ಆದರೆ ಇಂದು ತಂತ್ರಜ್ಞಾನದ ಫಲವಾಗಿ ಇವೆಲ್ಲ ಸುಲಭವಾಗಿದೆ. ಗರುಡಗಂಬ ಆರಂಭವಾದಾಗ ದಸರಾ ಆರಂಭವಾಗುತ್ತಿದೆ ಎಂದು ನಮಗೆ ಗೊತ್ತಾಗುತಿತ್ತು. ಆದರೆ ಇಂದು ದಸರಾ ನೀಡುವ ವೇಳೆ ಆ ನಿರಂತರತೆ ಮಿಸ್ ಆಗುತ್ತಿದೆ. ಪ್ರತಿವರ್ಷ ಮೈಸೂರು ದಸರಾಗೆ ಹಾಜರಾಗುತ್ತೇನೆ. ಅಂದು ದಸರಾ ಮೆರವಣಿಗೆ ನಡೆದ ಬಳಿಕ ಜಂಬೂ ಸವಾರಿ ಬಿಟ್ಟು ಮಿಕ್ಕ ಎಲ್ಲವೂ ವಾಪಸ್ ಮೆರವಣಿಗೆಯಲ್ಲೇ ಬರುತ್ತಿತ್ತು. ಅದು ರಾತ್ರಿ 1 ಗಂಟೆಯವರೆಗೂ ಸಾಗುತ್ತಿತ್ತು. ರಾತ್ರಿಯಾದರೂ ಅದನ್ನು ನೋಡಲು ನಾವು ತಪ್ಪದೇ ಹಾಜರು ಹಾಕುತ್ತಿದ್ದೇವು ಎಂದು ದರ್ಶನ್ ಹಳೆ ನೆನಪು ಮೆಲಕು ಹಾಕಿದರು.

    ನಟ ಯಶ್ ಅವರು ದಸರಾ ಕುಸ್ತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಕುಸ್ತಿಯಲ್ಲಿ ದೇಹದ ತೂಕಕ್ಕೆ ತಕ್ಕಂತೆ ಸ್ಪರ್ಧೆ ನಡೆಯುತ್ತದೆ. ಈ ವೇಳೆ ಕುಸ್ತಿ ಜಟ್ಟಿಗಳ ತೂಕ ಒಂದು ಗ್ರಾಂ ಹೆಚ್ಚಾದರೂ ಅವರು ಆ ತೂಕ ಕಡಿಮೆ ಮಾಡಿಕೊಳ್ಳಲು ಧರಿಸಿದ್ದ ಚಡ್ಡಿ ಬಿಚ್ಚಿ ನಿಲ್ಲುತ್ತಿದ್ದರು. ಆ ದೃಶ್ಯ ಈಗಲೂ ನೆನಪಿದೆ. ಆದರೆ ಸದ್ಯ ಅಂದಿನಂತೆ ಈಗ ಒಬ್ಬನೇ ಭೇಟಿ ನೀಡಿ ದಸರಾ ನೋಡುವ ಅವಕಾಶ ಕೈತಪ್ಪಿದೆ. ಅದ್ದರಿಂದ ಒಬ್ಬನೇ ಬೈಕಿನಲ್ಲಿ ಹೆಲ್ಮೆಟ್ ಧರಿಸಿ ಬನ್ನಿ ಮಂಟಪದವರೆಗೂ ಹೋಗುತ್ತೇನೆ ಎಂದು ತಮ್ಮ ದಸರಾ ಭೇಟಿಯ ಹಿಂದಿನ ರಹಸ್ಯ ಬಿಚ್ಚಿಟ್ಟರು.

    ಯಶ್, ದರ್ಶನ್ ಬೈಕ್ ರೈಡ್: ಈ ವೇಳೆ ಮೈಸೂರು ಭೇಟಿ ಆಸೆ ತೆರೆದಿಟ್ಟ ನಟ ಯಶ್ ಹಾಗೂ ದರ್ಶನ್ ಅವರು ಮುಂದಿನ ದಿನಗಳಲ್ಲಿ ರೈಡ್ ಮಾಡುವ ಕುರಿತು ತಿಳಿಸಿದಸರು. ಇದೇ ವೇಳೆ ಯಶ್ ಸಿನಿಮಾಗಳಿಗೆ ಶುಭಕೋರಿದ ಅವರು ದರ್ಶನ್ ಅವರು ಮುಂದಿನ ಚಿತ್ರಗಳು ಯಶಸ್ವಿಯಾಗಲಿ, ಆ ನವದುರ್ಗೆಯರ ಆರ್ಶೀವಾದ ಅವರಿಗೆ ಇರಲಿ ಎಂದು ಶುಭ ಕೋರಿದರು.

    ತಮ್ಮ ಆರೋಗ್ಯ ಕುರಿತ ಪ್ರಶ್ನೆಗೆ ಉತ್ತರಿಸಿದ ದರ್ಶನ್, 10 ದಿನಗಳಲ್ಲಿ ಮತ್ತೆ ನಾನು ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ ಎಂದರು. ಈ ವೇಳೆ ಯಶ್ ಅವರು ಮೈಸೂರು ಚಿತ್ರ ಮಂದಿರದಲ್ಲಿ ದರ್ಶನ್ ಸಿನಿಮಾ ನೋಡಿದ ನೆನಪು ಮಾಡಿ ತಮ್ಮ ಹಿಂದಿನ ಹಾದಿಯನ್ನ ಬಿಚ್ಚಿಟ್ಟರು. ಬಳಿಕ ದರ್ಶನ್ ಅಭಿಮಾನಿಗಳಿಗೆ ಯಶ್ ಅವರು ಬೇಗ ಸಿಹಿ ಸುದ್ದಿ ನೀಡಲಿ ಶುಭವಾಗಲಿ ಎಂದರು.

    ನಮ್ಮೂರ ಹುಡುಗ: ದರ್ಶನ್ ಅವರ ಜೀವನ ನನಗೆ ಆರಂಭದಿಂದಲೂ ಸ್ಫೂರ್ತಿಯಾಗಿತ್ತು. ಏಕೆಂದರೆ ನಾನು ಸಿನಿಮಾ ನೋಡಲು ಆರಂಭಿಸಿದ ವೇಳೆ ದರ್ಶನ್ ಅವರು ದೊಡ್ಡ ಸ್ಟಾರ್. ನಮ್ಮೂರಿನವರಾದ ಕಾರಣ ಅಭಿಮಾನ ಮತ್ತಷ್ಟು ಜಾಸ್ತಿ. ಅವರ ಸಿನಿಮಾದಲ್ಲಿ ಮೈಸೂರು ಶೈಲಿಯ ನ್ಯಾಚುರಲ್ ಮಾತು ನನಗೆ ಇಷ್ಟ. ಅಲ್ಲದೇ ಅವರು ದೇಹದ ದಂಡನೆ ಮಾಡಿರುವ ರೀತಿಯೂ ಅದ್ಭುತ. ದರ್ಶನ್ ಅವರು ಬೆಳೆದ ಪ್ರತಿ ಹಂತವನ್ನು ನಾನು ಸಂಪೂರ್ಣವಾಗಿ ನೋಡಿದ್ದೇನೆ. ಅವರ ಪ್ರತಿ ಹಂತದ ಬೆಳವಣಿಗೆಯಲ್ಲೂ ನನಗೆ ಖುಷಿ ಆಗುತ್ತಿತ್ತು. ಪುನೀತ್ ರಾಜ್‍ಕುಮಾರ್, ಉಪೇಂದ್ರ ಅವರು ನನಗೆ ಸಿನಿಮಾಗೆ ಬರಲು ಸ್ಫೂರ್ತಿಯಾದರು ಎಂದು ದರ್ಶನ್ ಅವರ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ದಾಂಡಿಯಾ, ಗರ್ಬಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ರು ಕಾರವಾರದ ಮಂದಿ: ವಿಡಿಯೋ ನೋಡಿ

    ದಾಂಡಿಯಾ, ಗರ್ಬಾ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ರು ಕಾರವಾರದ ಮಂದಿ: ವಿಡಿಯೋ ನೋಡಿ

    ಕಾರವಾರ: ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವವನ್ನು ರಾಜ್ಯದ ಕರಾವಳಿ ತಾಲೂಕಾದ ಕಾರವಾರದಲ್ಲೂ ಸಹ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗುಜರಾತ್, ರಾಜಸ್ಥಾನ, ಪಂಜಾಬ್ ನಂತಹ ರಾಜ್ಯಗಳಲ್ಲಿ ನವರಾತ್ರಿ ಸಂಭ್ರಮದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿರುವ ದಾಂಡಿಯಾ, ಗರ್ಬಾ ನೃತ್ಯವನ್ನು ಮಾಡಿ ಸಂಭ್ರಮಿಸಿದ್ದಾರೆ.

    ಒಂದೆಡೆ ದೀಪಾಲಂಕೃತಗೊಂಡಿರುವ ಆವರಣದಲ್ಲಿ ಬಣ್ಣ ಬಣ್ಣದ ಸೀರೆಯನ್ನುಟ್ಟು ಕೈಯಲ್ಲಿ ಕೋಲನ್ನ ಹಿಡಿದು ನೃತ್ಯದಲ್ಲಿ ಭಾಗಿಯಾದ ಮಹಿಳೆಯರು, ಇನ್ನೊಂದೆಡೆ ಇಂಪಾದ ಗಾಯನಕ್ಕೆ ಸೊಗಸಾಗಿ ಹೆಜ್ಜೆ ಹಾಕುತ್ತಿರುವ ಪುರುಷರು, ಯುವಕ, ಯುವತಿಯರು ಗುಜರಾತಿ ಸ್ಪೆಷಲ್ ದಾಂಡಿಯಾ ಆಡಿ ಕುಣಿದು ಕುಪ್ಪಳಿಸಿದ್ದಾರೆ.

    ಕಾರವಾರದ ದೇವಳಿವಾಡ, ಸೋನಾರವಾಡಗಳದ್ದು ಕಳೆದ 13 ವರ್ಷಗಳಿಂದ ಹೊರ ರಾಜ್ಯಕ್ಕೆ ಸೀಮಿತವಾಗಿದ್ದ ದಾಂಡ್ಯವನ್ನು ಈ ಭಾಗದಲ್ಲಿಯೂ ಮಾಡುವ ಮೂಲಕ ಜನರು ನವರಾತ್ರಿಯನ್ನು ವಿಶೇಷವಾಗಿ ಆಚರಿಸಿ ಎಂಜಾಯ್ ಮಾಡಿದರು. ನವರಾತ್ರಿ ಉತ್ಸವದ ಒಂಬತ್ತೂ ದಿನಗಳಲ್ಲಿ ಕಾರವಾರ ತಾಲೂಕಿನಲ್ಲಿ ದಾಂಡಿಯಾ ನೃತ್ಯವನ್ನ ಆಯೋಜನೆ ಮಾಡಲಾಗಿರುತ್ತದೆ. ಇಲ್ಲಿನ ಪ್ರಮುಖ ದೇವತೆಗಳಾದ ದುರ್ಗಾದೇವಿ, ಸಂತೋಷಿ ಮಾತಾ, ಕುಂಠಿ ಮಹಾಮಾಯಿ ಸೇರಿದಂತೆ ಅನೇಕ ದೇವಾಲಯದ ಆವರಣದಲ್ಲಿ ದಾಂಡಿಯಾವನ್ನ ಆಯೋಜನೆ ಮಾಡಲಾಗಿರುತ್ತದೆ. ಇದಕ್ಕಾಗಿ ದಸರಾ ದಿನದಿಂದ 15 ದಿನಗಳ ಕಾಲ ತರಬೇತಿ ಪಡೆದು ನಂತರ ಮಾಡುತ್ತಾರೆ. ಇದಲ್ಲದೇ ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ತಂಡ ಕಟ್ಟಿಕೊಂಡು ದಾಂಡಿಯಾ ನೃತ್ಯದ ಮೂಲಕ ದೇವಿಗೆ ವಿಶೇಷ ಪೂಜೆ ನೆರವೇರಿಸಿ ನವರಾತ್ರಿ ಉತ್ಸವವನ್ನು ಆಚರಿಸಿದ್ದಾರೆ.

    ಒಟ್ಟಾರೆ ಕರ್ನಾಟಕದ ಕಾಶ್ಮೀರ ಎಂಬ ಖ್ಯಾತಿ ಪಡೆದಿರುವ ಕಾರವಾರದಲ್ಲಿನ ಜನರು ನವರಾತ್ರಿ ಉತ್ಸವವನ್ನ ದಾಂಡಿಯಾ ನೃತ್ಯದ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ಕಾರವಾರದ ಬಹುತೇಕ ಎಲ್ಲಾ ಕಾಲೋನಿಗಳಲ್ಲಿ ದಾಂಡಿಯಾ ಆಯೋಜನೆ ಮಾಡುವುದರಿಂದ ಜಾತಿ-ಪಂಗಡಗಳಿಲ್ಲದೇ ಎಲ್ಲಾ ಭೇದವನ್ನು ಮರೆತು ಬೇರೆಯುವುದರಿಂದ ಜನರಲ್ಲಿ ಸೌಹಾರ್ದತೆ ಭಾವ ಬೆಳೆಯಲು ಸಹಾಯ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ

    ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ

    ಮೈಸೂರು: ಜಿಲ್ಲೆಯ ಅಂಬಾವಿಲಾಸ ಅರಮನೆಯಲ್ಲಿ ಇಂದು ಆಯುಧ ಪೂಜೆ ಸಂಭ್ರಮದಿಂದ ತುಂಬಿ ತುಳುಕುತ್ತಿದೆ.

    ಜಯ ಮಾರ್ತಾಂಡ ದ್ವಾರದ ಬಳಿ ಇರುವ ಕೋಡಿಸೋಮೇಶ್ವರ ದೇವಸ್ಥಾನದಲ್ಲಿ ಆಯುಧಗಳಿಗೆ ಪೂಜೆ ಮಾಡಲಾಗಿದೆ. ಸಿಬ್ಬಂದಿ ಅರಮನೆಯಿಂದ ದೇವಸ್ಥಾನದವರೆಗೆ ಪಟ್ಟದ ಆನೆ, ಕುದುರೆ ಒಂಟೆಗಳ ಜೊತೆ ಕೊಂಡೊಯ್ಯಲಾಗಿತ್ತು. ಪೂಜೆ ಬಳಿಕ ಅರಮನೆಯ ಕೊಠಡಿಯಲ್ಲಿ ಚಂಡಿಕಾ ಹೋಮ ನೆರವೇರಿತು.

    ಅರಮನೆಯ ವಾಹನಗಳು ಆಯುಧ ಪೂಜೆಗೆ ಸಿದ್ಧವಾಗಿದ್ದು, ಅರಮನೆ ಸಿಬ್ಬಂದಿ ವಾಹನಗಳನ್ನ ಬಾಳೆ ಹೂವಿನಿಂದ ರಾಜಮನೆತನದ ಎಲ್ಲ ಕಾರುಗಳನ್ನು ಸಿಂಗರಿಸಿದ್ದಾರೆ. ನವರಾತ್ರಿ ಉತ್ಸವಕ್ಕೆ ಇಂದು ತೆರೆಯಾಗುತ್ತಿದ್ದು, ರಾಜವಂಶಸ್ಥರ ಖಾಸಗಿ ದರ್ಬಾರ್ ಸಂಜೆ ಸಮಾಪ್ತಿಯಾಗಲಿದೆ. ಮೈಸೂರು ಅರಮನೆಯಲ್ಲಿಂದು ಸಾಂಪ್ರದಾಯಿಕ ಆಯುಧ ಪೂಜೆ ಆಚರಣೆ ಜರುಗುತ್ತಿದ್ದು, ಇಂದು ಮುಂಜಾನೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸಿವೆ. ನಂತರ ಆಯುಧಗಳನ್ನು ಅರಮನೆಯ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ ಮಾಡಲಾಗಿದೆ. ಇದರೊಂದಿಗೆ ಪಟ್ಟದ ಆನೆ, ಕುದುರೆ, ಹಸು ಕೂಡ ಹೆಜ್ಜೆ ಹಾಕಿದ್ದವು.

    ಬೆಳಗ್ಗೆ 8.15 ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನು ತರಲಾಗಿದ್ದು, ಬೆ. 9 ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿಯಾಗಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಬೆ.10 ರಿಂದ 10.25ದ ವರೆಗೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ಕೈಗೊಂಡಿದ್ದು, ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ಪೂಜೆ ಮಾಡಲಿದ್ದಾರೆ.

    ಸಂಜೆ ಅಂಬಾವಿಲಾಸ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ವಿಸರ್ಜನೆ ಮಾಡಲಿದ್ದು, ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಲು ಸಾಲು ರಜೆಯ ಜೊತೆ ಭಾರೀ ಮಳೆ- ಶಾಪಿಂಗ್ ಮೂಡ್‍ನಲ್ಲಿದ್ದರಿಗೆ ನಿರಾಸೆ

    ಸಾಲು ಸಾಲು ರಜೆಯ ಜೊತೆ ಭಾರೀ ಮಳೆ- ಶಾಪಿಂಗ್ ಮೂಡ್‍ನಲ್ಲಿದ್ದರಿಗೆ ನಿರಾಸೆ

    ಬೆಂಗಳೂರು: ನಗರದಲ್ಲಿ ಸಂಜೆ ಹೊತ್ತಿಗೆ ಸುರಿದ ಮಳೆಯಿಂದಾಗಿ ಜನರು ಪರದಾಟ ನಡೆಸಿದ್ದು, ಹಬ್ಬದ ಶಾಪಿಂಗ್ ಮೂಡ್‍ನಲ್ಲಿದ್ದ ಜನ ನಿರಾಸೆ ಅನುಭವಿಸಿದ್ದಾರೆ. ಇತ್ತ ಊರಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಜನರು ಟ್ರಾಫಿಕ್ ಸಮಸ್ಯೆಯಿಂದ ಹೈರಾಣದರು.

    ನಗರದ ಪ್ರಮುಖ ಭಾಗಗಳಾದ ಕಾರ್ಪೊರೇಷನ್ ಸರ್ಕಲ್, ಗಾಂಧಿನಗರ, ಜೆ ಸಿ ನಗರದಲ್ಲಿ ಮಳೆಯಿಂದ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದರು. ಕೆ.ಆರ್ ಸರ್ಕಲ್, ಕೋರಮಂಗಲ, ಓಕಳಿಪುರಂ ಅಂಡರ್‍ಪಾಸ್ ಬಳಿಯೂ ಮಳೆ ನೀರಿನಿಂದ ಜನರು ಸಮಸ್ಯೆ ಎದುರಿಸಿದರು. ಉಳಿದಂತೆ ಪ್ಯಾಲೇಸ್ ಗುಟ್ಟಹಳ್ಳಿ, ಯು.ಬಿ ಸಿಟಿ, ಚಾಮರಾಜಪೇಟೆ, ಯಶವಂತರಪುರ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವರುಣನ ಸಿಂಚನ ಆಗಿದೆ.

    ಸಂಜೆ ವೇಳೆಗೆ ಮಳೆ ಆರಂಭವಾದ ಕಾರಣ ಭರ್ಜರಿ ವ್ಯಾಪಾರ ನಿರೀಕ್ಷೆಯಲ್ಲಿದ್ದ ವ್ಯಾಪಾರಿಗಳ ಮುಖದಲ್ಲೂ ಆತಂಕ ಮನೆ ಮಾಡಿತ್ತು. ರಸ್ತೆ ಇಕ್ಕೆಲ್ಲಗಳಲ್ಲಿ ಬಾಳೆ ಕಂಬ, ಮಾವಿನ ಎಲೆಗಳು, ಕುಂಬಳಕಾಯಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಗ್ರಾಹಕರಿಲ್ಲದೇ ಕಾದು ಕುಳಿತ್ತಿದ್ದರು.

    ದಸರಾ ಹಬ್ಬದ ಹಿನ್ನೆಲೆ ಆಯುಧ ಪೂಜೆ, ವಿಜಯದಶಮಿ ಹಾಗೂ ಶನಿವಾರ ಒಂದು ದಿನ ರಜೆ ಹಾಕಿಕೊಂಡರೆ ನಾಲ್ಕು ದಿನ ರಜೆ ಸಿಗುವ ಕಾರಣ ಹಬ್ಬಕ್ಕೆ ಊರಿಗೆ ತೆರಳಲು ಸಿದ್ಧರಾಗಿದ್ದ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆಯಿಂದ ಪರದಾಟ ನಡೆಸಿದರು. ಇದಕ್ಕೆ ಮಳೆಯೂ ಸಾಥ್ ನೀಡಿದ ಕಾರಣ ರಸ್ತೆಯಲ್ಲಿ ವಾಹನಗಳು ಆಮೆ ವೇಗದಲ್ಲಿ ಸಂಚಾರಿಸಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಗರದ ಮೆಜೆಸ್ಟಿಕ್, ಕೆಜಿ ರೋಡ್, ಕೆಆರ್ ಮಾರುಕಟ್ಟೆ, ಜೆಸಿ ರಸ್ತೆ, ಸುತ್ತಮುತ್ತ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಧಪೂಜೆ, ಜಂಬೂಸವಾರಿ: ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ಣ ಪಟ್ಟಿ ಇಲ್ಲಿದೆ

    ಆಯುಧಪೂಜೆ, ಜಂಬೂಸವಾರಿ: ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ಣ ಪಟ್ಟಿ ಇಲ್ಲಿದೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಎರಡು ದಿನ ಬಾಕಿ ಇದ್ದು, ಇದಕ್ಕಾಗಿ ಮೈಸೂರಿನಲ್ಲಿ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ.

    ಗುರುವಾರ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯಧ ಪೂಜೆ ನಡೆಯಲಿದೆ. ಇದಕ್ಕಾಗಿ ಇಂದು ಅರಮನೆಯಲ್ಲಿದ್ದ ಬೆಳ್ಳಿರಥವನ್ನ ಹೊರತೆಗೆದು ಸ್ವಚ್ಛಗೊಳಿಸಲಾಯಿತು.

    ಗುರುವಾರದ ಕಾರ್ಯಕ್ರಮಗಳು
    – ಬೆಳಗ್ಗೆ 5.30ಕ್ಕೆ ಚಂಡಿ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಗಲಿದೆ.
    – ಬೆಳಗ್ಗೆ 7ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನ.
    – ಬೆಳಗ್ಗೆ 7.45ಕ್ಕೆ ಖಾಸ್ ಆಯುಧಗಳು ಅರಮನೆಯಿಂದ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ. ಆಯುಧಗಳೊಂದಿಗೆ ಹೆಜ್ಜೆ ಹಾಕಲಿರುವ ಪಟ್ಟದ ಆನೆ, ಕುದುರೆ, ಹಸು.
    – ಬೆಳಗ್ಗೆ 8.15ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳ ಆಗಮನ.
    – ಬೆಳಗ್ಗೆ 9ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿ.
    – ಬೆಳಗ್ಗೆ 10ರಿಂದ 10.25 ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ. ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಪೂಜೆ.
    – ಸಾಯಂಕಾರ ಅಂಬಾವಿಲಾಸ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ವಿಸರ್ಜನೆ.
    – ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ.

    ಶುಕ್ರವಾರದ ಕಾರ್ಯಕ್ರಮಗಳು
    – ಬೆಳಗ್ಗೆ 8.45 ಕ್ಕೆ ಅರಮನೆಗೆ ಪಟ್ಟದ ಆನೆ, ಕುದುರೆ, ಹಸು, ಆಗಮನ ಮತ್ತು ಪೂಜೆ
    – 9.10 ರಿಂದ 10.15 ರ ಒಳಗೆ ವಜ್ರಮುಷ್ಠಿ ಕಾಳಗ
    – ಕಾಳಗ ಮುಗಿದ ಮೇಲೆ ಬೆಳ್ಳಿ ರಥದಲ್ಲಿ ಯದುವೀರ್ ವಿಜಯಯಾತ್ರೆ
    – ಅರಮನೆಯ ಒಳಗಿನ ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಪೂಜೆ
    – ಪೂಜೆ ನಂತರ ಮೆರವಣಿಗೆ ಮೂಲಕ ಯದುವೀರ್ ಅರಮನೆಗೆ ವಾಪಸ್
    – ಅಲ್ಲಿಗೆ ಖಾಸಗಿ ದರ್ಬಾರ್ ಮುಕ್ತಾಯ.
    – ಮಧ್ಯಾಹ್ನ 2.30 ರಿಂದ 3.16 ರ ಕುಂಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ.
    – 3.40 ರಿಂದ 4.10 ರ ಲಗ್ನದಲ್ಲಿ ವಿಜಯದಶಮಿಯ ಮೆರವಣಿಗೆಗೆ ಪುಷ್ಪಾರ್ಚನೆ.
    – ಮೆರವಣಿಗೆ ಮುಗಿದ ಮೇಲೆ 7ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಆರಂಭ.

    ಇಂದು ಶಸ್ತ್ರ ಸಹಿತ ಪೊಲೀಸ್ ಸಿಬ್ಬಂದಿಗಳು, ಗಜಪಡೆ ಹಾಗೂ ಅಶ್ವಪಡೆಗಳು ಕೊನೆ ಹಂತದ ತಾಲೀಮಿನಿಲ್ಲಿ ಭಾಗಿಯಾಗಿದ್ದವು. ಆನೆಗಳಿಗೆ ಪುಷ್ಪರ್ಚನೆ ಮಾಡಿ ಗೌರವ ವಂದನೆ ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತರು, ಶುಕ್ರವಾರ ನಡೆಯಲಿರುವ ಜಂಬೂಸವಾರಿಗೆ ಎಲ್ಲ ಸಿದ್ಧತೆ ನಡೆದಿದೆ. ಯಶಸ್ವಿ ಜಂಬೂಸವಾರಿಗೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಜಂಬೂಸವಾರಿ ಸಮಯದಲ್ಲಿ ಪಾರಂಪರಿಕ ಹಳೆ ಕಟ್ಟಡಗಳ ಮೇಲೆ ಹತ್ತಬಾರದು ಅಂತ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸೂಚನೆ ನೀಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದ್ದಾರೆ.

    ಜಂಬೂಸವಾರಿಯಲ್ಲಿ ಗಮನ ಸೆಳೆಯುವ ಸ್ತಬ್ಧ ಚಿತ್ರಗಳಿಗೆ ಕೊನೆ ಹಂತದ ಸ್ಪರ್ಶ ನೀಡಲಾಗುತ್ತಿದೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗಿಯಾಗುತ್ತಿವೆ. 30 ಜಿಲ್ಲೆಗಳ ಜೊತೆ 12 ಇಲಾಖೆಯ ಸ್ತಬ್ಧ ಚಿತ್ರಗಳು. ಭಿನ್ನ ವಿಭಿನ್ನ ಸಂದೇಶ ಸಾರುತ್ತಿದ್ದು ಈ ಬಾರಿ ಜನರಿಗೆ ಸ್ತಬ್ಧ ಚಿತ್ರಗಳು ಮುದ ನೀಡಲಿದೆ ಎಂದು ಹಾವೇರಿ ಸ್ತಬ್ಧ ಚಿತ್ರ ಅಧಿಕಾರಿ ಪ್ರಕಾಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿನ್ನದ ನಾಡಿನಲ್ಲಿ ರಾಮಾಯಣ, ಮಹಾಭಾರತ, ಮಹಾ ವಿಷ್ಣುವಿನ ದಶಾವತಾರದ ಬೊಂಬೆಗಳು ಜೋಡಣೆ

    ಚಿನ್ನದ ನಾಡಿನಲ್ಲಿ ರಾಮಾಯಣ, ಮಹಾಭಾರತ, ಮಹಾ ವಿಷ್ಣುವಿನ ದಶಾವತಾರದ ಬೊಂಬೆಗಳು ಜೋಡಣೆ

    ಕೋಲಾರ: ದಸರಾ ಹಬ್ಬದ ಅಂಗವಾಗಿ ಕೋಲಾರದ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ರಾಮಾಯಣ ಹಾಗೂ ಮಹಾಭಾರತದ ಬೊಂಬೆಗಳನ್ನು ಜೋಡಿಸಲಾಗಿದೆ. ಅಲ್ಲದೇ ಅನಂತಪದ್ಮನಾಭ ಸ್ವಾಮಿಯ ವೈಭವ ಹಾಗೂ ಮಹಾ ವಿಷ್ಣುವಿನ ದಶಾವತಾರ ಕೂಡ ನೋಡಬಹುದಾಗಿದೆ.

    ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಇಲ್ಲಿನ ಭಕ್ತಿ ಮಂದಿರದಲ್ಲಿ ತಾಯಿ ಚಾಮುಂಡೇಶ್ವರಿ ಸಹಿತ ನೂರಾರು ವಿವಿಧ ರೀತಿಯ ನವರಾತ್ರಿ ಬೊಂಬೆಗಳನ್ನಿಟ್ಟು ನಿತ್ಯ ಅದ್ಧೂರಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಕೃಷ್ಣನ ಲೀಲೆಗಳನ್ನು ತೋರಿಸುವ ಬೊಂಬೆಗಳು, ವಿಷ್ಣುವಿನ ದಶಾವತಾರದ ಬೊಂಬೆಗಳು, ಮದುವೆ ಸಂಪ್ರದಾಯವನ್ನು ಬಿಂಬಿಸುವ ಬೊಂಬೆಗಳು, ರಥೋತ್ಸವಗಳು, ಚಾಮುಂಡೇಶ್ವರಿ ದೇವಿಯ ವಿವಿಧ ಅವತಾರಗಳನ್ನು ಇಲ್ಲಿ ಕಾಣಬಹುದು.

    ಸ್ವತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ್ ಆಜಾದ್, ಸಾವರ್ಕರ್ ರಂತ ಸ್ವತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರ ಬೊಂಬೆಗಳನ್ನು ಇಲ್ಲಿ ಕಾಣಬಹುದು. ಕಳೆದ 20 ವರ್ಷಗಳಿಂದ ಇಲ್ಲಿ ನವರಾತ್ರಿ ಹಬ್ಬವನ್ನು ವಿಶಿಷ್ಟವಾಗಿ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದು, ಪ್ರತಿನಿತ್ಯ 101 ಮಹಿಳೆಯರಿಂದ ಶಕ್ತಿ ದೇವಿಗೆ ಕುಂಕುಮಾರ್ಚನೆ ಹಾಗೂ ಹೋಮಗಳನ್ನು ಮಾಡಲಾಗುತ್ತದೆ.


    ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿರುವ ಕೋಟಿಲಿಂಗೇಶ್ವರದಲ್ಲಿ 9 ದಿನಗಳ ಕಾಲ ನವರಾತ್ರಿ ಬೊಂಬೆಗಳನ್ನು ಇಡಲಾಗುತ್ತದೆ. ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ನೂರಾರು ಮಹಿಳೆಯರು ಪ್ರತಿನಿತ್ಯ ಕುಂಕುಮಾರ್ಚನೆ, ಹೋಮ, ದೀಪಾಲಂಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಪ್ರತಿನಿತ್ಯ ಚಾಮುಂಡೇಶ್ವರಿ ದೇವಿಯ ರಥೋತ್ಸವ, ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ.

    ಹತ್ತಾರು ಮಹಿಳೆಯರು, ಮಕ್ಕಳು ಪೂಜೆಯಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ವಿಶೇಷವಾಗಿ ಸರಸ್ವತಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿನ ನೂರಾರು ಮಕ್ಕಳಿಗೆ ಪುಸ್ತಕ ಹಾಗೂ ಪೆನ್‍ಗಳನ್ನು ಇಲ್ಲಿ ವಿತರಣೆ ಮಾಡುವ ಮೂಲಕ ಮಕ್ಕಳಿಗೆ ಸರಸ್ವತಿಯ ಅನುಗ್ರಹ ಕರುಣಿಸಲಿ ಎಂದು ಪೂಜೆ ಸಲ್ಲಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯಿಂದ ಇಲ್ಲಿಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

    ನವರಾತ್ರಿ ಆಚರಣೆಯನ್ನು ಕೇವಲ ಮೈಸೂರು ಭಾಗಕ್ಕಷ್ಟೇ ಅಲ್ಲ ಹಳೆ ಮದ್ರಾಸು ಭಾಗದಲ್ಲೂ ದಸರಾ ವೈಭವ ಕಳೆ ಗಟ್ಟುತ್ತದೆ. ಚಿನ್ನದ ನಾಡಲ್ಲೂ ದಸರಾ ಉತ್ಸಾಹ, ಆಸಕ್ತಿ ತುಂಬಿದ್ದು ಹಬ್ಬಕ್ಕೆ ಮತ್ತಷ್ಟು ಮೆರುಗು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ!

    ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ!

    ಗನ್ಮಾತೆ ದುರ್ಗಾದೇವಿಯ ಎಂಟನೇ ರೂಪ ಮಹಾಗೌರಿ. ಶ್ವೇತ ಬಣ್ಣದ ದೇವಿಗೆ ಶಂಖ, ಚಂದ್ರ ಮತ್ತು ಕುಂದ ಪುಷ್ಪ ಇವುಗಳ ಉಪಮೆ ಕೊಡಲಾಗಿದೆ. ಇವಳಿಗೆ ನಾಲ್ಕು ಭುಜಗಳಾಗಿದ್ದು, ಇವಳ ವಾಹನ ವೃಷಭವಾಗಿದೆ. ಆ ವೃಷಭ ಕೂಡ ಬೆಳ್ಳಗಿದೆ. ಇವಳ ಮೇಲಿನ ಬಲಕೈಯಲ್ಲಿ ಅಭಯಮುದ್ರೆ ಮತ್ತು ಕೆಳಗಿನ ಬಲಕೈಯಲ್ಲಿ ತ್ರಿಶೂಲವಿದೆ.

    ಮೇಲಿನ ಎಡಕೈಯಲ್ಲಿ ಢಮರು ಹಾಗೂ ಕೆಳಗಿನ ಎಡಗೈಯಲ್ಲಿ ವರಮುದ್ರೆ ಇದೆ. ತನ್ನ ಪಾರ್ವತಿ ರೂಪದಲ್ಲಿ ಇವಳು ಭಗವಾನ್ ಶಿವವನ್ನು ಪತಿಯಾಗಿ ಪಡೆಯಲು ಭಾರೀ ಕಠೋರ ತಪಸ್ಸು ಮಾಡಿದ್ದಳು. ನಾನು ಶಿವನಲ್ಲದೇ ಬೇರೆ ಯಾವುದೇ ದೇವತೆಯನ್ನು ವರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಳು. ಕಠೋರ ತಪಸ್ಸಿನಿಂದಾಗಿ ಈಕೆಯ ಶರೀರ ಕಪ್ಪು ಬಣ್ಣಕ್ಕೆ ತಿರುಗಿತ್ತು. ಇವಳ ತಪಸ್ಸಿಗೆ ಸಂತುಷ್ಟನಾಗಿ ಭಗವಾನ್ ಶಿವನು ಇವಳ ಶರೀರವನ್ನು ಗಂಗೆಯ ಪವಿತ್ರ ಜಲದಿಂದ ಚೆನ್ನಾಗಿ ತೊಳೆದಾಗ ಶ್ವೇತ ಬಣ್ಣಕ್ಕೆ ಬದಲಾದ ಕಾರಣ ಈಕೆಗೆ ಗೌರಿ ಹೆಸರು ಬಂದಿದೆ.

    ನವರಾತ್ರಿಯ ಎಂಟನೇ ದಿನ ಇವಳ ಉಪಾಸನೆಯಿಂದ ಭಕ್ತರ ಎಲ್ಲ ಕಷ್ಟಗಳು ತೊಳೆದು ಹೋಗುತ್ತದೆ. ಅವರ ಪಾಪಗಳೂ ಕೂಡ ನಾಶವಾಗಿ ಹೋಗುತ್ತದೆ. ಭವಿಷ್ಯದಲ್ಲಿ ಪಾಪ-ಸಂತಾಪ, ದೈನ್ಯ- ದುಃಖ, ಅವರ ಬಳಿಗೆ ಎಂದು ಬರುವುದಿಲ್ಲ. ಅವರು ಎಲ್ಲ ಪ್ರಕಾರದಿಂದ ಪವಿತ್ರ ಅಕ್ಷಯ ಪುಣ್ಯಗಳ ಅಧಿಕಾರಿಯಾಗುತ್ತಾರೆ. ಜಗಜ್ಜನನಿಯ ಧ್ಯಾನ-ಸ್ಮರಣೆ, ಪೂಜೆ-ಆರಾಧನೆಯು ಭಕ್ತರಿಗಾಗಿ ಎಲ್ಲಾವಿಧದಿಂದ ಶ್ರೇಯಸ್ಕರವಾಗಿದೆ.

    ಇವಳ ಕೃಪೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತದೆ. ಮನಸ್ಸನ್ನು ಏಕನಿಷ್ಠವಾಗಿಸಿ ಮನುಷ್ಯನು ಸದಾಕಾಲ ಇವಳ ಧ್ಯಾನ ಮಾಡಬೇಕು. ಇವಳ ಉಪಾಸನೆಯಿಂದ ಭಕ್ತರ ಅಸಂಭವ ಕಾರ್ಯಕಗಳು ಕೂಡ ನೆರವೇರುತ್ತದೆ ಎನ್ನುವ ನಂಬಿಕೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    9.ನವರಾತ್ರಿ ಹಬ್ಬ ಹೆಣ್ಣು ಮಕ್ಕಳಿಗೆ ಇಷ್ಟ ಯಾಕೆ?

    10. ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    11. ನವರಾತ್ರಿ ಎರಡನೇ ದಿನ ಇಷ್ಟಾರ್ಥ ಸಿದ್ಧಿಗಾಗಿ ಬ್ರಹ್ಮಚಾರಿಣಿಯನ್ನು ಪೂಜಿಸೋದು ಯಾಕೆ? ಪುರಾಣ ಕಥೆ ಓದಿ

    12. ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    13. ನವದುರ್ಗೆಯ 4ನೇ ರೂಪ ಕೂಷ್ಮಾಂಡ -ಇವಳ ಭಕ್ತಿಯಿಂದ ಆಯಸ್ಸು, ಬಲ, ಆರೋಗ್ಯ ವೃದ್ಧಿ

    14. ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    15. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    16. ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ

    17. 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

  • ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನ ಹತ್ತಿ ದೇವಿಯ ದರ್ಶನ ಪಡೆದ ನಟಿ ಹರಿಪ್ರಿಯಾ

    ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನ ಹತ್ತಿ ದೇವಿಯ ದರ್ಶನ ಪಡೆದ ನಟಿ ಹರಿಪ್ರಿಯಾ

    ಮೈಸೂರು: ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆದಿದ್ದಾರೆ.

    ಸೋಮವಾರ ಯುವದಸರಾ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದ್ದ ನಟಿ ಹರಿಪ್ರಿಯಾ ಮಂಗಳವಾರ ಚಾಮುಂಡಿಬೆಟ್ಟದ ತಪ್ಪಲಿನಿಂದ 1,001 ಮೆಟ್ಟಿಲುಗಳನ್ನ ಹತ್ತಿ ತಾಯಿಯ ದರ್ಶನ ಪಡೆದರು. ನಾನು ಎರಡನೇ ಬಾರಿ ಬೆಟ್ಟವನ್ನು ಹತ್ತಿದ್ದೇನೆ. ಮೈಸೂರೆಂದರೆ ನನಗೆ ಇಷ್ಟದ ಊರು. ಬೆಟ್ಟ ಹತ್ತವುದು ನನಗೆ ಇಷ್ಟ ಎಂದು ಹೇಳಿದರು.

    ದಸರೆಯ ಅಂಗವಾಗಿ ಸೋಮವಾರ ರಾತ್ರಿಯ ಯುವ ದಸರಾ ಕಾರ್ಯಕ್ರಮ ಅಕ್ಷರಶಃ ಸ್ಯಾಂಡಲ್‍ವುಡ್ ಬೆಡಗಿಯರಿಂದ ಹಾಗೂ ಸಂಗೀತ ಗಾಯಕರಿಂದ ರಂಗೇರಿತ್ತು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ರಾತ್ರಿ ನಡೆದ ನಾಲ್ಕನೇ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಬೆಡಗಿಯರು ಮಾಡಿದ ಡ್ಯಾನ್ಸ್‍ಗೆ ಪಡ್ಡೆ ಹೈಕಳಂತು ಹುಚ್ಚೆದ್ದು ಕುಣಿದರು. ನಟಿಯರಾದ ಹರಿಪ್ರಿಯಾ, ಶುಭಾಪುಂಜಾ, ಸೋನುಗೌಡ ಹಾಗೂ ಇನ್ನಿತರ ನಟಿಯರ ಡ್ಯಾನ್ಸ್ ಯುವ ದಸರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.

    ಸ್ಯಾಂಡಲ್‍ವುಡ್ ಬೆಡಗಿಯರ ನೃತ್ಯವಲ್ಲದೇ ಗಾಯಕರ ಕಂಠ ಸಿರಿಯಿಂದ ಮೂಡಿ ಬಂದ ಗಾಯನವೂ ನೆರದಿದ್ದವರ ಮನಕ್ಕೆ ತಂಪೆರೆದಿತ್ತು. ಸಂಜೀತ್ ಹೆಗ್ಡೆ, ಅನುರಾಧ ಭಟ್, ಸಂತೋಷ್, ಚಿನ್ಮಯ್ ಸೇರಿದಂತೆ ಇನ್ನಿತರ ಹಿನ್ನೆಲೆ ಗಾಯಕರು ಹಾಡಿದ ಟಪ್ಪಾಂಗ್ ಗುಚ್ಚಿ ಮೆಲೊಡಿ ಹಾಡುಗಳಿಗಂತೂ ಜನ ಹುಚ್ಚೆದ್ದು ಕುಣಿದರು. ಕುಣಿದು ಸುಸ್ತಾದ ಯುವಸ್ತೋಮವನ್ನು ಕಾಮಿಡಿ ಕಿಲಾಡಿ ಖ್ಯಾತಿ ಶಿವರಾಜ್ ಕೆ.ಆರ್.ಪೇಟೆ ಹಾಗೂ ನಯನ ತಮ್ಮ ಕಾಮಿಡಿಯಿಂದ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದರು. ಇಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ನೃತ್ಯಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv