Tag: ದಸರಾ

  • ಜಿಟಿಡಿಯಷ್ಟು ವಿಶಾಲ ಹೃದಯ ನನಗಿಲ್ಲ, ದಸರಾದಲ್ಲಿ ಭಾಗವಹಿಸಲ್ಲ- ಸಾ.ರಾ.ಮಹೇಶ್ ಟಾಂಗ್

    ಜಿಟಿಡಿಯಷ್ಟು ವಿಶಾಲ ಹೃದಯ ನನಗಿಲ್ಲ, ದಸರಾದಲ್ಲಿ ಭಾಗವಹಿಸಲ್ಲ- ಸಾ.ರಾ.ಮಹೇಶ್ ಟಾಂಗ್

    ಮೈಸೂರು: ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ, ನನಗೆ ಮಾಜಿ ಸಚಿವ ಜಿ.ಟಿ.ದೇವೇಗೌಡರಷ್ಟು ವಿಶಾಲ ಹೃದಯವಿಲ್ಲ ಎಂದು ಪರೋಕ್ಷವಾಗಿ ಜಿಟಿಡಿ ಬಿಜೆಪಿಯವರ ಜೊತೆ ಸುತ್ತವುದಕ್ಕೆ ಸಾ.ರಾ.ಮಹೇಶ್ ಟಾಂಗ್ ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ನಮಗೆ ಅರ್ಹತೆ ಇಲ್ಲ ಎಂದು ಟೀಕಿಸುತ್ತ, ಜನಾದೇಶ ಇಲ್ಲದಿದ್ದರೂ ಬಿಜೆಪಿಯವರು ಸರ್ಕಾರ ಮಾಡಿದ್ದಾರೆ. ನಮಗೆ ಅರ್ಹತೆ ಇಲ್ಲ ಎಂದ ಮೇಲೆ ಅವರ ಜೊತೆ ಸೇರಿ ಹೇಗೆ ದಸರಾ ಮಾಡುವುದು? ನನಗೆ ಜಿ.ಟಿ.ದೇವೆಗೌಡರಷ್ಟು ವಿಶಾಲ ಹೃದಯ ಇಲ್ಲ. ಸಚಿವ ಸೋಮಣ್ಣ ನನ್ನನ್ನು ಮಹಾ ಜ್ಞಾನಿ ಎಂದಿದ್ದಾರೆ. ನಮ್ಮಂತ ಜ್ಞಾನ ಇರುವವರು ಅವರ ಜೊತೆ ಹೇಗೆ ಕೂರುವುದು? ಹೀಗಾಗಿ ದಸರಾ ಕಾರ್ಯಕ್ರಮದಿಂದ ನಾನು ದೂರ ಊಳಿದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಹುಣಸೂರಿನಲ್ಲಿ ಜೆಡಿಎಸ್ ಸೋಲುತ್ತದೆ ಎಂಬ ಜಿಟಿಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇವತ್ತಿನ ಪರಿಸ್ಥಿತಿಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ವಾತವಾರಣವಿದೆ. ಈ ಕುರಿತು ಜಿ.ಟಿ.ದೇವೇಗೌಡ ಅವರು ಹೇಳಿರುವುದು ನಿಜ. ಇದನ್ನು ಮುಂದಿನ ದಿನದಲ್ಲಿ ಜಿಟಿಡಿ ನೇತೃತ್ವದಲ್ಲಿ ಪಕ್ಷ ಸಂಘಟಿಸಿ ಸರಿಪಡಿಸಿಕೊಳ್ಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಪಕ್ಷದ ಮೇಲಿನ ಅನುಕಂಪ ಹಾಗೂ ನಮ್ಮ ಪಕ್ಷದಿಂದ ಗೆದ್ದು ಹೊರ ಹೋದವರು ಮಾಡಿರುವ ಡ್ಯಾಮೇಜ್‍ನಿಂದಾಗಿ ಪಕ್ಷದ ಪರಿಸ್ಥಿತಿ ಹುಣಸೂರಿನಲ್ಲಿ ಸರಿ ಇಲ್ಲ. ಇದನ್ನೇ ಜಿ.ಟಿ.ದೇವೇಗೌಡರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಇದು ಸರಿಯಾಗುತ್ತದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ಪಕ್ಷ ಸಂಘಟಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಹುಣಸೂರಿನಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬೆಳ್ಳಂಬೆಳಗ್ಗೆ ಗಜಪಡೆ ಜೊತೆ ಸಚಿವ ವಿ.ಸೋಮಣ್ಣ ವಾಕಿಂಗ್

    ಬೆಳ್ಳಂಬೆಳಗ್ಗೆ ಗಜಪಡೆ ಜೊತೆ ಸಚಿವ ವಿ.ಸೋಮಣ್ಣ ವಾಕಿಂಗ್

    ಮೈಸೂರು: ದಸರಾ ಗಜಪಡೆಯ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಾಕಿಂಗ್ ಮಾಡಿದ್ದಾರೆ.

    ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾಜಮಾರ್ಗದಲ್ಲಿ ಗಜಪಡೆಗಳ ಪಾದಯಾತ್ರೆ ನಡೆಸಲಾಗುತ್ತಿದೆ. ಸೋಮಣ್ಣ ಅವರು ಬೆಳ್ಳಂಬೆಳಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಪಾದಯಾತ್ರೆ ಮಾಡಿದರು. ಈ ವೇಳೆ ಜಂಬೂಸವಾರಿ ತೆರಳುವ ಮಾರ್ಗದಲ್ಲಿ ಕಾಮಗಾರಿ ಹಾಗೂ ಸ್ಥಳ ಪರಿಶೀಲನೆ ಮಾಡಿದರು.

    ಅಲ್ಲದೆ ಜಂಬೂ ಸವಾರಿ ಮಾರ್ಗದ ಅಸುಪಾಸಿನಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ನಗರದ ಕೋಟೆ ಆಂಜನೇಯ ದೇವಸ್ಥಾನದಿಂದ ಬನ್ನಿಮಂಟಪದವರೆಗೂ ಸೋಮಣ್ಣ ವಾಕಿಂಗ್ ಮಾಡಿದರು. ಈ ವೇಳೆ ವಿ. ಸೋಮಣ್ಣಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರ, ಮೇಯರ್ ಜಗನ್ನಾಥ್ ಸಾಥ್ ನೀಡಿದರು.

    ಸಮಸ್ಯೆಗಳ ಬಗ್ಗೆ ಗಮನಹರಿಸಿ ಸ್ಥಳದಲ್ಲೇ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಸರಾಗೆ ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

  • ಯಡಿಯೂರಪ್ಪ ಬಂದ ಮೇಲೆ ಚೆನ್ನಾಗಿ ಮಳೆ ಬೆಳೆ ಆಗಿದೆ- ಬಿಎಸ್‍ವೈನ್ನು ಹಾಡಿಹೊಗಳಿದ ಜಿಟಿಡಿ

    ಯಡಿಯೂರಪ್ಪ ಬಂದ ಮೇಲೆ ಚೆನ್ನಾಗಿ ಮಳೆ ಬೆಳೆ ಆಗಿದೆ- ಬಿಎಸ್‍ವೈನ್ನು ಹಾಡಿಹೊಗಳಿದ ಜಿಟಿಡಿ

    ಮೈಸೂರು: ಯಡಿಯೂರಪ್ಪ ಅವರು ಸಿಎಂ ಅದಮೇಲೆ ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿದೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಸಿಎಂ ಬಿಎಸ್‍ವೈಯನ್ನು ಹಾಡಿ ಹೊಗಳಿದ್ದಾರೆ.

    ಇಂದು ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಕ್ಷೇತ್ರ ಆಗಿದ್ದರಿಂದ ನಾನು ಸಿಎಂ ಸ್ವಾಗತ ಮಾಡಲು ಬಂದೆ. ನನ್ನ ಕ್ಷೇತ್ರಕ್ಕೆ ಬಂದಾಗ ಅವರನ್ನು ಸ್ವಾಗತ ಮಾಡೋದು ನನ್ನ ಕರ್ತವ್ಯ ಅದಕ್ಕಾಗಿ ಬಂದಿದ್ದೇನೆ ಹೊರತು ರಾಜಕಾರಣ ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಬಂದಾಗಲೂ ಬಂದಿದ್ದೇನೆ. ನಾನು ಊರಲ್ಲಿ ಇಲ್ಲವಾದರೆ ಮಾತ್ರ ಬಂದಿರೋಲ್ಲ ಎಂದು ಹೇಳಿದರು.

    ಸಿಎಂ ಯಡಿಯೂರಪ್ಪ ಬಂದ ಮೇಲೆ ಚೆನ್ನಾಗಿ ಮಳೆ ಬೆಳೆ ಆಗಿದೆ. ಬರ ಇತ್ತು ಎಲ್ಲ ಹೋಗಿ ನದಿ, ಕೆರೆ-ಕಟ್ಟೆಗಳು ತುಂಬಿದೆ. ಕಳೆದ ಬಾರಿ ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಹೀಗೆ ಆಗಿತ್ತು. ಪ್ರವಾಹ ಸಹ ಬಂದಿತ್ತು. ನಾನು ಆಗ ಗೃಹಮಂಡಳಿ ಅಧ್ಯಕ್ಷನಾಗಿದ್ದೆ. ಆಗ ಪ್ರವಾಹದ ಸಂತ್ರಸ್ತರಿಗೆ ಗೃಹಮಂಡಳಿಯಿಂದ ಮನೆ ಕಟ್ಟಿಕೊಟ್ಟಿದ್ದೇವು. ಈಗಲೂ ಬಿಎಸ್‍ವೈ ಪ್ರವಾಹ ಸಂಬಂಧ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

    ಸಿಎಂ ಆಗಮನಕ್ಕೂ ಮುನ್ನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಜಿಟಿಡಿ, ದಸರಾ ವಿಚಾರವಾಗಿ ನಡೆದ ಮೊದಲ ಸಭೆಯಲ್ಲೂ ಭಾಗಿಯಾಗಿದ್ದರು. ಆದರೆ ಬಹುತೇಕ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ದಸರಾ ಸಭೆಗೆ ಗೈರಾಗಿದ್ದರು.

  • ಅರ್ಜುನ ನೇತೃತ್ವದ ದಸರಾ ಗಜಪಡೆಯ ತೂಕ ಪರಿಶೀಲನೆ

    ಅರ್ಜುನ ನೇತೃತ್ವದ ದಸರಾ ಗಜಪಡೆಯ ತೂಕ ಪರಿಶೀಲನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಗಜಪಡೆಯ ತೂಕ ಪರಿಶೀಲಿಸಲಾಗಿದೆ.

    ನಗರದ ದೇವರಾಜ ಮೊಹಲ್ಲಾದ ಸಾಯಿರಾಮ್ & ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲನೆ ನಡೆದಿದೆ. ಈ ವೇಳೆ ಗಜಪಡೆಯ ಕ್ಯಾಪ್ಟನ್ ಅರ್ಜುನ- 5,800 ಕೆ.ಜಿ ಇದ್ದರೆ, ವರಲಕ್ಷ್ಮಿ- 3,510 ಕೆ.ಜಿ, ಈಶ್ವರ- 3,995 ಕೆ.ಜಿ, ಧನಂಜಯ- 4,460 ಕೆ.ಜಿ, ವಿಜಯ- 2,825 ಕೆ.ಜಿ ಹಾಗೂ ಅಭಿಮನ್ಯು- 5,145 ಕೆ.ಜಿ ಇದೆ.

    ಸೋಮವಾರ ಮೈಸೂರು ಅರಮನೆಗೆ ಮೊದಲ ತಂಡದ ಆರು ಆನೆಗಳು ಆಗಮಿಸಿದ್ದವು. ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಆನೆಗಳನ್ನು ಬರ ಮಾಡಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗಜಪಡೆಗೆ ಪೂಜೆ ನಡೆದಿದೆ.

    ಅರ್ಜುನನ ನೇತೃತ್ವದ ಆನೆಗಳ ತಂಡಕ್ಕೆ ಸಾಂಪ್ರದಾಯಿಕ ಪೂಜೆ ನಡೆದಿದ್ದು, ಸೋಮವಾರ ಒಂದೂವರೆ ತಿಂಗಳ ಕಾಲ ಆನೆಗಳು ಅರಮನೆಯಲ್ಲೇ ಉಳಿಯಲಿದೆ. ಸೋಮವಾರ ಮಧ್ಯಾಹ್ನ 12ಕ್ಕೆ ಅಭಿಜಿನ್ ಲಗ್ನದಲ್ಲಿ ಗಜಪಡೆಗೆ ಸ್ವಾಗತ ಮಾಡಲಾಗಿದೆ.

  • ಇಂದು ಮೈಸೂರು ಅರಮನೆಗೆ ದಸರಾ ಗಜಪಡೆ ಎಂಟ್ರಿ

    ಇಂದು ಮೈಸೂರು ಅರಮನೆಗೆ ದಸರಾ ಗಜಪಡೆ ಎಂಟ್ರಿ

    ಮೈಸೂರು: ಇಂದು ಮೈಸೂರು ಅರಮನೆಗೆ ದಸರಾ ಗಜಪಡೆ ಹೆಜ್ಜೆ ಇಡಲಿದೆ.

    ಇಂದು ಮೊದಲ ತಂಡದ ಆರು ಆನೆಗಳು ಅರಮನೆಗೆ ಆಗಮಿಸುತ್ತಿದ್ದು, ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಆನೆಗಳನ್ನು ಬರ ಮಾಡಿಕೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಗಜಪಡೆಗೆ ಪೂಜೆ ನಡೆಯಲಿದೆ.

    ಅರ್ಜುನನ ನೇತೃತ್ವದ ಆನೆಗಳ ತಂಡಕ್ಕೆ ಸಾಂಪ್ರದಾಯಿಕ ಪೂಜೆ ನಡೆಯಲಿದ್ದು, ಇಂದಿನಿಂದ ಒಂದೂವರೆ ತಿಂಗಳ ಕಾಲ ಆನೆಗಳು ಅರಮನೆಯಲ್ಲೇ ಉಳಿಯಲಿದೆ. ಇಂದು ಮಧ್ಯಾಹ್ನ 12ಕ್ಕೆ ಅಭಿಜಿನ್ ಲಗ್ನದಲ್ಲಿ ಗಜಪಡೆಗೆ ಸ್ವಾಗತ ಮಾಡಲಾಗುತ್ತದೆ.

    ಕಳೆದ ಗುರುವಾರ ವಿಶ್ವವಿಖ್ಯಾತ ಮೈಸೂರು ದಸರಾ 2019ರ ಗಜಪಯಣಕ್ಕೆ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಅನೆಗಳಿಗೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗಿತ್ತು. ಈ ಗಜ ಪಡೆಯ ಸ್ವಾಗತಕ್ಕೆ ಡೊಳ್ಳು, ಕಂಸಾಳೆ ವಿವಿಧ ಜನಪದ ಕಲಾ ತಂಡಗಳ ಮೆರುಗು ತುಂಬಿತ್ತು. ಇದರ ಜೊತೆಗೆ ಕಲಶ ಹೊತ್ತು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ ಮತ್ತು ಈಶ್ವರ ಆನೆಗಳು ಮೈಸೂರಿಗೆ ಪ್ರಯಾಣ ಮಾಡಿತ್ತು.

    ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ದಸರಾ ಸಭೆ ನಡೆದಿತ್ತು ಈ ವೇಳೆ ಅವರು ದಸರಾ ಕಾರ್ಯಕಾರಿ ಸಮಿತಿ ಸಭೆ ನಂತರ ದಸರಾ ಮುಹೂರ್ತವನ್ನು ಘೋಷಣೆ ಮಾಡಿದ್ದರು. ಸೆಪ್ಟೆಂಬರ್ 29ರಂದು ಬೆಳಗ್ಗೆ ಸುಮಾರು 9.30ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಾಗುತ್ತದೆ.

  • ದಸರಾ ಹಬ್ಬಕ್ಕೆ ದರ್ಶನ ನೀಡಲಿದ್ದಾನಾ ‘ಒಡೆಯ’?

    ದಸರಾ ಹಬ್ಬಕ್ಕೆ ದರ್ಶನ ನೀಡಲಿದ್ದಾನಾ ‘ಒಡೆಯ’?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದ ವಿಚಾರದಲ್ಲಿಯೂ ಬಾಕ್ಸಾಫೀಸ್ ಸುಲ್ತಾನ ಎಂಬ ಬಿರುದಿಗೆ ತಕ್ಕುದಾಗಿಯೇ ಅಬ್ಬರಿಸಿದ್ದಾರೆ. ಅದೇನೇ ಅಡೆತಡೆಗಳು ಬಂದರೂ ಕುರುಕ್ಷೇತ್ರದತ್ತ ಜನರ ಪ್ರೀತಿ, ಆದರಗಳು ಮಾತ್ರ ಕಡಿಮೆಯಾಗಿಲ್ಲ. ಕನ್ನಡ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೂಡಾ ಕುರುಕ್ಷೇತ್ರ ಮನಗೆದ್ದಿದೆ. ಕೌರವೇಂದ್ರನಾಗಿ ದರ್ಶನ್ ಎಲ್ಲರಿಗೂ ಆಪ್ತವಾಗಿದ್ದಾರೆ. ಕುರುಕ್ಷೇತ್ರದ ಬಿಸಿ ಹೀಗೆ ಮುಂದುವರೆದಿರುವಾಗಲೇ ದರ್ಶನ್ ‘ಒಡೆಯ’ನಾಗಿ ಶೀಘ್ರದಲ್ಲಿಯೇ ಅಭಿಮಾನಿಗಳ ಮುಂದೆ ಅವತರಿಸೋ ಸನ್ನಾಹದಲ್ಲಿದ್ದಾರೆ.

    ಯಜಮಾನ ಚಿತ್ರದ ಬಳಿಕ ದರ್ಶನ್ ಒಡೆಯ ಚಿತ್ರದ ಚಿತ್ರೀಕರಣವನ್ನು ವೇಗವಾಗಿ ಮುಗಿಸಿಕೊಂಡಿದ್ದರು. ಪಕ್ಕಾ ಪ್ಲ್ಯಾನಿಂಗ್‍ನೊಂದಿಗೆ ಬೇಗನೆ ಈ ಸಿನಿಮಾದ ಚಿತ್ರೀಕರಣ ಸಮಾಪ್ತಿಯಾಗಿದೆ. ಇದೀಗ ಇದರ ಅಂತಿಮ ಕೆಲಸ ಕಾರ್ಯಗಳು ನಡೆಯುತ್ತಿವೆ. ಈ ತಿಂಗಳ ಕಡೇಯ ಹೊತ್ತಿಗೆಲ್ಲ ಇದರ ಎಲ್ಲ ಕೆಲಸವೂ ಸಮಾಪ್ತಿಯಾಗುತ್ತದೆ. ಆದ್ದರಿಂದಲೇ ಮುಂದಿನ ತಿಂಗಳು ದಸರಾ ಗಿಫ್ಟ್ ಎಂಬಂತೆ ಒಡೆಯನ ದರ್ಶನ ಮಾಡಿಸಲು ಚಿತ್ರತಂಡ ತಯಾರಾಗಿರುವಂತಿದೆ.

    ಎಲ್ಲವೂ ಅಂದುಕೊಂಡಂತೆಯೇ ಆದರೆ ಒಡೆಯ ಚಿತ್ರ ಸೆಪ್ಟೆಂಬರ್ 22ರಂದು ತೆರೆಗಾಣೋ ಸಾಧ್ಯತೆಗಳಿವೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಈ ಅದ್ದೂರಿ ಚಿತ್ರ ಎಚ್‍ಡಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ದರ್ಶನ್ ಖದರ್ ಅನ್ನು ಮತ್ತಷ್ಟು ಮಿರುಗಿಸುವಂಥಾ ಕಥೆ ಹೊಂದಿರೋ ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಕೂಡಾ ಭಾರೀ ಕುತೂಹಲವಿಟ್ಟುಕೊಂಡು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಯಶಸ್ ಮತ್ತು ಪಂಕಜ್ ದರ್ಶನ್ ಸಹೋದರರಾಗಿ ನಟಿಸಿದ್ದಾರೆ. ಬೃಹತ್ ತಾರಾಬಳಗವನ್ನು ಹೊಂದಿರೋ ಈ ಚಿತ್ರ ಮುಂದಿನ ತಿಂಗಳು ತೆರೆಗಾಣೋದು ಬಹುತೇಕ ಖಚಿತ.

  • ಸೆ.29ರಂದು ನಾಡಹಬ್ಬ ದಸರಾಕ್ಕೆ ಚಾಲನೆ

    ಸೆ.29ರಂದು ನಾಡಹಬ್ಬ ದಸರಾಕ್ಕೆ ಚಾಲನೆ

    ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ದಸರಾ ಸಭೆ ನಡೆದಿದ್ದು, ದಸರಾ ಕಾರ್ಯಕಾರಿ ಸಮಿತಿ ಸಭೆ ನಂತರ ದಸರಾ ಮುಹೂರ್ತವನ್ನು ಘೋಷಣೆ ಮಾಡಿದ್ದಾರೆ.

    ಸೆಪ್ಟೆಂಬರ್ 29ರಂದು ಬೆಳಗ್ಗೆ ಸುಮಾರು 9.30ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಾಗುತ್ತದೆ.

    ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪರಿಂದ ಈ ಬಾರಿಯ ದಸರಾ ಉದ್ಘಾಟನೆ ಮಾಡಿಸುತ್ತಿದ್ದು, ಅಂದು ಸಂಜೆ 7.30ಕ್ಕೆ ಅರಮನೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಿಸಲಾಗುತ್ತದೆ. ಅಕ್ಟೋಬರ್ 8ರಂದು 2.15ರಿಂದ 2.58ರ ಮಕರ ಲಗ್ನದಲ್ಲಿ ನಂದಿ ಪೂಜೆ ಮಾಡಲಾಗುತ್ತದೆ. ಅದೇ ದಿನ ಸಂಜೆ 4.31ರಿಂದ 4.57ರವರೆಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ.

    ಪ್ರತಿ ವರ್ಷ ಮಾಡುವಂತಹ ವ್ಯವಸ್ಥೆಯಲ್ಲೇ ಈ ಬಾರಿಯ ಉತ್ಸವ ಇರಬಾರದು. ವಿಭಿನ್ನವಾದ ಕಾರ್ಯಕ್ರಮಗಳನ್ನು ಅಳವಡಿಸಬೇಕು, ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿಗಳು, ಪಾಲಿಕೆಯವರಿಗೆ ಸೂಚಿಸಲಾಗಿದೆ. ಶಾಸಕರು ಒಟ್ಟಾಗಿ ನಾಡಹಬ್ಬಕ್ಕೆ ಯಾವುದೇ ತೊಂದರೆ ಆಗದಂತೆ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುವ ದಸರಾ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪ್ರಮುಖವಾದ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

  • ಸಚಿವರ ಆಗಮನಕ್ಕೆ ಮುನ್ನವೇ ಗಜ ಪಯಣಕ್ಕೆ ಪುಷ್ಪಾರ್ಚನೆ

    ಸಚಿವರ ಆಗಮನಕ್ಕೆ ಮುನ್ನವೇ ಗಜ ಪಯಣಕ್ಕೆ ಪುಷ್ಪಾರ್ಚನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ಗಜಪಯಣಕ್ಕೆ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಅನೆಗಳಿಗೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗಿದೆ.

    ಇಂದು ಈ ಗಜ ಪಡೆಯ ಸ್ವಾಗತಕ್ಕೆ ಡೊಳ್ಳು, ಕಂಸಾಳೆ ವಿವಿಧ ಜನಪದ ಕಲಾ ತಂಡಗಳ ಮೆರುಗು ತುಂಬಿದವು. ಇದರ ಜೊತೆಗೆ ಕಲಶ ಹೊತ್ತು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ ಮತ್ತು ಈಶ್ವರ ಆನೆಗಳು ಮೈಸೂರಿಗೆ ಪ್ರಯಣ ಮಾಡಿದವು.

    ಮೊದಲ ತಂಡವಾಗಿ ಐದು ಅನೆಗಳು ಮೈಸೂರಿಗೆ ಪ್ರಯಾಣ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಕೂಡ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬರಬೇಕಾದ ನೂತನ ಸಚಿವರಾದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಬರುವುದನ್ನು ಒಂದು ನಿಮಿಷವೂ ಕಾಯದೇ ಪುಷ್ಪಾರ್ಚನೆ ಮಾಡಿದ ಶಾಸಕ ಎಸ್.ಎ ರಾಮದಾಸ್, ಯಾರನ್ನು ಕಾಯುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳಿಗೆ ಹೇಳಿ ಪುಷ್ಪಾರ್ಚನೆ ಮಾಡಿದರು.

    ಎಲ್ಲ ಕಾರ್ಯಕ್ರಮಗಳು ಮುಗಿದ ಮೇಲೆ ತಡವಾಗಿ ಬಂದ ಸಚಿವಾರದ ಆರ್. ಅಶೋಕ್ ಮತ್ತು ವಿ. ಸೋಮಣ್ಣ ಅವರು ಮತ್ತೊಮ್ಮೆ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

    ಸಾಂಪ್ರದಾಯಿಕವಾಗಿ ಪ್ರತಿ ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿ, ಗಜಪಯಣಕ್ಕೆ ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ದಸರಾ ಗಜಪಯಣಕ್ಕೆ ಚಾಲನೆ ನೀಡುವ ವಿಚಾರಕ್ಕೆ ಗೊಂದಲ ಶುರುವಾಗಿತ್ತು. ಯಾಕೆಂದರೆ ಪ್ರತಿ ಬಾರಿ ದಸರಾ ಗಜಪಯಣಕ್ಕೆ ಉಸ್ತವಾರಿ ಸಚಿವರು ಚಾಲನೆ ನೀಡುತ್ತಿದ್ದರು. ಆದರೆ ಈ ಬಾರಿ ಜಿಲ್ಲೆಯಿಂದ ಯಾವ ನಾಯಕರು ಸಚಿವರಾಗಿಲ್ಲ. ಅಲ್ಲದೆ ಸ್ಥಳೀಯ ಶಾಸಕರ ಬಳಿ ಚಾಲನೆ ಕೊಡಿಸೋಣ ಎಂದರೆ ಶಾಸಕರು ಕೂಡ ಅನರ್ಹರಾಗಿದ್ದಾರೆ. ಹೀಗಾಗಿ ಗಜಪಯಣಕ್ಕೆ ಚಾಲನೆ ನೀಡುವವರು ಯಾರು ಎಂಬ ಗೊಂದಲ ಎದುರಾಗಿತ್ತು. ಆದರೆ ಶಾಸಕ ರಾಮದಾಸ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

  • ದಸರಾ ಮರೆತ್ರಾ ಜನಪ್ರತಿನಿಧಿಗಳು?

    ದಸರಾ ಮರೆತ್ರಾ ಜನಪ್ರತಿನಿಧಿಗಳು?

    ಮೈಸೂರು: ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾವನ್ನೇ ಸರ್ಕಾರ ಮರೆತು ಬಿಟ್ಟಿದೆ. ಮುಂದಿನ ತಿಂಗಳು ಕೊನೆಯ ವಾರ ದಸರಾ ಆರಂಭವಾಗಲಿದೆ. ಆದರೆ ಇವರೆಗೂ ಮೈಸೂರು ದಸರಾ ಉನ್ನತ ಮಟ್ಟದ ಸಭೆ ನಡೆಸದೆ ನಿರ್ಲಕ್ಷ್ಯ ತೋರಲಾಗಿದೆ.

    ಪ್ರತಿ ವರ್ಷ ಮೇ ಅಥವಾ ಜೂನ್ ತಿಂಗಳಲ್ಲಿ ದಸರಾ ಉನ್ನತ ಮಟ್ಟದ ಸಮಿತಿಯ ಸಭೆ ನಡೆಯುತ್ತದೆ. ಹೈಪವರ್ ಕಮಿಟಿ ಮೀಟಿಂಗ್‍ನಲ್ಲಿ ದಸರಾ ಅಂದಾಜು ವೆಚ್ಚ, ಅನುದಾನದ ಕುರಿತ ನಿರ್ಣಯ ಹಾಗೂ ದಸರಾ ಉದ್ಘಾಟಕರ ಹೆಸರನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ. ಆದರೆ ಈ ವರ್ಷ ಜುಲೈ ಮುಗಿದು ಆಗಸ್ಟ್ ಬಂದರೂ ಹೈಪವರ್ ಕಮಿಟಿ ಮೀಟಿಂಗ್ ನಡೆದಿಲ್ಲ.

    ಹೈಪವರ್ ಕಮಿಟಿಗೆ ರಾಜ್ಯದ ಮುಖ್ಯಮಂತ್ರಿಗಳೇ ಅಧ್ಯಕ್ಷರು. ಮೈಸೂರು ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಹಲವರು ಸದಸ್ಯರಿರುತ್ತಾರೆ. ಈ ಬಾರಿ ದಸರಾ ಅವಧಿಗಿಂತ ಮುಂಚೆಯೇ ಬಂದಿದೆ. ಸೆಪ್ಟೆಂಬರ್ 29ರಂದು ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್ 8ಕ್ಕೆ ಜಂಬೂಸವಾರಿ ಮೆರವಣಿಗೆ ನಡೆಯಲಿದೆ.

    ದಸರಾ ಆಚರಣೆಗೆ ಕೇವಲ 59ದಿನ ಬಾಕಿ ಇದೆ. ಆದರೆ ಮುಂಜಾಗ್ರತಾವಾಗಿ ಆಗಬೇಕಿದ್ದ ಯಾವ ಕೆಲಸವೂ ಆಗಿಲ್ಲ. ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಆದರೂ ಹೈಪವರ್ ಕಮಿಟಿ ಮೀಟಿಂಗ್ ಅನ್ನು ಬೇಗ ನಡೆಸುತ್ತಾರಾ ಕಾದು ನೋಡಬೇಕಿದೆ.

  • ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ- ಇದು ದಸರಾ ಕ್ಯಾಪ್ಟನ್ ಅರ್ಜುನನ ಸ್ಥಿತಿ

    ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ- ಇದು ದಸರಾ ಕ್ಯಾಪ್ಟನ್ ಅರ್ಜುನನ ಸ್ಥಿತಿ

    ಮೈಸೂರು: ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ. ಇದು ಮೈಸೂರಿನ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನನ ಸ್ಥಿತಿ. ದಸರೆಯಲ್ಲಿ ಬೆಣ್ಣೆ, ಕಾಳುಗಳ ಮೃಷ್ಠಾನ್ನಾ ಭೋಜನ ಅರ್ಜುನನಿಗೆ ಸಿಗುತ್ತೆ. ಆದರೆ ವಾಪಾಸ್ ಸ್ವಸ್ಥಾನಕ್ಕೆ ಮರಳಿದಾಗ ಮೇವು, ನೀರಿಲ್ಲದೆ ಆನೆ ದಿನದೂಡ ಬೇಕಾದ ಸ್ಥಿತಿ ಇದೆ.

    ದಸರಾದಲ್ಲಿ ಚಿನ್ನದ ಅಂಬಾರಿ ಹೊರಲು ಅರ್ಜುನ ಬೇಕು. ಪುಂಡಾನೆಗಳ ಉಪಟಳ ನಿಯಂತ್ರಿಸಲು ಅರ್ಜುನ ಬೇಕು. ಹುಲಿ, ಚಿರತೆ ಹಿಡಿಯಲು ಅರ್ಜುನ ಬೇಕು. ಆದರೆ ಇಂತಹ ಅರ್ಜುನನ ಯೋಗಕ್ಷೇಮ ಮಾತ್ರ ಯಾರಿಗೂ ಬೇಡವಾಗಿದೆ. ಮೇವಿಗಾಗಿ ನೀರಿಗಾಗಿ ಗಜಪಡೆಯ ನಾಯಕ ಅರ್ಜುನ ಕಾಡಿನಲ್ಲಿ ಕಿ.ಮೀ ಗಟ್ಟಲೇ ಸುತ್ತಾಟ ನಡೆಸಬೇಕಾಗಿದೆ. ಈ ವೇಳೆ ಕಾಡಾನೆಗಳ ದಾಳಿಗೆ ಅರ್ಜುನ ಒಳಗಾಗಿದ್ದಾನೆ.

    ಅಲ್ಲದೆ ಎರಡ್ಮೂರು ಬಾರಿ ಆಹಾರ ಅರಸಿ ಕಾಡಿನೊಳಗೆ ಹೋಗಿ ಅಲ್ಲಿ ತಪ್ಪಿಸಿಕೊಂಡಿದ್ದಾನೆ. ಮೈಸೂರಿನ ಹುಣಸೂರಿನ ನಾಗರಹೊಳೆಯ ಬಳ್ಳೆ ಅರಣ್ಯದಲ್ಲಿ ಇರುವ ಅರ್ಜುನನ್ನು ಕೇಳುವವರೆ ಇಲ್ಲ. ನಾಗರಹೊಳೆಯಲ್ಲಿ ಮೇಲ್ಛಾವಣಿ ಇಲ್ಲದ ಶೆಡ್ ನಲ್ಲಿ ಅರ್ಜುನ ಇರಬೇಕು. ಅರ್ಜುನನ ಮಾವುತ ವಿನಿಗು ಮನೆ ಇಲ್ಲ. ಆತ ಗುಡಿಸಲಲ್ಲೆ ಇದ್ದಾನೆ.

    ಸರ್ಕಾರದಿಂದ ದಸರಾ ಆನೆಗಳಿಗಾಗಿ ವಿಶೇಷ ಪ್ಯಾಕೇಜ್ ಇದೆ. ಆದರೆ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ನಿಗೂಢ. ಟೆಂಡರ್ ಮೂಲಕ ವರ್ಷಕ್ಕೊಮ್ಮೆ ಆನೆಗಳ ಆಹಾರ ನೀರಿನ ವ್ಯವಸ್ಥೆಗೆ ಬೆಲ್ಲ, ಭತ್ತ, ಒಣಹುಲ್ಲು, ತೆಂಗಿನಕಾಯಿ, ಅಕ್ಕಿ, ಉಪ್ಪು ನೀಡಿಕೆಗಾಗಿ ಹಣ ಬಿಡುಗಡೆ ಮಾಡಲಾಗ್ತಿದೆ. ಆದರೆ ಕ್ಯಾಂಪ್‍ನಲ್ಲಿರುವ ಆನೆಗಳಿಗೆ ಈ ಆಹಾರ ಪದಾರ್ಥ ತಲುಪುತ್ತಿಲ್ಲ.