Tag: ದಸರಾ

  • ಇಂದಿನಿಂದ ಮೈಸೂರು ದಸರಾ ವೈಭವ – ಎಸ್.ಎಲ್ ಬೈರಪ್ಪರಿಂದ ಉತ್ಸವಕ್ಕೆ ಚಾಲನೆ

    ಇಂದಿನಿಂದ ಮೈಸೂರು ದಸರಾ ವೈಭವ – ಎಸ್.ಎಲ್ ಬೈರಪ್ಪರಿಂದ ಉತ್ಸವಕ್ಕೆ ಚಾಲನೆ

    ಮೈಸೂರು: ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಪಾರಂರಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ಇದಕ್ಕೆ ಕಾರಣ ಇಂದಿನಿಂದ ಆರಂಭವಾಗುವ ದಸರಾ ಮಹೋತ್ಸವ.

    ವಿಶ್ವವನ್ನೇ ತನ್ನತ್ತ ಸೆಳೆದುಕೊಂಡು ತನ್ನ ವೈವಿಧ್ಯಮಯವಾದ ಆಚರಣೆಗಳನ್ನು ಜಗತ್ತಿಗೆ ತೋರ್ಪಡಿಸುವ ಆಚರಣೆ ಅಂದರೆ ಅದೇ ಮೈಸೂರು ದಸರಾ ಮಹೋತ್ಸವ. ಇಂದಿನಿಂದ ಮೈಸೂರಿನಲ್ಲಿ ದಸರಾ ಮೆರಗು ತುಂಬಲಿದೆ. ಈ ಮೆರಗಿಗೆ ಸಾಹಿತಿ ಎಸ್.ಎಲ್.ಭೈರಪ್ಪ ಅವರು ಇಂದು ಬೆಳಗ್ಗೆ 9.39ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ನಾಡ ಅದಿ ದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಂಪುಟದ ಸಚಿವರುಗಳು, ಸಂಸದರು, ಶಾಸಕರು ಸೇರಿಂದತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.

    ಅರಮನೆಯಲ್ಲಿ ರಾಜಪರಂಪರೆಯ ನವರಾತ್ರಿ ಉತ್ಸವಕ್ಕೂ ಇವತ್ತು ಚಾಲನೆ ಸಿಗಲಿದೆ. ಬೆಳಗ್ಗೆ 5:10 ರಿಂದ 5:30ರ ನಡುವೆ ರತ್ನಖಚಿತ ಆಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 8:05 ರಿಂದ 8:55ರ ನಡುವೆ ಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 9:30ಕ್ಕೆ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದ್ದು, ಬೆಳಗ್ಗೆ 9:50 ರಿಂದ 10:35 ಕಳಸ ಪೂಜೆ ನೆರವೆರಿಸಲಾಗುತ್ತದೆ. ನಂತರ ಸಿಂಹಾಸನರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ನಡೆಯಲಿದೆ. ಬಳಿಕ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ತರಲಾಗುವುದು. ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

    ಇಂದಿನಿಂದ 10 ದಿನಗಳ ಕಾಲ ಮೈಸೂರು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿರುತ್ತದೆ. ಅರಮನೆ ಸೇರಿದಂತೆ ಐತಿಹಾಸಿಕ ಕಟ್ಟಡಗಳು, ಸರ್ಕಾರಿ ಕಟ್ಟಡಗಳು ಹಾಗೂ ಮೈಸೂರಿನ ಬಹುಪಾಲು ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುತ್ತವೆ. ಜೊತೆಗೆ ಕುಸ್ತಿ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಾಹಸ ಕ್ರೀಡೆಗಳು, ಚಲನಚಿತ್ರೋತ್ಸವ, ವಸ್ತು ಪ್ರದರ್ಶನ, ಪುಸ್ತಕ ಮೇಳ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದಸರಾಗೆ ಮತ್ತಷ್ಟು ರಂಗು ತುಂಬಲಿವೆ.

  • ದಸರಾ ಉದ್ಘಾಟನೆಗೆ ಇಲ್ಲ ಸಾರಾ – ಮೂರು ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಜಿಟಿಡಿ

    ದಸರಾ ಉದ್ಘಾಟನೆಗೆ ಇಲ್ಲ ಸಾರಾ – ಮೂರು ಕಾರ್ಯಕ್ರಮಗಳ ಉದ್ಘಾಟನೆಯಲ್ಲಿ ಜಿಟಿಡಿ

    ಮೈಸೂರು: ದಸರಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಹಾಗೂ ಶಾಸಕ ಸಾ.ರಾ ಮಹೇಶ್ ಅವರನ್ನು ಮೈಸೂರು ಜಿಲ್ಲಾಡಳಿತ ಅಕ್ಷರಶಃ ಮರೆತೇ ಬಿಟ್ಟಿದೆ.

    10 ದಿನಗಳ ದಸರಾದ ನಾನಾ ಕಾರ್ಯಕ್ರಮದಲ್ಲಿ ಸಾ.ರಾ ಮಹೇಶ್‍ಗೆ ಒಂದೇ ಒಂದು ಕಾರ್ಯಕ್ರಮದ ಉದ್ಘಾಟನೆಗೂ ಅವಕಾಶ ಇಲ್ಲ. ಆದರೆ ಜೆಡಿಎಸ್‍ನ ಮತ್ತೊಬ್ಬ ಮಾಜಿ ಸಚಿವ ಜಿ.ಟಿ.ದೇವೇಗೌಡರಿಗೆ ಮೂರು ಕಾರ್ಯಕ್ರಮಗಳ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಣತಿಯಂತೆ ಜಿಲ್ಲಾಡಳಿತ ಈ ಕಾರ್ಯಕ್ರಮ ಪಟ್ಟಿ ಸಿದ್ಧ ಮಾಡಿದೆ. ದಸರಾ ಕಾರ್ಯಕ್ರಮದಲ್ಲಿ ಜಿಟಿಡಿಗೆ ಆದ್ಯತೆ ಸಿಕ್ಕಿದ್ದು ಸಾ.ರಾ.ಮಹೇಶ್ ಅವರನ್ನು ಸ್ಪಷ್ಟವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಉಸ್ತುವಾರಿ ಸಚಿವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಈ ಹಿಂದೆ ಹೇಳಿದ್ದರು.

    ಈ ಹೇಳಿಕೆಗೆ ಪೂರಕವಾಗಿ ಸಾ.ರಾ ಮಹೇಶ್‍ರನ್ನು ಉಸ್ತುವಾರಿ ಸಚಿವ ವಿ.ಸೋಮಣ್ಣ ದೂರ ಇಟ್ಟಿದ್ದಾರೆ. ಆದರೆ ಜಿ.ಟಿ.ದೇವೇಗೌಡರ ದಸರಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

  • ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ದಸರಾ ಸ್ಪೆಷಲ್ – ಬೆಂಗಳೂರಲ್ಲಿ ಬೊಂಬೆಗಳ ದರ್ಬಾರ್

    ಬೆಂಗಳೂರು: ನಾಡಹಬ್ಬ ದಸರಾಕ್ಕೆ ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ದಸರಾ ಅಂದರೆ ಮೊದಲು ನೆನಪಾಗೋದು ಜಂಬು ಸವಾರಿ ಹಾಗೂ ಗೊಂಬೆಗಳು. ನವರಾತ್ರಿಯ ಪೂರ್ವ ತಯಾರಿಯಾಗಿ ಅಂದ-ಚೆಂದದ ಗೊಂಬೆಗಳು ಬೆಂಗಳೂರಿಗೆ ಲಗ್ಗೆಯಿಟ್ಟಿದ್ದು, ಎಲ್ಲರನ್ನು ಕೈ ಬೀಸಿ ಕರೆಯುತ್ತಿವೆ.

    ನಗರದ ಮಲ್ಲೇಶ್ವರಂ, ಗಾಂಧಿ ಬಜಾರ್, ಚಿಕ್ಕಪೇಟೆ, ಕೆ.ಆರ್ ಮಾರುಕಟ್ಟೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಎಲ್ಲೆಡೆ ದಸರಾ ಗೊಂಬೆಗಳು ಮಾರಾಟವಾಗುತ್ತಿವೆ. ಇಲ್ಲಿ ಸರಿಸುಮಾರು 500 ವರ್ಷಗಳಿಂದ ಮೈಸೂರು ಸೇರಿದಂತೆ ಹಲವೆಡೆಯಿಂದ ಬಂದಿರೋ ಬೊಂಬೆ ಕೂಡಿಸುವ ಪದ್ಧತಿಯಿದೆ. ಇಲ್ಲಿ ಕಟ್ಟಿಗೆಯಲ್ಲಿ ಕಟ್ಟಿದ ಮೈಸೂರು ಅರಮನೆ, ಅದರ ಮುಂದೆ ಜಂಬೂ ಸವಾರಿ ಮತ್ತು ರಾಜದರ್ಬಾರ್ ಗೊಂಬೆಗಳು ಮನಸೂರೆಗೊಳಿಸುತ್ತಿವೆ.

    ಜೊತೆಗೆ ತಲೆಯಾಡಿಸುವ ನರ್ತಕಿ, ಗಣೇಶ, ಸಂಗೀತಗಾರರು, ಮಕ್ಕಳ ಆಟಿಕೆಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಈ ಬಾರಿಯ ವಿಶೇಷವೆಂದರೆ ದಶವತಾರ ಗೊಂಬೆಗಳು. ಈ ಮುದ್ದು ಮುದ್ದಾದ ಗೊಂಬೆಗಳಿಗೆ ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ಒಂದೊಂದು ಗೊಂಬೆಗಳು ಒಂದೊಂದು ಕಥೆ ಹೇಳುತ್ತಿದ್ದು, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿವೆ. 50 ರೂಪಾಯಿಂದ ಹಿಡಿದು 5 ಸಾವಿರ ರೂ. ಮೌಲ್ಯದ ಗೊಂಬೆಗಳೂ ಸಿಗುತ್ತಿವೆ.

  • ಚಾಮುಂಡೇಶ್ವರಿಗೆ ಮೈಸೂರು ಜಿಲ್ಲಾಡಳಿತದಿಂದಲೇ ಸೀರೆ – ಸೋಮಣ್ಣರಿಂದ ಮಹತ್ವದ ನಿರ್ಧಾರ

    ಚಾಮುಂಡೇಶ್ವರಿಗೆ ಮೈಸೂರು ಜಿಲ್ಲಾಡಳಿತದಿಂದಲೇ ಸೀರೆ – ಸೋಮಣ್ಣರಿಂದ ಮಹತ್ವದ ನಿರ್ಧಾರ

    ಮೈಸೂರು: ದಸರಾದ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಅಂಬಾರಿ ಒಳಗೆ ಕೂರಿಸುವ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಸೀರೆ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣರಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

    ಇನ್ಮುಂದೆ ಪ್ರತಿ ದಸರಾದಲ್ಲೂ ಉತ್ಸವ ಮೂರ್ತಿಗೆ ಮೈಸೂರು ಜಿಲ್ಲಾಡಳಿತದಿಂದಲೇ ಮೈಸೂರು ಸಿಲ್ಕ್ ಸೀರೆಯನ್ನೇ ಉಡಿಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಸೀರೆ ಉಡಿಸುವ ಬಗ್ಗೆಯ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.

    ಈ ಹಿಂದೆ ಸೀರೆ ಉಡಿಸುವ ವಿಚಾರಕ್ಕೆ ಜಟಾಪಟಿಯಾಗುತಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಟಾಪಟಿ ಉಂಟಾಗಿ ಅವತ್ತು ಮೈಸೂರು ಮೇಯರ್ ಆಗಿದ್ದ ಎಂ.ಜೆ ರವಿಕುಮಾರ್ ಹಾಗೂ ಸಿದ್ದರಾಮಯ್ಯ ಮನೆಯವರ ನಡುವೆ ಜಟಾಪಟಿ ಉಂಟಾಗಿತ್ತು.

    ಚಾಮುಂಡೇಶ್ವರಿ ವಿಗ್ರಹಕ್ಕೆ ಸೀರೆ ಉಡಿಸಲು ಪೈಪೋಟಿ ಉಂಟಾಗಿ ಕೊನೆಗೆ ವಿಗ್ರಹಕ್ಕೆ ಎರಡು ಸೀರೆಗಳನ್ನು ಉಡಿಸಲಾಗಿತ್ತು. ಇದೀಗ ಇವೆಲ್ಲಕ್ಕೂ ಬ್ರೇಕ್ ಹಾಕಿರುವ ಸಚಿವ ವಿ.ಸೋಮಣ್ಣ, ಈ ಬಗ್ಗೆ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್‍ಗೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಪರಂಪರೆ ಮುಂದುವರಿಸಲು ನಿರ್ಧಾರ ಮಾಡಲಾಗಿದೆ.

  • ಕಾಶ್ಮೀರದಲ್ಲಿ ರಾಜ್ಯದ ಸಾಂಸ್ಕೃತಿಕ ಕೇಂದ್ರ, ಹೋಟೆಲ್ ತೆರೆಯಲು ಚಿಂತನೆ- ಸಿ.ಟಿ.ರವಿ

    ಕಾಶ್ಮೀರದಲ್ಲಿ ರಾಜ್ಯದ ಸಾಂಸ್ಕೃತಿಕ ಕೇಂದ್ರ, ಹೋಟೆಲ್ ತೆರೆಯಲು ಚಿಂತನೆ- ಸಿ.ಟಿ.ರವಿ

    ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಕಾಶ್ಮೀರದಲ್ಲಿ ಸಾಂಸ್ಕೃತಿಕ ಕೇಂದ್ರ ಹಾಗೂ ಹೋಟೆಲ್ ತೆರೆಯುವ ಯೋಚನೆ ಇದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

    ನಗರದ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಂಸ್ಕೃತಿಕ ಕೇಂದ್ರ ಹಾಗೂ ಹೋಟೆಲ್ ತೆರೆಯಲು ಈಗಾಗಲೇ ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಈ ವರೆಗೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಮ್ಮು ಕಾಶ್ಮೀರದ ರಾಜ್ಯಪಾಲು ಒಪ್ಪಿಗೆ ಸೂಚಿಸಿದ ಬಳಿಕ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

    ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಹಾಗೂ ಉದ್ಯೋಗ ಎಂಬ ಘೋಷ ವಾಕ್ಯದೊಂದಿದೆ ಈ ಬಾರಿ ಪ್ರವಾಸೋದ್ಯಮ ಆಚರಿಸಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ತಲಾ 30 ಸಾವಿರ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ರಾಮನಗರದಲ್ಲಿ ಸ್ಥಳೀಯ ಆಹಾರವನ್ನು ದಸರೆಯ ಪ್ರವಾಸಿಗರಿಗೆ ಪರಿಚಯಿಸಲು, ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಹೆದ್ದಾರಿ ಪಕ್ಕದಲ್ಲಿ ತಟ್ಟೆ ಇಡ್ಲಿಯಿಂದ ಹಿಡಿದು ನಾನ್ ವೆಜ್ ಆಹಾರದ ಪರಿಚಯ ಮಾಡಿಸುತ್ತೇವೆ ಎಂದು ತಿಳಿಸಿದರು.

    ಮಂಡ್ಯದಲ್ಲಿ ಕೃಷಿ ಸಂಸ್ಕೃತಿಯನ್ನು ಪರಿಚಯಿಸಲು ಹಲವು ವ್ಯವಸ್ಥೆ ಮಾಡಲಾಗಿದೆ. ಕಬ್ಬು ಜಗಿದು ತಿನ್ನುವ, ಬೇಸಾಯದ ಅನುಭವ ಮಾಡಿಸುವುದು, ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟದಂತಹ ವಿನೂತನ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಇದಕ್ಕಾಗಿ ಮಂಡ್ಯ, ರಾಮನಗರ ಜಿಲ್ಲೆಗಳಿಗೆ ತಲಾ 15 ಲಕ್ಷ ರೂ. ಬಿಡುಗಡೆ ಮಾಡಿದ್ದೇವೆ. ಮೈಸೂರಿನಲ್ಲಿ ತ್ರೀಡಿ ಮ್ಯಾಪಿಂಗ್ ಶೋ, ಹಸಿರು ಸಂತೆ, ಪಾರಂಪರಿಕ ಕ್ರೀಡೆಗಳು, ಮಕ್ಕಳ ಸಾಹಸ ಕೇಂದ್ರ, ಲೇಸರ್ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

    ಹೊರ ರಾಜ್ಯದ ವಾಹನಗಳಿಗೆ ಪ್ರವೇಶ ತೆರಿಗೆ ಇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ದಸರೆಗಾಗಿ ಮೈಸೂರು, ಮಂಡ್ಯಗಳಿಗೆ ಭೇಟಿ ನೀಡಲು ಪ್ರವಾಸಿ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಮುಂದೆ ಪ್ರವೇಶ ತೆರಿಗೆ ಕುರಿತು ಚರ್ಚಿಯಾಗಲಿ. ಒಂದು ದೇಶ, ಒಂದು ತೆರಿಗೆ ಪ್ರವಾಸಿ ವಾಹನಗಳ ಪ್ರವೇಶ ತೆರಿಗೆಗೂ ತರುವ ಬಗ್ಗೆ ಚರ್ಚೆ ಆಗಲಿ ಎಂದು ತಿಳಿಸಿದರು.

    ಅನರ್ಹರು ರಾಜೀನಾಮೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು. ಅವರಿಗೆ ನಾವು ಕೃತಜ್ಞರಾಗಿರುತ್ತೇವೆ, ಅವರನ್ನು ಮರೆಯುವ ಕೃತಜ್ಞರು ನಾವಲ್ಲ ಎಂದರು. ಅನರ್ಹ ಶಾಸಕರ ಕುಟುಂಬ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲ ಸಂದರ್ಭಗಳಲ್ಲಿ ಕೆಲ ವಿಚಾರಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ರಾಜಕಾರಣವನ್ನು ಹಂಗೆ ಮಾಡಬೇಕು. ವಾತಾವರಣಕ್ಕೆ ತಕ್ಕಂತೆ ನಮ್ಮ ಪಕ್ಷದ ನಿಲುವು ಬದಲಾಗುತ್ತೆ ಎಂದರು.

  • ದಸರಾಗೆ ನೀತಿ ಸಂಹಿತೆ ಅಡ್ಡಿ ಇಲ್ಲ- ಚುನಾವಣಾ ಆಯೋಗ

    ದಸರಾಗೆ ನೀತಿ ಸಂಹಿತೆ ಅಡ್ಡಿ ಇಲ್ಲ- ಚುನಾವಣಾ ಆಯೋಗ

    ಮೈಸೂರು: ವಿಶ್ವವಿಖ್ಯಾತ ದಸರಾಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ್ದು, ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

    ಈ ಕುರಿತು ಶನಿವಾರ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್.ಜಿ.ಶಂಕರ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆ ರಾಜ್ಯ ಚುನಾವಣಾ ಆಯೋಗ 2018ರ ಆದೇಶದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ನೀತಿ ಸಂಹಿತೆ ಜಾರಿ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಮೈಸೂರು ದಸರಾದ ಎಲ್ಲ ಕಾರ್ಯಕ್ರಮಗಳಿಗೆ ನೀತಿ ಸಂಹಿತೆಯಿಂದ ವಿನಾಯಿತಿ ದೊರೆತಿದೆ.

    ಇದರಿಂದ ಉಪಸಮಿತಿ ಸೇರಿದಂತೆ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಂತಾಗಿದೆ. ಆದೇಶದ ಬಗ್ಗೆ ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್.ಜಿ.ಶಂಕರ್ ಅಧಿಕೃತ ಮಾಹಿತಿ ನೀಡಿದ್ದಾರೆ.

  • ನಾನು ಯಾವ ಕಾರಣಕ್ಕೂ ದಸರಾದಲ್ಲಿ ಭಾಗವಹಿಸುವುದಿಲ್ಲ  _ ಶ್ರೀನಿವಾಸ್ ಪ್ರಸಾದ್

    ನಾನು ಯಾವ ಕಾರಣಕ್ಕೂ ದಸರಾದಲ್ಲಿ ಭಾಗವಹಿಸುವುದಿಲ್ಲ _ ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: ರಾಜ್ಯದಲ್ಲಿ ಪ್ರವಾಹ ಉಂಟಾಗಿದ್ದರೂ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವುದಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

    ಇಂದು ಕೊಳ್ಳೇಗಾಲದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾದ ಅವಶ್ಯಕತೆ ಇರಲಿಲ್ಲ. ಆಹಾರ ಮೇಳ ಮಾಡಿ ತಿಂದು ತೇಗುವುದು. ಯುವ ದಸರಾ ನಡೆಸಿ ಕುಣಿದು ಕುಪ್ಪಳಿಸುವುದು ಸಂಪ್ರದಾಯಿಕ ದಸರಾವಲ್ಲ. ಇವನ್ನೆಲ್ಲ ಬಿಡಬೇಕು ಎಂದು ಅಸಮಾಧಾನ ಹೊರ ಹಾಕಿದರು.

    ಸರಳವಾಗಿ ದಸರಾ ಆಚರಿಸುವಂತೆ ನಾನು ಹೇಳಿದ್ದೆ. ಆದರೆ ಉಸ್ತುವಾರಿ ಸಚಿವರು ಕೇಳಲಿಲ್ಲ. ದಸರಾ ಕಾರ್ಯಕ್ರಮಕ್ಕೆ ನನ್ನನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಾನು ಕೂಡ ಓರ್ವ ಜನಪ್ರತಿನಿಧಿ. ದಸರಾ ಕಾರ್ಯಕ್ರಮಗಳಿಗೆ ನಾನು ಯಾವ ಕಾರಣಕ್ಕೂ ಭಾಗವಹಿಸುವುದಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

  • KSRTCಯಿಂದ ದಸರಾಗೆ ವಿಶೇಷ ಟೂರ್ ಪ್ಯಾಕೇಜ್

    KSRTCಯಿಂದ ದಸರಾಗೆ ವಿಶೇಷ ಟೂರ್ ಪ್ಯಾಕೇಜ್

    ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ್ರಯಾಣಿಕರಿಗೆ ವಿಶೇಷ ಟೂರ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

    ಮೈಸೂರು ದಸರಾ ವೈಭವ ನೋಡಲು ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಮೈಸೂರಿನಿಂದ ಒಂದು ದಿನದ ಟೂರ್ ವ್ಯವಸ್ಥೆ ಮಾಡಲಾಗಿದೆ. ಈ ಪ್ಯಾಕೇಜ್ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13ರವರೆಗೆ ಇರಲಿದೆ. ಇದರಲ್ಲಿ ಗಿರಿ ದರ್ಶಿನಿ, ಜಲದರ್ಶಿನಿ ಹಾಗೂ ದೇವ ದರ್ಶಿನಿ ಎಂಬ ಮೂರು ರೀತಿಯ ವಿಶೇಷ ಪ್ಯಾಕೇಜ್‍ಗಳಿದ್ದು, ಎಲ್ಲಾ ದರಗಳು ಮೈಸೂರಿನಿಂದ ಅನ್ವಯವಾಗುತ್ತವೆ.

    ಗಿರಿ ದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ. ಈ ಒಂದು ದಿನದ ವಿಶೇಷ ಪ್ಯಾಕೇಜ್‍ಗಾಗಿ ವಯಸ್ಕರಿಗೆ 350 ರೂ. ಹಾಗೂ ಮಕ್ಕಳಿಗೆ 175 ರೂ. ಪಡೆಯಲಾಗುತ್ತದೆ.

    ಜಲ ದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ, ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್‍ಎಸ್. ಈ ಪ್ಯಾಕೇಜ್ ಅನ್ವಯ ವಯಸ್ಕರಿಗೆ 375 ರೂ. ಹಾಗೂ ಮಕ್ಕಳಿಗೆ 190 ರೂ. ನಿಗದಿಯಾಗಿದೆ.

    ದೇವ ದರ್ಶಿನಿ: ನಂಜನಗೂಡು, ಬ್ಲಫ್, ಮುಡುಕು ತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗ ಪಟ್ಟಣ. ಈ ಪ್ಯಾಕೇಜ್‍ನ ದರವು ವಯಸ್ಕರಿಗೆ 275 ರೂ. ಹಾಗೂ ಮಕ್ಕಳಿಗೆ 140 ರೂ. ಆಗಿದೆ.

    ಇವುಗಳ ಜೊತೆಗೆ ಐರಾವತ ಕ್ಲಬ್ ಕ್ಲಾಸ್ ಬಸ್ ಪ್ಯಾಕೇಜ್ ಸಹ ನೀಡಲಾಗಿದೆ. ಇದರಲ್ಲಿ ಮಡಿಕೇರಿ, ಬಂಡೀಪುರ, ಶಿಂಷಾ, ಊಟಿ ಎಂಬ 4 ರೀತಿಯ ವಿಶೇಷ ಪ್ಯಾಕೇಜ್ ಇರಲಿದೆ.

    ಮಡಿಕೇರಿ ಪ್ಯಾಕೇಜ್: ನಿಸರ್ಗಧಾಮ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ರಾಜಾಸೀಟ್, ಅಬ್ಬಿ ಫಾಲ್ಸ್. ಈ ಪ್ಯಾಕೇಜ್‍ಗಾಗಿ ವಯಸ್ಕರಿಗೆ 1,200 ರೂ. ಹಾಗೂ ಮಕ್ಕಳಿಗೆ 900 ರೂ. ಪಡೆಯಲಾಗುತ್ತದೆ

    ಬಂಡೀಪುರ ಪ್ಯಾಕೇಜ್: ಸೋಮನಾಥಪುರ, ತಲಕಾಡು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ನಂಜನಗೂಡು. ಈ ವಿಶೇಷ ಪ್ಯಾಕೇಜ್‍ನ ದರವು ವಯಸ್ಕರಿಗೆ 1,000 ರೂ. ಹಾಗೂ ಮಕ್ಕಳಿಗೆ 750 ರೂ. ನಿಗದಿಯಾಗಿದೆ.

    ಶಿಂಷಾ ಪ್ಯಾಕೇಜ್: ಶಿವನ ಸಮುದ್ರ, ಶ್ರೀರಂಗ ಪಟ್ಟಣ, ರಂಗನತಿಟ್ಟು, ಬಲಮುರಿ ಫಾಲ್ಸ್, ಕೆಆರ್‍ಎಸ್. ಈ ಪ್ಯಾಕೇಜ್‍ಗಾಗಿ ವಯಸ್ಕರಿಗೆ 800 ರೂ. ಹಾಗೂ ಮಕ್ಕಳಿಗೆ 600 ರೂ. ಪಡೆಯಲಾಗುತ್ತದೆ.

    ಊಟಿ ಪ್ಯಾಕೇಜ್: ಊಟಿ, ಬಟಾನಿಕಲ್ ಗಾರ್ಡನ್, ಇಟಾಲಿಯನ್ ಮತ್ತು ರೋಸ್ ಗಾರ್ಡನ್, ಬೋಟ್ ಹೌಸ್. ಈ ಪ್ಯಾಕೇಜ್‍ನ ದರವು ವಯಸ್ಕರಿಗೆ 1,600 ಹಾಗೂ ಮಕ್ಕಳಿಗೆ 1,200 ಆಗಿದೆ.

    ಈ ವಿಶೇಷ ಸಾರಿಗೆಗಳು ಬೆಳಗ್ಗೆ ಮೈಸೂರಿನಿಂದ ಹೊರಟು, ವಿವಿಧ ಸ್ಥಳಗಳಿಗೆ ಸಂದರ್ಶಿಸಿ, ಸಂಜೆ ವೇಳೆಗೆ ಮೈಸೂರಿಗೆ ಮರಳುತ್ತವೆ. ಈ ವಿಶೇಷ ಪ್ಯಾಕೇಜ್ ಟೂರ್ ಟಿಕೆಟ್‍ಗಳನ್ನು Ksrtc.in ನಲ್ಲಿ ಕಾಯ್ದಿರಸಬಹುದಾಗಿದೆ.

  • ದಸರಾದ ಮೊದಲ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ

    ದಸರಾದ ಮೊದಲ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಚಾಲನೆ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಮೊದಲ ಕಾರ್ಯಕ್ರಮ ಯುವ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ.

    ಯುವ ಸಂಭ್ರಮದ ಕಾರ್ಯಕ್ರಮದ ಮೂಲಕ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಶುರುವಾಗುತ್ತದೆ. ಈ ಮೊದಲ ಕಾರ್ಯಕ್ರಮಕ್ಕೆ ನಟ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದಾರೆ.

    ನಟ ಗಣೇಶ್ ಅವರಿಗೆ ಸಚಿವ ವಿ.ಸೋಮಣ್ಣ, ಶಾಸಕ ನಾಗೇಂದ್ರ, ಸಂದೇಶ್ ನಾಗರಾಜ್ ಸೇರಿ ಹಲವು ಅಧಿಕಾರಿ ವರ್ಗ ಸಾಥ್ ನೀಡಿತು. ಇದಾದ ಬಳಿಕ ನಟ ಗಣೇಶ್ ಯುವ ಮನಸ್ಸುಗಳಿಗೆ ತಮ್ಮ ಚಿತ್ರದ ಡೈಲಾಗ್ ಹಾಗೂ ಹಾಡುಗಳನ್ನು ಹಾಡಿ ರಂಜಿಸಿದರು.

    ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಯುವ ಸಂಭ್ರಮದ ದರ್ಬಾರ್ ಶುರುವಾಗಿದೆ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡುವ ನೃತ್ಯ ರೂಪಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತ್ತು. ವಿಶೇಷ ಮಕ್ಕಳ ಪ್ರವಾಹದ ಥೀಮ್ ಹಾಗೂ ಜಾನಪದ ಸಾಹಿತ್ಯದ ಮಹದೇಶ್ವರ ಸ್ವಾಮಿಯ ಗೀತೆಯೊಂದಿಗಿನ ಕಂಸಾಳೆ ನೃತ್ಯ ಯುವಕ ಯುವತಿಯರು ಭಕ್ತಿಭಾವದಲ್ಲಿ ತೇಲುವಂತೆ ಮಾಡಿತು.

    ಮೊದಲ ದಿನದ ದಸರಾ ಯುವ ಸಂಭ್ರಮಕ್ಕೆ ಗೋಲ್ಡನ್ ಟಚ್ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಇಂದು ದಸರಾ ಯುವ ಸಂಭ್ರಮದ ವಿಶೇಷ ವಿಭಿನ್ನ ಕಾರ್ಯಕ್ರಮಗಳು ನಡೆಯಲಿದ್ದು, ಯುವಮನಸ್ಸುಗಳನ್ನ ಮತ್ತಷ್ಟು ರಂಜಿಸಲಿದೆ.

  • ಪಿ.ವಿ.ಸಿಂಧುರಿಂದ ಯುವ ದಸರಾ ಉದ್ಘಾಟನೆ- ಸಿಎಂ ಆಹ್ವಾನ

    ಪಿ.ವಿ.ಸಿಂಧುರಿಂದ ಯುವ ದಸರಾ ಉದ್ಘಾಟನೆ- ಸಿಎಂ ಆಹ್ವಾನ

    ಬೆಂಗಳೂರು: ಯುವ ದಸರಾ ಉದ್ಘಾಟನೆ ಮಾಡುವಂತೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದ ಪಿ.ವಿ.ಸಿಂಧು ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.

    ಈ ಕುರಿತು ಪತ್ರ ಬರೆದಿರುವ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಸರ್ಕಾರವು ವಿಶ್ವವಿಖ್ಯಾತ ದಸರಾ ಹಬ್ಬವನ್ನು ನಡೆಸುತ್ತಿದೆ. ಒಂಬತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ದೇಶ-ವಿದೇಶದಿಂದ ಲಕ್ಷಂತಾರ ಜನರು ಮೈಸೂರಿಗೆ ಭೇಟಿ ನೀಡುತ್ತಾರೆ. 410ನೇ ದಸರಾ ಸಂಭ್ರಮಕ್ಕೆ ವಿವಿಧ ಕ್ಷೇತ್ರದ ಸಾಧಕರು, ಶ್ರೇಷ್ಠ ವ್ಯಕ್ತಿಗಳು ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದೀರಿ. ಲಕ್ಷಾಂತರ ಯುವ ಕ್ರೀಡಾ ಪ್ರತಿಭೆಗಳಿಗೆ ಸ್ಫೂರ್ತಿಯಾಗಿರುವ ನೀವು ಅಕ್ಟೋಬರ್ 1ರಂದು ಯುವ ದಸರಾವನ್ನು ಉದ್ಘಾಟನೆ ಮಾಡಬೇಕು. ನಿಮ್ಮಿಂದ ಯುವ ದಸರಾ ಉದ್ಘಾಟನೆ ಆಗಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಸಿಎಂ ಯಡಿಯೂರಪ್ಪ, ಪಿ.ವಿ.ಸಿಂಧು ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ ಪದಕ ಗೆದ್ದ ಪಿ.ವಿ.ಸಿಂಧು ಅವರಿಗೆ ಸಿಎಂ ಬಿ.ಎಸ್‍.ಯಡಿಯೂರಪ್ಪನವರ ನೇತೃತ್ವದ ಸರ್ಕಾರವು 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.

    ಈ ಬಾರಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಕನ್ನಡದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಸೆಪ್ಟೆಂಬರ್ 29ರಂದು ಬೆಳಗ್ಗೆ ಸುಮಾರು 9.30ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಾಗುತ್ತದೆ.

    ಸಿಎಂ ಯಡಿಯೂರಪ್ಪ ಅವರು ಸೆಪ್ಟೆಂಬರ್ 29ರಂದು ಸಂಜೆ 7.30ಕ್ಕೆ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ. ಅಕ್ಟೋಬರ್ 8ರಂದು 2.15ರಿಂದ 2.58ರ ಮಕರ ಲಗ್ನದಲ್ಲಿ ನಂದಿ ಪೂಜೆ ಮಾಡಲಾಗುತ್ತದೆ. ಅದೇ ದಿನ ಸಂಜೆ 4.31ರಿಂದ 4.57ರವರೆಗೆ ಕುಂಭ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ.