ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಕ್ಷರಶಃ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತದೆ. ಇದಕ್ಕೆ ಮೂಲಕ ಕಾರಣ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ವೇದಿಕೆ.
ಎರಡನೇ ದಿನದ ಯುವ ದಸರಾ ವೇದಿಕೆ ಸಂಗೀತ ಹಾಗೂ ನೃತ್ಯ ಪ್ರಕಾರಗಳಿಂದ ಚಿಂದಿ ಮಾಡಿತು. ಕಾರ್ಯಕ್ರಮದ ಮೊದಲಿಗೆ ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತಗಳು ಸಂಸ್ಕೃತಿ ಹಾಗೂ ಪರಂಪರೆಯ ವೈಭವವನ್ನು ಧರೆಗಿಳಿಸಿದರು. ನಂತರ ಗಾಯಕಿ ಸಂಗೀತ ರವೀಂದ್ರನಾಥ್ ಅವರ ಗಾಯನ ಯುವ ದಸರಾ ವೇದಿಕೆಗೆ ರಂಗು ತಂದಿತು. ಇದಾದ ಬಳಿಕ ಬಾಂಬೆ ಮತ್ತು ರಷ್ಯನ್ ಟೀಂ ಮಾಡಿದ ಡ್ಯಾನ್ಸ್ ಯುವಕರನ್ನು ಬೆರಗುಗೊಳಿಸುವುದರ ಜೊತೆಗೆ ಕುಣಿದು ಕುಪ್ಪಳಿಸುವಂತೆ ಮಾಡಿತು.
ಇದಾದ ಬಳಿಕ ವೇದಿಕೆಗೆ ರಾಕ್ ಮ್ಯೂಸಿಕ್ ಹಾಗೂ ಮೆಲೋಡಿ ಸಾಂಗ್ ಮೂಲಕ ಎಂಟ್ರಿ ಕೊಟ್ಟ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಗಾಯನಕ್ಕೆ ಎಲ್ಲರೂ ಫುಲ್ ಫಿದಾ ಆದರು. ಮೋಹಿತ್ ಚೌಹಾಣ್ ರಾಕ್ ಮ್ಯೂಸಿಕ್ ಹಾಡುತ್ತಿದ್ರೆ, ಯುವಕರು ಕುಣಿದು ಕುಪ್ಪಳಿಸಿದ್ದರು. ರೊಮ್ಯಾಂಟಿಕ್ ಸಾಂಗ್ ಹೇಳಿದಾಗ ತಲೆದೂಗಿಸಿ ಸಂಗೀತದ ಮಜಲನ್ನು ಆನಂದಿಸಿದರು.
ಎರಡನೇ ದಿನದ ಯುವ ದಸರಾ ಎಲ್ಲಾ ಪ್ರಕಾರದ ಸಂಗೀತ ಹಾಗೂ ನೃತ್ಯಗಳನ್ನು ವೇದಿಕೆ ಮೇಲೆ ಚೆಲ್ಲುವ ಮೂಲಕ ಸಾಂಸ್ಕೃತಿಕ ವೈಭವದ ಕಲೆಯನ್ನು ಚೆಲ್ಲಿತು. ಇಂದು ಯುವ ದಸರಾ ವೇದಿಕೆಯಲ್ಲಿ ಗಾಯಕಿ ಮೊನಾಲಿ ಠಾಕೂರ್‍ರ ಗಾಯನವಿದ್ದು, ಇದಕ್ಕಾಗಿ ಯುವಸ್ತೋಮ ಕಾದು ಕುಳಿತಿದೆ.
ಮೈಸೂರು: ದಸರಾ ವೇದಿಕೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ಶಾಸಕರನ್ನ ಕೈ ಹಿಡಿದು ಕರೆದೊಯ್ದರು. ಮುಖ್ಯಮಂತ್ರಿಗಳ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಯುವ ದಸರಾ ಕಾರ್ಯಕ್ರಮದ ಬಳಿಕ ಸಿಎಂ ಯಡಿಯೂರಪ್ಪ ಅವರು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದರು. ಈ ವೇಳೆ ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವ್ ಅವರ ಕೈ ಹಿಡಿದು ಮುಂದೆ ಸಾಗಿಸಿದರು. ವೇದಿಕೆಯಿಂದ ಕೆಳಗೆ ಇಳಿಯುವಾಗಲೂ ಸಿಎಂ ಶಾಸಕರ ಹೆಗಲ ಮೇಲೆ ಕೈ ಹಾಕಿಯೇ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸ್ಥಳೀಯ ಬಿಜೆಪಿ ನಾಯಕರು ಇದ್ದರು. ಅವರನ್ನೆಲ್ಲ ಬಿಟ್ಟು ಸಿಎಂ ಯಡಿಯೂರಪ್ಪ ಅವರು ಶಾಸಕ ಕೆ.ಮಹದೇವ್ ಅವರ ಕೈ ಹಿಡಿದು, ಹೆಗಲ ಮೇಲೆ ಕೈ ಹಾಕಿ ವೇದಿಕೆಯಿಂದ ನಿರ್ಗಮಿಸಿದ್ದು ಕುತೂಹಲ ಮೂಡಿಸಿದೆ.
ಈ ಹಿಂದೆ ಶಾಸಕ ಮಹದೇವ್ ಅವರು ಜೆಡಿಎಸ್ ತೊರೆಯಲು ಮುಂದಾಗಿದ್ದು, ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಊಹಾಪೋಹಗಳನ್ನು ತಳ್ಳಿಹಾಕಿದ್ದ ಶಾಸಕರು, ನಾನು ಜೆಡಿಎಸ್ ಪಕ್ಷ ಬಿಟ್ಟು ಹೋಗುವ ಮಾತೇ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಅವರನ್ನು ಪಕ್ಷಕ್ಕೆ ಸೆಳೆಯಲು ಸಿಎಂ ಯಡಿಯೂರಪ್ಪ ಪ್ಲ್ಯಾನ್ ರೂಪಿಸಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೈಸೂರು: ಬ್ಯಾಡ್ಮಿಂಟನ್ ಅಂತರಾಷ್ಟ್ರೀಯ ಆಟಗಾರ್ತಿ ಪಿ.ವಿ ಸಿಂಧು ಅವರು ಚಾಮುಂಡಿ ಕ್ರೀಡಾಂಗಣದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ಮಾಡಿದ್ದಾರೆ.
ಪಿ.ವಿ ಸಿಂಧು ಅವರು ಕ್ರೀಡಾಕೂಟ ಉದ್ಘಾಟಿಸಿದ್ದು, ಅವರಿಗೆ ಸಿಎಂ ಯಡಿಯೂರಪ್ಪ, ಸಚಿವರಾದ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ಕನ್ನಡದಲ್ಲಿಯೇ ಮಾತು ಶುರು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಂಧು ಅವರು, “ಎಲ್ಲರಿಗೂ ನಮಸ್ಕಾರ. ನನಗೆ ದಸರಾಗೆ ಬಂದಿದ್ದು ತುಂಬಾ ಖುಷಿಯಾಗಿದೆ. ನಾನು ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದೇನೆ. ಮೈಸೂರು ಕ್ಲೀನ್ ಸಿಟಿ ಎಂಬುದನ್ನು ಕೇಳಿದ್ದೇನೆ. ಆದರೆ ಈಗ ಇಲ್ಲಿ ಬಂದಿರುವುದು ಖುಷಿಯಾಗಿದೆ. ಈ ಸ್ಥಳದಲ್ಲಿ ದುರ್ಗಾಮಾತೆ ನೆಲೆಸಿದ್ದಾರೆ. ಅಲ್ಲದೆ ಎಲ್ಲರೂ ನನ್ನನ್ನು ಗುರುತಿಸುತ್ತಿರುವುದು ಸಹ ಖುಷಿಯಾಗಿದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಏಕೆಂದರೆ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸುವುದು ನನ್ನ ಮುಂದಿನ ಗುರಿ” ಎಂದು ಹೇಳಿದರು.
ಇದೇ ವೇಳೆ ಖೇಲೋ ಇಂಡಿಯಾದ ಬಗ್ಗೆ ಮಾತನಾಡಿದ ಅವರು, ಖೇಲೋ ಇಂಡಿಯಾದ ಮೂಲಕ ಸಾಕಷ್ಟು ಗ್ರಾಮೀಣ ಪ್ರತಿಭೆಗಳು ಹೊರಬರಲಿದೆ. ಅಂತಹ ಪ್ರತಿಭೆಗಳಿಗೆ ತಳಮಟ್ಟದಲ್ಲಿ ಉತ್ತಮವಾದ ಟ್ರೈನಿಂಗ್ ಕೊಡಬೇಕಿದೆ. ಇದೇ ಕಾರಣಕ್ಕೆ ಖೇಲೋ ಇಂಡಿಯಾ ಕಾನ್ಸೆಪ್ಟ್ ಬಂದಿದೆ. ಶಾಲಾ ಮಟ್ಟದಲ್ಲಿಯೇ ಪ್ರತಿಭೆ ಕಂಡು ಹಿಡಿದು ಉತ್ತಮ ತರಬೇತಿ ಕೊಡಬೇಕು. ಇದಕ್ಕೆ ಪೋಷಕರು ಸಹ ಪ್ರೋತ್ಸಾಹಿಸಬೇಕು. ಅವರೇ ಮಕ್ಕಳಿಗೆ ಹೆಚ್ಚಾಗಿ ಹುರಿದುಂಬಿಸಬೇಕು. ಆಗಲೇ ಗ್ರಾಮೀಣ ಪ್ರತಿಭೆಗಳು ಯಶಸ್ಸುಗಳಿಸಲು ಸಾಧ್ಯ ಎಂದರು.
-ಅತ್ತೆ-ಸೊಸೆಯರಿಂದ ಅಡುಗೆ, ಬ್ಯಾನರ್ ನೋಡಿ ಗರಂ ಆದ ಸೋಮಣ್ಣ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇಂದು ದಸರಾದ ಎರಡನೇ ದಿನ ಅರಮನೆ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು ಜನರಿಗೆ ಮಸ್ತ್ ಮನರಂಜನೆ ನೀಡಿತು.
ಭಾನುವಾರ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾದ ಚಾಲನೆ ಸಿಕ್ಕಿದೆ. ಇಂದು ಎರಡನೇ ದಿನದ ದಸರೆಯನ್ನು ಸ್ತ್ರೀಯರ ಕಲಾನೈಪುಣ್ಯತೆಯಾದ ರಂಗೋಲಿ ಸ್ಪರ್ಧೆಯಿಂದ ಆರಂಭಗೊಳಿಸಲಾಯಿತು. ಅಂಬಾ ವಿಲಾಸ ಅರಮನೆಯ ಮುಂಭಾಗ ಆಯೋಜಿಸಿದ್ದ, ದಸರಾ ರಂಗೋಲಿ ಸ್ಪರ್ಧೆಗೆ ಶಾಸಕ ಆರ್. ರಾಮದಾಸ್ ಚಾಲನೆ ನೀಡಿದರು. ಇಲ್ಲಿ ಮಹಿಳೆಯರು ಚಿತ್ತಾರಗಳನ್ನು ತುಂಬಿದ ರಂಗೋಲಿಗಳನ್ನು ಬಿಡಿಸುವ ಮೂಲಕ ಅರಮನೆಯ ಆವರಣವನ್ನು ವರ್ಣರಂಚಿತಗೊಳಿಸಿದರು.
ಇನ್ನೊಂದೆಡೆ ಜಗನ್ಮೋಹನ ಅರಮನೆಯಲ್ಲಿ ಮಕ್ಕಳಿಗಾಗಿ ನಡೆಯುತ್ತಿರುವ ಚಿಣ್ಣರ ದಸರಾಗೆ ವಿ.ಸೋಮಣ್ಣ ಚಾಲನೆ ನೀಡಿದರು. ಮಹಿಳಾ ದಸರಾಗೆ ಬಂದರೆ ಅಲ್ಲಿ ಹಾಲಿ ಮಾಜಿ ಎಂದು ಬಿಜೆಪಿಯ ಮಹಿಳೆಯರು ಹಾಗೂ ಸಚಿವರು ಗರಂ ಆಗಿದರು. ಜೆಕೆ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾದ ಬ್ಯಾನರ್ ಅಲ್ಲಿ ಮಾಜಿ ಸಚಿವೆ ಉಮಾಶ್ರೀ ಫೋಟೋ ಇದ್ದ ಕಾರಣ ಸಚಿವ ಸೋಮಣ್ಣ ಮತ್ತು ಬಿಜೆಪಿಯ ಮಹಿಳೆಯರು ಗರಂ ಆಗಿದರು.
ಒಂದು ಕಡೆ ಮೈಸೂರಿನಲ್ಲಿ ದಸರಾ ಕಾರ್ಯಕ್ರಮಗಳ ಮೂಲಕ ಮನರಂಜನೆ ದೊರೆಯುತ್ತಿದ್ರೆ, ಇನ್ನೊಂದೆಡೆ ಆಹಾರ ಮೇಳದಲ್ಲಿ ನೋಡುಗರ ಬಾಯಲ್ಲಿ ನೀರೂರಿಸುವ ಹಾಗೂ ಬಿದ್ದು ನಕ್ಕು ನಲಿಯುವ ಸ್ಪರ್ಧೆಗಳು ನಡೆದವು. ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಅತ್ತೆ-ಸೊಸೆ ಜೋಡಿ ಅಡುಗೆ ಮಾಡುವ ಸ್ಪರ್ಧೆ ಕಮಾಲ್ ಮಾಡಿತು. ಅತ್ತೆ-ಸೊಸೆಯರಿಬ್ಬರು ಕೂಡಿಗೊಂಡು ಅಕ್ಕಿ ರೊಟ್ಟಿ ಮತ್ತು ಎಣಗಾಯಿ ಪಲ್ಯ ಮಾಡುತ್ತಿದ್ದು, ಎಲ್ಲರ ಬಾಯಲ್ಲಿ ನೀರೂರಿಸುವಂತೆ ಇತ್ತು.
ಮಹಿಳೆಯರಿಗಾಗಿಯೇ ಆಯೋಜಿಸಿದ್ದ ಇಡ್ಲಿ ತಿನ್ನುವ ಸ್ಪರ್ಧೆ ನೋಡುಗರು ನಕ್ಕು ನಲಿಯುವುದರ ಜೊತೆಗೆ ಬಾಯಿಯ ಮೇಲೆ ಬೆರಳಟ್ಟುಕೊಳ್ಳುವ ಹಾಗೆ ಮಾಡಿತು. ಈ ಸ್ಪರ್ಧೆಯಲ್ಲಿ 60 ವರ್ಷದ ಅಜ್ಜಿ ಸರೋಜಮ್ಮ ಒಂದೇ ನಿಮಿಷದಲ್ಲಿ 6 ಇಡ್ಲಿ ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು.
ದಸರಾ ಮಹೋತ್ಸವ ಮೈಸೂರಿಗೆ ವಿಶೇಷ ಮೆರಗನ್ನು ನೀಡುತ್ತಿದ್ದು, ಹಗಲಿನ ವೇಳೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತಿದ್ರೆ, ರಾತ್ರಿಯ ವೇಳೆ ವಿದ್ಯುತ್ ಅಲಂಕಾರದ ಮೂಲಕ ಕೈಲಾಸವೇ ಧರೆಗಿಳಿದಂತೆ ಬಾಸವಾಗುತ್ತಿದೆ. ಈ ರಂಗು ಇನ್ನೂ ಎಂಟು ದಿನಗಳ ಕಾಲ ಮೈಸೂರನ್ನು ಗತಕಾಲಕ್ಕೆ ಕರೆದೊಯ್ಯಲಿದೆ.
ಮೈಸೂರು: ದಸರಾ ಉದ್ಘಾಟನಾ ದಿನವೇ ಯುವಕರ ಪುಂಡಾಟ ತೋರಿದ್ದು, ಚಾಮುಂಡಿ ಬೆಟ್ಟದಲ್ಲಿ ಎರಡು ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಸುಮಾರು 10 ಮಂದಿ ಯುವಕರು ಗಲಾಟೆ ಮಾಡಿದ್ದಾರೆ. ಈ ಗಲಾಟೆಯಲ್ಲಿ ನಡು ರಸ್ತೆಯಲ್ಲೇ ಸಾರ್ವಜನಿಕರ ಮುಂದೆಯೇ ಇಬ್ಬರು ಯುವಕರಿಗೆ ಮನಬಂದಂತೆ ಥಳಿಸಿದ್ದಾರೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಗಲಾಟೆ ವೇಳೆ ಯುವಕರು ದ್ವಿಚಕ್ರ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಯುವಕರ ಈ ಮಾರಾಮಾರಿಯನ್ನು ನೋಡಿ ಹೆದರಿದ ಸಾರ್ವಜನಿಕರು ಅಸಹಾಯಕರಾಗಿ ನಿಂತಿದ್ದಾರೆ. ಕೊನೆಗೆ ಸ್ಥಳಕ್ಕೆ ಬಂದ ಕೆ.ಆರ್. ಠಾಣೆಯ ಪೋಲಿಸರು ಗಲಾಟೆ ನಡೆಸಿದ ಕೆಲ ಯುವಕರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ನಾನು ಸಾಂದರ್ಭಿಕ ಶಿಶು, ವಿಷಕಂಠ ಎಂದು ಹೇಳಿದ್ದರು, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ಅದೇ ರೀತಿಯ ಹೇಳಿಕೆ ನೀಡಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಒಂದು ರೀತಿ ತಂತಿ ಮೇಲೆ ನಡೆಯುತ್ತಿದ್ದೇನೆ, ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕಾದಲ್ಲಿ ಹತ್ತಾರು ಸಲ ವಿಚಾರ ಮಾಡಬೇಕಾಗಿದೆ. ನಿರ್ಧಾರ ತೆಗೆದುಕೊಳ್ಳುವಾಗ ಅದು ಬೇರೆ ಸಮಾಜದ ಮೇಲೆ ಹೇಗೆ ಪರಿಣಾಮ ಎನಾಗುತ್ತದೆ ಎಂಬುದನ್ನೂ ಚಿಂತನೆ ಮಾಡಬೇಕಾಗಿದೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭಮಂಟಪದ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಈಗ ರಾಜ್ಯದಲ್ಲಿ ಭೀಕರ ಪ್ರವಾಹವಾಗಿದ್ದು, ಇನ್ನೊಂದೆಡೆ ಬರಗಾಲವಿದೆ. ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಅನಿವಾರ್ಯವಾಗಿದೆ. ಬೇರೆ ಯೋಜನೆಗಳಿಗೆ ಹಣ ನೀಡಿದರೆ ಅದು ಅಪರಾಧವಾಗುತ್ತದೆ. ಯಾರೇ ಅನುದಾನ ಕೇಳಿದರೂ ಮುಂದಿನ ಬಜೆಟ್ ನಂತರ ಅನುದಾನ ನೀಡಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದಾಗ ನನಗೆ ಸನ್ಮಾನಿಸಿದರು. ಇದೀಗ ಅಭಿನವ ರೇಣುಕ ಮಂದಿರ ಕಟ್ಟಲು 2 ಕೋಟಿ ರೂ. ಕೊಡುತ್ತೇನೆ ನೀವು ಒಂದು ಕೋಟಿ ರೂ. ಜೋಡಿಸಿ ಅಭಿನವ ರೇಣುಕ ಮಂದಿರ ನಿರ್ಮಿಸೋಣ. ಎಲ್ಲ ಸಮಾಜದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮ ವಹಿಸುತ್ತೇನೆ. ಈ ಸಂದರ್ಭದಲ್ಲಿ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಕಾರ್ಯಕ್ರಮಗಳಿಗೆ ಹಣ ಕೊಟ್ಟರೆ ಅಕ್ಷ್ಯಮ್ಯ ಅಪರಾಧವಾಗುತ್ತದೆ. ಮುಂದಿನ ಬಜೆಟ್‍ನಲ್ಲಿ ದಸರಾ ಮಾದರಿ ಸಮಾರಂಭಗಳಿಗೆ ಹಣ ನೀಡಲು 250 ಕೋಟಿ ರೂ.ಗಳನ್ನು ಮೀಸಲಿಡುತ್ತೇನೆ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಎಂಐಟಿ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ 3ರಂದು ಸಚಿವ ಸಂಪುಟ ಸಭೆ ಇದೆ, ಇದಾದ ಬಳಿಕ 6ನೇ ತಾರೀಖು ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತೇನೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಹಣ ಬಿಡುಗಡೆ ನಿರೀಕ್ಷೆ ಇದೆ. ನಮ್ಮಲ್ಲೇ ಇರುವ ಅನುದಾನದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲೆ ವಿಭಜನೆ ಕುರಿತು ಪ್ರತಿಕ್ರಿಯಿಸಿದ ಅವರು, 10-11 ತಾಲೂಕುಗಳಿರುವ ದೊಡ್ಡ ಜಿಲ್ಲೆಗಳಾಗಿವೆ. ಅಯಾ ತಾಲೂಕಿನ ಜನಪ್ರತಿಧಿಗಳು ಹಾಗೂ ಅಧಿಕಾರಿಗಳನ್ನು ಕರೆದು ಈ ಕುರಿತು ಚರ್ಚೆ ಮಾಡುತ್ತೇನೆ. ಈಗಾಗಲೇ ಹತ್ತು ಹನ್ನೊಂದು ಜಿಲ್ಲೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೆಲವೆಡೆ ಹತ್ತು ಹಲವು ತಾಲೂಕುಗಳಿವೆ ಸಣ್ಣ ಜಿಲ್ಲೆಯಾದರೆ ಹೆಚ್ಚು ಉಪಯೋಗವಾಗುತ್ತದೆ ಎಂಬುದು ಸಾಮಾನ್ಯ ವಾಡಿಕೆ. ಆಯಾ ಕ್ಷೇತ್ರದ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ನೆರೆ ಹಾವಳಿಯಿಂದ ಅಧಿವೇಶನವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಬಾರಿ ಬೆಂಗಳೂರಿನಲ್ಲಿ ಅಧಿವೇಶನ ಕರೆದಿದ್ದೇವೆ. ಮುಂದಿನ ಬಾರಿ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
33 ವರ್ಷಗಳ ಬಳಿಕ ದಾವಣಗೆರೆ ನಗರದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಯುತ್ತಿದೆ. ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಲವು ಗಣ್ಯರು ಭಾಗಿಯಾಗಿದ್ದರು. ದಸರಾ ಕಾರ್ಯಕ್ರಮದಲ್ಲಿ ರಾಜ ಪೋಷಾಕಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಪಾಲ್ಗೊಂಡಿದ್ದರು.
ಮಡಿಕೇರಿ: ಜಗತ್ ಪ್ರಸಿದ್ಧ ಮೈಸೂರು ದಸರಾಕ್ಕೆ ಇಂದು ಬೆಳಗ್ಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಇತ್ತ ಐತಿಹಾಸಿಕ ಮಡಿಕೇರಿ ದಸರಾಕ್ಕೂ ಇಂದು ಚಾಲನೆ ನೀಡಲಾಗಿದೆ. 147 ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿ ಮಡಿಕೇರಿ ದಸರಾ ಇಂದು ನಗರದ ನಾಲ್ಕು ಶಕ್ತಿದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆತಿದೆ.
ನಗರದ ಪಂಪಿನ ಕೆರೆಬಳಿಯಲ್ಲಿ ನಾಲ್ಕು ಕರಗಗಳಿಗೆ ಸಾಂಪ್ರದಾಯಿಕ ಪೂಜೆಸಲ್ಲಿಸುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪ್ಪಯ್ಯ, ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಇಂದು ಕರಗ ಹೊರುವ ಮೂಲಕ ದಸರಾ ಪ್ರಾರಂಭಗೊಂಡಿದ್ದು, ನಾಳೆಯಿಂದ ಒಂದು ವಾರಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಜನರ ಮನವನ್ನು ತಣಿಸಲಿವೆ. ದಸರಾ ಪ್ರಯುಕ್ತ ಮಂಜಿನ ನಗರಿ ನವವಧುವಿನಂತೆ ಸಿಂಗಾರಗೊಂಡಿದ್ದು, ಇಡೀ ನಗರವೇ ಕಂಗೊಳಿಸುತ್ತಿದೆ.
ಇಂದು ಸಂಜೆ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಮಿತಿ ಸದಸ್ಯರು ದಸರಾ ಯಶಸ್ಸಿಗೆ ದೇವರಲ್ಲಿ ಮೊರೆಯಿಟ್ಟಿದ್ದಾರೆ. ನಗರದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವೃತಧಾರಿಗಳು ನವರಾತ್ರಿಯ ಒಂಭತ್ತು ದಿನಗಳ ಕಾಲ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.
ಶತಮಾನಗಳ ಹಿಂದೆ ಬರಗಾಲದಿಂದ ಮಡಿಕೇರಿಯಲ್ಲಿ ಭೀಕರ ಕಾಲರಾ ಆವರಿಸಿದ್ದ ಸಂದರ್ಭದಲ್ಲಿ ದೇವತೆಗಳನ್ನು ಕರಗದ ಮೂಲಕ ನಗರ ಪ್ರದಕ್ಷಿಣೆ ಮಾಡಿ ಪೂಜೆಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಕರಗ ಉತ್ಸವ ನಡೆಸಲಾಗುತ್ತದೆ. ಮಡಿಕೇರಿಯ ಶಕ್ತಿದೇವತೆಗಳೆಂದೇ ಕರೆಸಿಕೊಳ್ಳುವ ನಾಲ್ಕೂ ದೇವಿಯರನ್ನು ಜನತೆ ಆರಾಧಿಸುತ್ತಾರೆ. ಕೊನೆಯ ದಿನ ಮಡಿಕೇರಿ ದಸರಾದ ವಿಶೇಷ ದಶಮಂಟಪಗಳ ಉತ್ಸವ ಎಲ್ಲರನ್ನು ಬೆರಗುಗೊಳಿಸಲಿದೆ.
ಬೆಳಗಾವಿ: ಹುಕ್ಕೇರಿ ಹಿರೇಮಠದಿಂದ 9 ದಿನಗಳ ಕಾಲ ಹುಕ್ಕೇರಿ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವಕ್ಕೆ ಪ್ರವಾಹ ಸಂತ್ರಸ್ತರಿಗೆ ಧನ ಸಹಾಯ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾಮಾಜಿಕ ಕಳಕಳಿಯಿಂದ ಉತ್ತರ ಕರ್ನಾಟಕದ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡ 42 ಗ್ರಾಮಗಳ 120 ಕುಟುಂಬಗಳನ್ನು ಗುರುತಿಸಿ ಆರ್ಥಿಕ ಸಹಾಯದ ಜೊತೆ ಬಟ್ಟೆಗಳನ್ನು ನೀಡಿದ್ದಾರೆ.
ಹುಕ್ಕೇರಿ ಹಿರೇಮಠದಿಂದ ಸಹಾಯ ಮಾಡುವುದರ ಮೂಲಕ ಇತರೆ ಮಠಗಳಿಗೂ ದಸರಾ ಉತ್ಸವ ಮಾದರಿಯಾಯಿತು. ಪ್ರವಾಹದ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಉತ್ಸವವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಉತ್ಸವಕ್ಕೆ ಶಾಸಕ ಉಮೇಶ ಕತ್ತಿ ಚಾಲನೆ ನೀಡಿದರು.
ದಸರಾ ಉತ್ಸವದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು, “ಪ್ರವಾಹದ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡಲಾಗುತ್ತಿದೆ. ಸಂತ್ರಸ್ತರಿಗೆ ಸಹಾಯ ಮಾಡುವುದರ ಹುಕ್ಕೇರಿ ಹಿರೇಮಠ ಧರ್ಮವನ್ನು ಆಚರಣೆ ಮಾಡುತ್ತಿದೆ” ಎಂದರು.
ದಸರಾ ಉತ್ಸವದಲ್ಲಿ ಶಾಸಕರಾದ ದುರ್ಯೋಧನ ಐಹೊಳೆ, ಆನಂದ ಮಾಮನಿ, ವಿಧಾನ ಪರಿಷತ ಸದಸ್ಯ ಎಂ.ಸಿ ವೇಣುಗೋಪಾಲ ಹಾಗೂ ಅಪಾರ ಪ್ರಮಾದಲಿ ಮಠದ ಭಕ್ತರು ಭಾಗಿಯಾಗಿದ್ದರು.
ಮೈಸೂರು: ದಸರಾ ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ಎಸ್.ಎಲ್ ಭೈರಪ್ಪ ಅವರಿಗೆ ಜಿಲ್ಲಾಡಳಿತ ಮತ್ತೆ ಅವಮಾನ ಮಾಡಿದೆ.
ಕಾರ್ಯಕ್ರಮ ಉದ್ಘಾಟಿಸಿದ ನಂತರ ಭೈರಪ್ಪ ಅವರು ಭಾಷಣ ಮಾಡುತ್ತಿದ್ದರು. ಭೈರಪ್ಪ ಅವರು ಹೆಚ್ಚು ಹೊತ್ತು ಭಾಷಣ ಮಡುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂಸದರ ಬಳಿ ತೆರಳಿ ಸಮಯ ಹೆಚ್ಚಾಗಿದೆ. ಭೈರಪ್ಪ ಅವರಿಗೆ ತಿಳಿಸಿ ಎಂದು ಕೇಳಿಕೊಂಡಿದೆ. ಹೀಗಾಗಿ ಪ್ರತಾಪ್ ಸಿಂಹ ಅವರು ಸಮಯ ಹೆಚ್ಚಾಗಿದೆ ಸರ್ ಎಂದು ಸಾಹಿತಿಗೆ ನೆನಪಿಸಿದ್ದಾರೆ. ಪ್ರತಾಪ್ ಸಿಂಹ ಮಾತು ಕೇಳಿದ ನಂತರ ಭೈರಪ್ಪ ಅವರು, “ಕಾಲ ಮೀರಿತು ಎಂದು ಹೇಳುತ್ತಿದ್ದಾರೆ. ಅವರು ನನಗೆ ಹೇಳದೇ ಇದ್ದರೂ ನಾನು ಐದು ಸೆಕೆಂಡಿನಲ್ಲಿ ಭಾಷಣ ಮುಗಿಸುತ್ತಿದೆ. ಆ ಸಮಯದ ಬಗ್ಗೆ ಅರಿವಿದೆ” ಎಂದು ಹೇಳಿದರು. ಇದನ್ನೂ ಓದಿ: ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ
ಇಂದು ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಎಸ್.ಎಸ್ ಭೈರಪ್ಪ ಅವರಿಗೆ ಅಗೌರವ ತೋರಲಾಗಿತ್ತು. ಎಸ್.ಎಲ್ ಭೈರಪ್ಪ ಅವರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಮಹಿಷಾ ಪ್ರತಿಮೆಯಿಂದ ವೇದಿಕೆಗೆ ಕರೆದೊಯ್ಯಬೇಕಿತ್ತು. ಹೀಗಾಗಿ ಭೈರಪ್ಪ ಅವರು ಸಿಎಂಗಾಗಿ 30 ನಿಮಿಷಗಳ ಕಾಲ ಮಹಿಷಾ ಪ್ರತಿಮೆ ಬಳಿ ನಿಲ್ಲಿಸಿಕೊಂಡ ಕಾರಿನಲ್ಲೇ ಕುಳಿತಿದ್ದರು. ಅರ್ಧ ಗಂಟೆಯಾದರೂ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಬರಲೇ ಇಲ್ಲ. ಹೀಗಾಗಿ ಯಡಿಯೂರಪ್ಪ ಹಾಗೂ ಸಚಿವರು ಸಾಗಿದ ಮೇಲೆ ಭೈರಪ್ಪ ಅವರು ಬೇಸರದಿಂದ ಒಬ್ಬರೇ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದರು. ಇದನ್ನೂ ಓದಿ: ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಕಾರಣ: ಎಸ್.ಎಲ್ ಭೈರಪ್ಪ
ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದ ಅವರು, ಹಳ್ಳಿ ಕಡೆಯಲ್ಲಿ ಸ್ಪಲ್ಪ ತಂಪು ಇರುವಾಗ ಹೊಲದ ಕೆಲಸ ಮುಗಿಸುತ್ತಾರೆ. ಆದರೆ ಚುನಾವಣೆ ಬಂದ ಮೇಲೆ ಆ ವ್ಯವಸ್ಥೆ ಬಹುತೇಕ ಕಡೆ ಮರೆಯಾಗಿದೆ. ಕಾಯಕ ನಿಷ್ಠೆ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮಲ್ಲಿ ವ್ಯವಸಾಯ ಹಾಳಾಗುತ್ತಿರುವುದಕ್ಕೆ ರಾಜಕಾರಣಿಗಳು ಕಾರಣ ಎಂದು ಹೇಳಿದರು.