Tag: ದಸರಾ

  • ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ತಾಯಿಗಾಗಿ ಬೆಂಗ್ಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ ಮಗ

    ಬೆಂಗಳೂರು: ದಸರಾ ಬಂದರೆ ಕಣ್ಮುಂದೆ ಬರುವುದೇ ಮೈಸೂರು, ಮೈಸೂರು ಅರಮನೆ, ಅಂಬಾರಿ ಜೊತೆಗೆ ದಸರಾ ಹಬ್ಬದ ವಿಶೇಷ ಬೊಂಬೆಗಳು. ಬೊಂಬೆಗಳ ಹಬ್ಬದಲ್ಲಿ ಇಲ್ಲೊಬ್ಬ ಮಗ ತನ್ನ ತಾಯಿಗಾಗಿ ಬೆಂಗಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ್ದಾನೆ.

    ಅನೇಕ ವರ್ಷಗಳಿಂದ ತಾಯಿ ತ್ರಿಪುರ ಸಂಪತ್‍ಗೆ ಮನೆಯಲ್ಲಿ ನೂರಾರು ಬೊಂಬೆಗಳನ್ನು ಕೂರಿಸಿ ಹಬ್ಬವನ್ನು ಮಾಡಿಕೊಂಡು ಬಂದಿದ್ದಾರೆ. ದಸರಾ ಬೊಂಬೆಗಳ ಜೊತೆ ಅರಮನೆಯ ಮಾದರಿಯನ್ನು ತಂದು ಕೂರಿಸೋಣ ಎಂದು ತಾಯಿ ಆಸೆಪಟ್ಟಿದ್ದಾರೆ. ಮಗ ವಸಂತ ಕುಮಾರ್ ಹೊರಗಿನಿಂದ ಯಾಕೆ ತರುವುದು ನಾನೇ ಅರಮನೆ ಮಾಡಿಕೊಡುತ್ತೇನೆ ಎಂದು ಅರಮನೆಯನ್ನು ಮರದಿಂದ ಮಾಡಿದ್ದಾರೆ.

    ತಾಯಿಯ ಆಸೆಯನ್ನು ಪೂರೈಸಲು ನಮ್ಮ ಯಜಮಾನರು ಎಂಟು ತಿಂಗಳು ಶ್ರಮ ಪಟ್ಟಿದ್ದಾರೆ. ರಾತ್ರಿ ಕೆಲಸದಿಂದ ಬಂದ ಮೇಲೆ ಅರಮನೆ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದರು. ಮೈಸೂರು ಅರಮನೆ ಹೇಗಿದೇಯೋ ಅದೇ ರೀತಿ ಪೈಟಿಂಗ್ ಮಾಡಿ ಲೈಟ್ಸ್ ಹಾಕಿ ಮಾಡಿದರು ಎಂದು ವಸಂತ ಕುಮಾರ್ ಪತ್ನಿ ನಂದಿನಿ ತಿಳಿಸಿದ್ದಾರೆ.

    ದಸರಾ ಹಬ್ಬಕ್ಕಾಗಿ ತಾಯಿಯ ಆಸೆಯನ್ನು ಪೂರೈಸಲು ಅರಮನೆ ಮಾಡಿರುವ ವಸಂತ ಕುಮಾರ್ ಅವರ ಕಲೆಯನ್ನು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಹಬ್ಬ ಆಚರಿಸಿ ಸಂದೇಶ ಸಾರಿದ ಮುಸ್ಲಿಂ ಯುವಕ

    ಚಿಕ್ಕಮಗಳೂರು: ರಾಜ್ಯಾದ್ಯಂತ ದಸರಾ ಸಂಭ್ರಮ. ಹಿಂದೂಗಳಿಗೆ ಶ್ರೇಷ್ಠವಾದ ಹಬ್ಬ. ಎಲ್ಲರೂ ತಮ್ಮ-ತಮ್ಮ ವಾಹನಗಳಿಗೆ ಅಲಂಕರಿಸಿ, ಪೂಜೆ ಮಾಡಿ ಓಡಾಡಿ ಸಂಭ್ರಮಿಸುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ಮುಸ್ಲಿಂ ಯುವಕ ಕೂಡ ತನ್ನ ಬಸ್ಸುಗಳಿಗೆ ಹಾಗೂ ವಾಹನಗಳಿಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಚಿಕ್ಕಮಗಳೂರಿನ ಎಸ್‍ಎಂಎಸ್ ಬಸ್ ಮಾಲೀಕನಾದ ಸಿರಾಜ್, ಹಿಂದೂಗಳು ನಾಚುವಂತೆ ಆಯುಧ ಪೂಜೆ ಆಚರಿಸಿದ್ದಾರೆ. ಸಿರಾಜ್ ಹಿಂದೂಗಳಂತೆ ತಾನೂ ಹಬ್ಬ ಮಾಡಿ, ಎಲ್ಲರಿಗೂ ಸಿಹಿ ಹಂಚಿ ನಾವೆಲ್ಲಾ ಒಂದೇ ಎಂಬ ಸಂದೇಶ ಸಾರಿದ್ದಾರೆ.

    ಸಿರಾಜ್ ಅವರು ತಮ್ಮ ಆರು ಬಸ್ಸುಗಳನ್ನು ಶುಚಿ ಮಾಡಿ, ನಂತರ ಬಸ್ಸಿಗೆ ಚೆಂಡು ಹೂ, ಬಲೂನ್, ಬಾಳೆ ದಿಂಡು ಹಾಗೂ ಮಾವಿನ ತೋರಣದಿಂದ ಸಿಂಗರಿಸಿದ್ದಾರೆ. ಬಳಿಕ ವಾಹನಗಳಿಗೆ ಅರಿಶಿನ-ಕುಂಕುಮ, ವಿಭೂತಿ ಬಳಿದು ಆರತಿ ಮಾಡಿ ಪೂಜೆ ಮಾಡಿದ್ದಾರೆ.

    ತನ್ನೆಲ್ಲಾ ಬಸ್ಸುಗಳನ್ನು ಅಲಂಕರಿಸಿ ಹಿಂದೂ-ಮುಸ್ಲಿಂ ಎಲ್ಲರನ್ನೂ ಕರೆಸಿ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಎಲ್ಲರಿಗೂ ಸಿಹಿ ಹಂಚಿ ಆಯುಧ ಪೂಜೆಯ ಶುಭಾಶಯ ವಿನಿಮಯ ಮಾಡಿಕೊಂಡು, ಹಿಂದೂ-ಮುಸ್ಲಿಂ ಬಾಯಿ-ಬಾಯಿ ಎಂದೂ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

  • ಕುಮಾರಸ್ವಾಮಿ ಆಲೂಗಡ್ಡೆಯಿಂದ ಶ್ರೀಮಂತರಾದವರು- ಶೋಭಾ ಕರಂದ್ಲಾಜೆ

    ಕುಮಾರಸ್ವಾಮಿ ಆಲೂಗಡ್ಡೆಯಿಂದ ಶ್ರೀಮಂತರಾದವರು- ಶೋಭಾ ಕರಂದ್ಲಾಜೆ

    ಮೈಸೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಲೂಗಡ್ಡೆಯಿಂದ ಶ್ರೀಮಂತರಾದವರು. ಹಾಗಾಗಿ ಅವರಿಗೆ ನನಗಿಂತ ಹೆಚ್ಚು ರೈತರ ಕಷ್ಟ ಗೊತ್ತಿರಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಎಚ್‍ಡಿಕೆಗೆ ಟಾಂಗ್ ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಬಗ್ಗೆ ಶೋಭಾ ಕರಂದ್ಲಾಜೆಯವರಿಗೆ ಗೊತ್ತಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಕುಮಾರಸ್ವಾಮಿಯವರು ಏನು ಅನ್ನುವುದನ್ನು ಕಳೆದ ವರ್ಷದಲ್ಲಿ ಅವರೇ ತೋರಿಸಿದ್ದಾರೆ. ಅವರ ಆರೋಪಕ್ಕೆ ನಾನು ಹೆಚ್ಚು ಮಾತನಾಡುವುದಿಲ್ಲ. ನಾನು ರೈತ ಅಲ್ಲ ಅಂದರೆ ಇನ್ನೇನು ಎಂಬುದನ್ನು ಅವರೇ ಹೇಳಬೇಕು ಎಂದು ತಿರುಗೇಟು ನೀಡಿದರು.

    ಕುಮಾರಸ್ವಾಮಿಯವರು ನಮ್ಮ ಊರಿಗೆ ಬಂದು ನೋಡಲಿ. ಕರಂದ್ಲಾಜೆ ಎಲ್ಲಿದೆ, ಚಾರವಾಕ ಎಲ್ಲಿದೆ ಎಂಬುದು ಅವರಿಗೆ ಗೊತ್ತಾದರೆ, ಯಾರು ರೈತರು, ಯಾರು ರೈತರಲ್ಲ ಎಂಬುದು ಅವರಿಗೆ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ವಾಗ್ದಾಳಿ ನಡೆಸಿ, ಶೋಭಾ ಕರಂದ್ಲಾಜೆ ಅವರಿಗೆ ರೈತರು ಎಂದರೆ ಗೊತ್ತಿದೆಯೇ, ಹೇಗೋ ಬಿಜೆಪಿ ಹೆಸರಲ್ಲಿ ರಾಜಕಾರಣ ನಡೆಯುತ್ತಿದೆ. ಜನ ಬಿಜೆಪಿ ಹೆಸರಲ್ಲಿ ಮತ ಹಾಕುತ್ತಾರೆ, ಮತ ಹಾಕಿಸಿಕೊಂಡು ಮಾತನಾಡುತ್ತ ತಿರುಗಿಕೊಂಡು ಇದ್ದಾರೆ. ಅವರಿಗೆ ರೈತರನ್ನು ಕಟ್ಟಿಕೊಂಡು ಏನಾಗಬೇಕು ಎಂದು ಕಿಡಿಕಾರಿದ್ದರು.

    ಶೋಭಾ ಕರಂದ್ಲಾಜೆ ಅವರು ಇಂದು ಮೈಸೂರಿನ ಅರಮನೆ ಆವರಣದಲ್ಲಿ ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಉಪಹಾರ ವ್ಯವಸ್ಥೆ ಮಾಡಿದ್ದರು. ಶೋಭಾ ಅವರು ಪ್ರತಿವರ್ಷ ಉಪಹಾರ ವ್ಯವಸ್ಥೆ ಮಾಡುತ್ತಾರೆ, ಅದೇ ರೀತಿ ಈ ವರ್ಷವೂ ಮಾಡಿದ್ದರು. ಮಸಾಲೆ ದೋಸೆ, ಪೊಂಗಲ್, ಇಡ್ಲಿ, ವಡೆ, ಹಾಲುಬಾಯಿ, ಖಾರಾಬಾತ್ ಉಪಹಾರವನ್ನು ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬದ ಸದಸ್ಯರು ಸೇವಿಸಿದರು. ಒಟ್ಟು 40 ಕುಟುಂಬದ 300 ಜನರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಮಹಿಳೆಯರಿಗೆ ಸೀರೆಯನ್ನು ಸಹ ವಿತರಿಸಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶೋಭಾ ಕರಂದ್ಲಾಜೆ ಅವರಿಗೆ ಸಾಥ್ ನೀಡಿದರು.

  • ಕೊಪ್ಪಳ, ಬಳ್ಳಾರಿಯಲ್ಲಿ ಮಳೆಯಬ್ಬರ – ಗುರುವಾರದವರೆಗೂ ಮುಂಗಾರು ಮಳೆ ಸಾಧ್ಯತೆ

    ಕೊಪ್ಪಳ, ಬಳ್ಳಾರಿಯಲ್ಲಿ ಮಳೆಯಬ್ಬರ – ಗುರುವಾರದವರೆಗೂ ಮುಂಗಾರು ಮಳೆ ಸಾಧ್ಯತೆ

    ಬೆಂಗಳೂರು: ಇಂದು ರಾಜ್ಯಾದ್ಯಂತ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ನಡುವೆ ಕೆಲ ಜಿಲ್ಲೆಗಳಲ್ಲಿ ದಸರಾ ಹಬ್ಬಕ್ಕೆ ವರುಣರಾಯ ಅಡ್ಡಪಡಿಸಿದ್ದಾನೆ.

    ಕೊಪ್ಪಳ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿದಾಡುತ್ತಿದೆ. ಇನ್ನು ಗಂಗಾವತಿ ಗುಡ್ಡಮ್ಮ ಕ್ಯಾಂಪ್‍ನಲ್ಲಿ ರೈತರು ಮಾರಾಟ ಮಾಡಲು ಹೂ, ಬಾಳೆ ಕಂಬ, ಕಬ್ಬು ತಂದಿದ್ದರು. ಆದರೆ ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ಇದನ್ನೆಲ್ಲಾ ಮಾರಾಟ ಮಾಡಲು ತೊಂದರೆಯಾಗುತ್ತಿದೆ.

    ಜಿಟಿಜಿಟಿ ಮಳೆಯಲ್ಲಿಯೇ ನಿಂತು ವ್ಯಾಪಾರಸ್ಥರು ಹೂ, ಹಣ್ಣು ವ್ಯಾಪಾರ ಮಾರಾಟ ಮಾಡುತ್ತಿದ್ದರೂ ಜನರು ಮಾತ್ರ ಮಾರ್ಕೆಟ್‍ಗೆ ಬರುತ್ತಿಲ್ಲ. ಜನರು ಮಾರ್ಕೆಟ್‍ಗೆ ಬರದ ಕಾರಣ ಹಾಕಿದ ಬಂಡವಾಳವಾದ್ರೂ ಬರುತ್ತೋ ಇಲ್ಲವೋ ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಜಿನಿಗುಡುತ್ತಿದ್ದ ಮಾರ್ಕೆಟ್ ಈಗ ಜಿಟಿಜಿಟಿ ಮಳೆಯಿಂದ ಬಿಕೋ ಎನ್ನುತಿದೆ.

    ಇತ್ತ ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದ ಹೊಸಪೇಟೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೊಸಪೇಟೆ ನಗರದಲ್ಲಿ ಕಳೆದ ಮೂರು ಗಂಟೆಯಿಂದ ಎಡೆ ಬಿಡದೆ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರ ಜೀವನ ಅಸ್ತವ್ಯಸ್ತವಾಗಿದೆ. ನಗರದ ಜಂಬುನಾಥಹಳ್ಳಿ ಸುಡುಗಾಡು ಸಿದ್ದರ ಕಾಲೋನಿಯಲ್ಲಿ ಮನೆಗಳು, ಗುಡಿಸಲುಗಳು ಜಲಾವೃತವಾಗಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ.

    ಹುಬ್ಬಳ್ಳಿ ಹಾಗೂ ಹಾವೇರಿ ಜಿಲ್ಲೆಯ ಗಡಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಬೆಣ್ಣಿ ಹಳ್ಳದ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ಬೆಣ್ಣಿಹಳ್ಳದ ನೀರು ಏರಿದ್ದರಿಂದ ಯಮನೂರ, ತಡಹಾಳ, ಗುಡಿಸಾಗರ, ನವಲಗುಂದ ಭಾಗದ ರೈತರ ಜಮೀನಿಗೆ ನೀರು ನುಗ್ಗಿದೆ. ಭಾನುವಾರದಿಂದ ಹುಬ್ಬಳ್ಳಿ ಹಾಗೂ ಹಾವೇರಿ ಗಡಿ ಭಾಗದಲ್ಲಿ ಮಳೆ ಸುರಿಯುತ್ತಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದ್ವಾರಗಾನಹಳ್ಳಿಯಲ್ಲಿ ಮಳೆಗೆ ಮನೆಯ ಗೋಡೆ ನೆನೆದು ಬೆಳಗ್ಗಿನ ಜಾವ ನಸುಕಿನಲ್ಲಿ ಮನೆ ಕುಸಿದ ಪರಿಣಾಮ ವೃದ್ಧೆ ಮೃತಪಟ್ಟಿದ್ದಾರೆ. ಗ್ರಾಮದ 75 ವರ್ಷದ ಪುಟ್ಟ ನರಸಮ್ಮ ಮೃತ ವೃದ್ಧೆ. ಹಳೆಯ ಮನೆಯಲ್ಲಿ ಮಲಗಿದ್ದ ವೃದ್ಧೆಯ ಮೈಮೇಲೆ ಗೋಡೆ ಕುಸಿದು ತಲೆ ಹಾಗೂ ಕೈ ಕಾಲಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಪುಟ್ಟನರಸಮ್ಮ ಮೃತಪಟ್ಟಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ತಡರಾತ್ರಿ ಸುರಿದ ಧಾರಕಾರ ಮಳೆಗೆ ಜಕ್ಕಲಮಡುಗು ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.

  • ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್

    ಕೋರ್ಟ್ ತೀರ್ಪಿಗೆ ದಿನಗಣನೆ- ಅಯೋಧ್ಯೆಯಲ್ಲಿ ಹೈ ಅಲರ್ಟ್

    – ದಸರಾ, ದೀಪಾವಳಿಗೂ ಸಿದ್ಧತೆ

    ನವದೆಹಲಿ: ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿ ವಿವಾದದ ಕುರಿತ ತೀರ್ಪಿಗೆ ದಿನಗಣನೆ ಹಾಗೂ ದಸರಾ ಹಬ್ಬ ನಡೆಯುತ್ತಿರುವ ಹಿನ್ನೆಲೆ ಹೈ ಅಲರ್ಟ್ ಘೋಷಿಸಲಾಗಿದ್ದು, ಅಯೋಧ್ಯೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಈ ಮೂಲಕ ಹೆಚ್ಚು ಭದ್ರತೆಯನ್ನು ಒದಗಿಸಲಾಗಿದೆ.

    ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಅಯೋಧ್ಯೆ ನಗರದಲ್ಲಿ ನಿಯೋಜಿಸಲಾಗಿದೆ. ದುರ್ಗಾ ಪೂಜಾ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಮೆರವಣಿಗೆಗಳಲ್ಲಿ ಗುಲಾಲ್ (ಬಣ್ಣ) ಬಳಸದಂತೆ ಪೂಜಾ ಸಮಿತಿಗೆ ತಿಳಿಸಿದ್ದೇವೆ. ಇದರ ಬದಲಿಗೆ ಹೂಗಳನ್ನು ಬಳಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಹೆಚ್ಚುವರಿ ಭದ್ರತಾ ಸಿಬ್ಬಂದಿಗೆ ವಸತಿ ಸೌಲಭ್ಯಗಳನ್ನು ಗುರುತಿಸಲು ಜಿಲ್ಲಾಡಳಿತ ಈಗಾಗಲೇ ಪ್ರಾರಂಭಿಸಿದೆ. ಸ್ಥಳೀಯ ಅತಿಥಿ ಗೃಹಗಳು, ಧರ್ಮಶಾಲೆಗಳು, ಶಾಲಾ ಕಾಲೇಜುಗಳಲ್ಲಿ ವಸತಿ ಸೌಲಭ್ಯಗಳನ್ನು ಬಳಸುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.

    ದುರ್ಗಾ ವಿಗ್ರಹ ಮೆರವಣಿಗೆ ಹಾಗೂ ದಸರಾ ಆಚರಣೆಗಳು ಸೋಮವಾರದಿಂದ ಪ್ರಾರಂಭವಾಗಲಿದ್ದು, ವಿವಿಧ ರಾಮ್ ಲೀಲಾಗಳು ದೀಪಾವಳಿ ತಿಂಗಳವರೆಗೆ ಮುಂದುವರಿಯಲಿವೆ. ದೀಪಾವಳಿಯ ಮುನ್ನಾದಿನ ರಾಜ್ಯ ಸರ್ಕಾರ ಆಯೋಜಿಸುತ್ತಿರುವ ಮೂರು ದಿನಗಳ ದೀಪೋತ್ಸವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

    ಹೆಚ್ಚು ಜನ ಆಗಮಿಸುತ್ತಿರುವ ಹಿನ್ನೆಲೆ ಎಲ್ಲ ಹೋಟೆಲ್, ಅತಿಥಿ ಗೃಹ, ಧರ್ಮಶಾಲೆ, ವಸತಿ ಗೃಹ, ಹಾಸ್ಟೆಲ್ ಹಾಗೂ ಹೋಮ್ ಸ್ಟೇಗಳನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸರಿಗೆ ಹಾಗೂ ಸ್ಥಳೀಯ ಗುಪ್ತಚರ ಘಟಕಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಅಲ್ಲಿ ಕೆಲಸ ಮಾಡುತ್ತಿರುವ ಹಾಗೂ ಉಳಿದುಕೊಂಡಿರುವವರ ವಿವರ ಹಾಗೂ ವಸ್ತುಗಳನ್ನು ಸಹ ಪರಿಶೀಲಿಸುವಂತೆ ಸೂಚಿಸಲಾಗಿದೆ. ಬೆದರಿಕೆ ಕರೆ ಕುರಿತು ಮಾಹಿತಿ ಬಂದಿದೆ ಎಂದು ಗುಪ್ತಚರ ದಳ ವರದಿ ನೀಡಿದ ಹಿನ್ನೆಲೆ ಈ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ರಾಮ ಜನ್ಮ ಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನವೆಂಬರ್‍ನಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ ಸ್ಥಳೀಯ ಆಡಳಿತವು ಭದ್ರತಾ ವ್ಯವಸ್ಥೆ ಕುರಿತು ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸಹ ಸೂಚಿಸಲಾಗಿದೆ.

    ಇದೆಲ್ಲದರ ಮಧ್ಯೆ ಸರಯು ನದಿಯ ಮಾಲಿನ್ಯವನ್ನು ತಡೆಗಟ್ಟಲು ದುರ್ಗಾ ವಿಗ್ರಹಗಳನ್ನು ನದಿಯಲ್ಲಿ ವಿಸರ್ಜನೆ ಮಾಡದಂತೆ ಜಿಲ್ಲಾಡಳಿತ ಸೂಚಿಸಿದೆ. ಇದಕ್ಕೆ ಪರ್ಯಾಯವಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಹೊಂಡಗಳನ್ನು ಅಗೆಯಲಾಗಿದೆ. ಇದರಲ್ಲೇ ದೇವಿಯ ಭೂಮಿ ವಿಸರ್ಜನೆಯನ್ನು ನಡೆಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

  • ವರುಣನ ಅಬ್ಬರಕ್ಕೆ ಕೆರೆಯಂತಾದ ರಸ್ತೆ

    ವರುಣನ ಅಬ್ಬರಕ್ಕೆ ಕೆರೆಯಂತಾದ ರಸ್ತೆ

    ಹಾವೇರಿ: ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಶಿವಮೊಗ್ಗ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ.

    ನಿರಂತರ ಸುರಿಯುತ್ತಿರುವ ಮಳೆಯಿಂದ ನಗರದಲ್ಲಿನ ಬಹುತೇಕ ರಸ್ತೆಗಳು ನೀರಿನಿಂದ ತುಂಬಿ ಹರಿಯುತ್ತಿವೆ. ಅದರಲ್ಲೂ ಹಾವೇರಿ ನಗರದ ಪ್ರವಾಸಿ ಮಂದಿರದ ಬಳಿ ಇರುವ ಪ್ರಮುಖ ರಸ್ತೆಯಲ್ಲಿ ಸಂಪೂರ್ಣ ನೀರು ಹರಿಯುತ್ತಿದೆ. ರಸ್ತೆ ತುಂಬಿಕೊಂಡು ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

    ಚರಂಡಿಗಳು ಬ್ಲಾಕ್ ಆಗಿ ಚರಂಡಿ ನೀರು ಸಹ ರಸ್ತೆಗೆ ಬರುತ್ತಿರುವುದರಿಂದ ರಸ್ತೆ ಕೆರೆ ನೀರಿನಂತೆ ತುಂಬಿಕೊಂಡಿದೆ. ಮತ್ತೊಂದೆಡೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಕೆರೆ ತುಂಬಿ ಕೆರೆಯ ನೀರು ಗ್ರಾಮದ ರಸ್ತೆಗೆ ಹರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕೊಪ್ಪಳದಲ್ಲಿ ನಸುಕಿನ ಜಾವದಿಂದ ಸಿಡಿಲು ಮತ್ತು ಗುಡುಗು ಸಹಿತ ಮಳೆ ಆರಂಭವಾಗಿದ್ದು, ಜಿಟಿ ಜಿಟಿ ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇನ್ನೂ ಶಿವಮೊಗ್ಗದಲ್ಲಿ ಇಂದು ಮುಂಜಾನೆಯಿಂದ ನಿರಂತರವಾಗಿ ಮಳೆಯ ಆರ್ಭಟ ಜೋರಾಗಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಸರಾ ಆನೆಗಳ ತಾಲೀಮುಗೂ ತೊಂದರೆಯಾಗಿದೆ. ಮಳೆಯಲ್ಲೂ ಮಾವುತರು ಆನೆಗಳ ರಸ್ತೆ ತಾಲೀಮು ಅಂತ್ಯಗೊಳಿಸಿದ್ದಾರೆ. ನಿರಂತರ ವರ್ಷಧಾರೆಗೆ ದಸರಾ ಯೋಗ ನಡಿಗೆ, ಡೊಳ್ಳು ಸ್ಪರ್ಧೆ ಕೂಡ ರದ್ದಾಗಿದೆ.

    ನಾಡಹಬ್ಬ ದಸರಾ ಅಂಗವಾಗಿ ಶಿವಮೊಗ್ಗದಲ್ಲಿ ಯೋಗ ದಸರಾ ಆಯೋಜಿಸಲಾಗಿತ್ತು. ನಗರದ ಕುವೆಂಪು ರಂಗಮಂದಿರದ ಆವರಣದಲ್ಲಿ ನಡೆದ ಯೋಗ ದಸರಾಗೆ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿ ಯೋಗಾಭ್ಯಾಸ ಮಾಡಿದರು. ಯೋಗ ದಸರಾದಲ್ಲಿ ನೂರಾರು ಮಂದಿ ಯೋಗಪಟುಗಳು ಭಾಗವಹಿಸಿ ಸೂರ್ಯ ನಮಸ್ಕಾರ ಸೇರಿದಂತೆ ಹಲವು ಆಸನಗಳ ಅಭ್ಯಾಸ ನಡೆಸಿದರು. ಆದರೆ ಯೋಗಾಭ್ಯಾಸ ವೇಳೆ ಮಳೆ ಬಂದ ಹಿನ್ನೆಲೆಯಲ್ಲಿ ಯೋಗವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

  • ಹಬ್ಬಕ್ಕೆ ಹೂವು, ಹಣ್ಣು ರೇಟ್ ಹೈಕ್ – ಹಬ್ಬದ ಖುಷಿಗೆ ಬೆಲೆ ಏರಿಕೆಯ ಶಾಕ್

    ಹಬ್ಬಕ್ಕೆ ಹೂವು, ಹಣ್ಣು ರೇಟ್ ಹೈಕ್ – ಹಬ್ಬದ ಖುಷಿಗೆ ಬೆಲೆ ಏರಿಕೆಯ ಶಾಕ್

    ಬೆಂಗಳೂರು: ದಸರಾ ಹಬ್ಬಕ್ಕೆ ಈಗಾಗಲೇ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಸೋಮವಾರ ಹಾಗೂ ಮಂಗಳವಾರ ನಡೆಯುವ ಹಬ್ಬಕ್ಕೆ ಈಗಾಗಲೇ, ಭರ್ಜರಿ ಪ್ರಿಪರೇಷನ್ ನಡೆಸಲಾಗುತ್ತಿದೆ. ಇದರ ನಡುವೆ ಬೆಲೆ ಏರಿಕೆಯ ಬಿಸಿ ಜನರನ್ನು ಕಾಡುತ್ತಿದ್ದು, ದುಬಾರಿ ರೇಟ್ ಗೆ ಜನರು ಹೈರಾಣಾಗಿದ್ದಾರೆ.

    ಸೋಮವಾರ ಆಯುಧ ಪೂಜೆ ಇದ್ದು, ಮಂಗಳವಾರ ವಿಜಯದಶಮಿ ಇದೆ. ಇವೆರಡು ದಿನ ನವದುರ್ಗೆಯರ ಅರ್ಚನೆ ಮಾಡಿ, ವಾಹನಗಳಿಗೆ ಪೂಜೆ ಮಾಡುವ ಉತ್ಸಾಹದಲ್ಲಿ ಜನರಿದ್ದಾರೆ. ಹೀಗಾಗಿ ಕೆ.ಆರ್ ಮಾರ್ಕೆಟ್ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಅದರಲ್ಲೂ ವಾಹನಗಳಿಗೆ, ಆಯುಧಗಳಿಗೆ ದೃಷ್ಟಿ ತೆಗೆಯಲು ಕುಂಬಳಕಾಯಿ ವ್ಯಾಪಾರ ದುಪ್ಪಟ್ಟಾಗಿದ್ದು, ಕೆ.ಜಿಗೆ 150ರೂ ಆಗಿದೆ. ನವದುರ್ಗೆಯರ ಪೂಜೆಗೆ ಬೇಕಾಗುವ ಹೂವು ಹಾಗೂ ಹಣ್ಣುಗಳ ಬೆಲೆ ದುಬಾರಿಯಾಗಿದೆ.

    ಗಗನಕ್ಕೇರಿದ ಹೂವುಗಳ ಬೆಲೆ;
    ಕನಕಾಂಬರ ಹಿಂದಿನ ದರ ಕೆ.ಜಿಗೆ 600 ರೂ. ಇದ್ದು, ಈಗಿನ ದರ 1500 ರೂ. ಆಗಿದೆ. ದುಂಡುಮಲ್ಲಿಗೆ ಮೊದಲು ಕೆಜಿಗೆ 400ರೂ. ಇತ್ತು, ಆದರೆ ಈಗ 1,000ರೂ. ಆಗಿದೆ. ಕಾಕಡ ಹಿಂದಿನ ದರ 200ರೂ, ಈಗ 500ರೂ. ಆಗಿದೆ. ಜಾಜಿ ಮಲ್ಲಿಗೆ 150 ರೂ. ಆಗಿದ್ದು, ಈಗ 200ರೂ. ಆಗಿದೆ. ಸೇವಂತಿಗೆ 40 ರೂ. ಇತ್ತು, ಆದರೆ ಈಗ 150 ರೂ. ಆಗಿದೆ. ಸುಗಂಧರಾಜ ಮೊದಲು 100ರೂ. ಇತ್ತು, ಆದರೆ ಈಗ 300ರೂ. ಆಗಿದೆ. ಗುಲಾಬಿ ಹೂವಿನ ಹಿಂದಿನ ದರ 150 ಇದ್ದು, ಈಗಿನ ದರ 200ರೂ. ಆಗಿದೆ. ತುಳಸಿ ಒಂದು ಮಾರಿಗೆ 50ರೂ. ಆಗಿದ್ದು, ಮಾವಿನ ಎಲೆ ಒಂದು ಕಟ್ಟಿಗೆ 40ರೂ. ಆಗಿದೆ.

    ಹಣ್ಣುಗಳ ಬೆಲೆಗಳನ್ನು ನೋಡೋದಾದರೆ;
    ಸೇಬುಹಣ್ಣು ಮೊದಲು 80ರೂ. ಇದ್ದು, ಈಗಿನ ಬೆಲೆ 120ರೂ. ಆಗಿದೆ. ಕಿತ್ತಳೆ ಹಿಂದಿನ ದರ 60 ರೂ. ಇದ್ದು, ಈಗ 80ರೂ. ಆಗಿದೆ. ಮೊಸಂಬಿ ಮೊದಲು 70ರೂ. ಇದ್ದು, ಈಗ 100ರೂ. ಹೆಚ್ಚಾಗಿದೆ. ಬಾಳೆಹಣ್ಣಿನ ಹಿಂದಿನ ದರ 50ರೂ, ಆದರೆ ಈಗ 80ರೂ. ಆಗಿದೆ. ಅನಾನಸ್ ಮೊದಲು 30ರೂ. ಇದ್ದು, ಈಗ 60 ರೂ. ಆಗಿದೆ. ದ್ರಾಕ್ಷಿ ಹಣ್ಣಿನ ಹಿಂದಿನ ದರ 90ರೂ. ಇದ್ದು, ಈಗ 120ರೂ. ಆಗಿದೆ. ಅಲ್ಲದೆ ದಾಳಿಂಬೆ ಮೊದಲು 80 ರೂ. ಇತ್ತು, ಆದರೆ ಈಗ 100ರೂ. ಆಗಿದೆ.

    ಬೆಲೆ ಏರಿಕೆಗೆ ಕಾರಣಗಳು;
    * ಅತಿಯಾದ ಮಳೆ
    * ಹೂವು-ಹಣ್ಣುಗಳ ಇಳುವರಿ ಕಡಿಮೆಯಾಗಿರುವುದು
    * ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಸಪ್ಲೈ ಆಗದೇ ಇರುವುದು

  • ನಮ್ಮ ರಾಮ ಬೇರೆ, ಬಿಜೆಪಿ ರಾಮ ಬೇರೆ- ಕಾಂಗ್ರೆಸ್ ಸಚಿವ

    ನಮ್ಮ ರಾಮ ಬೇರೆ, ಬಿಜೆಪಿ ರಾಮ ಬೇರೆ- ಕಾಂಗ್ರೆಸ್ ಸಚಿವ

    ರಾಯಪುರ: ಬಿಜೆಪಿ ರಾಮನ ಹೆಸರಿನಲ್ಲಿ ಮತ ಪಡೆಯುತ್ತಿದೆ. ನಮ್ಮ ರಾಮನೇ ಬೇರೆ ಅವರ ರಾಮನೇ ಬೇರೆ ಎಂದು ಪಂಜಾಬಿನ ಕಾಂಗ್ರೆಸ್ ಸಚಿವ ರವೀಂದ್ರ ಚೌಬೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಮ್ಮ ರಾಮ ಮತ್ತು ಅವರ ರಾಮನ ನಡುವೆ ದೊಡ್ಡ ವ್ಯತ್ಯಾಸವಿದೆ. ಬಿಜೆಪಿಗೆ ರಾಮ ಎಂದರೆ ದೇಣಿಗೆ ಸಂಗ್ರಹಿಸಲು ಮತ್ತು ವ್ಯಾಪಾರ ಮಾಡಲು ಒಂದು ಮಾರ್ಗ. ರಾಮ್‍ಶಿಲಾ ಪೂಜೆ ಹೆಸರಿನಲ್ಲಿ ಮತ ಕೇಳುವುದು. ರಾಮನ ಹೆಸರಿನಲ್ಲಿ ಜನಸಮೂಹದ ಹತ್ಯೆ ಮಾಡುವುದಾಗಿದೆ ಎಂದು ಚೌಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್‍ನ ರಾಮನೆಂದರೆ ಶಬರಿಯ ರಾಮ, ನಿಶಾದ್ ರಾಜ್ ಅವರ ರಾಮ, ವನವಾಸದ ರಾಮ, ಮರ್ಯಾದಾ ಪುರುಷೋತ್ತಮ ರಾಮ. ದೇಶದ ಮೂಲೆ ಮೂಲೆಯಲ್ಲಿಯೂ ರಾಮನಿದ್ದಾನೆ. ರಾಮಲೀಲಾ ಆಯೋಜಿಸುವುದು ಕಾರ್ಯಕ್ರಮದ ಒಂದು ಭಾಗವಾಗಿರುತ್ತದೆ ಅಷ್ಟೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    9 ದಿನಗಳ ನವರಾತ್ರಿಯ ಸಂದರ್ಭದಲ್ಲಿ ದೇಶಾದ್ಯಂತ ರಾಮಾಯಣದ ನಾಟಕಗಳು ಹಾಗೂ ಪೂಜೆಯನ್ನು ನಡೆಸಲಾಗುತ್ತದೆ. ದಸರಾ ಹಬ್ಬದ 10ನೇ ದಿನವಾದ ವಿಜಯದಶಮಿಯಂದು ರಾವಣ, ಕುಂಭಕರ್ಣ ಹಾಗೂ ಮೇಘನಾದ್ ಪ್ರತಿಕೃತಿಗಳನ್ನು ದಹಿಸಲಾಗುತ್ತದೆ.

  • ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ

    ಚಂದನ್-ನಿವೇದಿತಾ ನಿಶ್ಚಿತಾರ್ಥ ಮಾಡ್ಕೊಂಡಿರೋದು ಅಕ್ಷಮ್ಯ ಅಪರಾಧ- ವಿ.ಸೋಮಣ್ಣ

    – ಅವರಿಬ್ಬರಿಗೂ ಚಾಮುಂಡಿ ತಾಯಿಯೇ 6 ತಿಂಗ್ಳಲ್ಲಿ ಶಿಕ್ಷೆ ನೀಡ್ತಾಳೆ

    ಮೈಸೂರು: ಯುವ ದಸರಾ ವೇದಿಕೆಯಲ್ಲಿ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಿಶ್ಚಿತಾರ್ಥ ಮಾಡಿಕೊಂಡಿರುವುದು ಅಕ್ಷಮ್ಯ ಅಪರಾಧ. ನಾಡಿನ ಅಧಿದೇವತೆಯ ನಾಡಹಬ್ಬದ ವೇದಿಕೆಯಲ್ಲಿ ಈ ರೀತಿ ಆಗಬಾರದಿತ್ತು ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಿಡಿ ಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪೆಸಗಿರುವ ಅವರಿಬ್ಬರಿಗೂ ಬರುವ ಆರು ತಿಂಗಳಲ್ಲಿ ದೇವಿಯೇ ಶಿಕ್ಷೆ ನೀಡುತ್ತಾರೆ. ಈ ರೀತಿ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದಕ್ಕೆ ದಸರಾ ಉಪಸಮಿತಿ ಕಾರಣವಲ್ಲ. ಈ ಸಂಬಂಧ ಮೈಸೂರು ಜಿಲ್ಲಾ ಅಧೀಕ್ಷಕ ಹಾಗೂ ಯುವ ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆಗಿರುವ ರಿಷ್ಯಂತ್ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾರಿಗೆ ಕಾರಣ ಕೇಳಿ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಲಾಗುತ್ತದೆ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

    ತಪ್ಪಿತಸ್ಥರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಕಳೆದ ರಾತ್ರಿ ಯುವ ದಸರಾ ವೇದಿಕೆಯಲ್ಲಿ ನಡೆದ ಘಟನೆಗೆ ನಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ. ಚಂದನ್ ಶೆಟ್ಟಿ ಸುಸಂಸ್ಕೃತ ವ್ಯಕ್ತಿ ಎಂದುಕೊಂಡಿದ್ದೆ. ಆತ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಂಗಳೂರಿನ ನಾಗರಬಾವಿಯ ನಿವಾಸಿ. ಕಳೆದ ರಾತ್ರಿ ಯುವ ದಸರಾ ವೇದಿಕೆಯಲ್ಲಿ ಆತ ಮಾಡಿರುವುದು ಅತ್ಯಂತ ಹೇಯ ಕೃತ್ಯ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

    ಪಾರಂಪರಿಕ ಮತ್ತು ಸಾಂಪ್ರದಾಯಿಕ ವೇದಿಕೆಯನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳಬಾರದಿತ್ತು. ನಾನು ಸಹ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ನಾನು ಅರಮನೆ ಕಾರ್ಯಕ್ರಮಕ್ಕೆ ಹೊರಡಲು ಮುಂದಾದಾಗ, ಚಂದನ್ ಶೆಟ್ಟಿ, ನಿವೇದಿತಾ ಪೋಷಕರು ನನ್ನನ್ನು ತಡೆದು ಇನ್ನೂ ಸ್ವಲ್ಪ ಸಮಯ ಇರುವಂತೆ ಒತ್ತಾಯಿಸಿದರು. ಆದರೆ ನಾನು ಅರಮನೆಗೆ ಹೋಗಬೇಕಾಗಿದ್ದರಿಂದ ಅಲ್ಲಿಂದ ನಿರ್ಗಮಿಸಿದೆ. ನಾನು ಹೊರಟ ನಂತರ ಈ ಘಟನೆ ನಡೆದಿರುವುದು ನನ್ನ ಗಮನಕ್ಕೆ ಬಂತು ಎಂದು ವಿವರಿಸಿದ್ದಾರೆ.

    ಯುವ ದಸರಾ ವೇದಿಕೆಯಲ್ಲಿ ಶುಕ್ರವಾರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸಹ ಯುವ ದಸರಾ ವೇದಿಕೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

    ಈ ಕುರಿತು ಪ್ರತಿಕ್ರಿಯಿಸಿದ ಗಾಯಕ ಚಂದನ್ ಶೆಟ್ಟಿ, ತಪ್ಪಾಗಿದ್ದರೆ ಕ್ಷಮೆ ಇರಲಿ. ಪ್ರೇಮ ನಿವೇದನೆ ಮಾಡಿಕೊಳ್ಳಲು ಒಳ್ಳೆಯ ದಿನ ಅಂದುಕೊಂಡು, ನನ್ನ ಜೀವನದಲ್ಲಿ ಸಹ ಪ್ರಮುಖ ದಿನ ಎಂದುಕೊಂಡು ಮೈಸೂರಿನ ಯುವ ದಸರಾದಲ್ಲಿ ಈ ರೀತಿ ಮಾಡಿದೆ. ನನಗನ್ನಿಸಿದ್ದನ್ನು ನಾನು ಹೇಳಿದೆ, ಈ ಕುರಿತು ತಪ್ಪಾಗಿದ್ದಲ್ಲಿ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಶುಕ್ರವಾರದ ಆ ಕಾರ್ಯಕ್ರಮಕ್ಕೆ ಸೇರಿದವರಲ್ಲಿ ಬಹುತೇಕರು ನಮ್ಮ ಹಿತೈಶಿಗಳು. ಸಪ್ರ್ರೈಸ್ ಕೊಡಬೇಕು ಎಂದುಕೊಂಡು, ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದೆ ಎಂದು ತಿಳಿಸಿದ್ದರು.

    ಆಗ ನನ್ನ ಹಾಗೂ ಅಲ್ಲಿ ಸೇರಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಖುಷಿ ಇತ್ತು. ಅಂತಹ ದೊಡ್ಡ ಕಾರ್ಯಕ್ರಮದಲ್ಲಿ ಸಪ್ರ್ರೈಸ್ ನೀಡುವುದರ ಜೊತೆಗೆ ನಮ್ಮಿಬ್ಬರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಬೇಕಾಗಿತ್ತು. ಈ ರೂಮರ್ಸ್‍ಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ವೇದಿಕೆಯ ಮೇಲೆ ಪ್ರಪೋಸ್ ಮಾಡಿದೆ. ನಾನೂ ಮೈಸೂರಿನಲ್ಲಿಯೇ ಓದಿದವನು, ಹೀಗಾಗಿ ದಸರಾದಲ್ಲಿ ಪ್ರಪೋಸ್ ಮಾಡಿದೆ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು.

  • ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

    ತಪ್ಪಾಗಿದ್ದರೆ ಕ್ಷಮೆ ಇರಲಿ, ಸರ್ಪ್ರೈಸ್ ಕೊಡಲು ಈ ರೀತಿ ಮಾಡಿದೆ: ಚಂದನ್ ಶೆಟ್ಟಿ

    – 2020ರೊಳಗೆ ಚಂದನ್-ನಿವೇದಿತಾ ಕಲ್ಯಾಣ

    ಬೆಂಗಳೂರು: ತಪ್ಪಾಗಿದ್ದರೆ ಕ್ಷಮೆ ಇರಲಿ, ಪ್ರೇಮ ನಿವೇದನೆ ಮಾಡಿಕೊಳ್ಳಲು ಒಳ್ಳೆಯ ದಿನ ಅಂದುಕೊಂಡು, ನನ್ನ ಜೀವನದಲ್ಲಿ ಸಹ ಪ್ರಮುಖ ದಿನ ಎಂದುಕೊಂಡು ಮೈಸೂರಿನ ಯುವ ದಸರಾದಲ್ಲಿ ಈ ರೀತಿ ಮಾಡಿದೆ ಎಂದು ಗಾಯಕ ಚಂದನ್ ಶೆಟ್ಟಿ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

    ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾದ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಚಂದನ್ ಶೆಟ್ಟಿ ಕ್ಷಮೆಯಾಚಿಸಿದ್ದಾರೆ. ನನಗನ್ನಿಸಿದ್ದನ್ನು ನಾನು ಹೇಳಿದೆ, ಈ ಕುರಿತು ತಪ್ಪಾಗಿದ್ದಲ್ಲಿ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಶುಕ್ರವಾರದ ಆ ಕಾರ್ಯಕ್ರಮಕ್ಕೆ ಸೇರಿದವರಲ್ಲಿ ಬಹುತೇಕರು ನಮ್ಮ ಹಿತೈಶಿಗಳು. ಸರ್ಪ್ರೈಸ್ ಕೊಡಬೇಕು ಎಂದುಕೊಂಡು, ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದೆ ಎಂದು ತಿಳಿಸಿದರು.

    ಆಗ ನನ್ನ ಹಾಗೂ ಅಲ್ಲಿ ಸೇರಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಖುಷಿ ಇತ್ತು. ಅಂತಹ ದೊಡ್ಡ ಕಾರ್ಯಕ್ರಮದಲ್ಲಿ ಸರ್ಪ್ರೈಸ್ ನೀಡುವುದರ ಜೊತೆಗೆ ನಮ್ಮಿಬ್ಬರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಬೇಕಾಗಿತ್ತು. ಈ ರೂಮರ್ಸ್‍ಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ವೇದಿಕೆಯ ಮೇಲೆ ಪ್ರಪೋಸ್ ಮಾಡಿದೆ. ನಾನೂ ಮೈಸೂರಿನಲ್ಲಿಯೇ ಓದಿದವನು, ಹೀಗಾಗಿ ದಸರಾದಲ್ಲಿ ಪ್ರಪೋಸ್ ಮಾಡಿದೆ ಎಂದು ತಮ್ಮ ನಿಲುವನ್ನು ತಿಳಿಸಿದ್ದಾರೆ.

    ಈಗಾಗಲೇ ಪ್ರಪೋಸ್ ಮಾಡಿಯಾಗಿದೆ. ಹೆಚ್ಚು ಕಾಯಿಸಲು ನನಗೆ ಇಷ್ಟ ಇಲ್ಲ. ಹೀಗಾಗಿ 2020ರೊಳಗೆ ಮದುವೆಯಾಗುವ ಕುರಿತು ಯೋಜನೆ ರೂಪಿಸಿದ್ದೇವೆ ಎಂದು ಇದೇ ವೇಳೆ ತಮ್ಮ ಮದುವೆಯ ಕುರಿತ ಗುಟ್ಟು ಬಿಚ್ಚಿಟ್ಟರು.

    ಯುವ ದಸರಾ ವೇದಿಕೆಯಲ್ಲೇ ಗಾಯಕ ಚಂದನ್ ಶೆಟ್ಟಿ-ನಿವೇದಿತಾಗೌಡ ಎಂಗೇಜ್ ಆಗಿದ್ದು, ಝಗಮಗಿಸುವ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಬೆರಳಿಗೆ ಉಂಗುರ ತೊಡಿಸಿ ನಿನ್ನನ್ನೇ ಮದುವೆಯಾಗುತ್ತೇನೆಂದು ಘೋಷಿಸಿದ್ದಾರೆ.

    ಪ್ರಪೋಸ್‍ಗೂ ಮುನ್ನ ಚಂದನ್‍ಶೆಟ್ಟಿ ಬಿಗ್‍ಬಾಸ್ ಮನೆಯಲ್ಲಿ ನಿವೇದಿತಾ ಗೌಡ ಅವರಿಗೆ ಬರೆದಿದ್ದ `ಗೊಂಬೆ ಗೊಂಬೆ’ ಎಂಬ ಸಾಂಗ್ ಹಾಡಿದರು. ಇದಕ್ಕೆ ವೇದಿಕೆಯ ಮೇಲೆ ನಿವೇದಿತಾಗೌಡ ಅವರು ಸಹ ಸ್ಟೆಪ್ ಹಾಕಿದರು.

    ಬಿಗ್ ಬಾಸ್ ಮನೆಯಲ್ಲಿನ 105 ದಿನಗಳಲ್ಲಿ ನಮ್ಮಿಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. 105 ದಿನಗಳಲ್ಲಿ ನಿವೇದಿತಾ ನನ್ನನ್ನು ಅರ್ಥ ಮಾಡಿಕೊಂಡಷ್ಟು ಯಾರು ಮಾಡಿಕೊಳ್ಳಲಿಲ್ಲ. ಹಾಗಾಗಿ ನನ್ನ ಜೀವನದಲ್ಲಿ ನಿವೇದಿತಾ ಮುಂದಿನ ದಿನಗಳಲ್ಲಿ ಜೊತೆಯಾಗಿರಲಿ ಎಂದು ಇಂದು ನಿಮ್ಮೆಲ್ಲರ ಸಾಕ್ಷಿಯಾಗಿ ಪ್ರೇಮ ನಿವೇದನೆಯನ್ನ ಸಲ್ಲಿಸುತ್ತಿದ್ದೇನೆ ಎಂದು ಮೊಳಕಾಲೂರಿ ಉಂಗುರ ಹಿಡಿದು ವಿಲ್ ಯು ಮ್ಯಾರಿ ಮೀ ಎಂದು ಚಂದನ್ ಪ್ರಪೋಸ್ ಮಾಡಿದ್ದರು.

    ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಇಂತಹ ಖಾಸಗಿ ಕಾರ್ಯಕ್ರಮಗಳಿಗೆ ಯುವ ದಸರಾ ವೇದಿಕೆಯೇ ಆಗಬೇಕಿತ್ತಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

    ಸೆಲೆಬ್ರಿಟಿ ಜೋಡಿಯ ನಡೆಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಯೋಜಕರನ್ನು ಪ್ರಶ್ನಿಸುತ್ತಿದ್ದಾರೆ. ವಾಟ್ಸಪ್, ಫೇಸ್‍ಬುಕ್‍ನಲ್ಲಿ ಯುವದಸರಾ ವೇದಿಕೆ ಕಾರ್ಯಕ್ರಮ ಟೀಕೆಗೆ ಗುರಿಯಾಗಿದೆ. ನಾವೇನು ದಸರಾ ನೋಡಲು ಬಂದಿದ್ದೇವಾ ಅಥವಾ ನಿಶ್ಚಿತಾರ್ಥ ನೋಡಲು ಬಂದಿದ್ದೇವಾ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

    ಸಚಿವ ವಿ.ಸೋಮಣ್ಣ ಹೆಸರನ್ನು ಹೇಳಿ ಸಹ ಟೀಕೆ ಮಾಡುತ್ತಿದ್ದಾರೆ. ನೆರೆ ಪರಿಹಾರಕ್ಕೆ ದುಡ್ಡಿಲ್ಲ ಅಂತಾರೆ ನಿಶ್ವಿತಾರ್ಥ ಮಾಡೋಕೆ ದುಡ್ಡೆಲ್ಲಿಂದ ಬಂತು? ಸಚಿವ ಸೋಮಣ್ಣರ ಕರಾಮತ್ತು ದಸರಾದಲ್ಲಿ ಎಂಗೇಜ್ಮೆಂಟು. ಯುವ ದಸರಾದಲ್ಲಿ ನಿಶ್ಚಿತಾರ್ಥ, ದಸರಾದಲ್ಲಿ ಮದುವೆ ಆಹಾರ ಮೇಳದಲ್ಲಿ ಬೀಗರ ಊಟ ಎಂಬಿತ್ಯಾದಿ ಸಾಲುಗಳನ್ನು ಸ್ಟೇಟಸ್ ಹಾಗೂ ಪೋಸ್ಟ್ ಹಾಕುತ್ತಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಯುವದಸರಾ ಉಪಸಮಿತಿ ಮಾಡಿದ್ದು ಸರೀಯೇ ಎಂದು ಪ್ರಶ್ನಿಸಿದ್ದಾರೆ.