Tag: ದಸರಾ

  • ಜಂಬೂ ಸವಾರಿ ದಿನ ಮೈಸೂರಿಗೆ 1 ಲಕ್ಷಕ್ಕೂ ಅಧಿಕ ಜನರ ಭೇಟಿ

    ಜಂಬೂ ಸವಾರಿ ದಿನ ಮೈಸೂರಿಗೆ 1 ಲಕ್ಷಕ್ಕೂ ಅಧಿಕ ಜನರ ಭೇಟಿ

    ಮೈಸೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಮೈಸೂರಿಗೆ ಭೇಟಿ ನೀಡಿದ್ದಾರೆ.

    ದಸರಾ ದಿನದಂದು ಮೈಸೂರು ರೈಲ್ವೆ ನಿಲ್ದಾಣದಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಹೆಚ್ಚುವರಿ ಜನ ಸಂದಣಿಯನ್ನು ಸುಲಭವಾಗಿ ನಿರ್ವಹಿಸಲಾಗಿದೆ. ಸಾಮಾನ್ಯವಾಗಿ ಪ್ರತಿದಿನ ಈ ರೈಲ್ವೆ ನಿಲ್ದಾಣದಲ್ಲಿ 55ರಿಂದ 60 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈಗ ಈ ಸಂಖ್ಯೆ ಡಬಲ್ ಆಗುವ ಮೂಲಕ ಜನರು ವಿಶ್ವಪ್ರಸಿದ್ಧ ದಸರಾ ಮೆರವಣಿಗೆಗೆ ಸಾಕ್ಷಿ ಆಗಿದ್ದಾರೆ. ಮೈಸೂರು ವಿಭಾಗದ ಅಧಿಕಾರಿಗಳು ಇದನ್ನು ಸುಲಭವಾಗಿ ನಿಭಾಯಿಸಿದ್ದಾರೆ.

    ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ:
    * ಪ್ರತಿದಿನ 7 ಟಿಕೆಟ್ ಕೌಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಮಂಗಳವಾರ ಪ್ರಯಾಣಿಕರ ಅನಕೂಲಕ್ಕಾಗಿ 16 ಟಿಕೆಟ್ ಕೌಂಟರ್ ತೆರೆಯಲಾಗಿತ್ತು.
    * 15 ಸಿಬ್ಬಂದಿಗಳ ಜೊತೆ 80 ಹೆಚ್ಚುವರಿ ಆರ್ ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
    * ಪ್ರತಿದಿನ 200 ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, 800 ಹೆಚ್ಚುವರಿ ವಾಹನಗಳನ್ನು ನಿರ್ವಹಿಸಲಾಗಿದೆ.
    * ಭದ್ರತೆಗಾಗಿ 75 ಹೆಚ್ಚುವರಿ ಸಿಸಿಟವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
    * ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿಯನ್ನು ಒದಗಿಸಲಾಗಿದೆ.
    * ಎಲ್ಲಾ ಪ್ರಯಾಣಿಕ ರೈಲುಗಳಲ್ಲಿ ಎರಡು ಸಾಮಾನ್ಯ ಬೋಗಿಗಳ ಹೆಚ್ಚುವರಿ ಜೋಡಣೆ ಮಾಡಲಾಗಿತ್ತು.
    * ನಿಲ್ದಾಣದಲ್ಲಿ ಹೊಸ ಲುಕ್ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ನೋಡಿ ಪ್ರಯಾಣಿಕರು ಹೆಚ್ಚು ಆಕರ್ಷಿತರಾದರು.
    * ನಿಗದಿಪಡಿಸಿದ ಪಿಕಪ್ ಮತ್ತು ಡ್ರಾಪ್ ಸ್ಥಳದಲ್ಲಿ ಸುಗಮ ಸಂಚಾರ ನಿರ್ವಹಣೆ ಆಗಿದೆ.
    * ಟ್ರೆಂಡಿಂಗ್‍ನಲ್ಲಿ ಇರುವ “ಐ ಲವ್ ಮೈಸೂರು” ಸೆಲ್ಫಿ ಸ್ಪಾಟ್‍ನಲ್ಲಿ ಎಲ್ಲಾ ಪ್ರಯಾಣಿಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
    * ನವೀಕರಿಸಿದ ನಿಲ್ದಾಣದ ಕಟ್ಟಡ ಮತ್ತು ತೆರೆದ ಸ್ಥಳವನ್ನು ನೋಡಿ ಸೆಲ್ಫಿ ಕ್ಲಿಕ್ ಮಾಡದೇ ಯಾವೊಬ್ಬ ಪ್ರಯಾಣಿಕರು ನಿಲ್ದಾಣದಿಂದ ಹೊರಹೋಗಲಿಲ್ಲ. ಮೈಸೂರು ನಿಲ್ದಾಣವು ಪ್ರಯಾಣಿಕರ ಮನಸ್ಸಿನಲ್ಲಿ ಕೆತ್ತಲಾಗಿದೆ ಮತ್ತು ಕೆಲವು ಪ್ರಯಾಣಿಕರು ವಿವರಿಸಿದಂತೆ ನೆನಪಿನಲ್ಲಿಟ್ಟುಕೊಳ್ಳುವ ಅವರ ನೆನಪುಗಳ ಒಂದು ಭಾಗವಾಗಲಿದೆ.

  • ಪೊಲೀಸ್ ಕಮೀಷನರ್, ಡಿಸಿಪಿ ಬಳಿ ಕ್ಷಮೆಯಾಚಿಸಿದ್ದೇನೆ: ಸಂಸದ ಪ್ರತಾಪ್

    ಪೊಲೀಸ್ ಕಮೀಷನರ್, ಡಿಸಿಪಿ ಬಳಿ ಕ್ಷಮೆಯಾಚಿಸಿದ್ದೇನೆ: ಸಂಸದ ಪ್ರತಾಪ್

    ಮೈಸೂರು: ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ಅವರ ಬಳಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಪ್ರತಾಪ್, “ಕಾನ್‌ಸ್ಟೇಬಲ್‌ನಿಂದ ಕಮೀಷನರ್, ಎಸ್‍ಪಿವರೆಗೂ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮಾಧ್ಯಮದವರು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಬೇಡಿ. ಏಕೆಂದರೆ ಸೆಪ್ಟೆಂಬರ್ 27ರಂದು ಚಾಮುಂಡಿಗೆ ಪುಷ್ಪಾರ್ಚನೆ ಮಾಡಿ ನಮ್ಮ ಅಧಿದೇವತೆ ಎಂದು ನಾವು ಹೊತ್ತು ಮೆರೆಯುತ್ತೇವೆ. ಹಾಗೆಯೇ ಚಾಮುಂಡಿಗೆ ಅವಳು, ಇವಳು ಎಂದು ಮಾತನಾಡಿ ಪುಷ್ಪಾರ್ಚನೆ ಮಾಡಿದರೆ ಆ ದೇವರು ಹಾಗೂ ಸಮಾಜವನ್ನು ಮೆಚ್ಚುವುದಿಲ್ಲ. ಅದನ್ನು ತಡೆ ಹಾಕುವ ಕೆಲಸವನ್ನು ನಾವು ಮಾಡಿದ್ದೇವೆ. ಅದಕ್ಕೆ ಅನ್ಯತಾ ಬಯಸುವ ಅಗತ್ಯವಿಲ್ಲ ಎಂದರು.

    ನಾನು ಈಗಾಗಲೇ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹಾಗೂ ಡಿಸಿಪಿ ಮುತ್ತುರಾಜ್ ಅವರ ಬಳಿ ವೈಯಕ್ತಿಕವಾಗಿ ಹೋಗಿ ಅಂದು ಮನಸ್ಸಿಗೆ ನೋವಾಗಿತ್ತು, ಘಾಸಿಯಾಗಿತ್ತು. ಇಷ್ಟಾದರೂ ಸಹ ಅಪಚಾರ ಮಾಡುವ ಸಲುವಾಗಿ ಶಾಮಿಯಾನ ಹಾಕುತ್ತಿದ್ದರು. ಆ ಸಂದರ್ಭದಲ್ಲಿ ನಾನು ಆವೇಶದಲ್ಲಿ ಈ ರೀತಿ ಮಾತನಾಡಿದ್ದೇನೆ ಕ್ಷಮಿಸಿ ಎಂದು ಕೇಳಿದ್ದೇನೆ. ನಾವೆಲ್ಲ ಒಂದೇ ಕುಟುಂಬದಂತೆ ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪ್ರತಾಪ್ ಸಿಂಹ ಅವರ ಸ್ಪಷ್ಟನೆ ನೀಡಿದರು.

    ನಡೆದಿದ್ದೇನು?
    ಬೆಟ್ಟದ ಮೇಲಿನ ಮಹಿಷಾಸುರ ಮೂರ್ತಿ ಬಳಿ ಮಹಿಷ ದಸರಾ ನಡೆಸುವ ಸಲುವಾಗಿ ಶಾಮಿಯಾನ, ವೇದಿಕೆ ಹಾಕಿ ತಯಾರಿ ಮಾಡಲಾಗುತ್ತಿತ್ತು. ಈ ವಿಷಯ ತಿಳಿದು ಪ್ರತಾಪ್ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ವೇದಿಕೆ ಹಾಕೋದಕ್ಕೆ ಯಾರು ನಿಮಗೆ ಅನುಮತಿ ಕೊಟ್ಟರು? ಇದನ್ನು ಮೊದಲು ಇಲ್ಲಿಂದ ತೆಗೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಹಾಕುವಾಗ ನೀವು ಏನು ಮಾಡುತ್ತಿದ್ರಿ ಪೊಲೀಸರೇ, ನಿಮ್ಮಿಂದ ಇಂತಹ ಕೆಲಸ ನಿರೀಕ್ಷೆ ಮಾಡಿರಲಿಲ್ಲ ಎಂದು ಅಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಅಲ್ಲದೆ ಪೊಲೀಸ್ ಕಮೀಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿದ್ದರು.

    ಆಗ ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಗ್ರಾಮ ಪಂಚಾಯ್ತಿ ಅವರು ಮಾಡಿರುವ ಕೆಲಸ ಎಂದು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದರು. ದಸರಾ ಉತ್ಸವ ಕಾರ್ಯಕ್ರಮಗಳಿಗೆ ವೇದಿಕೆ ಹಾಕುವ ಶಾಮಿಯಾನ ಮಾಲೀಕ ಶಫಿ ನೇತೃತ್ವದಲ್ಲಿ ಈ ವೇದಿಕೆ ಹಾಕಲಾಗಿತ್ತು. ಹೀಗಾಗಿ ಕೂಡಲೇ ಟ್ರಕ್ ತಂದು ಇದನ್ನು ತೆರವುಗೊಳಿಸಬೇಕು. ಇಲ್ಲವಾದರೆ ಅರಮನೆ ಆವರಣದಿಂದ ನಿನ್ನ ಓಡಿಸುತ್ತೇನೆಂದು ಶಾಮಿಯಾನ ಮಾಲೀಕರಿಗೆ ಪ್ರತಾಪ್ ಸಿಂಹ ಅವಾಜ್ ಹಾಕಿದ್ದರು.

  • ಮೈಲಾರಲಿಂಗಸ್ವಾಮಿಯ ಕಾರ್ಣಿಕ- ಸರ್ವರು ಎಚ್ಚರದಿಂದಿರಿ ಎಂದು ಭವಿಷ್ಯ

    ಮೈಲಾರಲಿಂಗಸ್ವಾಮಿಯ ಕಾರ್ಣಿಕ- ಸರ್ವರು ಎಚ್ಚರದಿಂದಿರಿ ಎಂದು ಭವಿಷ್ಯ

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಸರಸ್ವತಿಪುರಂನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣಿಕ ಇಂದು ಮುಂಜಾನೆ ಸಂಪನ್ನಗೊಂಡಿದ್ದು, ಕಾರ್ಣಿಕ ನಡೆಯುವಾಗ ಸರ್ವರು ಎಚ್ಚರದಿಂದಿರಿ ಎಂದು ದಶರಥ ಪೂಜಾರರು ಎಚ್ಚರಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ 5 ಗಂಟೆಗೆ ಸರಸ್ವತಿಪುರಂನ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ಪೂಜಾರರು ಕಾರ್ಣಿಕದ ನುಡಿಗಳನ್ನಾಡಿದರು. ರಾಷ್ಟ್ರ ಮತ್ತು ರಾಜ್ಯದ ಆಗುಹೋಗುಗಳ ಮೇಲೆ ಶ್ರೀ ಮೈಲಾರಲಿಂಗಸ್ವಾಮಿ ದಶರಥ ಪೂಜಾರರ ಬಾಯಲ್ಲಿ ಬಂದ ಕಾರ್ಣಿಕದ ನುಡಿಗಳನ್ನಾಡಿದ್ದಾರೆ. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಪಂಜರದ ಗಿಳಿಗಳು ಹಾರಿ ಹೋದಾವು. ಕಟ್ಟಿದ ಕೋಟೆ ಪರರದಾಯಿತು. ಉತ್ತಮ ಮಳೆ ಸುರಿಸಿದಾವು. ಸರ್ವರು ಎಚ್ಚರದಿಂದಿರಬೇಕು ಎಂದು ಹೇಳಿದರು.

    ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗ ಕುಣಿತ ಅದ್ಭುತವಾಗಿರುವುದನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ನಾ ಮುಂದು ತಾ ಮುಂದು ಎನ್ನುತ್ತಿರುತ್ತಾರೆ. ನಂತರ ಮೈಲಾರಲಿಂಗ ಸ್ವಾಮಿ ಪೂಜಾರರನ್ನು ಕಾರ್ಣಿಕ ನುಡಿಯಲು ಪ್ರೇರೆಪಿಸುತ್ತಿದ್ದಂತೆ ಗೊರವಯ್ಯನವರ ಢಮರುಗ ಶಬ್ದ ಎಂತವರನ್ನು ಭಕ್ತಿಯ ಅಲೆಯಲ್ಲಿ ತೇಲಿಸುತ್ತದೆ.

    ಮಹಾನವಮಿ ಬಯಲಿನಲ್ಲಿ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜಯಘೋಷ ಮೊಳಗಿಸಿ, ಕಾರ್ಣಿಕ ನುಡಿಯುವ ಸಮಯ ಬಂದಾಗ ಹುಟ್ಟಿದ ಕೂಸು ಸಹ ಅಳು ನಿಲ್ಲಿಸುತ್ತದೆ ಎಂಬ ಮಾತಿದೆ. ಇಲ್ಲಿ ನುಡಿಯುವ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರಲಿಂಗನ ಕಾರ್ಣಿಕ ಕೇಳಿ ಅಂಬನ್ನು ಹೊಡೆದಾಗ ದಸರಾ ಮುಕ್ತಾಯವಾಗುತ್ತದೆ.

  • ಕೋಲಾರದಲ್ಲಿ ಬನ್ನಿ ಮರ ಕಡಿದು ದಸರಾ ಆಚರಣೆ

    ಕೋಲಾರದಲ್ಲಿ ಬನ್ನಿ ಮರ ಕಡಿದು ದಸರಾ ಆಚರಣೆ

    ಕೋಲಾರ: ನಗರದ ಹೊರವಲಯದ ಕೊಂಡರಾಜನಹಳ್ಳಿ ಬಳಿ ವಿಜಯದಶಮಿ ಪ್ರಯುಕ್ತ ಬನ್ನಿ ಮರವನ್ನು ಕಡಿದು ದಸರಾವನ್ನು ಆಚರಿಸಲಾಯಿತು

    ಕೋಲಾರ ಉಪ ವಿಭಾಗಾಧಿಕಾರಿ ಸೋಮಶೇಖರ್ ಮೈಸೂರು ಪೇಟ ಧರಿಸಿ ಕೋಲಾರ ತಾಲೂಕು ಆಡಳಿತ ವಿಜಯಶಾಲಿಯಾಗಲಿ ಎಂದು ಪ್ರಾರ್ಥಿಸಿ ಬನ್ನಿ ಮರದ ಪೂಜೆಯನ್ನು ನೆರವೇರಿಸಿದರು. ಪೂಜೆಯ ನಂತರ ಬನ್ನಿ ಮರವನ್ನು ಕಡಿಯಲಾಯಿತು.

    ಈ ಹಿಂದೆ ಪ್ರತಿವರ್ಷ ಆಯುಧ ಪೂಜೆಯ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮರವನ್ನು ಕಡಿಯಲಾಗುತಿತ್ತು. ಆದರೆ ಈಗ ಬನ್ನಿ ಮರವನ್ನು ಕಡಿಯುವುದಿಲ್ಲ. ಬದಲಾಗಿ ಬನ್ನಿ ಎಲೆಯನ್ನು ಅಲಂಕರಿಸಿರುವ ಬಾಳೆಯ ದಿಂಡನ್ನು ಕಡಿಯಲಾಗುತ್ತದೆ.

    ಈ ಬನ್ನಿ ಎಲೆಗಳಿರುವ ಬಾಳೆ ದಿಂಡನ್ನು ಕಡಿದ ನಂತರ ಮರದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ವಿಜಯ ನಮ್ಮದಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಭಾಗವಹಿಸಿ ದಿಂಡನ್ನು ಕಡಿದ ನಂತರ ಎಲೆಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ.

    ಬನ್ನಿಮರದ ವಿಶೇಷತೆ ಏನು?
    ವನವಾಸಕ್ಕೆ ಹೋಗುವ ಮುನ್ನ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದರು. ಅಜ್ಞಾತವಾಸ, ವನವಾಸ ಮುಗಿಸಿದ ಬಳಿಕ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಅಲ್ಲಿದ್ದ ಶಸ್ತ್ರಗಳನ್ನು ಇಳಿಸಿ ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ್ದರು. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಯುದ್ಧ ನಡೆಸಿದ್ದರಿಂದಲೇ ಪಾಂಡವರು ಮಹಾಭಾರತ ಕದನವನ್ನು ಜಯಗಳಿಸಿದರು ಎನ್ನುವ ನಂಬಿಕೆಯಿದೆ. ಹೀಗಾಗಿ ಈ ಗ್ರಾಮಸ್ಥರು ಕೃತಕ ಬನ್ನಿ ಮರವನ್ನೇ ಕಡಿದು ವಿಶೇಷವಾಗಿ ಹಬ್ಬವನ್ನು ಆಚರಿಸುತ್ತಾರೆ.

  • ಪುತ್ರಿಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡ ಗೌತಮ್ ಗಂಭೀರ್

    ಪುತ್ರಿಯರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡ ಗೌತಮ್ ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಪುತ್ರಿಯರ ಪಾದ ಪೂಜೆ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ.

    ನವರಾತ್ರಿ ಹಬ್ಬದಂದು ಕೆಲವು ಭಾಗಗಳಲ್ಲಿ ಕನ್ಯಾ ಪೂಜೆ ಮಾಡುವ ಪ್ರತೀತಿ ಇದೆ. ಈ ಮೂಲಕ 6ರಿಂದ 8 ವರ್ಷದ ಬಾಲಕಿಯರನ್ನು ಕನ್ಯಾ ಪೂಜೆಗೆ ಆಹ್ವಾನಿಸಲಾಗುತ್ತದೆ. ಆದರೆ ಗೌತಮ್ ಗಂಭೀರ್ ತಮ್ಮ ಇಬ್ಬರು ಪುತ್ರಿಯರ ಪಾದ ಪೂಜೆಯನ್ನು ಮಾಡಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

    ಈ ಕುರಿತು ಫೋಟೋ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ನಾನೊಬ್ಬ ಇಬ್ಬರು ಪುತ್ರಿಯರ ತಂದೆಯಾಗಿದ್ದೇನೆ. ಪಾದೋಪಚಾರ ಕೌಶಲ್ಯವನ್ನು ಉತ್ತಮಗೊಳಿಸಿಕೊಂಡಿರುವೆ. ಅಷ್ಟೇ ಅಲ್ಲದೆ ಅಷ್ಟಮಿ ಪ್ರಯುಕ್ತ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಈ ಟ್ವೀಟ್ ಅನ್ನು ಪತ್ನಿ ನತಾಶಾ ಅವರಿಗೆ ಟ್ಯಾಗ್ ಮಾಡಿ, ನಾನು ಮಾಡಿದ ಕೆಲಸಕ್ಕೆ ಬಿಲ್ ಯಾರಿಗೆ ಕಳುಹಿಸ ಬೇಕು ಎಂದು ತಮಾಷೆ ಮಾಡಿದ್ದಾರೆ. ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಗಂಭೀರ್ ಅವರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗೌತಮ್ ಗಂಭೀರ್ 2019ರ ಮಾರ್ಚ್ ತಿಂಗಳಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್‍ಗೆ ಆಯ್ಕೆಯಾಗಿದ್ದಾರೆ.

  • ದಸರಾ ಸಂಭ್ರಮಕ್ಕೆ ಮಳೆ ಅಡ್ಡಿ ಸಂಭವ – 23 ಜಿಲ್ಲೆಗಳಲ್ಲಿ ಹಳದಿ ಅಲರ್ಟ್

    ದಸರಾ ಸಂಭ್ರಮಕ್ಕೆ ಮಳೆ ಅಡ್ಡಿ ಸಂಭವ – 23 ಜಿಲ್ಲೆಗಳಲ್ಲಿ ಹಳದಿ ಅಲರ್ಟ್

    ಬೆಂಗಳೂರು: ಇಂದು ನಾಡಿನೆಲ್ಲೆಡೆ ನವರಾತ್ರಿ ಸಂಭ್ರಮ ಜೋರಾಗಿದೆ. ಈ ಸಂಭ್ರಮಕ್ಕೆ ವರುಣ ದೇವ ಅಡ್ಡಿಪಡಿಸುವ ಸಾಧ್ಯತೆಯಿದೆ.

    ಬೆಂಗಳೂರು ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಚಿತ್ರದುರ್ಗ, ಬಳ್ಳಾರಿ, ಚಾಮರಾಜನಗರ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ 7 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ 23 ಜಿಲ್ಲೆಗಳಿಗೆ ಹವಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.

    ಬೆಂಗಳೂರಿಗೂ ಸಹ ಹಳದಿ ಅಲರ್ಟ್ ಘೋಷಿಸಿದ್ದು, ಸಂಜೆಯಿಂದ ರಾತ್ರಿಯವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಸುಮಾರು 7 ರಿಂದ 11 ಸೆಂ.ಮೀ. ಮಳೆಯಾಗುವ ನಿರೀಕ್ಷೆಯಿದ್ದು, ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆಯಿಂದ ರಾತ್ರಿವರೆಗೂ ವ್ಯಾಪಕ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ತೆಲಂಗಾಣದಲ್ಲಿ ಸೈಕ್ಲೋನ್ ಸಕ್ರ್ಯೂಲೇಷನ್ ಇರುವುದರಿಂದ ಹಾಗೂ ಕೇರಳದ ಕಡಿಮೆ ಒತ್ತಡ ರೇಖೆ ತನ್ನ ದಿಕ್ಕು ಬದಲಿಸುತ್ತಿರುವುದರಿಂದ ಮಳೆ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.

    ನಿನ್ನೆಯೂ ಸಹ ಹವಾಮಾನ ಇಲಾಖೆ ರಾಜ್ಯದ 26 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿತ್ತು. ಚಿತ್ರದುರ್ಗ, ಚಾಮರಾಜನಗರ, ಬಳ್ಳಾರಿ, ದಾವಣಗೆರೆ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿತ್ತು. ಇಂದು 23 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಿದೆ.

  • ಶಾಪಿಂಗ್ ಹಬ್ಬದಲ್ಲಿ 38 ಲಕ್ಷ ಕ್ಸಿಯೋಮಿ ಫೋನ್‌ಗಳ ಮಾರಾಟ

    ಶಾಪಿಂಗ್ ಹಬ್ಬದಲ್ಲಿ 38 ಲಕ್ಷ ಕ್ಸಿಯೋಮಿ ಫೋನ್‌ಗಳ ಮಾರಾಟ

    ನವದೆಹಲಿ: ದಸರಾ ಹಬ್ಬದ ವೇಳೆ ಆಯೋಜನೆಗೊಂಡಿದ್ದ ಆನ್‍ಲೈನ್ ಶಾಪಿಂಗ್ ಹಬ್ಬದಲ್ಲಿ ಒಟ್ಟು 38 ಲಕ್ಷ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಲಾಗಿದೆ ಎಂದು ಕ್ಸಿಯೋಮಿ ಕಂಪನಿ ಹೇಳಿದೆ.

    ಹಬ್ಬದ ಸಂದರ್ಭದಲ್ಲಿ ಅಮೆಜಾನ್, ಫ್ಲಿಪ್‍ಕಾರ್ಟ್, ಎಂಐ.ಕಾಂ ನಲ್ಲಿ 38 ಲಕ್ಷ ಸ್ಮಾರ್ಟ್ ಫೋನ್‌ಗಳು ಸೇರಿದಂತೆ ಒಟ್ಟು 53 ಲಕ್ಷ ಸಾಧನಗಳು ಮಾರಾಟವಾಗಿದೆ ಎಂದು ಕ್ಸಿಯೋಮಿ ಕಂಪನಿ ತಿಳಿಸಿದೆ.

    ಪ್ರತಿ ವರ್ಷದ ಹಬ್ಬದ ಸಂದರ್ಭದಲ್ಲಿ ಶೇ.50 ರಷ್ಟು ಮಾರಾಟ ಹೆಚ್ಚಳವಾಗುತ್ತದೆ. ಫ್ಲಿಪ್ ಕಾರ್ಟಿನಲ್ಲಿ ರೆಡ್‍ಮೀ ನೋಟ್ 7 ಅತಿ ಹೆಚ್ಚು ಮಾರಾಟಗೊಂಡಿದ್ದರೆ ಅಮೇಜಾನ್ ತಾಣದಲ್ಲಿ ರೆಡ್‍ಮೀ 7ಎ ಹೆಚ್ಚು ಮಾರಾಟಗೊಂಡಿದೆ ಎಂದು ಕ್ಸಿಯೋಮಿ ಹೇಳಿದೆ.

    ಆನ್‍ಲೈನ್ ಶಾಪಿಂಗ್ ತಾಣಗಳ ಪೈಕಿ ಅತಿ ಹೆಚ್ಚು ಮಾರಾಟ ಕಂಡಿರುವ 10 ಫೋನ್ ಗಳ ಪೈಕಿ 5 ಫೋನ್‍ಗಳು ಕ್ಸಿಯೋಮಿಯದ್ದು ಎಂದು ತಿಳಿಸಿದೆ. ಹಬ್ಬ ಆರಂಭಗೊಂಡ ಬಳಿಕ ಅ.3 ರಂದು ಕ್ಸಿಯೋಮಿ ಟ್ವೀಟ್ ಮಾಡಿ, 2.5 ಲಕ್ಷ ಎಂಐ ಟಿವಿಗಳನ್ನು ಮಾರಾಟ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು.

  • ಮಡಿಕೇರಿ ದಸರಾಕ್ಕೆ ಕ್ಷಣಗಣನೆ – ದಶಮಂಟಪಗಳ ಪ್ರದರ್ಶನಕ್ಕಾಗಿ ಕಾದು ಕುಳಿತ ಜನರು

    ಮಡಿಕೇರಿ ದಸರಾಕ್ಕೆ ಕ್ಷಣಗಣನೆ – ದಶಮಂಟಪಗಳ ಪ್ರದರ್ಶನಕ್ಕಾಗಿ ಕಾದು ಕುಳಿತ ಜನರು

    ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾದ ದಶಮಂಟಪ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಗರದ 10 ಪ್ರಮುಖ ದೇವಾಲಯಗಳಿಂದ ಸಿದ್ಧಗೊಳ್ಳುತ್ತಿರುವ ದಶಮಂಟಪಗಳ ಪ್ರದರ್ಶನಕ್ಕಾಗಿ ಸಾವಿರಾರು ಜನರು ಕಾದು ಕುಳಿತಿದ್ದಾರೆ.

    ಈ ಬಾರಿ ಪಂಚಮುಖಿ ಆಂಜನೇಯನ ದರ್ಶನ, ನರಸಿಂಹನಿಂದ ಹಿರಣ್ಯ ಕಶಿಪು ವಧೆ, ಮಹಿಷಾಸುರ ಮರ್ಧಿನಿ, ಸುಬ್ರಹ್ಮಣ್ಯನಿಂದ ತಾರಕಾಸುರ ವಧೆ, ಅರ್ಧನಾರೀಶ್ವರ ದರ್ಶನ, ತ್ರಿಪುರಾಸುರ ವಧೆ ಹೀಗೆ ನಾನಾ ಕಥಾ ಭಾಗಗಳನ್ನು ಬೃಹತ್ ಧ್ವನಿ ಬೆಳಕಿನ ಸಂಯೋಜನೆಗಳೊಂದಿಗೆ ಕೃತಕವಾಗಿ ತಯಾರಿಸಿದ, ಟ್ಯಾಬ್ಲೋಗಳ ಪ್ರದರ್ಶನ ಎಲ್ಲರನ್ನು ಬೆರಗುಗೊಳಿಸಲಿದೆ.

    ರಾತ್ರಿ 11 ಗಂಟೆ ನಂತರ ಆರಂಭಗೊಳ್ಳುವ ದಶಮಂಟಪಗಳ ಪ್ರದರ್ಶನ ಮುಂಜಾನೆಯವರೆಗೂ ಸಂಚರಿಸಿ ಪ್ರದರ್ಶನ ನೀಡಲಿವೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ದಶಮಂಟಪಗಳನ್ನು ಸಿದ್ಧಗೊಳಿಸುವ ಕಾರ್ಯ ಈಗಾಗಲೇ ಮುಗಿದಿದ್ದು, ಅಂತಿಮ ತಯಾರಿ ನಡೆಯುತ್ತಿದೆ. ಹಗಲಿನಲ್ಲಿ ಮೈಸೂರು ದಸರಾ ರಾತ್ರಿ ಮಡಿಕೇರಿ ದಸರಾ ಎಂದೇ ಪ್ರಸಿದ್ಧಗೊಂಡಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ರಾತ್ರಿ ವರ್ಣರಂಜಿತ ದಶಮಂಟಪ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು ಜನರು ರಾತ್ರಿಯ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

    ಪೌರಾಣಿಕ ಹಿನ್ನೆಲೆಯ ಕತೆಯನ್ನು ಪ್ರದರ್ಶನಮಾಡಲು ನಾಲ್ಕು ಶಕ್ತಿದೇವತೆಗಳ ದೇವಾಲಯ ಸಮಿತಿಗಳು ಸೇರಿದಂತೆ 10 ದೇವಾಲಯಗಳೂ ಕೂಡ ಒಂದೊಂದು ಕಥೆಯನ್ನು ಆಯ್ಕೆಮಾಡಿಕೊಂಡು ಪ್ರದರ್ಶನ ನೀಡಲು ಸಿದ್ಧವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನರು ದಶಮಂಟಪ ಪ್ರದರ್ಶನ ವೀಕ್ಷಣೆಗೆ ಕಾಯುತ್ತಿದ್ದಾರೆ.

  • ಗುಂಪು ಘರ್ಷಣೆ ಭಾರತೀಯ ಮೂಲದ್ದಲ್ಲ, ಭಾರತವನ್ನು ಅವಮಾನಿಸಲು ಇದನ್ನು ಬಳಸಬೇಡಿ – ಮೋಹನ್ ಭಾಗವತ್

    ಗುಂಪು ಘರ್ಷಣೆ ಭಾರತೀಯ ಮೂಲದ್ದಲ್ಲ, ಭಾರತವನ್ನು ಅವಮಾನಿಸಲು ಇದನ್ನು ಬಳಸಬೇಡಿ – ಮೋಹನ್ ಭಾಗವತ್

    ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ವಿಜಯದಶಮಿಯ ಅಂಗವಾಗಿ ಮಹಾರಾಷ್ಟ್ರದ ನಾಗಪುರದ ಕೇಂದ್ರ ಕಚೇರಿಯಲ್ಲಿ ಆಯುಧ ಪೂಜೆಯನ್ನು ನೆರವೇರಿಸಿದರು.

    ಸ್ವಯಂ ಸೇವಕರು ಡ್ರಿಲ್ ಮೂಲಕ ಪಥಸಂಚಲನ ನಡೆಸಿದ ನಂತರ ಮೋಹನ್ ಭಾಗವತ್ ಅವರು ಆಯುಧ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಪೂಜೆಯ ಬಳಿಕ ರೇಶಿಂಬಾಗ್ ಮೈದಾನದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮೋಹನ್ ಭಾಗವತ್ ಭಾಷಣ ಮಾಡಿದರು.

    ಗುಂಪು ಘರ್ಷಣೆ(ಲಿಂಚಿಂಗ್) ಭಾರತದಲ್ಲ. ಇದು ಕೇವಲ ಒಂದು ನಿರ್ಧಿಷ್ಟ ಸಮುದಾಯದ ಜನರನ್ನು ಮಾತ್ರ ಗುರಿಯಾಗಿಸುವುದಿಲ್ಲ. ಹಿಮ್ಮುಖವಾಗಿಯೂ ಪರಿಣಾಮ ಬೀರುತ್ತದೆ. ಅಭಿಪ್ರಾಯ ಬೇಧ ಏನೇ ಇರಲಿ ಅಥವಾ ಯಾವುದೇ ಪ್ರಚೋದನಕಾರಿ ಕ್ರಮಗಳು ನಡೆದಿರಲಿ. ಇದರ ಹೊರತಾಗಿಯೂ ಸಮಾಜ ಸಂವಿಧಾನದ ಮಿತಿಯಲ್ಲಿ ಉಳಿಯಬೇಕು ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

    ಗುಂಪು ಘರ್ಷಣೆ ಎಂಬುದು ಭಾರತೀಯ ಮೂಲದ ಪದವಲ್ಲ. ಅದರ ಮೂಲವು ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ಕಥೆಯಿಂದ ಬಂದಿದೆ. ನಾವು ಭಾರತೀಯರು ಸಹೋದರತ್ವವನ್ನು ನಂಬುತ್ತೇವೆ. ಭಾರತೀಯರ ಮೇಲೆ ಅಂತಹ ನಿಯಮಗಳನ್ನು ಹೇರಬೇಡಿ. ಲಿಂಚಿಂಗ್ ಸ್ವತಃ ಪಾಶ್ಚಿಮಾತ್ಯ ಮೂಲದ್ದಾಗಿದೆ. ದೇಶವನ್ನು ಅವಮಾನಿಸಲು ಭಾರತೀಯರ ವಿಷಯದಲ್ಲಿ ಇದನ್ನು ಬಳಸಬಾರದು ಎಂದು ಮನವಿ ಮಾಡಿಕೊಂಡರು.

    ಜಮ್ಮು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿರುವ ಸರ್ಕಾರದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಭಾರತ ಸದೃಢವಾಗಿರುವುದನ್ನು ಬಯಸುವುದಿಲ್ಲ. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಸರ್ಕಾರವು ನಮ್ಮ ನಿರೀಕ್ಷೆಗಳನ್ನು ಈಡೇರಿಸುವ ಧೈರ್ಯವನ್ನು ಹೊಂದಿದೆ ಎಂದು ತೋರಿಸಿದೆ. ದೇಶ ಹಿತದೃಷ್ಟಿಯಿಂದ ಜನರ ಭಾವನೆ ಹಾಗೂ ಆಶಯಗಳನ್ನು ಗೌರವಿಸುತ್ತದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ವಿಶ್ವಾಸ ವ್ಯಕ್ತಪಡಿಸಿದರು.

    ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನಡಿಯಲ್ಲಿ ಬದುಕಬೇಕು, ಸಾಮರಸ್ಯ ಮೂಡಿಸಬೇಕು. ಆ ಸಂಸ್ಕಾರದೊಂದಿಗೆ ಸ್ವಯಂ ಸೇವಕರನ್ನು ಬೆಳೆಸಲಾಗುತ್ತದೆ ಎಂದು ತಿಳಿಸಿದರು.

    ಕಳೆದ ಕೆಲವು ವರ್ಷಗಳಿಂದ ಭಾರತದ ಚಿಂತನೆ ಪ್ರಕ್ರಿಯೆಯ ದಿಕ್ಕಿನಲ್ಲಿ ಪರಿವರ್ತನೆ ಕಂಡುಬಂದಿದೆ. ಜಗತ್ತಿನಲ್ಲಿ ಹಾಗೂ ದೇಶದಲ್ಲಿನ ಹಲವರು ಇದನ್ನು ಬಯಸುವುದಿಲ್ಲ. ಅಭಿವೃದ್ಧಿ ಹೊಂದಿದ ಭಾರತ ಪಟ್ಟಭದ್ರ ಹಿತಾಸಕ್ತಿಗಳ ಮನಸ್ಸಿನಲ್ಲಿ ಭಯವನ್ನುಂಟು ಮಾಡುತ್ತದೆ. ಅಂತಹ ಶಕ್ತಿಗಳು ಭಾರತ ಬಲಶಾಲಿಯಾಗುವುದನ್ನು ಬಯಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸರ್ಕಾರ ಮತ್ತು ಆಡಳಿತದಲ್ಲಿ ವ್ಯಕ್ತಿಗಳು ಹೊರಡಿಸಿದ ಹೇಳಿಕೆಗಳನ್ನು ಸಹ ಪಟ್ಟಭದ್ರ ಹಿತಾಸಕ್ತಿಗಳಿಂದ ಕೆಟ್ಟದಕ್ಕೆ ಅನುಕೂಲವಾಗುವಂತೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇಂತಹವುಗಳನ್ನು ನಾವು ಗುರುತಿಸುವಲ್ಲಿ ನಾವು ಜಾಗರೂಕರಾಗಿರಬೇಕು ಮತ್ತು ಅವುಗಳನ್ನು ಬೌದ್ಧಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಎದುರಿಸಬೇಕು ಎಂದು ಎಚ್ಚರಿಸಿದ್ದಾರೆ.

    2019ರ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಇಷ್ಟು ದೊಡ್ಡ ದೇಶದಲ್ಲಿ ಮತದಾನ ಸುಗಮವಾಗಿ ನಡೆಯುತ್ತದೆಯೇ ಎಂದು ತಿಳಿಯಲು ಅಂತರಾಷ್ಟ್ರೀಯ ಸಮುದಾಯ ಆಸಕ್ತಿ ಹೊಂದಿದೆ. ಭಾರತದ ಪ್ರಜಾಪ್ರಭುತ್ವ ಯಾವುದೇ ದೇಶದಿಂದ ಆಮದು ಮಾಡಿಕೊಂಡಿದ್ದಲ್ಲ, ಶತಮಾನಗಳಿಂದಲೂ ಇಲ್ಲಿ ಪ್ರಚಲಿತದಲ್ಲಿದ್ದದ್ದು ಎಂದು ಭಾಗವತ್ ತಿಳಿಸಿದರು.

    ಭಾರತದ ಗಡಿಗಳು ಹಿಂದೆಂದಿಗಿಂತಲೂ ಸುರಕ್ಷಿತವಾಗಿವೆ. ಆದರೆ ಕರಾವಳಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಭೂ ಗಡಿಗಳಲ್ಲಿ ಸೈನಿಕರು ಹಾಗೂ ಚೆಕ್ ಪೋಸ್ಟ್ ಗಳ ಸಂಖ್ಯೆ ಮತ್ತು ಕಡಲ ಗಡಿಯುದ್ದಕ್ಕೂ ವಿಶೇಷ ದ್ವೀಪಗಳಲ್ಲಿ ಕಣ್ಗಾವಲು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

    ಆರ್ಥಿಕ ಕ್ಷೇತ್ರದ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ವಿಶ್ವ ಆರ್ಥಿಕತೆಯ ನಿಧಾನಗತಿಯು ಇತರ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ಸಮಾಜ ಉದ್ಯಮಶೀಲವಾಗಿದ್ದು, ಈ ಸವಾಲನ್ನು ನಿವಾರಿಸುವ ಸಾಮಥ್ರ್ಯ ಹೊಂದಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಮೋಹನ್ ಭಾಗವತ್ ಅವರ ಭಾಷಣವನ್ನು ಆರ್ ಎಸ್‍ಎಸ್ ತನ್ನದೇ ಆದ ಇಂಟರ್ನೆಟ್ ಆಧಾರಿತ ರೇಡಿಯೋ ಚಾನೆಲ್ ಪ್ರಸಾರ ಮಾಡಿದೆ. ಅಲ್ಲದೆ ಸರಸಂಘಚಾಲಕರಿಗೆ ದಸರಾ ಹಬ್ಬ ಮಹತ್ವದ್ದಾಗಿದ್ದು, 1925ರಲ್ಲಿ ಇದೇ ದಿನದಂದು ಆರ್‍ಎಸ್‍ಎಸ್ ಸ್ಥಾಪನೆಯಾಗಿದೆ. ಹೀಗಾಗಿ ಆರ್ ಎಸ್‍ಎಸ್ ಕಾರ್ಯಕರ್ತರಿಗೆ ಇದು ವಿಶೇಷ ದಿನವಾಗಿದೆ.

    ಈ ವರ್ಷದ ಆರ್ ಎಸ್‍ಎಸ್ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಐಟಿ ಕಂಪನಿ ಎಚ್‍ಸಿಎಲ್ ಟೆಕ್ನಾಲಜೀಸ್‍ನ ಸಂಸ್ಥಾಪಕ ಶಿವ ನಾಡರ್ ಭಾಗವಹಿಸಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ, ಜನರಲ್ ವಿ.ಕೆ. ಸಿಂಗ್(ನಿವೃತ್ತ) ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಇತರರು ಪಾಲ್ಗೊಂಡಿದ್ದರು.