Tag: ದಸರಾ

  • ಯಶವಂತಪುರ–ಮಂಗಳೂರು ನಡುವೆ ವಿಶೇಷ ರೈಲು

    ಯಶವಂತಪುರ–ಮಂಗಳೂರು ನಡುವೆ ವಿಶೇಷ ರೈಲು

    ಬೆಂಗಳೂರು: ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಯಶವಂತಪುರ ಮತ್ತು ಮಂಗಳೂರು ಜಂಕ್ಷನ್ ನಡುವೆ ಒಂದು ಟ್ರಿಪ್’ಗೆ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಓಡಿಸಲಿದೆ.

    ರೈಲು ಸಂಖ್ಯೆ 06257 ಯಶವಂತಪುರ–ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆ.30ರ ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 11:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ವಾಪಸಾತಿ ಪ್ರಯಾಣದಲ್ಲಿ, ರೈಲು ಸಂಖ್ಯೆ 06258 ಮಂಗಳೂರು ಜಂಕ್ಷನ್ – ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಅ.1 ರಂದು ಮಧ್ಯಾಹ್ನ 2:35ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಅದೇ ದಿನ ರಾತ್ರಿ 11:30 ಕ್ಕೆ ಯಶವಂತಪುರ ತಲುಪಲಿದೆ.

    ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ. ಈ ರೈಲು 22 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ ಎರಡು ಎಸಿ 2-ಟೈರ್, ಮೂರು ಎಸಿ 3-ಟೈರ್, ಹನ್ನೊಂದು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ಎರಡನೇ ದರ್ಜೆ ಮತ್ತು ಎರಡು ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ.

  • ಬಾನು ಮುಷ್ತಾಕ್ ಮೇಲೆ ನಮಗೆ ಗೌರವ ಹೆಚ್ಚಾಗಿದೆ: ನಾರಾಯಣಸ್ವಾಮಿ

    ಬಾನು ಮುಷ್ತಾಕ್ ಮೇಲೆ ನಮಗೆ ಗೌರವ ಹೆಚ್ಚಾಗಿದೆ: ನಾರಾಯಣಸ್ವಾಮಿ

    ಬೆಂಗಳೂರು: ಸಾಹಿತಿ ಬಾನು ಮುಷ್ತಾಕ್ ಅವರ ಮೇಲೆ ನಮಗೆ ಗೌರವ ಹೆಚ್ಚಾಗಿದೆ ಎಂದು ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy)  ಹೇಳಿದ್ದಾರೆ.

    ಬಾನು ಮುಷ್ತಾಕ್‌ (Banu Mushtaq) ಅವರ ಹಿಂದಿನ ಹೇಳಿಕೆಗೆ ನಮ್ಮ ವಿರೋಧ ಇತ್ತು. ಇಡೀ ರಾಜ್ಯದಲ್ಲಿ ಹಿಂದುತ್ವ ಪರಿಪಾಲಕರು ಯಾರೂ ಅವರ ಹೇಳಿಕೆ ಒಪ್ಪಲಿಲ್ಲ. ಇವತ್ತು ಅವರ ಭಾಷಣ ನೋಡಿ ನಮಗೆ ಸಂತೋಷ ಆಗಿದೆ ಎಂದರು. ಇದನ್ನೂ ಓದಿ:  ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್‌

    ಮುಸ್ಲಿಂ ಹೆಣ್ಣು ಮಗಳು ಹಿಂದೂ ಹೆಣ್ಣುಮಗಳಂತೆ ಅರಿಶಿಣ ಬಣ್ಣದ ಸೀರೆಯುಟ್ಟು ಹೂ ಮುಡಿದು ದೇವಸ್ಥಾನಕ್ಕೆ ಬಂದು, ಆರತಿ ಬೆಳಗಿ, ಮಂಗಳಾರತಿ ತೆಗೆದುಕೊಂಡಿದ್ದಾರೆ. ಹಿಂದೂ ಸಂಸ್ಕೃತಿ ಪರವಾಗಿ ನಿಂತು ಅವರು ದಸರಾ ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:  ಮೈಸೂರು ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಚಾಮುಂಡಿ ತಾಯಿಯ ಸೀರೆ ಪಡೆದ ಬಾನು ಮುಷ್ತಾಕ್‌

    ನಮಗೆ ಏನು ಬೇಕಿತ್ತೋ? ನಮ್ಮ ನಿರೀಕ್ಷೆ ಏನು ಇತ್ತೋ ಅದನ್ನು ಅವರು ಇವತ್ತು ಮಾಡಿದ್ದಾರೆ. ಹಿಂದೂ ಸಂಸ್ಕೃತಿಗೆ ಗೌರವ ಕೊಟ್ಟು ಬಾನು ಮುಷ್ತಾಕ್ ಇವತ್ತು ನಡೆದುಕೊಂಡಿದ್ದಾರೆ. ಹೀಗಾಗಿ ಅವರ ಮೇಲೆ ನಮಗೆ ಗೌರವ ಹೆಚ್ಚಾಗಿದೆ ಎಂದು ತಿಳಿಸಿದರು.

  • ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್‌

    ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್‌

    – ನನ್ನ ಮಾವ ಮೈಸೂರು ಮಹಾರಾಜರ ಅಂಗರಕ್ಷಕರಾಗಿದ್ದರು
    – ಮೈಸೂರಿನ ಉರ್ದು ಭಾಷಿಕರೂ ನವರಾತ್ರಿ ಆಚರಿಸುತ್ತಾರೆ

    ಮೈಸೂರು: ದಸರೆ (Mysuru Dasara) ಹಬ್ಬ ಮಾತ್ರ ಅಲ್ಲ. ಇದು ನಾಡಿನ ನಾಡಿಮಿಡಿತ, ಸಂಸ್ಕೃತಿಯ ಉತ್ಸವ. ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ (Banu Mushtaq) ಬಣ್ಣಿಸಿದ್ದಾರೆ.

    ಚಾಮಂಡಿಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮೈಸೂರು ದಸರೆಗೆ ಚಾಲನೆ ನೀಡಿ ಮಾತನಾಡಿದ ಅವರು,  ನನ್ನ ಆಪ್ತ ಗೆಳತಿ ಬೂಕರ್‌ ಪ್ರಶಸ್ತಿ ಸಿಗಲೆಂದು ಚಾಮುಂಡಿ ತಾಯಿಯ ಬಳಿ ಹರಕೆ ಹೊತ್ತಿದ್ದಳು. ಈ ವಿಶಿಷ್ಟ ಸನ್ನಿವೇಶದಲ್ಲಿ ಹರಕೆ ಈಡೇರಿದೆ. ತಾಯಿ ಚಾಮುಂಡಿ ನನ್ನನ್ನು ಈ ವಿಶೇಷ ಸಂದರ್ಭದಲ್ಲಿ ಕರೆಸಿಕೊಂಡಿದ್ದಾಳೆ. ವೇದಿಕೆ ಮೇಲೆ ನಿಮ್ಮೆದುರು ನಿಲ್ಲುತ್ತಿರುವುದು ನನ್ನ ಜೀವನದ ಅತ್ಯಂತ ಗೌರವದ ಕ್ಷಣ ಎಂದು ಆರಂಭದಲ್ಲೇ ಹೇಳಿದರು.

    ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಈ ನಾಡಿನ ನಾಡಿ ಮಿಡಿತ, ಸ್ಪಂದನೆಯಿದೆ. ವಿಭಿನ್ನತೆಯಲ್ಲಿ ಏಕತೆ ಇರುವ ಹಬ್ಬವಿದು. ಮೈಸೂರಿನ ಉರ್ದು ಭಾಷಿಕರು ನವರಾತ್ರಿ ಪ್ರತಿ ದಿನಕ್ಕೂ ಒಂದೊಂದು ಹೆಸರು ಇಟ್ಟು ಕೊಂಡಿದ್ದಾರೆ. ಸಿಲ್ಹಿಂಗನ್ ಎಂದು ದಸರಾಕ್ಕೆ ಉರ್ದು ವಿನಲ್ಲಿ ಹೆಸರಿಟ್ಟುಕೊಂಡಿದ್ದಾರೆ. ಇದು ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಉತ್ಸವ ಎಂದು ಹೇಳಿದರು.

    ನನ್ನ ಮಾವ ಮೈಸೂರು ಮಹಾರಾಜರ ಅಂಗರಕ್ಷಕರಾಗಿದ್ದರು. ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರನ್ನು ನಂಬಿದ್ದರು. ತಮ್ಮ ರಕ್ಷಕರನ್ನಾಗಿ ಮಾಡಿಕೊಂಡಿದ್ದರು. ಮುಸ್ಲಿಮರನ್ನು ಅನುಮಾನದಿಂದ ನೋಡಿರಲಿಲ್ಲ ಎಂದು ತಿಳಿಸಿದರು.

     

    ಎಲ್ಲರನ್ನೂ ಒಳಗೊಳ್ಳುವ ಮನಸ್ಸು ನನ್ನದು. ಈ ನೆಲದಲ್ಲಿ ಮಾನವೀಯ ತುಡಿತ ಇದೆ. ತಾಯಿ ಚಾಮುಂಡಿ ನಮ್ಮಲ್ಲಿನ ದ್ವೇಷ, ಅಸಹಿಷ್ಣುತೆ ನಿವಾರಣೆ ಮಾಡಲಿ. ನನ್ನ ಧಾರ್ಮಿಕ ನಂಬಿಕೆಗಳ ಜೀವಪರವಾಗಿವೆ. ನಾವು ಅಸ್ತ್ರಗಳಿಂದ , ಹಗೆಗಳಿಂದ ಬದುಕವನ್ನು ಗೆಲ್ಲಲು ಸಾಧ್ಯವಿಲ್ಲ. ಅಕ್ಷರಗಳಿಂದ, ಪ್ರೀತಿಯಿಂದ ಬದುಕನ್ನು ಗೆಲ್ಲಬಹುದು ಎಂದು ಹೇಳುವ ಮೂಲಕ ತನ್ನನ್ನು ವಿರೋಧಿಸಿದವರಿಗೆ ಭಾವನಾತ್ಮಕ ತಿರುಗೇಟು ನೀಡಿದರು.

    ಮೈಸೂರು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ನಾವು ಪರಸ್ಪರ ನಮ್ಮನ್ನು ನಾವು ಗೌರವಿಸಿಕೊಳ್ಳೋಣ. ಪ್ರತಿ ಹೂ ತನ್ನ ಬಣ್ಣದಲ್ಲಿ ಹಾಡಲಿ, ತನ್ನ ರಾಗದಲ್ಲೇ ಹಕ್ಕಿ ಕೂಗಲಿ. ಎಲ್ಲರೂ ಒಟ್ಟಾಗಿ ಸೇರಿ ಸೌಹಾರ್ದಯುತವಾಗಿ ನಡೆದುಕೊಳ್ಳೋಣ.ನಾವು ಎಲ್ಲರೂ ಒಂದೇ ಗಗನದ ಪಯಣಿಗರು.ಆಕಾಶ, ಭೂಮಿ ಯಾವತ್ತೂ ಯಾರನ್ನು ಬೇರೆ ಮಾಡುವುದಿಲ್ಲ.ನಾವು ಮನುಷ್ಯರು ಮಾತ್ರ ಗಡಿಗಳನ್ನು ಕಟ್ಟಿ ಕೊಂಡಿದ್ದೇವೆ. ನಾವು ಈ ಗಡಿಗಳನ್ನು ತೊಡೆದು ಹಾಕೋಣ ಎಂದು ಕರೆ ನೀಡಿದರು.

    ತಾಯಿ ಚಾಮುಂಡಿ ರಕ್ಷಕತ್ವದ ಸಂಕೇತ.ನಮ್ಮಲ್ಲರ ಒಳಗಿನ ದ್ವೇಷ, ಹಗೆಯನ್ನು ಚಾಮುಂಡಿ ನಾಶಮಾಡಲಿ. ಜಗತ್ತಿನಾದ್ಯಂತ ಶಾಂತಿ, ಸಹನುಭೂತಿ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸಿದರು. ಸಹಸ್ರ ಆರೋಪಗಳ‌ ನಡುವೆ ನಾನು ಒಂಟಿಯಾಗಿ ಧೈರ್ಯವಾಗಿ ನಿಂತಿದ್ದೇನೆ ಎಂದು ಕವನ ಓದುತ್ತಲೇ ವಿವರಣೆ ನೀಡಿದ ಅವರು ಪ್ರೀತಿಯ ಹೊಸ ಸಮಾಜ ಕಟ್ಟೋಣ ಎಂದು ಹೇಳಿದರು.

    ಭಾಷಣದ ಕೊನೆಯಲ್ಲಿ, ನಾನು ನೂರಾರು ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿದ್ದೇನೆ. ಮಂಗಳಾರತಿಯನ್ನೂ ನೂರಾರು ಬಾರಿ ಸ್ವೀಕರಿಸಿದ್ದೇನೆ. ನನ್ನ ಮತ್ತು ಹಿಂದೂ ಧರ್ಮದ ಬಾಂಧವ್ಯ ಹೇಗಿದೆ ಎಂದು ನನ್ನ ಆತ್ಮಕಥೆ ಯಲ್ಲಿ ಬರೆದಿದ್ದೇನೆ‌. ಈ ಪುಸ್ತಕ ನಾಳೆ ಬಿಡುಗಡೆಯಾಗಲಿದೆ. ಎಷ್ಟೇ ಸವಾಲು ಬಂದರೂ ದಿಟ್ಟವಾಗಿ ನಿಂತು ನನಗೆ ನೈತಿಕ ಬೆಂಬಲ ನೀಡಿದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದಗಳು ಎಂದು ಹೇಳಿ ತಮ್ಮ ಮಾತಿಗೆ ಪೂರ್ಣ ವಿರಾಮ ಹಾಕಿದರು.

  • ತುಮಕೂರು ದಸರಾ ಉದ್ಘಾಟಿಸಿದ ಪರಮೇಶ್ವರ್

    ತುಮಕೂರು ದಸರಾ ಉದ್ಘಾಟಿಸಿದ ಪರಮೇಶ್ವರ್

    ತುಮಕೂರು: ನಂದಿ ಧ್ವಜ ಪೂಜೆ ಮಾಡುವ ಮೂಲಕ ತುಮಕೂರು ದಸರಾವನ್ನು (Tumakuru Dasara) ಗೃಹಸಚಿವ ಜಿ.ಪರಮೇಶ್ವರ್ (G.Parameshwar) ಉದ್ಘಾಟಿಸಿದರು.

    ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮದಲ್ಲಿ ದಸರಾ ಧ್ವಜಾರೋಹಣ ಮಾಡಿ, ಬಳಿಕ ಧಾರ್ಮಿಕ ಮಂಟಪವನ್ನು ಉದ್ಘಾಟನೆ ಮಾಡಿದರು. ಇದನ್ನೂ ಓದಿ: Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

    ಪತ್ನಿ ಕನ್ನಿಕಾ ಪರಮೇಶ್ವರ್, ಕೇಂದ್ರ ಸಚಿವ ವಿ ಸೋಮಣ್ಣ, ಶಾಸಕ ಜ್ಯೋತಿಗಣೇಶ್, ಸುರೇಶ್ ಗೌಡ, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್

    ದಸರಾ ಉತ್ಸವವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಉತ್ಸವವನ್ನು ನೋಡಲು ಸಾರ್ವಜನಿಕರಿಗಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತೀ ದಿನ 250 ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

  • Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

    Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

    – ಕಬ್ಬಿನ ಜಲ್ಲೆ ಮತ್ತು ಹೂವಿನಿಂದ ಚಾಮುಂಡಿ ದೇವಸ್ಥಾನ ಅಲಂಕಾರ

    ಮೈಸೂರು: ದಸರಾ (Mysuru Dasara) ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ತಾಯಿ ಚಾಮುಂಡಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಲಾಗಿದೆ. ನೀಲಿ ಜರಿ ಸೀರೆಯನ್ನು ತಾಯಿ ಚಾಮುಂಡಿಗೆ ಉಡಿಸಿದ್ದು, ವಜ್ರದ ಕಣ್ಣುಗಳಿಂದ ದೇವಿ ಕಂಗೊಳಿಸುತ್ತಿದೆ. ಈ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟನೆ ಆಗಲಿದೆ.

    ಇನ್ನು ಚಾಮುಂಡಿ ದೇವಸ್ಥಾನವನ್ನು ಕಬ್ಬಿನ ಜಲ್ಲೆ ಮತ್ತು ಹೂಗಳಿಂದ ಅಲಂಕೃತ ಮಾಡಲಾಗಿದೆ. ದೇವಸ್ಥಾನ ಒಳ ಭಾಗದಲ್ಲಿನ ಪ್ರತಿ ಕಂಬಕ್ಕೂ ಕಬ್ಬು ಕಟ್ಟಿ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಹಬ್ಬಕ್ಕೆ ಅದ್ದೂರಿ ಚಾಲನೆ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ. ಇದನ್ನೂ ಓದಿ: ಇಂದಿನಿಂದ ಉಳಿತಾಯ ಹಬ್ಬ| ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?

    ವಿರೋಧದ ನಡುವೆಯೂ ಲೇಖಕಿ ಬಾನು ಮುಷ್ತಾಕ್ ಈ ಬಾರಿ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ, ಹೀಗಾಗಿ ಜಿಲ್ಲಾಡಳಿತದ ವತಿಯಿಂದ ಬಾನು‌ ಮುಷ್ತಾಕ್ ಮತ್ತು ದಸರಾ ಉದ್ಘಾಟನಾ ಸಮಯದಲ್ಲಿ ಬಿಗಿ ಭದ್ರತೆ ನೀಡಲಾಗಿದೆ.  ಇಂದು ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾಕೈಂಕರ್ಯಗಳು ನೆರವೇರಿದೆ. ಬಳಿಕ ಬೆಳ್ಳಿರಥಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನ ವೇದಿಕೆಗೆ ತಂದು ಪುಷ್ಪಾರ್ಚನೆ ಮಾಡಲಿದ್ದಾರೆ. ಬೆಳಿಗ್ಗೆ 10:10ರಿಂದ 10:40ರ ವೃಶ್ಚಿಕ ಶುಭ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಲೇಖಕಿ ಬಾನು ಮುಷ್ತಾಕ್ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ- ಮೊದಲು ಎಷ್ಟು? ಈಗ ಎಷ್ಟು ಇಳಿಕೆ?

    ಇನ್ನೂ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 1 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ಹಿನ್ನೆಲೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದ್ದು, ವಿವಿಐಪಿ, ವಿಐಪಿ ಹಾಗೂ ಪಾಸ್ ಹೊಂದಿದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಉದ್ಘಾಟನೆ ಮುಗಿಯುವವರೆಗೂ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ನಿರ್ಬಂಧ ಹೇರಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಸಚಿವರು, ಶಾಸಕರು, ಸಂಸದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಇಂದಿನಿಂದ ಜಾತಿ ಗಣತಿ ಆರಂಭ – ಬೆಂಗಳೂರಲ್ಲಿ 3 ದಿನ ವಿಳಂಬ

    ದಸರಾ ಉದ್ಘಾಟನೆಗೊಂಡ ಬಳಿಕ ಹಲವು ದಸರಾ ಕಾರ್ಯಕ್ರಮಗಳಿಗೆ ಇಂದೇ ಚಾಲನೆ ಸಿಗಲಿದೆ. ಮಧ್ಯಾಹ್ನ 12:30ಕ್ಕೆ ಫಲಪುಷ್ಪ ಪ್ರದರ್ಶನ ಉದ್ಘಾಟನೆ, ಬಳಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳಕ್ಕೆ ಚಾಲನೆ, ಸಂಜೆ 4ಕ್ಕೆ ದೇವರಾಜ ಅರಸು ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಗೆ ಉದ್ಘಾಟನೆ ಭಾಗ್ಯ, ಅರಮನೆ ಆರವಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗುತ್ತೆ. ಸಂಜೆ 6:30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಉದ್ಘಾಟನೆಯಾಗಲಿದೆ. ಇದನ್ನೂ ಓದಿ: ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್‌ಗೆ ಬಿಗಿ ಭದ್ರತೆ

    ಇನ್ನು ದಸರಾ ಉದ್ಘಾಟನೆ ಆಗುತ್ತಿದ್ದಂತೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ನಡೆಯಲಿದೆ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸವನ್ನೇರಿ ಖಾಸಗಿ ದರ್ಬಾರ್ ನೆರವೇರಿಸಲಿದ್ದಾರೆ. ಹೀಗಾಗಿ ಸಿಂಹಾಸನವನ್ನು ಅರಮನೆಯ ಸ್ಟ್ರಾಂಗ್ ರೂಂನಿಂದ ತಂದು ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಿದ್ದಾರೆ. ಇದನ್ನೂ ಓದಿ: Navratri 2025 Day 1: ಶೈಲಪುತ್ರಿಯ ಮಹತ್ವವೇನು?

    ಒಂದೆಡೆ ದಸರಾ ಉದ್ಘಾಟನೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದ್ರೆ, ಅತ್ತ ಅರಮನೆಯಲ್ಲೂ ಇಂದಿನಿಂದ ವಿವಿಧ ಪೂಜಾ ಕೈಂಕರ್ಯ ಹಾಗೂ ಖಾಸಗಿ ದರ್ಬಾರ್ ಆರಂಭಗೊಳ್ಳಲಿದೆ. ನವರಾತ್ರಿಯ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಮೈಸೂರಿನತ್ತ ಬರುತ್ತಿದ್ದು, ಪ್ರವಾಸಿಗರ ಆಕರ್ಷಿಸಲು ಮೈಸೂರು ಸಜ್ಜಾಗಿದೆ. ಇದನ್ನೂ ಓದಿ: ಎತ್ತರದ ಬೆಟ್ಟದಲ್ಲಿ ನೀರು ನಿಲ್ಲೋದಿಲ್ಲ, ಹಾಗೆ ಎಲ್ಲಾ ಕಷ್ಟಗಳೂ ಜಾರಿ ಹೋಗುತ್ತವೆ: ವೀರೇಂದ್ರ ಹೆಗ್ಗಡೆ

  • ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್‌ಗೆ ಬಿಗಿ ಭದ್ರತೆ

    ದಸರಾ ಉದ್ಘಾಟಿಸಲಿರುವ ಬಾನು ಮುಷ್ತಾಕ್‌ಗೆ ಬಿಗಿ ಭದ್ರತೆ

    – ಹೋಟೆಲ್‌ ಬಳಿ 3 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ

    ಮೈಸೂರು: ನಾಡಹಬ್ಬ ದಸರಾ (Dasara) ಉದ್ಘಾಟಿಸಲಿರುವ ಬಾನು ಮುಷ್ತಾಕ್‌ (Banu Mushtaq) ಅವರು ಖಾಸಗಿ ಹೋಟೆಲಿನಲ್ಲಿ (Private Hotel) ವಾಸ್ತವ್ಯ ಹೊಂದಿದ್ದು ಸರ್ಕಾರ ಬಿಗಿ ಭದ್ರತೆ ನೀಡಿದೆ.

    ಸ್ಥಳದಲ್ಲಿ 3 ಕೆಎಸ್‌ಆರ್‌ಪಿ (KSRP) ತುಕಡಿಯನ್ನು ನಿಯೋಜಿಸಿದ್ದು, ಬೆಳಗ್ಗೆ 9:30ಕ್ಕೆ ಹೋಟೆಲಿನಿಂದ ಬಾನು ಮುಷ್ತಾಕ್‌ ಪೊಲೀಸ್‌ ಎಸ್ಕಾರ್ಟ್‌ ಮೂಲಕ ಚಾಮುಂಡಿ ಬೆಟ್ಟಕ್ಕೆ ತೆರಳಲಿದ್ದಾರೆ.

    ಬಾನು ಮುಷ್ತಾಕ್‌ ಆಯ್ಕೆ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೊಲೀಸರಿಂದ ಭಾರೀ ಭದ್ರತೆ ನೀಡಲಾಗಿದೆ. ಇದನ್ನೂ ಓದಿ: Navratri 2025 Day 1: ಶೈಲಪುತ್ರಿಯ ಮಹತ್ವವೇನು?

    ಉದ್ಘಾಟಕರ ಸ್ವಾಗತಕ್ಕೆ ಚಾಮುಂಡಿ ಬೆಟ್ಟ ಸಿದ್ಧವಾಗಿದ್ದು ಮಹಿಷಾಸುರ ಮೂರ್ತಿಯಿಂದ ದೇವಾಲಯದವರೆಗೆ ಸಾಂಪ್ರಾದಾಯಿಕ ಸ್ವಾಗತ ನೀಡಲಾಗುತ್ತದೆ. ರಸ್ತೆ ಉದ್ದಕ್ಕೂ ರಂಗೋಲಿ ಬಿಡಿಸಿ, ಬಾಳೆ ಕಂಬ ಕಟ್ಟಿ ಸ್ವಾಗತಿಸಲು ತಯಾರಿ ನಡೆದಿದೆ.

    ಮೂರು ಕಡೆ ಚೆಕ್ಕಿಂಗ್‌ ಪಾಯಿಂಟ್‌ ಇದ್ದು ಆಗಮಿಸುವ ಪ್ರತಿಯೊಬ್ಬರನ್ನು ಪರಿಶೀಲಿಸಿದ ಬಳಿಕವಷ್ಟೇ ಬೆಟ್ಟಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ.

    ಉದ್ಘಾಟನೆಗೂ ಮುನ್ನ ಸಿಎಂ ಸಿದ್ದರಾಮಯ್ಯ, ಉದ್ಘಾಟಕರಾದ ಬಾನು ಮುಸ್ತಾಕ್ ಸೇರಿದಂತೆ ಗಣ್ಯರಿಗೆ ಮಹಿಷಾ ಮೂರ್ತಿ ಬಳಿ ಜಿಲ್ಲಾಡಳಿತ ಸ್ವಾಗತ ನೀಡಲಿದೆ. ಅಲ್ಲಿಂದ ಅಲ್ಲಿಂದ ತೆರೆದ ವಾಹನ ಅಥವಾ ಕಾಲ್ನಡಿಗೆ ಮೂಲಕ ಚಾಮುಂಡೇಶ್ವರಿ ದೇವಾಸ್ಥಾನಕ್ಕೆ ಗಣ್ಯರು ತೆರಳಲಿದ್ದಾರೆ. ದೇವರ ದರ್ಶನ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ.

  • ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

    ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಬಂದಿದ್ದು ಹೇಗೆ?

    – ಕರ್ನಾಟಕದಲ್ಲಿ ದಸರಾ ವೈಭವ

    ಸರಾ ಎಂದೊಡನೆ ಥಟ್ಟನೆ ನೆನಪಾಗುವುದು ಸಾಂಸ್ಕೃತಿಕ ನಗರಿ ಮೈಸೂರು (Mysuru Dasara). ಆದರೆ, ಈ ಸಾಂಸ್ಕೃತಿಕ ಉತ್ಸವದ ಬೇರುಗಳು ಒಂದೊಂದು ಕಡೆಗೆ ಕವಲೊಡೆದು ನಿಂತಿದೆ. ಇತಿಹಾಸದ ಪುಟಗಳನ್ನು ತಿರುಗಿಸಿ ನೋಡಿದಾಗ ದಸರಾದ ಮೂಲ ವಿಜಯನಗರ ಸಾಮ್ರಾಜ್ಯದಲ್ಲಿದೆ. ರಾಜ ಕೃಷ್ಣದೇವರಾಯ ಅವರ ಕಾಲದಲ್ಲಿ ವೈಭವದಿಂದ ಈ ಹಬ್ಬ ಆಚರಿಸಲಾಗುತ್ತಿತ್ತು. ಅದು ಅಲ್ಲಿಂದ ನೇರವಾಗಿ ಮೈಸೂರಿಗೆ ಬಳುವಳಿಯಾಗಿ ಬಂದಿಲ್ಲ. ಇಲ್ಲೂ ಒಂದು ಇತಿಹಾಸವಿದೆ. ಹಳೆ ಮೈಸೂರು ಭಾಗದ ಪಟ್ಟಣವೊಂದರಲ್ಲಿ ದಸರಾವನ್ನು ಮೊದಲು ಆಚರಿಸಲಾಯಿತು. ಅದುವೇ ಈಗಿನ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna Dasara). ನಂತರ ಇದರ ಪ್ರಭಾವ ಎಲ್ಲೆಡೆ ಹಬ್ಬಿತು. ಹಲವು ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ದಸರಾ ಆಚರಣೆ ಪ್ರಾರಂಭಗೊಂಡವು. ಅದು ಪರಂಪರಾಗತವಾಗಿ ಮುಂದುವರಿದುಕೊಂಡು ಬಂದವು.

    ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭ
    ಕರ್ನಾಟಕದಲ್ಲಿ ದಸರಾ ಆಚರಣೆಗಳು ವಾಸ್ತವವಾಗಿ 1610 ರಲ್ಲಿ ಪ್ರಾರಂಭವಾಯಿತು. ರಾಜ ರಾಜ ಒಡೆಯರ್ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣ ಎಂಬ ಸಣ್ಣ ಪಟ್ಟಣದಲ್ಲಿ ಇದು ಆರಂಭಗೊಂಡಿತು ಎಂದು ಇತಿಹಾಸ ಹೇಳುತ್ತದೆ. ಆಗ ಶ್ರೀರಂಗಪಟ್ಟಣವು ಒಡೆಯರ್ ರಾಜವಂಶದ ರಾಜಧಾನಿಯಾಗಿತ್ತು. ಮುಂದಿನ ಶತಮಾನದ ವರೆಗೆ ಹಾಗೆಯೇ ಮುಂದುವರಿದಿತ್ತು. ಇದನ್ನೂ ಓದಿ: ದಸರಾ ಆನೆಗಳ ತಬ್ಬಿಕೊಂಡು ಯುವತಿ ರೀಲ್ಸ್‌: ದುಡ್ಡಿದ್ದವರ ದರ್ಬಾರ್‌ಗೆ ಅಧಿಕಾರಿಗಳು ಸಾಥ್‌?

    ಮೈಸೂರಿಗೆ ರಾಜಧಾನಿ ಸ್ಥಳಾಂತರ
    17 ನೇ ಶತಮಾನದ ಅಂತ್ಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಅದರೊಂದಿಗೆ, ಅದ್ಧೂರಿ ದಸರಾ ಆಚರಣೆಗಳು ಸಹ ಮೈಸೂರಿಗೆ ಸ್ಥಳಾಂತರಗೊಂಡವು. ಒಂಬತ್ತು ದಿನಗಳ ಉತ್ಸವದ ಸಮಯದಲ್ಲಿ ಸ್ಥಳೀಯ ಜನರು (ಶ್ರೀರಂಗಪಟ್ಟಣ) ಸರಳ ಆಚರಣೆಗಳನ್ನು ಮಾತ್ರ ಕೈಬಿಡದೇ ಮುಂದುವರೆಸಿದರು. ಆದರೆ, 2009 ರಲ್ಲಿ ಸ್ಥಳೀಯರ ಭಾರಿ ಬೇಡಿಕೆಯಿಂದಾಗಿ ಜಂಬೂ ಸವಾರಿ ಸೇರಿದಂತೆ ಮೂರು ದಿನಗಳ ದಸರಾ ಆಚರಣೆಯನ್ನು ಶ್ರೀರಂಗಪಟ್ಟಣದಲ್ಲಿ ನಡೆಸಲಾಯಿತು. ಆ ಪರಂಪರೆ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಆದ್ದರಿಂದಲೇ ಮೈಸೂರು ದಸರಾ ಸಂದರ್ಭದಲ್ಲೇ ಶ್ರೀರಂಗಪಟ್ಟಣದಲ್ಲೂ ದಸರಾ ನಡೆಯಲಿದೆ.

    ಮಂಗಳೂರು ದಸರಾ: ಬಾರಿ ಚಂದ
    ಮಂಗಳೂರಿನಲ್ಲಿ ದಸರಾವನ್ನು ಆಡುಮಾತಿನಲ್ಲಿ ಮಾರ್ನಾಮಿ ಎಂದು ಕರೆಯಲಾಗುತ್ತದೆ. ಕರಾವಳಿ ನಗರದಲ್ಲಿ ಈ ಹಬ್ಬವು ಮಂಗಳಾದೇವಿ, ಕುದ್ರೋಳಿ ಗೋಕರ್ಣನಾಥೇಶ್ವರ ಮತ್ತು ಶ್ರೀ ವೆಂಕಟರಮಣ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳ ಸುತ್ತ ಸುತ್ತುತ್ತದೆ. ಸರ್ವಜನಿಕ ಶಾರದಾ ಪೂಜಾ ಮಹೋತ್ಸವ (ಸಾರ್ವಜನಿಕ ಆಚರಣೆ) ಮತ್ತೊಂದು ಪ್ರಮುಖ ಅಂಶವಾಗಿದೆ. ಎಲ್ಲಾ ದೇವಾಲಯಗಳು ಶಾರದಾ ದೇವಿಯ ಅಲಂಕೃತ ವಿಗ್ರಹಗಳನ್ನು ತಯಾರಿಸುತ್ತವೆ. ದೈನಂದಿನ ಪೂಜೆಗಳ ನಂತರ ಭವ್ಯ ಮೆರವಣಿಗೆಗಳನ್ನು ನಡೆಸುತ್ತವೆ. ಒಂಬತ್ತು ದಿನಗಳು ಸಾವಿರಾರು ಭಕ್ತರು ಸಾಕ್ಷಿಯಾಗುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾರಂಭಗಳಿಂದ ತುಂಬಿರುತ್ತವೆ. ಹುಲಿ ವೇಷ ಅಥವಾ ಹುಲಿ ನೃತ್ಯವು ಉತ್ಸವಕ್ಕೆ ಭೂಷಣದಂತಿರುತ್ತದೆ. ವಿವಿಧ ಕಲಾ ಪ್ರಕಾರಗಳು, ನೃತ್ಯ, ಸಂಗೀತ ಮತ್ತು ಸಾಂಪ್ರದಾಯಿಕ ರಥಗಳನ್ನು ಒಳಗೊಂಡಿರುವ ಭವ್ಯವಾದ ಟ್ಯಾಬ್ಲೋಗಳ ಮೆರವಣಿಗೆಯೂ ಇರುತ್ತದೆ. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?

    ಮೈಸೂರು ದಸರಾ: ಎಷ್ಟೊಂದು ಸುಂದರ
    ದಸರ ಆಚರಣೆಯನ್ನು ಮೂಲತಃ ವಿಜಯನಗರ ರಾಜರು ಆಚರಿಸುತ್ತಿದ್ದರು. ನಂತರ ಇದನ್ನು ಮಹಾನವಮಿ ಎಂದು ಕರೆಯಲಾಯಿತು. ಸಾಮ್ರಾಜ್ಯದ ಪತನದ ನಂತರ, ಮೈಸೂರಿನ ಒಡೆಯರ್, ಮುಖ್ಯವಾಗಿ ರಾಜ ಒಡೆಯರ್ ಈ ಸಂಪ್ರದಾಯವನ್ನು ಮುಂದುವರೆಸಿದರು. 10 ದಿನಗಳ ಉತ್ಸವದ ಸಮಯದಲ್ಲಿ ಅವರು ರಾಜ ನಗರದಲ್ಲಿ ಆಚರಣೆಗಳಿಗೆ ಹೊಸ ಪರಂಪರೆಯನ್ನು ಸೇರಿಸಿದರು. ಅದರ ಪ್ರತಿಬಿಂಬ ಎಂಬಂತೆ ರಾಜಮನೆತನ, ಸ್ಮಾರಕಗಳು, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ನಗರದ ಪ್ರಮುಖ ಪ್ರದೇಶಗಳು ಈಗ ಬೆಳಗುತ್ತಿವೆ. ಮೈಸೂರಿನ ಹಳೆಯ-ಪ್ರಪಂಚದ ಮೋಡಿಯನ್ನು ಪ್ರತಿಬಿಂಬಿಸುವ ದರ್ಬಾರ್‌ಗಳು ಆತಿಥೇಯ ಕವಿ ಸಭೆಗಳು, ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮತ್ತು ಚಲನಚಿತ್ರೋತ್ಸವಗಳು ಎಲ್ಲವೂ ಮೇಳೈಸಿವೆ. ವಿಜಯದಶಮಿ ದಿನದಂದು ಉತ್ಸವಗಳು ಪ್ರಸಿದ್ಧ ಜಂಬೂ ಸವಾರಿಯೊಂದಿಗೆ ವಿಜೃಂಭಣೆಯಿಂದ ಕೊನೆಗೊಳ್ಳುತ್ತವೆ. ಇದು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಅಲಂಕರಿಸಿದ ಆನೆಯ ಮೇಲೆ ಚಿನ್ನದಂಬಾರಿ ಮೇಲೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತುಕೊಂಡು ಹೋಗುವುದು ಪ್ರಮುಖ ಆಕರ್ಷಣೆಯಾಗಿದೆ. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಎಲ್ಲಾ ಉತ್ಸವಗಳ ಮುಕ್ತಾಯವನ್ನು ಸೂಚಿಸುತ್ತದೆ.

    ಮಡಿಕೇರಿ ದಸರಾ: ಮಾರಿಯಮ್ಮ ಸರ್ವೋಚ್ಚ ಆಳ್ವಿಕೆ ನಡೆಸುವ ಸ್ಥಳ
    ರಾಜ ದೊಡ್ಡವೀರ ರಾಜೇಂದ್ರ ಮೈಸೂರಿನ ಪ್ರತಿರೂಪಗಳಂತೆಯೇ ಆಯುಧ ಪೂಜೆ ಮತ್ತು ದೇವಿ ಪೂಜೆಯನ್ನು ಮಾಡಿ ನವರಾತ್ರಿಯನ್ನು ಆಚರಿಸುತ್ತಿದ್ದನೆಂದು ಹೇಳಲಾಗುತ್ತದೆ. ಬೆಟ್ಟದ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವವು ಮಾರಿಯಮ್ಮ ದೇವತೆಗೆ ಸಮರ್ಪಿತವಾಗಿದೆ. ಕೊಡಗಿನಲ್ಲಿ ದೇವಿ ಹೆಸರಿನಲ್ಲಿ ನಾಲ್ಕು ದೇವಾಲಯಗಳಿವೆ. ಮಾರಿಯಮ್ಮನ ನೃತ್ಯವು ವಿಶಿಷ್ಟವಾದ ಧಾರ್ಮಿಕ ಜಾನಪದ ನೃತ್ಯ (ಕರಗ)ವನ್ನು ಹೊಂದಿದೆ. ಇಲ್ಲಿ ಹಬ್ಬವು ಭಕ್ತರಿಗೆ ಸಂಬಂಧಿಸಿದೆ. ಆದ್ದರಿಂದ ಇದನ್ನು ಜನೋತ್ಸವ ಎಂದೂ ಕರೆಯುತ್ತಾರೆ. ಈ ಪ್ರದೇಶದ ಪ್ರತಿಯೊಂದು ದೇವಾಲಯವು ‘ಮಂಟಪ’ ಅಥವಾ ಟ್ಯಾಬ್ಲೋಗಳಿಗೆ ತನ್ನದೇ ಆದ ಥೀಮ್ ಅನ್ನು ಹೊಂದಿದೆ.

    ಶಿವಮೊಗ್ಗ ದಸರಾ: ಒಂದು ಮಿನಿ ಮೈಸೂರು ದಸರಾ
    ಶಿವಮೊಗ್ಗದ ಆಚರಣೆಗಳು ಇತ್ತೀಚಿನದ್ದಾಗಿದ್ದು ಮೈಸೂರು ದಸರಾ ಮಾದರಿಯಲ್ಲಿವೆ. ಹಬ್ಬಗಳ ಕೇಂದ್ರವಾಗಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಶಿವಮೊಗ್ಗವು ನವರಾತ್ರಿಯ ಸಮಯದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಮೇಳಗಳು ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತದೆ. ಇತ್ತೀಚೆಗೆ, ಈ ಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಲನಚಿತ್ರ ತಾರೆಯರು ಮತ್ತು ಗಾಯಕರು ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಜಂಬೂಸವಾರಿ ಕೂಡ ಇಲ್ಲಿ ನಡೆಯುವ ಉತ್ಸವಗಳ ಭಾಗವಾಗಿದೆ. ಈ ಪ್ರದೇಶದ ಸುತ್ತಮುತ್ತಲಿನ ದೇವಾಲಯಗಳು ಸಹ ಉತ್ಸವಗಳಲ್ಲಿ ಭಾಗವಹಿಸುತ್ತವೆ. ಶಿವಮೊಗ್ಗದಲ್ಲಿ ನಡೆಯುವ ದಸರಾ ಆಚರಣೆಗಳು ಬರಹಗಾರರು, ಕವಿಗಳು, ರಾಜಕಾರಣಿಗಳು, ಚಲನಚಿತ್ರ ತಾರೆಯರು ಮತ್ತು ಇತರ ಕಲಾವಿದರ ಸಂಗಮಕ್ಕೆ ಕಾರಣವಾಗುತ್ತವೆ.

  • ದಸರಾ 2025 | ನವರಾತ್ರಿಗೆ ಉತ್ತರ ಕರ್ನಾಟಕ ಶೈಲಿಯ ಸಜ್ಜಕದ ಹೋಳಿಗೆ ಮಾಡಿ

    ದಸರಾ 2025 | ನವರಾತ್ರಿಗೆ ಉತ್ತರ ಕರ್ನಾಟಕ ಶೈಲಿಯ ಸಜ್ಜಕದ ಹೋಳಿಗೆ ಮಾಡಿ

    ನ್ನೇನು ದಸರಾಗೆ ಕೆಲವೇ ದಿನಗಳು ಬಾಕಿಯಿವೆ. ನಾಳೆಯಿಂದಲೇ ನವರಾತ್ರಿ ಆರಂಭವಾಗುತ್ತಿದೆ. ಒಂಭತ್ತು ದಿನ ಬೇರೆ ಬೇರೆ ಬಣ್ಣದ ಸೀರೆ ಹಾಕಿಕೊಳ್ಳುವಂತೆ ಪ್ರತಿ ದಿನವೂ ವಿಭಿನ್ನ ಸಿಹಿ ಖಾದ್ಯವನ್ನು ಮಾಡಿ, ದೇವರಿಗೆ ಅರ್ಪಿಸಿ.

    ಹೌದು, ಸಜ್ಜಕದ ಹೋಳಿಗೆ ಉತ್ತರ ಕರ್ನಾಟಕದಲ್ಲಿ ಮಾಡುವ ಒಂದು ಸಿಹಿ ಖಾದ್ಯ. ನವರಾತ್ರಿ ಹಬ್ಬವಷ್ಟೇ ಅಲ್ಲ. ಬೇರೆ ಹಬ್ಬದ ಸಂದರ್ಭದಲ್ಲಿಯೂ ಸಜ್ಜಕದ ಹೋಳಿಗೆಯನ್ನು ಮಾಡಿ ದೇವರಿಗೆ ಅರ್ಪಿಸುತ್ತಾರೆ. ಹೂರಣದ ಒಬ್ಬಟ್ಟು, ಕಾಯಿ ಒಬ್ಬಟ್ಟನ್ನು ಮಾಡುವಂತೆಯೇ ಈ ಸಜ್ಜಕದ ಒಬ್ಬಟ್ಟನ್ನು ಮಾಡುತ್ತಾರೆ. ಆದರೆ ಇದನ್ನು ತಯಾರಿಸಲು ಬಳಸುವ ಸಾಮಗ್ರಿಗಳು ಮಾತ್ರ ಬೇರೆಯಾಗಿರುತ್ತದೆ. ವಿಧಾನ ಹೆಚ್ಚು ಕಡಿಮೆ ಒಂದೇ ರೀತಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    ದಪ್ಪ ರವೆ
    ಗೋಧಿ ಹಿಟ್ಟು
    ಎಣ್ಣೆ
    ನೀರು
    ಬೆಲ್ಲ
    ತುಪ್ಪ
    ಏಲಕ್ಕಿ ಪುಡಿ

    ಮಾಡುವ ವಿಧಾನ:
    ಮೊದಲಿಗೆ ಒಂದು ಪಾತ್ರೆಯಲ್ಲಿ ಬೆಲ್ಲ ಹಾಗೂ ನೀರು ಹಾಕಿ, ಪಾಕದ ಹದಕ್ಕೆ ಬರುವಂತೆ ಬಿಸಿಮಾಡಿಕೊಳ್ಳಿ. ಚೆನ್ನಾಗಿ ಪಾಕದ ಹದ ಬಂದ ತಕ್ಷಣ ಅದಕ್ಕೆ ದಪ್ಪ ರವೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಉಂಡೆ ಮಾಡಲು ಬರುವ ಹಾಗೆ ಗಟ್ಟಿಯಾಗುವ ತನಕ ಕಲಸಿಕೊಳ್ಳಿ. ನಂತರ ಒಲೆ ಆರಿಸಿ, ರವೆಯ ಮಿಶ್ರಣ ತಣ್ಣಗಾಗಲು ಬಿಡಿ. ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.

    ಇನ್ನೊಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಸ್ವಲ್ಪ ಉಪ್ಪು ಹಾಕಿ ಕಲಸಿಕೊಳ್ಳಿ. ಅದಕ್ಕೆ ನೀರು ಹಾಕಿ ಚಪಾತಿ ಹಿಟ್ಟಿನಂತೆ ಮೃದುವಾಗಿ ನಾದಿಕೊಳ್ಳಿ. ಕೊನೆಗೆ ಹಿಟ್ಟಿಗೆ ಎಣ್ಣೆ ಹಚ್ಚಿ, ಮೇಲೆ ಪಾತ್ರೆಯೊಂದನ್ನು ಮುಚ್ಚಿ ಕನಿಷ್ಠ 30 ನಿಮಿಷ ಬಿಡಿ.

    ಈಗ ರವೆಯ ಮಿಶ್ರಣದಿಂದ ಚಿಕ್ಕ ಉಂಡೆ ಮಾಡಿ ಇಟ್ಟುಕೊಳ್ಳಿ. ಚಪಾತಿ ಹಿಟ್ಟನ್ನು ಚಿಕ್ಕದ್ದಾಗಿ ಲಟ್ಟಿಸಿಕೊಂಡು ಅದರ ಮಧ್ಯಕ್ಕೆ ರವೆ ಹೂರಣವನ್ನು ಇಟ್ಟುಕೊಂಡು ಸುತ್ತಲೂ ಹಿಟ್ಟಿನಿಂದ ಕವರ್‌ ಮಾಡಿಕೊಳ್ಳಿ. ಅದನ್ನು ಚಪಾತಿ ರೀತಿ ಲಟ್ಟಿಸಿಕೊಂಡು, ಎಣ್ಣೆ ಹಚ್ಚಿ ಬೇಯಿಸಿಕೊಂಡರೆ ಸಜ್ಜಕದ ಹೋಳಿಗೆ ತಯಾರಾಗುತ್ತದೆ.

  • ಪ್ರಮೋದಾ ದೇವಿ ಒಡೆಯರ್‌ಗೆ ದಸರಾಗೆ ಅಧಿಕೃತ ಆಹ್ವಾನ ನೀಡಿದ ಹೆಚ್‌.ಸಿ ಮಹದೇವಪ್ಪ

    ಪ್ರಮೋದಾ ದೇವಿ ಒಡೆಯರ್‌ಗೆ ದಸರಾಗೆ ಅಧಿಕೃತ ಆಹ್ವಾನ ನೀಡಿದ ಹೆಚ್‌.ಸಿ ಮಹದೇವಪ್ಪ

    – ಯದುವಂಶದಿಂದ ಕಿರಿಕಿರಿ ಆಗಿಲ್ಲ ಎಂದ ಸಚಿವ

    ಮೈಸೂರು: ವಿಶ್ವವಿಖ್ಯಾತ ಮೈಸೂರು (Mysuru) ದಸರಾದ (Dasara) ಅಧಿಕೃತ ಆಹ್ವಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ ಮಹದೇವಪ್ಪ (H C Mahadevappa) ಅವರು ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ನೀಡಿದ್ದಾರೆ.

    ಸೆ.22 ರಂದು ಪ್ರಾರಂಭವಾಗಲಿರುವ ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ಗೆ (Pramoda Devi Wadiyar) ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ಗೌರವ ಧನ ನೀಡಿ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಹಾಸನ ದುರಂತ – ಮೃತ ಎಂಜಿನಿಯರಿಂಗ್‌ ವಿದ್ಯಾರ್ಥಿ ಕುಟುಂಬಕ್ಕೆ ನೆರವಾದ ಹೆಚ್‌ಡಿಡಿ

    ಈ ವೇಳೆ ಮಾತನಾಡಿ ಸಚಿವರು, ದಸರಾಗೆ ಯಾವತ್ತೂ ಯದುವಂಶದಿಂದ ಕಿರಿಕಿರಿ ಆಗಿಲ್ಲ. ಪ್ರತಿ ದಸರಾಗೂ ಯದುವಂಶದ ಸಹಕಾರ ಇರುತ್ತದೆ. ಈ ಬಾರಿಯ ದಸರಾಗೂ ಉತ್ತಮ ಸಹಕಾರ ನೀಡುತ್ತೇವೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಕಳೆದ ಬಾರಿ ಆದ ಒಂದೆರಡು ಗೊಂದಲಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಪ್ರಮೋದಾ ದೇವಿ ಒಡೆಯರ್ ತಂದಿದ್ದಾರೆ. ಕೆಲ ಸಲಹೆ ಕೂಡ ಕೊಟ್ಟಿದ್ದು ಅವರ ಸಲಹೆ ಸ್ವೀಕರಿಸಿದ್ದೇವೆ ಎಂದಿದ್ದಾರೆ.

    ಬಾನು ಮುಷ್ತಾಕ್‌ ಅವರಿಂದ ದಸರಾವನ್ನು ಉದ್ಘಾಟಿಸುತ್ತಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಯದುವಂಶಕ್ಕೆ ದಸರಾದ ಆಹ್ವಾನ ನೀಡಿದ್ದಾರೆ.

  • ದಸರಾ ಉದ್ಘಾಟನೆ ವಿಚಾರ ಕೋರ್ಟ್‌ನಲ್ಲೇ ತೀರ್ಮಾನ ಆಗಲಿ: ಸಿಎಂ ತಿರುಗೇಟು

    ದಸರಾ ಉದ್ಘಾಟನೆ ವಿಚಾರ ಕೋರ್ಟ್‌ನಲ್ಲೇ ತೀರ್ಮಾನ ಆಗಲಿ: ಸಿಎಂ ತಿರುಗೇಟು

    – ಪ್ರತಾಪ್ ಸಿಂಹ ಅವರನ್ನ ಪಕ್ಷದವರೇ ನೆಗ್ಲೆಕ್ಟ್ ಮಾಡಿದ್ದಾರೆ; ಸಿದ್ದರಾಮಯ್ಯ ವ್ಯಂಗ್ಯ

    ಬೆಂಗಳೂರು: ಪ್ರತಾಪ್ ಸಿಂಹನನ್ನ (Pratap Simha) ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿ ಬಿಟ್ಟಿದ್ದಾರಲ್ಲ. ಅದಕ್ಕೆ ಕೋರ್ಟ್ವರೆಗೆ ಹೋಗಿರಬೇಕು. ದಸರಾ ಉದ್ಘಾಟನೆ ವಿಚಾರ ಕೋರ್ಟ್ನಲ್ಲೇ ತೀರ್ಮಾನ ಆಗಲಿ ಬಿಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು.

    ಬಾನು ಮುಷ್ತಾಕ್ (Banu Mushtaq) ದಸರಾ (Dasara) ಉದ್ಘಾಟನೆ ವಿರೋಧಿಸಿ ಪ್ರತಾಪ್ ಸಿಂಹ ಕೋರ್ಟ್ಗೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈದರಾಲಿ, ಟಿಪ್ಪು, ಮಿರ್ಜಾ ಇಸ್ಮಾಯಿಲ್, ನಿಸಾರ್ ಅಹಮದ್ ಅವರ ಬಗ್ಗೆ ಬಿಜೆಪಿ ಅವರು ಕೋರ್ಟ್ಗೆ ಹೋಗಿರಲಿಲ್ಲ. ಪ್ರತಾಪ್ ಸಿಂಹ ಅವರನ್ನು ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿದ್ದಾರಲ್ಲ. ಅದಕ್ಕೆ ಕೋರ್ಟ್ವರೆಗೆ ಹೋಗಿರಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮದ್ದೂರು ಗಲಾಟೆ | ನನ್ನ ಪ್ರಕಾರ ತಪ್ಪು ಮಾಡಿಲ್ಲ, ಬಿಜೆಪಿ-ಜೆಡಿಎಸ್ ಪ್ರಚೋದನೆ: ಸಿದ್ದರಾಮಯ್ಯ

    ಇನ್ನು ಮದ್ದೂರು (Maddur) ಗಲಾಟೆ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರಣೆ ಪಡೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಮಹಾನಿರ್ದೇಶಕ ಸಲೀಂ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಂದ ಮಾಹಿತಿ ಪಡೆದರು.

    ಸುದ್ದಿಗೋಷ್ಠಿಗೂ ಮುನ್ನ ಮದ್ದೂರು ಗಲಾಟೆ ಬಗ್ಗೆ ಮಾತಾಡಿದ ಸಿಎಂ, ಬಿಗಿ ಬಂದೋಬಸ್ತ್ಗೆ ಪೊಲೀಸರಿಗೆ ಸೂಚನೆ ನೀಡಿದರು. ಇದೇ ವೇಳೆ ಮದ್ದೂರು ಎಂಎಲ್‌ಎ ಏನ್ ಮಾಡ್ತಾ ಇದ್ದಾನೆ ಎಂದು ಕೇಳಿದ್ರು. ಅದಕ್ಕೆ ಸರ್ ಲಂಡನ್‌ಗೆ ಹೋಗಿದ್ದಾರೆ. ಮಗಳು ಅಲ್ಲಿ ಇದ್ದಾಳೆ ಎಂದು ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.