Tag: ದಸರಾ

  • ದಸರಾಗೆ ಐದು ಗಜಪಡೆಯ ಆಯ್ಕೆ ಅಂತಿಮ – ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆ

    ದಸರಾಗೆ ಐದು ಗಜಪಡೆಯ ಆಯ್ಕೆ ಅಂತಿಮ – ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಆರಂಭವಾಗಿದ್ದು, ಅರಣ್ಯ ಇಲಾಖೆ ದಸರಾಗೆ ಐದು ಆನೆಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಇದನ್ನೂ ಓದಿ: ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ದಸರಾ ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ಅರ್ಜುನ ಆನೆಗೆ ನಿವೃತ್ತಿ ಸಿಕ್ಕಿದ್ದು, ಈ ಬಾರಿಯ ದಸರಾದಿಂದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿದ್ದಾನೆ. ಹೀಗಾಗಿ ಈ ಬಾರಿ ಅಂಬಾರಿ ಆನೆಯಾಗಿ ಅಭಿಮನ್ಯು ಆಯ್ಕೆಯಾಗಿದ್ದಾನೆ. ಇನ್ನೂ ಉಳಿದಂತೆ ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಈ ಐದು ಆನೆಗಳನ್ನ ಕಾಡಿನಿಂದ ಕರೆತರಲು ಅನುಮತಿ ಕೂಡ ಸಿಕ್ಕಿದೆ.

    ಸದ್ಯಕ್ಕೆ ಆನೆಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರದಲ್ಲಿವೆ. ಅಕ್ಟೋಬರ್ 1ಕ್ಕೆ ಮೈಸೂರಿನ ಅರಣ್ಯ ಭವನಕ್ಕೆ ಆನೆಗಳು ಬರಲಿದೆ. ಮರುದಿನ ಅಂದರೆ ಅಕ್ಟೋಬರ್ 2ಕ್ಕೆ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಗಜಪಡೆಗೆ ಸ್ವಾಗತ ಮಾಡಲಾಗುತ್ತದೆ.

    ಗಜಪಡೆಗೆ ಕಳೆದ ಐದು ವರ್ಷಗಳಿಂದ ಅರ್ಜುನ ಕ್ಯಾಪ್ಟನ್ ಆಗಿದ್ದ. ಅರ್ಜುನಿಗೆ ಈಗ 60 ವರ್ಷ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಅರ್ಜನನ್ನು ಕ್ಯಾಪ್ಟನ್ ಶಿಪ್‍ನಿಂದ ಕೆಳಗೆ ಇಳಿಸುವುದು ಅನಿವಾರ್ಯವಾಗಿತ್ತು. 20 ವರ್ಷಗಳಿಂದ ನಿರಂತರವಾಗಿ ದಸರಾ ಗಜಪಡೆಯ ಸದಸ್ಯನಾಗಿರುವ ಅಭಿಮನ್ಯುಗೆ ಕ್ಯಾಪ್ಟನ್ ಪಟ್ಟ ಕಟ್ಟಿ ಅಂಬಾರಿ ಹೊರಿಸೋಕೆ ಅರಣ್ಯ ಇಲಾಖೆ ನಿರ್ಧರಿಸಿದೆ.

  • ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ಮಡಿಕೇರಿ: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಲು ಕೊಡಗಿನ ನಾಲ್ಕು ಆನೆಗಳು ಆಯ್ಕೆಯಾಗಿವೆ. ಆನೆಗಳ ದೇಹದಾಡ್ರ್ಯ ಮತ್ತು ಆರೋಗ್ಯ ಪರಿಶೀಲನೆ ಮಾಡಿರುವ ವಜ್ಯಜೀವಿ ವೈದ್ಯರು ಮತ್ತು ಅರಣ್ಯ ಇಲಾಖೆ, ಉನ್ನತ ಅಧಿಕಾರಿಗಳು ತಿಂಗಳಾಂತ್ಯಕ್ಕೆ ಆನೆಗಳನ್ನು ಮೈಸೂರಿಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿದ್ದಾರೆ.

    ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮೆರಗು ಅಂದ್ರೆ ಅದು ಜಂಬೂ ಸವಾರಿ. ಆದರೆ ಈ ಬಾರಿ ವಿಶ್ವಕ್ಕೆ ಬಂದೊದಗಿರುವ ಕೊರೊನಾ ಮಹಾಮಾರಿ ಮೈಸೂರು ದಸರಾದ ಜಂಬೂ ಸವಾರಿ ಮೇಲೂ ಕರಿನೆರಳು ಬೀರಿದೆ. ಹೀಗಾಗಿ ಈ ಬಾರಿ ನಡೆಯುತ್ತಿರುವ ಸರಳ ದಸರಾಕ್ಕೆ ಕೊಡಗಿನ ಆನೆ ಶಿಬಿರದ ನಾಲ್ಕು ಆನೆಗಳು ಆಯ್ಕೆಯಾಗಿವೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಕಾವೇರಿ, ಗೋಪಿ, ವಿಜಯ ಮತ್ತು ವಿಕ್ರಮ ಆನೆಗಳು ಈ ಬಾರಿಯ ದಸರಾಕ್ಕೆ ಆಯ್ಕೆಯಾಗಿವೆ. ಗೋಪಿ ಮತ್ತು ಕಾವೇರಿ ಆನೆಗಳು ತಲಾ ಒಂಬತ್ತು ಬಾರಿ ಮೈಸೂರು ದಸರಾದಲ್ಲಿ ಭಾಗವಹಿಸಿವೆ. ವಿಕ್ರಮ ಕೂಡ ಆರೇಳು ಬಾರಿ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ವಿಕ್ರಮ ಆನೆಯೂ ಹತ್ತಕ್ಕೂ ಹೆಚ್ಚು ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ಹೀಗಾಗಿ ಈ ಆನೆಗಳು ದಸರಾದಲ್ಲಿ ಭಾಗವಹಿಸುವುದು ಸೂಕ್ತವೆಂದು ನಿರ್ಧರಿಸಿ ಈ ತಿಂಗಳ ಅಂತ್ಯದೊಳಗೆ ಆನೆಗಳನ್ನು ಮೈಸೂರಿಗೆ ಸಾಗಿಸಲಿದ್ದಾರೆ.

    ಪ್ರತೀ ವರ್ಷ ಕೊಡಗಿನ ದುಬಾರೆ ಆನೆ ಶಿಬಿರದಿಂದ ಏಳು ಆನೆಗಳು ದಸರಾಕ್ಕೆ ಭಾಗವಹಿಸುತ್ತಿದ್ದವು. ಜೊತೆಗೆ ಅಷ್ಟೂ ಆನೆಗಳ ಮಾವುತ, ಕವಾಡಿಗ ಮತ್ತು ಅವರ ಕುಟುಂಬಗಳು ದಸಾರಕ್ಕೆ ಹೋಗುತ್ತಿದ್ದವು. ತಿಂಗಳುಗಟ್ಟಲೆ ಆ ಕುಟುಂಬಗಳು ಮೈಸೂರು ಅರಮನೆ ಆವರಣದಲ್ಲಿದ್ದು ಮೈಸೂರು ದಸರಾದ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳುತ್ತಿದ್ದವು. ಈ ಬಾರಿ ಅದ್ಯಾವುದಕ್ಕೂ ಅವಕಾಶವೇ ಇಲ್ಲ. ಬದಲಾಗಿ ನಾಲ್ಕು ಆನೆಗಳ ಮಾವುತರು ಮತ್ತು ಕವಾಡಿಗರು ಮಾತ್ರವೇ ಭಾಗವಹಿಸಲಿದ್ದಾರೆ.

  • ಶಿವಮೊಗ್ಗದಲ್ಲಿ ಈ ಬಾರಿ ಅತ್ಯಂತ ಸರಳವಾಗಿ ದಸರಾ ಆಚರಣೆ: ಈಶ್ವರಪ್ಪ

    ಶಿವಮೊಗ್ಗದಲ್ಲಿ ಈ ಬಾರಿ ಅತ್ಯಂತ ಸರಳವಾಗಿ ದಸರಾ ಆಚರಣೆ: ಈಶ್ವರಪ್ಪ

    ಶಿವಮೊಗ್ಗ: ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ದಸರಾ ಹಬ್ಬವನ್ನು ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

    ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಆಚರಣೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಎಲ್ಲೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ನಾವು ಈಗಾಗಲೇ ಹಲವಾರು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಜನರನ್ನು ಸೇರಿಸಿ ಕೊರೊನಾ ಹರಡಲು ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು. ಈ ಹಿನ್ನೆಲೆಯಲ್ಲಿ ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ತೀರ್ಮಾನಿಸಿರುವಂತೆ ಅತ್ಯಂತ ಸರಳವಾಗಿ ದಸರಾ ಆಚರಿಸಲಾಗುವುದು ಎಂದರು.

    ಚಂದ್ರಶೇಖರ ಆಜಾದ್ ಮೈದಾನದಲ್ಲಿ ನಡೆಯುವ ಬನ್ನಿ ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಎಲ್ಲಾ ದೇವಾಲಯಗಳ ದೇವರನ್ನು ಈ ಬಾರಿ ಕರೆದುಕೊಂಡು ತರಲು ಅವಕಾಶವಿಲ್ಲ. ಶಿವಮೊಗ್ಗ ನಗರದ ಮುಜರಾಯಿ ಇಲಾಖೆ ದೇವಸ್ಥಾನಗಳಿಂದ ದೇವರನ್ನು ಕರೆ ತರಬಹುದಾಗಿದೆ. ಖಾಸಗಿ ದೇವಾಲಯಗಳ ದೇವರನ್ನು ಕರೆ ತರಲು ಅವಕಾಶವಿಲ್ಲ. ದೇವರನ್ನು ಕರೆ ತರುವ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲ. ಸಾಂಕೇತಿಕವಾಗಿ ಬನ್ನಿಮಂಟಪಕ್ಕೆ ಕರೆ ತಂದು ವಿಧಿ ವಿಧಾನಗಳನ್ನು ನಡೆಸಲಾಗುವುದು ಎಂದರು.

    ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಹಾಗೂ ಮನೆ ಸಮೀಪದ ದೇವಾಲಯಗಳಲ್ಲಿಯೇ ದಸರಾ ಆಚರಿಸಬೇಕು. ಬನ್ನಿಯನ್ನು ಶ್ರದ್ಧಾಪೂರ್ವಕ ತಮ್ಮ ದೇವರಿಗೆ ಸಮರ್ಪಿಸಬಹುದಾಗಿದೆ. ತಾನು ಸಹ ಈ ಬಾರಿ ಬನ್ನಿ ಕಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ದಸರಾ ಸಂದರ್ಭದಲ್ಲಿ ಶಿವಮೊಗ್ಗ ನಗರಾದ್ಯಂತ ಪ್ರತಿವರ್ಷದಂತೆ ಗರಿಷ್ಟ ಅಲಂಕಾರ ಮಾಡಬೇಕು. ಚಂದ್ರಶೇಖರ ಆಜಾದ್ ಮೈದಾನದಲ್ಲಿ ನಡೆಯುವ ಬನ್ನಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸದೇ ಸಹಕರಿಸಬೇಕು. ದಸರಾ ಆಚರಣೆಯ ಎಲ್ಲಾ ಕಾರ್ಯಕ್ರಮಗಳನ್ನು ಟಿವಿ, ಇಂಟರ್ನೆಟ್ ಮೂಲಕ ನೇರ ಪ್ರಸಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಜನರು ಮನೆಯಲ್ಲಿಯೇ ಕುಳಿತು ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದರು.

    ಸಭೆಯಲ್ಲಿ ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಉಪಸ್ಥಿತರಿದ್ದರು.

  • ಹೆಸರಿಗೆ ಮಾತ್ರ ಸರಳ ದಸರಾ – ಬಿಡುಗಡೆಯಾಗಿದೆ 15 ಕೋಟಿ ಹಣ

    ಹೆಸರಿಗೆ ಮಾತ್ರ ಸರಳ ದಸರಾ – ಬಿಡುಗಡೆಯಾಗಿದೆ 15 ಕೋಟಿ ಹಣ

    – ಸರಳ ದಸರೆಗೆ 15 ಕೋಟಿ ಯಾಕೆ?
    – ಚರ್ಚೆಗೆ ಗ್ರಾಸವಾಗಿದೆ ಸರ್ಕಾರದ ನಡೆ

    ಮೈಸೂರು: ಕೊರೊನಾ ಭೀತಿಯಲ್ಲಿ ಈ ಬಾರಿ ಅತಿ ಸರಳ ದಸರಾ ನಡೆಸಲು ಸರ್ಕಾರ ಮುಂದಾಗಿದೆ. ಅತಿ ಸರಳ ದಸರಾ ಅಂದರೆ ದಸರಾ ವೆಚ್ಚವೂ ಅತಿ ಕಡಿಮೆ ಆಗಬೇಕು. ಆದರೆ ಸರ್ಕಾರ ಸರಳ ದಸರಕ್ಕೂ ಎಂದಿನಂತೆ 15 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಿದೆ. ಇದನ್ನೂ ಓದಿ: ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    ಸರಳ ದಸರಾಗೆ ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ರೂಪಾಯಿ ನೀಡುತ್ತಿದೆ. ಅಲ್ಲಿಗೆ ದಸರಾಗೆ 15 ಕೋಟಿ ರೂಪಾಯಿ ಸಿಕ್ಕಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ದಸರಾ ಉದ್ಘಾಟನೆ, ವಿಜಯದಶಮಿ ದಿನ ಅರಮನೆಯ ಒಳಗೆ ಜಂಬೂ ಸವಾರಿ ಹಾಗೂ ಅರಮನೆ ಆವರಣದಲ್ಲಿ 8 ದಿನ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ನಡೆಯಲಿದೆ. ಇಷ್ಟು ಮಾಡಲು 15 ಕೋಟಿ ರೂಪಾಯಿ ಏಕೆ ಎಂಬುದೇ ದೊಡ್ಡ ಪ್ರಶ್ನೆ.ಇದನ್ನೂ ಓದಿ: ಈ ಬಾರಿ ಮೈಸೂರಿನಲ್ಲಿ ಸರಳ ದಸರಾ ಆಚರಣೆ – ಏನಿರುತ್ತೆ? ಏನಿರಲ್ಲ?

    ರಾಜಕಾರಣಿಗಳು, ಅಧಿಕಾರಿಗಳು ಹಣ ಮಾಡಲು ಇಷ್ಟೊಂದು ಪ್ರಮಾಣದಲ್ಲಿ ಹಣ ನಿಗದಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಈ ಬಾರಿ ಯಾವುದೇ ದಸರಾ ಉಪ ಸಮಿತಿಗಳಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ, ದೀಪಾಲಂಕಾರಕ್ಕೂ ಬ್ರೇಕ್ ಬಿದ್ದಿದೆ. ಇವುಗಳು ಇಲ್ಲದೇ ಇರುವಾಗ 15 ಕೋಟಿ ಹಣವನ್ನು ಎಲ್ಲಿ ಹೇಗೆ ಖರ್ಚು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

    ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಸ್ಪಷ್ಟನೆಯೇ ಬೇರೆ ರೀತಿ ಇದೆ. ಸರ್ಕಾರ ಹಣ ನೀಡಿರುವುದು ಕೇವಲ ದಸರಾ ಆಚರಣೆಗೆ ಮಾತ್ರವಲ್ಲ. ಸಮಗ್ರ ಮೈಸೂರು ಅಭಿವೃದ್ಧಿಗಾಗಿ. ಇದರಲ್ಲಿ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಅಗತ್ಯಗಳಿಗೆ ಹಣ ಬಳಸಲಾಗುತ್ತದೆ. ಒಂದು ರೂಪಾಯಿಯೂ ದುರುಪಯೋಗ ಆಗಲು ಬಿಡುವುದಿಲ್ಲ. ಹಣದ ಬಳಕೆ ಪರಿಪೂರ್ಣ ಲೆಕ್ಕವನ್ನು ದಸರಾ ನಂತರ ನೀಡುತ್ತೇನೆ. ಕೊರೊನಾ ಸಂಕಷ್ಟ ಕಾಲದಲ್ಲೂ ದಸರಾಗೆ ಹಣ ನೀಡಿದೆ. ಇದರ ಸದುಪಯೋಗ ಮಾಡಿಕೊಳ್ಳುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ದಸರಾಗೆ ಉಳಿದಿರುವುದು ಇನ್ನೂ 30 ದಿನ ಮಾತ್ರ. ಇನ್ನೂ ರಸ್ತೆ ಕಾಮಗಾರಿಯ ರೂಪುರೇಷೆ ಸಿದ್ಧವಾಗಿಲ್ಲ. ಇದರ ನಡುವೆ ಮಳೆಯೂ ಬರುತ್ತಿದೆ. ಕಾಮಗಾರಿ ನಡೆಸಲು ಮಳೆ ಅಡಿಯಾಗುತ್ತದೆ. ಹೀಗಾಗಿ ಈ ಬಾರಿಯ ದಸರಾಗೆ ಬಿಡುಗಡೆಯಾಗಿರುವ ಹಣದ ಬಗ್ಗೆ ಭಾರೀ ಅನುಮಾನ ಮೂಡಿದೆ.

  • ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    ಅಕ್ಟೋಬರ್ 17ರಿಂದ ಮೈಸೂರು ದಸರಾ- ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮ

    – ಅರಮನೆ ಅಂಗಳದಲ್ಲಿ ಮಾತ್ರ ಜಂಬೂ ಸವಾರಿ
    – ಚಾಮುಂಡಿ ಬೆಟ್ಟದಲ್ಲಿ ಐವರಿಂದ ದಸರಾ ಉದ್ಘಾಟನೆ
    – ಈ ಬಾರಿ ಅಭಿಮನ್ಯು ಹೊರಲಿದ್ದಾನೆ ಅಂಬಾರಿ
    – ಜಂಬೂ ಸವಾರಿಗೆ ಐದು ಆನೆ ಮಾತ್ರ ಬಳಕೆ

    ಮೈಸೂರು: ಕೊರೊನಾ ನಿಯಮಗಳಿಗೆ ಅನುಗುಣವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದ್ದು, ಸಾಧಾರಣ ದಸರಾ ಆಚರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.

    ಮೈಸೂರು ದಸರಾ-2020 ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಗರದ ಅರಮನೆ ಮಂಡಳಿಯ ಕಚೇರಿಯಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ದಸರಾ ಸಿದ್ಧತೆ, ರೂಪುರೇಷೆ ಸೇರಿದಂತೆ ವಿವಿಧ ವಿಚಾಗಳ ಕುರಿತು ಚರ್ಚೆ ನಡೆಸಲಾಯಿತು.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಅಕ್ಟೋಬರ್ 17ರಂದು ಬೆಳಗ್ಗೆ 7:45 ರಿಂದ 8:15 ರೊಳಗೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ. ಕೊರೊನಾ ವಾರಿಯರ್ಸ್ ಗಳ ಆಯ್ಕೆಯನ್ನು ಆಯಾ ಇಲಾಖೆಯ ಮುಖ್ಯಸ್ಥರಿಗೆ ವಹಿಸಲಾಗಿದೆ. ಅರಮನೆಯಂಗಳದಲ್ಲಿ 9 ದಿನಗಳ ಕಾರ್ಯಕ್ರಮ ಇರಲಿದೆ. 9 ದಿನಗಳ ಕಾಲ ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಆದರೆ ಈ ಬಾರಿ ಒಂದು ದಿನಕ್ಕೆ ಒಂದೇ ಕಾರ್ಯಕ್ರಮ ಇರಲಿದೆ ಎಂದರು.

    ಪ್ರತಿ ವರ್ಷ ಮೈಸೂರು ದಸರಾದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಆದರೆ ಈ ಬಾರಿ ಎಷ್ಟು ಜನ ಭಾಗವಹಿಸಲು ಅವಕಾಶ ನೀಡಬೇಕು ಎಂಬುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಕೇಂದ್ರ ಸರ್ಕಾರದ ಕಾನೂನಿನ ಅನ್ವಯ ಜನ ಸೇರಲು ಅವಕಾಶ ನೀಡಲು ಸಮಿತಿ ನಿರ್ಧರಿಸಿದೆ. ಅಲ್ಲದೆ ಸುಮಾರು ಎರಡು ಸಾವಿರ ಜನ ದಸರಾ ವೀಕ್ಷಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯಾವ ರೀತಿ ಅನುಮತಿ ಕೊಡುತ್ತದೆಯೋ ಆ ರೀತಿ ವೀಕ್ಷಣೆಗೆ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ ಮುಖ್ಯ ಕಾರ್ಯದರ್ಶಿಗೆ ಬಂದ ಕೇಂದ್ರದ ಸೂಚನೆಯಂತೆ ಸಿಮೀತ ಪಾಸ್ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯನ್ನು ಐದು ಜನ ನೆರವೇರಿಸಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ದಸರಾ ಉದ್ಘಾಟಕರು ಯಾರು ಎಂಬುದನ್ನ ಸಿಎಂ ಅಂತಿಮ ನಿರ್ಧಾರ ಮಾಡುತ್ತಾರೆ. ಡಾ.ರವಿ ಅಥವಾ ಡಾ.ಮಂಜುನಾಥ್ ಹೆಸರು ಕೇಳಿ ಬಂದಿದೆ. ಇದನ್ನು ಸಿಎಂ ಅಂತಿಮ ಮಾಡಲಿದ್ದಾರೆ. ಐದು ಜನ ಕೊರೊನಾ ವಾರಿಯರ್ಸ್ ಗಳಲ್ಲಿ ಒಬ್ಬರು ಮಾತ್ರ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಚಿವರು ತಿಳಿಸಿದರು.

    ಜಂಬೂ ಸವಾರಿಯನ್ನು ಸಹ ಅರಮನೆಯಂಗಳದಲ್ಲಿ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಐದು ಆನೆಗಳನ್ನು ಮಾತ್ರ ಜಂಬೂ ಸವಾರಿಗೆ ಬಳಕೆ ಮಾಡಲಾಗುತ್ತದೆ. ವಿಶೇಷವೆಂದರೆ ಈ ಬಾರಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ದಸರಾ ಗಜಪಡೆಗೆ ನೂತನ ಕ್ಯಾಪ್ಟನ್‍ನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಸಾಂಪ್ರದಾಯಿಕವಾಗಿ ಅಕ್ಟೋಬರ್ 2ರಂದು 12:18 ನಿಮಿಷಕ್ಕೆ ಗಜಪಯಣ ಆರಂಭವಾಗಲಿದೆ. ಈ ಬಾರಿ ವೀರನ ಹೊಸಹಳ್ಳಿ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

  • ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

    ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಅಭಿಮನ್ಯು? – ಅರ್ಜುನನಿಗೆ ನಿವೃತ್ತಿ ನಿಶ್ಚಿತ

    ಮೈಸೂರು: ದಸರಾ ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ಅರ್ಜುನ ಆನೆಗೆ ನಿವೃತ್ತಿ ಸಿಗುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ದಸರಾದಿಂದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗೋದು ಬಹುತೇಕ ನಿಶ್ಚಿತವಾಗಿದೆ. ಇದರ ನಡುವೆ ದಸರಾ ಗಜಪಡೆಗೂ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂಬ ಮಾತು ಶುರುವಾಗಿದೆ.

    ಗಜಪಡೆಗೆ ಕಳೆದ ಐದು ವರ್ಷಗಳಿಂದ ಅರ್ಜುನ ಕ್ಯಾಪ್ಟನ್ ಆಗಿದ್ದ. ಅರ್ಜುನಿಗೆ ಈಗ 60 ವರ್ಷ. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗಳ ಮೇಲೆ ಹೆಚ್ಚು ಒತ್ತಡ ಹೇರುವಂತಿಲ್ಲ. ಹೀಗಾಗಿ ಅರ್ಜನನ್ನು ಕ್ಯಾಪ್ಟನ್ ಶಿಪ್‍ನಿಂದ ಕೆಳಗೆ ಇಳಿಸುವುದು ಅನಿವಾರ್ಯ. ಅಲ್ಲಿಗೆ ಈ ಬಾರಿಯಿಂದ ದಸರಾ ಗಜಪಡೆಗೆ ಹೊಸ ಕ್ಯಾಪ್ಟನ್ ಬರುವುದು ನಿಶ್ಚಿತವಾದಂತೆ ಆಗಿದೆ.

    ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮತ್ತಿಗೋಡು ಶಿಬಿರದಲ್ಲಿರುವ 54 ವರ್ಷದ ಅಭಿಮನ್ಯು ಆನೆ ದಸರಾ ಗಜಪಡೆಯ ನೂತನ ಕ್ಯಾಪ್ಟನ್ ಆಗುವುದು ಬಹುತೇಕ ಖಚಿತವಾಗಿದೆ. 20 ವರ್ಷಗಳಿಂದ ನಿರಂತರವಾಗಿ ದಸರಾ ಗಜಪಡೆಯ ಸದಸ್ಯನಾಗಿರುವ ಅಭಿಮನ್ಯುಗೆ ಕ್ಯಾಪ್ಟನ್ ಪಟ್ಟ ಕಟ್ಟಿ ಅಂಬಾರಿ ಹೊರಿಸೋಕೆ ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಕೂಡ ಬರೆದಿದೆ. ಈ ಬಾರಿ ನಡೆಯುವ ಸರಳದ ಮೂಲಕವೇ ಅಭಿಮನ್ಯು ಆನೆಗೆ ಕ್ಯಾಪ್ಟನ್ ಶಿಪ್ ಸಿಕ್ಕಂತಾಗಲಿದೆ.

    ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜಿ. ಅಲೆಕ್ಸಾಂಡರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲಕ್ಕಿಂತ ಕಾನೂನು ಮುಖ್ಯ. ನಾವು ಕಾನೂನು ಪಾಲಿಸಬೇಕು ಈ ಹಿನ್ನೆಲೆಯಲ್ಲಿ ಅಭಿಮನ್ಯು ಹೆಸರು ಸೂಚಿಸಲಾಗಿದೆ. ಅಂಬಾರಿ ಹೊರಲು ಆನೆಯ ಅವಶ್ಯಕತೆ ಇದೆ. ಅರ್ಜುನ ಆನೆಯೇ ಆಗಬೇಕು ಅಂತ ಏನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಇದರ ಜೊತೆಗೆ ಆನೆಗಳಿಗೆ ಕೊರೊನಾಗೆ ಟೆಸ್ಟ್ ಮಾಡಿಸಬೇಕಾ ಎಂಬ ಚರ್ಚೆಯೂ ಸಾಗಿದೆ. ಕೊರೊನಾ ಟೆಸ್ಟ್ ಬಗ್ಗೆ ಇಲಾಖೆಯಲ್ಲೆ ವಿಭಿನ್ನ ಅಭಿಪ್ರಾಯಗಳು ಇರುವ ಕಾರಣ ಟೆಸ್ಟ್ ಮಾಡಿಸಬೇಕೋ ಬೇಡವೋ ಎಂಬ ಗೊಂದಲ ಹೆಚ್ಚಾಗಿದೆ. ಅವಶ್ಯಕತೆ ಬಿದ್ದರೆ ಆನೆಗಳಿಗೂ ಕೊರೊನಾ ಟೆಸ್ಟ್ ಮಾಡಿಸೋಣ ಎಂಬ ನಿಲುವಿಗೂ ಇಲಾಖೆ ಬಂದಿದೆ. ಅಲ್ಲದೆ ಈ ಬಗ್ಗೆ ತಜ್ಜರ ಸಲಹೆಗಾಗಿ ಮುಖ್ಯ ಅರಣ್ಯ ಅಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗಿದೆ. ವಿದೇಶದ ಮೃಗಾಲಯದಲ್ಲಿ ಹುಲಿಗೆ ಕೊರೊನಾ ಸೋಂಕು ಕಂಡ ಬಂದ ಕಾರಣ ದಸರಾ ಆನೆಗಳ ಬಗ್ಗೆಯೂ ಮುಂಜಾಗೃತ ಕ್ರಮವಹಿಸಲು ನಿರ್ಧಾರಿಸಲಾಗಿದೆ. ಈ ಬಗ್ಗೆ ತಜ್ಞರ ಸಲಹೆಗಾಗಿ ಇಲಾಖೆ ಕಾದಿದೆ.

  • ಅಂಬಾರಿ ಹೊರುವ ಗಜಪಡೆಯ ಜೊತೆ ನಿಖಿಲ್-ರೇವತಿ

    ಅಂಬಾರಿ ಹೊರುವ ಗಜಪಡೆಯ ಜೊತೆ ನಿಖಿಲ್-ರೇವತಿ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಟ ನಿಖಿಲ್ ಮದುವೆಯಾದ ನಂತರ ತಮ್ಮ ಪತ್ನಿಯ ಜೊತೆಗಿನ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಪತ್ನಿಯನ್ನು ವಿಶೇಷವಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.

    ನಟ ನಿಖಿಲ್ ಹಬ್ಬದ ದಿನ ಅಥವಾ ವಿಶೇಷ ದಿನಗಳಲ್ಲಿ ಪತ್ನಿ ರೇವತಿಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಿಖಿಲ್ ಪತ್ನಿ ರೇವತಿಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲದೇ ದಸರಾದಲ್ಲಿ ಅಂಬಾರಿ ಹೊರುವ ಗಜಪಡೆಯನ್ನು ಕೂಡ ಭೇಟಿ ಮಾಡಿಸಿದ್ದಾರೆ.

    “ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾಪರಮೇಶ್ವರಿಯೊಂದಿಗೆ” ಎಂದು ಇನ್‍ಸ್ಟಾಗ್ರಾಂನಲ್ಲಿ ನಿಖಿಲ್ ಬರೆದುಕೊಂಡಿದ್ದಾರೆ. ಜೊತೆಗೆ ಗಜಪಡೆಯ ಜೊತೆ ದಂಪತಿ ಫೋಟೋ ತೆಗೆಸಿಕೊಂಡಿದ್ದು, ಆ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.

    ನಿಖಿಲ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ದಸರಾದ ಎಲ್ಲಾ ಆನೆಗಳು ಮೈಸೂರಿಗೆ ಆಗಮಿಸಿ, ದಸರಾ ಉತ್ಸವದ ತಾಲೀಮಿನಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಆದರೆ ಕೊರೊನಾ ಇರುವ ಕಾರಣ ಎಲ್ಲಾ ಆನೆಗಳು ಇನ್ನೂ ಶಿಬಿರದಲ್ಲಿಯೇ ಇದೆ. ಹೀಗಾಗಿ ನಿಖಿಲ್ ಪತ್ನಿಯೊಂದಿಗೆ ಶಿಬಿರಕ್ಕೆ ಭೇಟಿ ಕೊಟ್ಟಿದ್ದರು.

    https://www.instagram.com/p/CEvyTlspo9p/?igshid=i8frrrtsrlaq

  • ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

    ಹಬ್ಬಕ್ಕೆ ಬಿಸಿಬಿಸಿ ಸಿಹಿ ಕಜ್ಜಾಯ ಮಾಡೋ ವಿಧಾನ

    ನಾಳೆಯಿಂದ ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಹಬ್ಬವನ್ನು ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜೊತೆ ಯಾವ ಸಿಹಿತಿನಿಸು ಮಾಡುವುದು ಎಂದು ಸಾಮಾನ್ಯವಾಗಿ ಹೆಂಗಸರು ತಲೆಕೆಡಿಸಿಕೊಂಡಿರುತ್ತಾರೆ. ಅವರಿಗಾಗಿ ಇಲ್ಲಿ ಸುಲಭ ಹಾಗೂ ಅತೀ ಬೇಗನೆ ಬಿಸಿ ಬಿಸಿ ಸಿಹಿ ಕಜ್ಜಾಯ ಮಾಡುವ ವಿಧಾನವನ್ನು ತಿಳಿಸಲಾಗಿದೆ.

    ಬೇಕಾಗುವ ಸಾಮಾಗ್ರಿಗಳು:
    1. ಅಕ್ಕಿ – ಒಂದೂವರೆ ಕಪ್
    2. ಬೆಲ್ಲ – 1 ಕಪ್
    3. ಎಳ್ಳು – 2 ಚಮಚ
    4. ಗಸಗಸೆ – 1 ಚಮಚ
    5. ಏಲಕ್ಕಿ – 2 ಚಮಚ
    6. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲು ಅಕ್ಕಿಯನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿಡಿ.
    * ನಂತರ ನೀರು ಬಸಿದು ಅಕ್ಕಿ ತೆಗೆದು ಒಣಗಿಸಿ, ಒಣಗಿದ ಅಕ್ಕಿಯನ್ನು ಪುಡಿ ಮಾಡಿಕೊಳ್ಳಿ.
    * ಈಗ ಒಲೆ ಮೇಲೆ ಬಾಣಲೆ ಇಟ್ಟು, ಅರ್ಧ ಕಪ್ ನೀರು ಮತ್ತು ಬೆಲ್ಲ ಹಾಕಿ, ಪಾಕ ಬರುವವರೆಗೂ ಕುದಿಸಿ.
    * ನಂತರ ಒಲೆ ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ಅಕ್ಕಿ ಪುಡಿ, ಎಳ್ಳು, ಗಸಗಸೆ, ಏಲಕ್ಕಿ ಮಿಕ್ಸ್ ಮಾಡಿ.
    * ಗಂಟು ಬಾರದ ರೀತಿಯಲ್ಲಿ ಸ್ವಲ್ಪ ಗಟ್ಟಿಯಾಗುವರೆಗೂ ಮಿಕ್ಸ್ ಮಾಡಿ, ನಂತರ ಒಲೆಯಿಂದ ಕೆಳಗಿಳಿಸಿ.


    * ಈಗ ಕರಿಯಲು ಎಣ್ಣೆ ಬಿಸಿಗಿಡಿ.
    * ಸಿದ್ಧ ಮಾಡಿದ ಹಿಟ್ಟನ್ನು ಸ್ವಲ್ಪ ತೆಗೆದು ಒಂದು ಪ್ಲೇಟ್ ನಲ್ಲಿ ಸಣ್ಣದಾಗಿ ಒಬ್ಬಟ್ಟಿನ ರೀತಿಯಲ್ಲಿ ತಟ್ಟಿಕೊಳ್ಳಿ.
    * ಈಗ ತಟ್ಟಿದ ಹಿಟ್ಟನ್ನು ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೂ ಕರಿದರೆ, ಬಿಸಿಬಿಸಿ ಕಜ್ಜಾಯ ತಯಾರಾಗುತ್ತದೆ.

  • ತೂಕ ಹೆಚ್ಚಿಸಿಕೊಂಡು ಕಾಡಿನತ್ತ ಪಯಣ ಬೆಳೆಸಿದ ದಸರಾ ಗಜಪಡೆ

    ತೂಕ ಹೆಚ್ಚಿಸಿಕೊಂಡು ಕಾಡಿನತ್ತ ಪಯಣ ಬೆಳೆಸಿದ ದಸರಾ ಗಜಪಡೆ

    ಮೈಸೂರು: ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ಗಜಪಡೆ ತೂಕವನ್ನು ಹೆಚ್ಚಿಸಿಕೊಂಡು ಇದೀಗ ಮತ್ತೆ ಕಾಡಿಗೆ ಮರಳಿವೆ.

    ಆದರೆ ಪ್ರತಿ ಬಾರಿ ದಸರಾ ಸಂದರ್ಭದಲ್ಲಿ ಆನೆಗಳ ತೂಕ ಹೆಚ್ಚಾಗುತ್ತದೆ. ಅದೇ ರೀತಿ ಈ ಬಾರಿಯೂ ಸಹ ಆನೆಗಳು ತೂಕ ಹೆಚ್ಚಿಸಿಕೊಂಡು ಕಾಡಿಕೆ ತೆರಳಿವೆ. ದಸರಾಗೆ ಆಗಮಿಸುವ ಸಂದರ್ಭದಲ್ಲಿ 6 ಆನೆಗಳ ತೂಕವನ್ನು ಪರೀಕ್ಷಿಸಲಾಗಿತ್ತು. ಗರ್ಭಿಣಿಯಾಗಿದ್ದರಿಂದ ವರಲಕ್ಷ್ಮಿ ಆನೆ ಮೊದಲೇ ಕಾಡಿಗೆ ತೆರಳಿತ್ತು. ಈಗ ಉಳಿದ 5 ಆನೆಗಳ ತೂಕವನ್ನು ಪರೀಕ್ಷಿಸಲಾಗಿದ್ದು, ಅಭಿಮನ್ಯು ಮತ್ತು ಈಶ್ವರ ಮೊದಲಿಗಿಂತ 275 ಕೆ.ಜಿ.ತೂಕವನ್ನು ಹೆಚ್ಚಿಸಿಕೊಂಡಿವೆ.

    ಧನಂಜಯ 250, ಅರ್ಜುನ 240, ವಿಜಯ 145 ಕೆ.ಜಿ.ತೂಕವನ್ನು ಹೆಚ್ಚಿಸಿಕೊಂಡಿವೆ. ಅಭಿಮನ್ಯು ಮೈಸೂರಿಗೆ ಬರುವಾಗ 5,145 ಕೆ.ಜಿ. ಇದ್ದ. ಇದೀಗ 5,420 ಕೆ.ಜಿ.ಗೆ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. ಈಶ್ವರ 3,995 ಕೆಜಿಯಿಂದ 4,270 ಕೆ.ಜಿ., ಧನಂಜಯ 4,460 ಕೆಜಿಯಿಂದ 4,710 ಕೆ.ಜಿ.ಗೆ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. ಅಂಬಾರಿ ಹೊತ್ತ ಅರ್ಜುನ 5,800 ಕೆ.ಜಿ.ಯಿಂದ 6,040 ಕೆ.ಜಿ. ಹಾಗೂ ವಿಜಯ 2,825 ಕೆ.ಜಿ.ಯಿಂದ 2,970 ಕೆ.ಜಿ.ಗೆ ತೂಕವನ್ನು ಹೆಚ್ಚಿಸಿಕೊಂಡಿವೆ.

    ಜಂಬು ಸವಾರಿ ಮುಗಿದ ಮಾರನೆ ದಿನ ಅಂದರೆ ಬುಧವಾರವೇ ಮೂರು ಆನೆಗಳು ಕಾಡಿಗೆ ಮರಳಿದ್ದವು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಜಯಪ್ರಕಾಶ್ ಆನೆಗಳು ಬುಧವಾರ ಕಾಡಿಗೆ ತೆರಳಿದ್ದವು.

     

    ಗಜಪಡೆಯನ್ನು ಬೀಳ್ಕೊಡಲು ಯಾವೊಬ್ಬ ಜನಪ್ರತಿನಿಧಿಯೂ ಬಂದಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಮಾತ್ರ ಗಜಪಡೆಯ ಬೀಳ್ಕೊಡಗೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ ದಸರಾ ಮುಗಿದ ಮೇಲೆ ಗಜಪಡೆ, ಅದರ ಮಾವುತ – ಕಾವಾಡಿಗಳು ಯಾರಿಗೆ ಬೇಕು ಎಂಬ ಮಾತನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಕ್ಷರಶಃ ಸತ್ಯ ಮಾಡಿದ್ದಾರೆ.

    ಎಲ್ಲ ಆನೆಗಳನ್ನು ಲಾರಿಗಳಿಗೆ ಹತ್ತಿಸುವಾಗ ಆ ಭಾವನಾತ್ಮಕ ಕ್ಷಣವನ್ನು ಕಂಡು ಅಲ್ಲಿನ ಜನರ ಕಣ್ತುಂಬಿ ಬಂತು. ಇದಕ್ಕೆ ಕಾರಣ ನಾನು ಅರಮನೆಯಿಂದ ಹೋಗುವುದಿಲ್ಲ ಎಂಬಂತೆ ಲಕ್ಷ್ಮಿ ಆನೆ ಲಾರಿ ಏರದೇಸತಾಯಿಸುತ್ತಿತ್ತು. ಸತತ ಎರಡು ಗಂಟೆಗಳ ಕಾಲ ಅರ್ಜುನ, ಗೋಪಿ, ವಿಕ್ರಮ ಆನೆಗಳು ಲಕ್ಷ್ಮಿ ಆನೆಯನ್ನ ಲಾರಿ ಹತ್ತಿಸಲು ಎಷ್ಟೇ ಪ್ರಯತ್ನಪಟ್ಟರೂ ಲಾರಿ ಏರದೇ ನಾನು ಹೋಗುವುದಿಲ್ಲ ಎಂದು ಹಠ ಹಿಡಿದಿತ್ತು. ಈ ವೇಳೆ ಕಡೆಯ ಪ್ರಯತ್ನವೆಂಬಂತೆ ಮಾವುತರು ಸೇರಿದಂತೆ ಆನೆಗಳ ಸಹಾಯದೊಂದಿಗೆ ಲಕ್ಷ್ಮಿ ಆನೆಯನ್ನು ಲಾರಿ ಹತ್ತಿಸಲಾಯಿತು.

  • ಕಾಡಿಗೆ ಹೊರಟಿತು ಗಜಪಡೆ – ಬೀಳ್ಕೊಡಲು ಬರಲಿಲ್ಲ ಜನಪ್ರತಿನಿಧಿಗಳು

    ಕಾಡಿಗೆ ಹೊರಟಿತು ಗಜಪಡೆ – ಬೀಳ್ಕೊಡಲು ಬರಲಿಲ್ಲ ಜನಪ್ರತಿನಿಧಿಗಳು

    ಮೈಸೂರು: ನಾಡಹಬ್ಬ ದಸರಾ ಯಶಸ್ವಿಯಾಗಿದ್ದು, ಇಂದು ಸಂಪ್ರದಾಯಿಕವಾಗಿ ಗಜಪಡೆಗೆ ಪೂಜೆ ನೇರವೇರಿಸಿ ಸ್ವಸ್ಥಾನಕ್ಕೆ ಕಳುಹಿಸಲಾಯಿತು. ಅರಮನೆಯಿಂದ ಗಜಪಡೆಯ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ ಕೊಡಲಾಯಿತು. ಈ ವೇಳೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.

    ಈ ವರ್ಷದ ನಾಡಹಬ್ಬ ದಸರಾ ಜಂಬೂ ಸವಾರಿ ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಗೆ ಇಂದು ಅರಮನೆ ಅಂಗಳದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕಾಡಿಗೆ ಬೀಳ್ಕೊಡಲಾಯಿತು. ಒಂದು ತಿಂಗಳ ಹಿಂದೆ ಗಜಪಡೆಯ ಸ್ವಾಗತಕ್ಕೆ ನಾ ಮುಂದು ತಾ ಮುಂದು ಎಂದು ಬಂದಿದ್ದ ಜನಪ್ರತಿನಿಧಿಗಳು ಆನೆಗಳ ಬೀಳ್ಕೊಡಲು ಮಾತ್ರ ಬರಲೇ ಇಲ್ಲ. ಜನಪ್ರತಿನಿಧಿಗಳು ಇರಲಿ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಎಸ್‍ಪಿ ಹೀಗೆ ಯಾರೊಬ್ಬರು ಬರಲೇ ಇಲ್ಲ.

    ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಮಾತ್ರ ಗಜಪಡೆಯ ಬೀಳ್ಕೊಡುಗೆಯಲ್ಲಿ ಭಾಗವಹಿಸಿದ್ದರು. ಅಲ್ಲಿಗೆ ದಸರಾ ಮುಗಿದ ಮೇಲೆ ಗಜಪಡೆ, ಅದರ ಮಾವುತ – ಕಾವಾಡಿಗಳು ಯಾರಿಗೆ ಬೇಕು ಎಂಬ ಮಾತನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಕ್ಷರಶಃ ಸತ್ಯ ಮಾಡಿದರು.

    ಈ ನಡುವೆ ಎಲ್ಲ ಆನೆಗಳನ್ನು ಲಾರಿಗಳಿಗೆ ಹತ್ತಿಸುವಾಗ ಆ ಭಾವನಾತ್ಮಕ ಕ್ಷಣ ಕಂಡು ಎಲ್ಲರಿಗು ಕಣ್ತುಂಬಿ ಬಂತು. ಇದಕ್ಕೆ ಕಾರಣ ನಾನು ಅರಮನೆಯಿಂದ ಹೋಗೋದಿಲ್ಲ ಎಂಬಂತೆ ಲಕ್ಷ್ಮೀ ಆನೆ ಲಾರಿ ಏರದೆ ಸತಾಯಿಸುತ್ತಿತ್ತು. ಸತತ ಎರಡು ಗಂಟೆಗಳ ಕಾಲ ಅರ್ಜುನ, ಗೋಪಿ, ವಿಕ್ರಮ ಆನೆಗಳು ಲಕ್ಷ್ಮಿ ಆನೆಯನ್ನು ಲಾರಿ ಹತ್ತಿಸಲು ಎಷ್ಟೇ ಪ್ರಯತ್ನಪಟ್ಟರು ಲಾರಿ ಏರದೆ ನಾ ಹೋಗಲ್ಲ. ಹೋಗಲ್ಲ ಎಂದು ಹಠ ಹಿಡಿದಿತ್ತು. ಈ ವೇಳೆ ಕಡೆಯ ಪ್ರಯತ್ನವೆಂಬಂತೆ ಮಾವುತರು ಸೇರಿದಂತೆ ಆನೆಗಳ ಸಹಾಯದೊಂದಿಗೆ ಲಕ್ಷ್ಮಿ ಆನೆಯನ್ನು ಲಾರಿ ಹತ್ತಿಸಲಾಯಿತು.

    ಇಂದು ದಸರಾದಲ್ಲಿ ಭಾಗಿಯಾಗಿದ್ದ 10 ಆನೆಗಳಿಗೆ ಮಾತ್ರ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಇನ್ನೂ ಉಳಿದ ಮೂರು ಆನೆಗಳನ್ನು ಚಾಮರಾಜನಗರಕ್ಕೆ ಹುಲಿ ಕಾರ್ಯಚರಣೆಗಾಗಿ ಕಳುಹಿಸಲಾಗಿದೆ.

    https://www.youtube.com/watch?v=xz6CgKrcUOs