Tag: ದಸರಾ

  • ಮೈಸೂರು ದಸರಾಗೆ ಡಾ.ಮಂಜುನಾಥ್ ಚಾಲನೆ- ಸಿಎಂ ಉಪಸ್ಥಿತಿ

    ಮೈಸೂರು ದಸರಾಗೆ ಡಾ.ಮಂಜುನಾಥ್ ಚಾಲನೆ- ಸಿಎಂ ಉಪಸ್ಥಿತಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ 410ನೇ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ದಸರಾ ಉದ್ಘಾಟಿಸಿದ್ದಾರೆ. ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಆದ್ಯತೆ ನೀಡಲಾಗಿದ್ದು, ವೈದ್ಯರಿಂದ ದಸರಾ ಉದ್ಘಾಟಿಸಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್ ಸನ್ಮಾನ ಸಹ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಅತ್ಯಂತ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ.

    ಈ ಮೂಲಕ ಮೈಸೂರು ದಸರಾ 2020ಕ್ಕೆ ವೈಭವದ ಚಾಲನೆ ದೊರೆತಂತಾಗಿದ್ದು, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಉದ್ಘಾಟಕರಿಗೆ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಜೊತೆಯಾಗಿದ್ದಾರೆ. ಶುಭ ತುಲಾ ಲಗ್ನದಲ್ಲಿ ದಸರಾ 2020 ಉದ್ಘಾಟನೆಗೊಂಡಿದೆ. ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ಸಿಎಂ ತೆರಳಿದರು. ಪ್ರತಿಬಾರಿ ಪೂರ್ಣಕುಂಭ ಸ್ವಾಗತದೊಂದಿಗೆ ಸಿಎಂ ಹಾಗೂ ಉದ್ಘಾಟಕರು ದೇವಾಲಯ ಪ್ರವೇಶಿಸುತ್ತಿದ್ದರು. ಆದರೆ ಈ ಬಾರಿ ಪೂರ್ಣಕುಂಭ ಸ್ವಾಗತ ಮಾಡಲಾಗಿಲ್ಲ.

    ವೇದಿಕೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನ ಸಹ ಮಾಡಲಾಗಿದ್ದು, ಮರಗಮ್ಮ (ಪೌರಕಾರ್ಮಿಕರು), ಡಾ.ನವೀನ್ (ಆರೋಗ್ಯ ಇಲಾಖೆ ಮೇಡಿಕಲ್ ಆಫಿಸರ್), ರುಕ್ಮಿಣಿ (ಸ್ಟಾಫ್ ನರ್ಸ್), ನೂರ್ ಜಾನ್ (ಆಶಾ ಕಾರ್ಯಕರ್ತೆ), ಕುಮಾರ್ (ಮೈಸೂರು ನಗರ ಪೊಲೀಸ್ ಪೇದೆ), ಅಯೂಬ್ ಅಹಮದ್ (ಸಾಮಾಜಿಕ ಕಾರ್ಯಕರ್ತ) ಇವರಿಗೆ ದಸರಾ ವೇದಿಕೆಯಲ್ಲಿ ಸನ್ಮಾನ ಮಾಡಿ ಕೊರೊನಾ ಸಂದರ್ಭದಲ್ಲಿನ ಇವರ ಸೇವೆಯನ್ನು ಸ್ಮರಿಸಲಾಗಿದೆ.

    ಅರಮನೆಯಲ್ಲಿ ಖಾಸಗಿ ದರ್ಬಾರ್
    ವಿಶ್ವವಿಖ್ಯಾತ ಮೈಸೂರು ದಸರಾ 2020ಕ್ಕೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‍ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮೂಲಕ ಅರಮನೆ ಒಳಾಂಗಣ ಪಾರಂಪರಿಕ ದಸರಾ ಕಾರ್ಯಕ್ರಮಗಳ ಆರಂಭಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 6.15 ರಿಂದ 6.30ರ ಶುಭ ಮಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಕಂಕಣಧಾರಣೆ ನೆರವೇರಿತು.

    ಯದುವಂಶದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಗೆ ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ನೆರವೇರಲಿದೆ. ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಕೊರೊನಾ ಕಾರಣಕ್ಕೆ ಖಾಸಗಿ ದರ್ಬಾರ್ ಗೆ ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಂದ ಪೂಜೆ ನೆರವೇರಿಸಲಾಗಿದೆ.

  • ಡಿಕೆಶಿ ಪಿಳ್ಳೆ ನೆಪ ಹುಡುಕಿಕೊಂಡು ಮಾತಾಡ್ತಿದ್ದಾರೆ: ಎಸ್.ಟಿ ಸೋಮಶೇಖರ್

    ಡಿಕೆಶಿ ಪಿಳ್ಳೆ ನೆಪ ಹುಡುಕಿಕೊಂಡು ಮಾತಾಡ್ತಿದ್ದಾರೆ: ಎಸ್.ಟಿ ಸೋಮಶೇಖರ್

    ಮೈಸೂರು: ಆರ್.ಆರ್ ನಗರದಲ್ಲಿ ಗೆಲ್ಲೋಕಾಗೋಲ್ಲ. ಅದಕ್ಕೆ ಡಿಕೆಶಿ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್‍ಐಆರ್ ಹಾಕುತ್ತಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್‍ಐಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು. ಈಗ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ತಿದ್ದಾರೆ. ಹೀಗಾಗಿ ಡಿಕೆಶಿ ಸುಮ್ಮನೆ ಆರೋಪ ಮಾಡ್ತಿದ್ದಾರೆ. ಅವರಿಗೆ ಆರ್ ಆರ್ ನಗರದಲ್ಲಿ ಗೆಲ್ಲೋಕೆ ಆಗೋಲ್ಲ ಅಂತ ಹೀಗೆಲ್ಲ ಮಾತನಾಡುತ್ತಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

    ಜಂಬೂ ಸವಾರಿಗೆ 300 ಮಂದಿಗೆ ಮಾತ್ರ ಅವಕಾಶ:
    ದಸರಾದ ಕೊನೆ ಹಂತದ ಸಿದ್ಧತೆ ಪರಿಶೀಲನೆ ಮಾಡ್ತಿದ್ದೇವೆ. ಟೆಕ್ನಿಕಲ್ ಕಮಿಟಿಯ ಸೂಚನೆ ಮೀರಿ ಒಂದೇ ಒಂದು ಕಾರ್ಯಕ್ರಮವನ್ನ ಮಾಡಿಲ್ಲ. ಜನ ಸೇರಿಸೋ ಪ್ರಶ್ನೆಯೇ ಇಲ್ಲ. ಉದ್ಘಾಟನೆಗೆ 200 ಮಂದಿ, ಜಂಬೂಸವಾರಿಗೆ 300 ಮಂದಿ ಮಾತ್ರ ಇರುತ್ತಾರೆ. ಭಾಗಿಯಾಗುವ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ ಎಂದರು. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ಈ ಬಾರಿ ಎಲ್ಲವು ವರ್ಚುವಲ್ ಆಗಿ ನೇರಪ್ರಸಾರ ಆಗಲಿದೆ. ನಾವು ಆಹ್ವಾನ ಮಾಡಿರುವ ಕೆಲವರು ದಸರಾಗೆ ಬರೋಲ್ಲ. ನಾವು ಬಂದು ಸಮಸ್ಯೆ ಆಗೋದು ಬೇಡ ಅಂತ ಹೇಳಿದ್ದಾರೆ. ಕೋವಿಡ್ ನಿಯಮ ಉಲ್ಲಂಘಿಸಿ ಯಾವ ಕಾರ್ಯಕ್ರಮವನ್ನು ಮಾಡೋದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

  • ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ಕೊರೊನಾ ವಾರಿಯರ್ಸ್‍ಗೆ ಗೌರವ- ಡಾ.ಮಂಜುನಾಥ್‍ರಿಂದ ಮೈಸೂರು ದಸರಾ ಉದ್ಘಾಟನೆ

    ಮೈಸೂರು: ದಸರಾ-2020 ಉದ್ಘಾಟಕರ ಆಯ್ಕೆ ಅಂತಿಮವಾಗಿದ್ದು, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.

    ಈ ಬಾರಿಯ ದಸರಾದಲ್ಲಿ ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಲಾಗುತ್ತಿದ್ದು, ಈ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ಅವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ. ಕೊರೊನಾ ವಾರಿಯರ್ ಹಿನ್ನೆಲೆ ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಡಾ.ಮಂಜುನಾಥ್ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

    ಅಲ್ಲದೆ ಮರಗಮ್ಮ (ಪೌರಕಾರ್ಮಿಕರು), ಡಾ.ನವೀನ್ (ಆರೋಗ್ಯ ಇಲಾಖೆ ವೈದ್ಯಾಧಿಕಾರಿ), ರುಕ್ಮಿಣಿ (ಸ್ಟಾಫ್ ನರ್ಸ್), ನೂರ್ ಜಾನ್ (ಆಶಾ ಕಾರ್ಯಕರ್ತೆ), ಕುಮಾರ್ (ಮೈಸೂರು ನಗರ ಪೊಲೀಸ್ ಪೇದೆ) ಹಾಗೂ ಅಯೂಬ್ ಅಹಮದ್ (ಸಾಮಾಜಿಕ ಕಾರ್ಯಕರ್ತ) ಇವರುಗಳಿಗೆ ಸನ್ಮಾನ ಮಾಡಲಾಗುತ್ತಿದೆ.

    ಟಕ್ನಿಕಲ್ ಕಮಿಟಿ ವರದಿಯಂತೆ ದಸರಾ ಆಚರಣೆ ಮಾಡಲಾಗುವುದು. ಟೆಕ್ನಿಕಲ್ ಕಮಿಟಿ ನೀಡಿರುವ ವರದಿಯಂತೆ ದಸರಾ ಸಿದ್ಧತೆ ಮಾಡಿಕೊಳ್ಳುತ್ತೇವೆ. ಉದ್ಘಾಟನಾ ಕಾರ್ಯಕ್ರಮಕ್ಕೆ 200, ಜಂಬೂಸವಾರಿಗೆ 300 ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಮಂದಿಗೆ ಅವಕಾಶ ನೀಡಲಾಗಿದೆ. ನಾವು ಸಹ ಇಷ್ಟೇ ಜನಕ್ಕೆ ಅವಕಾಶ ಮಾಡಿಕೊಡುತ್ತೇವೆ. ಟೆಕ್ನಿಕಲ್ ಕಮಿಟಿ ಸಲಹೆ ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮದವರು 350 ಮಂದಿ ಇದ್ದಾರೆ. ಇದರಲ್ಲಿ 50 ಜನರಿಗೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ಜನಪ್ರತಿನಿಧಿಗಳು 50 ಜನರ ಇದ್ದಾರೆ. ಈ ಸಂಖ್ಯೆಯನ್ನು ಸಹ 25ಕ್ಕೆ ಇಳಿಸುತ್ತೇವೆ. ಪೊಲೀಸರು 100 ಮಂದಿ ಇದ್ದಾರೆ ಇದನ್ನು ಸಹ ಅರ್ಧಕ್ಕೆ ಇಳಿಸುತ್ತೇವೆ. ಬೆಟ್ಟದಲ್ಲಿ ಸಹ 200 ಮಂದಿಯೊಳಗೆ ಕಾರ್ಯಕ್ರಮ ಮಾಡುತ್ತೇವೆ. ನಗರದಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ. ಜನ ಗುಂಪು ಸೇರಬಾರದು. ಎಲ್ಲಿಯೂ ಬಹಿರಂಗವಾಗಿ ಕಾರ್ಯಕ್ರಮ ನಡೆಸಬಾರದು ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

    ಈ ಬಾರಿಯ ದಸರಾಗೆ ಒಂದು ರೂಪಾಯಿಯನ್ನು ಖರ್ಚು ಮಾಡಿಲ್ಲ. ಇನ್ನೂ ದಸರಾ ಬಜೆಟ್ ಬಗ್ಗೆ ಪ್ಲಾನಿಂಗ್ ಆಗಿಲ್ಲ. ಟೆಕ್ನಿಕಲ್ ಕಮಿಟಿ ವರದಿ ಕೊಟ್ಟಿದೆ. ಅದರ ಸೂಚನೆಯಂತೆ ಕಾರ್ಯಕ್ರಮ ರೂಪಿಸುತ್ತೇವೆ. ಕಾರ್ಯಕ್ರಮಗಳಿಗೆ ಎಷ್ಟು ಹಣ ಬೇಕು ಎಂಬುದನ್ನು ಈಗ ತೀರ್ಮಾನ ಮಾಡುತ್ತೇವೆ. ಕಳೆದ ಬಾರಿ ದಸರಾದ ಹಣ ಬಾಕಿ ಇದೆ. ಸರ್ಕಾರಕ್ಕೆ ಹಣಕಾಸು ಇಲಾಖೆಗೆ ಮನವಿ ಮಾಡಿದ್ದೇವೆ. ಶಿಘ್ರದಲ್ಲೇ ಆ ಹಣವನ್ನು ತಂದು ಬಾಕಿ ಇರುವ ಬಿಲ್ ಪಾವತಿಸುತ್ತೇವೆ ಎಂದು ತಿಳಿಸಿದ್ದಾರೆ.

  • ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ: ಎಸ್.ಎಲ್.ಭೈರಪ್ಪ

    ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ: ಎಸ್.ಎಲ್.ಭೈರಪ್ಪ

    ಮೈಸೂರು: ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಏಕೆ ಜನ ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ ಎಂದು ಕಳೆದ ವರ್ಷ ದಸರಾ ಉದ್ಘಾಟಿಸಿದ್ದ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.

    ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಜಂಬೂಸವಾರಿಯನ್ನು ಮಾವುತರು ಮಾಡುತ್ತಾರೆ. ಇದಕ್ಕೆ ಜನ ಯಾಕೆ ಬೇಕು ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ. ಎಲ್ಲರೂ ಅವರ ಮನೆಯಲ್ಲೇ ದಸರಾ ಪೂಜೆ ಮಾಡಿಲಿ. ಬೆಟ್ಟದಲ್ಲಿ ಪೂಜೆ ನಡೆಯಲಿ. ಇದಕ್ಕೆ ಯಾಕೆ 200 ಮಂದಿ ಭಾಗಿಯಾಗಬೇಕು. ಕೊರೊನಾ ಹೆಚ್ಚಾದರೆ ಹೊಣೆ ಯಾರು ಎಂದು ದಸರಾಗೆ ಜನ ಸೇರುವುದಕ್ಕೆ ಎಸ್.ಎಲ್.ಭೈರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಜಂಬೂ ಸವಾರಿ ನಡೆಸೋದು ಮಾವುತರು, ಇದಕ್ಕೆ ಜನ ಬೇಕಾಗಿಲ್ಲ. ಕೆಲವರು ದಸರಾದಿಂದ ಬ್ಯುಸಿನೆಸ್ ಅಂತಾರೆ. ಜನರನ್ನ ಒಟ್ಟಾಗಿ ಸೇರಿಸಿದರೆ ಕೊರೊನಾ ಹರಡುವುದಿಲ್ಲವೆ? ಬ್ಯುಸಿನೆಸ್ ಎಲ್ಲ ಬಿಟ್ಟು ಜನರ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಅವರು ಸಲಹೆ ನೀಡಿದ್ದಾರೆ.

  • ಮೈಸೂರು ರಾಜವಂಶದ ಖಾಸಗಿ ದಸರಾಗೆ ಸಾರ್ವಜನಿಕರು, ಮಾಧ್ಯಮಕ್ಕೆ ನಿರ್ಬಂಧ

    ಮೈಸೂರು ರಾಜವಂಶದ ಖಾಸಗಿ ದಸರಾಗೆ ಸಾರ್ವಜನಿಕರು, ಮಾಧ್ಯಮಕ್ಕೆ ನಿರ್ಬಂಧ

    ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಪರಿಣಾಮ ಮೈಸೂರು ಅರಮನೆಯಲ್ಲಿ 2020ರ ಸಾಲಿನ ಮೈಸೂರು ರಾಜವಂಶದ ಖಾಸಗಿ ದಸರಾಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ.

    ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಅರಮನೆಯ ದರ್ಬಾರ್ ಹಾಲ್‍ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಅಲ್ಲದೇ ಖಾಸಗಿ ದರ್ಬಾರ್ ವೀಕ್ಷಣೆ ಹಾಗೂ ನೇರ ಪ್ರಸಾರಕ್ಕೂ ಅವಕಾಶ ಇಲ್ಲದಂತಾಗಿದೆ.

    ಪ್ರತಿಕಾ ಪ್ರಕಟಣೆ:
    ಮೈಸೂರಿನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ ಅರಮನೆಯಲ್ಲಿ 2020ರ ಸಾಲಿನ ಶರನ್ನವರಾತ್ರಿ ಸಂದರ್ಭದಲ್ಲಿ ಪೂಜಾ ವಿಧಿವಿಧಾನಗಳನ್ನ ಸಾಂಪ್ರದಾಯಿಕವಾಗಿ ನಡೆಸಲಾಗುವುದು. ಮುನ್ನೆಚ್ಚರಿಕೆ ಕ್ರಮ ಅವಶ್ಯಕವಾಗಿರುವುದರಿಂದ ಆಚರಣೆಯಲ್ಲಿ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಭಾಗವಹಿಸುವಿಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

    ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸಹಕರಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

  • ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಟೀಂ ಎಂಟ್ರಿ – ಇಂದು ಅರಮನೆ ಪ್ರವೇಶ

    ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಟೀಂ ಎಂಟ್ರಿ – ಇಂದು ಅರಮನೆ ಪ್ರವೇಶ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಅಧಿಕೃತವಾಗಿ ಗುರುವಾರ ಚಾಲನೆ ಸಿಕ್ಕಿದ್ದು, ದಸರಾದ ಮೊದಲ ಕಾರ್ಯಕ್ರಮವಾದ ಗಜಪಯಣ ಸಾಂಪ್ರದಾಯಿಕವಾಗಿ ನೇರವೇರಿದೆ.

    ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ನೇರವೇರಿಸಲಾಗಿದ್ದು, ಗುರುವಾರ ಮೈಸೂರಿನ ಅರಣ್ಯ ಭವನಕ್ಕೆ ಗಜಪಡೆ ಎಂಟ್ರಿ ಕೊಟ್ಟಿದೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೇರವೇರಿದೆ. ಶುಭ ಲಗ್ನದಲ್ಲಿ ಗಜಪಡೆಗೆ ಪುಷ್ಪಾರ್ಚನೆ ಮೂಲಕ ಪೂಜೆ ನೇರವೇರಿಸಿದ ಜಿಲ್ಲಾಡಳಿತ ಬಳಿಕ ಗಜಪಯಣಕ್ಕೆ ಚಾಲನೆ ನೀಡಿತು.

    ಸಿಂಗಾರಗೊಂಡ ಅಭಿಮನ್ಯು, ವಿಕ್ರಂ, ಗೋಪಿ, ವಿಜಯ, ಕಾವೇರಿ ಆನೆಗಳಿಗೆ ಫಲತಾಂಬೂಲ ನೀಡಿದರು. ಬಳಿಕ ಜಿಲ್ಲಾಡಳಿತದ ವತಿಯಿಂದ ಆನೆ ಮಾವುತರಿಗೆ ಸನ್ಮಾನ ಮಾಡಿ ಆತ್ಮೀಯವಾಗಿ ಗೌರವಿಸಿದರು. ನಂತರ ಅರಣ್ಯ ಇಲಾಖೆಯ ಟ್ರಕ್‍ಗಳ ಮೂಲಕ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ಎಂಟ್ರಿ ಕೊಟ್ಟಿದೆ. ನಿನ್ನೆಯೇ ಮೈಸೂರಿಗೆ ಗಜಪಡೆ ಬಂದರು ಸಹ ಇಂದು ಆನೆಗಳು ಅರಮನೆ ಪ್ರವೇಶ ಮಾಡಲಿವೆ.

    ಸದ್ಯಕ್ಕೆ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲೇ ಅಭಿಮನ್ಯು ತಂಡವನ್ನು ಇರಿಸಲಾಗಿದೆ. ಇಂದು ಅರಣ್ಯ ಭವನದಲ್ಲೂ ವಿಶೇಷ ಪೂಜೆ ನೇರವೇರಿಸಿ, ಮಧ್ಯಾಹ್ನ 12.18 ನಿಮಿಷದ ಶುಭ ಲಗ್ನದಲ್ಲಿ ಅರಮನೆಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಸಿಗಲಿದೆ. ಈ ಕಾರ್ಯಕ್ರಮಕ್ಕೂ ಸಹ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಅರಮನೆಗೆ ಗಜಪಡೆಯನ್ನ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಿದ್ದಾರೆ.

  • ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

    ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

    ಮೈಸೂರು: ನೂತನ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

    ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರಕ್ಕೂ ಮುನ್ನ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರು ಅಧಿಕಾರ ಸ್ವೀಕಾರ ಮಾಡಿದರು.

    ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ಅವರು, ಮೊದಲಿಗೆ ತಾಯಿ ಚಾಮುಂಡಿಯ ಆಶೀರ್ವಾದ ಪಡೆದು ಅಧಿಕಾರ ಸ್ವೀಕಾರ ಮಾಡಿದ್ದೇನೆ. ಸದ್ಯಕ್ಕೆ ಯಾವುದೇ ಅಧಿಕಾರಿಯ ಜೊತೆ ಚರ್ಚೆ ಮಾಡಿಲ್ಲ. ಆದರೆ ನಮ್ಮ ಮುಂದೆ ಎರಡು ವಿಚಾರ ಗಂಭೀರವಾಗಿದೆ. ಮೊದಲಿಗೆ ಬೆಂಗಳೂರು ನಂತರ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೈಸೂರಲ್ಲಿ ಕೊರೊನಾ ಟೆಸ್ಟಿಂಗ್ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಇದು ಬಗ್ಗೆ ಗೊತ್ತಿದೆ. ಹೀಗಾಗಿ ಟೆಸ್ಟಿಂಗ್ ಹೆಚ್ಚಿಸುವ ಅಗತ್ಯವಿದೆ. ಇದಕ್ಕೆ ಜನರ ಸಹಕಾರ ಬೇಕು. ಕೊರೊನಾ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಟೆಸ್ಟಿಂಗ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

    ದಸರಾಗೆ ಸಿದ್ಧತೆ ಈಗಾಗಲೇ ಆರಂಭವಾಗಿದೆ. ನಾನು ಇದೇ ಮೊದಲ ಬಾರಿಗೆ ದಸರಾ ಮಾಡುತ್ತಿದ್ದೇನೆ. ಈ ಹಿಂದೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆದಾಗ ನಾನು ಹಾಸನ ಜಿಲ್ಲಾಧಿಕಾರಿಯಾಗಿದ್ದೆ. ಅಲ್ಲಿ ಸುಮಾರು 20-25 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಆದರೆ ಇದು ನಾಡಹಬ್ಬ, ಅದರಲ್ಲೂ ಕೋವಿಡ್ ಸಮಯದಲ್ಲಿ ತುಂಬಾ ಸೂಕ್ಷ್ಮವಾಗಿ ಕೆಲಸ ಮಾಡಬೇಕು. ಈ ಎರಡು ವಿಚಾರದ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ. ತುರ್ತಾಗಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಮೈಸೂರು ನನಗೆ ಹೊಸದಲ್ಲ. ಮೈಸೂರಿನಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ. ಇದಕ್ಕೆ ಜನರ ಸಹಕಾರ ತುಂಬಾ ಅಗತ್ಯವಾಗಿದೆ ಎಂದು ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

    ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಅವರನ್ನ ಒಂದೇ ತಿಂಗಳಲ್ಲಿ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಶರತ್ ಜಾಗಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

    ವರ್ಗಾವಣೆ ಯಾಕೆ?:
    ಒಂದು ತಿಂಗಳ ಹಿಂದೆ ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದ್ರೆ ಕಳೆದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ. ಆದ್ರೆ ಇದುವರೆಗೂ ಜಿಲ್ಲಾಧಿಕಾರಿ ದಸರಾ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

  • ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ

    ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ

    -ಒಂದೇ ತಿಂಗಳಲ್ಲಿ ಡಿಸಿ ಶರತ್ ವರ್ಗಾವಣೆ

    ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಅವರನ್ನ ಒಂದೇ ತಿಂಗಳಲ್ಲಿ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಶರತ್ ಜಾಗಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ವರ್ಗಾವಣೆ ಯಾಕೆ?: ಒಂದು ತಿಂಗಳ ಹಿಂದೆ ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದ್ರೆ ಕಳೆದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ. ಆದ್ರೆ ಇದುವರೆಗೂ ಜಿಲ್ಲಾಧಿಕಾರಿ ದಸರಾ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

    ಇತ್ತ ಶರತ್ ಅವರಿಗೆ ಕರೆ ಮಾಡಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಬೇರೆ ಸೂಕ್ತ ಸ್ಥಳ ನೀಡುತ್ತೇವೆ. ಕಾನೂನು ತೊಡಕು ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಶರತ್ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನೇ ನೇಮಿಸಬೇಕೆಂದು ಸಿಎಂ ಮೇಲೆ ಒತ್ತಡ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

  • ದಸರೆಯಲ್ಲೂ ಆತ್ಮ ನಿರ್ಭರ ಭಾರತ – ಚೈನಾ ಬಲ್ಬ್‌ಗಳು ಬ್ಯಾನ್

    ದಸರೆಯಲ್ಲೂ ಆತ್ಮ ನಿರ್ಭರ ಭಾರತ – ಚೈನಾ ಬಲ್ಬ್‌ಗಳು ಬ್ಯಾನ್

    ಮೈಸೂರು: ಈಗ ದೇಶದೆಲ್ಲೆಡೆ ಆತ್ಮ ನಿರ್ಭರ ಭಾರತದ ಸದ್ದಿದೆ. ಈ ಬಾರಿ ದಸರೆಯಲ್ಲೂ ಆತ್ಮ ನಿರ್ಭರ ಭಾರತದ ಮಾತು ಬೆಳಕಿನ ರೂಪದಲ್ಲಿ ಪ್ರಜ್ವಲಿಸಲಿದೆ. ಅಂದರೆ ದಸರಾಗೆ ಚೈನಾ ಬಲ್ಬ್‌ಗಳನ್ನು ಬ್ಯಾನ್ ಮಾಡಲಾಗಿದೆ.

    ದಸರಾಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ದಸರಾ ಸಿದ್ಧತೆಯೂ ಜೋರಾಗಿದೆ. ಅರಮನೆಯ ದೀಪಾಲಂಕಾರಕ್ಕಾಗಿ ಬಲ್ಬ್‌ಗಳ ಪರಿಶೀಲನೆ ಹಾಗೂ ಕೆಟ್ಟು ಹೋದ ಬಲ್ಬ್‌ಗಳನ್ನು ಬದಲಾಯಿಸುವ ಕೆಲಸ ಆರಂಭವಾಗಿದೆ. ಈ ಬಾರಿ ಮೈಸೂರು ದಸರಾ ದೀಪಾಲಂಕಾರದ ವಿಶೇಷತೆಯೆಂದರೆ ಆತ್ಮ ನಿರ್ಭರ ಭಾರತಕ್ಕೆ ಒತ್ತು ಕೊಡಲಾಗಿದೆ.

    ಈ ಬಾರಿಯ ದಸರೆಯ ದೀಪಾಲಂಕಾರದಲ್ಲಿ ಚೈನಾದ ಬಲ್ಬ್‌ಗಳನ್ನು ಬಳಸದಿರಲು ನಿರ್ಧರಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಈಗಾಗಲೇ ಚೈನಾ ಆ್ಯಪ್‍ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಮೈಸೂರು ದಸರೆಯಲ್ಲಿ ಚೈನಾ ಬಲ್ಬ್‌ಗಳನ್ನು ಬ್ಯಾನ್ ಮಾಡಲಾಗುತ್ತಿದೆ.

    ಮೈಸೂರು ದಸರಾ ವೇಳೆ 60 ರಿಂದ 75 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗುತ್ತದೆ. 150ಕ್ಕೂ ಹೆಚ್ಚು ವೃತ್ತಗಳು ಜಗಮಗಿಸುತ್ತಿರುತ್ತದೆ. ಇದಕ್ಕಾಗಿ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾದಿಂದ ಬಲ್ಬ್‌ಗಳು ಹಾಗೂ ವಿವಿಧ ಬಿಡಿಭಾಗಗಳನ್ನು ತರಿಸಿಕೊಳ್ಳಲಾಗುತ್ತದೆ. ಈ ಬಾರಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಚೀನಾದ ಯಾವುದೇ ವಸ್ತುಗಳನ್ನು ದಸರಾ ದೀಪಾಲಂಕಾರದಲ್ಲಿ ಬಳಸದಿರಲು ನಿರ್ಧರಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದ್ದಾರೆ.

    ದೀಪಾಲಂಕಾರದಲ್ಲಿ ಚೈನಾ ಬಲ್ಬ್‌ಗಳು ಬ್ಯಾನ್ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ದೀಪಾಲಂಕಾರದಲ್ಲಿ ಮಾತ್ರವಲ್ಲ ಸಾಧ್ಯವಾದಷ್ಟು ಎಲ್ಲಾ ಕಡೆಯೂ ಚೈನಾ ವಸ್ತಗಳ ಬ್ಯಾನ್‍ಗೆ ಜಿಲ್ಲಾಡಳಿತ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

  • ಅರಮನೆ ಒಳಗೆ ಜಂಬೂ ಸವಾರಿಗಾಗಿ ಕಾಂಕ್ರೀಟ್ ರಸ್ತೆ

    ಅರಮನೆ ಒಳಗೆ ಜಂಬೂ ಸವಾರಿಗಾಗಿ ಕಾಂಕ್ರೀಟ್ ರಸ್ತೆ

    ಮೈಸೂರು: ಈ ಬಾರಿಯ ನಾಡಹಬ್ಬ ದಸರಾ ಅತಿ ಸರಳವಾದರೂ ಕೂಡ ಸಂಭ್ರಮದಿಂದ ಮಾಡುವುದಕ್ಕೆ ಅರಮನೆ ಆಡಳಿತ ಮಂಡಳಿ ಸಿದ್ಧವಾಗುತ್ತಿದೆ.

    ಅರಮನೆ ಅಂಗಳಕ್ಕೆ ಅ.2 ರಂದು ಐದು ಆನೆಗಳು ಬರಲಿವೆ. ಆನೆಗಳ ತಾಲೀಮಿಗೆ ಅರಮನೆ ಒಳ ಆವರಣದಲ್ಲೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಿದೆ. ಈ ಮೂಲಕ ಆನೆಯ ತಾಲೀಮು ಹಾಗೂ ಕೋವಿಡ್ ಎಚ್ಚರಿಕೆಯನ್ನು ಸೂಕ್ಷ್ಮವಾಗಿ ನಿಭಾಯಿಸಲು ಸಿದ್ಧತೆ ನಡೆದಿದೆ.

    ಈ ಬಾರಿಯ ದಸರಾ ಜಂಬೂ ಸವಾರಿ ಅರಮನೆ ಒಳಗೆ ಮಾತ್ರ ನಡೆಯಲಿದೆ. ಹೀಗಾಗಿ ಕಾಡಿನಿಂದ ನಾಡಿಗೆ ಬರುವ ಐದು ಆನೆಗಳಿಗೆ ವಾಕಿಂಗ್ ಎಲ್ಲವು ಅರಮನೆ ಆವರಣದಲ್ಲೇ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ದಸರಾ ಗಜಪಡೆಯ ಆನೆಗಳಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದು, ಸ್ವಚ್ಛತೆ ಹಾಗೂ ಆನೆಗಳ ತಾಲೀಮಿಗೆ ಸಿದ್ಧತೆ ಮಾಡಿಕೊಂಡಿದೆ.

    ಅ.2ರಂದು ಮೈಸೂರು ಅರಮನೆಗೆ ಬರುವ ಗಜಪಡೆಗೆ ವಾಕಿಂಗ್ ಮಾಡಲು ಅನುಕೂಲವಾಗುವಂತೆ ಅರಮನೆ ಒಳಗೆ ಕಾಂಕ್ರೀಟ್ ರಸ್ತೆಯನ್ನ ಮಾಡಿಸಲಾಗಿದೆ. ಈಗಾಗಲೇ ಜೆಸಿಬಿ ಮೂಲಕ ಗಿಡಗಂಟೆಗಳ ಶುಚಿತ್ವ ಕಾರ್ಯ ಮಾಡಲಾಗುತ್ತಿದೆ. ಅರಮನೆ ಅಂಗಳಕ್ಕೆ ಆನೆ ಬರುವ ಮುನ್ನವೇ ಅರಮನೆಯಲ್ಲಿ ಆನೆ ಇರಿಸುವ ಸ್ಥಳ, ಸ್ನಾನ ಮಾಡಿಸುವ ಸ್ಥಳ ಸೇರಿದಂತೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛ ಮಾಡಲಾಗುತ್ತಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಮಣ್ಯ ತಿಳಿಸಿದರು.

    ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಬಳಿಕ ಅರಮನೆಗೆ ಮಾತ್ರ ಸೀಮಿತವಾಗುವ ನಾಡಹಬ್ಬ ದಸರಾ ಕಳೆ ಕಟ್ಟಲು ಅರಮನೆ ಆಡಳಿತ ಮಂಡಳಿ ಸಾಕಷ್ಟು ಕ್ರಮವಹಿಸುತ್ತಿದೆ. ಕೋವಿಡ್‍ನಲ್ಲೂ ಅತಿ ಸರಳ ದಸರಾ ಮಾಡುತ್ತಿರುವ ಸರ್ಕಾರ ಎಲ್ಲಾ ವಿಚಾರಗಳ ಬಗ್ಗೆ ಸೂಕ್ಷ್ಮ ರೀತಿಯಲ್ಲಿ ಎಚ್ಚರವಹಿಸುತ್ತಿದೆ.