Tag: ದಸರಾ

  • ಕೇವಲ 23 ನಿಮಿಷದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮುಕ್ತಾಯ

    ಕೇವಲ 23 ನಿಮಿಷದಲ್ಲಿ ವಿಶ್ವ ವಿಖ್ಯಾತ ಜಂಬೂ ಸವಾರಿ ಮುಕ್ತಾಯ

    – 500 ಮೀ. ಮಾತ್ರ ಸಾಗಿದ ಜಂಬೂ ಸವಾರಿ

    ಮೈಸೂರು: ಕೊರೊನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಗಿದ್ದು, ಕೇವಲ 23 ನಿಮಿಷಗಳಲ್ಲಿ ಜಂಬೂ ಸವಾರಿ ಮುಕ್ತಾಯಗೊಂಡಿದೆ.

    ಪ್ರತಿ ವರ್ಷ ವಿಜೃಂಭಣೆಯಿಂದ ಗಂಟೆಗಟ್ಟಲೇ ನಡೆಯುತ್ತಿದ್ದ ಮೈಸೂರು ದಸರಾದ ಜಂಬೂ ಸವಾರಿ ಈ ಬಾರಿ ಕೇವಲ 23 ನಿಮಿಷಕ್ಕೆ ಮುಕ್ತಾಯವಾಯಿತು. ಮಧ್ಯಾಹ್ನ 3.21ಕ್ಕೆ ಕುಂಬ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಅರಮನೆ ಆವರಣದಲ್ಲೇ ಜಂಬೂ ಸವಾರಿ ನೆರವೇರಿಸಲಾಗಿದ್ದು, ಕೇವಲ 500 ಮೀಟರ್ ಮಾತ್ರ ನಡೆಸಲಾಗಿದೆ.

    750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಮೆರವಣಿಗೆ ಮಾಡಲಾಯಿತು. ಕೇವಲ 500 ಮೀಟರ್ ಸಾಗಿದ ಜಂಬೂ ಸವಾರಿ, ಬಲರಾಮ ದ್ವಾರದ ಬಳಿ ಮುಕ್ತಾಯಗೊಂಡಿತು.

    ಪ್ರತಿ ವರ್ಷ ಸಂಭ್ರಮದಿಂದ ದಸರಾ ಆಚರಿಸಲಾಗುತ್ತಿತ್ತು. ವಿವಿಧ ಜಿಲ್ಲೆ, ರಾಜ್ಯಗಳಿಂದ ಸಾಂಸ್ಕೃತಿಕ ತಂಡಗಳ ಕಲಾವಿದರು ಆಗಮಿಸಿ ವಿವಿಧ ಕಲೆ ಪ್ರದರ್ಶಿಸುತ್ತಿದ್ದರು. ಆದರೆ ಈ ಬಾರಿ ಕೇವಲ ಕೊರೊನಾ ಜಾಗೃತಿ, ಅರಮನೆ ವಾದ್ಯಗೋಷ್ಠಿ, 2 ಟ್ಯಾಬ್ಲೋ, ಚಂಡೆಮೇಳ, ವೀರಗಾಸೆ, ಮರಗೋಲು ಸೇರಿದಂತೆ ಇತರ ಕೆಲವು ಕಲಾ ಮೇಳಗಳಷ್ಟೇ ಭಾಗವಹಿಸಿದ್ದವು.

    ಜಂಬೂ ಸವಾರಿ ಹೆಚ್ಚು ಹೊತ್ತು ನಡೆಯದ ಕಾರಣ ಅರಮನೆ ಸುತ್ತಲಿನ ಸಂಚಾರ ಸಹಜ ಸ್ಥಿತಿಯತ್ತ ಮರಳಿದೆ. ಜಂಬೂ ಸವಾರಿ ಕಾರಣದಿಂದಾಗಿ ಬ್ಯಾರಿಕೇಡ್ ಹಾಕಿ ಸಂಚಾರವನ್ನು ಪೊಲೀಸರು ಸಂಚಾರ ನಿರ್ಬಂಧಿಸಿದ್ದರು. ಇದೀಗ ಎಲ್ಲ ಕಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

  • ಸರಳ, ಸುಂದರ ದಸರಾ ಆಚರಣೆಗೆ ಮಂಜಿನ ನಗರಿಯ ದಶದೇವಾಲಯಗಳು ತಯಾರಿ

    ಸರಳ, ಸುಂದರ ದಸರಾ ಆಚರಣೆಗೆ ಮಂಜಿನ ನಗರಿಯ ದಶದೇವಾಲಯಗಳು ತಯಾರಿ

    ಮಡಿಕೇರಿ: ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಕೊರೊನಾ ಸೂತಕದ ಛಾಯೆ ಆವರಿಸಿದೆ. ಸಾಂಪ್ರದಾಯಿಕ ದಸರಾ ಆಚರಣೆಗೆ ಮಡಿಕೇರಿಯಲ್ಲಿ ತಯಾರಿ ನಡೆದಿದ್ದು, ನಗರದ ನಾಲ್ಕು ಶಕ್ತಿ ದೇವತೆಗಳೂ ಸೇರಿದಂತೆ ಮಡಿಕೇರಿಯ ದಶದೇವಾಲಯಗಳಲ್ಲಿ ಇಂದು ರಾತ್ರಿ ನಡೆಯುವ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ.

    ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ, ಜನರೇ ಸೇರದ ರೀತಿಯಲ್ಲಿ ನಾಡಹಬ್ಬದ ಆಚರಣೆಯಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸರಳ ದಸರಾ ಆಚರಿಸುವುದಾಗಿ ದಸರಾ ಸಮಿತಿಯಿಂದ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ದಸರಾ ಸಮಿತಿ ಮನವಿ ಮಾಡಿದೆ.

    ಇನ್ನು ಇಂದು ರಾತ್ರಿ ದಶದೇವಾಲಯಗಳಿಂದ ಅತ್ಯಂತ ಸರಳ ರೀತಿಯಲ್ಲಿ ಪಿಕ್ ಅಪ್ ವಾಹನದಲ್ಲಿ ದೇವರ ಒಂದು ಮೂರ್ತಿಯನ್ನು ಇಟ್ಟು ಕಳಸದೊಂದಿಗೆ ನಗರದ ಬನ್ನಿ ಮಂಟಪಕ್ಕೆ ಮೆರವಣಿಗೆ ಸಾಗಲಿದೆ. ಅಲ್ಲದೇ ಈ ಬಾರಿ ಮಂಟಪಗಳ ಪ್ರದರ್ಶನ ಅಥವಾ ಬಹುಮಾನಗಳ ಸ್ಪರ್ಧೆಗಳು ಇಲ್ಲ. ಒಂದು ದೇವಾಲಯದ ಮಂಟಪದೊಂದಿಗೆ. 20 ಮಂದಿ ಮಾತ್ರ ದೇವಾಲಯದ ಸಮಿತಿ ಸದಸ್ಯರು ತೆರಳಲು ಅವಕಾಶ ಮಾಡಿಕೊಡಲಾಗಿದೆ.

    ದಸರಾ ಹಿನ್ನೆಲೆಯಲ್ಲಿ ಕೊಡಗಿನ ಪ್ರವಾಸಿತಾಣಗಳು ಕೂಡ ಬಂದ್ ಆಗಿದ್ದು, ನಗರದಲ್ಲಿ ಜನ ದಟ್ಟಣೆಯು ಬೆಳಿಗ್ಗೆಯಿಂದ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಜಿಲ್ಲಾಡಳಿತದಿಂದ ಮಾಸ್ಕ್ ದರಿಸುವಿಕೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿರುವ ಬೆನ್ನಲ್ಲೇ ಇದೀಗಾ ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗುತ್ತಿದೆ.

  • ರೋಲ್ಸ್‌ ರಾಯ್ಸ್‌, ಫೆರಾರಿ ಸೇರಿದಂತೆ ಐಷಾರಾಮಿ ಕಾರುಗಳಿಗೆ ಎಂಟಿಬಿ ಪೂಜೆ

    ರೋಲ್ಸ್‌ ರಾಯ್ಸ್‌, ಫೆರಾರಿ ಸೇರಿದಂತೆ ಐಷಾರಾಮಿ ಕಾರುಗಳಿಗೆ ಎಂಟಿಬಿ ಪೂಜೆ

    ಬೆಂಗಳೂರು: ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ಮನೆಯಲ್ಲಿರುವ ಕಾರುಗಳಿಗೆ ಆಯುಧ ಪೂಜೆ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಮಹದೇವಪುರ ಬಳಿ ಇರುವ ಆಚಂದ್ರಾರ್ಕ ನಿಲಯದಲ್ಲಿ ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಮಾಡಲಾಯಿತು. ಆಯುಧ ಪೂಜೆಯಲ್ಲಿ ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

    ರೋಲ್ಸ್ ರಾಯ್ಸ್ ಫ್ಯಾಂಟಮ್‌, ಫೆರಾರಿ, ಮರ್ಸಿಡಿಸ್ ಬೆಂಝ್, ಟೊಯೋಟಾ ಫಾರ್ಚುನರ್, ಇನ್ನೋವಾ ಸೇರಿದಂತೆ 8 ಐಷಾರಾಮಿ ಕಾರು, ತಮ್ಮ ಲೈಸೆನ್ಸ್ ಹೊಂದಿದ ಪಿಸ್ತೂಲ್ ಗೆ ಸಹ ಎಂಟಿಬಿ ನಾಗರಾಜ್ ಪೂಜೆ ಸಲ್ಲಿಸಿದರು.

    ಕಳೆದ ವರ್ಷ ಎಂಟಿಬಿ ನಾಗರಾಜ್ ಅವರು ವಿಶ್ವದ ದುಬಾರಿ ಸೆಡಾನ್‌ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಖರೀದಿಸಿದ್ದರು. ಮೂಲಬೆಲೆ ಹಾಗೂ ತೆರಿಗೆ ಸೇರಿದಂತೆ ಒಟ್ಟು 12.75 ಕೋಟಿ ರೂ. ಮೌಲ್ಯದ ಈ ಐಷಾರಾಮಿ ಕಾರು ಇಂಗ್ಲೆಂಡಿನಲ್ಲಿ ತಯಾರಾಗಿತ್ತು.

    ದುಬಾರಿ ಬೆಲೆಯ ಕಾರಿನ ಜೊತೆ ಎಂಟಿಬಿ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದರು. ಬೆಂಗಳೂರಿನ ಬನಶಂಕರಿ ಆರ್ ಟಿಒ ಕೇಂದ್ರದಲ್ಲಿ ಕಾರು ನೊಂದಣಿಯಾಗಿದೆ. ಕೆಎ 59 ಎನ್ 888 ಸಂಖ್ಯೆಯನ್ನು ಎಂಟಿಬಿ ಪಡೆದುಕೊಂಡಿದ್ದಾರೆ.

    ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ನಡೆದ ಹೊಸಕೋಟೆ ಉಪಚುನಾವಣೆಯಲ್ಲಿ ಎಂಟಿಬಿ ಸೋತಿದ್ದರು. ಕರ್ನಾಟಕಕ ಶ್ರೀಮಂತ ರಾಜಕಾರಣಿಯಾಗಿರುವ ಎಂಟಿಬಿ ಜೂನ್‌ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗ ತನ್ನ ಬಳಿ 1,224 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು.

     

  • ನಾವೆಲ್ಲ ಕಾಮಾಕ್ಷಿಯರಾಗೋಣ – ವಿಶೇಷವಾಗಿ ದಸರಾ ಶುಭಾಶಯ ತಿಳಿಸಿದ ರಮ್ಯಾ

    ನಾವೆಲ್ಲ ಕಾಮಾಕ್ಷಿಯರಾಗೋಣ – ವಿಶೇಷವಾಗಿ ದಸರಾ ಶುಭಾಶಯ ತಿಳಿಸಿದ ರಮ್ಯಾ

    ಬೆಂಗಳೂರು: ದಸರಾ ಹಬ್ಬಕ್ಕೆ ವಿವಿಧ ಗಣ್ಯರು ಹಾಗೂ ನಟ, ನಟಿಯರು ಶುಭಾಶಯ ಕೋರುತ್ತಿದ್ದು, ನಟಿ ರಮ್ಯಾ ಸಹ ಇದೀಗ ಕಾಮಾಕ್ಷಿ ಅರ್ಥ ತಿಳಿಸುವ ಪೋಸ್ಟ್ ಹಾಕುವ ಮೂಲಕ ದಸರಾ ಶುಭಾಶಯ ತಿಳಿಸಿದ್ದಾರೆ.

    ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಯಾವಾಗಲೂ ಬೆಳಕು ತುಂಬಿರಲಿ. ಕಾಮಾಕ್ಷಿ ಎಂಬ ಪದವು ಮೂರು ಪದಗಳಿಂದ ಕೂಡಿದೆ. ಕಾ, ಮಾ ಹಾಗೂ ಕ್ಷ್ ಮೂರು ಅಕ್ಷರಗಳು ಮೂರು ಪದಗಳನ್ನು ಸೂಚಿಸುತ್ತವೆ. ಕಾ ಎಂದರೆ ಸರಸ್ವತಿ, ಮಾ ಎಂದರೆ ಲಕ್ಷ್ಮಿ ಹಾಗೂ ಕ್ಷ್ ಎಂದರೆ ಕಣ್ಣುಗಳು ಎಂದು ತಿಳಿಸಿದ್ದಾರೆ.

    ಲಕ್ಷಿ ಹಾಗೂ ಸರಸ್ವತಿಯ ಮತ್ತು ಸರಸ್ವತಿಯ ಕಣ್ಣುಗಳುಳ್ಳವರು(ಜ್ಞಾನ, ಬುದ್ಧಿವಂತಿಕೆ ಹಾಗೂ ಜ್ಞಾನೋದಯ) ಶಾಂತತೆಯನ್ನು ಪ್ರತಿನಿಧಿಸುತ್ತಾರೆ. ನಾವೆಲ್ಲರೂ ಕಾಮಾಕ್ಷಿಯರಾಗೋಣ ಎಂದು ವಿವರಿಸಿದ್ದಾರೆ.

    ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು ಭಾರತದಲ್ಲಿನ ಬೆಳವಣಿಗೆಗಳ ಕುರಿತು ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ಕಂಗನಾ ರಣಾವತ್ ಕುರಿತು ರಮ್ಯಾ ಪೋಸ್ಟ್ ಮಾಡಿದ್ದರು. ಅಲ್ಲದೆ ಹತ್ರಾಸ್ ಅತ್ಯಾಚಾರದ ಪ್ರಕರಣದ ಕುರಿತು ಅಕ್ಷಯ್ ಕುಮಾರ್ ಮಾಡಿದ್ದ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿ ನರೇಂದ್ರ ಮೊದಿ ವಿರುದ್ಧ ಹರಿಹಾಯ್ದಿದ್ದರು. ಹೀಗೆ ಹಲವು ಆಗುಹೋಗುಗಳ ಕುರಿತು ರಮ್ಯಾ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಹಬ್ಬದ ವೇಳೆ ಸೈನಿಕರನ್ನು ನೆನೆದು ಅವರಿಗಾಗಿ ದೀಪ ಬೆಳಗಿಸಿ: ಪ್ರಧಾನಿ ಮೋದಿ

    ಹಬ್ಬದ ವೇಳೆ ಸೈನಿಕರನ್ನು ನೆನೆದು ಅವರಿಗಾಗಿ ದೀಪ ಬೆಳಗಿಸಿ: ಪ್ರಧಾನಿ ಮೋದಿ

    ನವದೆಹಲಿ: ಕೆಚ್ಚೆದೆಯ ಸೈನಿಕರು ಹಾಗೂ ಭದ್ರತಾ ಪಡೆಗಳೊಂದಿಗೆ ಭಾರತ ಯಾವಾಗಲೂ ಇರುತ್ತದೆ. ಕೊರೊನಾ ಸಮಯದಲ್ಲಿ ಹಬ್ಬ ಆಚರಣೆ ಮಾಡುತ್ತಿದ್ದೇವೆ. ಸೈನಿಕರಿಗಾಗಿ ದೀಪ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನಿಡಿದ್ದಾರೆ.

    ಮನ್ ಕೀ ಬಾತ್‍ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು, ದಸರಾ ಹಬ್ಬದ ಶುಭಾಶಯ ತಿಳಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು. ಸೈನಿಕರು ತಮ್ಮ ಕುಟುಂಬಗಳನ್ನು ಬಿಟ್ಟು ದೇಶ ಸೇವೆ ಮಾಡುತ್ತಿದ್ದಾರೆ. ವಿದೇಶಗಳ ಬೆದರಿಕೆಗಳಿಂದ ದೇಶವನ್ನು ಕಾಯುವ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾರೆ. ಹೀಗಾಗಿ ಅವರನ್ನು ನೆನೆದು ಹಬ್ಬದ ಸಂದರ್ಭದಲ್ಲಿ ದೀಪವನ್ನು ಬೆಳಗಿಸಿ ಎಂದು ಕರೆ ನೀಡಿದರು.

    ಈದ್, ದೀಪಾವಳಿ ಸೇರಿದಂತೆ ಹಲವು ಹಬ್ಬಗಳು ಈ ಸಂದರ್ಭದಲ್ಲಿ ಬರುತ್ತವೆ. ಈ ಹಬ್ಬಗಳ ಸಂದರ್ಭದಲ್ಲಿ ಗಡಿ ಕಾಯುತ್ತಿರುವ ಸೈನಿಕರನ್ನು ಸಹ ನಾವು ನೆನೆಯಬೇಕಿದೆ. ಅವರಿಗಾಗಿ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ತಾಯಿ ಭಾರತಿಯ ವೀರ ಪುತ್ರರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

    ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಚೀನಾದ ಸುಮಾರು 3,500 ಕಿ.ಮೀ ಉದ್ದದ ಗಡಿಯಲ್ಲಿ ಸೈನ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ಗಮನಾರ್ಹ ರೀತಿಯಲ್ಲಿ ಬಲಪಡಿಸಲಾಗಿದೆ. ಲಡಾಖ್‍ನಲ್ಲಿ ಉದ್ವಿಗ್ನತೆ ಸರಾಗಗೊಳ್ಳುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ಹಲವು ಹಂತದ ಉನ್ನತ ಮಟ್ಟದ ಮಾತುಕತೆ ನಡೆದರೂ ಫಲಕಾರಿಯಾಗಿಲ್ಲ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.

    ಹಬ್ಬಗಳನ್ನು ಸಂಯಮದಿಂದ ಆಚರಿಸಿ, ಶಾಪಿಂಗ್ ಮಾಡುವಾಗ ವೋಕಲ್ ಫಾರ್ ಲೋಕಲ್ ಮಂತ್ರ ಜಪಿಸಿ, ಸ್ಥಳೀಯ ವ್ಯಾಪಾರಿಗಳೊಂದಿಗೆ ಖರೀದಿಸುವ ಸಂಕಲ್ಪ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಕೊರೊನಾ ವೇಳೆ ಹಬ್ಬಗಳನ್ನು ಎಚ್ಚರದಿಂದ ಆಚರಿಸಿ, ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಶಕ್ತಿ, ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಬೇಕು – ಮೋಹನ್ ಭಾಗವತ್ ಕರೆ

    ಶಕ್ತಿ, ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಬೇಕು – ಮೋಹನ್ ಭಾಗವತ್ ಕರೆ

    ಮುಂಬೈ: ಭಾರತ ಶಕ್ತಿ ಹಾಗೂ ವ್ಯಾಪ್ತಿಯಲ್ಲಿ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕಿದೆ. ಚೀನಾ ವಿಸ್ತರಣಾ ವಾದದ ಕುರಿತು ಇಡೀ ಪ್ರಪಂಚಕ್ಕೆ ತಿಳಿದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

    ಆರ್‍ಎಸ್‍ಎಸ್‍ನಿಂದ ಆಯುಧ ಪೂಜೆ ಹಾಗೂ ವಿಜಯದಶಮಿ ರ್ಯಾಲಿ ನಡೆಸಲಾಯಿತು. ಕೊರೊನಾ ಹಿನ್ನೆಲೆ ಈ ಬಾರಿಯ ರ್ಯಾಲಿಯಲ್ಲಿ ಕೇವಲ 50 ಜನ ಮಾತ್ರ ಸ್ವಯಂ ಸೇವಕರು ಭಾಗವಹಿಸಿದ್ದರು. ಆಯುಧ ಪೂಜೆ ಬಳಿಕ ಮಾತನಾಡಿದ ಮೋಹನ್ ಭಾಗವತ್, ಚೀನಾಗೆ ತಕ್ಕ ಉತ್ತರ ನೀಡಲು ಭಾರತದ ಸೇನೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಜ್ಜುಗೊಳಿಸಬೇಕಿದೆ. ಭಾರತ ಮಾತ್ರವಲ್ಲ ಚೀನಾ ವಿರುದ್ಧ ಹಲವು ದೇಶಗಳು ತಿರುಗಿ ಬಿದ್ದಿವೆ ಎಂದು ತಿಳಿಸಿದರು.

    ಒಳನುಸುಳುವಿಕೆ ಕುರಿತು ಭಾರತದ ಪ್ರತ್ಯುತ್ತರ ಕಂಡು ಚೀನಾ ಆಘಾತಕ್ಕೊಳಗಾಗಿದೆ. ಹೀಗಾಗಿ ಭಾರತ ಶಕ್ತಿ ಹಾಗೂ ವ್ಯಾಪ್ತಿಯಲ್ಲಿ ಇನ್ನೂ ಬೃಹದಾಕಾರವಾಗಿ ಬೆಳೆಯಬೇಕಿದೆ. ಕೊರೊನಾ ಗಲಾಟೆ ನಡುವೆ ಚೀನಾ ನಮ್ಮ ಗಡಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಚೀನಾದ ವಿಸ್ತರಣಾ ಸ್ವರೂಪದ ಬಗ್ಗೆ ಜಗತ್ತಿಗೆ ತಿಳಿದಿದೆ. ಚೀನಾದ ವಿಸ್ತರಣಾವಾದಕ್ಕೆ ತೈವಾನ್ ಹಾಗೂ ವಿಯಟ್ನಾಂ ಉದಾಹರಣೆಯಾಗಿದೆ ಎಂದು ವಿವರಿಸಿದರು.

    ನಾವು ಎಲ್ಲರೊಂದಿಗೆ ಸ್ನೇಹವನ್ನು ಬಯಸುತ್ತೇವೆ. ಇದು ನಮ್ಮ ಸ್ವಭಾವ. ಆದರೆ ನಮ್ಮ ಶಾಂತಿ, ಸಂಯಮವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಿ ವಿವೇಚನಾ ರಹಿತ ಶಕ್ತಿಯಿಂದ ನಮ್ಮನ್ನು ವಿಘಟಿಸುವ ಅಥವಾ ದುರ್ಬಲಗೊಳಿಸುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ನಮ್ಮ ವಿರೋಧಿಗಳು ಇದನ್ನು ಈಗಲೇ ತಿಳಿಯಬೇಕು ಎಂದು ಎಚ್ಚರಿಸಿದರು.

    ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯಾವುದೇ ನಿರ್ದಿಷ್ಟ ಧರ್ಮಕ್ಕೆ ವಿರುದ್ಧವಾಗಿಲ್ಲ. ಕೆಲವರು ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಕಾಯ್ದೆ ಮೂಲಕ ಜನ ಸಂಖ್ಯೆಯನ್ನು ನಿರ್ಬಂಧಿಸಲಾಗುತ್ತಿದೆ ಎಂದು ತಪ್ಪಾಗಿ ಹೇಳುತ್ತಿದ್ದಾರೆ ಎಂದು ಸಿಎಎ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ವಿಷಯವನ್ನು ಚರ್ಚಿಸುವ ಮೊದಲು ಕೊರೊನಾ ವೈರಸ್ ಬಗ್ಗೆ ಗಮನಹರಿಸಿ, ಕೆಲವು ಜನರ ಮನಸ್ಸಿನಲ್ಲಿ ಮಾತ್ರ ಕೋಮು ಜ್ವಾಲೆ ಇದೆ. ಕೊರೊನಾ ವೈರಸ್ ಇತರ ವಿಷಯಗಳನ್ನು ಮರೆ ಮಾಡಿದೆ. ನಾವು ಕೊರೊನಾ ವೈರಸ್‍ಗೆ ಹೆದರಬೇಕಾಗಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು. ನಾವು ಜೀವಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಕೊರೊನಾ ವೈರಸ್ ಹರಡುತ್ತಿದೆ. ಆದರೆ ಸಾವಿನ ಸಂಖ್ಯೆ ತೀರಾ ಕಡಿಮೆ ಇದೆ. ಕೊರೊನಾ ವೈರಸ್‍ನಿಂದಾಗಿ ನಾವು ನೈರ್ಮಲ್ಯ, ಸ್ವಚ್ಛತೆ, ಪರಿಸರ, ಕುಟುಂಬದ ಮೌಲ್ಯ ಸೇರಿದಂತೆ ವಿವಿಧ ವಿಚಾರಗಳನ್ನು ಅರಿಯುವಂತಾಗಿದೆ ಎಂದು ಅವರು ತಿಳಿಸಿದರು.

    ಕೊರೊನಾ ನಿರುದ್ಯೋಗದ ಸವಾಲುಗಳನ್ನು ನೀಡಿದ್ದು, ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಕಾರ್ಮಿಕರು ಮತ್ತೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಕೆಲಸ ಸಿಗುತ್ತಿಲ್ಲ. ಹೀಗಾಗಿ ವಿವಿಧ ಸ್ಥಳಗಳಲ್ಲಿ ಉದ್ಯೋಗ ಸೃಷ್ಟಿಯ ಸವಾಲುಗಳಿವೆ ಎಂದು ಅವರು ಹೇಳಿದರು.

  • ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ ಸಂಸದೆ ನುಸ್ರತ್ ಜಹಾನ್

    ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ ಸಂಸದೆ ನುಸ್ರತ್ ಜಹಾನ್

    ಕೋಲ್ಕತ್ತಾ: ನಟಿ, ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಅವರು ಸಾಂಸ್ಕೃತಿಕ ಉಡುಗೆ, ಸೀರೆ ತೊಟ್ಟು ಡ್ಯಾನ್ಸ್ ಮಾಡಿ ದುರ್ಗಾ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದಿದ್ದಾರೆ.

    ಟಿಎಂಸಿ ನಾಯಕಿ ಕೆಂಪು, ಬಿಳಿ ಬಣ್ಣದ ಸೀರೆ, ಕುಂಕುಮ ಹಾಗೂ ಸಾಂಸ್ಕೃತಿಕ ಉಡುಗೆ ಧರಿಸಿ ಪೂಜೆಗೆ ಆಗಮಿಸಿದ ನುಸ್ರತ್ ಡ್ರಮ್ ಬಾರಿಸಿ, ಇತರ ಮಹಿಳೆಯರೊಂದಿಗೆ ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಅಲ್ಲದೆ ಕುಣಿಯುವ ಭರದಲ್ಲಿ ಕೊರೊನಾ ನಿಯಮಗಳನ್ನು ಸಹ ಬ್ರೇಕ್ ಮಾಡಿಲ್ಲ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಇತರ ಮಹಿಳೆಯರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ.

    ಈ ಹಿಂದೆ ನುಸ್ರತ್ ಅವರು ದುರ್ಗೆಯ ರೀತಿ ವಸ್ತ್ರಾಭರಣ ಧರಿಸಿ ವಿಡಿಯೋ ಹಾಗೂ ಫೋಟೋ ಶೂಟ್ ಮಾಡಿಸಿದ್ದರು. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಹಲವರು ಅಸಭ್ಯವಾಗಿ ಕಮೆಂಟ್ ಮಾಡಿ, ಕೊಲೆ ಬೆದರಿಕೆಯನ್ನು ಸಹ ಹಾಕಿದ್ದರು.

    ಇದೇ ಮೊದಲಲ್ಲ, ಈ ಹಿಂದೆ ಸಹ ಹಲವು ಬಾರಿ ನುಸ್ರತ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ. ಕಳೆದ ವರ್ಷ ಹಿಂದೂ ಯುವಕನನ್ನು ವಿವಾಹವಾಗಿದ್ದಕ್ಕೆ ಹಾಗೂ ಸಿಂಧೂರ ಧರಿಸಿದ್ದಕ್ಕೆ ಅಲ್ಲದೆ ರಥಯಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ಹಲವು ಜನ ಕೊಲೆ ಬೆದರಿಕೆ ಹಾಕಿದ್ದರು. ಇದಾವುದಕ್ಕೂ ನುಸ್ರತ್ ತಲೆ ಕೆಡಿಸಿಕೊಂಡಿಲ್ಲ. ತಮಗಿಷ್ಟವಾದ ದೇವರನ್ನು ಪೂಜಿಸುತ್ತಾರೆ. ಅಲ್ಲದೆ ಎಲ್ಲ ಹಬ್ಬಗಳನ್ನು ಆಚರಿಸುತ್ತಾರೆ.

    ವಿವಾದಗಳ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ನುಸ್ರತ್, ನಾನು ದೇವರ ವಿಶೇಷ ಮಗಳು, ಎಲ್ಲ ಹಬ್ಬಗಳನ್ನೂ ಆಚರಿಸುತ್ತೇನೆ. ಎಲ್ಲದಕ್ಕಿಂತಲೂ ಮಿಗಿಲಾಗಿ ಮಾನವೀಯತೆ ಹಾಗೂ ಪ್ರೀತಿಯನ್ನು ಗೌರವಿಸುತ್ತೇನೆ ಎಂದು ತಿಳಿಸಿದ್ದರು.

  • ಅ.24 ರಿಂದ ಸಾಲು ಸಾಲು ರಜೆ – ಬ್ಯಾಂಕ್‌ ಕೆಲಸ ಮುಗಿಸಿಕೊಳ್ಳಿ

    ಅ.24 ರಿಂದ ಸಾಲು ಸಾಲು ರಜೆ – ಬ್ಯಾಂಕ್‌ ಕೆಲಸ ಮುಗಿಸಿಕೊಳ್ಳಿ

    ಬೆಂಗಳೂರು: ಹಬ್ಬದ ಪ್ರಯುಕ್ತ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಇದ್ದು ಬ್ಯಾಂಕ್ ವ್ಯವಹಾರಗಳಿದ್ರೆ ಇನ್ನೆರಡು ದಿನದಲ್ಲಿ ಮುಗಿಸಿಕೊಳ್ಳುವುದು ಉತ್ತಮ

    ಶನಿವಾರದಿಂದ ಬ್ಯಾಂಕ್ ಗಳಿಗೆ ನಿರಂತರ ರಜೆ ಇರಲಿದೆ. ಸಾಲು ಸಾಲು ರಜೆ ಹಿನ್ನೆಲೆ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.

    ಹಬ್ಬ ವಾರಾಂತ್ಯ ರಜೆಗಳ ಕಾರಣ ಕ್ಯಾಷ್ ವಿತ್ ಡ್ರಾ, ಠೇವಣಿ, ಚೆಕ್ ಮೊದಲಾದ ವ್ಯವಹಾರಗಳನ್ನು ಮಗಿಸಿಕೊಳ್ಳುವುದು ಉತ್ತಮ.

    ಯಾವ ದಿನ ಏನು?
    ಅ.24 – 4ನೇ ಶನಿವಾರ
    ಅ.25 – ಭಾನುವಾರ(ಆಯುಧ ಪೂಜೆ)
    ಅ.26 – ಸೋಮವಾರ(ವಿಜಯದಶಮಿ)
    ಅ.30 – ಶುಕ್ರವಾರ (ಈದ್-ಮಿಲಾದ್)
    ಅ. 31- ಶನಿವಾರ – ಮಹರ್ಷಿ ವಾಲ್ಮೀಕಿ ಜಯಂತಿ
    ನ.1 ಭಾನುವಾರ – ಕನ್ನಡ ರಾಜ್ಯೋತ್ಸವ

  • ಛಾಯಾಗ್ರಾಹಕ ಪುನೀಕ್ ಶೆಟ್ಟಿಯ ಕೈಚಳಕ – ನವದುರ್ಗೆಯಾದ ಬಂಟ್ವಾಳದ ಬಾಲಕಿ

    ಛಾಯಾಗ್ರಾಹಕ ಪುನೀಕ್ ಶೆಟ್ಟಿಯ ಕೈಚಳಕ – ನವದುರ್ಗೆಯಾದ ಬಂಟ್ವಾಳದ ಬಾಲಕಿ

    ಮಂಗಳೂರು: ನವರಾತ್ರಿ ಅಥವಾ ದಸರಾ ಬಂತೆಂದರೆ ಸಾಕು, ನಾನಾ ಬಗೆಯ ಸಂಭ್ರಮಗಳು ಕಳೆಗಟ್ಟುತ್ತವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ವಿವಿಧ ಬಗೆಯ ವೇಷಗಳಲ್ಲಿ ಮಿಂಚುವ ಟ್ರೆಂಡ್‍ನ್ನು ಕೂಡ ನಾವು ನೋಡುತ್ತಿದ್ದೇವೆ. ಇದೀಗ ಮಂಗಳೂರಿನಲ್ಲಿ ನವರಾತ್ರಿ ಸಂದರ್ಭದಲ್ಲಿ ಇಂತಹುದೇ ಒಂದು ಪ್ರಯತ್ನ ನಡೆದಿದೆ.

    ನವರಾತ್ರಿಗೆ ನವವಿಧ ವಸ್ತ್ರ ವೈವಿಧ್ಯ, ಪೂಜೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ನವದುರ್ಗೆಯ ರೂಪದಲ್ಲೇ ದೇವತೆ ಪ್ರತ್ಯಕ್ಷವಾದರೆ ಅದರ ಸೊಬಗು ಹೇಗಿರಬಹುದು? ಇಂತಹ ಒಂದು ಪರಿಕಲ್ಪನೆ ಮಂಗಳೂರಿನಲ್ಲಿ ಸಾಕಾರಗೊಂಡಿದೆ. ಇದಕ್ಕೆ ಸಾಕಾರ ನೀಡಿರುವುದು ಬಾಲಕಿ ವಿಷ್ಣುಪಿಯಾ ಮತ್ತು ಛಾಯಾಗ್ರಾಹಕ ಪುನೀಕ್ ಶೆಟ್ಟಿ.

    ವಿಷ್ಣುಪ್ರಿಯಾ ಎನ್ನುವ ಹೆಸರು ಕೇಳಿದೊಡನೆ ಆ ಮಗು ಭಗವಾನ್ ವಿಷ್ಣು ಆರಾಧಕರ ಕುಟುಂಬದಿಂದ ಬಂದಿರಬೇಕು ಎನ್ನುವ ಕಲ್ಪನೆ ಬರಬಹುದು. ಆದರೆ ಈ ಮಗುವಿಗೆ ವಿಷ್ಣುಪಿಯ ಎನ್ನುವ ಹೆಸರು ಬರಲು ಕಾರಣ ಕನ್ನಡ ಚಿತ್ರರಂಗದ ಸಾಹಸ ಸಿಂಹ ವಿಷ್ಣುವರ್ಧನ್ ಎಂದರೆ ನೀವು ನಂಬಲೇಬೇಕು.

    ವಿಷ್ಣುವರ್ಧನ್ ಅವರ ಯಜಮಾನ ಸಿನಿಮಾ ನೋಡಿ ಅದೇ ಹೆಸರಿನ “ಯಜಮಾನ ಉಪ್ಪಿನಕಾಯಿ” ಸಂಸ್ಥೆ ಮಾಡಿ ಹೆಸರಾದ ಬಂಟ್ವಾಳದ ವರದರಾಯ ಪೈಯವರ ಕತೆ ನಿಮಗೆ ತಿಳಿದಿರಬಹುದು. ಅವರ ಪುತ್ರಿಯೇ ಈ ವಿಷ್ಣುಪ್ರಿಯಾ. ಮೂಡುಬಿದ್ರೆಯ ರೋಟರಿ ಇಂಗ್ಲಿಷ್ ಮೀಡಿಯಂ ಸೆಂಟ್ರಲ್ ಸ್ಕೂಲ್‍ನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯಗಿರುವ ಈಕೆ ಕೊಯಂಬತ್ತೂರಿನಲ್ಲಿ ನಡೆದ ಸ್ಪಲ್ ‘ಬಿ’ ಎನ್ನುವ ರಾಷ್ಟ್ರ ಮಟ್ಟದ ಮಕ್ಕಳ ಸ್ಪರ್ಧೆಯಲ್ಲಿ 47ನೇ ರ್ಯಾಂಕ್ ಪಡೆದಿದ್ದಾಳೆ. ವೆಂಕಟಕೃಷ್ಣ ಭಟ್ ಅವರ ಬಳಿ ಕರ್ನಾಟಕ ಸಂಗೀತ ಮತ್ತು ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿರುವ ವಿಷ್ಣುಪ್ರಿಯಾ ತಂದೆಯ ಬಳಿಯಲ್ಲೇ ಇಲೆಕ್ಟ್ರಿಕಲ್ ಆರ್ಗನ್ ಕಲಿಯುತ್ತಿದ್ದಾಳೆ.

    ಇಂಥ ಮುದ್ದು ಕಂದನನ್ನು ಇರಿಸಿಕೊಂಡು ನವದುರ್ಗೆಯರ ರೂಪ ನೀಡಿ ನೋಡುವ ಆಕಾಂಕ್ಷೆ ಮಾತಾಪಿತರಲ್ಲಿ ಮೂಡಿದೆ. ಶ್ರದ್ದಾ ಅಶ್ವಿನ್ ಪ್ರಭು ಅವರು ನಡೆಸಿದ ನವದುರ್ಗೆಯರ ಮೇಕಪ್‍ಗೆ ಸ್ಥಿರಚಿತ್ರ ರೂಪ ನೀಡಲು ಮಂಗಳೂರಿನ ಖ್ಯಾತ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಕೈ ಜೋಡಿಸಿದ್ದಾರೆ. ಸಿನಿಮಾ ನಿರ್ದೇಶಕರು ಕೂಡ ಆಗಿರುವ ಪುನೀಕ್ ಶೆಟ್ಟಿ, ಎರಡೇ ದಿನದಲ್ಲಿ ನವದುರ್ಗೆಯರ ರೂಪದಲ್ಲಿ ಮಗುವನ್ನು ಫೋಟೋಗಳಲ್ಲಿ ಚಿತ್ರಿಸಿದ್ದಾರೆ.

  • ಮಂಗಳೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಕೊರೊನಾ ವಾರಿಯರ್

    ಮಂಗಳೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದ ಕೊರೊನಾ ವಾರಿಯರ್

    ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆಯಿತು.

    ಕೊರೊನಾ ವಾರಿಯರ್ ಎನ್.ಆರ್.ಐ ಫೋರಂನ ಮಾಜಿ ಉಪಾಧ್ಯಕ್ಷೆ, ಚಿಕ್ಕಮಗಳೂರು ಮೂಲದ ಡಾ.ಆರತಿ ಕೃಷ್ಣ ಈ ಬಾರಿಯ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರದಲ್ಲಿ ಗಣಪತಿ, ಶಾರದಾ ಮಾತೆ, ನವದುರ್ಗೆಯರು ಹಾಗೂ ಆದಿಶಕ್ತಿಯ ಮಣ್ಣಿನ ಮೂರ್ತಿಗಳನ್ನು ಏಕಕಾಲದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

    ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿಯವರ ಆಶಯದಂತೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ನಮ್ಮ ದಸರಾ-ನಮ್ಮ ಸುರಕ್ಷೆ ಎಂಬ ಘೋಷ ವಾಕ್ಯದೊಂದಿಗೆ ಇಂದಿನಿಂದ 10 ದಿನಗಳ ಕಾಲ ನಡೆಯಲಿದೆ. ಅಕ್ಟೋಬರ್ 26 ರಂದು ದಸರಾ ವಿಸರ್ಜನಾ ಪೂಜೆ ನಡೆದು ಬಳಿಕ ಕ್ಷೇತ್ರದ ಆವರಣದಲ್ಲೇ ಮೂರ್ತಿಗಳ ಮೆರವಣಿಗೆ ನಡೆಸಿ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು.