Tag: ದಸರಾ

  • ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ

    ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯುತ್ತಿರುವ ಆನೆಯ ತಾಲೀಮಿನಲ್ಲಿ ಆನೆ ರಂಪಾಟ ಮಾಡಿರುವ ಘಟನೆ ಅರಮನೆ ಮೈದಾನಲ್ಲಿ ನಡೆದಿದೆ.

    ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ದಸರಾ ಅಂಗವಾಗಿ ಇಂದಿನಿಂದ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭ ಆಗಿದೆ. ಆದರೆ ತಾಲೀಮು ವೇಳೆ ಆನೆ ರಂಪಾಟ ಮಾಡಿದೆ. ಸರಪಳಿ ಕಿತ್ತುಕೊಂಡು ರೋಷದಿಂದ ಆನೆ ಜೆಮಿನಿ ಓಡಿ ಹೋಗಿದೆ. ಈ ವೇಳೆ ಆನೆಗಳನ್ನು ನಿಯಂತ್ರಿಸಲು ಮಾವುತರು- ಕಾವಾಡಿಗರು ಹರಸಾಹಸ ಪಟ್ಟಿದ್ದಾರೆ. ಆದರೆ ಕೊನೆಗೆ ದಸರಾ ಆನೆಗಳಾದ ಅಭಿಮನ್ಯು, ಧನಂಜಯನಿಂದ ಜೆಮಿನಿಯನ್ನು ನಿಯಂತ್ರಂಣವನ್ನು ಮಾಡಲಾಗಿದೆ. ಕೆಲವು ಸಮಯ ಆನೆ ರಂಪಾಟದಿಂದ ಅರಮನೆ ಆವರಣದಲ್ಲಿ ಆತಂಕ ಉಂಟಾಗಿತ್ತು. ಇದನ್ನೂ ಓದಿ:  2 ತಿಂಗಳ ಬಳಿಕ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು

    ಮೈಸೂರಿನ ಅರಮನೆಯಂಗಳದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನಡೆಸಲಾಯಿತು. ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ವಿಕ್ರಮ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ಶುರುವಾಗಿದೆ. ಡಿಸಿಎಫ್ ಕರಿಕಾಳನ್ ವೈದ್ಯ ರಮೇಶ್ ಅರಮನೆ ಎಸಿಪಿ ಚಂದ್ರಶೇಖರ್ ಸೇರಿ ಹಲವು ಅಧಿಕಾರಿಗಳು ಪೂಜೆಯಲ್ಲಿ ಭಾಗಿಯಾಗಿದ್ದರು.

  • ತುಲಾ ಲಗ್ನದಲ್ಲಿ ಮೈಸೂರು ಅರಮನೆ ಪ್ರವೇಶಿಸಿದ ದಸರಾ ಆನೆಗಳು

    ತುಲಾ ಲಗ್ನದಲ್ಲಿ ಮೈಸೂರು ಅರಮನೆ ಪ್ರವೇಶಿಸಿದ ದಸರಾ ಆನೆಗಳು

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಇಂದು ತುಲಾ ಲಗ್ನದಲ್ಲಿ ಗಜಪಡೆ ಅರಮನೆಯನ್ನು ಪ್ರವೇಸಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳನ್ನು ಸ್ವಾಗತಿಸಿದ್ದಾರೆ.

    ಅಂಬಾವಿಲಾಸ ಅರಮನೆಯಂಗಳಕ್ಕೆ ಗಜಪಡೆ ಆಗಮಿಸಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಬಂದಿವೆ. ಬೆಳಗ್ಗೆ 6:45ಕ್ಕೆ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿದ್ದು, ಬಳಿಕ 7:35ಕ್ಕೆ ಅರಣ್ಯ ಭವನದಿಂದ ಅರಮನೆಯತ್ತ ಮೆರವಣಿಗೆ ಮೂಲಕ ಆನೆಗಳು ಆಗಮಿಸಿವೆ. ಇದನ್ನೂ ಓದಿ: 2022ರಲ್ಲಿ ಭಾರತದ ಜಿಡಿಪಿ ಶೇ.6.7 – ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆ

    ಬೆಳಗ್ಗೆ 8:36 ರಿಂದ 9:11ರ ತುಲಾ ಲಗ್ನದಲ್ಲಿ ಆನೆಗಳು ಅರಮನೆ ಪ್ರವೇಶ ಮಾಡಿವೆ. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಗೆ ಸಾಂಪ್ರದಾಯಿಕ, ಪೂಜೆ, ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಜಪಡೆಗೆ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದಾರೆ.

    ಬೆಚ್ಚಿದ ಅಶ್ವತ್ಥಾಮ
    ನಗರದ ಸದ್ದುಗದ್ದಲಕ್ಕೆ ಅಶ್ವತ್ಥಾಮ ಬೆಚ್ಚಿದ್ದಾನೆ. ಅಶ್ವತ್ಥಾಮ ಆನೆ ಮೊದಲ ಬಾರಿಗೆ ದಸರಾಗೆ ಬಂದಿದೆ. ಹೀಗಾಗಿ ನಗರದ ಸದ್ದುಗದ್ದಲಕ್ಕೆ ಬೆಚ್ಚಿ ಫುಟ್‍ಪಾತ್ ಏರಿತ್ತು. ಅರಣ್ಯಭವನದಿಂದ ಅರಮನೆಗೆ ಬರುವ ವೇಳೆ ರಸ್ತೆಯಿಂದ ಫುಟ್‍ಪಾತ್ ಮಾರ್ಗಕ್ಕೆ ತೆರಳಿತ್ತು. ಬಳಿಕ ಮಾವುತ, ಕಾವಾಡಿ ಆನೆಯನ್ನು ನಿಯಂತ್ರಿಸಿ, ಫುಟ್‍ಪಾತ್‍ನಿಂದ ಕೆಳಗಿಳಿಸಿ, ರಸ್ತೆಯಲ್ಲಿ ಆನೆಯನ್ನು ಕರೆದುಕೊಂಡು ಅರಮನೆಗೆ ಕರೆತರಲಾಯಿತು.

  • ಮೈಸೂರಿನತ್ತ ಪ್ರಯಾಣ ಬೆಳೆಸಿದ ದಸರಾ ಗಜಪಡೆ

    ಮೈಸೂರಿನತ್ತ ಪ್ರಯಾಣ ಬೆಳೆಸಿದ ದಸರಾ ಗಜಪಡೆ

    ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲೆಂದು ಇಂದು ಐದು ಆನೆಗಳು ಕೊಡಗಿನಿಂದ ಮೈಸೂರಿನತ್ತ ಪ್ರಯಾಣ ಬೆಳೆಸಿದವು.

    ಚಿತ್ತಾಕರ್ಶಕ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲೆಂದು ದುಬಾರೆ ಸಾಕಾನೆ ಶಿಬಿರದಿಂದ ಪಟ್ಟದ ಆನೆ ವಿಕ್ರಮ, ಕಾವೇರಿ ಹಾಗೂ ಧನಂಜಯ ಆನೆಗಳು ಹೊರಟರೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿದವು. ಇಂದು ಬೆಳಗ್ಗೆ ಕುಶಾಲನಗರ ಸಮೀಪದ ದುಬಾರೆಯಲ್ಲಿ ಸಾಕಾನೆಗಳಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಹಾಗೂ ವಿಶೆಷ ಆಹಾರ ನೀಡಿ ಬೀಳ್ಕೊಡಲಾಯಿತು. ಇದನ್ನೂ ಓದಿ: ಮುಳ್ಳಯ್ಯನಗಿರಿಯಲ್ಲಿ ಜನಜಾತ್ರೆ- ಫುಲ್ ಟ್ರಾಫಿಕ್, ಪೊಲೀಸರ ಜೊತೆ ಪ್ರವಾಸಿಗರ ವಾಗ್ವಾದ

    ಕೊಡಗು ಜಿಲ್ಲೆಯ ವಿವಿಧ ಸಾಕಾನೆ ಶಿಬಿರಗಳಿಂದ ಪ್ರತಿ ವರ್ಷ 5ಕ್ಕೂ ಹೆಚ್ಚು ಆನೆಗಳು ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಈಗಾಗಲೆ ಹಲವಾರು ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆಹಾಕಿದ ಅನುಭವ ಇರುವ ಅಭಿಮನ್ಯು ಹಾಗೂ ಗೋಪಾಲಸ್ವಾಮಿಗಳ ಜೊತೆಗೆ ಕಾವೇರಿ, ವಿಕ್ರಮ ಹಾಗೂ ಧನಂಜಯ ಆನೆಗಳು ಕೂಡ ಇಂದು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.

    ಇಂದು ಸಂಜೆ ವೇಳೆಗೆ ವೀರನಹೋಸಹಳ್ಳಿಗೆ ಎಲ್ಲ ದಸರಾ ಆನೆಗಳು ತಲುಪಲಿದ್ದು, ನಾಳೆ ಬೆಳಗ್ಗೆ ಮೈಸೂರಿನತ್ತ ಪ್ರಯಾಣ ಬೆಳಸಲಿವೆ. ಮೈಸೂರಿನಲ್ಲಿ ಒಂದು ತಿಂಗಳು ಭರ್ಜರಿ ತಾಲೀಮಿನ ನಂತರ ಆನೆಗಳು ಜಂಬೂಸವಾರಿಗೆ ರೆಡಿಯಾಗಲಿವೆ. ಈ ಬಾರಿ ಸರಳ ದಸರಾ ಆಗುತ್ತಿರುವುದರಿಂದ ಆನೆಗಳ ಮಾವುತ ಹಾಗೂ ಕಾವಾಡಿಗಳು ಮಾತ್ರ ಮೈಸೂರಿನತ್ತ ತೆರಳಿದ್ದು, ದಸರಾ ಆನೆಗಳನ್ನು ಜಂಬೂಸವಾರಿಗೆ ಸನ್ನದ್ಧಗೊಳಿಸಲು ಹೊರಟಿದ್ದಾರೆ. ಈಗಾಗಲೇ ತಮ್ಮ ಆನೆಗಳಿಗೆ ವಿಶೇಷ ಆಹಾರ ಹಾಗೂ ಮೆರವಣಿಗೆ ತಾಲೀಮು ನೀಡಿ ಸಜ್ಜುಗೊಳಿಸಿಕೊಂಡಿರುವ ಮಾವುತರು, ಇದೀಗ ಮೈಸೂರಿನತ್ತ ಹೊರಟಿದ್ದು, ಅಲ್ಲಿಯೂ ಆನೆಗಳಿಗೆ ಮತ್ತಷ್ಟು ಪೌಷ್ಟಿಕ ಆಹಾರ ನೀಡಿ, ಆನೆಗಳನ್ನು ಮತ್ತಷ್ಟು ಸಬಲಗೊಳಿಸಲಿದ್ದಾರೆ.

  • ದಸರೆಗೆ ಹೊರಡುವ ಉತ್ಸಾಹದಲ್ಲಿದೆ ವಿಕ್ರಮ, ಧನಂಜಯ, ಕಾವೇರಿ ಆನೆಗಳು

    ದಸರೆಗೆ ಹೊರಡುವ ಉತ್ಸಾಹದಲ್ಲಿದೆ ವಿಕ್ರಮ, ಧನಂಜಯ, ಕಾವೇರಿ ಆನೆಗಳು

    ಮಡಿಕೇರಿ: ಕೊರೊನಾ ಆತಂಕದ ನಡುವೆಯೇ ಈ ಬಾರಿ ಸರಳ ರೀತಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ತಯಾರಿಗಳು ಗರಿಗೆದರಿವೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳು ರಾಜ್ಯದ ತಮ್ಮ ವಿವಿಧ ಬಿಡಾರಗಳಲ್ಲಿ ಭರ್ಜರಿಯಾಗಿ ತಯಾರಾಗುತ್ತಿವೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಆನೆಕಾಡು ಸಾಕಾನೆ ಶಿಬಿರದಲ್ಲಿ ಮೈಸೂರು ದಸರಾದ ಪಟ್ಟದ ಆನೆ ವಿಕ್ರಮ ಹಾಗೂ ಮುಂಚೂಣಿ ಆನೆಗಳಾದ ಧನಂಜಯ, ಕಾವೇರಿ ದಸರೆಗೆ ಹೊರಡುವ ಉತ್ಸುಕದಲ್ಲಿವೆ.

    ನಾಡಹಬ್ಬ ದಸರಾಕ್ಕೆ ಭರ್ಜರಿ ತಯಾರಿ ಶುರುವಾಗಿದೆ, ಕೊರೊನಾ ಆತಂಕದ ಮಧ್ಯೆಯೇ ಕಳೆದ ಬಾರಿಯಂತೆ ಈ ಬಾರಿಯು ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗಾಗಿ ಆನೆಗಳ ತಂಡ ಮೈಸೂರಿನತ್ತ ಹೊರಡಲು ಉತ್ಸುಕವಾಗಿವೆ. ದಸರಾದ ಸಾಂಪ್ರದಾಯಿಕ ಗಜಪಯಣಕ್ಕಾಗಿ ಆನೆಗಳ ತಂಡ ರೆಡಿಯಾಗುತ್ತಿದ್ದು, ಅರಮನೆ ನಗರಿಗೆ ಹೊರಡಲು ತಯಾರಿ ಮಾಡಿಕೊಳ್ಳುತ್ತಿವೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ದುಬಾರೆಯಿಂದ ಹಾಗೂ ಆನೆಕಾಡಿನಲ್ಲಿರುವ ಸಾಕಾನೆ ಶಿಬಿರದಲ್ಲಿರುವ ಮೈಸೂರು ದಸರಾದ ಪಟ್ಟದ ಆನೆ ವಿಕ್ರಮ(58) ಸೇರಿದಂತೆ ಮುಂಚೂಣಿ ಆನೆಗಳಾದ ಧನಂಜಯ(43), ಕಾವೇರಿ(44) ದಸರೆ ಜಂಬುಸವಾರಿಗೆ ತಯಾರಿ ನಡೆಸುತ್ತಿವೆ. ಗಾಂಭೀರ್ಯದ ನಡೆಯ ಗಜಗಳು ಶಿಬಿರದಲ್ಲಿ ಮಾವುತ ಹಾಗೂ ಕಾವಾಡಿಗಳ ಆಜ್ಞೆಯಂತೆ ತಾಲೀಮಿನಲ್ಲಿ ತೊಡಗಿವೆ. ಇದನ್ನೂ ಓದಿ: ಕೊಡಗಿಗೆ ಕಾಶ್ಮೀರದ ರೀತಿಯ ಹೆದ್ದಾರಿ ನಿರ್ಮಿಸಿಕೊಡಿ ಗಡ್ಕರಿಗೆ ಬೊಮ್ಮಾಯಿ ಮನವಿ

    ಪ್ರತಿ ವರ್ಷ ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ದಸರಾಗೆ ಆರು ಅನೆಗಳು ಮೈಸೂರಿನತ್ತ ಪ್ರಯಾಣ ಬೆಳಸುತ್ತಿದವು. ಅದರೆ ಈ ಬಾರಿ ಕೊರೊನಾ ಆರ್ಭಟ ಮತಷ್ಟು ಹೆಚ್ಚು ಆಗಿರುವುದರಿಂದ ಈ ಬಾರಿ ಶಿಬಿರದಿಂದ ಮೂರು ಸಾಕಾನೆಗಳು ಭಾಗಿಯಾಗುತ್ತಿವೆ. ಶಿಬಿರದಲ್ಲಿ ಇರುವ ಆನೆಗಳಿಗೆ ನಿತ್ಯವೂ ಬೆಳಗ್ಗೆ 6 ಕೆ.ಜಿ. ಭತ್ತದ ಹುಲ್ಲು, 6 ಕೆ.ಜಿ. ಭತ್ತ, ಬೆಲ್ಲ ಜೊತೆಗೆ ವಿಶೆಷ ಆಹಾರವಾಗಿ ಜೋಳ, ಕುಚಲಕ್ಕಿ, ರಾಗಿ ಮುದ್ದೆ ಸಿದ್ಧಪಡಿಸಿದ ಆಹಾರವನ್ನು ನೀಡಿ ತಯಾರು ಮಾಡಲಾಗಿದೆ. ಮೈಸೂರಿಗೆ ತೆರಳುವ ಆನೆಗಳ ತಂಡ ಅಲ್ಲಿ ದಸರಾಕ್ಕಾಗಿ ವಿಶೇಷ ಸಿದ್ಧತೆಯಲ್ಲಿ ತೊಡಗಲಿವೆ. ಸದ್ಯ ಶಿಬಿರದಲ್ಲಿ ಈಗಾಗಲೇ ಸಾಕಾನೆಗಳಿಗೆ ವಿಶೇಷ ಆರೈಕೆ ನಂತರ ಅಗತ್ಯ ತಾಲೀಮು ನಡೆಸಿ ನಾಡಹಬ್ಬದಲ್ಲಿ ಪಾಲ್ಗೊಳಲು ಆನೆಗಳು ಹೊರಡಲು ತಯಾರಿ ನಡೆಸಿದೆ. ಈ ಬಾರಿ ಪ್ರತಿ ಆನೆಯೊಂದಿಗೆ ಮಾವುತ ಕಾವಾಡಿಗಳು ಮಾತ್ರ ತೆರಳಲಿದ್ದು, ನಾಡಹಬ್ಬದ ಯಶಸ್ವಿಯಾಗಿ ಆನೆಗಳನ್ನು ತಯಾರು ಮಾಡಲಿದ್ದಾರೆ.

    ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಗಾಗಿ ಆನೆಗಳ ತಂಡ ರಾಜ್ಯದ ವಿವಿಧೆಡೆಯಿಂದ ವೀರನಹೊಸಹಳ್ಳಿ ಶಿಬಿರಕ್ಕೆ ತೆರಳಿ ಅಲ್ಲಿಂದ ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದು, ಸಂಪ್ರದಾಯದಂತೆ ಗಜಪಯಣ ನಡೆಯಲಿದೆ. ಇದೇ ಸೆಪ್ಟೆಂಬರ್ 13 ರಂದು ಮೈಸೂರಿನತ್ತ ಎಲ್ಲ ಅನೆಗಳು ಪ್ರಯಾಣ ಬೆಳಸಲ್ಲಿವೆ.

  • ದಸರಾ ತಯಾರಿ- ಸೆ.8ರಂದು ಮೈಸೂರಿನಲ್ಲಿ ಜನಪ್ರತಿನಿಧಿಗಳ ಸಭೆ

    ದಸರಾ ತಯಾರಿ- ಸೆ.8ರಂದು ಮೈಸೂರಿನಲ್ಲಿ ಜನಪ್ರತಿನಿಧಿಗಳ ಸಭೆ

    ಮೈಸೂರು: ದಸರಾ ಆಚರಿಸುವ ಸಂಬಂಧ ಸೆಪ್ಟೆಂಬರ್ 8ರಂದು ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಲಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ಅವರು, ಕೊರೊನಾ 3ನೇ ಅಲೆ ಎದುರಾಗಬಹುದು ಎಂಬ ಭೀತಿಯಿಂದ ಈ ಬಾರಿಯೂ ಮೈಸೂರು ದಸರಾವನ್ನು ಸರಳವಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಮೈಸೂರು ದಸರಾಗೆ 5 ಕೊಟಿ ರೂ. ಅನುದಾನ ಕೇಳಲಾಗಿತ್ತು. ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ದಸರಾಗೂ ಸೇರಿಸಿ ಮುಖ್ಯಮಂತ್ರಿಗಳು 6 ಕೋಟಿಯನ್ನು ನೀಡಿದ್ದಾರೆ ಎಂದು ಹೇಳಿದರು.

    ಈ ಬಾರಿಯ ದಸರಾ ಉದ್ಘಾಟಕರ ವಿಷಯದಲ್ಲಿ ಮುಖ್ಯಮಂತ್ರಿಗಳೇ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ನಾವು ಯಾವುದೇ ಉದ್ಘಾಟಕರ ಹೆಸರನ್ನು ಸೂಚಿಸಿಲ್ಲ. ಹೀಗಾಗಿ ದಸರಾ ಉದ್ಘಾಟಕರು ಯಾರೆಂದು ಮುಖ್ಯಮಂತ್ರಿಗಳೇ ತಿಳಿಸಲಿದ್ದಾರೆ. ಕೋವಿಡ್ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಮಾಹಿತಿಯನ್ನು ತಜ್ಞರು ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎಷ್ಟು ಜನರಿಗೆ ಪ್ರವೇಶ ನೀಡಬೇಕು ಎಂಬುದನ್ನು ಸದ್ಯದಲ್ಲೆ ತಿಳಿಸಲಾಗುವುದು ಎಂದರು. ಇದನ್ನೂ ಓದಿ: ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್

    ದಸರಾ ಉದ್ಘಾಟನೆಯು ಎಂದಿನಂತೆ ಚಾಮುಂಡಿ ಬೆಟ್ಟದಲ್ಲಿ ಆಗುವುದು. ಆದರೆ ಜಂಬೂ ಸವಾರಿ ಅರಮನೆಯ ಆವರಣಕ್ಕೆ ಸೀಮಿತವಾಗಿರುತ್ತದೆ. 9 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಮನೆಯ ಆವರಣದಲ್ಲಿಯೇ ನಡೆಯಲಿವೆ ಎಂದು ತಿಳಿಸಿದರು.

  • ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ

    ದಸರಾ ಜಂಬೂ ಸವಾರಿಗೆ ಆನೆಗಳ ಆಯ್ಕೆ

    ಮೈಸೂರು: ಈ ವರ್ಷದ ಜಂಬೂ ಸವಾರಿಗೆ ಅರಣ್ಯಾಧಿಕಾರಿಗಳು 14 ಆನೆಗಳನ್ನು ಆಯ್ಕೆ ಮಾಡಿದ್ದಾರೆ.

    ಡಿಸಿಎಫ್ ಕರಿಕಾಳನ್ ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ತಂಡ ಹೈ ಪವರ್ ಕಮೀಟಿ ಮೀಟಿಂಗ್ ಮುನ್ನ ಆನೆಗಳನ್ನು ಆಯ್ಕೆ ಮಾಡಿದೆ. ಸದ್ಯ ವಿವಿಧ ಕ್ಯಾಂಪ್ ಗಳಿಂದ 14 ಆನೆಗಳನ್ನ ಪಟ್ಟಿ ಮಾಡಿ ಬೆಂಗಳೂರಿನ ಮುಖ್ಯ ಅರಣ್ಯ ಕಚೇರಿಗೆ ಕಳುಹಿಸಲಾಗಿದೆ. ಸರ್ಕಾರ ಸರಳ ದಸರಾ ಆಚರಣೆಗೆ ಮುಂದಾದ್ರೆ ಕೇವಲ ಏಳು ಆನೆಗಳನ್ನು ಮೈಸೂರಿಗೆ ಕರೆಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ.

    ಆನೆ ಕಾಡು, ದುಬಾರೆ, ಮತ್ತಿಗೋಡು, ಬಂಡೀಪುರ ಆನೆ ಶಿಬಿರದಿಂದ ಆನೆಗಳ ಆಯ್ಕೆ ಮಾಡಲಾಗಿದೆ. ಸದ್ಯ ವಿಕ್ರಮ್, ವಿಜಯಾ, ಅಭಿಮನ್ಯು, ಗೋಪಾಲಸ್ವಾಮಿ, ಭೀಮಾ, ಮಹೇಂದ್ರ, ಧನಂಜಯ, ಪ್ರಶಾಂತ್, ಗೋಪಿ, ಹರ್ಷ, ಕಾವೇರಿ, ಲಕ್ಷ್ಮಣ, ಚೈತ್ರಾ, ಮಹಾರಾಷ್ಟ್ರ ಭೀಮಾ ಆನೆಗಳ ಆಯ್ಕೆಯಾಗಿದೆ. ಇದನ್ನೂ ಓದಿ: ಯುದ್ಧದಲ್ಲಿ ಸಹಾಯ ಮಾಡಿದ ಅಫ್ಘನ್ನರಿಗೆ ಅಮೆರಿಕದಲ್ಲಿ ಆಶ್ರಯ: ಜೋ ಬೈಡನ್ ಘೋಷಣೆ

    ಸರಳ ದಸರಾವಾದರೆ 14 ಆನೆಗಳಲ್ಲಿ 7 ಆನೆಗಳು ನಾಡಿಗೆ ಕರೆಸಿಕೊಳ್ಳಲು ಚಿಂತನೆ ನಡೆದಿದೆ. ಕಳೆದ ವರ್ಷ 5 ಆನೆ ಕರೆಸಿಕೊಳ್ಳಲಾಗಿತ್ತು. ಈ ಬಾರಿ ಆನೆಗಳ ಆರೋಗ್ಯದ ಹಾಗೂ ಮುಂಜಾಗ್ರತ ದೃಷ್ಟಿಯಿಂದ ಎರಡು ಆನೆಗಳನ್ನ ಹೆಚ್ಚುವರಿಯಾಗಿ ಕರೆಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ:ಡಾಲಿಗೆ ಜೋಡಿಯಾದ ಆರ್‌ಎಕ್ಸ್ 100 ಚೆಲುವೆ

  • ಈ ಬಾರಿಯೂ ಸರಳ ದಸರಾ ಆಚರಣೆಗೆ ಚಿಂತನೆ:  ಎಸ್.ಟಿ.ಸೋಮಶೇಖರ್

    ಈ ಬಾರಿಯೂ ಸರಳ ದಸರಾ ಆಚರಣೆಗೆ ಚಿಂತನೆ: ಎಸ್.ಟಿ.ಸೋಮಶೇಖರ್

    ಮೈಸೂರು: ಕೊರೊನಾ ಹಿನ್ನೆಲೆಯಲ್ಲಿ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿಯೂ ಸರಳವಾಗಿ ಆಚರಿಸಲು ಚಿಂತಿಸಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

    ಹೆಚ್.ಟಿ.ಕೋಟೆ ತಾಲ್ಲೂಕು ಬಾವಲಿ ಚೆಕ್‌ಪೋಸ್ಟ್‌ ಪರಿಶೀಲನೆ ವೇಳೆ ದಸರಾ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರಳ ದಸರಾ ಆಚರಣೆಗೆ ರೂಪರೇಷೆಗಳನ್ನು ಸಿದ್ದಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೂಪರೇಷೆ ಸಿದ್ಧವಾದ ನಂತರ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಇದನ್ನೂ ಓದಿ:  ಕಾಂಗ್ರೆಸ್ಸಿನಿಂದ ಬಂದವರನ್ನ ಮಂತ್ರಿ ಮಾಡಬೇಕಾಗಿದ್ದರಿಂದ ನನಗೆ ಸಚಿವ ಸ್ಥಾನ ಕೈ ತಪ್ಪಿತು: ರೂಪಾಲಿ ನಾಯ್ಕ

    ಕಳೆದ ವರ್ಷ ದಸರಾ ಆಚರಣೆಗೆ 10 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆ ಪೈಕಿ 7.50 ಕೋಟಿ ಅನುದಾನ ಉಳಿದಿದೆ. ಈ ವರ್ಷದ ದಸರಾ ಆಚರಣೆಗೆ ಸರ್ಕಾರದ ಅನುಮೋದನೆ ಪಡೆದು ಆ ಉಳಿಕೆ ಅನುದಾನ ಬಳಸಿಕೊಳ್ಳಲಾಗುವುದು. ಮೈಸೂರು ದಸರಾ ಮಹೋತ್ಸವವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ವರ್ಷವೂ ದಸರಾ ಆಚರಣೆ ಮಾಡಲಾಗುತ್ತದೆ ಎಂದರು.

  • ಕೊಡಗಿಗೆ ದಸರಾ ಆನೆಗಳು ವಾಪಸ್ – ಇಳಿಯಲು ಒಲ್ಲೆನೆಂದು ಸೊಂಡಿಲಿನಿಂದ ಲಾರಿ ಹಿಡಿದ ವಿಕ್ರಮ

    ಕೊಡಗಿಗೆ ದಸರಾ ಆನೆಗಳು ವಾಪಸ್ – ಇಳಿಯಲು ಒಲ್ಲೆನೆಂದು ಸೊಂಡಿಲಿನಿಂದ ಲಾರಿ ಹಿಡಿದ ವಿಕ್ರಮ

    ಮಡಿಕೇರಿ: ಮೈಸೂರು ದಸರಾಗೆ ಆಗಮಿಸಿದ ಆನೆಗಳು ಈ ಬಾರಿಯೂ ಕಾಡಿಗೆ ಹೋಗಲು ಹಿಂಜರಿದಿದ್ದು, ವಿಕ್ರಮ ಆನೆ ಇಳಿಯಲು ಒಲ್ಲೆ ಎಂದು ಮತ್ತೆ ಲಾರಿಯೆಡೆಗೆ ತಿರುಗಿ ನಿಂತಿದ್ದ. ಬಳಿಕ ಮಾವುತನ ಸೂಚನೆ ನೀಡಿ ಲಾರಿಯಿಂದ ಇಳಿಯುವಂತೆ ಮಾಡಿದೆ.

    ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಕೊಡಗಿನಿಂದ ನಾಲ್ಕು ಆನೆಗಳು ತೆರಳಿದ್ದವು. ಇದೀಗ ಮತ್ತೆ ಕಾಡಿಗೆ ಮರಳಿವೆ. ದಸರಾದಲ್ಲಿ ಭಾಗವಹಿಸಲು 15 ದಿನಗಳ ಹಿಂದೆ ಕೊಡಗಿನ ಆನೆಕಾಡು ಮತ್ತು ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಆನೆಗಳನ್ನು ಮೈಸೂರಿಗೆ ಕರೆದೊಯ್ಯಲಾಗಿತ್ತು. ದಸರಾ ಮುಗಿದ ಹಿನ್ನೆಲೆ ಆನೆಗಳು ಇಂದು ಕೊಡಗಿಗೆ ಮರಳಿದವು.

    ಮೈಸೂರಿನಿಂದ ನೇರವಾಗಿ ಕೊಡಗಿನ ದುಬಾರೆ ಸಾಕಾನೆ ಶಿಬಿರ ಮತ್ತು ಕುಶಾಲನಗರ ಸಮೀಪದ ಆನೆ ಕಾಡಿಗೆ ಆನೆಗಳನ್ನು ಲಾರಿಯಲ್ಲಿ ಸಾಗಿಸಲಾಯಿತು. ವಿಕ್ರಮ ಮತ್ತು ಕಾವೇರಿ ಆನೆಯನ್ನು ಆನೆಕಾಡಿನಲ್ಲಿ ಇಳಿಸಲಾಯಿತು. ಆನೆ ರಕ್ಷಣಾ ಲಾರಿಯಲ್ಲಿ ವಿಕ್ರಮ ಆನೆಯನ್ನು ಕರೆತಂದು ಇಳಿಸಲು ಪ್ರಯತ್ನಿಸಿದರೆ, ನಾನು ಇಳಿಯಲು ಒಲ್ಲೇ ಎಂದು ಹಠ ಹಿಡಿದ. ಇಳಿಯುತಿದ್ದ ವಿಕ್ರಮ ಮತ್ತೆ ಲಾರಿಯೆಡೆಗೆ ತಿರುಗಿ ನಿಂತ. ಕೊನೆಗೆ ಮಾವುತ ಸೂಚನೆ ನೀಡಿದ ಬಳಿಕ ಲಾರಿಯಿಂದ ವಿಕ್ರಮ ಇಳಿದಿದ್ದಾನೆ.

    ಲಾರಿಯಿಂದ ಇಳಿಯುತ್ತಿದ್ದಂತೆ ವಿಕ್ರಮ ಆನೆ ಮೊದಲು ಮಜಾಬರೋವರೆಗೆ ಮರವೊಂದಕ್ಕೆ ತನ್ನ ಮೈಯನ್ನು ತೀಡಿದ. ಆನೆ ಹಾಗೆ ಮೈ ಉಜ್ಜಿಕೊಳ್ಳುತ್ತಿದ್ದ ರೀತಿಯನ್ನು ನೋಡಿ ನೆರದಿದ್ದ ಜನರು ನಕ್ಕು ಸುಸ್ತಾದರು. ಕೊನೆಗೆ ಮಾವುತ ಚಿಕ್ಕದೊಂದು ಕೋಲಿನಿಂದ ಎರಡು ಪೆಟ್ಟು ಕೊಟ್ಟು ಆನೆಯನ್ನು ಅಲ್ಲಿಂದ ಮುಂದೆ ಕಳುಹಿಸಬೇಕಾಯಿತು.

  • ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥೋತ್ಸವ ಹಿನ್ನೆಲೆಯಲ್ಲಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ.

    ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನ 12 ಗಂಟೆವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುವಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

    ಅಕ್ಟೋಬರ್ 29ರಂದು ನಡೆಯಲಿರುವ ಚಾಮುಂಡಿ ರಥೋತ್ಸವಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ದಸರಾ ಉತ್ಸವಕ್ಕೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ಮಾತ್ರ ಪ್ರವೇಶ ವಿನಾಯಿತಿ ಇರುತ್ತದೆ. ಜನಸಮೂಹವನ್ನು ಒಳಗೊಂಡಂತೆ ನಡೆಯುತ್ತಿದ್ದ ದಸರಾ ರಥೋತ್ಸವ ಈ ಬಾರಿ ಭಕ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶವಿಲ್ಲ. ಸಾಂಪ್ರದಾಯಿಕವಾಗಿ ಸರಳವಾಗಿ ಉತ್ಸವ ನಡೆಯಲಿದೆ.

    ಮೈಸೂರು ದಸರಾ ಪ್ರಮುಖ ಆಕರ್ಷಣೆ ಎಂದರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತದೆ. ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದ ಈ ಬಾರಿ ಮೈಸೂರು ದಸರಾ ಉತ್ಸವ ಸರಳವಾಗಿ ನಡೆದಿದೆ. ದಸರಾ ಹಬ್ಬ ಯಶಸ್ವಿಯಾಗಿ ನಡೆಯಲೆಂದು ರೋಹಿಣಿ ಸಿಂಧೂರಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ನವರಾತ್ರಿ ಒಂಬತ್ತನೇ ದಿನ ತಾವೇ ಸ್ವತಃ ರಥ ಎಳೆಯುವ ಮೂಲಕ ಹರಕೆ ತೀರಿಸಿದ್ದರು.

  • ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    ಮೆಕಪ್‍ಮೆನ್ ಬಳಿಕ ಮತ್ತೊಬ್ಬ ಸಿಬ್ಬಂದಿಗೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್

    – ದಸರಾ ಪ್ರಯುಕ್ತ ವಿಶೇಷ ಉಡುಗೊರೆ
    – ಗಿಫ್ಟ್ ವೀಡಿಯೋ ಸಖತ್ ವೈರಲ್

    ನವದೆಹಲಿ: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, ಬಾಲಿವುಡ್ ನಟಿ ಅಲಿಯಾ ಭಟ್ ನಂತರ ಇದೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಮ್ಮ ಮನೆಯ ಸಿಬ್ಬಂದಿಯೊಬ್ಬರಿಗೆ ಕಾರು ಗಿಫ್ಟ್ ಮಾಡುವ ಮೂಲಕ ಸದ್ಯ ಸುದ್ದಿಯಲ್ಲಿದ್ದಾರೆ.

    ಹೌದು. ಜಾಕ್ವೆಲಿನ್ ಅವರು ಮುಂಬೈಗೆ ಭೇಟಿ ನೀಡಿ, ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ ಹಬ್ಬಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ಸಿಬ್ಬಂದಿ ಜೊತೆ ಸೇರಿ ಕಾರಿಗೆ ಆಯುಧ ಪೂಜೆ ಕೂಡ ನೆರವೇರಿಸಿದ್ದಾರೆ.

    ಜಾಕ್ವೆಲಿನ್ ಕಾರಿನ ಕೀ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಸರಾ ಹಬ್ಬದ ಸಮಯದಲ್ಲಿ ವಿಶೇಷ ಉಡುಗೊರೆ ನೀಡಿ ಸಿಬ್ಬಂದಿಯ ಸಂತಸ, ಸಂಭ್ರಮ ಮತ್ತಷ್ಟು ಹೆಚ್ಚಿಸಿದ್ದಾರೆ. ವಿಶೇಷ ಅಂದರೆ ಇದೇ ಸಂದರ್ಭದಲ್ಲಿ ಜಾಕ್ವೆಲಿನ್ ಟ್ರಾಫಿಕ್ ಪೊಲೀಸ್ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ವೀಡಿಯೋದಲ್ಲಿ ಊದಿನ ಕಡ್ಡಿ ಹಾಗೂ ಸ್ವೀಟ್ ಹಿಡಿದುಕೊಂಡು ನಿಂತಿರುತ್ತಾರೆ. ಈ ವೇಳೆ ಸಿಬ್ಬಂದಿಗೆ ಒಡೆಯಲು ತೆಂಗಿನ ಕಾಯಿ ಹಿಡಿದುಕೊಂಡು ಬರುತ್ತಾರೆ. ಅಲ್ಲದೆ ನಟಿಯನ್ನು ಹಿಂದೆ ಸರಿಯುವಂತೆ ಹೇಳಿ ಕುಳಿತುಕೊಂಡು ತೆಂಗಿನ ಕಾಯಿ ಒಡೆಯುವ ಮೂಲಕ ಕಾರಿಗೆ ಆಯುಧ ಪೂಜೆ ಮಾಡಿರುವುದನ್ನು ಕಾಣಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಜಾಕ್ವೆಲಿನ್ ಮೂವಿ ಸೆಟ್ ನಲ್ಲಿರುವ ಒಂದು ಫೋಟೋ ಕೂಡ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಎಲ್ಲರ ಭಾನುವಾರ ಹೇಗಿತ್ತು? ಶೀಘ್ರವೇ ತಮಾಷೆಯ ಪ್ರಾಜೆಕ್ಟ್ ಒಂದು ಬರಲಿದೆ. ಮೈ ಹ್ಯಾಪಿ ಪ್ಲೇಸ್ ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

    ಜಾಕ್ವೆಲಿನ್ ಅವರು ಸಿಬ್ಬಂದಿಗೆ ಗಿಫ್ಟ್ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜಾಕ್ವೆಲಿನ್ ತನ್ನ ಮೆಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದರು. ನಟಿ ತನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಯನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜಾಕ್ವೆಲಿನ್ ಅವರು ಮೆಕಪ್‍ಮೆನ್ ಶಾನ್ ಮುತಾತಿಲ್‍ನ 34ನೇ ವರ್ಷದ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

     

    View this post on Instagram

     

    How was everyone’s Sunday?? Fun project coming up soon! #myhappyplace❤️

    A post shared by Jacqueline Fernandez (@jacquelinef143) on

    ಜಾಕ್ವೆಲಿನ್ ಸಪ್ರ್ರೈಸ್ ನೀಡುತ್ತಿರುವ ವಿಡಿಯೋವನ್ನು ಶಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. “ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು. ಕೆಲಸದಿಂದಲ್ಲೇ ನನ್ನ ಹುಟ್ಟುಹಬ್ಬದ ದಿನ ಶುರುವಾಗಿದೆ. ಈ ವರ್ಷ ಜಾಕ್ವೆಲಿನ್ ನನಗೆ ಅದ್ಭುತವಾದ ಸರ್ಪ್ರೈಸ್ ನೀಡಿದ್ದಾರೆ. ಅಪಾರ್ಟ್ ಮೆಂಟ್ ಕೆಳಗೆ ಕಾರಿನವರೆಗೂ ಹೋಗುವುದನ್ನು ವಿಡಿಯೋ ಮಾಡು ಎಂದು ಹೇಳಿದ್ರಿ. ಆದರೆ ನನಗೆ ಈ ಸರ್ಪ್ರೈಸ್ ನೀಡುತ್ತೀರಿ ಎಂದು ಯಾವುದೇ ಸುಳಿವು ಸಹ ಇರಲಿಲ್ಲ. ನನಗೆ ತುಂಬಾ ಖುಷಿಯಾಗಿದೆ” ಎಂದು ಶಾನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.