Tag: ದಸರಾ 2020

  • ಮೈಸೂರು ಅರಮನೆಯಲ್ಲಿ ನಾಳೆ ಸಾಂಕೇತಿಕವಾಗಿ ಜಂಬೂಸವಾರಿ ಆಚರಣೆ

    ಮೈಸೂರು ಅರಮನೆಯಲ್ಲಿ ನಾಳೆ ಸಾಂಕೇತಿಕವಾಗಿ ಜಂಬೂಸವಾರಿ ಆಚರಣೆ

    – 300 ಮಂದಿಗಷ್ಟೇ ಪಾಲ್ಗೊಳ್ಳಲು ಅವಕಾಶ
    – ನಾಳೆ ಏನಿರುತ್ತೆ? ಏನಿರಲ್ಲ?

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಎಂದರೇ ಥಟ್ಟಂತಾ ಕಣ್ಮುಂದೆ ಬರೋದು ಮೈಸೂರಿನ ಪ್ರಮುಖ ಬೀದಿಯಲ್ಲಿ ನಡೆಯೋ ಅದ್ಧೂರಿ ಜಂಬೂ ಸವಾರಿ.. ಈ ಬಾರಿಯೂ ಅಂದರೆ ನಾಳೆ ವಿಜಯದಶಮಿಯಂದು ಜಂಬೂ ಸವಾರಿ ಇದೆ. ಆದ್ರೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಅಲ್ಲ. ಕೊರೊನಾ ಕಾರಣದಿಂದ ಕೇವಲ ಅರಮನೆ ಆವರಣಕ್ಕಷ್ಟೇ ಜಂಬೂ ಸವಾರಿ ಸೀಮಿತವಾಗಿ, ಸರಳವಾಗಿ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದೆ.

    ಸರಳ ದಸರಾ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಸೇರಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ. ಇಂದು ಮೈಸೂರು ರಾಜವಂಶಸ್ಥರಾದ ಯದುವೀರ್ ಅರಮನೆಯಲ್ಲಿ ಇಂದು ಆಯುಧಪೂಜೆ ನೆರವೇರಿಸಿದರು. ಪಟ್ಟದ ಆನೆ, ಕುದುರೆ, ಹಸು, ಒಂಟೆ, ರಾಜವಂಶಸ್ಥರು ಬಳಸುವ ವಾಹನ, ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಂಡಿಕಾ ಹೋಮ ನಡೆಸಿದರು.

    ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಜಂಬೂಸವಾರಿ ಗಜಪಡೆಗೆ ಉಸ್ತುವಾರಿ ಮಂತ್ರಿ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಪೂಜೆ ನೆರವೇರಿತು. ಸೇವಂತಿಗೆ ಹೂಗಳಿಂದ ಸಿಂಗರಿಸಲಾಗಿದ್ದ ಆನೆಗಳಿಗೆ ಮಂತ್ರಿಗಳು ಕಬ್ಬು, ಬಾಳೆಹಣ್ಣು, ತೆಂಗಿನಕಾಯಿ, ಹಣ್ಣು ಬೆಲ್ಲ ತಿನ್ನಿಸಿ ಸತ್ಕರಿಸಿದರು. ನಾಳೆಯ ಜಂಬೂಸವಾರಿ ಹಿನ್ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅರಮನೆ ಸುತ್ತಮುತ್ತ 144 ಸೆಕ್ಷನ್ ಜಾರಿಯಲ್ಲಿದೆ. ಪ್ರವಾಸಿಗರ ಸಂಖ್ಯೆ ಎಂದಿಗಿಂತ ಕಡಿಮೆ ಇದೆ.

    ನಾಳೆ ಏನಿರುತ್ತೆ? ಏನಿರಲ್ಲ..?
    * ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಅವರಿಂದ ಬನ್ನಿಪೂಜೆ.
    * ಮಧ್ಯಾಹ್ನ 2.59 ರಿಂದ 3.20ಕ್ಕೆ ಮುಖ್ಯಮಂತ್ರಿಗಳಿಂದ ನಂದಿಧ್ವಜಕ್ಕೆ ಪೂಜೆ.
    * ಸಂಜೆ 4.15ರೊಳಗೆ ಮುಖ್ಯಮಂತ್ರಿಗಳಿಂದ ಪುಷ್ಪಾರ್ಚನೆ (ಶುಭ ಕುಂಭ ಲಗ್ನದಲ್ಲಿ)
    * ಅರಮನೆ ಆವರಣದಲ್ಲಿ ಜಂಬೂ ಸವಾರಿ ಆರಂಭ.
    * ಕೇವಲ 300 ಮೀಟರ್ ಜಂಬೂ ಸವಾರಿಗಷ್ಟೇ ಅವಕಾಶ (ಇಷ್ಟು ವರ್ಷ 5 ಕಿ.ಮೀ. ಬನ್ನಿ ಮಂಟಪದವರೆಗೂ ಇರುತ್ತಿತ್ತು)
    * ಜಂಬೂಸವಾರಿ ವೀಕ್ಷಿಸಲು ಕೇವಲ 300 ಮಂದಿಗಷ್ಟೇ ಅವಕಾಶ.
    * 2 ಟ್ಯಾಬ್ಲೋ, ಕೆಲವೇ ಜನಪದ ಕಲಾತಂಡಗಳು ಪಾಲ್ಗೊಳ್ಳಲಿವೆ.
    * ಬನ್ನಿ ಮಂಟಪದಲ್ಲಿ ಪಂಜಿನ ಕವಾಯತು ಈ ಬಾರಿ ಇರುವುದಿಲ್ಲ .

  • ಮೈಸೂರು ದಸರಾಗೆ ಡಾ.ಮಂಜುನಾಥ್ ಚಾಲನೆ- ಸಿಎಂ ಉಪಸ್ಥಿತಿ

    ಮೈಸೂರು ದಸರಾಗೆ ಡಾ.ಮಂಜುನಾಥ್ ಚಾಲನೆ- ಸಿಎಂ ಉಪಸ್ಥಿತಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ 410ನೇ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ದಸರಾ ಉದ್ಘಾಟಿಸಿದ್ದಾರೆ. ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಆದ್ಯತೆ ನೀಡಲಾಗಿದ್ದು, ವೈದ್ಯರಿಂದ ದಸರಾ ಉದ್ಘಾಟಿಸಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್ ಸನ್ಮಾನ ಸಹ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಅತ್ಯಂತ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ.

    ಈ ಮೂಲಕ ಮೈಸೂರು ದಸರಾ 2020ಕ್ಕೆ ವೈಭವದ ಚಾಲನೆ ದೊರೆತಂತಾಗಿದ್ದು, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಉದ್ಘಾಟಕರಿಗೆ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಜೊತೆಯಾಗಿದ್ದಾರೆ. ಶುಭ ತುಲಾ ಲಗ್ನದಲ್ಲಿ ದಸರಾ 2020 ಉದ್ಘಾಟನೆಗೊಂಡಿದೆ. ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ಸಿಎಂ ತೆರಳಿದರು. ಪ್ರತಿಬಾರಿ ಪೂರ್ಣಕುಂಭ ಸ್ವಾಗತದೊಂದಿಗೆ ಸಿಎಂ ಹಾಗೂ ಉದ್ಘಾಟಕರು ದೇವಾಲಯ ಪ್ರವೇಶಿಸುತ್ತಿದ್ದರು. ಆದರೆ ಈ ಬಾರಿ ಪೂರ್ಣಕುಂಭ ಸ್ವಾಗತ ಮಾಡಲಾಗಿಲ್ಲ.

    ವೇದಿಕೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನ ಸಹ ಮಾಡಲಾಗಿದ್ದು, ಮರಗಮ್ಮ (ಪೌರಕಾರ್ಮಿಕರು), ಡಾ.ನವೀನ್ (ಆರೋಗ್ಯ ಇಲಾಖೆ ಮೇಡಿಕಲ್ ಆಫಿಸರ್), ರುಕ್ಮಿಣಿ (ಸ್ಟಾಫ್ ನರ್ಸ್), ನೂರ್ ಜಾನ್ (ಆಶಾ ಕಾರ್ಯಕರ್ತೆ), ಕುಮಾರ್ (ಮೈಸೂರು ನಗರ ಪೊಲೀಸ್ ಪೇದೆ), ಅಯೂಬ್ ಅಹಮದ್ (ಸಾಮಾಜಿಕ ಕಾರ್ಯಕರ್ತ) ಇವರಿಗೆ ದಸರಾ ವೇದಿಕೆಯಲ್ಲಿ ಸನ್ಮಾನ ಮಾಡಿ ಕೊರೊನಾ ಸಂದರ್ಭದಲ್ಲಿನ ಇವರ ಸೇವೆಯನ್ನು ಸ್ಮರಿಸಲಾಗಿದೆ.

    ಅರಮನೆಯಲ್ಲಿ ಖಾಸಗಿ ದರ್ಬಾರ್
    ವಿಶ್ವವಿಖ್ಯಾತ ಮೈಸೂರು ದಸರಾ 2020ಕ್ಕೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‍ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮೂಲಕ ಅರಮನೆ ಒಳಾಂಗಣ ಪಾರಂಪರಿಕ ದಸರಾ ಕಾರ್ಯಕ್ರಮಗಳ ಆರಂಭಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 6.15 ರಿಂದ 6.30ರ ಶುಭ ಮಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಕಂಕಣಧಾರಣೆ ನೆರವೇರಿತು.

    ಯದುವಂಶದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಗೆ ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ನೆರವೇರಲಿದೆ. ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಕೊರೊನಾ ಕಾರಣಕ್ಕೆ ಖಾಸಗಿ ದರ್ಬಾರ್ ಗೆ ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಂದ ಪೂಜೆ ನೆರವೇರಿಸಲಾಗಿದೆ.

  • ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    ಅ.17 ರಿಂದ 14 ದಿನ ಮೈಸೂರಿನ ಪ್ರವಾಸಿ ತಾಣಗಳು ಬಂದ್

    – ಪ್ರವಾಸಿಗರಿಗೆ ನಿಷೇಧ ಹೇರಿದ ಜಿಲ್ಲಾಡಳಿತ
    – ಇಂದು ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟಕ್ಕೆ ನಿಷೇಧ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2020 ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದ್ದು, ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮೈಸೂರು ಅರಮನೆ, ಮೃಗಾಲಯಕ್ಕೆ 15 ದಿನಗಳ ಕಾಲ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಇಂದು ಮಧ್ಯರಾತ್ರಿಯಿಂದಲೇ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ನಂಜನಗೂಡು ದೇವಾಲಯಕ್ಕೂ ಪ್ರವೇಶ ನಿಷೇಧ ಮಾಡಿದ್ದು, ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆ ಪ್ರವಾಸಿಗರು ಹೋಗುವಂತಿಲ್ಲ. ಮೈಸೂರಿನ ಜೊತೆಗೆ ಮಂಡ್ಯ ಪ್ರವಾಸಿ ತಾಣಗಳನ್ನು ಮುಚ್ಚಲಾಗುವುದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಈ ಬಾರಿ ಸರಳ, ಸಾಂಪ್ರದಾಯಿಕ ಹಾಗೂ ವರ್ಚುವಲ್ ದಸರಾ ಮಾಡೋಣ ಎಂದು ಫೇಸ್‍ಬುಕ್ ಲೈವ್‍ನಲ್ಲಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಮೈಸೂರು ಜಿಲ್ಲೆ ಕೊರೊನಾ ಸೋಂಕಿನಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿದೆ. ಕೊರೊನಾ ಸಾವಿನ ಪ್ರಮಾಣ ಮೈಸೂರು ಜಿಲ್ಲೆಯಲ್ಲಿ ರಾಜ್ಯದ ಶೇಖಡ 10% ರಷ್ಟಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಈ ಕ್ರಮಗಳು ಅನಿವಾರ್ಯವಾಗಿವೆ. ಸಾರ್ವಜನಿಕರು ತಮ್ಮ ಮನೆಯಲ್ಲೆ ಇದ್ದು ಈ ಬಾರಿ ದಸರಾ ಆಚರಿಸಲು ಸಹಕಾರ ನೀಡಬೇಕೆಂದು ರೋಹಿಣಿ ಸಿಂಧೂರಿ ಮನವಿ ಮಾಡಿದ್ದಾರೆ.

  • ನಾವು ಕಾಡಿನ ಜನ, ನಮಗೆ ಯಾವ ರೋಗವೂ ಇಲ್ಲ- ಕೊರೊನಾ ಟೆಸ್ಟ್‌ಗೆ ಮಾವುತರ ನಕಾರ

    ನಾವು ಕಾಡಿನ ಜನ, ನಮಗೆ ಯಾವ ರೋಗವೂ ಇಲ್ಲ- ಕೊರೊನಾ ಟೆಸ್ಟ್‌ಗೆ ಮಾವುತರ ನಕಾರ

    ಮೈಸೂರು: 2020ರ ಮೈಸೂರು ದಸರಾದಲ್ಲಿ ಭಾಗಿಯಾಗಿರುವ ಆನೆಗಳ ಮಾವುತರು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದ್ದಾರೆ. ನಾವು ಕಾಡಿನ ಜನ ನಮಗೆ ಯಾವ ರೋಗವೂ ಇಲ್ಲ ಎಂದಿದ್ದರು.

    ದಸರಾ ಭಾಗಿಯಾಗುವ ಆನೆಗಳ ಮಾವುತರು ಹಾಗೂ ಕಾವಾಡಿಗರಿಗೆ ಮುನ್ನೆಚ್ಚರಿಕ ಕ್ರಮವಾಗಿ ಕೊರೊನಾ ಟೆಸ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ನಮಗೆ ರೋಗ ಲಕ್ಷಣ ಇದ್ದರೆ ಟೆಸ್ಟ್ ಮಾಡಿಸೋಣ ರೋಗ ಇಲ್ಲದಿದ್ದರೆ ಯಾಕೆ? ಏಕೆ ಎಂದು ಪ್ರಶ್ನಿಸಿ ಯಾವುದೇ ಟೆಸ್ಟ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಾದ ಮಂಡಿಸಿದ್ದರು.

    ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಅವರು ಕೊರೊನಾ ಪರೀಕ್ಷೆ ಕುರಿತು ಜಾಗೃತಿ ಮೂಡಿಸಿ ಮಾವುತರ ಮನವೊಲಿಸಿದರು. 5 ಆನೆಗಳ ಮಾವುತ, ಕಾವಾಡಿ ಹಾಗೂ ಸಹಾಯಕ ಸಿಬ್ಬಂದಿ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಕೊರೊನಾ ಟೆಸ್ಟ್‍ಗೆ ಮಾಡಿಸಿಕೊಂಡರು. ಇಂದು ಸಂಜೆಯೊಳಗೆ ಮಾವುತ ಕಾವಾಡಿಗಳ ಕೊರೊನಾ ರಿಸಲ್ಟ್ ಬರುವ ಸಾಧ್ಯತೆ ಇದೆ.

    ಇತ್ತ ಕೊರೊನಾ ಪರೀಕ್ಷೆ ವರದಿ ಬಂದ ನಂತರವಷ್ಟೇ ಮುಂದಿನ ತಾಲೀಮಿನ ಬಗ್ಗೆ ನಿರ್ಧಾರ ಮಾಡಲು ಚಿಂತನೆ ನಡೆಸಿದ್ದು, ಅರಮನೆಗೆ ಬಂದ ಮೇಲೆ ದಸರಾ ಮುಗಿಯುವವರೆಗೂ ಮಾವುತರು, ಆನೆಗಳು ಹೊರಗಡೆ ಹೋಗಲ್ಲ. ಆನೆಗಳಿಗೆ ಕೊರೊನಾ ಟೆಸ್ಟ್ ಸದ್ಯಕ್ಕೆ ಮಾಡಿಸಲ್ಲ. ಆನೆಗಳಿಗೆ ಅನಾರೋಗ್ಯ ಕಂಡು ಬಂದರೆ ಮಾತ್ರ ಟೆಸ್ಟ್ ಮಾಡಿಸುತ್ತೇವೆ. ಆನೆಗಳಿಗೆ ಟೆಸ್ಟ್ ಮಾಡಿಸುವ ಕಿಟ್‍ಗಳಿಲ್ಲ ಅದಕ್ಕೂ ಬೇಡಿಕೆ ಇಟ್ಟಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.