Tag: ದಸರಾ ವಿಶೇಷ

  • ದಸರಾಕ್ಕೆ 280 ಹೆಚ್ಚುವರಿ ಬಸ್ಸುಗಳ ನಿಯೋಜನೆ

    ದಸರಾಕ್ಕೆ 280 ಹೆಚ್ಚುವರಿ ಬಸ್ಸುಗಳ ನಿಯೋಜನೆ

    ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯನುಸಾರ ಮುಂದಿನ 10 ದಿನಗಳವರೆಗೆ ಮೈಸೂರಿಗೆ 280 ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ.

    ದಸರಾ ಪ್ರಯುಕ್ತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಸೆ.25ರಂದು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ದಸರಾ ವಿಶೇಷ ಬಸ್ಸುಗಳಿಗೆ ಚಾಲನೆ ನೀಡಲಾಯಿತು.ಇದನ್ನೂ ಓದಿ: ಇಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ

    ಮುಂದಿನ 10 ದಿನಗಳವರೆಗೆ ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲಿ ದಸರಾ ಕ್ಯಾಂಪ್ ಇರಲಿದ್ದು, ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಭಾಗಗಳಿಂದ ಒಟ್ಟು 280 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

    ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ), ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆಂಪೇಗೌಡ ಬಸ್ ನಿಲ್ದಾಣ, ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಾಲಕ ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸುವ ಮೂಲಕ ಶುಭ ಕೋರಿದರು.ಇದನ್ನೂ ಓದಿ: S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

  • ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ

    ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) 2025ರ ಅಂಗವಾಗಿ ಸೋಮವಾರ (ಸೆ.22) ಜನಪ್ರಿಯ ಆಹಾರ ಮೇಳ ಹಾಗೂ ದೀಪಾಲಂಕಾರಕ್ಕೆ ಚಾಲನೆ ನೀಡಲಾಯಿತು.

    ದೀಪಾಲಂಕಾರ:
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್ ದೀಪಾಲಂಕಾರಕ್ಕೆ ಇಂಧನ ಸಚಿವರಾದ ಕೆ.ಜೆ.ಜಾರ್ಜ್ (KJ George) ಅವರು ಚಾಲನೆ ನೀಡಿದರು.

    ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ದಸರಾ ದೀಪಾಲಂಕಾರ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚು ಆಕರ್ಷಣೀಯವಾಗಿ ಈ ಬಾರಿಯ ದೀಪಾಲಂಕಾರ ಕಂಗೊಳಿಸಲಿದೆ. ಈ ಮೂಲಕ ಸಾಂಸ್ಕೃತಿಕ ರಾಜಧಾನಿ ಮೈಸೂರು 21 ದಿನಗಳ ಕಾಲ ದೀಪದ ಬೆಳಕಿನಲ್ಲಿ ಮಿನುಗಲಿದೆ.ಇದನ್ನೂ ಓದಿ: Photo Gallery | ಹೂವು ಚೆಲುವೆಲ್ಲಾ ತನ್ನದೆನ್ನುತ್ತಿದೆ.. ಸಂಗೀತ ಝೇಂಕಾರ ಮನಮುಟ್ಟುತ್ತಿದೆ – ದಸರಾ ಸೊಬಗು ಕಣ್ತುಂಬಿಕೊಳ್ಳಿ

    136 ಕಿ.ಮೀ ದೀಪಾಲಂಕಾರ:
    ದಸರಾ ಹಿನ್ನೆಲೆಯಲ್ಲಿ ಈ ಬಾರಿ ನಗರದ 136 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್‌ಇಡಿ ಬಲ್ಬ್ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ನಿಗದಿಯಂತೆ ಸೆ.22ರಿಂದ ಅ.2ರವರೆಗೆ ವಿದ್ಯುತ್ ದೀಪಾಲಂಕಾರ ನಡೆಯಲಿದ್ದು, ಇದರೊಂದಿಗೆ ಮುಖ್ಯಮಂತ್ರಿಗಳ ನಿರ್ದೇಶನದಂತೆ 10 ದಿನಗಳು ವಿಸ್ತರಣೆ ಮಾಡಿಲಾಗಿದೆ, ಈ ಮೂಲಕ ಒಟ್ಟು 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ. ಇದಕ್ಕಾಗಿ 300 ಕಿ.ಲೋ ವ್ಯಾಟ್‌ಗಳ, 2,57,520 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.

    ಕೋಲ್ಕತ್ತಾ ಲೈಟಿಂಗ್ ಮೆರಗು :
    ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಾರಿ ಕೋಲ್ಕತ್ತಾ ಮಾದರಿ ಲೈಟಿಂಗ್ ಸಹ ಅಳವಡಿಸಲಾಗಿದೆ. ಇದರ ಮೂಲಕವಾಗಿ ನಗರದ ಹಲವು ಕಡೆಗಳಲ್ಲಿ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುವ ಮೂಲಕ ದಸರಾ ವಿದ್ಯುತ್ ದೀಪಾಲಂಕಾರದ ಮೆರಗು ಹೆಚ್ಚಿಸಲಾಗಿದೆ.

    ಕಂಗೊಳಿಸುತ್ತಿದೆ ಮೈಸೂರು:
    ಇಡೀ ಮೈಸೂರು ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪ್ರಮುಖವಾಗಿ ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿರಸ್ತೆ, ಹೊರವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಇದಲ್ಲದೆ ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.ಇದನ್ನೂ ಓದಿ: ಮೈಸೂರು ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಚಾಮುಂಡಿ ತಾಯಿಯ ಸೀರೆ ಪಡೆದ ಬಾನು ಮುಷ್ತಾಕ್‌

    ಅಗತ್ಯ ಸುರಕ್ಷತಾ ಕ್ರಮಗಳು:
    ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ/ವಿಡಿಯೋ ಶೂಟ್ ಮಾಡುವುದನ್ನು ತಪ್ಪಿಸುವುದು, ಮಳೆ ಸಂದರ್ಭದಲ್ಲಿ ವಿದ್ಯುತ್/ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸುವುದು, ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ವಾಹನ ಸವಾರರು ಈ ಬಗ್ಗೆ ನಿಗಾವಹಿಸಿ ಸುರಕ್ಷಿತವಾಗಿ ಸಂಚರಿಸುವಂತೆ, ವಿದ್ಯುತ್ ಸಂಬಂಧಿತ ದೂರು/ದೀಪಾಲಂಕಾರದಿಂದ ತೊಂದರೆ ಆದಲ್ಲಿ ಸಹಾಯವಾಣಿ 1912 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ.

    ಆಕರ್ಷಕ ಡ್ರೋನ್ ಶೋ:
    ದಸರಾ ಮಹೋತ್ಸವದ ಹೊಸ ಆಕರ್ಷಣೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ವರ್ಣರಂಜಿತವಾಗಿರಲಿದೆ. ಕಳೆದ ಬಾರಿ 1,500 ಡ್ರೋನ್ ಬಳಸಿಕೊಂಡು ನಡೆಸಲಾಗಿದ್ದ ಡ್ರೋನ್ ಪ್ರದರ್ಶನದಲ್ಲಿ ಈ ಬಾರಿ 3,000 ಸಾವಿರ ಡ್ರೋನ್ ಬಳಸಿಕೊಂಡು ನಡೆಸಲಾಗುತ್ತದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅಕ್ಟೋಬರ್ 1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಯಲಿದೆ.

    ಆಹಾರ ಮೇಳ:
    ಮಹಾರಾಜ ಕಾಲೇಜು ಮೈದಾನದಲ್ಲಿ “ರುಚಿಯೊಂದಿಗೆ ಸ್ವಚ್ಛತೆಯ ಸಿರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜನಪ್ರಿಯ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಉದ್ಘಾಟಿಸಿದರು.

    ಈ ಮೇಳದಲ್ಲಿ ಒಟ್ಟು 160ಕ್ಕೂ ಹೆಚ್ಚು ಮಳಿಗೆಗಳು ತೆರೆದಿದ್ದು, ಅವುಗಳಲ್ಲಿ 121 ಸಸ್ಯಾಹಾರಿ ಹಾಗೂ 39 ಮಾಂಸಾಹಾರಿ ಮಳಿಗೆಗಳಿವೆ. ಇಲ್ಲಿ ಸ್ಥಳೀಯವಾಗಿ ಮೈಸೂರಿನ ವಿಶೇಷ ಆಹಾರ ಶೈಲಿ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಪಾಕಶೈಲಿಗಳ ಜೊತೆಗೆ ಗುಜರಾತಿ, ರಾಜಸ್ಥಾನಿ, ಹೈದರಾಬಾದಿ, ಕೇರಳ, ಚೈನೀಸ್ ಮತ್ತು ಅಂತಾರಾಷ್ಟ್ರೀಯ ಪಾಕಶೈಲಿಗಳನ್ನು ಪರಿಚಯಿಸಲಾಗಿದೆ.

    ಈ ಮೇಳಕ್ಕೆ ಪ್ರವಾಸಿಗರು ಮತ್ತು ಸಾರ್ವಜನಿಕರು ತಮ್ಮ ಕುಟುಂಬ ಸಮೇತ ಭೇಟಿ ನೀಡಿ, ವಿವಿಧ ಶೈಲಿಯ ಆಹಾರ ಪದ್ಧತಿಗಳ ಪರಿಚಯ ಪಡೆದು, ತಮಗೆ ಇಷ್ಟವಾದ ಭೋಜನಗಳನ್ನು ಸವಿಯಲು ಒಂದು ಅಪೂರ್ವ ಅವಕಾಶವನ್ನು ಒದಗಿಸುತ್ತದೆ.ಇದನ್ನೂ ಓದಿ: Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

  • ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ಮೈಸೂರು ದಸರಾ ಮತ್ತೆ ಬಂದಿದೆ. ಕೇಡಿನ ವಿರುದ್ಧ ಒಳಿತಿನ ಜಯವೆಂಬ ‘ವಿಜಯದಶಮಿ’ ಇದು. ದಸರಾ ಮಹೋತ್ಸವ ಕರುನಾಡಿನ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕೈಗನ್ನಡಿ. ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯದ ಸಮ್ಮಿಶ್ರಣದೊಂದಿಗೆ ಕರ್ನಾಟಕದ ಶ್ರೀಮಂತ ಪರಂಪರೆ ನಾಡಹಬ್ಬದಲ್ಲಿ ಅನಾವರಣಗೊಳ್ಳುತ್ತದೆ. ರಾಜವೈಭೋಗ ಮರುಕಳುಸುತ್ತದೆ. ನವರಾತ್ರಿ ನವದುರ್ಗೆಯರ ಪೂಜೆ, ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಭಕ್ತಿ-ಭಾವದಿಂದ ಸ್ಮರಿಸಲಾಗುತ್ತದೆ. ದಸರಾಗೂ ನಾಡಿನ ಜನತೆಗೂ ಭಾವನಾತ್ಮಕ ನಂಟಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ.

    ದಸರಾ ಹಬ್ಬಕ್ಕೂ ಹಿನ್ನೆಲೆ, ಪರಂಪರೆ ಇದೆ. ದಸರಾ ಹಬ್ಬ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ. ಅಲ್ಲಿಂದ ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ಬಂದಿತು. ಕೃಷ್ಣದೇವರಾಯ ಶಕ್ತಿ, ಸಾಮರ್ಥ್ಯದ ಆಧಾರದ ಮೇಲೆ ವಿಜಯದಶಮಿ ವಿಶ್ವವಿಖ್ಯಾತಿಯಾಯಿತು. ವಿಜಯದಶಮಿ ದಿನ ಕೃಷ್ಣದೇವರಾಯ ಕುದುರೆ ಮೇಲೆ ಕುಳಿತು ಜನಸ್ತೋಮದ ನಡುವೆ ಸಾಗುತ್ತಿದ್ದರೆ, ಆತನ ಸಾಮ್ರಾಜ್ಯದ ಸುತ್ತಲ ಆಸ್ತಿಕ ರಾಜರು ತಮ್ಮ ಸೈನ್ಯವನ್ನು ಕರೆತಂದು ನಮಸ್ಕರಿಸುತ್ತಿದ್ದರು ಎಂದು ಆಗಿನ ಪರ್ಷಿಯನ್ ರಾಯಭಾರಿ ಅಬ್ದುಲ್ ರಝಾಕ್ ಬರೆದುಕೊಂಡಿದ್ದಾರೆ. 14 ರಿಂದ 17ನೇ ಶತಮಾನದ ಮಧ್ಯಭಾಗದವರೆಗೆ ಸುಮಾರು 300 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯು ಇತ್ತು. ಈ ಸಾಮ್ರಾಜ್ಯದ ಪದ್ಧತಿಗಳು, ಸಾಂಸ್ಕೃತಿಕ ಆಚರಣೆಗಳ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿದರು.

    ಮೈಸೂರು ಒಡೆಯರ್‌ಗೆ ಬಂದಿದ್ದು ಹೇಗೆ?

    ಒಡೆಯರ್‌ಗಳು ವಿಜಯನಗರ ಅರಸರ ಸಾಮಂತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ, ರಾಜ ಒಡೆಯರ್ 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜಧಾನಿ ಮಾಡಿ ರಾಜತ್ವವನ್ನು ವಹಿಸಿಕೊಂಡರು. ಆ ಸಂದರ್ಭದಲ್ಲಿ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಘೋಷಿಸಿದರು. 1799 ರಲ್ಲಿ 4ನೇ ಆಂಗ್ಲೋ-ಮೈಸೂರು ಯುದ್ಧದ ನಂತರ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು. ಬಳಿಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದಸರಾ ಹಬ್ಬ ಪರಂಪರೆಯನ್ನು ಮುಂದುವರಿಸಿದರು.

    1442-1443ರ ನಡುವೆ ವಿಜಯನಗರಕ್ಕೆ ಪರ್ಷಿಯಾದ ಅಬ್ದುಲ್ ರಝಾಕ್ ಮತ್ತು ಪೋರ್ಚುಗೀಸ್‌ನ ಡೊಮಿಂಗೊ ಫಯಾಸ್ (1520-22) ಭೇಟಿ ನೀಡಿದ್ದರು. ವಿಜಯನಗರದಲ್ಲಿ ನವರಾತ್ರಿ ಹಬ್ಬದ ವೈಭವವನ್ನು ತಮ್ಮ ಕೃತಿಗಳಲ್ಲಿ ಸೊಗಸಾಗಿ ವಿವರಿಸಿದ್ದಾರೆ. ರಾಜರು ನವರಾತ್ರಿ ಸಮಯದಲ್ಲಿ ಸಶಸ್ತ್ರ ಪಡೆಗಳ ಮೆರವಣಿಗೆ ವೀಕ್ಷಿಸುತ್ತಿದ್ದರು. ಈ ಆಚರಣೆ ಐತಿಹಾಸಿಕತೆಗೆ ಸಾಕ್ಷಿಯಾಗಿದೆ. ಕಾಲಾನಂತರ ಹಬ್ಬಗಳ ಆಚರಣೆ ಉದ್ದೇಶ ಬದಲಾಗಿದೆ. ಈಗ ನಾಡಹಬ್ಬ ಮೈಸೂರು ದಸರಾ ಪ್ರವಾಸೋದ್ಯಮ ಉತ್ತೇಜಿಸಲು ಒಂದು ಆಧಾರವಾಗಿದೆ.

    ಒಡೆಯರ ಸೇವೆ ಸ್ಮರಿಸುವ ಜನ!

    ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಆದರೂ ಮೈಸೂರು ಸಾಮ್ರಾಜ್ಯದ ಒಡೆಯರ್ ತಮ್ಮ ಪ್ರಜೆಗಳಿಗೆ ನೀಡಿದ ಸೇವೆಯನ್ನು ಜನ ಈಗಲೂ ಸ್ಮರಿಸುತ್ತಾರೆ. ಮೈಸೂರು ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಾ ಈಗಲೂ ಕೊಂಡಾಡುತ್ತಾರೆ. ಆದ್ದರಿಂದ ದಸರಾ ಸಂದರ್ಭದಲ್ಲಿ ರಾಜಪರಂಪರೆಯನ್ನು ಬಿಂಬಿಸುವ ಖಾಸಗಿ ದರ್ಬಾರ್ ಕೂಡ ನಡೆಯಲಿದೆ. ದಸರಾ ಆಚರಣೆಗಳಲ್ಲಿ ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳೊಂದಿಗೆ ರಾಜರೂ ಪಾಲ್ಗೊಳ್ಳುತ್ತಾರೆ.

    ದಸರಾಗೆ ಧಾರ್ಮಿಕ ನಂಟು

    ಮೈಸೂರು ದಸರಾವನ್ನು ತಾತ್ವಿಕ ಮತ್ತು ಧಾರ್ಮಿಕ ತಳಹದಿಯಲ್ಲೂ ನೋಡಬಹುದು. ಚಾಮುಂಡೇಶ್ವರಿ ದೇವಿಯು ರಾಕ್ಷಸ ಮಹಿಷಾಸುರನನ್ನು ಕೊಲ್ಲುವುದು ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ಹೀಗಾಗಿ ಒಂಬತ್ತು ದಿನ ನಡೆಯುವ ಉತ್ಸವದಲ್ಲಿ ನವದುರ್ಗೆಯರ ಪೂಜೆ ಇರುತ್ತದೆ. ವಿಜಯದಶಮಿಯಂದು ಆನೆ ಹೊತ್ತ ಅಂಬಾರಿ ಮೇಲೆ ನಾಡದೇವಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಮೈಸೂರಿನ ಈ ಉತ್ಸವವು ಶಾಸ್ತ್ರೀಯ ಮತ್ತು ಜನಪದ ಸಂಪ್ರದಾಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.

    ಮೈಸೂರು ಝಗಮಗ

    ದಸರಾ ಸಂದರ್ಭದಲ್ಲಿ ಮೈಸೂರು ನಗರ ಝಗಮಗಿಸುತ್ತದೆ. ಆಕರ್ಷಣೀಯ ಕೇಂದ್ರ ಅರಮನೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಪಾರಂಪರಿಕ ಕಟ್ಟಡಗಳು ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ದೀಪಾಲಂಕಾರದಿಂದ ಕಂಗೊಳಿಸುವ ಸಾಂಸ್ಕೃತಿಕ ರಾಜಧಾನಿಯನ್ನು ನೋಡುವುದೇ ಚೆಂದ. ದಸರಾ ವೇಳೆ ರಾತ್ರಿ ಹೊತ್ತಿನಲ್ಲಿ ಮೈಸೂರನ್ನು ಸುತ್ತಿ ಪ್ರವಾಸಿಗರು ಪುಳಕಿತರಾಗುತ್ತಾರೆ. ಡಬಲ್ ಡೆಕ್ಕರ್, ಟಾಂಗಾ ಸವಾರಿ ಜನರಿಗೆ ವಿಶೇಷ ಅನುಭೂತಿ ನೀಡುತ್ತದೆ. ದೀಪಗಳಿಂದ ಅರಮನೆ ಕಂಗೊಳಿಸುವುದನ್ನು ನೋಡಲು ಎರಡು ಕಣ್ಣು ಸಾಲದು.

    ದಸರಾದಲ್ಲಿ ಏನಿರುತ್ತೆ?

    ಮೈಸೂರು ದಸರಾ ಎಂದರೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹೋತ್ಸವ. 9 ದಿನಗಳ ಕಾಲ ಧಾರ್ಮಿಕ ಆಚರಣೆಗಳು, ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗುತ್ತವೆ. ರಾಜರ ಖಾಸಗಿ ದರ್ಬಾರ್ ಕೂಡ ನಡೆಯುತ್ತದೆ. ದಸರಾ ಆನೆಗಳು ಸಹ ಇದರಲ್ಲಿ ಪಾಲ್ಗೊಳ್ಳಲಿವೆ. ಯುವಜನರಿಗಾಗಿ ಯುವದಸರಾ, ಯುವಸಂಭ್ರಮದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರವಾಸಿಗರನ್ನು ಸೆಳೆಯಲು ಫಲಪುಷ್ಪ ಪ್ರದರ್ಶನ, ಆಹಾರ ಮೇಳಗಳು ನಡೆಯುತ್ತವೆ. ಮನೆ ಮನೆಯಲ್ಲೂ ಗೊಂಬೆಗಳನ್ನು ಕೂರಿಸಿ ಜನ ದಸರಾ ಆಚರಿಸುತ್ತಾರೆ. ಕಲಾಸಕ್ತರನ್ನು ಆಕರ್ಷಿಸಲು ಚಲಚಿತ್ರೋತ್ಸವ, ಅರಮನೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗುತ್ತವೆ.

    ಜಂಬೂಸವಾರಿ ಎಂಬ ಆಕರ್ಷಣೆ

    ವಿಶ್ವವಿಖ್ಯಾತ ದಸರಾ ಕೇಂದ್ರಬಿಂದು ಎಂದರೆ ಅದು ಜಂಬೂಸವಾರಿ. ದಸರಾ ಆನೆಗಳನ್ನು ಸಿಂಗರಿಸಿ, ಅಲಂಕರಿಸಿದ ಚಿನ್ನದಂಬಾರಿಯನ್ನು ಗಜಪಡೆಯ ಕ್ಯಾಪ್ಟನ್ ಮೇಲೆ ಹೊರಿಸಲಾಗುತ್ತದೆ. ಅಂಬಾರಿಯಲ್ಲಿ ಅಲಂಕಾರಭೂಷಿತಳಾಗಿ ದೇವಿ ಚಾಮುಂಡೇಶ್ವರಿ ವಿರಾಜಮಾನಳಾಗುತ್ತಾಳೆ. ಚಿನ್ನದಂಬಾರಿ ಹೊತ್ತ ಗಜಪಡೆ ಸಾಲಾಗಿ ಅರಮನೆಯಿಂದ ಬನ್ನಿಮಂಪಟದ ವರೆಗೆ ಸಾಗುವ ಮೆರವಣಿಗೆ ಸಾಗುತ್ತದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಾದೇಶಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಇರುತ್ತವೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನ ಹಿಂದಿನ ದಿನವೇ ಬಂದು ಮೆರವಣಿಗೆ ಮಾರ್ಗದುದ್ದಕ್ಕೂ ಕಾದು ಕುಳಿತಿರುತ್ತಾರೆ. ಬಿಸಿಲು, ಮಳೆಯನ್ನೂ ಲೆಕ್ಕಿಸದೇ ಮೆರವಣಿಗೆ ವೀಕ್ಷಿಸುತ್ತಾರೆ.

  • ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ನವರಾತ್ರಿ ಮೊದಲ ದಿನ ಶೈಲಪುತ್ರಿಯ ಪೂಜೆ: ದಾಕ್ಷಾಯಿಣಿ ಶೈಲಪುತ್ರಿಯಾಗಿ ಶಿವನ ಕೈ ಹಿಡಿದ ಕಥೆ ಓದಿ

    ಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳ ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.

    ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು ದಿನ ಮಹಾಲಕ್ಷ್ಮಿಯನ್ನೂ, ಕೊನೆಯ ಮೂರು ದಿನ ಮಹಾ ಸರಸ್ವತಿಯನ್ನು ಪೂಜಿಸಲಾಗುತ್ತಿದೆ. ಮಹಾಕಾಳಿ ತಾಮಸ ಗುಣಕ್ಕೂ, ಮಹಾಲಕ್ಷ್ಮಿ ರಾಜಸಗುಣಕ್ಕೂ, ಮಹಾಸರಸ್ವತಿ ಸಾತ್ವಿಕ ಗುಣದ ಸಂಕೇತ. ನವರಾತ್ರಿ ಆಚರಿಸುವ ಭಕ್ತರು ತಾಮಸದಿದ ರಾಜಸದೆಡೆಗೆ, ರಾಜಸದಿಂದ ಸಾತ್ವಿಕದೆಡೆಗೆ ಬಂದಾಗ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತದೆ.

    ನವರಾತ್ರಿ ವೇಳೆ ದೇವಿಯ ಪೂಜೆ, ದೇವಿ ಭಾಗವತ, ದುರ್ಗ ಸಪ್ತಶತೀ, ಲಲಿತಾ ಸಹಸ್ರನಾಮ ಪವಿತ್ರ ಸ್ತೋತ್ರಗಳ ಮತ್ತು ಮಂತ್ರಗಳ ಪಠಣ ಹಾಗೂ ಪಾರಾಯಣ ನಡೆಯುತ್ತದೆ. ನವದುರ್ಗೆಯರ ಆರಾಧನೆಯ ಹಿನ್ನೆಲೆಯಲ್ಲಿ ಇಂದಿನಿಂದ ಪ್ರತಿದಿನ ದೇವಿಯ ಒಂದೊಂದು ಅವತಾರದ ವಿವರಣೆಯನ್ನು ಪಬ್ಲಿಕ್ ಟಿವಿ ಪ್ರಕಟಿಸಲಿದೆ.

    ಒಂಬತ್ತು ದುರ್ಗೆಯರು:
    1. ಶೈಲಪುತ್ರಿ
    2. ಬ್ರಹ್ಮಚಾರಿಣಿ
    3. ಚಂದ್ರಘಂಟಾ
    4. ಕೂಷ್ಮಾಂಡಾ
    5. ಸ್ಕಂದ ಮಾತೆ
    6. ಕಾತ್ಯಾಯನಿ
    7. ಕಾಳರಾತ್ರಿ
    8. ಮಹಾಗೌರಿ
    9. ಸಿದ್ಧಿದಾತ್ರಿ


    ಪರ್ವತ ರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ದಸರಾ ದಿನ ಈ ದೇವಿಯನ್ನು ಮೊದಲಿಗೆ ಆರಾಧಿಸುತ್ತಾರೆ. ಈ ದೇವಿಯನ್ನು ಆರಾಧಿಸಲು ಒಂದು ಕಥೆಯಿದೆ. ಪ್ರಜಾಪತಿ ಬಹ್ಮನ ಮಗನಾದ ದಕ್ಷ ತನ್ನ 27 ಮಂದಿ ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದ್ದಳು.

    ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಹಿಮಾವೃತವಾಗಿರುವ ಕೈಲಾಸ ಅಥವಾ ಸ್ಮಶಾನದಲ್ಲಿ ವಾಸ, ಕುತ್ತಿಗೆಗೆ ನಾಗರಹಾವು ಇರುವ ಶಿವನಿಗಿಂತ ನನ್ನ ಚೆಲುವೆಯಾಗಿರುವ ಮಗಳಿಗೆ ಉತ್ತಮನಾಗಿರುವ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

    ಶಿವನ ವಿಚಾರದಲ್ಲಿ ಅಸಮಾಧಾನವನ್ನು ಹೊರಹಾಕುತ್ತಿದ್ದ ದಕ್ಷ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲ ಮಕ್ಕಳಿಗೆ, ಬಂಧು ಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈ ವೇಳೆ ದಕ್ಷ, “ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ” ಎಂದು ಮನಸ್ಸಿನಲ್ಲೇ ಕಹಿಯನ್ನು ಅನುಭವಿಸಿದ.

    ಕೆಲ ಸಮಯದ ಬಳಿಕ ದಕ್ಷ ಮತ್ತೊಂದು ಯಜ್ಞವನ್ನು ಆಯೋಜಿಸಿದ. ಈ ಬಾರಿ ಮಗಳು ದಾಕ್ಷಾಯಿಣಿ ಮತ್ತು ಶಿವನಿಗೆ ಆಹ್ವಾನ ನೀಡದೇ ಎಲ್ಲ ಮಕ್ಕಳಿಗೆ ಆಹ್ವಾನ ನೀಡಿದ್ದ. ತಂದೆ ಯಾಗವನ್ನು ಆಯೋಜಿಸಿದ ವಿಚಾರ ತಿಳಿದು ಮಗಳು ಶಿವನ ಜೊತೆ,”ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ” ಎಂದು ಕೇಳುತ್ತಾಳೆ. ಇದಕ್ಕೆ ಶಿವ,”ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆ ಸೇರಿದಂತೆ ಎಲ್ಲಿಗೂ ಹೋಗಬಾರದು” ಎಂದು ತಿಳಿಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ,”ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತುಹೋಗಿರಬಹುದು. ತಂದೆ ಮನೆಗೆ ಹೋಗಲು ಮಗಳಿಗೆ ಆಹ್ವಾನ ಯಾಕೆ ಬೇಕು”ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿಯ ಹಠಕ್ಕೆ ಕರಗಿ ಶಿವ ತಂದೆಯ ಮನೆಗೆ ಹೋಗಲು ಅನುಮತಿ ನೀಡುತ್ತಾನೆ.

    ಪತಿಯಿಂದ ಅನುಮತಿ ಸಿಕ್ಕಿದ್ದೆ ತಡ ದಾಕ್ಷಾಯಿಣಿ ಶಿವನ ವಾಹನ ನಂದಿಯನ್ನೇರಿ, ಕೈಗೆ ಸಿಕ್ಕ ಉಡುಗೊರೆಯನ್ನು ಹಿಡಿದುಕೊಂಡು ತಂದೆಯ ಯಜ್ಞ ಸಮಾರಂಭಕ್ಕೆ ತೆರಳುತ್ತಾಳೆ. ಮಗಳನ್ನು ನೋಡಿದ ಕೂಡಲೇ ದಕ್ಷ,”ನಾನು ನಿನಗೆ ಆಹ್ವಾನ ನೀಡಿಲ್ಲ. ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ” ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ಆ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನ ವಿರುದ್ಧ ಕಿಡಿಕಾರುತ್ತಾನೆ.”ನೀನು ಪತಿಯನ್ನು ಸೇರು. ಇಲ್ಲಿಂದ ಹೊರಟು ಹೋಗು” ಎಂದು ಅವಮಾನಿಸುತ್ತಾನೆ. ಈ ಎಲ್ಲರ ಮುಂದೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ಶಿವನನ್ನು ಧ್ಯಾನಿಸುತ್ತಾ,”ಪತಿಯೇ ನಾನು ನಿಮ್ಮ ಮಾತನ್ನು ಕೇಳಿ ಇಲ್ಲಿಗೆ ಬಾರಬಾರದಿತ್ತು. ತಂದೆ ನಿಮಗೆ ಮಾಡಿದ ಈ ಅವಮಾನವನ್ನು ನಾನು ಸಹಿಸಲಾರೆ” ಎಂದು ಪ್ರಾರ್ಥಿಸಿ ಮುಂದಿದ್ದ ಯಜ್ಞ ಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.

    ಪತಿಯನ್ನು ಅವಮಾನಿಸಿದ್ದನ್ನು ಸಹಿಸದೆ ಯಜ್ಞ ಕುಂಡಕ್ಕೆ ಹಾರಿಕೊಂಡಿದ್ದ ದಾಕ್ಷಾಯಿಣಿಗೆ ಅಂದಿನಿಂದ `ಸತಿ’ ಎಂಬ ಹೆಸರು ಬಂತು. ಸತಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ‘ಶೈಲಪುತ್ರಿ’ ಎಂದು ಹೆಸರುವಾಸಿಯಾಗುತ್ತಾಳೆ. ಮತ್ತೆ ಶಿವನ ಮಡದಿಯಾಗುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರ ಸೂಚನೆ ಏನೋ ಎಂಬಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣುಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯ ನಡೆಯುತ್ತದೆ. ಶೈಲಪುತ್ರಿ ವೃಷಭ ವಾಹನದ ಮೇಲೆ ಕುಳಿತು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಹಿಡಿದುಕೊಂಡಿರುತ್ತಾಳೆ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    8.ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv