Tag: ದಸರಾ ಬೊಂಬೆ

  • ಸಾವಿರಾರು ಗೊಂಬೆ ಕೂರಿಸಿ ಸಂಪ್ರದಾಯ ಮುಂದುವರಿಸಿದ ಕುಟುಂಬ: ಕಣ್ತುಂಬಿಕೊಳ್ಳಲು ಬಂದ ಜನ

    ಸಾವಿರಾರು ಗೊಂಬೆ ಕೂರಿಸಿ ಸಂಪ್ರದಾಯ ಮುಂದುವರಿಸಿದ ಕುಟುಂಬ: ಕಣ್ತುಂಬಿಕೊಳ್ಳಲು ಬಂದ ಜನ

    ಚಾಮರಾಜನಗರ: ಗೊಂಬೆ ಕೂರಿಸುವುದು ದಸರಾ ಹಬ್ಬದ ಪ್ರಮುಖ ಆಚರಣೆಗಳಲ್ಲೊಂದು. ಚಾಮರಾಜನಗರ ಜಿಲ್ಲೆಯ ಕುಟುಂಬವೊಂದು ಕಳೆದ 80 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ದಸರಾ ಗೊಂಬೆ ಕೂರಿಸುವ ಆಚರಣೆ ಮಾಡಿಕೊಂಡು ಬರುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿರುವ ಈ ದಸರಾ ಗೊಂಬೆ ಪ್ರದರ್ಶನ ಅತ್ಯಾಕರ್ಷಕವಾಗಿದೆ.

    ಮಹಿಷಾಸುರನನ್ನು ದುರ್ಗಾದೇವಿ ಸಂಹರಿಸಲು ದೇವಾನುದೇವೆತೆಗಳು ತಮ್ಮ ಶಕ್ತಿಯನ್ನು ನೀಡಿ ಶಕ್ತಿಹೀನರಾಗಿ ಪ್ರತಿಮೆಗಳಾದರು ಎಂಬ ಪುರಾಣವಿದೆ. ದೇವಾನುದೇವತೆಗಳ ಈ ತ್ಯಾಗವನ್ನು ಸ್ಮರಿಸಲು ಗೊಂಬೆ ಕೂರಿಸುವ ಪದ್ದತಿಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಹಳೇ ಮೈಸೂರು ಭಾಗದ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಪದ್ದತಿ ರೂಢಿಯಲ್ಲಿತ್ತು. ಕೆಲವು ಮನೆಗಳಲ್ಲಿ ಈಗಲೂ ದಸರಾ ಗೊಂಬೆ ಕೂರಿಸುವ ಅಚರಣೆಯನ್ನು ಅನೂಚಾನವಾಗಿ ನಡೆಸುಕೊಂಡು ಬರಲಾಗುತ್ತಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಉಮಾ ಸುಬ್ಬರಾವ್ ಕುಟುಂಬ ಕಳೆದ 80 ವರ್ಷಗಳಿಂದ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಗೊಂಬೆ ಕೂರಿಸುವ ಆಚರಣೆ ಮಾಡಿಕೊಂಡು ಬರುತ್ತಿದೆ.

    ಈ ದಸರಾ ಗೊಂಬೆ ಪ್ರದರ್ಶನದಲ್ಲಿ ಪುರಾಣ ಹಾಗೂ ಐತಿಹಾಸಿಕ ಘಟನೆಗಳು, ಸಂಸ್ಕೃತಿ, ಕಲೆ ಅನಾವರಣಗೊಳಿಸುವ ಚಿತ್ರಣಗಳು, ಶ್ರೀನಿವಾಸ ಕಲ್ಯಾಣ, ಕೃಷ್ಣಾವತಾರ, ರಾಮಾಯಣ, ಮಹಾಭಾರತ, ಜಂಬೂಸವಾರಿ ಮೊದಲಾದ ಸಂಗತಿಗಳು ಬಿಂಬಿತವಾಗಿವೆ.

    ಪಟ್ಟದ ಬೊಂಬೆಗಳು ಸೇರಿದಂತೆ ನಾನಾ ಬಗೆಯ ಗೊಂಬೆಗಳು, ಹಿಂದೆ ಬಳಸುತ್ತಿದ್ದ ಹಿತ್ತಾಳೆ, ತಾಮ್ರ, ಪಿಂಗಾಣಿ ವಸ್ತುಗಳು ಗಮನ ಸೆಳೆಯುತ್ತಿವೆ. ಗೊಂಬೆ ಪ್ರದರ್ಶನ ವೀಕ್ಷಣೆಗೆ ಬೇರೆ ಬೇರೆ ಕಡೆಯಿಂದ ಜನ ಬರುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಚಿನ್ನದ ನಾಡಿನಲ್ಲಿ ರಾಮಾಯಣ, ಮಹಾಭಾರತ, ಮಹಾ ವಿಷ್ಣುವಿನ ದಶಾವತಾರದ ಬೊಂಬೆಗಳು ಜೋಡಣೆ

    ಚಿನ್ನದ ನಾಡಿನಲ್ಲಿ ರಾಮಾಯಣ, ಮಹಾಭಾರತ, ಮಹಾ ವಿಷ್ಣುವಿನ ದಶಾವತಾರದ ಬೊಂಬೆಗಳು ಜೋಡಣೆ

    ಕೋಲಾರ: ದಸರಾ ಹಬ್ಬದ ಅಂಗವಾಗಿ ಕೋಲಾರದ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ರಾಮಾಯಣ ಹಾಗೂ ಮಹಾಭಾರತದ ಬೊಂಬೆಗಳನ್ನು ಜೋಡಿಸಲಾಗಿದೆ. ಅಲ್ಲದೇ ಅನಂತಪದ್ಮನಾಭ ಸ್ವಾಮಿಯ ವೈಭವ ಹಾಗೂ ಮಹಾ ವಿಷ್ಣುವಿನ ದಶಾವತಾರ ಕೂಡ ನೋಡಬಹುದಾಗಿದೆ.

    ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಇಲ್ಲಿನ ಭಕ್ತಿ ಮಂದಿರದಲ್ಲಿ ತಾಯಿ ಚಾಮುಂಡೇಶ್ವರಿ ಸಹಿತ ನೂರಾರು ವಿವಿಧ ರೀತಿಯ ನವರಾತ್ರಿ ಬೊಂಬೆಗಳನ್ನಿಟ್ಟು ನಿತ್ಯ ಅದ್ಧೂರಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಕೃಷ್ಣನ ಲೀಲೆಗಳನ್ನು ತೋರಿಸುವ ಬೊಂಬೆಗಳು, ವಿಷ್ಣುವಿನ ದಶಾವತಾರದ ಬೊಂಬೆಗಳು, ಮದುವೆ ಸಂಪ್ರದಾಯವನ್ನು ಬಿಂಬಿಸುವ ಬೊಂಬೆಗಳು, ರಥೋತ್ಸವಗಳು, ಚಾಮುಂಡೇಶ್ವರಿ ದೇವಿಯ ವಿವಿಧ ಅವತಾರಗಳನ್ನು ಇಲ್ಲಿ ಕಾಣಬಹುದು.

    ಸ್ವತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ್ ಆಜಾದ್, ಸಾವರ್ಕರ್ ರಂತ ಸ್ವತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರ ಬೊಂಬೆಗಳನ್ನು ಇಲ್ಲಿ ಕಾಣಬಹುದು. ಕಳೆದ 20 ವರ್ಷಗಳಿಂದ ಇಲ್ಲಿ ನವರಾತ್ರಿ ಹಬ್ಬವನ್ನು ವಿಶಿಷ್ಟವಾಗಿ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದು, ಪ್ರತಿನಿತ್ಯ 101 ಮಹಿಳೆಯರಿಂದ ಶಕ್ತಿ ದೇವಿಗೆ ಕುಂಕುಮಾರ್ಚನೆ ಹಾಗೂ ಹೋಮಗಳನ್ನು ಮಾಡಲಾಗುತ್ತದೆ.


    ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿರುವ ಕೋಟಿಲಿಂಗೇಶ್ವರದಲ್ಲಿ 9 ದಿನಗಳ ಕಾಲ ನವರಾತ್ರಿ ಬೊಂಬೆಗಳನ್ನು ಇಡಲಾಗುತ್ತದೆ. ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ನೂರಾರು ಮಹಿಳೆಯರು ಪ್ರತಿನಿತ್ಯ ಕುಂಕುಮಾರ್ಚನೆ, ಹೋಮ, ದೀಪಾಲಂಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಪ್ರತಿನಿತ್ಯ ಚಾಮುಂಡೇಶ್ವರಿ ದೇವಿಯ ರಥೋತ್ಸವ, ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ.

    ಹತ್ತಾರು ಮಹಿಳೆಯರು, ಮಕ್ಕಳು ಪೂಜೆಯಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ವಿಶೇಷವಾಗಿ ಸರಸ್ವತಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿನ ನೂರಾರು ಮಕ್ಕಳಿಗೆ ಪುಸ್ತಕ ಹಾಗೂ ಪೆನ್‍ಗಳನ್ನು ಇಲ್ಲಿ ವಿತರಣೆ ಮಾಡುವ ಮೂಲಕ ಮಕ್ಕಳಿಗೆ ಸರಸ್ವತಿಯ ಅನುಗ್ರಹ ಕರುಣಿಸಲಿ ಎಂದು ಪೂಜೆ ಸಲ್ಲಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯಿಂದ ಇಲ್ಲಿಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

    ನವರಾತ್ರಿ ಆಚರಣೆಯನ್ನು ಕೇವಲ ಮೈಸೂರು ಭಾಗಕ್ಕಷ್ಟೇ ಅಲ್ಲ ಹಳೆ ಮದ್ರಾಸು ಭಾಗದಲ್ಲೂ ದಸರಾ ವೈಭವ ಕಳೆ ಗಟ್ಟುತ್ತದೆ. ಚಿನ್ನದ ನಾಡಲ್ಲೂ ದಸರಾ ಉತ್ಸಾಹ, ಆಸಕ್ತಿ ತುಂಬಿದ್ದು ಹಬ್ಬಕ್ಕೆ ಮತ್ತಷ್ಟು ಮೆರುಗು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಟ್ಸಪ್ ಮಾಡಿದ್ರೆ, ದಸರಾ ಗೊಂಬೆಗಳನ್ನು ಜನತೆಗೆ ತೋರಿಸ್ತೀವಿ

    ವಾಟ್ಸಪ್ ಮಾಡಿದ್ರೆ, ದಸರಾ ಗೊಂಬೆಗಳನ್ನು ಜನತೆಗೆ ತೋರಿಸ್ತೀವಿ

    ಬೆಂಗಳೂರು: ವಿಶ್ವವಿಖ್ಯಾತ ದಸರಾ ಹಬ್ಬ ಬಂತು ಎಂದರೆ ಎಲ್ಲರು ಸಂಭ್ರಮ ಪಡುತ್ತಾರೆ. ಕರ್ನಾಟಕದ ನಾಡಹಬ್ಬ ಇದ್ದಾಗಿದ್ದು 10 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ. 9 ದಿನಗಳ ಕಾಲ ಪೂಜೆಯನ್ನು ಮಾಡಿ 10ನೇ ದಿನ ವಿಜೃಂಭಣೆಯಿಂದ ವಿಜಯದಶಮಿಯನ್ನು ಆಚರಿಸಲಾಗುತ್ತದೆ.

    ನವರಾತ್ರಿಯ ಸಮಯದಲ್ಲಿ ಕರ್ನಾಟಕದಲ್ಲಿ ಬೊಂಬೆಗಳನ್ನು ಕೂರಿಸಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನವರಾತ್ರಿ 9 ದಿನ ಇರುವುದರಿಂದ 9 ಮಹಡಿಯ ತರಹ ಮಾಡಿ ಗೊಂಬೆಗಳನ್ನು ಕೂರಿಸುವುದು ವಿಶೇಷ.

    ಹಲವು ಮನೆಗಳಲ್ಲಿ ಗೊಂಬೆಗಳನ್ನು ಕೂರಿಸಿದರೂ ಅದನ್ನು ನೋಡಲು ಎಲ್ಲರಿಗೂ ಸಾಧ್ಯವಿಲ್ಲ ಎಂದು ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಪಬ್ಲಿಕ್ ಮ್ಯೂಸಿಕ್ ಮೂಲಕ ನಿಮ್ಮ ಮನೆಯಲ್ಲಿರುವ ದಸರಾ ಬೊಂಬೆಯನ್ನು ಇಡೀ ಕರ್ನಾಟಕ ಜನತೆ ನೋಡಬಹುದು.

    ಏನ್ ಮಾಡ್ಬೇಕು?
    ನಿಮ್ಮ ಮನೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸಿದ್ದರೆ ಈಗಲೇ ನಿಮ್ಮ ಹೆಸರು ಮತ್ತು ವಿಳಾಸವನ್ನು ಬರೆದು 99000 60800 ವಾಟ್ಸಪ್ ನಂಬರ್ ಗೆ ಸೆಂಡ್ ಮಾಡಿದರೆ ಆಯ್ತು. ನಾವೇ ನಿಮ್ಮ ಮನೆಗೆ ಬಂದು ಚಿತ್ರಿಕರಿಸಿ ವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ.