Tag: ದಸರಾ ಆನೆಗಳು

  • ಮಾವುತರಿಗೆ ಕುಕ್ಕರ್ ಗಿಫ್ಟ್‌ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್‌

    ಮಾವುತರಿಗೆ ಕುಕ್ಕರ್ ಗಿಫ್ಟ್‌ ಕೊಟ್ಟು ಊಟ ಹಾಕಿಸಿದ ವಿಜಯಲಕ್ಷ್ಮಿ ದರ್ಶನ್‌

    ದರ್ಶನ್ ಜೈಲು ಪಾಲಾದ್ರೂ ಮೈಸೂರು ನಂಟು ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಮರೆಯದಿರುವುದು ವಿಶೇಷ. ದರ್ಶನ್ ಅನುಪಸ್ಥಿತಿಯಲ್ಲೂ ಅವರ ಪತ್ನಿ ವಿಜಯಲಕ್ಷ್ಮಿ ದಸರಾ ಆನೆ ಮಾವುತರ ಕುಟುಂಬಕ್ಕೆ ಉಡುಗೊರೆ ಕೊಟ್ಟು ಊಟ ಹಾಕಿಸಿದ್ದಾರೆ.

    ದರ್ಶನ್‌ (Darshan) ತಾಯಿ ಕೂಡ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನೋಡಿ ಖುಷಿ ಪಟ್ಟರು. ಮಾವುತರ 60 ಕುಟುಂಬಕ್ಕೆ ವಿಜಯಲಕ್ಷ್ಮಿ ಕುಕ್ಕರ್ ಉಡುಗೊರೆ ನೀಡಿದ್ದಾರೆ. ಜೊತೆಗೆ ಭೋಜನದ ವ್ಯವಸ್ಥೆ ಮಾಡಿಸಿದ್ದರು.

    ಮೈಸೂರಿನ ದಸರಾ ಆನೆ (Mysuru Dasara Elephants) ನೋಡಿ ಖುಷಿಪಟ್ಟ ವಿಜಯಲಕ್ಷ್ಮಿ ಮಾವುತರಿಗೆ ಕೈಯ್ಯಾರೆ ಕುಕ್ಕರ್ ಕೊಟ್ಟಿದಾರೆ. ವಿಜಯಲಕ್ಷ್ಮಿಯವರ ಈ ಕೆಲಸಕ್ಕೆ ನಟ ಧನ್ವಿರ್ ಜೊತೆಯಾಗಿದ್ರು. ಮಾವುತರು ಒಬ್ಬೊಬ್ರಾಗಿ ಬಂದು ವಿಜಯಲಕ್ಷ್ಮಿ ಅವರಿಂದ ಕುಕ್ಕರ್ ಸ್ವೀಕರಿಸಿದ್ರು. ಹಿಂದೆ ದರ್ಶನ್ ಅನೇಕ ಬಾರಿ ಮೈಸೂರಿಗೆ ಭೇಟಿ ಕೊಟ್ಟು ಮಾವುತರಿಗೆ ಸಹಾಯ ಮಾಡಿದ್ದರಂತೆ. ಇದೀಗ ಆ ಪರಂಪರೆಯನ್ನ ವಿಜಯಲಕ್ಷ್ಮಿ ಮುಂದುವರಿಸಿದ್ದಾರೆ ಎನ್ನಲಾಗ್ತಿದೆ.

    ಸೆಪ್ಟೆಂಬರ್ 22 ರಿಂದ ಅಕ್ಟೋಬರ್‌ 2ರ ವರೆಗೆ ಈ ಬಾರಿಯ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ದಸರಾ ಮೆರವಣಿಗೆಯಲ್ಲಿ ಭಾಗಿಯಾಗುವ 2 ತಂಡದ 14 ಆನೆಗಳು ಈಗಾಗಳೇ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿವೆ.

  • Mysuru Dasara | ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿ

    Mysuru Dasara | ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿ

    ಮೈಸೂರು: ದಸರಾ ಜಂಬೂಸವಾರಿಗೆ ಆಗಮಿಸಿರುವ ಆನೆಗಳು (Dasara Elephants) ಇಂದಿನಿಂದ ತಾಲೀಮಿನಲ್ಲಿ ನಿರತವಾಗಿವೆ. ಇಂದು ಮೊದಲ ದಿನದ ತಾಲೀಮಿಗೂ ಮುನ್ನ ಅರಮನೆ ಅಂಗಳಕ್ಕೆ ಆಗಮಿಸಿರುವ ಮೊದಲ ತಂಡದ ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಅಂಬಾರಿ ಹೊರುವ ಆನೆ ಅಭಿಮನ್ಯು ಆನೆಗಿಂತಲೂ ಭೀಮನೇ (Bheema Elephants) ಹೆಚ್ಚು ಬಲಶಾಲಿಯಾಗಿದ್ದಾನೆ ಅನ್ನೋದು ಗೊತ್ತಾಗಿದೆ.

    ಯಾವ ಆನೆಯ ತೂಕ ಎಷ್ಟಿದೆ?
    ಅಭಿಮನ್ಯು – 5,360 ಕೆಜಿ
    ಭೀಮ – 5,465 ಕೆಜಿ
    ಧನಂಜಯ – 5,310 ಕೆಜಿ
    ಕಾವೇರಿ – 3,010 ಕೆಜಿ
    ಲಕ್ಷ್ಮೀ – 3,730 ಕೆಜಿ
    ಏಕಲವ್ಯ – 5,305 ಕೆಜಿ
    ಮಹೇಂದ್ರ – 5,120 ಕೆಜಿ
    ಕಂಜನ್ – 4,880 ಕೆಜಿ
    ಪ್ರಶಾಂತ – 5,110 ಕೆಜಿ

    ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಿ, ಬಳಿಕ ಮೆರವಣಿಗೆ ನಡೆಸಲಾಯಿತು. ಸತತ ಒಂದು ತಿಂಗಳ ಆನೆಗಳಿಗೆ ನಿತ್ಯ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ (Bannimantap) ತಾಲೀಮು ನಡೆಸಲಾಗುತ್ತೆ. ಇದರೊಂದಿಗೆ ಪಟಾಕಿ, ಕುಶಾಲತೋಪು ಸಿಡಿಸುವ ತಾಲೀಮು, ಮರದ ಅಂಬಾರಿ ಮೆರವಣಿಗೆ ತಾಲೀಮು ಸಹ ನಡೆಯಲಿವೆ. ಸದ್ದುಗದ್ದಲದಿಂದ ವಿಚಲಿತವಾಗದಂತೆ ನೋಡಿಕೊಳ್ಳಲು ಆನೆಗಳಿಗೆ ರೀತಿಯ ತರಬೇತಿ ನೀಡಲಾಗುತ್ತೆ.

  • Public TV Explainer | ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಯಾರಾಗ್ತಾರೆ ಮುಂದಿನ ಸಾರಥಿ?

    Public TV Explainer | ಮುಂದಿನ ವರ್ಷ ಅಂಬಾರಿ ಹೊತ್ತರೆ ʻಅಭಿಮನ್ಯು ಯುಗʼ ಮುಗಿಯಿತು – ಯಾರಾಗ್ತಾರೆ ಮುಂದಿನ ಸಾರಥಿ?

    ಜಂಬೂ ಸವಾರಿಯಿಲ್ಲದೇ ಮೈಸೂರು ದಸರಾ (Mysuru Dasara) ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಮೈಸೂರು ದಸರಾ ಮಹೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ಈ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಅಂದ್ರೆ ಆನೆಗಳೇ ಆಕರ್ಷಣೆ. ಮೈಸೂರು ಮಹಾರಾಜರ ಆಡಳಿತದ ನಂತರವೂ ಆನೆಯ ಮೇಲೆ ಅಂಬಾರಿ ಹೊರುವ ಪರಂಪರೆ ಸಾಗಿ ಬಂದಿದೆ. ಅದೇ ರೀತಿ ಈ ಮೈಸೂರು ದಸರೆಯಲ್ಲಿ ಅಂಬಾರಿ ಹೊತ್ತ ಆನೆಗಳ ಇತಿಹಾಸ ಅಷ್ಟೇ ವಿಸ್ಮಯ. ಹೀಗೆ ಇತಿಹಾಸ ನಿರ್ಮಿಸಿ ಹೋದ ಹಳೆಯ ಆನೆಗಳ ಸಾಲಿನಲ್ಲಿ ಈಗ ಅಭಿಮನ್ಯುವೇ (Abhimanyu Elephant) ಕೊನೆಯವನಾಗಿದ್ದು, ದಶಕಗಳಿಂದ ಈಚೆಗೆ ಬಂದ ಆನೆಗೆ ಅಂಬಾರಿ ಹೊರುವ ಹೊಣೆ ಬಿಟ್ಟುಕೊಡುವ ಕಾಲ ಬಂದೇ ಬಿಟ್ಟಿದೆ.

    ಹೌದು. ಪ್ರಸಕ್ತ ವರ್ಷದ ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ಶುರುವಾಗಿದೆ. ನಾಡಹಬ್ಬ ದಸರಾದ ಐತಿಹಾಸಿಕ ಜಂಬೂ ಸವಾರಿಯಲ್ಲಿ ಈ ಬಾರಿಯೂ 59 ವರ್ಷ ವಯಸ್ಸಿನ ಅಭಿಮನ್ಯು ಆನೆಯೇ ಅಂಬಾರಿ ಹೊರಲಿದೆ. ದಸರಾ ಮಹೋತ್ಸವಲ್ಲಿ ಪಾಲ್ಗೊಳ್ಳಲಿರುವ 14 ಆನೆಗಳ ಪೈಕಿ 9 ಆನೆಗಳ ಪಟ್ಟಿಯನ್ನ ಈಗಾಗಲೇ ಬಿಡುಗಡೆ ಮಾಡಿದ್ದು, ಆಗಸ್ಟ್‌ 4ರಂದು (ಸೋಮವಾರ) ಅವು ಗಜಪಯಣದ ಮೂಲಕ ಅರಮನೆ ಅಂಗಳಕ್ಕೆ ಬಂದಿಳಿಯಲಿವೆ.

    ಮೊದಲ ಹಂತದಲ್ಲಿ ನಾಡಿಗೆ ಬರಲಿರುವ 9 ಆನೆಗಳು

    ಮತ್ತಿಗೋಡು ಶಿಬಿರದಲ್ಲಿರುವ ಅಭಿಮನ್ಯು (59 ವರ್ಷ), ಮತ್ತಿಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್‌ (24), ಧನಂಜಯ (44), ಪ್ರಶಾಂತ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40), ದುಬಾರೆ ಶಿಬಿರದ ಕಾವೇರಿ (45/ಹೆಣ್ಣಾನೆ), ಬಳ್ಳೆಯ ಲಕ್ಷ್ಮಿ (53/ಹೆಣ್ಣಾನೆ).

    ಮುಂದಿನ ವರ್ಷ ಅಂಬಾರಿ ಹೊತ್ತರೆ ಮುಗಿಯಿತು:

    ದಸರಾ ಆನೆಗಳಿಗೂ (Dasara Elephants) ಶತಮಾನದ ನಂಟು ಇದೆ. ಎಲ್ಲೆಡೆ ಹೊಸ ಪೀಳಿಗೆ ಪ್ರವೇಶಿಸಿದಂತೆ ಮೈಸೂರಿನ ಆನೆಗಳಲ್ಲೂ ಬದಲಾವಣೆ ಆಗುತ್ತಿದೆ. ಆದ್ರೆ ಈಗ ಇರುವ ಹಳೆಯ ಆನೆಗಳ ಪೈಕಿ ಅಭಿಮನ್ಯುನೇ ಹಿರಿಯ. 59 ವರ್ಷ ವಯಸ್ಸಿನ ಅಭಿಮನ್ಯು ಮುಂದಿ ವರ್ಷ ಅಂಬಾರಿ ಹೊತ್ತರೆ ಮುಗಿಯಿತು. ಏಕೆಂದರೆ ಅರಣ್ಯ ಅಧಿಕಾರಿಗಳು ಹೇಳುವಂತೆ 60 ವರ್ಷ ತುಂಬಿದ ಆನೆಗಳಿಗೆ ನಿಯಮದಂತೆ ನಿವೃತ್ತಿ ಕೊಡಬೇಕು. ಅಭಿಮನ್ಯುವಿಗೆ ಈಗ 59 ವರ್ಷ ವಯಸ್ಸಾಗಿದ್ದು, ಮುಂದಿನ ವರ್ಷ 60ನೇ ವಯಸ್ಸಿಗೆ ಕಾಲಿಡಲಿದ್ದಾನೆ. ಮುಂದಿನ ವರ್ಷ ಅಂಬಾರಿ ಹೊತ್ತರೆ ಅಲ್ಲಿಗೆ ಅಭಿಮನ್ಯು ಇತಿಹಾಸ ಪುಟ ಸೇರಿಕೊಳ್ಳಲಿದ್ದಾನೆ ಎನ್ನುತ್ತಾರೆ ಡಿಸಿಎಫ್‌ ಪ್ರಭು.

    ಅಭಿಮನ್ಯು ಹೆಮ್ಮರವಾಗಿ ಬೆಳೆದಿದ್ದು ಹೇಗೆ?

    1951ರ ಸಮಯದಲ್ಲಿ ಸುರ್ಗುಜಾ ಮಧ್ಯಪ್ರದೇಶದ ಭಾಗವಾಗಿತ್ತು. ಆದ್ರೆ 2000 ಇಸವಿಯ ನಂತರ ಛತ್ತಿಸ್‌ಘಡದ ಜಿಲ್ಲೆಯಾಗಿ ಸೇರ್ಪಡೆಯಾಯಿತು. ಈ ಸ್ಥಳಕ್ಕೂ ನಮ್ಮ ಕರ್ನಾಟಕಕ್ಕೂ ನಂಟು ಇದೆ. ಅದು ಹೇಗೆ ಅಂತೀರಾ..? ಈ ಹಿಂದೆ ಸುಮಾರು 3 ದಶಕಗಳ ಕಾಲ ಸರ್ಗುಜಾದಲ್ಲಿ ಆನೆಗಳ ಹಾವಳಿ ಮಿತಿ ಮೀರಿತ್ತು. ಆನೆಗಳನ್ನ ಸೆರೆ ಹಿಡಿಯಬೇಕು, ಉಪಟಳ ತಪ್ಪಿಸಬೇಕು ಅನ್ನೋ ಕೂಗು ಸರ್ಗೂಜಾ ಭಾಗದಲ್ಲಿ ಜೋರಾಗಿತ್ತು. ಸ್ಥಳೀಯರ ಒತ್ತಡಕ್ಕೆ ಮಣಿದ ಅಂದಿನ ಮಧ್ಯಪ್ರದೇಶದ ರಾಜ್ಯ ಸರ್ಕಾರ ಆನೆಗಳನ್ನ ಸೆರೆ ಹಿಡಿಯೋದಕ್ಕೇನೋ ಅನುಮತಿ ನೀಡಿತು. ಆದ್ರೆ ಅವುಗಳನ್ನ ಸೆರೆ ಹಿಡಿಯುವ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ಆಗ ಮಧ್ಯಪ್ರದೇಶದ ಚಿತ್ತ ಹಾಯಿಸಿದ್ದು, ಕರ್ನಾಟಕದತ್ತ. ಖೆಡ್ಡಕ್ಕೆ ಕೆಡವುವ ಕಾರ್ಯಾಚರಣೆಯಲ್ಲಿ ಕರ್ನಾಟಕದ ಆನೆಗಳು ಆಗಲೇ ಬಲಶಾಲಿಗಳಾಗಿ ಗುರುತಿಸಿಕೊಂಡಿದ್ದವು. ಇಲ್ಲಿಂದ ಆನೆಗಳನ್ನ ಕರೆದುಕೊಂಡು ಬಂದು ಆನೆಗಳನ್ನ ಸೆರೆಹಿಡಿಯುವ ತೀರ್ಮಾನಕ್ಕೆ ಅಲ್ಲಿನ ಸರ್ಕಾರ ಮುಂದಾಯಿತು. ಅದರಂತೆ ಇಂದಿನ ಅಂಬಾರಿ ಹೊರುವ ಕ್ಯಾಪ್ಟನ್‌ ಅಭಿಮನ್ಯು ಸೇರಿ ಹಲವು ಆನೆಗಳ ತಂಡವನ್ನ ಸರ್ಗುಜಾಕ್ಕೆ ಕರೆದೊಯ್ಯಲಾಯ್ತು. ನೀರಿಕ್ಷೆಯಂತೆ ನಮ್ಮ ಆನೆಗಳು ಸರ್ಗುಜಾದಲ್ಲಿ ಸುಮಾರು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಯಶಸ್ವಿಯಾದವು. ಈ ಆನೆ ಸೆರೆ ಕಾರ್ಯಾಚರಣೆ ಆಗ The Last Migration – Wild Elephant Captureʼ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿತು. ಇದು ನಮ್ಮ ಅಭಿಮನ್ಯುವಿನ ಮೇಲಿನ ಅಭಿಮಾನ ಹೆಚ್ಚಿಸಿ ಈಗಲೂ ಅಪರೇಷನ್ ಎಂದರೆ ʻಅಭಿಮನ್ಯುʼ ಎನ್ನುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಆದ್ರೆ ಇನ್ನೊಂದು ವರ್ಷ ಕಳೆದರೆ ಆಮೇಲೆ ಅಭಿಮನ್ಯು ಅಂಬಾರಿ ಹೊರುವ ಸೌಭಾಗ್ಯದಿಂದ ದೂರವಾಗಲಿದ್ದಾನೆ ಅನ್ನೋದು ವಿಷಾದನೀಯ.

    ಅಂಬಾರಿ ಹೊತ್ತ ಆನೆಗಳು ಅಜರಾಮರ

    ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಆನೆಗಳು ಭಾಗಿಯಾಗಿವೆ. ಇಂತ ಆನೆಗಳ ಪಟ್ಟಿ ನೂರಕ್ಕೂ ಅಧಿಕ. ಆದ್ರೆ ಅಂಬಾರಿ ಹೊತ್ತ ಆನೆಗಳ ಸಂಖ್ಯೆ ಕಡಿಮೆ. ಇದರಲ್ಲಿ ಶತಮಾನಗಳಷ್ಟು ಹಳೆಯಾದ ಜಯಮಾರ್ತಾಂಡ ಆನೆಯೇ ಅತ್ಯಂತ ಹಿರಿಯ. ಈತನೇ ಅಂಬಾರಿ ಹೊತ್ತ ಮೊದಲಿಗ. ಹಲವಾರು ವರ್ಷ ಮಾರ್ತಾಂಡ ಯಶಸ್ವಿಯಾಗಿ ತನ್ನ ಜವಾಬ್ದಾರಿ ನಿಭಾಯಿಸಿ ಮಹಾರಾಜರ ಪ್ರೀತಿಗೂ ಪಾತ್ರನಾಗಿದ್ದ. ಈಗಲೂ ಅರಮನೆಯ ದೊಡ್ಡ ದ್ವಾರದ (ಜಯಮಾರ್ತಾಂಡ ದ್ವಾರ) ರೂಪದಲ್ಲಿ ಅಜರಾಮರನಾಗಿದ್ದಾನೆ. ಆನಂತರ ವಿಜಯಬಹದ್ದೂರ್, ರಾಮಪ್ರಸಾದ್, ನಂಜುಂಡ, ಐರಾವತ, ಮೋತಿಲಾಲ್, ರಾಜೇಂದ್ರ, ಬಿಳಿಗಿರಿ, ದ್ರೋಣ, ಬಲರಾಮ, ಅರ್ಜುನನ ನಂತರ ಅಭಿಮನ್ಯು ಈ ಸ್ಥಾನ ಅಲಂಕರಿಸಿದ್ದಾನೆ.

    ಕೆಲ ಆನೆಗಳ ಅಕಾಲಿಕ ಮರಣ

    ಇನ್ನು ದಸರೆಯಲ್ಲಿ ಪಾಲ್ಗೊಂಡು ವಿಶ್ವವಿಖ್ಯಾತಿಯಾಗಿದ್ದ ಆನೆಗಳ ಪೈಕಿ ಕೆಲ ಆನೆಗಳು ಅಕಾಲಿಕ ಮರಣಕ್ಕೆ ತುತ್ತಾಗಿ ಕಹಿ ಸುದ್ದಿ ನೀಡಿದ ಘಟನೆಗಳೂ ನಮ್ಮ ಕಣ್ಣಮುಂದಿವೆ. ಹೌದು. ಈ ಹಿಂದೆ ದ್ರೋಣ ಆನೆ ವಿದ್ಯುತ್‌ ದುರಂತದಿಂದ ಸಾವನ್ನಪ್ಪಿತ್ತು. 2023ರಲ್ಲಿ ಎಲ್ಲರ ಮನೆ ಮಾತಾಗಿದ್ದ ಅರ್ಜುನ ಆನೆ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹಾಸನದಲ್ಲಿ ಕಾಡಾನೆ ತಿವಿತದಿಂದ ಸಾವನ್ನಪ್ಪಿತ್ತು. ಕೋಟ್ಯಂತರ ಅಭಿಮಾನಿಗಳು ಅರ್ಜುನನ್ನ ನೆನೆದು ಕಣ್ಣೀರಿಟ್ಟಿದ್ದರು. ಇದೀಗ ಸರ್ಕಾರ ಅರ್ಜುನನ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿಯನ್ನೂ ಘೋಷಣೆ ಮಾಡಿದೆ. ಇದಕ್ಕೆ ಒಂದು ವರ್ಷದ ಮುನ್ನವೇ ಅಂಬಾರಿ ಹೊರುವ ಆನೆಗಳ ಸಾಲಿನಲ್ಲಿದ್ದ ಗೋಪಾಲಕೃಷ್ಣ ಆನೆಯೂ ಅಯ್ಯಪ್ಪ ಎಂಬ ಆನೆ ಜೊತೆಗೆ ಕಾದಾಟ ನಡೆಸಿ ಸಾವನ್ನಪ್ಪಿತ್ತು. ದಸರೆ, ಗಜಪಯಣ ಬಂತೆಂದರೆ, ಆನೆ ಪ್ರಿಯರಿಗೆ ಇದು ಮರೆಯಲಾಗದ ಕಹಿ ಘಟನೆ.

    elephant gopalaswamy

    ಅಭಿಮನ್ಯು ನಂತರದ ಯಜಮಾನ ಯಾರು?

    ದಸರಾ ಪ್ರತಿ ವರ್ಷದ ನಾಡ ಹಬ್ಬ. ಮೈಸೂರು ದಸರಾವೆಂದರೆ ಅದು ಜಂಬೂ ಸವಾರಿಯೂ ಹೌದು. ಅಭಿಮನ್ಯು ನಿವೃತ್ತಿ ನಂತರ ಹಳೆ ತಲೆಮಾರಿನ ಆನೆಗಳ ಕೊಂಡಿ ಮುಗಿಯಲಿದೆ. ಬಳಿಕ ಹೊಸ ತಲೆಮಾರಿನ ಆನೆಗಳದ್ದೇ ಕಾಲ. 2026ರ ನಂತರ ಹೊಸ ಕ್ಯಾಪ್ಟನ್ ಬೇಕೇ ಬೇಕು. ಇದಕ್ಕಾಗಿ ಈಗಿನಿಂದಲೇ ಅರಣ್ಯ ಇಲಾಖೆ ತಯಾರಿಯನ್ನೂ ಮಾಡಿಕೊಂಡಿದೆ. ದಶಕದ ಹಿಂದೆಯಷ್ಟೆ ಸೆರೆ ಸಿಕ್ಕು ನಾಲೈದು ವರ್ಷದಿಂದ ದಸರಾಕ್ಕೆ ಬರುತ್ತಿರುವ ಆನೆಗಳಿಗೂ ಅಂಬಾರಿ ಹೊರುವ ಅವಕಾಶ ಸಿಗಲಿದೆ. ಇದರಲ್ಲಿ ಧನಂಜಯ, ಮಹೇಂದ್ರ, ಭೀಮಾ, ಗೋಪಿ, ಪ್ರಶಾಂತ, ಏಕಲವ್ಯ ಆನೆಗಳಿವೆ. ಇವುಗಳಲ್ಲಿ ಧನಂಜಯ ಇಲ್ಲವೇ ಮಹೇಂದ್ರಗೆ ಮುಂದಿನ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

    ಅಂಬಾರಿ ಆನೆಗಳ ಸಿನಿಮಾ ನಂಟು

    ಹಲವು ಆನೆಗಳು ಅಂಬಾರಿ ಹೊತ್ತು ಹೆಸರುವಾಸಿಯಾಗಿವೆ. ಅಲ್ಲದೇ ಸಿನಿಮಾ ನಂಟನ್ನು ಹೊಂದಿರುವುದು ವಿಶೇಷ. ಹೌದು. ಐರಾವತ ಆನೆಯಂತು ಹಾಲಿವುಡ್‌ ಸಿನಿಮಾದಲ್ಲೇ ನಟಿಸಿ ಸೈ ಎನಿಸಿಕೊಂಡಿದೆ. 1935ರಲ್ಲಿ ತೆರೆ ಕಂಡ ʻದಿ ಎಲಿಫೆಂಟ್‌ ಬಾಯ್‌ʼ ಅನ್ನೋ ಚಿತ್ರದಲ್ಲಿ ನಟಿಸಿದ್ದ. ಇನ್ನೂ ಅಣ್ಣಾವ್ರ ಸೂಪರ್‌ ಹಿಟ್‌ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ರಾಜೇಂದ್ರ ಆನೆ. ಅಣ್ಣಾವ್ರ ಗಂಧದ ಗುಡಿ ಸಿನಿಮಾ ನೋಡುವಾಗೆಲ್ಲ ರಾಜೇಂದ್ರ ಕಣ್ಮುಂದೆ ಬರುತ್ತಾನೆ. ಇನ್ನೂ ಅಭಿಮನ್ಯು ಕೂಡ ವಿಶೇಷ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ದ್ರೋಣ ಆನೆಯೂ ಸ್ಟೋರ್ಡ್‌ ಆಫ್‌ ಟಿಪ್ಪು ಸುಲ್ತಾನ್‌ ಧಾರಾವಾಹಿಯಲ್ಲಿ ಕಾಣಿಸಿಕೊಂಡಿತ್ತು.

    ಹೀಗೆ ಮೈಸೂರು ದಸರಾದ ಮುಕುಟ ಮಣಿಗಳಂತೆ ಕಾಣಿಸಿಕೊಳ್ಳುವ ದಸರಾ ಆನೆಗಳ ಇತಿಹಾಸ ಅವಿಸ್ಮರಣೀಯವಾಗಿದೆ. ಆದ್ರೆ ಅಭಿಮನ್ಯು ನಂತರ ಯಾರಾಗಲಿದ್ದಾರೆ ಅಂಬಾರಿಯ ಸಾರಥಿ ಅನ್ನೋದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

    ಮೋಹನ ಬನ್ನಿಕುಪ್ಪೆ

  • ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌

    ಈ ಮೈಸೂರು ದಸರಾದ ಗಜಪಡೆ – ಅಭಿಮನ್ಯು & ಟೀಂ ಬಗ್ಗೆ ಇಲ್ಲಿದೆ ಫುಲ್‌ ಡಿಟೇಲ್ಸ್‌

    ಹೆಸರು – ಅಭಿಮನ್ಯು (ಗಂಡಾನೆ)
    ತೂಕ – 4700-5000 ಕೆಜಿ
    ಶಿಬಿರ – ಮತ್ತಿಗೋಡು ಆನೆ ಶಿಬಿರ
    ಮಾವುತ – ವಸಂತ ಜೆ.ಎಸ್‌
    ಕಾವಾಡಿ – ರಾಜು ಜೆ.ಕೆ
    ಅಭಿಮನ್ಯು ಆನೆಯನ್ನು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಅಭಿಮನ್ಯುವಿನ ವಿಶೇಷ ಗುಣವೆಂದರೆ, ಕಾಡಾನೆಗಳನ್ನು ಸೆರೆ ಹಿಡಿಯುವ, ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಭಿಮನ್ಯು ಈವರೆಗೆ ಸುಮಾರು 140 ರಿಂದ 150 ಕಾಡಾನೆಗಳನ್ನು, 40 ರಿಂದ 50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ. 2012ರಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2015ರ ವರೆಗೂ ನಾಡಹಬ್ಬ ಮೈಸೂರು ದಸರಾದಲ್ಲಿ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿವರ್ಹಿಸಿದ್ದಾನೆ. ಕಳೆದ 4 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊಂದಿರುವ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದಾನೆ ಅಭಿಮನ್ಯು.

    ಹೆಸರು: ಧನಂಜಯ (ಗಂಡಾನೆ)
    ತೂಕ: 4800-4900 ಕೆಜಿ
    ಶಿಬಿರ: ದುಬಾರೆ ಆನೆ ಶಿಬಿರ
    ಮಾವುತ – ಭಾಸ್ಕರ್ ಜೆ.ಸಿ
    ಕಾವಾಡಿ – ರಾಜಣ್ಣ ಜೆ.ಎಸ್‌
    ಧನಂಜಯ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯವಲಯ ವ್ಯಾಪ್ತಿಯಲ್ಲಿ ಸೆರೆಹಿಡಿಡಿಯಲಾದ ಈ ಆನೆಯು ಅತ್ಯಂತ ಬಲಿಷ್ಠ ಗಜ ಎಂದೇ ಗುರುತಿಸಿಕೊಂಡಿತ್ತು. ಇದೀಗ ಯಶಸ್ವಿಯಾಗಿ ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ 6 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಟ್ಟದ ಆನೆಯಾಗಿ ಪಾಲ್ಗೊಳ್ಳುತ್ತಿದೆ.

    ಹೆಸರು: ರೋಹಿತ್‌ (ಗಂಡಾನೆ)
    ತೂಕ: 3000-3200 3.29.
    ಶಿಬಿರ: ರಾಮಪುರ ಆನೆ ಶಿಬಿರ
    ಮಾವುತ: ಸೈಯದ್ ಉಸ್ಮಾನ್
    ಕಾವಾಡಿ: ಮಾದು
    ರೋಹಿತ್ ಆನೆಯನ್ನು 2001 ರಲ್ಲಿ ಹೆಡಿಯಾಲ ಅರಣ್ಯ ಪ್ರದೇಶದಲ್ಲಿ 6 ತಿಂಗಳ ಮರಿಯಾಗಿದ್ದಾಗ ಸೆರೆ ಹಿಡಿಯಲಾಯಿತು. ಪ್ರಸ್ತುತ ಆರೋಗ್ಯವಾಗಿದ್ದು, ಕಳೆದ ವರ್ಷದಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ. 2019ರಲ್ಲಿ ರೋಹಿತ್‌ ಹೆಚ್ಚುವರಿ ಆನೆಯಾಗಿ, 2ನೇ ತಂಡದಲ್ಲಿ ಆಗಮಿಸಬೇಕಿತ್ತು. ಆದ್ರೆ ಕಾರಣಾಂತರಗಳಿಂದ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತವಾಯಿತು. ಇದಾದ 4 ವರ್ಷಗಳ ನಂತರ ಅಂದ್ರೆ 2023ರಿಂದ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು.

    ಹೆಸರು: ಹಿರಣ್ಯ (ಹೆಣ್ಣಾನೆ)
    ತೂಕ: 2800-3000 ಕೆಜಿ
    ಶಿಬಿರ: ರಾಮಪುರ ಆನೆ ಶಿಬಿರ
    ಮಾವುತ: ಶಫಿವುಲ್ಲಾ
    ಕಾವಾಡಿ: ಮನ್ಸೂರ್‌
    ಹಿರಣ್ಯ ಆನೆಯನ್ನು 2021 ರಲ್ಲಿ ಕೊಡಗಿನ ಆನೆ ಮನೆ ಫೌಂಡೇಶನ್‌ ಇವರಿಂದ ಇಲಾಖಾ ವಶಕ್ಕೆ ಪಡೆದಿದ್ದು ರಾಮಪುರ ಆನೆ ಶಿಬಿರದಲ್ಲಿರುತ್ತದೆ. ಕಳೆದ ವರ್ಷದ ದಸರಾ ಮಹೋತ್ಸವದಲ್ಲಿ ಗುರುತಿಸಿಕೊಂಡಿದ್ದ ಹಿರಣ್ಯ, ಈ ಬಾರಿಯೂ ದಸರಾ ಉತ್ಸವದಲ್ಲಿ ಪಾಲ್ಗೊಂಡಿದೆ.

    ಹೆಸರು: ದೊಡ್ಡಹರವೆ ಲಕ್ಷ್ಮೀ
    ತೂಕ: 3000-3500 ಕೆಜಿ
    ಶಿಬಿರ: ದೊಡ್ಡಹರವೆ ಆನೆ ಶಿಬಿರ
    ಮಾವುತ: ರವಿ
    ಕಾವಾಡಿ: ಮಂಜುನಾಥ್
    ಈ ಆನೆಯು ದೊಡ್ಡಹರವೆ ಆನೆ ಶಿಬಿರದಲ್ಲಿದ್ದು, ಕಳೆದ 2 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ‌

    ಹೆಸರು: ಏಕಲವ್ಯ (ಗಂಡಾನೆ)
    ತೂಕ: 4000-4200 ಕೆಜಿ
    ಶಿಬಿರ: ಮತ್ತಿಗೋಡು ಆನೆ ಶಿಬಿರ
    ಮಾವುತ: ಸೃಜನ್‌
    ಕಾವಾಡಿ: ಇದಾಯತ್‌
    ಏಕಲವ್ಯ ಆನೆಯನ್ನು 2022 ರಲ್ಲಿ ಮೂಡಿಗೆರೆ ಅರಣ್ಯ ಪ್ರದೇಶದಲ್ಲಿ ಸರೆಹಿಡಿಯಲಾಗಿದ್ದು, ವಾಹನ ಹಾಗೂ ಪಟಾಕಿಗಳ ಶಬ್ದಗಳಿಗೆ ಅಂಜುವುದಿಲ್ಲ. ಮೊದಲನೇ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

    ಹೆಸರು: ಸುಗ್ರೀವ (ಗಂಡಾನೆ)
    ತೂಕ: 4800-5000
    ಶಿಬಿರ: ದುಬಾರೆ ಆನೆ ಶಿಬಿರ
    ಮಾವುತ: ಜೆ.ಜಿ ಶಂಕರ್‌
    ಕಾವಾಡಿ: ಅನಿಲ್‌ ಜೆ.ಆರ್‌
    ಸುಗ್ರೀವ ಆನೆಯನ್ನು 2016 ರಲ್ಲಿ ಕೊಡಗಿನ ಕುಶಲಾನಗರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಪ್ರಸ್ತುತ ಆರೋಗ್ಯವಾಗಿರುತ್ತದೆ. ಕಳೆದ ಎರಡು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಸಹ ಪಾಲ್ಗೊಂಡಿದೆ.

    ಹೆಸರು: ಪ್ರಶಾಂತ (ಗಂಡಾನೆ)
    ತೂಕ: 4700-4900 ಕೆಜಿ
    ಶಿಬಿರ: ದುಬಾರೆ
    ಮಾವುತ: ಜೆ.ಎ ಬಿನ್ನಪ್ಪ
    ಕಾವಾಡಿ: ಚಂದ್ರ
    ಪ್ರಶಾಂತ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಹುಲಿ ಮತ್ತು ಆನೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಕಳೆದ 14 ವರ್ಷ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುತ್ತದೆ.

    ಹೆಸರು: ಕಂಜನ್‌ (ಗಂಡಾನೆ)
    ತೂಕ: 4000-4200
    ಶಿಬಿರ: ದುಬಾರೆ
    ಮಾವುತ: ಜೆ.ಡಿ ವಿಜಯ
    ಕಾವಾಡಿ: ಕಿರಣ
    ಕಂಜನ್ ಆನೆಯನ್ನು 2014ರಲ್ಲಿ ಹಾಸನ ಜಿಲ್ಲೆಯ ಯಸಳೂರು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಹಾಸನದ ಹಾಲೂರು ಸೇರಿದಂತೆ ವಿವಿಧೆಡೆ ಉಪಟಳ ನೀಡುತ್ತಿದ್ದ ಆನೆಗಳಲ್ಲಿ ಕಂಜನ್‌ ಸಹ ಒಂದಾಗಿತ್ತು. 14-15ನೇ ವಯಸ್ಸಿಗೆ ಪುಂಡಾಟಿಕೆ ಮೆರೆಯುತ್ತಿದ್ದ ಗಂಡಾನೆಯನ್ನು ಸೆರೆ ಹಿಡಿದು ದುಬಾರೆ ಕ್ಯಾಂಪ್‌ನಲ್ಲಿಟ್ಟು ಪಳಗಿಸಲಾಯಿತು, 2ನೇ ವರ್ಷದಲ್ಲೇ ಮಾವುತ, ಕವಾಡಿಗಳ ಹಿಡಿತಕ್ಕೆ ಬಂದ ಕಂಜನ್‌, ಹುಲಿ ಮತ್ತು ಆನೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಸಾಲಿನ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.

    ಹೆಸರು: ಭೀಮ (ಗಂಡಾನೆ)
    ತೂಕ: 4300-4500 ಕೆಜಿ
    ಶಿಬಿರ: ಮತ್ತಿಗೋಡು
    ಮಾವುತ: ಗುಂಡ
    ಕಾವಾಡಿ: ನಂಜುಂಡಸ್ವಾಮಿ
    ಭೀಮ ಆನೆಯನ್ನು 2000ರಲ್ಲಿ ಭೀಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಸದರಿ ಆನೆಯನ್ನು ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. 2017ನೇ ಸಾಲಿನ ದಸರಾ ಮಹೋತ್ಸವದಲ್ಲಿ ಸಾಲಾನೆಯಾಗಿ ಹಾಗೂ 2022 ರಿಂದ ಪಟ್ಟದಾನೆಯಾಗಿ ಪಾಲ್ಗೊಂಡಿದ್ದು, ಈ ಬಾರಿಯೂ ಸಹ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

    ಹೆಸರು: ಮಹೇಂದ್ರ (ಗಂಡಾನೆ)
    ತೂಕ: 4000-4600 ಕೆಜಿ
    ಶಿಬಿರ: ಮತ್ತಿಗೋಡು
    ಮಾವುತ: ರಾಜಣ್ಣ
    ಕಾವಾಡಿ: ಮಲ್ಲಿಕಾರ್ಜುನ
    ಮಹೇಂದ್ರ ಆನೆಯನ್ನು 2018 ರಲ್ಲಿ ರಾಮನಗರ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ಈ ಆನೆಯು ಕಾಡಾನೆ ಮತ್ತು ಹುಲಿಗಳನ್ನು ಸೆರಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದೆ. ಕಳೆದ 2 ವರ್ಷಗಳಿಂದ ಶ್ರೀರಂಗಪಟ್ಟಣ ಗ್ರಾಮೀಣ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿ ಭಾಗಿಯಾಗಿರುತ್ತದೆ. ಈ ಬಾರಿಯೂ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

    ಹೆಸರು: ಲಕ್ಷ್ಮಿ
    ತೂಕ: 2400-2500 ಕೆಜಿ
    ಶಿಬಿರ: ರಾಮಪುರ ಆನೆ ಶಿಬಿರ
    ಮಾವುತ: ಚಂದ್ರ
    ಕಾವಾಡಿ: ಕೃಷ್ಣಮೂರ್ತಿ
    ತಾಯಿ ಆನೆಯಿಂದ ಬೇರ್ಪಟ್ಟ ಲಕ್ಷ್ಮಿ ಆನೆಯು 2002ನೇ ಇಸವಿಯಲ್ಲಿ ದೊರಕಿತು. ಇಲಾಖಾ ಆನೆ ಶಿಬಿರದಲ್ಲಿ ಆರೈಕೆ ಮಾಡಲಾಗಿರುತ್ತದೆ. ಕಳೆದ 3 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದು, ಈ ಬಾರಿಯ ದಸರಾ ಆನೆಯಲ್ಲಿ ಒಂದಾಗಿದೆ.

    ಹೆಸರು: ಗೋಪಿ (ಗಂಡಾನೆ)
    ತೂಕ: 4900-5000 ಕೆಜಿ
    ಶಿಬಿರ: ದುಬಾರೆ
    ಮಾವುತ: ಪಿ.ಬಿ ನವೀನ್‌
    ಕಾವಾಡಿ: ಜೆ.ಆರ್‌ ಶಿವು
    ಗೋಪಿ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿರುತ್ತದೆ. ಈ ಆನೆಯು ದುಬಾರೆ ಆನೆ ಶಿಬಿರದಲ್ಲಿದ್ದು, 13 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಭಾಗವಹಿಸಿದೆ. 2015 ರಿಂದ ಪಟ್ಟದ ಆನೆಯಾಗಿ ಅರಮನೆ ಪೂಜಾ ವಿಧಿ-ವಿಧಾನಗಳಲ್ಲಿ ಭಾಗವಹಿಸುತ್ತಿದೆ.

  • Mysuru Dasara | ಮೊದಲಿಂದಲೂ ಧನಂಜಯ – ಕಂಜನ್ ನಡುವೆ ಜಗಳವಿದೆ, ಮೊದಲೂ ಅಲ್ಲ ಕೊನೆಯೂ ಅಲ್ಲ: ಡಿಸಿಎಫ್

    Mysuru Dasara | ಮೊದಲಿಂದಲೂ ಧನಂಜಯ – ಕಂಜನ್ ನಡುವೆ ಜಗಳವಿದೆ, ಮೊದಲೂ ಅಲ್ಲ ಕೊನೆಯೂ ಅಲ್ಲ: ಡಿಸಿಎಫ್

    ಮೈಸೂರು: ವಿಶ್ವವಿಖ್ಯಾತ ದಸರಾ ಗಜಪಡೆಯ (Mysuru Dasara Elephants) ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್ ಆನೆ ದಿಕ್ಕೇ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ. ಘಟನೆ ಕುರಿತು ಪಬ್ಲಿಕ್‌ ಟಿವಿ ಜೊತೆಗೆ ಡಿಸಿಎಫ್‌ ಪ್ರಭುಗೌಡ (DCF Prabhugowda) ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ.

    ಈ ಎರಡು ಆನೆಗಳು ಒಂದೇ ಶಿಬಿರದ ಆನೆಗಳು. ಅಲ್ಲೂ ಕೂಡ ಆಗಾಗ ಇವು ಜಗಳ ಆಡುತ್ತವೆ. ಅದೇ ಜಗಳ ಇಲ್ಲೂ ಮುಂದುವರಿದಿದೆ. ಊಟಕ್ಕೆ ಬಂದ ವೇಳೆ ಧನಂಜಯ, ಕಂಜನ್‌ ಮೇಲೆ ಗಲಾಟೆ ಶುರು ಮಾಡಿದ, ಆಗ ಕಂಜನ್ ಆನೆ ಮಾವುತ ಕೆಳಗೆ ಬಿದ್ದ. ನಂತರ ಧನಂಜಯ ಆನೆ ಆರ್ಭಟ ಹೆಚ್ಚಾಯ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಧನಂಜಯ ಮತ್ತು ಕಂಜನ್ ದುಬಾರೆ ಶಿಬಿರದ ಆನೆಗಳು. ಆನೆಗಳ ನಡುವಿನ ಫೈಟ್ ಇದೇ ಮೊದಲಲ್ಲ, ಕೊನೆಯೂ ಅಲ್ಲ. ಈ ಎರಡು ಆನೆಗಳು ದುಬಾರೆ ಆನೆ ಶಿಬಿರದಲ್ಲೂ ಇದೇ ರೀತಿ ಪದೇ ಪದೇ ಜಗಳವಾಡುತ್ತವೆ. ಒಂದು ಬಾರಿ ಕಂಜನ್ ಆನೆ ಧನಂಜಯ ಆನೆ ಮೇಲೆ ಅಟ್ಯಾಕ್ ಮಾಡಿದರೆ ಮತ್ತೊಂದು ಬಾರಿ ಧನಂಜಯ, ಕಂಜನ್ ಮೇಲೆ ಅಟ್ಯಾಕ್ ಮಾಡ್ತಾನೆ. ಅಲ್ಲದೇ ಗಂಡಾನೆಗಳು ಆಗಾಗ್ಗೆ ಶೌರ್ಯ ಪ್ರದರ್ಶನ ಮಾಡೋದು, ತುಂಟಾಟ ಆಡೋದು ಕಾಮನ್‌, ಅವರಲ್ಲವನ್ನೂ ಕಂಟ್ರೋಲ್‌ ಮಾಡುವ ಸಾಮರ್ಥ್ಯ ನಮ್ಮ ಮಾವುರಿಗೆ ಇದೆ ಎಂದು ಹೇಳಿದ್ದಾರೆ.

    ನಿನ್ನೆ ಬ್ಯಾರಿಕೇಡ್‌ ಓಪನ್‌ ಇದ್ದ ಕಾರಣ ಕಂಜನ್‌ ಅದನ್ನ ತಳ್ಳಿಕೊಂಡು ಹೋಗಿದ್ದಾನೆ. ಹೊರಗೆ ಜನಸಮೂಹ ನೋಡಿದ ಕೂಡಲೇ ತಣ್ಣಗಾಗಿದ್ದಾನೆ. ಅಷ್ಟರಲ್ಲಿ ನಮ್ಮ ಮಾವುತರು ಕಂಟ್ರೋಲ್‌ ಮಾಡಿದ್ದಾರೆ. ಕಂಜನ್‌ ಆನೆ ಓಡುವ ಸ್ಪೀಡ್‌ಗೆ ಮಾವುತ ಜಿಗಿದೇ ಬಿಟ್ಟ. ಆದ್ರೆ ಧನಂಜಯ ಆನೆ ಮಾವುತನ ಧೈರ್ಯ ಮೆಚ್ಚಲೇಬೇಕು. ಆನೆ ಓಡಿದರೂ ಅದರ ಮೇಲೆ ಕುಳಿತು ಕಂಟ್ರೋಲ್‌ ಮಾಡುವ ಕೆಲಸ ಮಾಡಿಲ್ಲ. ದೇವರ ದಯೆಯಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಜನ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: Manipur | ಸಚಿವರ ಆಪ್ತ ಸಹಾಯಕನೇ ಕಿಡ್ನ್ಯಾಪ್‌ – ದುಷ್ಕರ್ಮಿಗಳ ಗುಂಪಿಗೆ ತೀವ್ರ ಶೋಧ

    ಏನಾಗಿತ್ತು?
    ವಿಶ್ವವಿಖ್ಯಾತ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ. ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ. ‘ಮಹೇಂದ್ರ’ ಆನೆಯು ಕಂಜನ್‌ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು.

    ದಸರಾದಲ್ಲಿ 18 ಆನೆಗಳು ಭಾಗಿ:
    ಈ ಬಾರಿ ದಸರಾದಲ್ಲಿ 14 ಆನೆಗಳು ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಸಿಖ್ಖರ ವಿರುದ್ಧ ಹೇಳಿಕೆಗೆ ತೀವ್ರ ಆಕ್ಷೇಪ – ರಾಹುಲ್‌ ಗಾಂಧಿ ವಿರುದ್ಧ 3 ಎಫ್‌ಐಆರ್‌

  • Mysuru | ದಸರಾ ಆನೆಗಳ ನಡುವೆ ಗುದ್ದಾಟ – ದಿಕ್ಕಾಪಾಲಾಗಿ ಓಡಿದ ಜನ

    Mysuru | ದಸರಾ ಆನೆಗಳ ನಡುವೆ ಗುದ್ದಾಟ – ದಿಕ್ಕಾಪಾಲಾಗಿ ಓಡಿದ ಜನ

    ಮೈಸೂರು: ವಿಶ್ವವಿಖ್ಯಾತ ದಸರಾ ಗಜಪಡೆಯ (Mysuru Dasara Elephants) ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ಮಾಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಗೆ ತತ್ತರಿಸಿದ ಕಂಜನ್‌ ಆನೆ ದಿಕ್ಕೆ ಕಾಣದಂತೆ ಅರಮನೆ ಆವರಣದಿಂದ ಹೊರ ಓಡಿದ್ದಾನೆ.

    ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನು ಬಿಡಿಸಿಕೊಂಡು ಅರಮನೆಯಾಚೆಗೆ ಬಂದಿರುವ ಹಾಗೂ ಅವನನ್ನು ಹಿಡಿದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ಸೆರೆಯಾಗಿವೆ. ‘ಮಹೇಂದ್ರ’ ಆನೆಯು ಕಂಜನ್‌ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿತು. ಜನರು ಆನೆ ಓಡಿಬರುವುದನ್ನು ನೋಡಿ ದಿಕ್ಕಾಪಾಲಾಗಿ ಓಡಿದರು.

    ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತನು. ಮಾವುತರು ಕಾವಾಡಿಗರು ಸಮಾಧಾನ ಪಡಿಸಿದರು. ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯು ರಾತ್ರಿ 8ರ ಸುಮಾರು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌- ಹಿಜ್ಬುಲ್ಲಾ ಟಾಪ್‌ ಕಮಾಂಡರ್‌ ಹತ್ಯೆ

    ವೀಡಿಯೋ ಮಾಡಿದ ಪ್ರತ್ಯಕ್ಷದರ್ಶಿ ಏನಂತಾರೆ?
    ಅರಮನೆ ಆವರಣದ ಒಳಗೆ ಇದ್ದ ದಸರಾ ಆನೆ ಧನಂಜಯ ಏಕಾಏಕಿ ಮತ್ತೊಂದು ಆನೆ ಕಂಜನ್‌ ಮೇಲೆ ದಾಳಿ ಮಾಡಿ ಅಟ್ಟಾಡಿಸುವ ವೀಡಿಯೋ ತೆಗೆದಿದ್ದು ಅರಮನೆಯ ಗೈಡ್ ಯೋಗೇಶ್. ಇನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ದಸರಾದಲ್ಲಿ 18 ಆನೆಗಳು ಭಾಗಿ:
    ಈ ಬಾರಿ ದಸರಾದಲ್ಲಿ 14 ಆನೆಗಳು ಸಕ್ರಿಯವಾಗಿ ಭಾಗಿಯಾಗುತ್ತಿವೆ. ಇನ್ನು ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಇನ್ನೂ ಓದಿ: 6 ರನ್‌ ಹೊಡೆದು ಭಾರತದ ಪರ ವಿಶಿಷ್ಟ ಸಾಧನೆ ನಿರ್ಮಿಸಿ ಸಚಿನ್‌, ಪಾಂಟಿಂಗ್‌ ಕ್ಲಬ್‌ ಸೇರಿದ ಕೊಹ್ಲಿ

  • Mysuru Dasara 2024 | 2ನೇ ತಂಡದ 5 ಆನೆಗಳು ಕಾಡಿನಿಂದ ನಾಡಿಗೆ

    Mysuru Dasara 2024 | 2ನೇ ತಂಡದ 5 ಆನೆಗಳು ಕಾಡಿನಿಂದ ನಾಡಿಗೆ

    ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2024) ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 2ನೇ ತಂಡದ 5 ಆನೆಗಳು ಗುರುವಾರ ಕಾಡಿನಿಂದ ನಾಡಿಗೆ ಹೊರಟಿವೆ.

    ಈ ಬಾರಿಯೂ ಅಭಿಮನ್ಯು ಕ್ಯಾಪ್ಟನ್‌ ಆಗಿದ್ದು, ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿ ಹೊರಲಿದ್ದಾನೆ. ಅಭಿಮನ್ಯು (Abhimanyu Elephant) ತಂಡಕ್ಕೆ ಗುರುವಾರ (ಇಂದು) ಮಹೇಂದ್ರ, ಸುಗ್ರೀವ, ಹಿರಣ್ಯ, ಲಕ್ಷ್ಮಿ ಮತ್ತು ಪ್ರಶಾಂತ ಆನೆಗಳು ಸೇರ್ಪಡೆಯಾಗಲಿವೆ. ಇದನ್ನೂ ಓದಿ: ರಾಜಮನೆತನ, ಸರ್ಕಾರ ಮಧ್ಯೆ ನಿಲ್ಲದ ಚಾಮುಂಡಿ ಪ್ರಾಧಿಕಾರ ಸಂಘರ್ಷ – ಮೊದಲ ಸಭೆಯಲ್ಲಿ ಏನೇನು ಚರ್ಚೆಯಾಗಿದೆ?

    ವೀರನಹೊಸಹಳ್ಳಿಯಲ್ಲಿ ಆ.21ರಂದು ವಿದ್ಯುಕ್ತವಾಗಿ ಆನೆಗಳಿಗೆ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿತ್ತು. ಮೊದಲ ತಂಡದಲ್ಲಿ ಅಭಿಮನ್ಯು, ಗೋಪಿ, ಭೀಮ, ಧನಂಜಯ, ರೋಹಿತ, ಏಕಲವ್ಯ ಕಂಜನ್, ವರಲಕ್ಷ್ಮಿ ಮತ್ತು ದೊಡ್ಡ ಹರವೆ ಆನೆ ಶಿಬಿರದ ಲಕ್ಷ್ಮಿ ಆನೆಗಳು ಮೈಸೂರಿಗೆ ಆಗಮಿಸಿದ್ದವು. ಇದನ್ನೂ ಓದಿ: ಮುಡಾ ಸಂಕಷ್ಟದ ಹೊತ್ತಲ್ಲೇ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಸಿಎಂ

    ಸೆ.5ರ ಸಂಜೆ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದು, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಹಿಂದಿನ ಆಯುಕ್ತರ ಅಮಾನತು ಆದೇಶವೇ ಸರ್ಕಾರಕ್ಕೆ ಸುಸೈಡ್ ನೋಟ್: ಶಾಸಕ ಶ್ರೀವತ್ಸ

    ಗಜಪಡೆಗೆ ಮರಳು ಮೂಟೆ ತಾಲೀಮು:
    ಈಗಾಗಲೆ ಅರಮನೆ ಅಂಗಳದಲ್ಲಿರುವ ಮೊದಲ ಬ್ಯಾಚ್‌ನ ಆನೆಗಳಿಗೆ ಮರಳು ಮೂಟೆ ಹೊರುವ ತಾಲೀಮು ನೀಡಲಾಗುತ್ತಿದೆ. ಅರಮನೆಯಿಂದ ಸಯ್ಯಾಜೀರಾವ್ ರಸ್ತೆ, ಆಯುವೇರ್ದಿಕ್ ವೃತ್ತದ ಮೂಲಕ ಜಂಬೂ ಬಜಾರ್ ತಲುಪಿ ಹೈವೇ ಸರ್ಕಲ್ ಮೂಲಕ ದಸರಾ ಗಜಪಡೆ ಬನ್ನಿಮಂಟಪ ತಲುಪಲಿವೆ. ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ ತಾಲೀಮು ನಡೆಯುತ್ತಿದೆ.

  • ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಣ್ಯ ಇಲಾಖೆ ಭರದ ಸಿದ್ಧತೆ – 18 ಆನೆಗಳು ಗುರುತು

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅರಣ್ಯ ಇಲಾಖೆ ಭರದ ಸಿದ್ಧತೆ – 18 ಆನೆಗಳು ಗುರುತು

    ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ (Mysuru Dasara 2024) ಅರಣ್ಯ ಇಲಾಖೆಯ ಸಿದ್ಧತೆ ಭರದಿಂದ ಸಾಗುತ್ತಿದೆ. ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ (Forest Department) ನಿರತವಾಗಿದ್ದು, ದಸರಾ ಮಹೋತ್ಸವದ ಕೇಂದ್ರ ಬಿಂದುವಾಗಿ 18 ಆನೆಗಳನ್ನ (Elephant) ಗುರುತಿಸಲಾಗಿದೆ ಅಂತ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ದಸರಾ ಮಹೋತ್ಸವದ 2 ತಿಂಗಳ ಮುಂಚಿತವಾಗಿ ಗಜಪಡೆ (Gajapade) ಮೈಸೂರಿಗೆ ಆಗಮಿಸಲಿದೆ. ಆಗಸ್ಟ್ 9 ಅಥವಾ 11ಕ್ಕೆ ಗಜಪಯಣಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಸಾಕಾನೆಗಳ ಅಯ್ಕೆಯಾದ ಹಿನ್ನೆಲೆಯಲ್ಲಿ ದುಬಾರೆ ಶಿಬಿರದ ಮಾವುತರು ಹಾಗೂ ಕವಾಡಿಗಳು ಚಾಮುಂಡೇಶ್ವರಿ ತಾಯಿ ಸೇವೆ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಮುಡಾ ಅಕ್ರಮ ಕೇಸ್‌: ಚರ್ಚೆಗೆ ಅವಕಾಶ ಇಲ್ಲವೆಂದು ಸ್ಪೀಕರ್ ರೂಲಿಂಗ್ – ವಿಧಾನಸಭೆಯಲ್ಲಿ ಗದ್ದಲ, ಮಾತಿನ ಚಕಮಕಿ

    ನಾಡಹಬ್ಬ ದಸರೆಯ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಪೂರ್ಣಗೊಳಿಸಿದ್ದು, ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ 5 ಕಾಡಾನೆಗಳು ಆಯ್ಕೆಯಾಗಿವೆ. ಧನಂಜಯ, ಗೋಪಿ, ಕಂಜನ್, ಸುಗ್ರೀವ ಮತ್ತು ಪ್ರಶಾಂತ್ ಆನೆಗಳು ಆಯ್ಕೆಯಾಗಿವೆ. ಆನೆಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಇಲಾಖೆಯ ತಜ್ಞರ ತಂಡ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಆನೆಯ ಶಿಬಿರಗಳಿಗೆ ತೆರಳಿ ಅವುಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಗಮನಿಸಿ ಆಯ್ಕೆ ಪ್ರಕ್ರಿಯೆ ಮಾಡಿದೆ. ಆದರೆ ಈ ಪಟ್ಟಿಯನ್ನು ಮೇಲಾಧಿಕಾರಿಗಳ ಒಪ್ಪಿಗೆಯ ನಂತರ ಆನೆಗಳ ಅಂತಿಮ ಪಟ್ಟಿ ಆಯಾ ಶಿಬಿರ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಗೆ ಕಳುಹಿಸಲು ಇಲಾಖೆ ನಿರ್ಧರಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಇನ್ನೂ ಈ ಬಾರಿ ಆನೆಗಳಿಗೆ ಹೆಚ್ಚಿನ ತರಬೇತಿ ನೀಡಲು ಇಲಾಖೆ ನಿರ್ಧರಿಸಿದೆ. ಹೀಗಾಗಿ 60 ದಿನಗಳ ಮುಂಚಿತವಾಗಿ ಆನೆಗಳನ್ನು ಕರೆತರಲು ಗಜಪಯಣ ಆಗಸ್ಟ್ 2ನೇ ವಾರದಲ್ಲಿ ಮೈಸೂರಿನತ್ತ ಹೊರಡಲಿದೆ. ಇದನ್ನೂ ಓದಿ: ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್ ಪ್ಲಾಟ್ ಫಾರ್ಮ್ ಪರಿಚಯಿಸಿದ ಆಸ್ಟರಿಯಾ

    ಜೊತೆಗೆ ಎರಡು ಹಂತದಲ್ಲಿ ಗಜಪಯಣ ಸಾಗಲಿದೆ. ಒಂದೆಡೆ ಈಗಾಗಲೇ ಆನೆಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದರೆ ಮತ್ತೊಂದೆಡೆ ದಸರಾಕ್ಕೆ ತೆರಳುವ ಖುಷಿಯಲ್ಲಿ ಆನೆ ಆಯ್ಕೆಯಾಗುವ ಮಾವುತರು ಇದ್ದಾರೆ. ಹಲವು ಬಾರಿ ಪಟ್ಟದ ಆನೆಯಾಗಿ ಕಾರ್ಯ ನಿರ್ವಹಿಸಿರುವ ಧನಂಜಯ ಆನೆಯ ಮಾವುತ ಭಾಸ್ಕರ್ ತೀವ್ರ ಸಂತಸ ವ್ಯಕ್ತಪಡಿಸಿದ್ದು ದಸರಾಕ್ಕೆ ತೆರಳಿ ಅಲ್ಲಿ ತಾಯಿ ಚಾಮುಂಡೇಶ್ವರಿ ಸೇವೆ ಮಾಡುವುದೇ ದೊಡ್ಡ ಸೌಭಾಗ್ಯ. ಅದಕ್ಕಾಗಿ ಕಾತರರಾಗಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಒಲಿಂಪಿಕ್ಸ್‌ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌!