ಬೆಂಗಳೂರು/ನವದೆಹಲಿ: ಕಳೆದ ಒಂದೂವರೆ ಎರಡು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ನವೆಂಬರ್ ಮಹಾಕ್ರಾಂತಿಯ ಚರ್ಚೆ ಆಗ್ತಲೇ ಇದೆ. ನವೆಂಬರ್ ಆರಂಭಕ್ಕೆ ಬಾಕಿ ಇರೋದು ಇನ್ನೆರಡೇ ದಿನ. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯೋ? ಸಂಪುಟ ಪುನಾರಚನೆಯೋ? ಅನ್ನೋ ಕುತೂಹಲ ಹೆಚ್ಚುತ್ತಲೇ ಇದೆ. ಈ ನಡುವೆಯೇ ದಲಿತ ಸಮಾವೇಶ ಅಸ್ತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ.
ಸಮಾವೇಶ ನಡೆಸುವುದಿದ್ದರೆ, ಹಾಸನ ಸಮಾವೇಶ ಮಾಡಲ್ ಅನುಸರಿಸುವಂತೆ ಎಐಸಿಸಿ ಸೂಚನೆ ನೀಡಿದೆ. ಜೊತೆಗೆ ದಲಿತ ಸಮಾವೇಶ ನಡೆಸುವುದಾದರೆ ನಡೆಸಿ, ಆದ್ರೆ ಪಕ್ಷದ ವೇದಿಕೆಯಲ್ಲಿ, ಪಕ್ಷದ ಬ್ಯಾನರ್ ನಲ್ಲೇ ನಡೆಸಿ ಅಂತ ಹೇಳಿದೆ. ಈ ಬಗ್ಗೆ ಪರಮೇಶ್ವರ್ ಸೇರಿದಂತೆ ದಲಿತ ಸಚಿವರಿಗೆ ಹೈಕಮಾಂಡ್ ನಿಂದ ನೇರ ಸಂದೇಶ ರವಾನೆ ಮಾಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಹಾಸನ ಸಮಾವೇಶವನ್ನ ಹೇಗೆ ಪಕ್ಷದ ವೇದಿಕೆಯಲ್ಲಿ ಮಾಡಲಾಯ್ತೋ ಅದೇ ರೀತಿ ದಲಿತ ಸಮಾವೇಶವೂ ಪಕ್ಷದ ವೇದಿಕೆಯಲ್ಲಿ ಆಯೋಜಿಸಿ. ಅಗತ್ಯವಿದ್ದರೆ ಎಐಸಿಸಿಯಿಂದಲೇ ಸಮಾವೇಶ ಆಯೋಜನೆಗೆ ಪದಾಧಿಕಾರಿಗಳನ್ನ ನೇಮಕ ಮಾಡುತ್ತೇವೆ ಎಂದು ಹೇಳಿದೆ. ಈ ಮೂಲಕ ಪ್ರತ್ಯೇಕ ಶಕ್ತಿ ಪ್ರದರ್ಶನಕ್ಕೆ ಮುಂದಾದ ದಲಿತ ಸಚಿವರಿಗೆ ಹೈಕಮಾಂಡ್ ಮೂಗುದಾರ ಹಾಕಿದೆ.

