Tag: ದರ ಇಳಿಕೆ

  • ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 41 ರೂ. ಇಳಿಕೆ

    ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 41 ರೂ. ಇಳಿಕೆ

    -ಬೆಂಗಳೂರಿನಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,836 ರೂ.

    ನವದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ವಾಣಿಜ್ಯ ಬಳಕೆಯ (Commercial Use) 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ಗಳ (LPG  Cylinder) ಬೆಲೆ 41 ರೂ. ಇಳಿಕೆಯಾಗಿದೆ.

    ಇಂದಿನಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತಿದ್ದು, ಹಣಕಾಸು ನಿಯಮಗಳು, ದರ ಏರಿಕೆ, ಬ್ಯಾಂಕಿಂಗ್ ವಲಯಗಳಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಇದರ ಜೊತೆಗೆ ತೈಲ ಕಂಪನಿಗಳು 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 41 ರೂ. ಇಳಿಸಿದೆ. ಹೊಸ ಬೆಲೆ ಏ.2 ಅಂದರೆ ನಾಳೆಯಿಂದ ಜಾರಿಯಾಗಲಿದೆ.ಇದನ್ನೂ ಓದಿ:ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಸಾಧ್ಯತೆ

    ಇದಕ್ಕೂ ಮೊದಲು, ಫೆ.1ರಂದು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 7 ರೂ. ಇಳಿಕೆ ಮಾಡಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಸಿಲಿಂಡರ್‌ಗಳ ಬೆಲೆಯನ್ನು 62 ರೂ.ಗೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 41 ರೂ. ಇಳಿಕೆ ಮಾಡಲಾಗಿದೆ. ಹೊಸ ಬೆಲೆಯಿಂದಾಗಿ ರೆಸ್ಟೋರೆಂಟ್, ಹೋಟೆಲ್ ಮತ್ತು ವಾಣಿಜ್ಯ ಘಟಕಗಳಿಗೆ ಪ್ರಯೋಜನವಾಗಲಿದ್ದು, ಆದರೆ ದಿನಬಳಕೆಯ ಸಿಲಿಂಡರ್‌ನ ಬೆಲೆ ಬದಲಾಗದೆ ಉಳಿದಿದೆ.

    ದರ ಇಳಿಕೆಯ ಬಳಿಕ, ದೆಹಲಿಯಲ್ಲಿ 1,803 ರೂ. ಇದ್ದ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು 1,762 ರೂ.ಗೆ ಇಳಿದಿದೆ. ಬೆಂಗಳೂರಿನಲ್ಲಿ 1,836 ರೂ., ಮುಂಬೈನಲ್ಲಿ 1,714 ರೂ., ಕೋಲ್ಕತ್ತಾದಲ್ಲಿ 1,872 ರೂ., ಚೆನ್ನೈನಲ್ಲಿ 1,924 ರೂ.ಗೆ ಕಡಿಮೆಯಾಗಿದೆ.ಇದನ್ನೂ ಓದಿ:ರಾಜಸ್ಥಾನದಲ್ಲಿ ‘ಡೆವಿಲ್’ ಚಿತ್ರೀಕರಣ ಮುಗಿಸಿದ ದರ್ಶನ್- ನಾಳೆ ಬೆಂಗಳೂರಿನತ್ತ ಚಿತ್ರತಂಡ

  • ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198 ರೂ. ಇಳಿಕೆ

    ಇಂದಿನಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198 ರೂ. ಇಳಿಕೆ

    ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ದರ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 198 ರೂಪಾಯಿ ಕಡಿಮೆ ಮಾಡಲಾಗಿದೆ.

    ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2021 ರೂ. ಆಗಿದೆ. ಈ ಮುನ್ನ 19 ಕೆಜಿ ಎಲ್‍ಪಿಜಿ ಸಿಲಿಂಡರ್ ಬೆಲೆ 2,219 ರೂ. ಆಗಿತ್ತು. ಇದಕ್ಕೂ ಮುನ್ನ ಜೂನ್‍ನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ 135 ರೂಪಾಯಿ ಇಳಿಕೆಯಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರ ನೂತನ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್‍ಗೆ ಉದ್ಧವ್ ಠಾಕ್ರೆ ವಿಶ್

    ಕೋಲ್ಕತ್ತಾದಲ್ಲಿ 2,322ರೂ. ಇದ್ದ ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ಇದೀಗ 2,140ರೂ. ಆಗಿದೆ. ಮುಂಬೈನಲ್ಲಿ 2,171.50 ರ ಇದ್ದ ಸಿಲಿಂಡರ್ ಬೆಲೆ 1,981 ರೂ. ಆಗಿದೆ. ಚೆನ್ನೈನಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ 2,373 ರೂ. ಬದಲಿಗೆ 2,186 ರೂ. ಆಗಿದೆ. ಇದನ್ನೂ ಓದಿ: ಹಾಡಹಗಲೇ ಮನೆ ಬೀಗ ಮುರಿದು ಚಿನ್ನ, ಬೆಳ್ಳಿ, ನಗದು ಕಳ್ಳತನ

    Live Tv

  • ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ

    ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್‍ನ ಟಾಯ್ ರೈಲಿನ ದರ ಇಳಿಕೆ

    ನವದೆಹಲಿ: ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ (ಡಿಹೆಚ್‍ಆರ್) ವಿಶ್ವಪ್ರಸಿದ್ಧ ‘ಟಾಯ್ ರೈಲ್ವೇ’ ಸೇವೆಯ ದರವನ್ನು ಕಡಿಮೆ ಮಾಡಲಾಗಿದೆ. ಆ ಮೂಲಕ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಲಾಗಿದೆ.

    ಡಿಹೆಚ್‍ಆರ್ ಅಧಿಕಾರಿಗಳು ಕ್ವೀನ್ ಆಫ್ ಹಿಲ್ಸ್ ಡಾರ್ಜಿಲಿಂಗ್‍ನ ರೈಲು ಸೇವೆಯ ದರವನ್ನು 200 ರೂ. ವರೆಗೆ ಕಡಿಮೆ ಮಾಡಿದ್ದಾರೆ. ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಅಧಿಕಾರಿಗಳು ಈ ಉಪಕ್ರಮವನ್ನು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯು ಯುನೆಸ್ಕೋದ ವಿಶ್ವ ಪರಂಪರೆಯ ತಾಣವಾಗಿದೆ. ದರ ಇಳಿಕೆಯ ಬಗ್ಗೆ ಈಶಾನ್ಯ ಗಡಿ ರೈಲ್ವೆಯ ಕತಿಹಾರ್ ವಿಭಾಗದ ಎಡಿಆರ್‍ಎಂ ಸಂಜಯ್ ಚಿಲ್ವರ್ವಾರ್ ಮಾತನಾಡಿ, ಟಾಯ್ ರೈಲಿನ ಎಲ್ಲಾ ದರಗಳನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‍ಗೆ ಹೋಗುವ ರೈಲಿನಲ್ಲಿ ಚೇರ್ ಕಾರ್ ದರ ಈ ಹಿಂದೆ 1,600 ರೂ. ಗಳಷ್ಟಿತ್ತು. ಆದರೆ ಈಗ ಅದನ್ನು 1,400 ರೂ. ಗೆ ಇಳಿಸಲಾಗಿದೆ.

    ಎಸಿ ಕೋಚ್ ದರವು ಈ ಹಿಂದೆ 1,720 ರೂ. ಗಳಿಷ್ಟಿತ್ತು. ಈಗ ಅದನ್ನು 1,500 ರೂ.ಗೆ ಇಳಿಸಲಾಗಿದೆ. ಅದೇ ರೀತಿ ಡಾರ್ಜಿಲಿಂಗ್-ಘೂಮ್-ಡಾರ್ಜಿಲಿಂಗ್ ನಡುವೆ ಸಂಚರಿಸುವ ಟಾಯ್ ರೈಲಿನ ಜಾಯ್ ರೈಡ್ ಸೇವೆಗಳಿಗೂ ದರ ಕಡಿತಗೊಳಿಸಲಾಗಿದೆ.

    ಜಾಯ್ ರೈಡ್ ಸ್ಟೀಮ್ ಇಂಜಿನ್‍ನೊಂದಿಗೆ ಟಾಯ್ ರೈಲ್ವೇ ಜೊತೆಗೆ ವಿಸ್ಟಾಡೋಮ್ ಕೋಚ್‍ನ ದರವು ಈ ಹಿಂದೆ 1,600 ರೂ. ಇತ್ತು. ಈಗ 1,500 ರೂ.ಗೆ ಇಳಿಸಲಾಗಿದೆ. ಹೊಸದಾಗಿ ಇಳಿಕೆಯಾದ ಪರಿಷ್ಕೃತ ದರವನ್ನು ಮಾರ್ಚ್ 1 ರಿಂದ ಜಾರಿಗೆ ತರಲಾಗುವುದು ಎಂದು ಡಿಎಚ್‍ಆರ್ ಆಡಳಿತ ತಿಳಿಸಿದೆ.

    ಟಾಯ್ ರೈಲಿನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಡಿಎಚ್‍ಆರ್ ಮಾರ್ಚ್ 1 ರಿಂದ ಮಾರ್ಚ್ 31 ರವರೆಗೆ ಬೇಸಿಗೆ ಉತ್ಸವವನ್ನು ಡಾರ್ಜಿಲಿಂಗ್ ಹಿಲ್ಸ್ ಪ್ರದೇಶಗಳಾದ ಸಿಲಿಗುರಿ ಜಂಕ್ಷನ್, ಕುರ್ಸಿಯಾಂಗ್ ಮತ್ತು ಡಾರ್ಜಿಲಿಂಗ್ (ಡಿಹೆಚ್‍ಆರ್) ನಿಲ್ದಾಣಗಳಲ್ಲಿ ಆಯೋಜಿಸಲಿದೆ ಎಂದು ಚಿಲ್ವರ್ವಾರ್ ಹೇಳಿದರು. ಇದನ್ನೂ ಓದಿ:  ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

    ಈ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಡಿಹೆಚ್‍ಆರ್ ಅಧಿಕಾರಿಗಳು ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‍ಗೆ ಸಂಚರಿಸುವ ರೈಲಿನಲ್ಲಿ ಒಂದು ಎಸಿ ವಿಸ್ಟಾಡಮ್ ಕೋಚ್ ಅನ್ನು ಸೇರಿಸಲಿದ್ದಾರೆ. ಡಾರ್ಜಿಲಿಂಗ್‍ನಿಂದ ಘೂಮ್ ವಿಭಾಗದಲ್ಲಿ, ಎಲ್ಲಾ ಕೋಚ್‍ಗಳನ್ನು ಸಾಮಾನ್ಯ ಕೋಚ್‍ಗಳ ಬದಲಿಗೆ ವಿಸ್ಟಾಡಮ್ ಕೋಚ್‍ಗಳೊಂದಿಗೆ ಬದಲಾಯಿಸಲಾಗುತ್ತದೆ.

  • ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ – ಚಿನ್ನದ ಬೆಲೆ ಮತ್ತಷ್ಟು ಇಳಿಕೆ

    ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ – ಚಿನ್ನದ ಬೆಲೆ ಮತ್ತಷ್ಟು ಇಳಿಕೆ

    ನವದೆಹಲಿ: ಚಿನ್ನದ ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ. ಗಣನೀಯವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಈಗ 1 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 4,664 ರೂ. ಆಗಿದೆ.

    ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ದೆಹಲಿಯ ಜಿಎಸ್‌ಟಿ ಹೊರತದ ದರವನ್ನು ಪ್ರಕಟಿಸಿದ್ದು, 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 4,506 ರೂ., 18 ಕ್ಯಾರೆಟ್‌ ಚಿನ್ನದ ದರ 3,732 ರೂ. ಆಗಿದೆ.

    ಕೋವಿಡ್‌ ಸಮಯದಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ ಹತ್ತು ಗ್ರಾಂಗಳಿಗೆ 56 ಸಾವಿರ ರೂ. ದಾಟಿ 57 ಸಾವಿರ ರೂ. ಸನಿಹಕ್ಕೆ ಹೋಗಿತ್ತು. ಅನಂತರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ಈಗ 47 ಸಾವಿರ ರೂ.ಗಳ ಹತ್ತಿರಕ್ಕೆ ಬಂದಿದೆ. ಫೆಬ್ರವರಿ ಆರಂಭದಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.

    ಯಾಕೆ ಇಳಿಕೆ?
    ಬಜೆಟ್‌ನಲ್ಲಿ ಬಂಗಾರದ ಆಮದು ಸುಂಕವನ್ನು ಇಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಯುತ್ತಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಜನರು ಬಂಗಾರದ ಮೇಲೆ ಜಾಸ್ತಿ ಹೂಡಿಕೆ ಮಾಡುತ್ತಿದ್ದರು. ಪರಿಣಾಮ ಬೆಲೆ ಏರಿಕೆ ಆಗಿತ್ತು. ಈಗ ನಿಧನವಾಗಿ ಆರ್ಥಿಕ ಚಟುವಟಿಕೆ ಆರಂಭಗೊಂಡಿದ್ದು ಹೂಡಿಕೆದಾರರು ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

  • ಚಿಕನ್‍ಗೂ ತಟ್ಟಿದ ಕೊರೊನಾ ಎಫೆಕ್ಟ್ – ಸುಳ್ಳು ಸುದ್ದಿಯಿಂದ ದಿಢೀರ್ ಭಾರೀ ಇಳಿಕೆ ಕಂಡ ಚಿಕನ್ ದರ

    ಚಿಕನ್‍ಗೂ ತಟ್ಟಿದ ಕೊರೊನಾ ಎಫೆಕ್ಟ್ – ಸುಳ್ಳು ಸುದ್ದಿಯಿಂದ ದಿಢೀರ್ ಭಾರೀ ಇಳಿಕೆ ಕಂಡ ಚಿಕನ್ ದರ

    ಬೆಂಗಳೂರು: ಸಿಲಿಕಾನ್ ಸಿಟಿ ನಾನ್ ವೆಜ್ ಪ್ರಿಯರು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಚಿಕನ್ ಅದ್ರಂತೂ ಎಲ್ಲಿಲ್ಲದ ಪ್ರೀತಿ. ಆದರೆ ಮಹಾಮಾರಿ ಕೊರೊನಾ ವೈರಸ್ ಭಯಕ್ಕೆ ಚಿಕನ್ ಅಂಗಡಿಗಳು ಗ್ರಾಹಕರಿಲ್ಲದೇ ಬಣಗುಡುತ್ತಿವೆ. ಚಿಕನ್ ರೇಟ್ ಕೂಡ ಕುಸಿಯುತ್ತಲೇ ಇದೆ. ಇನ್ನೂ ವ್ಯಾಪಾರ ವಹಿವಾಟು ಇಲ್ಲದೇ ಮಾರಾಟಗಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

    ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂದು ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುತ್ತಿದೆ. ಇದರೆ ಪರಿಣಾಮ ಚಿಕನ್ ವ್ಯಾಪಾರಿಗಳಿಗೂ ತಟ್ಟಿದೆ. ಹೀಗಾಗಿ 100-130 ರೂ. ಇದ್ದ ಚಿಕನ್ ದರ ಇಂದು 60-70 ರೂ.ಗೆ ಇಳಿದಿದೆ. ಇದರಿಂದ ರಾಜ್ಯದಲ್ಲಿ ಶೇ. 50ರಷ್ಟು ಚಿಕನ್ ಮಾರಾಟ ಕಡಿತವಾಗಿದೆ. ಜೊತೆಗೆ 1 ಕೋಟಿಯಷ್ಟು ಲಾಸ್ ಆಗಿದೆ ಎಂದು ಕುಕ್ಕಟ ಮಂಡಳಿಯವರು ಅಳಲನ್ನು ತೋಡಿಕೊಂಡಿದ್ದಾರೆ.

    ಯಾವಾಗ ಕೊರೊನಾ ವೈರಸ್ ಎಂಬ ಮಹಾಮಾರಿ ಬೆಂಗಳೂರಿಗೆ ಬಂದಿರಬಹುದು ಎಂಬ ಸುದ್ದಿಗಳು ಹರಿದಾಡಲು ಆರಂಭವಾಯ್ತೋ, ಆಗಿನಿಂದ ತುಸು ಎಚ್ಚೆತ್ತ ಬೆಂಗಳೂರಿಗರು ಚಿಕನ್ ಅಂಗಡಿಗಳ ಕಡೆ ಮುಖ ಮಾಡೋದನ್ನೆ ಬಿಟ್ಟಿದ್ದಾರೆ. ಜೊತೆಗೆ ಪ್ರತಿ ಕೋಳಿಗೆ 80 ರೂಪಾಯಿ ಸಿಗುತ್ತಿದ್ದ ಸಾಕಾಣಿಕೆಗಾರರಿಗೆ ಸದ್ಯ 30-35 ರೂಪಾಯಿ ಸಿಗುತ್ತಿದೆ. ಇದರಿಂದ ಕೆಲ ಸಾಕಾಣಿಕೆಗಾರರು ಕೋಳಿ ಮೇಲೆ ಖರ್ಚು ಮಾಡಲಾಗದೇ, ಕೋಳಿ ವ್ಯಾಪಾರ ನಿಲ್ಲಿಸಿದ್ದಾರೆ.

    ಇತ್ತ ಕೊರೊನಾ ಸೋಂಕಿಗೂ ಚಿಕನ್‍ಗೂ ಯಾವುದೇ ಸಂಬಂಧ ಇಲ್ಲ ಎಂದು ಚಿಕನ್ ಡೀಲರ್ಸ್ ಹೇಳ್ತಿದ್ದಾರೆ. ಆದರೆ ಜನ ಮಾತ್ರ ಮಹಾಮಾರಿಗೆ ಹೆದರಿ ಚಿಕನ್ ಕೊಂಡುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ವ್ಯಾಪಾರಸ್ಥರು ಬೇಸರದಿಂದ ಹೇಳಿಕೊಂಡಿದ್ದಾರೆ. ಈ ರೀತಿ ಕೊರೊನಾ ವೈರಸ್ ಭಯ, ಸುಳ್ಳುಸುದ್ದಿ ಕುಕ್ಕಟ ಉದ್ಯಮದ ಮೇಲೆ ಭಾರೀ ಹೊಡೆತವನ್ನುಂಟು ಮಾಡಿದೆ.

  • ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಇಳಿಕೆ – ಮತ್ತಷ್ಟು ಅಗ್ಗವಾಗುವ ಸಾಧ್ಯತೆ

    ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಇಳಿಕೆ – ಮತ್ತಷ್ಟು ಅಗ್ಗವಾಗುವ ಸಾಧ್ಯತೆ

    ನವದೆಹಲಿ: ಕಳೆದ 15 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಪ್ರತಿ ಲೀಟರ್‌ಗೆ ಸುಮಾರು 2 ರೂ. ಕಡಿತಗೊಂಡಿದೆ.

    ಜನವರಿ 12ರಿಂದ ಕಚ್ಚಾ ತೈಲದ ಬೆಲೆ ಪದೇ ಪದೇ ಇಳಿಕೆಯಾಗುತ್ತಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿದೆಯೇ ಹೊರತು ಏರಿಕೆಯಾಗಿಲ್ಲ. ಹೀಗಾಗಿ ಇಂದು ಕೂಡ ಪೆಟ್ರೋಲ್ ಬೆಲೆ 21 ಪೈಸೆ ಹಾಗೂ ಡೀಸೆಲ್ ಬೆಲೆ 24 ಪೈಸೆಯಷ್ಟು ಇಳಿಕೆಯಾಗಿದೆ.

    ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಒಂದು ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‍ಗೆ $55 ಕ್ಕೆ ಇಳಿದಿದೆ. ಇದರ ನೇರ ಪರಿಣಾಮ ಈಗ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಂಡುಬರುತ್ತಿದೆ.

    ಪ್ರತಿ ಲೀಟರ್‌ಗೆ ಎಷ್ಟು ದರ?
    ಬೆಂಗಳೂರಿನಲ್ಲಿ ಪೆಟ್ರೋಲ್ ದರ 75.14 ರೂ. ಹಾಗೂ ಡೀಸೆಲ್ ದರ 67.90 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 72.68 ರೂ. ಮತ್ತು ಡೀಸೆಲ್ ದರ 65.68 ರೂ. ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ದರ 78.34 ರೂ. ಇದ್ದರೆ, ಡೀಸೆಲ್ 68.84 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ 75.51 ರೂ. ಆದರೆ, ಡೀಸೆಲ್ ಪ್ರತಿ ಲೀಟರ್‌ಗೆ 69.37 ರೂ. ಇದೆ.

    ದರ ಇಳಿಕೆಗೆ ಕಾರಣವೇನು?
    ಕಚ್ಚಾ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾ ಮೊದಲನೇಯ ಸ್ಥಾನದಲ್ಲಿದೆ. ಆದ್ರೆ ಇತ್ತೀಚೆಗೆ ಕೊರೊನಾ ವೈರಸ್ ನಿಂದಾಗಿ ಹಲವು ಕೈಗಾರಿಕೆಗಳು ಮುಚ್ಚಿವೆ. ಹಲವು ಕಡೆ ಸಾರಿಗೆ ಸಂಪರ್ಕ ಬಂದ್ ಮಾಡಲಾಗಿದ್ದು, ಹುಬೆ ಪ್ರಾಂತ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡದಂತೆ ಸರ್ಕಾರ ನಿಷೇಧ ಹೇರಿದೆ. ಈ ಎಲ್ಲ ಕಾರಣಗಳಿಂದಾಗಿ ಕಚ್ಚಾ ತೈಲದ ಆಮದನ್ನು ಚೀನಾ ಕಡಿಮೆ ಮಾಡಿದೆ. ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ.

  • ಸಿಹಿ ಸುದ್ದಿ – ದೇಶಾದ್ಯಂತ 10 ಸಾವಿರಕ್ಕೂ ಹೆಚ್ಚು ಔಷಧಗಳ ಬೆಲೆ ಶೇ.80ರಷ್ಟು ಇಳಿಕೆ

    ಸಿಹಿ ಸುದ್ದಿ – ದೇಶಾದ್ಯಂತ 10 ಸಾವಿರಕ್ಕೂ ಹೆಚ್ಚು ಔಷಧಗಳ ಬೆಲೆ ಶೇ.80ರಷ್ಟು ಇಳಿಕೆ

    ನವದೆಹಲಿ: ಭಾರತದಾದ್ಯಂತ ಬಹುತೇಕ ಔಷಧಗಳ ಬೆಲೆ ಶೇ.80ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಜನರಿಕ್ ಔಷಧಗಳನ್ನು ಬಳಸುವ ಸಾರ್ವಜನಿಕರಿಗೆ ಲಾಭವಾಗಲಿದೆ.

    ಸರ್ಕಾರದ ಬೆಲೆ ನಿಯಂತ್ರಣಕ್ಕೆ ಒಳಪಡದ (ನಾನ್ ಷೆಡ್ಯೂಲ್ಡ್) ಔಷಧಗಳ ಮಾರಾಟದಲ್ಲಿ ಲಾಭದ ಅಂಶಕ್ಕೆ (ಮಾರ್ಜಿನ್) ಗರಿಷ್ಠ ಶೇ. 30ರ ಮಿತಿ ವಿಧಿಸಿಕೊಳ್ಳುವಂತೆ ಔಷಧೋದ್ಯಮದ ಮುಂದೆ ಸರ್ಕಾರ ಪ್ರಸ್ತಾಪ ಇಟ್ಟಿತ್ತು. ಇದಕ್ಕೆ ಔಷಧೋದ್ಯಮದ ಸಮ್ಮತಿ ನೀಡಿದ್ದು ದರ ಇಳಿಕೆಯಾಗಲಿದೆ.

    ಇತ್ತೀಚೆಗೆ ಔಷಧ ನಿಯಂತ್ರಣ ಪ್ರಾಧಿಕಾರ ಮತ್ತು ಔಷಧೋದ್ಯಮದ ಪ್ರತಿನಿಧಿಗಳ ಸಭೆಯಲ್ಲಿ ಈ ಮಹತ್ವದ ನಿರ್ಣಯಕ್ಕೆ ಸಹಮತ ವ್ಯಕ್ತವಾಗಿದೆ. ಹೀಗಾಗಿ ದೇಶಾದ್ಯಂತ ಔಷಧಗಳ ಬೆಲೆ ಶೇ. 80ರಷ್ಟು ಇಳಿಕೆಯಾಗಲಿದೆ ಎನ್ನಲಾಗಿದೆ.

    ಈ ಬಗ್ಗೆ ಭಾರತೀಯ ಔಷಧ ಉತ್ಪಾದಕರ ಸಂಘದ ಅಧ್ಯಕ್ಷ ದೀಪ್‍ನಾಥ್ ರಾಯ್ ಚೌಧರಿ ಮಾತನಾಡಿ, ಸದ್ಯ ಕ್ಯಾನ್ಸರ್ ಔಷಧಗಳ ಗರಿಷ್ಠ ಲಾಭಾಂಶದ ದರವನ್ನು ಶೇ.30ಕ್ಕೆ ನಿಗದಿಪಡಿಸಲಾಗಿದೆ. ಎಲ್ಲಾ ಔಷಧಗಳಿಗೂ ಈ ಗರಿಷ್ಠ ಲಾಭಾಂಶದ ದರವನ್ನು ವಿಸ್ತರಿಸುವುದಾದರೆ ಹಂತ ಹಂತವಾಗಿ ಅದನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

    ಈ ನಿರ್ಧಾರದಿಂದ ಜನರಿಕ್ ಔಷಧಗಳ ಗರಿಷ್ಠ ರೀಟೇಲ್ ಮಾರಾಟ ಬೆಲೆಗಳನ್ನು (ಎಂಆರ್‌ಪಿ) ಔಷಧ ಕಂಪನಿಗಳು ಕಡಿತಗೊಳಿಸಬೇಕಾಗುತ್ತದೆ. ಹೀಗಾಗಿ ಜನರಿಕ್ ವಿಭಾಗಗಳನ್ನು ಹೊಂದಿರುವ ಸನ್ ಫಾರ್ಮಾ, ಸಿಪ್ಲಾ ಅಂತಹ ಬೃಹತ್ ಔಷಧ ಕಂಪನಿಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

    10 ಸಾವಿರಕ್ಕೂ ಹೆಚ್ಚು ಔಷಧಗಳ ದರ ಇಳಿಕೆ:
    ಆರೋಗ್ಯ ಇಲಾಖೆಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ಆರೋಗ್ಯ ಕೇಂದ್ರಗಳು ಔಷಧಗಳ ಮೇಲೆ ಶೇ.70ರಷ್ಟು ವೆಚ್ಚ ಮಾಡುತ್ತದೆ. ಫಾರ್ಮಸಿಟಿಕಲ್ ಇಲಾಖೆ ಪ್ರಕಾರ ಸುಮಾರು 10,600 ನಾನ್ ಷೆಡ್ಯೂಲ್ಡ್ ಔಷಧಿಗಳು ಇವೆ. ಈ ಬಗ್ಗೆ ಕೆಲ ಔಷಧೋದ್ಯಮ ತಜ್ಞರು ಮಾತನಾಡಿ, ಈ ನಾನ್ ಷೆಡ್ಯೂಲ್ಡ್ ಔಷಧಿಗಳು ಬಹುತೇಕ ಸಣ್ಣ ಪಟ್ಟಣ, ಹಳ್ಳಿಗಳಿಗೆ ಸರಬರಾಜು ಆಗುತ್ತದೆ. ಅಲ್ಲಿ ರಿಟರ್ನ್ ಪಾಲಿಸಿ ಇರುವುದಿಲ್ಲ. ಆದ್ದರಿಂದ ವ್ಯಾಪಾರಿಗಳು ಅವಧಿ ಮುಗಿದ ಔಷಧಗಳು ಹಾಗೂ ಹಾಳಾದ ಔಷಧಗಳನ್ನು ಸ್ಟಾಕಿಸ್ಟ್ ಅಥವಾ ಉತ್ಪಾದಕರಿಗೆ ರಿಟರ್ನ್ ಮಾಡಲು ಆಗಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಔಷಧ ನಿಯಂತ್ರಣ ಪ್ರಾಧಿಕಾರ ಕ್ಯಾನ್ಸರ್ ಔಷಧಗಳ ಗರಿಷ್ಠ ಬೆಲೆ ಮೇಲೆ ಮಿತಿ ಹೇರಿದ ಬಳಿಕ ಅವುಗಳ ದರ ಶೇ.85ರಷ್ಟು ಕಡಿಮೆಯಾಗಿದೆ. ಆದರೆ, ವಿಟಮಿನ್-ಡಿ ಮಾತ್ರೆಗಳಿಂದ ಹಿಡಿದು, ಆ್ಯಂಟಿಬಯಾಟಿಕ್ಸ್ ವರೆಗೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಔಷಧಗಳು ಪ್ರಸ್ತುತ ಸರ್ಕಾರದ ದರ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿವೆ. ಹೀಗಿರುವ ಔಷಧಗಳ ಬೆಲೆಗಳು ವಾರ್ಷಿಕ ಗರಿಷ್ಠ ಶೇ.10ರಷ್ಟು ಏರಿಕೆಯಾಗುತ್ತದೆ. ಆದರೆ ಈಗ ಈ ಔಷಧಗಳ ಬೆಲೆಯನ್ನು ಕೂಡ ಸರ್ಕಾರ ಕಡಿಮೆ ಮಾಡಲು ಮುಂದಾಗಿದೆ.

    ಲಾಭ ಎಷ್ಟು?
    ಭಾರತೀಯ ಔಷಧೋದ್ಯಮದ ಒಟ್ಟು 1 ಲಕ್ಷ ಕೋಟಿ ರೂ. ಇದ್ದು, ಅದರಲ್ಲಿ ನಾನ್ ಷೆಡ್ಯೂಲ್ಡ್ ಔಷಧಗಳ ಮಾರಾಟದ ಮೌಲ್ಯ 10,000 ಕೋಟಿ ರೂ. ಇದೆ. ಪ್ರಸ್ತುತ ನಿಯಂತ್ರಣಕ್ಕೆ ಒಳಪಡದ ಔಷಧಗಳ ಮಾರಾಟದಲ್ಲಿ ಸ್ಟಾಕಿಸ್ಟ್‍ಗಳು ಶೇ.10 ಮಾರ್ಜಿನ್ ಹಾಗೂ ರೀಟೇಲರ್ ಗಳು ಶೇ.20 ಮಾರ್ಜಿನ್ ಪಡೆಯುತ್ತಿದ್ದಾರೆ.

    ಈ ನಿಯಮದಿಂದ ಜನರಿಕ್ ಔಷಧಗಳ ಮಾರಾಟದಿಂದ ಬರುವ ಲಾಭದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಔಷಧ ಮಾರಾಟ ಲಾಬಿ ಗುಂಪು, ಈ ನಷ್ಟವನ್ನು ತುಂಬಿಕೊಡುವಂತೆ ಔಷಧ ಕಂಪನಿಗಳ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.

    ಈ ಹಿಂದೆ ಕೂಡ ಈ ನಿಯಮ ಜಾರಿಗೆ ಬಂದಾಗ ನಷ್ಟ ಅನುಭವಿಸಿದ ಲಾಬಿ ಗುಂಪುಗಳು ಅದನ್ನು ಭರಿಸಲು ಬೇಡಿಕೆ ಇಟ್ಟಿದ್ದವು. 2013ರಲ್ಲಿ ನಾನ್ ಷೆಡ್ಯೂಲ್ಡ್ ಔಷಧ ಕಂಪನಿಗಳನ್ನು ಬೆಲೆ ನಿಯಂತ್ರಣದ ವ್ಯಾಪ್ತಿಗೆ ತಂದಾಗ, ಸ್ಟಾಕಿಸ್ಟ್ ಗಳು ಮತ್ತು ರೀಟೇಲ್ ಮಾರಾಟಗಾರರು, ತಮಗೆ ಕನಿಷ್ಠ ಶೇ.30 ಮಾರ್ಜಿನ್ ಮುಂದುವರಿಸಬೇಕೆಂದು ಕಂಪನಿಗಳ ಮೇಲೆ ಒತ್ತಡ ಹೇರಿದ್ದರು. ಸರ್ಕಾರ ಬೆಲೆ ನಿಯಂತ್ರಣ ವ್ಯಾಪ್ತಿಗೆ ಒಳಪಡುವ ಔಷಧಗಳ ಮಾರಾಟದ ಮೇಲಿನ ಗರಿಷ್ಠ ಮಾರ್ಜಿನ್ ಅನ್ನು ಶೇ.24 ಕ್ಕೆ ನಿಗದಿಪಡಿಸಿದ್ದರಿಂದ, ತಮಗೆ ನಷ್ಟವಾಗಲಿದೆ ಎಂದು ಹೇಳಿದ್ದರು.

    ಅಷ್ಟೇ ಅಲ್ಲದೆ ಸಭೆಯಲ್ಲಿ, 5 ರೂ.ಗಿಂತಲೂ ಕಡಿಮೆ ಬೆಲೆಯ ಔಷಧಗಳಿಗೆ ಶೇ.30 ಮಾರ್ಜಿನ್ ನಿಯಮದಲ್ಲಿ ಒಳಪಡಿಸಬಾರದು ಎಂದು ಪ್ರತಿನಿಧಿಗಳು ಬೇಡಿಕೆ ಇಟ್ಟಿದ್ದಾರೆ. ಆದರೆ ಇದಕ್ಕೆ ಗ್ರಾಹಕ ಹಕ್ಕು ಕಾರ್ಯಕರ್ತರು ವಿರೋಧಿಸಿದ್ದಾರೆ.

  • ಗ್ರಾಹಕರಿಗೆ ಸಿಹಿಸುದ್ದಿ – ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದೆ ಎಲ್‍ಇಡಿ, ಎಲ್‍ಸಿಡಿ ಟಿವಿ ಬೆಲೆ

    ಗ್ರಾಹಕರಿಗೆ ಸಿಹಿಸುದ್ದಿ – ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದೆ ಎಲ್‍ಇಡಿ, ಎಲ್‍ಸಿಡಿ ಟಿವಿ ಬೆಲೆ

    ನವದೆಹಲಿ: ಟಿವಿ ಪ್ಯಾನಲಿನ ಅತ್ಯಂತ ಪ್ರಮುಖ ಭಾಗವಾದ ಓಪನ್ ಸೆಲ್ ಮೇಲಿನ ಆಮದು ಸುಂಕ ಕಡಿತವಾಗಿದ್ದು, ಮುಂದಿನ ದಿನಗಳಲ್ಲಿ ಎಲ್‍ಇಡಿ, ಎಲ್‍ಸಿಡಿ ಟಿವಿಗಳ ದರ ಕಡಿತವಾಗುವ ಸಾಧ್ಯತೆಯಿದೆ.

    ಕೇಂದ್ರ ಸರ್ಕಾರ ಬುಧವಾರ ಓಪನ್ ಸೆಲ್ ಮೇಲಿನ ಆಮದು ಸುಂಕವನ್ನು ಶೇ.5ರಷ್ಟು ಕಡಿತಗೊಳಿಸಿದೆ. ಹಣಕಾಸು ಸಚಿವಾಲಯ ನೋಟಿಫಿಕೇಶನ್ ಹೊರಡಿಸಿ ಕಡಿತ ಮಾಡಲಾಗಿರುವ ನಿರ್ಧಾರ ಪ್ರಕಟಿಸಿದೆ.

    ಓಪನ್ ಸೆಲ್(15.6 ಇಂಚು ಮತ್ತು ಅದಕ್ಕಿಂತ ಮೇಲ್ಪಟ್ಟು) ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ(ಎಲ್‍ಸಿಡಿ) ಮತ್ತು ಲೈಟ್ ಎಮಿಟಿಂಗ್ ಡಯೋಡ್(ಎಲ್‍ಇಡಿ) ಟಿವಿಗೆ ಬಳಸುವ ಓಪನ್ ಸೆಲ್ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲಾಗಿದೆ ಎಂದು ನೋಟಿಫಿಕೇಶನ್ ನಲ್ಲಿ ತಿಳಿಸಿದೆ. ಇದನ್ನೂ ಓದಿ: 2 ಲಕ್ಷ ರೂ. ಡಿಸ್ಕೌಂಟ್ ಆಫರ್ – ಯಾವ ಕಾರಿನ ಬೆಲೆ ಎಷ್ಟು ಇಳಿಕೆ?

    ಜೂನ್ 2017ರಲ್ಲಿ ಕೇಂದ್ರ ಸರ್ಕಾರ ಓಪನ್ ಸೆಲ್ ಪ್ಯಾನೆಲ್ ಮೇಲೆ ಆಮದು ಸುಂಕವನ್ನು ವಿಧಿಸಿತ್ತು. ಇದಾದ ಬಳಿಕ ಟಿವಿ ತಯಾರಕ ಕಂಪನಿಗಳು ವಿಧಿಸಲಾಗಿದ್ದ ಆಮದು ಸುಂಕವನ್ನು ತೆಗೆದುಹಾಕಬೇಕೆಂದು ಮನವಿ ಮಾಡಿತ್ತು. ಟಿವಿಯಲ್ಲಿನ ಪ್ರಮುಖ ಭಾಗ ಓಪನ್ ಸೆಲ್ ಆಗಿದ್ದು ಇದಕ್ಕೆ ಅರ್ಧಕ್ಕಿಂತ ಹೆಚ್ಚಿನ ಬೆಲೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್‍ಸಿಡಿ, ಎಲ್‍ಇಡಿ ಟಿವಿಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.

    ಫಿಲ್ಮ್ ನಲ್ಲಿ ಬಳಸುವ ಚಿಪ್, ಪ್ರಿಂಟೆಡ್ ಸರ್ಕ್ಯೂಟ್  ಬೋರ್ಡ್ ಅಸೆಂಬ್ಲಿ(ಪಿಸಿಬಿಎ), ಸೆಲ್ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ. ಓಪನ್ ಸೆಲ್ ಪ್ಯಾನೆಲ್ ಬಳಸಲು ಇವುಗಳನ್ನು ಬಳಸಲಾಗುತ್ತದೆ.

  • 2 ಲಕ್ಷ ರೂ. ಡಿಸ್ಕೌಂಟ್ ಆಫರ್ – ಯಾವ ಕಾರಿನ ಬೆಲೆ ಎಷ್ಟು ಇಳಿಕೆ?

    2 ಲಕ್ಷ ರೂ. ಡಿಸ್ಕೌಂಟ್ ಆಫರ್ – ಯಾವ ಕಾರಿನ ಬೆಲೆ ಎಷ್ಟು ಇಳಿಕೆ?

    – ಶೇ.28 ರಿಂದ ಶೇ.18ಕ್ಕೆ ತೆರಿಗೆ ಇಳಿಸಲು ಆಗ್ರಹ
    – ಸೆ.20 ರಂದು ನಡೆಯಲಿದೆ ಜಿಎಸ್‍ಟಿ ಕೌನ್ಸಿಲ್ ಸಭೆ
    – ಸಭೆಯಲ್ಲಿ ಇಳಿಕೆಯಾದ್ರೆ ಗ್ರಾಹಕರಿಗೆ ಬಂಪರ್

    ನವದೆಹಲಿ: ಬಿಎಸ್6 ಎಂಜಿನ್ ಕಾರುಗಳನ್ನು ಮಾತ್ರ 2020ರ ಏಪ್ರಿಲ್1 ರಿಂದ ಮಾರಾಟ ಮಾಡುವ ಅನಿವಾರ್ಯತೆಯಲ್ಲಿ ಸಿಲುಕಿರುವ ಅಟೋಮೊಬೈಲ್ ಕಂಪನಿಗಳು ಈಗ ಉತ್ಪಾದನೆಯಾಗಿರುವ ಕಾರುಗಳನ್ನು ಮಾರಾಟ ಮಾಡಲು ಭರ್ಜರಿ ಡಿಸ್ಕೌಂಟ್ ಆಫರ್‍ಗಳನ್ನು ಘೋಷಣೆ ಮಾಡಿದೆ.

    ಎರಡು ತ್ರೈಮಾಸಿಕದಲ್ಲೂ ಕಾರು ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಕಾರು ಬೆಲೆಗಳು ಇಳಿಕೆಯಾಗಿರುವುದರಿಂದ ಗ್ರಾಹಕರು ಹಬ್ಬದ ಸಂದರ್ಭದಲ್ಲಿ ಖರೀದಿಸುವ ಸಾಧ್ಯತೆ ಹೆಚ್ಚಿದೆ.

    ಹುಂಡೈಯ ಟುಸ್ಸಾನ್, ಎಲಾಂಟ್ರಾ, ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೇಜಾ ಹತ್ತಿರ ಹತ್ತಿರ 2 ಲಕ್ಷ ರೂ. ಡಿಸ್ಕೌಂಟ್ ಆಫರ್ ನೀಡಿದರೆ ಟಯೋಟಾ ಯಾರಿಸ್ ಬೆಲೆ 1.45 ಲಕ್ಷ ರೂ. ಇಳಿಕೆಯಾಗಿದ್ದರೆ ಕೊರೊಲಾ ಆಲ್ಟಿಸ್ 1.45 ಲಕ್ಷ ರೂ. ಇಳಿಕೆಯಾಗಿದೆ. ಇದನ್ನೂ ಓದಿ: ಜನ ಕಾರು ಇಟ್ಕೊಳ್ಳಲ್ಲ, ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಮಾರುತಿ ಕಂಪನಿಯ ಅಲ್ಟೋ 800 ಮತ್ತು ಅಲ್ಟೋ ಕೆ10 ಬೆಲೆ 65 ಸಾವಿರ ಇಳಿಕೆಯಾಗಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಹೊಂದಿರುವ ಸ್ವಿಫ್ಟ್ ಬೆಲೆ ಕ್ರಮವಾಗಿ 55,000 ರೂ. ಮತ್ತು 84,000 ರೂ. ಕಡಿಮೆಯಾಗಿದೆ. ಸೆಲೆರಿಯೋ 65,000 ರೂ., 7 ಸೀಟ್ ಸಾಮರ್ಥ್ಯದ ಇಕೋ 50,000 ರೂ., 5 ಸೀಟ್ ಸಾಮರ್ಥ್ಯದ ಇಕೋ ಕಾರಿನ ಬೆಲೆ 40,000 ರೂ. ಇಳಿಕೆಯಾಗಿದೆ.

    ಇಗ್ನಿಸ್ 50,000 ರೂ., ಪೆಟ್ರೋಲ್ ಇಂಜಿನ್ ಬಲೆನೊ 35,000 ರೂ. ಇಳಿಕೆಯಾಗಿದ್ದರೆ ಡೀಸೆಲ್ ಎಂಜಿನ್ ಬೆಲೆ 55,000 ರೂ. ಕಡಿಮೆಯಾಗಿದೆ. ಸಿಯಾಜ್ 55,000 ರೂ., ಎಸ್ ಕ್ರಾಸ್ ಬೆಲೆ 80,000 ರೂ. ಇಳಿಕೆಯಾಗಿದೆ. ಇದರ ಜೊತೆ ಮಾರುತಿ ಕಂಪನಿಯೂ ಸ್ವಿಫ್ಟ್, ಬ್ರಿಜಾ, ಡಿಸೈರ್, ಬಲೆನೊ, ಎಸ್ ಕ್ರಾಸ್, ಸಿಯಾಜ್ ಕಾರುಗಳಿಗೆ 5 ವರ್ಷದ ವಾರಂಟಿ ಘೋಷಿಸಿದೆ.

    ಹುಂಡೈ ಕಂಪನಿಯ ಗ್ರ್ಯಾಂಡ್‍ಐ10, ಎಕ್ಸೆಂಟ್ 95,000 ರೂ. ಇಳಿಕೆಯಾಗಿದ್ದರೆ, ಐ20, ಐ20 ಆಕ್ಟೀವ್ ಮತ್ತು ವೆರ್ನಾ ಕಾರುಗಳು ಕ್ರಮವಾಗಿ 45,000 ರೂ., 25,000 ರೂ., 60,000 ರೂ. ಇಳಿಕೆಯಾಗಿದೆ. ಹುಂಡೈ ಕಂಪನಿಯ ಪ್ರಸಿದ್ಧ ಕ್ರೇಟಾ ಕಾರಿಗೆ 50,000, ಸ್ಯಾಂಟ್ರೋ ಕಾರಿಗೆ 40,000 ರೂ. ಡಿಸ್ಕೌಂಟ್ ಆಫರ್ ಪ್ರಕಟಿಸಿದೆ.

    ಟಾಟಾ ಕಂಪನಿಯ 2018ರ ಮಾಡೆಲಿನ ಟಿಯಾಗೋ 70,000 ರೂ., ಟಿಗೋರ್ ಕಾರಿನ ಬೆಲೆ 1.70 ಲಕ್ಷ ರೂ. ಇಳಿಕೆಯಾಗಿದೆ. ನೆಕ್ಸಾನ್ ಡೀಸೆಲ್ ಮತ್ತು ಹೆಕ್ಸಾ ಕಾರಿನ ಬೆಲೆ ಕ್ರಮವಾಗಿ 87,500 ರೂ. ಮತ್ತು 1.5 ಲಕ್ಷ ರೂ. ಇಳಿಕೆಯಾಗಿದೆ. 2019ರ ಮಾಡೆಲಿನ ಟಿಯಾಗೋ 45,000, ಟಿಗೋರ್ ಪೆಟ್ರೋಲ್ 67,000, ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 57,500 ರೂ. ಕಡಿಮೆಯಾಗಿದೆ. 2019ರ ಹೆಕ್ಸಾ ಕಾರಿಗೆ 1ಲಕ್ಷ ರೂ. ಇಳಿಕೆಯಾಗಿದೆ.

    ಫೋರ್ಡ್ ಕಂಪನಿ ಅಸ್ಪೈರ್ ಕಾರಿಗೆ 30,000 ರೂ. ಇಳಿಕೆ ಮಾಡಿದ್ದರೆ, ಇಕೋ ಸ್ಪೋರ್ಟ್ ಗೆ 15,000 ರೂ. ಇಳಿಕೆ ಮಾಡಿದೆ. ರೆನಾಲ್ಟ್ ಕ್ವಿಡ್ 40,000 ರೂ., ಕ್ಯಾಪ್ಟರ್ ಪ್ಲಾಟಿನ್ 1 ಲಕ್ಷ ರೂ., ಡೀಸೆಲ್ ಡಸ್ಟರ್ ಬೆಲೆ 1 ಲಕ್ಷ ರೂ. ಇಳಿಕೆಯಾಗಿದೆ.

    ಮತ್ತಷ್ಟು ಇಳಿಕೆ ಆಗುತ್ತಾ?
    ಕಾರುಗಳ ದರ ಇಳಿಕೆ ನಗರದಿಂದ ನಗರಕ್ಕೆ ಸ್ವಲ್ಪ ಬದಲಾವಣೆಯಾಗುತ್ತದೆ. ಸದ್ಯ ಈಗ ಅಟೋ ಕ್ಷೇತ್ರದ ಮೇಲೆ ಶೇ.28 ಜಿಎಸ್‍ಟಿ ಇದೆ. ಮಂದಗತಿಯ ಆರ್ಥಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಅಟೋ ಕಂಪನಿಗಳು ಈಗಾಗಲೇ ಶೇ.20ಕ್ಕೆ ಜಿಎಸ್‍ಟಿಯನ್ನು ಇಳಿಕೆ ಮಾಡಬೇಕೆಂದು ಆಗ್ರಹಿಸಿದೆ. ಸರ್ಕಾರವೂ ಆರ್ಥಿಕತೆಯನ್ನು ಉತ್ತೇಜಿಸಲು ಕಳೆದ ಎರಡು ವಾರಗಳಿಂದ ನಾನಾ ಕ್ರಮಗಳನ್ನು ಪ್ರಕಟಿಸಿದೆ. ಬಿಎಸ್4 ಕಾರುಗಳ ಮಾರಾಟ 2020ರ ಏ.1 ರಿಂದ ನಿಷೇಧಿಸಿದ್ದರೂ ಆ ಕಾರುಗಳು 15 ವರ್ಷಗಳ ಕಾಲ ಸಂಚರಿಸಬಹುದು ಎಂದು ಸರ್ಕಾರ ತಿಳಿಸಿದೆ. ಹೀಗಾಗಿ ಸೆ.20 ರಂದು ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಅಂದು ಶೇ.18ಕ್ಕೆ ಜಿಎಸ್‍ಟಿ ಇಳಿಕೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡರೆ ಕಾರುಗಳ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.

    ಆಫರ್ ಪ್ರಕಟಿಸಿದ್ದು ಯಾಕೆ?
    ಈ ಹಿಂದೆ ಸರ್ಕಾರ 2017ರ ಏಪ್ರಿಲ್ 1 ರಿಂದ ಬಿಎಸ್3 ಮಾನದಂಡ ಇಂಜಿನ್ ಹೊಂದಿರುವ ಕಾರುಗಳ ಮಾರಾಟ ಮತ್ತು ನೋಂದಣಿ ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಾರ್ಚ್ 29ರಂದು ಏಪ್ರಿಲ್ 1 ರಿಂದ ಯಾವುದೇ ಕಾರಣಕ್ಕೆ ಬಿಎಸ್3 ವಾಹನವನ್ನು ಮಾರಾಟ ಮಾಡಬಾರದು ಎಂದು ಖಡಕ್ ಆದೇಶವನ್ನು ಪ್ರಕಟಿಸಿತ್ತು. ಪರಿಣಾಮ ಆಟೋ ಕಂಪನಿಗಳು ಮತ್ತು ಡೀಲರ್ ಗಳು ಒಂದೇ ದಿನದಲ್ಲಿ ಬೈಕ್ ಬೆಲೆಯನ್ನು 20-30 ಸಾವಿರ ಇಳಿಕೆ ಮಾಡಿ ಭಾರೀ ಸಂಖ್ಯೆಯಲ್ಲಿ ಮಾರಾಟ ಮಾಡಿದ್ದರು.

    ಈಗ ಬಿಎಸ್4 ಕಾರುಗಳ ಮಾರಾಟಕ್ಕೆ ಮಾರ್ಚ್ ಮಾರ್ಚ್ 31 ಕೊನೆಯ ದಿನವಾಗಿದೆ. ಹೀಗಾಗಿ ಕಾರುಗಳನ್ನು ಉತ್ಪಾದನೆ ಮಾಡಿದರೆ ಈ ಕಾರು ಮಾರಾಟವಾಗದೇ ಉಳಿದರೆ ಏನು ಮಾಡಬೇಕು ಎನ್ನುವ ಸಂಕಷ್ಟಕ್ಕೆ ಅಟೋ ಕಂಪನಿಗಳು ಸಿಲುಕಿವೆ. ಇದರ ಜೊತೆಗೆ ವಿಶ್ವದಲ್ಲಿ ಆರ್ಥಿಕ ಸಮಸ್ಯೆ ಜೋರಾಗಿರುವ ಕಾರಣ ಕಾರುಗಳ ಮಾರಾಟ ಸಹ ಇಳಿಕೆಯಾಗಿವೆ. ಈ ಕಾರಣದ ಜೊತೆಗೆ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸುವ ಕಾಲಘಟದ್ದಲ್ಲಿ ಇರುವ ಕಾರಣ ಈ ಕಾರುಗಳ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯುತ್ತಿದೆ. ಇದನ್ನೂ ಓದಿ: ಬಿಎಸ್4 ಕಾರಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?

     

    ಏನಿದು ಬಿಎಸ್-6?
    ಭಾರತ್ ಸ್ಟೇಜ್(ಬಿಎಸ್) ಅಂದರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಈ ಮಾನದಂಡವನ್ನ ನಿಗದಿಪಡಿಸುತ್ತದೆ. ಹಾಗೆ ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡುತ್ತದೆ. ವಾಹನಗಳ ಮಾಲಿನ್ಯ ಪ್ರಮಾಣವನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಮಾನದಂಡವನ್ನ ಹಾಕಿದೆ. ಸದ್ಯ ಬಿಎಸ್-4 ಜಾರಿಯಲ್ಲಿದೆ. ಬಿಎಸ್-5 ಬದಲು ನೇರವಾಗಿ ಬಿಎಸ್-6 ಗುಣಮಟ್ಟದ ವಾಹನಗಳ ಮಾರಾಟ ವ್ಯವಸ್ಥೆಯನ್ನು 2020ರ ವೇಳೆಗೆ ಪರಿಚಯಿಸಲಾಗುತ್ತಿದೆ. ಈ ಬಗ್ಗೆ 2016ರಲ್ಲಿಯೇ ಕೇಂದ್ರ ಸರಕಾರ ನಿರ್ಧಾರ ಕೈಗೊಂಡು ಎಲ್ಲ ಅಟೋ ಕಂಪನಿಗಳಿಗೆ ಬಿಎಸ್-6 ಮಾನದಂಡ ಕಾರುಗಳನ್ನು ತಯಾರಿಸಿ ಎಂದು ಸೂಚಿಸಿತ್ತು.

    ಬಿಎಸ್-4 ವಾಹನಗಳ ಮಾರಾಟಕ್ಕೆ 2020ರ ಮಾರ್ಚ್ 31ರ ನಂತರವೂ ಅವಕಾಶ ನೀಡಬೇಕೆಂದು ವಾಹನ ಕಂಪನಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಆದರೆ ಕೋರ್ಟ್ ಈ ಮನವಿಯನ್ನು ತಳ್ಳಿ ಹಾಕಿ 2020ರ ಏ.1ರಿಂದ ದೇಶಾದ್ಯಂತ ಭಾರತ್ ಸ್ಟೆಜ್ 4(ಬಿಎಸ್-4) ವಾಹನಗಳನ್ನು ಮಾರಾಟ ಹಾಗೂ ನೋಂದಣಿ ಮಾಡದಂತೆ ಆದೇಶಿಸಿದೆ.

  • ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳು 1 ರೂ.ಗೆ ಲಭ್ಯ

    ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳು 1 ರೂ.ಗೆ ಲಭ್ಯ

    ನವದೆಹಲಿ: ಮಹಿಳೆಯರ ಆರೋಗ್ಯ, ಶುಚಿತ್ವ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಜನೌಷಧ ಕೇಂದ್ರಗಳಲ್ಲಿ ಕೇವಲ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಒದಗಿಸಲು ಮುಂದಾಗಿದೆ.

    ಈ ಹಿಂದೆ ಜನೌಷಧ ಕೇಂದ್ರಗಳಲ್ಲಿ 2.50 ರೂ.ಗೆ ಮಾರಲಾಗುತ್ತಿದ್ದ ಸ್ಯಾನಿಟರಿ ಪ್ಯಾಡ್‍ಗಳು ಇಂದಿನಿಂದ ಕೇವಲ 1 ರೂ.ಗೆ ದೊರೆಯಲಿವೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‍ಸುಖ್ ಮಾಂಡವೀಯ ತಿಳಿಸಿದ್ದಾರೆ. ಮಣ್ಣಿನಲ್ಲಿ ಕರಗಬಲ್ಲ(ಬಯೋಡಿಗ್ರೆಡೆಬಲ್) ‘ಸುವಿಧಾ’ ನ್ಯಾಪ್‍ಕಿನ್‍ಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

    ಈ ಹಿಂದೆ 4 ಸ್ಯಾನಿಟರಿ ಪ್ಯಾಡ್‍ಗಳುಳ್ಳ ಪ್ಯಾಕಿಗೆ 10 ರೂ. ಇತ್ತು. ಆದರೆ ಇಂದಿನಿಂದ ಅದೇ ಪ್ಯಾಡ್‍ಗಳ ಬೆಲೆ 4 ರೂ.ಗೆ ಇಳಿದಿದೆ. ಹೀಗೆ ದರದಲ್ಲಿ 60% ಕಡಿತ ಮಾಡುವ ಮೂಲಕ ಮೋದಿ ನೇತೃತ್ವದ ಸರ್ಕಾರವು 2019ರ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಸಚಿವರು ತಿಳಿಸಿದರು.

    ಸದ್ಯ ತಯಾರಕರು ಉತ್ಪಾದನಾ ವೆಚ್ಚ ಎಷ್ಟಾಗುತ್ತದೋ ಅದೇ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‍ಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಆದರೆ ನಾವು ಅದಕ್ಕೆ ಸಬ್ಸಿಡಿ ನೀಡಿ ಅದರ ಮಾರಾಟ ದರವನ್ನು ಕಡಿಮೆಗೊಳಿಸಿದ್ದೇವೆ. ಮಾರಾಟದ ಪ್ರಮಾಣದ ಮೇಲೆ ಸಬ್ಸಿಡಿಯ ವಾರ್ಷಿಕ ವೆಚ್ಚ ಅವಲಂಭಿಸಿದೆ ಎಂದರು.

    ಸುವಿಧಾ ನ್ಯಾಪ್‍ಕಿನ್ಸ್ ಯೋಜನೆಯನ್ನು 2018ರ ಮಾರ್ಚ್‍ನಲ್ಲಿ ಘೋಷಿಸಲಾಗಿತ್ತು. ಅದೇ ವರ್ಷ ಮೇ ತಿಂಗಳಿನಿಂದ ಈ ಯೋಜನೆ ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗಿತ್ತು. ಕಳೆದ 1 ವರ್ಷದ ಅವಧಿಯಲ್ಲಿ ಸುಮಾರು 5,500 ಜನೌಷಧ ಕೇಂದ್ರಗಳಲ್ಲಿ 2.2 ಕೋಟಿ ನ್ಯಾಪ್‍ಕಿನ್‍ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈಗ ದರ ಇಳಿಕೆ ಮಾಡಿರುವುದರಿಂದ ಸುವಿಧಾ ನ್ಯಾಪ್‍ಕಿನ್ಸ್ ಮಾರಾಟ ಪ್ರಮಾಣ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಎಂದು ಮನ್‍ಸುಖ್ ಮಾಂಡವೀಯ ಅಭಿಪ್ರಾಯ ವ್ಯಕ್ತಪಡಿಸಿದರು.