ಕಲಬುರಗಿ: ಎಂಪಿ ಎಂಎಲ್‍ಎ ನಮ್ಮ ಮನೆಯೊಳಗೆ ಇದ್ದಾರೆ ಎಂದು ಪೊಲೀಸ್ ಪೇದೆಯೊಬ್ಬ ರೈತನ ಮೇಲೆ ದರ್ಪ ತೋರಿಸಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಔರಾದ್ ಗ್ರಾಮದಲ್ಲಿ ನಡೆದಿದೆ.
ರೈತ ಅಶೋಕ ಮೇಲೆ ಜೇವರ್ಗಿ ಠಾಣೆ ಪೇದೆ ತಾರಾಸಿಂಗ್ ನಾಯ್ಕ್ ದರ್ಪ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಎಂಪಿ ಎಮ್‍ಎಲ್‍ಎಗಳು ನಮ್ಮ ಮನೆಯಲ್ಲಿದ್ದಾರೆ. ಏನು ಮಾಡಿಕೊಳ್ತಿಯಾ ಮಾಡಿಕೋ ಹೋಗು ಎಂದು ಪೊಲೀಸಪ್ಪ ರೈತನನ್ನು ಎಳೆದಾಡಿದ್ದಾನೆ.
ಔರಾದ್ ಕ್ರಾಸ್‍ನಲ್ಲಿ ಪೆಟ್ರೋಲಿಂಗ್ ವಾಹನದ ಪೊಲೀಸರು ಲಾರಿಯೊಂದನ್ನು ಹಿಡಿದಿದ್ದರು, ಈ ವೇಳೆ ಲಾರಿ ಚಾಲಕ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿತ್ತು. ಇದನ್ನು ನೋಡಿಕೊಂಡು ನಿಂತಿದ್ದ ರೈತ ಅಶೋಕನ ಮೇಲೆ ಪೊಲೀಸಪ್ಪನಿಗೆ ಸಿಟ್ಟು ಬಂದಿದೆ. ಈ ಕ್ಷುಲ್ಲಕ ಕಾರಣಕ್ಕೆ ಸಿಟ್ಟಾದ ತಾರಾಸಿಂಗ್ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದೀಯಾ ಎಂದು ಜಗಳ ಮಾಡಿದ್ದಾನೆ. ನಂತರ ಸ್ಥಳೀಯರು ಬಂದು ಪೇದೆಗೆ ಸಮಾಧಾನ ಮಾಡಿದ್ದಾರೆ.
ತುಮಕೂರು: ವಾಲ್ಮೀಕಿ ವಿಗ್ರಹ ಸ್ಥಾಪನೆಯ ವಿವಾದದ ಗಲಾಟೆಯಲ್ಲಿ ಪೊಲೀಸ್ ಪೇದೆ ಊರಿನವರನ್ನೆಲ್ಲ ಬೂಟಿನಿಂದ ಒದೆಯುತ್ತೇವೆ ಎಂದು ಆವಾಜ್ ಹಾಕಿದ್ದಾರೆ. ಪೊಲೀಸ್ ಪೇದೆಯ ಈ ದರ್ಪದ ಮಾತಿಗೆ ಆಕ್ರೋಶಗೊಂಡ ನಾಯಕ ಸಮುದಾಯದ ಯುವಕರು ಪೇದೆಯನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯ ಒಬಳಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ವೈ.ಎನ್.ಹೊಸಕೋಟೆ ಠಾಣೆಯ ಪೇದೆ ಶಿವರಾಜ್ ಸಾರ್ವಜನಿಕರ ಎದುರು ದರ್ಪ ತೋರಿದ್ದಾರೆ.
ಒಬಳಾಪುರ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಯ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಈ ಪುತ್ಥಳಿ ನಿರ್ಮಾಣವಾಗುತ್ತಿದ್ದ ಜಾಗ ನಮಗೆ ಸೇರಿದ್ದು ಎಂದು ಗೊಲ್ಲ ಸಮುದಾಯದವರು ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ನಿಲ್ಲಿಸಿ ಎಂದು ಹೇಳಲು ಪೇದೆ ಶಿವರಾಜ್ ಹೋಗಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಮಾಧಾನದಿಂದ ತಿಳಿ ಹೇಳುವುದನ್ನು ಬಿಟ್ಟು ಆವಾಜ್ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಊರಿನವರನ್ನೆಲ್ಲ ಬೂಟಿನಿಂದ ಒದೆಯುತ್ತೇವೆ ಎಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಪೇದೆಯ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-ಸರ್ಕಾರಿ ಸಂಬಳ ಬೇಕು ಆದ್ರೆ ಬಡವರ ಸೇವೆ ಬೇಡ
-ಯಾದಗಿರಿಯಲ್ಲಿದ್ದಾನೆ ಯಮಕಿಂಕರ ವೈದ್ಯ
ಯಾದಗಿರಿ: ಸರ್ಕಾರಿ ಸಂಬಳ ಬೇಕು ಆದರೆ ಬಡವರ ಸೇವೆ ಮಾಡಲ್ಲ, ಹಳ್ಳಿಗೆ ಬಂದು ಚಿಕಿತ್ಸೆ ನೀಡಲು ಆಗಲ್ಲ ಎಂದು ಯಾದಗಿರಿಯ ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ವೈದ್ಯನೊಬ್ಬ ದರ್ಪ ಮೆರೆದಿದ್ದಾನೆ. ಗ್ರಾಮಸ್ಥರೊಬ್ಬರು ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಎಂದಿದ್ದಕ್ಕೆ ಅವರಿಗೆ ಸಿಕ್ಕಾಪಟ್ಟೆ ಅವಾಜ್ ಹಾಕಿದ್ದಾನೆ.
ಹೌದು. ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ವೈದ್ಯ ಪ್ರಕಾಶ್ ರೋಗಿಗಳ ಮೇಲೆ ದರ್ಪ ಮೆರೆದಿದ್ದಾನೆ. ಈತನಿಗೆ ಹಳ್ಳಿಗೆ ಬಂದು ಚಿಕಿತ್ಸೆ ನೀಡಲು ಆಗಲ್ಲವಂತೆ. ಆದರೆ ತಿಂಗಳ ಸಂಬಳ ಮಾತ್ರ ಬೇಕಂತೆ. ಅಲ್ಲದೆ ಹುಣಸಗಿ ಪಟ್ಟಣದಲ್ಲಿ ವಾಸವಿರುವ ಡಾ.ಪ್ರಕಾಶ್ ಮೇಲೆ ಕಾನೂನು ಬಾಹಿರವಾಗಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಆರೋಪ ಸಹ ಕೇಳಿಬಂದಿದೆ. ಜೊತೆಗೆ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಬಂದು ರೋಗಿಗಳಿಗೆ ಚಿಕಿತ್ಸೆ ಕೊಡಿ ಎಂದು ಗ್ರಾಮಸ್ಥರು ಕರೆ ಮಾಡಿದರೆ, ಆರೋಗ್ಯ ಸಚಿವರೇ ನನ್ನ ಏನು ಕೇಳಲ್ಲ, ಇನ್ನೂ ನಿಮಗೆ ಯಾಕೆ ಬೇಕು? ಹಳ್ಳಿಗೆ ಬಂದು ಅಲ್ಲಿಯ ವಾತಾವರಣದಲ್ಲಿ ಯಾರಾದರೂ ಕೆಲಸ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ದರ್ಪ ತೋರಿದ್ದಾನೆ.
ಡಾ. ಪ್ರಕಾಶ್ ಕಳೆದ 8 ವರ್ಷದ ಹಿಂದೆ ಕಲ್ಲದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಮುಖ್ಯ ವೈದ್ಯಾಧಿಕಾರಿಯಾಗಿ ನೇಮಕವಾಗಿದ್ದಾನೆ. ಆದರೆ ಇಷ್ಟು ವರ್ಷದಲ್ಲಿ ಅವರು ಆಸ್ಪತ್ರೆಗೆ ಬಂದು ಕೆಲಸ ಮಾಡಿದ್ದು ಬೆರಳೆಣಿಕೆಯಷ್ಟು ದಿನ ಮಾತ್ರ. ತಿಂಗಳಲ್ಲಿ ಒಂದು, ಹೆಚ್ಚೆಂದರೆ ಮೂರು ದಿನ ಬರುವ ಈತ, ಬರೀ ಫೋನ್ ಕಾಲ್‍ನಲ್ಲಿ ಎಲ್ಲಾ ಚಿಕಿತ್ಸೆ ನೀಡುತ್ತಾನೆ. ಆಸ್ಪತ್ರೆಗೆ ಬನ್ನಿ ಸಾರ್ ತುಂಬಾ ಸಿರಿಯಸ್ ಇದೆ ಎಂದು ಗ್ರಾಮಸ್ಥರು ಕರೆ ಮಾಡಿದರೆ ಸಾಕು, ಸಿಡಿಮಿಡಿಗೊಂಡು ಕರೆ ಮಾಡಿದವರ ಮೇಲೆ ಸಿಟ್ಟಿಗೇಳುತ್ತಾನೆ.
ಸರ್ಕಾರಿ ಆಸ್ಪತ್ರೆಗಳೆಂದರೆ ಜನರು ಮೂಗು ಮುರಿಯುತ್ತಾರೆ. ಅಂತದ್ರಲ್ಲಿ ಹಳ್ಳಿಯ ಸರ್ಕಾರಿ ಆಸ್ಪತ್ರೆಯಂದರೆ ಈತನಿಗೆ ಅಲರ್ಜಿಯುಂತೆ. ಒಂದು ವೇಳೆ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯವಿಲ್ಲದ ಪರಿಸ್ಥಿತಿ ಇದ್ದರೆ ವೈದ್ಯ ಆಸ್ಪತ್ರೆಗೆ ಬರೋದಿಲ್ಲ ಅನ್ನೊದಕ್ಕೆ ಕಾರಣವಾಗುತ್ತದೆ. ಆದರೆ ಈ ಊರಿನಲ್ಲಿ ಒಳ್ಳೆಯ ಕಟ್ಟಡ, ಚಿಕಿತ್ಸೆಗೆ ಬೇಕಾದ ಸೌಲಭ್ಯವಿದೆ. ಕಲ್ಲದೇವನಹಳ್ಳಿ ಹೆಬ್ಬಾಳ, ದೇವನೂರು, ಸಿದ್ದಾಪುರ, ಕಚ್ಚಕನೂರು ಸೇರಿದಂತೆ ಹತ್ತಾರು ಹಳ್ಳಿಯ ಗ್ರಾಮಸ್ಥರಿಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವೇ ಆಸರೆಯಾಗಿದೆ. ನುರಿತ ವೈದ್ಯರು, ಸುಸಜ್ಜಿತವಾದ ಆಸ್ಪತ್ರೆ ಇದ್ದರೂ ಸಹ ವೈದ್ಯಾಧಿಕಾರಿ ಪ್ರಕಾಶ್ ನಿರ್ಲಕ್ಷ್ಯದಿಂದ ನೂರಾರು ಅಮಾಯಕ ಜೀವಗಳು ನಲುಗುವಂತಾಗಿದೆ.
ಪ್ರಕಾಶ್ ವಿರುದ್ಧ ಕೂಡಲೇ ಸರ್ಕಾರ ಕ್ರಮಕೈಗೊಳ್ಳಬೇಕು. ಜೊತೆಗೆ ಕಲ್ಲದೇವನಹಳ್ಳಿಯ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಒಳ್ಳೆಯ ವೈದ್ಯರನ್ನು ನೇಮಕ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
– ಕಾಂಗ್ರೆಸ್ ಬೆಂಬಲಿತ ಜನರಿಂದ ಪ್ರತಿಭಟನೆ
– ಉದ್ದೇಶಪೂರ್ವಕವಾಗಿ ನನ್ನನ್ನು ತಡೆಯಲಾಯಿತು
ಚಿಕ್ಕೋಡಿ: ಪರಿಹಾರ ಕೇಳಲು ಬಂದ ಪ್ರವಾಹ ಸಂತ್ರಸ್ತರಿಗೆ ಈಗ ಕೊಟ್ಟಿದ್ದೆ ಹೆಚ್ಚಾಯ್ತು ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ದರ್ಪ ತೋರಿದ್ದಾರೆ.
ಇಂದು ಚಿಕ್ಕೋಡಿಯ ಯಡುರು ಗ್ರಾಮಕ್ಕೆ ಪ್ರವಾಹ ಗ್ರಾಮಗಳ ವೀಕ್ಷಣೆಗೆ ಬಂದಿದ್ದ ಈಶ್ವರಪ್ಪ ಅವರನ್ನು ಸಂತ್ರಸ್ತರು ಈಗ ನೀಡುತ್ತಿರುವ 10 ಸಹಾಯಧನ ಸಾಕಾಗುತ್ತಿಲ್ಲ. ಮನೆಯನ್ನು ಕಳೆದುಕೊಂಡಿದ್ದೇವೆ. ಈ ಹಣ ತೆಗೆದುಕೊಂಡು ನಮಗೆ ಜೀವನ ನಡೆಸುವುದು ನಮಗೆ ಕಷ್ಟವಾಗುತ್ತಿದೆ ಎಂದು ಕೇಳಿಕೊಂಡಿದ್ದಾರೆ.
ಸಂತ್ರಸ್ತರ ಸಮಸ್ಯೆಗಳನ್ನು ಕಾರಿನಲ್ಲೇ ಕುಳಿತು ಸ್ವೀಕಾರ ಮಾಡುತ್ತಿದ್ದ ಈಶ್ವರಪ್ಪ. ನಾವು ಈಗ ಕೊಡುತ್ತಿರುವ ಪರಿಹಾರ ಧನವೇ ನಿಮಗೆ ಹೆಚ್ಚಾಗಿದೆ. ಇನ್ನೂ ಜಾಸ್ತಿ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಂತ್ರಸ್ತರು ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಶ್ವರಪ್ಪ ಅವರ ವಿರುದ್ಧ ಘೋಷಣೆ ಕೂಗಿ ಕಾರನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಈಶ್ವರಪ್ಪ, ನಾನು ಎಲ್ಲಾ ಗ್ರಾಮಗಳಿಗೂ ಅಧಿಕಾರಿಗಳ ಜೊತೆ ಹೋಗಿ ಪ್ರವಾಹ ವೀಕ್ಷಣೆ ಮಾಡಿ ಎಲ್ಲರಿಗೂ ಪರಿಹಾರ ಹಣ ದೊರೆಯುವಂತೆ ಮಾಡುತ್ತಿದ್ದೇನೆ. ಗ್ರಾಮದ ದೇವಸ್ಥಾನದಲ್ಲಿ ಸಂತ್ರಸ್ತರ ಜೊತೆ ಸಭೆ ನಡೆಸಿ ಪರಿಹಾರ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದೇನೆ. ಸಭೆ ಮುಗಿಸಿ ಬರುತ್ತಿದ್ದಾಗ ಕಾಂಗ್ರೆಸ್ ಬೆಂಬಲಿತ ಜನ ಪ್ರತಿಭಟನೆ ಮಾಡಿದ್ದಾರೆ. ಇದು ರಾಜಕೀಯಕ್ಕಾಗಿ ಮಾಡಿದ ಪ್ರತಿಭಟನೆ ಎಂದು ಪ್ರತಿಕ್ರಿಯಿಸಿದರು.
ಈ ಘಟನೆಗೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಈಶ್ವರಪ್ಪ, ಈಗಾಗಲೇ ಪ್ರವಾಹ ಪೀಡಿತ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಚೆಕ್ ವಿತರಣೆ ಮಾಡಲಾಗಿದೆ. ಬರುವ ದಿನಗಳಲ್ಲಿ ಬಿದ್ದ ಮನೆಗೆ ಪರಿಹಾರ, ಮನೆ ಕಟ್ಟಿ ಕೊಡಲು ಪರಿಹಾರ ನೀಡಲಾಗುವುದು ಎಂದು ಹೇಳಿದರು. ಇದೇ ವೇಳೆ ರಾಜಕೀಯ ನಾಯಕರು ಬಂದ ಪುಟ್ಟ ಹೋದ ಪುಟ್ಟ ಅನ್ನೋ ಹಾಗೇ ಮಾಡುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೆಂಡಾ ಮಂಡಲವಾದ ಈಶ್ವರಪ್ಪ ಮೈಕ್ ತಳ್ಳಿ ಮುಂದೆ ಹೋದರು.
ಕಲಬುರಗಿ: ಕೃಷಿ ಹೊಂಡದ ಮಾಹಿತಿ ಕೇಳಲು ಹೋದ ರೈತರಿಗೆ ಅಧಿಕಾರಿಯೋರ್ವ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಅಫಜಲಪುರ್ ತಾಲೂಕಿನ ಕೃಷಿ ಇಲಾಖೆಯಲ್ಲಿ ನಡೆದಿದೆ.
ತಾಲೂಕಿನ ಚಿಂಚೋಳಿ ಗ್ರಾಮದ ರೈತರು ನಾವು ದಾಖಲಾತಿ ನೀಡಿದ್ದರೂ ನಮ್ಮ ಜಮೀನಿನಲ್ಲಿ ಮಾತ್ರ ಯಾಕೆ ಕೃಷಿ ಹೊಂಡ ನಿರ್ಮಿಸಿಲ್ಲ ಅಂತಾ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೊಪಗೊಂಡ ಅಧಿಕಾರಿ ನಿಮ್ಮ ಫಾರಂ ರಿಜಕ್ಟ್ ಮಾಡಿ ಹರಿದು ಹಾಕಿದ್ದೇನೆ. ಸಿಒಡಿ-ಸಿಬಿಐ ಅಲ್ಲದೇ ಯಾರಿಗಾದರೂ ಕರೆದುಕೊಂಡು ಬನ್ನಿ ನಾನು ನೋಡ್ಕೊತೀನಿ ಅಂತ ಅವಾಚ್ಯ ಶಬ್ಧಗಳಿಂದ ರೈತರಿಗೆ ನಿಂದಿಸಿದ್ದಾನೆ.
ಅಧಿಕಾರಿ ಅಸಭ್ಯ ವರ್ತನೆಗೆ ರೈತರು ಬೇಸತ್ತು ನಾವು ನಿಮ್ಮ ಮೇಲೆ ಯಾವ ತನಿಖೆಗೂ ಹಾಕಲ್ಲ, ಹಾಗೆ ಮಾಡೋದಾಗಿದ್ರೆ ನಿಮ್ಮ ಬಳಿ ಯಾಕೆ ಬರುತ್ತಿದ್ದೇವು? ಅಧಿಕಾರಿಗಳೇ ಹೀಗೆ ಹೇಳಿದರೆ ರೈತರು ಏನು ಮಾಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಕೋಪಗೊಂಡ ಅಧಿಕಾರಿ ಏನಾದರೂ ಮಾಡಿಕೊಳ್ಳಿ ನಾನು ಯಾರಿಗೂ ಹೆದರೋದಿಲ್ಲ ಎನ್ನುವ ರೀತಿ ಉತ್ತರ ನೀಡಿ ರೈತರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ.
ಈ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಅಧಿಕಾರಿಯ ದರ್ಪದ ವರ್ತನೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕೌಟಂಬಿಕ ಕಲಹ ಹಿನ್ನೆಲೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯರಿಗೆ ಪೊಲೀಸ್ ಅಧಿಕಾರಿಗಳು ಹೊಡೆದ ಅಮಾನವೀಯ ಘಟನೆ ರಾಜಧಾನಿಯ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದಿದೆ
ಕೌಟುಂಬಿಕ ಕಲಹದ ಹಿನ್ನೆಲೆ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆಯರ ಮೇಲೆ ಕುಮಾರಸ್ವಾಮಿ ಠಾಣೆ ಎಎಸ್‍ಐ ರೇಣುಕಯ್ಯ ದರ್ಪ ಮೆರೆದಿದ್ದಾರೆ. ನ್ಯಾಯಕೇಳಿ ಠಾಣೆ ಮೆಟ್ಟಿಲೇರುವ ಮಹಿಳೆಯರಿಗೆ ಮರ್ಯಾದೆ ಕೊಡದೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ಕುತ್ತಿಗೆ ಹಿಡಿದು ಠಾಣೆಯಿಂದ ಹೊರ ದಬ್ಬಿದಲ್ಲದೆ ಅವರಿಗೆ ಹೊಡೆದಿದ್ದಾರೆ.
ದಕ್ಷ ಅಧಿಕಾರಿ ಅಣ್ಣಾಮಲೈ ಸುಪರ್ದಿಯಲ್ಲಿರುವ ಠಾಣೆಯಲ್ಲಿ ಇಂತಹ ಅಮಾನವೀಯ ಕೃತ್ಯ ನಡೆದಿದ್ದು, ಠಾಣೆಗೆ ಬಂದ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿರುವ ದೃಶ್ಯವನ್ನು ಠಾಣೆಯ ಇತರ ಪೊಲೀಸರೇ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಯೂನಿಫಾರ್ಮ್ ಇಲ್ಲದಿದ್ರು ಖದರ್ ತೋರಿಸಿರುವ ಎಎಸ್‍ಐ ರೇಣುಕಯ್ಯ ಮೇಲೆ ಈಗ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಮಹಿಳೆ ಮೇಲೆ ಎಎಸ್.ಐ ದೌರ್ಜನ್ಯ ಪ್ರಕರಣದ ಕುರಿತು ವಿಚಾರಣೆ ನಡೆಸಲು ಇಂದು ಮಧ್ಯಾಹ್ನ 1 ಗಂಟೆಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭಾಯಿ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಪ್ಪಳ: ಜಿಲ್ಲೆಯ ಕನಕಗಿರಿಯ ಮಕ್ಕಳ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ(ಸಿಡಿಪಿಓ)ಯೊಬ್ಬ ನನಗೆ ಶಾಸಕರೇ ದೇವರು, ಅವರು ಹೇಳಿದರೇ ಮಾತ್ರ ಇಲ್ಲಿಂದ ಹೋಗುತ್ತೇನೆಂದು ದರ್ಪ ಮೆರೆಯುತ್ತಿದ್ದಾರೆ.
ಹೌದು, ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಕನಕಗಿರಿ ಶಾಸಕ ಬಸವರಾಜ್ ದಡೇಸುಗುರು ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇವರ ಹೆಸರನ್ನು ಹೇಳಿಕೊಂಡು ಸಿಡಿಪಿಓ ಅಧಿಕಾರಿಯೊಬ್ಬ ದರ್ಪ ಮೆರೆಯುತ್ತಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಕನಕಗಿರಿ ಸಿಡಿಪಿಓ ಆಗಿ ಕೆಲಸ ಮಾಡುತ್ತಿದ್ದ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಅವರನ್ನು ಜಿಲ್ಲಾ ಪಂಚಾಯತ್ ಸಿ.ಇ.ಓ ವೆಂಕಟ್ ರಾಜು ವರ್ಗಾವಣೆ ಮಾಡಿದ್ದರು. ಅಲ್ಲದೆ ಆ ಜಾಗಕ್ಕೆ ವಿನಾಯಕ ಅಗಸಿಯವರನ್ನು ನೇಮಕ ಮಾಡಿದ್ದರು. ಆದರೆ ವಿರೂಪಾಕ್ಷಿ ಸ್ವಾಮಿ ಹಿರೇಮಠ್ ಮಾತ್ರ ಸಿಇಓ ಆದೇಶವನ್ನು ಧಿಕ್ಕರಿಸಿ ವಿನಾಯಕ್‍ಗೆ ಅಧಿಕಾರ ಹಸ್ತಾಂತರ ಮಾಡಿಲ್ಲ. 1 ತಿಂಗಳಿಂದ ವಿನಾಯಕ್‍ಗೆ ಯಾವುದೇ ರಿಜಿಸ್ಟರ್ ನೀಡದೆ ಸಿಡಿಪಿಓ ಕಚೇರಿಯ ಬೀಗ ಹಾಕಿಕೊಂಡು ತಿರುಗಾಡುತ್ತಿದ್ದಾರೆ.
ರೌಡಿಗಳ ಮೂಲಕವೂ ಬೆದರಿಕೆ ಹಾಕುವ ಕೆಲಸಕ್ಕೆ ವಿರೂಪಾಕ್ಷಿ ಮುಂದಾಗಿದ್ದಾರೆ. ಅಲ್ಲದೇ ಇತ್ತೀಚೆಗೆ ವ್ಯಕ್ತಿಯೊಬ್ಬರ ಜೊತೆ ಫೋನ್ ಸಂಭಾಷಣೆಯಲ್ಲಿ ಮಾತನಾಡಬೇಕಾದರೆ, ನನಗೆ ಶಾಸಕರ ಬೆಂಬಲವಿದೆ. ಅವರು ಹೇಳಿದರೆ ಮಾತ್ರ ನಾನು ಇಲ್ಲಿಂದ ಹೋಗುತ್ತೀನಿ ಎಂದು ದರ್ಪದಿಂದ ಮಾತನಾಡಿದ್ದಾರೆ. ಇಷ್ಟೆಲ್ಲಾ ಆದರೂ ಶಾಸಕ ಬಸವರಾಜ್ ದಡೇಸುಗೂರು ಮಾತ್ರ ವಿರೂಪಾಕ್ಷಿಯನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆಡಿಯೋ ಸಂಭಾಷಣೆಯಲ್ಲಿ ಏನಿದೆ? ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೆನ್ ಸಿಎಮ್ಮಾ? ಇಲ್ಲಾ ವರ್ಲ್ಡ್ ಫೇಮಸ್ಸಾ? ಏನ್ ಹೇಳ್ರಿ, ಅವರೇನ್ ಹೇಳ್ರಿ? ನನಗೇನು ಗೊತ್ತಿಲ್ಲ. ನಮ್ಮ ಮನ್ಯಾಗ ಯಾರು ರಾಜಕೀಯದವ್ರಿಲ್ಲ, ಯಾರು ಲಾಯರ್ ಇಲ್ಲ. ನಮ್ಮ ಮನೇಲಿ ಸಿಬಿಐ ಆಫೀಸರ್ ಆಗಿ ರಿಟೈರ್ಡ್‍ಮೆಂಟ್ ಆಗ್ಯಾರಾ. ಸಿಬಿಐ ಇಲಾಖೆದಾಗ. ಬಸವರಾಜ್ ಪೊನ್ನಾಪುರ: ಹ..ಹ.. ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಅವರೇನ್ ಹುಲಿ ಕಟ್ಯಾರ. ಕರಡಿ ಕಟ್ಯಾರ. ಏನ್ರೀ ಏನ್ಮಾಡ್ತಾರ್ ಹೇಳ್ರಿ. ಬಸವರಾಜ್ ಪೊನ್ನಾಪುರ: ಇವಾಗ ನಾವ್ ಬೆಂಬಲ ಮಾಡ್ಬೇಕಲ್ಲ. ನಾನ್ ಯಾರಾದ್ರೂ ಒಬ್ರು ಹೊಂದಾಣಿಕೆ ಮಾಡಿಕೊಂಡಿ ಹೋಗ್ರಿ ಅಂತಾ ಹೇಳಿದ್ನ ಅಥವಾ ನಿನ್ ಬಿಟ್ಟು ಹೋಗು ಅಂತಾ ಹೇಳಿದ್ನ.? ಸರಿ ನಂದ್ ಬಿಡು ನೀನ್ಯಾರ್ ಫಾರ್(ಪರವಾಗಿ) ಅದಿ ಹೇಳ್.. ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ನಾನ್ ಎಂ.ಎಲ್.ಎ ಫಾರ್ ಅದೀನಿ. ಬಸವರಾಜ್ ಪೊನ್ನಾಪುರ: ನಿನ್ ಎಂ.ಎಲ್.ಎ ಫಾರ್ ಅದಿ ಏನ್? ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಹೌದು ನೂರಕ್ಕೆ ನೂರು ಎಂ.ಎಲ್.ಎ ಫಾರ್ ನಾನು.. ಬಸವರಾಜ್ ಪೊನ್ನಾಪುರ: ಓಕೆ ಅಂದ್ರೆ ಉಳಿದವ್ರು ಸಂಬಂಧ ಇಲ್ಲ ನಿಂಗೆ. ಎಂಎಲ್‍ಎ ಇದ್ರ ಸಾಕು.. ಜಿಲ್ಲಾಪಂಚಾಯಿತಿ ಅವರು ಏನ್ ಲೆಕ್ಕಕ್ಕೆ ಇಲ್ಲ ಹಂಗಾರ? ಪ್ರಭಾರಿ ಸಿಡಿಪಿಓ ವಿರೂಪಾಕ್ಷ: ಜಿಲ್ಲಾಪಂಚಾಯಿತಿ ಅವರು ಏರಿಯಾದಾಗ ಅಷ್ಟೇ. ಎಂಎಲ್‍ಎ ಎಲ್ಲಾ ಕಡೆ ಬರ್ತಾರ.