Tag: ದಯಾಮರಣ

  • ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ, ಮಗನಿಂದ ತಾಯಿಯ ದಯಾಮರಣಕ್ಕೆ ಮನವಿ

    ತುಮಕೂರು:ನಿಗೂಢ ಖಾಯಿಲೆಯಿಂದ ನರಳುತಿದ್ದ ತಾಯಿಯ ದಯಾಮರಣಕ್ಕೆ ಅನುಮತಿ ಕೊಡುವಂತೆ ಮಗನೊಬ್ಬ ತುಮಕೂರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

    ನಿಸ್ತೇಜ ಸ್ಥಿತಿಯಲ್ಲಿರುವ ತಾಯಿಯನ್ನು ಡಿಸಿ ಕಚೇರಿ ದ್ವಾರದಲ್ಲಿ ಮಲಗಿಸಿ ದಯಾಮರಣಕ್ಕಾಗಿ ಮಗ ಅಂಗಲಾಚಿದ್ದಾರೆ. ತುಮಕೂರು ನಗರದ ಗಾರ್ಡನ್ ರಸ್ತೆಯ ನಿವಾಸಿ ನಾಗರಾಜ್ ತನ್ನ ತಾಯಿ ನಾಗರತ್ನಮ್ಮಾರ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ಕೈಕಾಲು ಸ್ವಾದೀನ ಕಳೆದುಕೊಂಡ ನಾಗರತ್ನಮ್ಮ ಕಳೆದ 10 ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ನಾಗರತ್ನಮ್ಮ ಅವರಿಗೆ ಎಷ್ಟೇ ಚಿಕಿತ್ಸೆ ಕೊಡಿಸಿದರೂ ಕಾಯಿಲೆ ಮಾತ್ರ ಗುಣಮುಖವಾಗಿರಲಿಲ್ಲ. ಇದರಿಂದ ಬೇಸತ್ತ ಮಗ ನಾಗರಾಜು ತಾಯಿಯನ್ನು ಕರೆದುಕೊಂಡು ಡಿಸಿ ಕಚೇರಿ ಬಳಿ ಹೋಗಿ ತಾಯಿಯ ದಯಾಮರಣಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.

    ನಂತರ ತಾಯಿ ಮಗನ ಪರಿಸ್ಥಿತಿ ನೋಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ತಕ್ಷಣ ನಾಗರತ್ನಮ್ಮಾಳರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗಕ್ಕೆ ದಯಾಮರಣ

    ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗಕ್ಕೆ ದಯಾಮರಣ

    ನೈರೋಬಿ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವದ ಕೊನೆಯ ಗಂಡು ಬಿಳಿ ಘೇಂಡಾಮೃಗ ಸೋಮವಾರದಂದು ಮೃತಪಟ್ಟಿದೆ.

    ಸುಡಾನ್ ಹೆಸರಿನ ಈ ಘೇಂಡಾಮೃಗ ಹಲವು ಸೋಂಕುಗಳಿಂದ ಬಳಲುತ್ತಿತ್ತು. ಆದ್ರೆ ತೀವ್ರ ಅನಾರೋಗ್ಯ ಸಹಿಸುವ ಶಕ್ತಿ ಇಲ್ಲದ ಕಾರಣ ಪಶುವೈದ್ಯರ ತಂಡ ಸೋಮವಾರದಂದು ಕೀನ್ಯಾದಲ್ಲಿ ಸುಡಾನ್ ಗೆ ದಯಾಮರಣ ಕಲ್ಪಿಸಿದ್ದಾರೆ. ನಶಿಸುತ್ತಿರುವ ಈ ಘೇಂಡಾಮೃಗ ಜಾತಿಯನ್ನ ಉಳಿಸಲು ವೈದ್ಯರು ವರ್ಷಾನುಗಟ್ಟಲೆ ಹೋರಾಡಿದ್ದರು. ಇದೀಗ ಬಿಳಿ ಘೇಂಡಾಮೃಗಗಳಲ್ಲಿ ಕಟ್ಟ ಕಡೆಯ ಗಂಡು ಸಂತತಿ ಸಾವನ್ನಪ್ಪಿದ್ದು, ಇದರ ಮಗಳು ನಜಿನ್ ಹಾಗೂ ಮೊಮ್ಮಗಳು ಫತು ಮಾತ್ರ ಉಳಿದುಕೊಂಡಿವೆ. ಬಿಳಿ ಘೇಂಡಾಮೃಗ ಸಂತತಿಯನ್ನ ನಶಿಸಿಹೋಗದಂತೆ ತಡೆಯಲು ಸಂರಕ್ಷಿಸಲ್ಪಟ್ಟ ವೀರ್ಯದಿಂದ ಕೃತಕ ಗರ್ಭಧಾರಣೆಯೊಂದೇ ಈಗ ಕೊನೆಯ ಅಸ್ತ್ರವಾಗಿದೆ.

     

    ಮೃತ ಸುಡಾನ್‍ಗೆ 45 ವರ್ಷ ವಯಸ್ಸಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಇದರ ಉಪಜಾತಿಯ ಘೇಂಡಾಮೃಗಳೊಂದಿಗೆ ಮಿಲನ ಕ್ರಿಯೆ ನಡೆಸುವ ಯತ್ನವೂ ವಿಫಲವಾಗಿತ್ತು. ಈ ಹಿಂದೆ ಎರಡನೇ ಕೊನೆಯ ಗಂಡು ಬಿಳಿ ಘೇಂಡಾಮೃಗ ಸುನಿ ಹೃದಯಾಘಾತದಿಂದ 2014ರಲ್ಲಿ ಮೃತಪಟ್ಟಿತ್ತು. ಸುಡಾನ್ ಮತ್ತು ಸುನಿ ಎರಡನ್ನೂ 2009ರಲ್ಲಿ ಸೆಝ್ ರಿಪಬ್ಲಿಕ್‍ ನ ಮೃಗಾಲಯದಿಂದ ಕೀನ್ಯಾದ ಒಲ್ ಪೆಜೆತಾ ಕಂನ್ಸರ್ವೆನ್ಸಿಗೆ ಕರೆತರುವ ವೇಳೆಗೆ ಎರಡೂ ಪ್ರಾಣಿಗಳಿಗೆ ಸಂತಾನೋತ್ಪತ್ತಿಯ ವಯಸ್ಸು ಮೀರಿತ್ತು. ಇದೀಗ ಸುಡಾನ್ ನ ಮರಣದಿಂದ ಒಲ್ ಪೆಜೆತಾದ ಸಿಬ್ಬಂದಿ ದುಃಖಿತರಾಗಿದ್ದಾರೆ.

    ವಿಶ್ವದಾದ್ಯಂತ ಬೇಟೆಯಾಡುವಿಕೆಯಿಂದಾಗಿ ಘೇಂಡಾಮೃಗಗಳು ವಿನಾಶದ ಅಂಚಿನಲ್ಲಿರುವ ಹೊತ್ತಲ್ಲೇ ಸುಡಾನ್ ಸಾವನ್ನಪ್ಪಿದೆ. ಚೀನಾದ ಸಾಂಪ್ರದಾಯಿಕ ಔಷಧಿಗಳ ತಯಾರಿಕೆಗಾಗಿ ಘೇಂಡಾಮೃಗಗಳ ಕೊಂಬಿಗೆ ಬಹಳ ಬೇಡಿಕೆ ಇದ್ದು ಅವುಗಳ ಬೆಲೆಯೂ ಹೆಚ್ಚಿದೆ. ಹಾಗೇ ಯೆಮೆನಿ ಪುರುಷರು ಘೇಂಡಾಮೃಗದ ಕೊಂಬನ್ನ ತಮ್ಮ ಕಠಾರಿಗೆ ಅಲಂಕಾರಿಕ ಅಂಗವಾಗಿ ಬಳಸುತ್ತಾರೆ. ಜಗತ್ತಿನಾದ್ಯಂತ ಈಗ 5 ವಿವಿಧ ಜಾತಿಯ 30 ಸಾವಿರ ಘೇಂಡಾಮೃಗಗಳು ಮಾತ್ರ ಬದುಕುಳಿದಿವೆ. ಇದರಲ್ಲಿ ಇಂಡೋನೇಷ್ಯಾದಲ್ಲಿ ಸುಮಾತ್ರನ್ ಹಾಗೂ ಜಾವನ್ ರೈನೋಸ್ ಎಂಬ ಎರಡು ಜಾತಿಯ 100 ಘೇಂಡಾಮೃಗಗಳಿವೆ.

  • ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ದಯಾಮರಣಕ್ಕೆ ಸುಪ್ರೀಂ ಅನುಮತಿ: ಏನಿದು ಲಿವಿಂಗ್ ವಿಲ್? ತೀರ್ಪಿನಲ್ಲಿ ಏನಿದೆ? ತಪ್ಪು ಮಾಡಿದ್ರೆ ಶಿಕ್ಷೆ ಏನು?

    ನವದೆಹಲಿ: ದಯಾಮರಣ ಆಯ್ಕೆ ಮಾಡುವುದು ಮೂಲಭೂತ ಹಕ್ಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

    ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪಂಚ ಪೀಠದ ನ್ಯಾಯಾಧೀಶರಾದ ಎಕೆ ಸಿಕ್ರಿ, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಅವರಿದ್ದ ಪೀಠ ಕೆಲ ಮಾರ್ಗಸೂಚಿಗಳನ್ನು ತಿಳಿಸಿ ದಯಾಮರಣಕ್ಕೆ ಅನುಮತಿ ನೀಡಿದೆ.

    ಯಾವುದೇ ಒಬ್ಬ ವ್ಯಕ್ತಿ ವೈದ್ಯಕೀಯ ಮಂಡಳಿ ಮತ್ತು ಹೈಕೋರ್ಟ್ ಅನುಮತಿ ಪಡೆದ ನಂತರ ದಯಾಮರಣ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಆ ವ್ಯಕ್ತಿಗೆ ತನ್ನ ಜೀವ ರಕ್ಷಿಸಲು ಬೇಕಾದ ಮದ್ದು ಮತ್ತು ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕಿದೆ ಎಂದು ತಿಳಿಸಿದೆ. ಆದರೆ ಚುಚ್ಚುಮದ್ದು ನೀಡಿ ಸಾಯಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಿದೆ.

    ದಯಾಮರಣ ಎಂದರೇನು?
    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯೊಬ್ಬ ಮುಂದೆ ಈ ಸಮಸ್ಯೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಮೂಲಕ ಕೇಳಿಕೊಳ್ಳುವುದೆ ದಯಾಮರಣ. ಹಲವು ರಾಷ್ಟ್ರಗಳಲ್ಲಿ ದಯಾಮರಣಕ್ಕೆ ಅನುಮತಿ ಇದೆ.

    ಯುಥೆನೇಸಿಯಾ ಎಂದು ಕರೆಯುವುದು ಯಾಕೆ?
    ಯುಥೆನೇಸಿಯಾ ಮತ್ತು ದಯಾಮರಣ ಎರಡೂ ಒಂದೇ. ಗ್ರೀಕ್ ಭಾಷೆಯಲ್ಲಿ ಒಳ್ಳೆಯ ಸಾವು ಎನ್ನುವುದಕ್ಕೆ ಯುಥೆನೇಸಿಯಾ ಎಂದು ಕರೆಯಲಾಗುತ್ತದೆ.

    ಸುಪ್ರೀಂ ಹೇಳಿದ್ದು ಏನು?
    ವ್ಯಕ್ತಿಯ ಕಾಯಿಲೆ ಗುಣಮುಖವಾಗುವುದೇ ಇಲ್ಲ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದರೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಮೂಲಕ ನಿಷ್ಕ್ರಿಯ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ಇದೇ ವೇಳೆ ವೈದ್ಯಕೀಯ ಮಂಡಳಿ ವ್ಯಕ್ತಿಯ ಗುಣಪಡಿಸದ ಕಾಯಿಲೆ ಕುರಿತು ದೃಢಪಡಿಸಿದರೆ ವ್ಯಕ್ತಿಯ ಜೀವ ರಕ್ಷಿಸುವ ವೈದ್ಯಕೀಯ ಸವಲತ್ತು ನಿರಾಕರಿಸಬಹುದು ಎಂದು ಹೇಳಿದೆ.

    ಅರ್ಜಿ ಸಲ್ಲಿಸಿದವರು ಯಾರು?
    2005 ರಲ್ಲಿ ‘ಕಾಮನ್ ಕಾಸ್’ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು `ಲಿವಿಂಗ್ ವಿಲ್’ ಮೂಲಕ ದಯಾಮರಣ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಬಹು ವರ್ಷಗಳಿಂದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಪರೋಕ್ಷ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿತ್ತು. 2011ರಲ್ಲಿ ಭಾರತದ ಸುಪ್ರೀಂಕೋರ್ಟ್ 37 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ನರಳಿದ್ದ ನರ್ಸ್ ಅರುಣಾ ಶಾನ್‍ಭಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ `ಪರೋಕ್ಷ ದಯಾಮರಣ’ಕ್ಕೆ ಅನುಮತಿ ನೀಡಿರಲಿಲ್ಲ. ಈ ತೀರ್ಪು ಪ್ರಕಟವಾದ ಬಳಿಕ ದಯಾಮರಣವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಐದು ಮಂದಿ ನ್ಯಾಯಧೀಶರ ಪಂಚಪೀಠವನ್ನು ರಚಿಸಿತ್ತು.

    ಪ್ರತ್ಯಕ್ಷ ಮತ್ತು ಪರೋಕ್ಷ ದಯಾಮರಣ ಎಂದರೇನು?
    ಅಂಗಾಂಗಗಳು ನಿಷ್ಕ್ರೀಯಗೊಂಡಿರುವ ರೋಗಿಗೆ ನೀಡಿರುವ ವೆಂಟಿಲೇಟರ್ ಸಹಿತ ಜೀವಾಧಾರ ವ್ಯವಸ್ಥೆಯನ್ನು ತೆಗೆಯುವುದು ಪರೋಕ್ಷ ದಯಾಮರಣ. ಒಬ್ಬ ವ್ಯಕ್ತಿಗೆ ಮಾರಣಾಂತಿಕ ರಾಸಾಯನಿಕವನ್ನು ನೀಡಿ ಹತ್ಯೆ ಮಾಡುವುದು ಪ್ರತ್ಯಕ್ಷ ದಯಾಮರಣ. ಪ್ರತ್ಯಕ್ಷ ದಯಾಮರಣ ಕಾನೂನುಬಾಹಿರ.

    ಏನಿದು ಲಿವಿಂಗ್ ವಿಲ್?
    ವ್ಯಕ್ತಿಯೊಬ್ಬ ನಾನು ಮೃತಪಟ್ಟ ನಂತರ ನನ್ನ ಆಸ್ತಿಯನ್ನು ಯಾರಿಗೆ ಹಂಚಬೇಕು ಇತ್ಯಾದಿ ವಿಚಾರಗಳನ್ನು ಲಿಖಿತವಾಗಿ ಬರೆಯುವುದಕ್ಕೆ ವಿಲ್ ಎಂದು ಕರೆಯುತ್ತಾರೆ. ಈ ವಿಲ್ ಎಲ್ಲರಿಗೂ ತಿಳಿದಿದ್ದರೂ ಲಿವಿಂಗ್ ವಿಲ್ ಸ್ವಲ್ಪ ಅದೇ ರೀತಿಯಾಗಿ ಬರುತ್ತದೆ. ಗಂಭೀರ ಚಿಕಿತ್ಸೆಗೆ ದಾಖಲಾಗುವ ಮೊದಲು ಅಥವಾ ಅನುಮತಿಯನ್ನು ನೀಡಲಾಗದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ತನಗೆ ಯಾವ ರೀತಿಯ ಚಿಕಿತ್ಸೆಯನ್ನು ನೀಡಬೇಕು ಎನ್ನುವ ನಿರ್ಧಾರಗಳನ್ನು ಮುಂದೆ ಯಾರು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸುವ ಲಿಖಿತ ದಾಖಲೆಯೇ ಲಿವಿಂಗ್ ವಿಲ್. ಶುಕ್ರವಾರ ಕೋರ್ಟ್ ರೋಗಿ ಲಿವಿಂಗ್ ವಿಲ್ ನೀಡಿದ್ದರೆ ದಯಾಮರಣ ಕಲ್ಪಿಸಬಹುದು ಎಂದು ಹೇಳಿದೆ. ಲಿವಿಂಗ್ ವಿಲ್ ಮೂಲಕ ದಯಾಮರಣ ಕಲ್ಪಿಸಿದ್ದರೆ ರೋಗಿ, ವೈದ್ಯರು ಹಾಗೂ ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ.

    ದಯಾಮರಣ ವಿರೋಧಿಗಳ ವಾದ ಏನಿತ್ತು?
    ಒತ್ತಡ ಹೇರಿ ಲಿವಿಂಗ್ ವಿಲ್ ಬರೆದುಕೊಂಡು ರೋಗಿಯ ದೇಹದ ಅಂಗಾಂಗವನ್ನು ದುರುಪಯೋಗ ಮಾಡಬಹುದು. ಒಂದು ವೇಳೆ ಅವಕಾಶ ನೀಡಿದರೆ ಇದು ಹಣ ಮಾಡುವ ದಂಧೆಯಾಗಬಹುದು. ಹೀಗಾಗಿ ಅವಕಾಶ ನೀಡಬಾರದು ಎಂದು ವಾದಿಸಿದ್ದರು.

    ಕೇಂದ್ರದ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
    ದೀರ್ಘ ಕಾಲದ ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ದಯಾಮರಣ ನೀಡುವ ಸಂಬಂಧ, ಕಳೆದ ವರ್ಷ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿತ್ತು. ಈ ಮಸೂದೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡಲು ಆಸ್ಪತ್ರೆಗಳಲ್ಲಿ ಸಮಿತಿ ರಚಿಸಿ ಗುಣಮುಖವಾಗದ ಕಾಯಿಲೆ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಬೇಕು. ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸಿ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ದಯಾಮರಣವನ್ನು ಸಹಜ ಮರಣ ಎಂದು ಪರಿಗಣಿಸಲಾಗುವುದು ಎನ್ನುವ ಅಂಶವಿತ್ತು.

    ಅಷ್ಟೇ ಅಲ್ಲದೇ ದಯಾಮರಣಕ್ಕೊಳಗಾದ ರೋಗಿ, ವೈದ್ಯರು, ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ. ರೋಗಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಚಿಕಿತ್ಸೆ ಬೇಡ ಎಂದು ಆಪ್ತ ಸಂಬಂಧಿಕರ ಮನವಿ ಅಗತ್ಯ. ಎಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದಯಾಮರಣ ಮನವಿ ಸ್ವೀಕರಿಸಿ ಅದಕ್ಕೆ ಅನುಮತಿ ನೀಡುವ ಸಮತಿ ರಚಿಸಬೇಕು. ಬದುಕುವ ಸಾಧ್ಯತೆ ಇಲ್ಲ, ಆಯಸ್ಸು ಮುಂದೂಡಲು ಇಷ್ಟವಿಲ್ಲ ಎನ್ನುವ `ಲಿವಿಂಗ್‍ವಿಲ್’ ಅರ್ಜಿಯನ್ನು ಸಮಿತಿ ಪರಿಶೀಲಿಸಬೇಕು. ಸಮಿತಿಗೆ ತಪ್ಪು ಮಾಹಿತಿ ನೀಡಿ ದಯಾ ಮರಣಕ್ಕೆ ಅನುಮತಿ ಪಡೆದಿರುವುದು ಸಾಬೀತಾದರೆ 5-10 ವರ್ಷ ಜೈಲು ಶಿಕ್ಷೆಯ ಜೊತೆ 20 ಲಕ್ಷದಿಂದ 1 ಕೋಟಿ ರೂ. ದಂಡ ವಿಧಿಸಲು ಪರಿಷ್ಕೃತ ಕರಡು ಮಸೂದೆಯಲ್ಲಿ ಅವಕಾಶವಿದೆ.

  • ದಯಾಮರಣ ಕೊಡುವಂತೆ ಮಂಡ್ಯದ ರೈತ ಪ್ರತಿಭಟನೆ

    ದಯಾಮರಣ ಕೊಡುವಂತೆ ಮಂಡ್ಯದ ರೈತ ಪ್ರತಿಭಟನೆ

    ಮಂಡ್ಯ: ಜಿಲ್ಲೆಯಲ್ಲಿ ರೈತನೊಬ್ಬ ದಯಾಮರಣ ಕೊಡುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಳೆದ 13 ವರ್ಷದಿಂದ ಹೋರಾಟ ನಡೆಸಿದರೂ ನ್ಯಾಯ ಸಿಗದೆ ಬೇಸತ್ತಿರುವ ರೈತ ಪ್ರಭಾಕರ್, ದಯಾಮರಣಕ್ಕಾಗಿ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ.

    ಶ್ರೀರಂಗಪಟ್ಟಣ ತಾಲೂಕಿನ ದಸರಗುಪ್ಪೆ ಗ್ರಾಮದವರಾದ ಪ್ರಭಾಕರ್, ಕಿರಂಗೂರು ಮೂಲಕ ಹಾದು ಹೋಗಿರುವ ಪಿಕಪ್ ನಾಲೆ ಒತ್ತುವರಿ ಬಗ್ಗೆ ಮುಖ್ಯಮಂತ್ರಿ, ಕಂದಾಯ ಸಚಿವರು, ಅಧಿಕಾರಿಗಳು ಸೇರಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಡ್ಯಾಂನಲ್ಲಿ ನೀರಿದ್ದರೂ ಕಾಲುವೆ ಒತ್ತುವರಿಯಿಂದ ಜಮೀನಿಗೆ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗ್ತಿಲ್ಲ.

    ಹೀಗಾಗಿ ಕಟ್ಟ ಕಡೆಯ ಹೋರಾಟ ಎಂಬಂತೆ ಶ್ರೀರಂಗಪಟ್ಟಣದ ಮಿನಿವಿಧಾನಸೌಧ ಎದುರು ಅಕ್ಟೋಬರ್ 23, ಅಂದ್ರೆ ಸೋಮವಾರದಿಂದ ಸತ್ಯಾಗ್ರಹ ಶುರು ಮಾಡ್ತಿರೋ ಪ್ರಭಾಕರ್, ಸಮಸ್ಯೆ ಬಗೆಹರಿಸಿ ಇಲ್ಲಾಂದ್ರೆ ದಯಾಮರಣಕ್ಕೆ ಅವಕಾಶ ಕೊಡಿ ಅಂತಾ ಪಟ್ಟು ಹಿಡಿದಿದ್ದಾರೆ.

  • ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ಒಂದು ವಿಷದ ಇಂಜೆಕ್ಷನ್ ಕೊಡಿಸಿ: ಬೆಳಗಾವಿಯ ಹಿರಿಯಜ್ಜಿಯ ಮೊರೆ

    ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ಒಂದು ವಿಷದ ಇಂಜೆಕ್ಷನ್ ಕೊಡಿಸಿ: ಬೆಳಗಾವಿಯ ಹಿರಿಯಜ್ಜಿಯ ಮೊರೆ

    ಬೆಳಗಾವಿ: ನನಗೆ ಯಾರೂ ಇಲ್ಲ, ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ನಿಮ್ಮ ಕಾಲಿಗೆ ಬೀಳ್ತಿನಿ, ಒಂದು ವಿಷದ ಇಂಜೆಕ್ಷನ್ ಕೊಡಿಸಿ. ಹೀಗೆ ಕಣ್ಣೀರಿಡುತ್ತಾ ವಿನಂತಿ ಮಾಡ್ತಿರೋ ಈ ಹಿರಿಯಜ್ಜಿಯ ಹೆಸ್ರು ಚನ್ನವ್ವ. ಬೆಳಗಾವಿಯ ವಕ್ಕುಂದ ಗ್ರಾಮದಾಕೆ.

    ಎಲ್ಲವೂ ಸರಿಯಾಗಿದ್ದರೆ ಚನ್ನವ್ವ, ಮರಿಮಕ್ಕಳ ಜೊತೆ ಆಟವಾಡುತ್ತಾ ಮಕ್ಕಳ ಆರೈಕೆಯಲ್ಲಿ ಸುಖವಾಗಿ ಕಾಲ ಕಳೆಯಬೇಕಾಗಿತ್ತು. ಆದರೆ ವಿಧಿ ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಯ ಮಹಿಳಾ ವಾರ್ಡ್‍ನ ನೆಲದ ಮೇಲಿನ ಬೆಡ್ ಮೇಲೆ ದಿನದೂಡುವಂತೆ ಮಾಡಿದೆ.

    ಆರೋಗ್ಯದಲ್ಲಿ ಏರುಪೇರಾಗಿದ್ದ ಚನ್ನವ್ವರನ್ನು ಎರಡು ತಿಂಗಳ ಹಿಂದೆ ಯಾರೋ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಬಳಿಕ ಅತ್ತ ಕಡೆ ಯಾರೂ ತಿರುಗಿ ನೋಡಿಲ್ಲ. ಆಸ್ಪತ್ರೆಯಲ್ಲಿರುವ ಇತರ ರೋಗಿಗಳ ಸಂಬಂಧಿಕರು ಅಜ್ಜಿಗೆ ಊಟ, ತಿಂಡಿ ನೀಡುತ್ತಿದ್ದಾರೆ.

    ಈ ಹಿರಿಯಜ್ಜಿ ಎದ್ದು ನಡಿಯುವ ಸ್ಥಿತಿಯಲ್ಲಿಲ್ಲ. ಕಣ್ಣುಗಳು ಸರಿಯಾಗಿ ಕಾಣಿಸುತ್ತಿಲ್ಲ. ತನ್ನ ಮಕ್ಕಳು, ಕುಟುಂಬದ ಬಗ್ಗೆ ನೆನಪಿಲ್ಲ. ಎಲ್ಲಿಗೆ ಹೋಗ್ಬೇಕು ಅನ್ನೋದ್ರ ಅರಿವಿಲ್ಲ. ಆದ್ರೆ ಈ ಇಳಿ ವಯಸ್ಸಿನಲ್ಲಿ ತನ್ನ ಸ್ಥಿತಿಯ ಬಗ್ಗೆ ಚನ್ನವ್ವಗೆ ಅಸಹನೆಯಿದೆ. ಹೀಗಾಗಿಯೇ ದಯಾಮರಣಕ್ಕಾಗಿ ವಿನಂತಿ ಮಾಡ್ತಿದ್ದಾರೆ.

    ಚನ್ನವ್ವನ ಈ ಸ್ಥಿತಿ ಬೇರಾರಿಗೂ ಬಾರದಿರಲಿ. ಈ ಸುದ್ದಿ ನೋಡಿದ ಬಳಿಕವಾದರೂ ಈ ಹಿರಿಯಜ್ಜಿಯ ಸಂಬಂಧಿಕರು ಜಿಲ್ಲಾಸ್ಪತ್ರೆಯತ್ತ ಮುಖ ಮಾಡ್ಲಿ ಅನ್ನೋದೇ ನಮ್ಮ ಆಶಯ.

  • ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು

    ರಾಯಚೂರು: ದೇಶದ ಏಕೈಕ ಚಿನ್ನ ಉತ್ಪಾದನಾ ಗಣಿ ಸಂಸ್ಥೆಯಾದ ರಾಯಚೂರಿನ ಹಟ್ಟಿ ಚಿನ್ನದ ಗಣಿ ಕಂಪೆನಿಯ ಕಾರ್ಮಿಕರು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

    ಕಂಪೆನಿಯು ವಿಭಾಗೀಯ ಸ್ಟೋರ್ ಪ್ರಾರಂಭಿಸಲು ಸಹಕಾರ ಸಂಘದ ವ್ಯವಹಾರಗಳನ್ನ ನಿಲ್ಲಿಸಿದ್ದು ಸುಮಾರು ವರ್ಷಗಳಿಂದ ದುಡಿದ ಕಾರ್ಮಿಕರನ್ನ ಕೈಬಿಟ್ಟಿದೆ. ಹೀಗಾಗಿ ಹಟ್ಟಿ ಚಿನ್ನದ ಗಣಿ ಸಹಕಾರ ಸಂಘದ 37 ಜನ ಕಾರ್ಮಿಕರಿಗೆ 22 ತಿಂಗಳಿನಿಂದ ಕೆಲಸವೂ ಇಲ್ಲ ಸಂಬಳವೂ ಇಲ್ಲ. 750 ದಿನಗಳಿಂದ ಶಾಂತಿಯುತ ಹೋರಾಟ ನಡೆಸಿದರೂ ಕಾರ್ಮಿಕರ ಸಮಸ್ಯೆಗೆ ಗಣಿ ಆಡಳಿತ ಮಂಡಳಿ ಸ್ಪಂದನೆ ನೀಡಿಲ್ಲ. ಹೀಗಾಗಿ ಕಾರ್ಮಿಕರು ಗಣಿಯ ಪ್ರಧಾನ ವ್ಯವಸ್ಥಾಪಕರ ಮೂಲಕ ಉದ್ಯೋಗ ಕೊಡಿ ಇಲ್ಲವೇ 37 ಜನ ಕಾರ್ಮಿಕರ ಕುಟುಂಬಳಿಗೆ ದಯಾಮರಣಕ್ಕೆ ಅವಕಾಶ ಕೊಡಿ ಅಂತ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

    ಫೆಬ್ರವರಿ 14 ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ. ಹೋರಾಟದಲ್ಲಿ ಯಾರಿಗೆ ಏನೇ ಆದ್ರೂ ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿಯೇ ಕಾರಣ ಅಂತ ಕಾರ್ಮಿಕರು ಎಚ್ಚರಿಸಿದ್ದಾರೆ.

    ಈಗಾಗಲೇ ಸಹಕಾರ ಸಂಘವನ್ನ ಸಮಾಪನಗೊಳಿಸಿ ಕಂಪೆನಿಯೇ ಸ್ಟೋರ್ ಪ್ರಾರಂಭಿಸಿದೆ. ಆದ್ರೆ ಕೆಲಸಗಾರರನ್ನ ಕಂಪೆನಿಯಲ್ಲಿ ಸೇರಿಸಿಕೊಳ್ಳದೇ ಸಂಬಳವನ್ನೂ ನೀಡದೆ ವೇತನ ಒಡಂಬಡಿಕೆಯ ನಿಯಮವನ್ನ ಉಲ್ಲಂಘನೆ ಮಾಡಿದೆ. ಕಾರ್ಮಿಕ ನೀತಿಯನ್ನ ಬದಿಗೊತ್ತಿ ತೆಗೆದುಕೊಂಡಿರುವ ನಿರ್ಧಾರದಿಂದ 37 ಜನ ಕಾರ್ಮಿಕ ಕುಟುಂಬಗಳು ಬೀದಿಗೆ ಬಂದಿವೆ ಎಂದು ದಿ ಕೋ-ಆಪರೇಟಿವ್ ಸ್ಟೋರ್ ಎಂಪ್ಲಾಯಿಸ್ ಅಸೋಸಿಯೇಷನ್ ಅಧ್ಯಕ್ಷ ಇಮಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.