Tag: ದತ್ತು ಹಕ್ಯಾಗೋಳ

  • ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದುರ್ಮರಣ

    ರಸ್ತೆ ಅಪಘಾತದಲ್ಲಿ ಮಾಜಿ ಶಾಸಕ ದುರ್ಮರಣ

    ಚಿಕ್ಕೋಡಿ: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದತ್ತು ಹಕ್ಯಾಗೋಳ (78) ಹಾಗೂ ಮತ್ತೋರ್ವರು ಮೃತಪಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಸುರೇಶ್ ಈರಪ್ಪ ಗಡೇಕಾರ (50) ಗಂಭೀರವಾಗಿ ಗಾಯಗೊಂಡಿದ್ದು, ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಘಟನೆಯ ವಿವರ?:
    ಕೆಲಸ ನಿಮಿತ್ತ ಮಾಜಿ ಶಾಸಕರು ಸಹಚರರ ಜೊತೆಗೆ ನಿಪ್ಪಣಿಯಿಂದ ಬೆಳಗಾವಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಫೋನ್ ಕರೆ ಬಂದಿದೆ. ಹೀಗಾಗಿ ಹುಕ್ಕೇರಿ ತಾಲೂಕಿನ ಹಿಟ್ನಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4 ಬೈಕ್ ನಿಲ್ಲಿಸಿದ್ದರು. ಮಾತು ಮುಗಿಸಿ ಬೈಕ್ ಸ್ಟಾರ್ಟ್ ಮಾಡಿ ರಸ್ತೆಗೆ ಬರುತ್ತಿದ್ದಂತೆಯೇ ಹಿಂದುಗಡೆಯಿಂದ ವೇಗವಾಗಿ ಬಂದ ಲಾರಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಶಾಸಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸವಾರ ಸುರೇಶ್ ಈರಪ್ಪ ಗಡೇಕಾರ ಅವರನ್ನು ಸಂಕೇಶ್ವರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರನೂ ಮೃತಪಟ್ಟಿದ್ದಾರೆ.

    ಚಿಕ್ಕೋಡಿ ತಾಲೂಕಿನ ಕೆರೂರು ನಿವಾಸಿ ದತ್ತು ಹಕ್ಯಾಗೋಳ ಅವರು 2004ರಲ್ಲಿ ಬಿಜೆಪಿಯಿಂದ ಚಿಕ್ಕೋಡಿ-ಸದಲಗಾ (ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ) ಶಾಸಕರಾಗಿ ಆಯ್ಕೆಯಾಗಿದ್ದರು.

    ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv