Tag: ದಕ್ಷಿಣ ಕರ್ನಾಟಕ

  • ದುರ್ಬಲಗೊಂಡ ಚಂಡಮಾರುತ – 2 ದಿನ ಮೋಡ ಕವಿದ ವಾತಾವರಣ

    ದುರ್ಬಲಗೊಂಡ ಚಂಡಮಾರುತ – 2 ದಿನ ಮೋಡ ಕವಿದ ವಾತಾವರಣ

    ಬೆಂಗಳೂರು: ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ದೊಡ್ಡ ಮಟ್ಟದ ಮಳೆ ನೀರಿಕ್ಷೆ ಇಲ್ಲ ಎಂದು ಹವಾಮಾನ ಇಲಾಖೆಯ ನಿರ್ದೇಶಕ ರಮೇಶ್ ಬಾಬು ಹೇಳಿದ್ದಾರೆ.

    ಈಗಾಗಲೇ ಚಂಡಮಾರುತ ದುರ್ಬಲಗೊಂಡಿದೆ. ಇವತ್ತು ಅತೀ ಹೆಚ್ಚು ಎಂದರೆ ಮೂರು ಸೆಂಟಿಮೀಟರ್ ಮಳೆಯಾಗಿದೆ. ಸಂಜೆ ಅಥವಾ ರಾತ್ರಿ ವೇಳೆಗೆ ಸ್ವಲ್ಪ ಮಳೆ ನಿರೀಕ್ಷಿಸಬಹುದು. ಹಾಗಂತ ದೊಡ್ಡ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದಿದ್ದಾರೆ.

    ಚಿಂತಾಮಣಿ, ಕೋಲಾರ, ಶಿಡ್ಲಘಟ್ಟದಲ್ಲಿ ಸ್ವಲ್ಪ ಹೆಚ್ಚು ಮಳೆಯಾಗಿದೆ. ಬೆಂಗಳೂರಲ್ಲಿ ಕೇವಲ 2.5 ಮಿಲಿ ಮೀಟರ್ ಮಳೆಯಾಗಿದೆ. ಇವತ್ತು ಮತ್ತು ನಾಳೆ ಇದೇ ರೀತಿ ಮೋಡ ಕವಿದ ವಾತಾವರಣವೇ ಇರುತ್ತದೆ ಎಂದು ತಿಳಿಸಿದ್ದಾರೆ.

    ದಕ್ಷಿಣ ಕರ್ನಾಟಕದಲ್ಲಿ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಹೆಚ್ಚು ಮಳೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.

  • ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆ: ಹವಾಮಾನ ಇಲಾಖೆ

    ಮುಂದಿನ 48 ಗಂಟೆಯಲ್ಲಿ ರಾಜ್ಯದ ಹಲವೆಡೆ ಭಾರೀ ಮಳೆ: ಹವಾಮಾನ ಇಲಾಖೆ

    – ದಕ್ಷಿಣ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

    ಬೆಂಗಳೂರು: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿರುವ ಹವಾಮಾನ ಇಲಾಖೆಯ ನಿರ್ದೇಶಕ ರಮೇಶ್ ಬಾಬು, ಇವತ್ತು ಸಾಯಂಕಾಲ ಅಥವಾ ರಾತ್ರಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ನಾಳೆ ಹಾಗೂ ನಾಡಿದ್ದು ಸಿಲಿಕಾನ್ ಸಿಟಿಗೆ ಭಾರೀ ಮಳೆ ಅಪ್ಪಳಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಪುದುಚೇರಿಯ ಹತ್ತಿರ ಸುಮಾರು 450 ಕಿ.ಮೀ ದೂರದಲ್ಲಿ ಸೈಕ್ಲೋನ್ ಅಬ್ಬರಿಸುತ್ತಿದೆ. ಹೀಗಾಗಿ ನಾಳೆ ಹಾಗೂ ನಾಡಿದ್ದು ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ. ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದೇವೆ. ಮಂಡ್ಯ, ಮೈಸೂರು, ಹಾಸನ, ರಾಮನಗರ, ಬೆಂಗಳೂರು ನಗರ, ಉತ್ತರ ಕನ್ನಡ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹೇಳಿದ್ದಾರೆ.

    ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ನ.25 ರಂದು ತಮಿಳುನಾಡು ಹಾಗೂ ಪಾಂಡಿಚೇರಿ ಕರಾವಳಿಯಲ್ಲಿ ದಾಟಿ ಕಾರೈಕಲ್, ಮಾಮಲಪುರಂ ಹತ್ತಿರ ನಿವಾರ್ ಸೈಕ್ಲೋನ್ ದಾಟಲಿದೆ. ಇದರ ಪ್ರಭಾವದಿಂದಾಗಿ ಕರಾವಳಿಯ ಕೆಲ ಭಾಗದಲ್ಲಿ ನ.25, 26, 27 ರಂದು ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ನ. 23ರಂದು ಒಣ ಹವೆ ಇರಲಿದ್ದು, ನ. 24 ರಿಂದ 27 ರವರೆಗೆ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ.

    ಅಲರ್ಟ್ ಲೆಕ್ಕಾಚಾರ ಹೇಗೆ?
    64.5 ಮಿ.ಮೀ ನಿಂದ 115.5 ಮಿ.ಮೀ ಒಳಗಡೆ ಮಳೆಯಾಗುವ ಸಾಧ್ಯತೆ ಇದ್ದರೆ ಯೆಲ್ಲೋ ಅಲರ್ಟ್ ಘೋಷಣೆಯಾಗುತ್ತದೆ. 115.6 ಮಿ.ಮೀ ನಿಂದ 204.4 ಮಿ.ಮೀ. ಒಳಗಡೆ ಮಳೆಯಾಗಲಿದ್ದರೆ ಆರೆಂಜ್ ಅಲರ್ಟ್ ಎಂದು ಪ್ರಕಟಿಸಲಾಗುತ್ತದೆ. 204.5 ಮಿ.ಮೀಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದರೆ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ.

  • ರಾಜ್ಯದ ದಕ್ಷಿಣದಲ್ಲಿ ಬಿರುಗಾಳಿ ಸಹಿತ ಮಳೆ- ಉತ್ತರದಲ್ಲಿ ರಣ ಬಿಸಿಲು

    ರಾಜ್ಯದ ದಕ್ಷಿಣದಲ್ಲಿ ಬಿರುಗಾಳಿ ಸಹಿತ ಮಳೆ- ಉತ್ತರದಲ್ಲಿ ರಣ ಬಿಸಿಲು

    ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಆಗುತ್ತಿದ್ದರೆ, ಉತ್ತರ ಕರ್ನಾಟಕದಲ್ಲಿ ಬಿಸಿಲು ಜೋರಾಗಿದೆ.

    ವಿಜಯಪುರ ಜಿಲ್ಲೆಯ ಇತಿಹಾಸದಲ್ಲೆ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ವಿಜಯಪುರದ ಜಿ. ಆಲಮೇಲ ಪಟ್ಟಣದಲ್ಲಿ ಇವತ್ತು ಗರಿಷ್ಠ 45.3 ಡಿಗ್ರಿ ತಾಪಮಾನ ದಾಖಲಾಗಿದೆ. ಕಳೆದ ಮೂರು ದಿನಗಳಿಂದ 45 ಡಿಗ್ರಿ ಆಸುಪಾಸಿನಲ್ಲಿಯೇ ಉಷ್ಣಾಂಶ ಇದೆ. ಬಿಸಿಲ ಝಳದಿಂದ ವಿಜಯಪುರದ ಮಂದಿ ತತ್ತರಿಸಿ ಹೋಗಿದ್ದಾರೆ. ಕೊಡೆಗಳನ್ನು ಹೊರತೆಗೆದಿದ್ದಾರೆ.

    ಮುಂದಿನ ಎರಡು ದಿನಗಳಲ್ಲಿ ಈ ತಾಪಮಾನ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ವರದಿ ಪ್ರಕಾರ ಆಲಮೇಲದ ಬಿಸಿಲು ರಾಜಸ್ಥಾನದ ಮರುಭೂಮಿಯ ಬಿಸಿಲನ್ನು ನೆನಪಿಸುತ್ತಿದೆ.

    ಬೆಂಗಳೂರಿನಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಮಳೆರಾಯ ಅಬ್ಬರಿಸಿದ್ದಾನೆ. ಗುಡುಗು ಮಿಂಚು ಸಮೇತ ಬೆಂಗಳೂರಿನ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿಯೇ ಆಗಿದೆ. ಮಳೆ ನಿಂತ ಮೇಲೆ ರೋಡ್‍ಗಳು ಕೆರೆಗಳಾಗಿವೆ. ಬೆಂಗಳೂರಿನ ಡಬ್ಬಲ್ ರೋಡ್‍ನಲ್ಲಿ ರೋಡ್ ಯಾವುದು ಎನ್ನುವುದೇ ಗೊತ್ತಾಗದಂತೆ ಮಳೆ ನೀರು ನಿಂತಿದ್ದು ವಾಹನ ಸವಾರರು ನರಕ ಅನುಭವಿಸುತ್ತಿದ್ದಾರೆ. ಇನ್ನೊಂದು ಕಡೆ ವಿಲ್ಸನ್ ಗರ್ಡನ್‍ಗೆ ಹೋಗುವ ರೋಡ್ ಸಂಪೂರ್ಣ ಜಲವೃತವಾಗಿದ್ದು, ಮಳೆ ನೀರಿನಿಂದ ರೋಡ್ ಕೆರೆಯಾಗಿದೆ.

    ಬೆಂಗಳೂರಿನ ಯಶವಂತಪುರ, ಮಲ್ಲೇಶ್ವರ, ರಾಜಾಜಿನಗರ, ಜಾಲಹಳ್ಳಿ, ಮತ್ತಿಕೆರೆ ಸೇರಿದಂತೆ ಹಲವಡೆ ಬಿರುಸಿನ ಮಳೆಯಾಗಿದೆ. ಭಾನುವಾರ ಲಾಕ್‍ಡೌನ್ ಆಗಿದ್ದರಿಂದ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಇಂದು ಕೆಲಸ ಮುಗಿಸಿ ಮನೆಯತ್ತ ಹೊರಟ ಜನರು ಮಳೆಯಲ್ಲಿ ಸಿಲುಕಿದರು.

    ಕೋಲಾರ: ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಕಳೆದ ಒಂದು ವಾರದಿಂದ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಮಳೆರಾಯ ತಂಪೆರೆದಿದ್ದಾನೆ. ಹಾಸನ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದೆ.