Tag: ದಕ್ಷಿಣಕನ್ನಡ

  • ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತನ ಮೇಲೆ ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ!

    ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತನ ಮೇಲೆ ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ!

    ಮಂಗಳೂರು: ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತರೊಬ್ಬರ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

    ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ಗಡಿಭಾಗ ಸಂಪಾಜೆ ಸಮೀಪದ ಬಾಲೆಂಬಿ ನಿವಾಸಿ ರೈತ ರವೀಂದ್ರ ಅವರು ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಆಗಿರುವ ಮಂಜುನಾಥ್ ನನ್ನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

    ಸ್ಥಳೀಯ ಅನಧಿಕೃತ ಫೈನಾನ್ಸ್‍ನಿಂದ ರವೀಂದ್ರ ಅವರು ಬಡ್ಡಿಗೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಫೈನಾನ್ಸ್ ನೀಡಿದ್ದ ಖಾಲಿ ಚೆಕ್ ಬೌನ್ಸ್ ಆಗಿ, ಸಾಲ ಮರುಪಾವತಿ ಮಾಡಲಾಗದೇ ಚಕ್ರ ಬಡ್ಡಿಯ ಸುಳಿಗೆ ಬಿದ್ದ ರವೀಂದ್ರ ವಿರುದ್ಧ ಫೈನಾನ್ಸ್ ಮಾಲೀಕ ಡಿ.ಬಿ ಕೇಶವ ಸುಳ್ಯ ಕೋರ್ಟ್ ನಲ್ಲಿ ದೂರು ನೀಡಿದ್ದರು.

    ಈ ಬಗ್ಗೆ ಜಿಲ್ಲಾ ನ್ಯಾಯಾಲಯದಿಂದ ರವೀಂದ್ರ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ರವೀಂದ್ರ ಬೆಂಗಳೂರಿನ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ, ಸ್ಟೇ ಆರ್ಡರ್ ಪಡೆದಿದ್ದರು. ಇದೇ ವೇಳೆ ವಾರೆಂಟ್ ಹಿಡಿದು ಸುಳ್ಯ ಪೊಲೀಸರು ರವೀಂದ್ರ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

    ಸ್ಟೇ ಆರ್ಡರ್ ಸಹಿತ ಡಿಸೆಂಬರ್ 4 ರಂದು ಮುಂಜಾನೆ ಬೆಂಗಳೂರಿನಿಂದ ಸುಳ್ಯಕ್ಕೆ ಆಗಮಿಸುತ್ತಿದ್ದಾಗಲೇ ಸುಳ್ಯ ಇನ್ಸ್​ಪೆಕ್ಟರ್ ಮಂಜುನಾಥ್, ರವೀಂದ್ರ ಅವರನ್ನು ಠಾಣೆಗೆ ಎಳೆದೊಯ್ದಿದ್ದಾರೆ. ಬಳಿಕ ಠಾಣೆಯಲ್ಲಿ ಕೂಡಿ ಹಾಕಿ, ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ ನಲ್ಲಿ ಥಳಿಸಿದ್ದಾರೆಂದು ಆರೋಪಿಸಲಾಗಿದೆ.

    ಕೋರ್ಟ್ ಆದೇಶ ಇದ್ದರೂ ಕ್ಯಾರೇ ಮಾಡದೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ರೈತ ರವೀಂದ್ರ ಅವರು ಈಗ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದಾರೆ. ಹೊಟ್ಟೆಯಲ್ಲಿ ಗೆಡ್ಡೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದ ರವೀಂದ್ರ, ಪೊಲೀಸರ ದೌರ್ಜನ್ಯದಿಂದಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಾನು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬೆಂಬಲಿಗ. ನನ್ನನ್ನು ಯಾರು ಏನೂ ಮಾಡಲಾಗದು ಎಂದು ಇನ್ಸ್​ಪೆಕ್ಟರ್ ಬೆದರಿಸಿದ್ದಾರೆ ಎಂದು ರವಿಂದ್ರ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ : ಇಂದು ಸರ್ವಧರ್ಮ, ನಾಳೆ ಸಾಹಿತ್ಯ ಸಮ್ಮೇಳನ

    ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವ : ಇಂದು ಸರ್ವಧರ್ಮ, ನಾಳೆ ಸಾಹಿತ್ಯ ಸಮ್ಮೇಳನ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷ ನಡೆಯುವ ಲಕ್ಷ ದೀಪೋತ್ಸವವು ಈ ಬಾರಿಯೂ ಅದ್ಧೂರಿಯಾಗಿ ನಡೆಯುತ್ತಿದೆ.

    ಶ್ರೀ ಮಂಜುನಾಥ ಸ್ವಾಮಿಗೆ ದೀಪೋತ್ಸವ ಅತ್ಯಂತ ಪ್ರಿಯವಾದದ್ದು. ಆದರಿಂದ ಹಿಂದಿನ ಕಾಲದಿಂದಲೂ ಮಂಜುನಾಥನ ಸನ್ನಿಧಿಯ ಸುತ್ತಲೂ ಒಂದು ಲಕ್ಷ ದೀಪಗಳನ್ನು (ಹಣತೆಗಳನ್ನು) ಬೆಳಗುವ ಮೂಲಕ ಲಕ್ಷದೀಪೋತ್ಸವವನ್ನು ಆಚರಿಸುವುದು ಇಲ್ಲಿನ ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದೀಪಗಳಿಂದಲೇ ದೇವಾಲಯವನ್ನು ಶೃಂಗರಿಸಲಾಗುತ್ತದೆ. ಹೀಗಾಗಿ ಧರ್ಮಸ್ಥಳ ಮಂಜುನಾಥನ ಸನ್ನಿಧಿ ವಿದ್ಯುತ್ ದೀಪಾಲಂಕಾರದಿಂದ ವೈಭವದಿಂದ ಕಂಗೊಳಿಸುತ್ತಿತ್ತು.

    ಕ್ಷೇತ್ರದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳೂ ಶಾಸ್ತ್ರಬದ್ದವಾಗಿ ನೆರೆವೇರಿದ್ದು ಹಿಂದಿನ ಕಾಲದಲ್ಲಿ ಲಕ್ಷದೀಪೋತ್ಸವವಾಗುತ್ತಿದ್ದರೆ ಇದೀಗ ಲಕ್ಷಾಂತರ ದೀಪೋತ್ಸವ ನಡೆಯುತ್ತಿದೆ.

    ಪ್ರತಿವರ್ಷ ಕಾರ್ತಿಕ ಮಾಸದಂದು ಈ ಲಕ್ಷ ದೀಪೋತ್ಸವ ನಡೆಯುತ್ತಿದ್ದು, ಕ್ಷೇತ್ರದ ದೇವರಾದ ಮಂಜುನಾಥ ಸ್ವಾಮಿಯ ಮೂರ್ತಿಯನ್ನು ಮೆರವಣಿಗೆ ಮಾಡಿ, ಪ್ರಮುಖ ಐದು ಕಟ್ಟೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ದೇವರನ್ನು ನೋಡಲು ಕ್ಷೇತ್ರಕ್ಕೆ ಹೋಗಲಾಗದವರಿಗೆ ದೇವರೇ ಅವರ ಊರಿಗೆ ಬರುತ್ತಾನೆ ಎನ್ನುವ ನಂಬಿಕೆ ಇದ್ದು ಅದು ಇಂದಿಗೂ ಮುಂದುವರಿದಿದೆ.

    ದೀಪೋತ್ಸವದ ಪ್ರಯುಕ್ತ ಬೆಳ್ಳಿಯ ಬ್ರಹ್ಮರಥೋತ್ಸವವೂ ಅದ್ದೂರಿಯಾಗಿ ನಡೆಯಿತು. ದೇಶ ವಿದೇಶದಿಂದ ಆಗಮಿಸಿದ ಲಕ್ಷಾಂತರ ಮಂದಿ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು. ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಿತು.

    ಲಕ್ಷದೀಪೋತ್ಸವದ ಅಂಗವಾಗಿ ಬುಧವಾರ ಸರ್ವಧರ್ಮ ಸಮ್ಮೇಳನ ನಡೆಯಲಿದ್ದರೆ, ಗುರುವಾರ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನವೂ ನಡೆಯಲಿದೆ. ಇಂದು ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದ 86ನೇ ಅಧಿವೇಶನವನ್ನು ಗುಜರಾತ್‍ನ ದ್ವಾರಕದ ಜಗದ್ಗುರು ಸೂರಾರಯಚಾರ್ಯ ಶ್ರೀಕೃಷ್ಣ ದೇವನಂದಗಿರಿ ಮಹಾರಾಜ್ ಉದ್ಘಾಟಿಸಲಿದ್ದಾರೆ. ಶಿಕ್ಷ ಣ ತಜ್ಞ, ಸಮಾಜ ಸುಧಾರಕ ಬೆಂಗಳೂರಿನ ಎಂ.ಮಮ್ತಾಜ್ ಆಲಿ ಅಧ್ಯಕ್ಷ ತೆ ವಹಿಸಲಿದ್ದಾರೆ. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

    ಗುರುವಾರ ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ 86ನೇ ಅಧಿವೇಶನವನ್ನು ಉದ್ಯಮಿ ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದಾರೆ. ಖ್ಯಾತ ವಿಮರ್ಶಕ ಸಾಗರದ ಪ್ರೊ. ಟಿ.ಪಿ. ಅಶೋಕ್ ಅಧ್ಯಕ್ಷತೆ ವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    – ಅನಿರ್ದಿಷ್ಟಾವಧಿಗೆ ಸಂಚಾರ ನಿಷೇಧ ಹೇರಿದ ದಕ್ಷಿಣ ಕನ್ನಡ ಡಿಸಿ

    ಮಂಗಳೂರು: ಮಂಗಳೂರು-ಬೆಂಗಳೂರು ಸಂಚಾರ ಶಿರಾಡಿ ಘಾಟ್ ಮೂಲಕ ಸದ್ಯಕ್ಕಂತೂ ಆರಂಭವಾಗುವ ಸಾಧ್ಯತೆಯಿಲ್ಲ. ಭಾರೀ ಮಳೆಯಿಂದಾಗಿ ಶಿರಾಡಿಘಾಟ್‍ನಲ್ಲಿ ಆಗಸ್ಟ್ 25ರವರೆಗೆ ವಾಹನ ಸಂಚಾರಕ್ಕೆ ಹೇರಿದ ನಿಷೇಧವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

    ಮಳೆ ನಿಂತರೂ ಶಿರಾಡಿ ಘಾಟ್‍ನಲ್ಲಿ ಕೆಲ ಪ್ರದೇಶಗಳಲ್ಲಿ ಗುಡ್ಡಕುಸಿತ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ನಿಷೇಧವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಲಾಗಿದೆ. ಕಳೆದ ವಾರ ಸುರಿದ ಭಾರೀ ಮಳೆಗೆ ಶಿರಾಡಿಘಾಟ್‍ನ ಹಲವೆಡೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೆ ಹೆಚ್ಚಿನ ತೊಂದರೆಯಾಗಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿ ಪಡಿಸುವಂತೆ ಬೇಡಿಕೆ ಇಟ್ಟು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ #ConnectUsToMangalore ಬಳಸಿ ಅಭಿಯಾನ ಆರಂಭಿಸಿದ್ದಾರೆ.

    ಕಳೆದ ವಾರದ ಮಳೆ ವೇಳೆ ಶಿರಾಡಿ ಘಾಟ್‍ನ ದೊಡ್ಡತಪ್ಲು ಬಳಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿತ್ತು. ಈ ಘಟನೆಯಲ್ಲಿ ಕೆ.ಆರ್.ಪೇಟೆ ಮೂಲದ ಸಂದೀಪ್ ಹಾಗು ಮಾನ್ವಿ ಮೂಲದ ವೆಂಕಟೇಶ್ ಸಾವನ್ನಪ್ಪಿದ್ದರು. ಇನ್ನು ಟ್ಯಾಂಕರ್ ನೋಡಲು ಹೋದ ಮಂಗಳೂರು ಮೂಲದ ರಾಮದೇವ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈಗ ಮತ್ತೇ ಗುಡ್ಡ ಕುಸಿತ ಹೆಚ್ಚಾಗಿದ್ದರಿಂದ ಮುಂದಾಗುವ ಅನಾಹುತ ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಎಲ್ಲ ರೀತಿಯ ವಾಹಗಳ ಸಂಚಾರಕ್ಕೂ ನಿರ್ಬಂಧ ಹೇರಿದೆ. ಇದನ್ನೂ ಓದಿ: #ConnectUsToMangalore ಕರಾವಳಿ ಸಂಪರ್ಕಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv