Tag: ದಂತ ಶಸ್ತ್ರಚಿಕಿತ್ಸೆ

  • ಟೈಗರ್ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಿದ ವೈದ್ಯರು

    ಟೈಗರ್ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಿದ ವೈದ್ಯರು

    ಬರ್ಲಿನ್: ಇಟಾಲಿಯನ್ ಕಳ್ಳಸಾಗಾಣಿಕೆದಾರರಿಂದ 2013ರಲ್ಲಿ ರಕ್ಷಿಸಿದ್ದ ಬಂಗಾಳದ ಟೈಗರ್ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಲಾಗಿದೆ.

    ಕಾರಾ ಇದೇ ವರ್ಷ ಆಗಸ್ಟ್ ನಲ್ಲಿ ಆಟಿಕೆ ಅಗಿಯುವಾಗ ಒಂದು ಕೋರೆಹಲ್ಲು ಮುರಿದಿತ್ತು. ಇದರಿಂದಾಗಿ ಮೂಳೆ ಇರುವ ಮಾಂಸವನ್ನು ತಿನ್ನಲು ಭಾರೀ ಸಮಸ್ಯೆ ಎದುರಿಸುತ್ತಿದ್ದಳು. ಹೀಗಾಗಿ ಜರ್ಮನಿಯ ಮೆಸ್ವೀಲರ್ ನಗರದಲ್ಲಿ ಡೆನ್ಮಾರ್ಕ್ ನ ತಜ್ಞರು ಶಸ್ತ್ರಚಿಕಿತ್ಸೆ ಮೂಲಕ ಬಂಗಾಳದ ಹೆಣ್ಣು ಹುಲಿ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಿದ್ದಾರೆ. ಶಸ್ತ್ರಚಿಕಿತ್ಸೆಯಾದ ಮೂರು ವಾರಗಳ ನಂತರ ಕಾರಾ ಸಾಮಾನ್ಯ ಸ್ಥಿತಿಗೆ ಮರಳಿದ್ದಾಳೆ.

    ಡ್ಯಾನಿಶ್ ದಂತವೈದ್ಯರ ತಂಡವು ಕಾರಾಳ ದಂತ ಶಸ್ತ್ರಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಿದೆ. ಆಗಸ್ಟ್ ಮೊದಲ ವಾರದಲ್ಲಿ ಮುರಿದ ಹಲ್ಲು ಬದಲಿಸಲು ಎರಡನೇ ಹಲ್ಲು ತಯಾರಿಸಲಾಗಿತ್ತು. ಈ ಶಸ್ತ್ರಚಿಕಿತ್ಸೆಯು ಎರಡು ಗಂಟೆ ತೆಗೆದುಕೊಂಡಿತ್ತು. ಎರಡನೇ ಬಾರಿಗೆ ಚಿನ್ನದ ಹಲ್ಲನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಅಳವಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮೊದಲು ನಾಲ್ಕು ಗಂಟೆ, ಬಳಿಕ ಒಂದೂವರೆ ಗಂಟೆ ಬೇಕಾಯಿತು.

    3 ವಾರ ಚಿನ್ನದ ಹಲ್ಲು ನೆಕ್ಕಿದ ಕಾರಾ:
    ಮೂರು ವಾರಗಳ ನಂತರ ನಿಜವಾದ ಹಲ್ಲಿನ ಬದಲಿಗೆ ಚಿನ್ನದ ಹಲ್ಲು ಹೊಂದಿಸಲಾಗಿದೆ. ಈ ಸಮಯದಲ್ಲಿ ಅವಳಿಗೆ ಮೂಳೆ ಇಲ್ಲದೆ ಮಾಂಸ ತಿನ್ನಲು ನೀಡಲಾಗಿತ್ತು. ಆಗ ಹಲ್ಲುಗಳಿಲ್ಲದ ಸಮಸ್ಯೆ ಎದುರಿಸಿತ್ತು. ಹಲ್ಲುಗಳನ್ನು ಅಳವಡಿಸಿದ ನಂತರ ಕಾರಾ ಸುಮಾರು ಮೂರು ವಾರಗಳ ಕಾಲ ಅವುಗಳನ್ನು ನೆಕ್ಕುತ್ತಿದ್ದಳು. ಇದನ್ನು ಆಕೆಯ ಆರೈಕೆದಾರರು ಗಮನಿಸಿದ್ದರು.

    ಈ ಕುರಿತು ಪ್ರತಿಕ್ರಿಯಿಸಿರುವ ಜೀವಶಾಸ್ತ್ರಜ್ಞ ಇವಾ ಲಿಂಡೆನ್ಸ್‍ಮಿಡ್ಟ್, ನಮ್ಮ ಕಾರ್ಯ ಸಂತೋಷ ತಂದಿದೆ. ಈಗ ಕಾರಾ ಮಾಂಸವನ್ನು ಸರಿಯಾಗಿ ಕತ್ತರಿಸಿ ತಿನ್ನಬಹುದು. ಚಿನ್ನದ ಹಲ್ಲು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅವಳು ತನ್ನ ಹೊಸ ಚಿನ್ನದ ಹಲ್ಲುಗಳನ್ನು ತೋರಿಸುತ್ತಾ ನಗುವಂತೆ ಕಾಣಿಸುತ್ತಾಳೆ. ಕಾರಾಳ ಹಲ್ಲುಗಳು ಸರಿಯಾಗಿ ಸೇರಿಕೊಂಡಿವೆ ಎಂದು ಕ್ಷ-ಕಿರಣದಲ್ಲಿ ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.

    ನಾವು ವಿಶ್ವಪ್ರಸಿದ್ಧ ದಂತವೈದ್ಯರ ತಂಡವನ್ನು ಹೊಂದಿದ್ದೇವೆ. ಹೀಗಾಗಿ ಶಸ್ತ್ರಚಿಕಿತ್ಸೆ ಸುಲಭವಾಗಿದೆ. ತಜ್ಞರಲ್ಲಿ ವಿಯೆನ್ನಾ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪಶುವೈದ್ಯರು ಮತ್ತು ದಂತವೈದ್ಯರಾದ ಜೇನ್ ರುಹಾನು ಮತ್ತು ಡಾ. ಜೋಹಾನ್ನಾ ಪನ್ನರ್ ಸೇರಿದ್ದಾರೆ ಎಂದು ಇವಾ ಲಿಂಡೆನ್ಸ್‍ಮಿಡ್ಟ್ ಮಾಹಿತಿ ನೀಡಿದ್ದಾರೆ.