Tag: ದಂತ ವೈದ್ಯ

  • ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಗನ್‍ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ ದಂತ ವೈದ್ಯ

    ಕೋಲಾರ: ತಲೆಗೆ ಗನ್‍ನಿಂದ ಶೂಟ್ ಮಾಡಿಕೊಂಡು ಪ್ರಸಿದ್ಧ ದಂತ ವೈದ್ಯ ಆತ್ಮಹತ್ಯೆ ಯತ್ನಿಸಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಸಲ್ಡಾನ್ ವೃತ್ತದಲ್ಲಿ ನಡೆದಿದೆ.

    ಕೆಜಿಎಫ್ ನಗರದ ಡಾ. ಸಲ್ಡಾನ್ (55) ಆತ್ಮಹತ್ಯೆಗೆ ಯತ್ನಿಸಿದ್ದ ದಂತ ವೈದ್ಯ. ಸಲ್ಡಾನ್ ಸೋಮವಾರ ಸಂಜೆ 7.30 ಗಂಟೆ ಸುಮಾರಿಗೆ ಸಲ್ಡಾನ್ ವೃತ್ತದಲ್ಲಿರುವ ಅವರ ಕ್ಲಿನಿಕ್‍ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಲೆಗೆ ಗನ್‍ನಿಂದ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರ ಕುಟುಂಬದ ಸದಸ್ಯರು ಮತ್ತು ಖಾಸಗಿ ವೈದ್ಯರು ಅವರನ್ನು ಕೆಜಿಎಫ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಿಮ್‍ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ತಮ್ಮ ಮಗ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎಂದು ಗಾಯಾಳು ವೈದ್ಯರ ತಂದೆ ಡಾ.ಕಾರ್ಲಟಸನ್ ಸಲ್ಡಾನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    ಈ ಸಂಬಂಧ ರಾಬರ್ಟಸನ್‍ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಡಾ. ಸಲ್ಡಾನ್ ಅವರು ಯಾಕೆ ಆತ್ಮಹತ್ಯೆಗೆ ಯತ್ನಿಸಿದರು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

  • ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    – ಅಡ್ಡ ಬಂದ ನಾಯಿಮರಿ ಕತ್ತು ಹಿಸುಕಿದ
    – ಪೊಲೀಸರಿಂದ ದಂತ ವೈದ್ಯ ಅರೆಸ್ಟ್

    ಲಕ್ನೋ: ಮಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲವೆಂದು ತಾಯಿಯೊಬ್ಬರು ದೂರಿದ್ದಕ್ಕೆ ಸಿಟ್ಟಿಗೆದ್ದ ದಂತ ವೈದ್ಯನೋರ್ವ ಇಬ್ಬರನ್ನೂ ಕೊಲೆ ಮಾಡಲು ಯತ್ನಿಸಿ, ಅಡ್ಡ ಬಂದ ನಾಯಿ ಮರಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಘಾಜಿಯಾಬಾದ್‍ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಆರೋಪಿಯನ್ನು ದಂತ ವೈದ್ಯ ಯಾಮಿನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈತ ವಿಜಯನಗರದಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದಾನೆ. ಕಳೆದ 6 ತಿಂಗಳಿನಿಂದ ವೈದ್ಯನ ಮನೆ ಬಳಿ ಇದ್ದ ಮಹಿಳೆಯೊಬ್ಬರು ತನ್ನ ಮಗಳ ಹಲ್ಲು ನೋವಿಗೆ ಈತನ ಬಳಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಬಾಲಕಿಯ ಹಲ್ಲು ನೋವು ಮಾತ್ರ ಕಡಿಮೆಯಾಗಿರಲಿಲ್ಲ.

    ಆದ್ದರಿಂದ ತಾಯಿ ಸಿದ್ದಿಕಿ ಬಳಿ ಹೋಗಿ ಜಗಳವಾಡಿದ್ದರು. ನೀವು ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರಿದ್ದರು. ಇದರಿಂದ ಸಿಟ್ಟಿಗೆದ್ದ ವೈದ್ಯ ಶನಿವಾರ ಮಹಿಳೆ ಮನೆಗೆ ನುಗ್ಗಿ ಚಾಕುವಿನಿಂದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದನು. ಈ ವೇಳೆ ಅವರನ್ನು ರಕ್ಷಿಸಲು ಮನೆಯಲ್ಲಿ ಸಾಕಿದ್ದ ನಾಯಿ ಮರಿ ಮುಂದೆ ಬಂದು, ವೈದ್ಯನ ಕಾಲಿಗೆ ಕಚ್ಚಿತು. ಇದರಿಂದ ಮತ್ತಷ್ಟು ಕೋಪಗೊಂಡ ವೈದ್ಯ ನಾಯಿ ಮರಿಯ ಕತ್ತು ಹಿಸುಕಿ ಕೊಂದು ಹಾಕಿದನು.

    ಅಷ್ಟೇ ಅಲ್ಲದೆ ಮಹಿಳೆ ಹಾಗೂ ಆಕೆಯ ಮಗಳ ಜೊತೆ ವೈದ್ಯ ಅಸಭ್ಯವಾಗಿ ವರ್ತಿಸಿದ್ದನು, ಈ ವೇಳೆ ಮಹಿಳೆ ಕಿರುಚಾಡಿ ಅಲಾರಾಂ ಹೊಡೆದಾಗ ಅಕ್ಕಪಕ್ಕದ ಮನೆಯವರು ಬಂದು ಆರೋಪಿಯನ್ನು ಹಿಡಿದರು ಎಂದು ಪೊಲೀಸರು ತಿಳಿಸಿದರು.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 354, 307 ಕಾಯ್ದೆ ಅಡಿ ಹಾಗೂ ಪ್ರಾಣಿ ಮೇಲೆ ವಿಕೃತಿ ಮೆರೆದಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದ್ದಾರೆ.