Tag: ದಂತ

  • 51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    ಬೆಂಗಳೂರು: ಆನೆ ದಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದ್ದು, ಸಿಐಡಿ ಅರಣ್ಯ ಘಟಕದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಗಳನ್ನು ಉಜಿರೆಯ ಎ.ಎಂ ಆಬ್ರಾಹಂ, ಕಣ್ಣೂರಿನ ಸುರೇಶ್ ಬಾಬು ಮತ್ತು ಹಾಸನದ ರಮೇಶ್ ಎಂದು ಗುರುತಿಸಲಾಗಿದೆ. ಉಜಿರೆಯ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬಂಧಿತ ಆರೋಪಿಗಳಿಂದ 51  ಕೆಜಿ ತೂಕದ 10 ಆನೆ ದಂತಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿ ಆಬ್ರಾಹಂ ಕೋವಿಯಿಂದ ಆನೆಗಳನ್ನು ಕೊಂದು ದಂತಗಳನ್ನು ಸಂಗ್ರಹಿಸುತ್ತಿದ್ದ. ಅನೆಗಳನ್ನು ಕೊಂದು ದಂತಗಳನ್ನು ಮಂಗಳೂರಿನ ಅನ್ವರ್ ಎಂಬಾತನ ಮೂಲಕ ಕರಾವಳಿ ಸೇರಿ ಹಲವೆಡೆ ಮಾರಾಟ ಮಾಡುತ್ತಿದ್ದ. ಬಂಧಿತರಿಂದ 10 ಆನೆ ದಂತ, ಒಂದು ಕೋವಿ ಮತ್ತು 8 ಜೀವಂತ ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.

    ಈ ಸಂಬಂಧ ಬೆಳ್ತಂಗಡಿ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅನ್ವರ್ ಪರಾರಿಯಾಗಿದ್ದು, ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.

  • ಪೊಲೀಸ್ ಇಲಾಖೆ ದಂತಕತೆ- ನಾಪತ್ತೆಯಾಗಿದ್ದ ‘ದಂತ’ ದಿಢೀರ್ ಪ್ರತ್ಯಕ್ಷ

    ಪೊಲೀಸ್ ಇಲಾಖೆ ದಂತಕತೆ- ನಾಪತ್ತೆಯಾಗಿದ್ದ ‘ದಂತ’ ದಿಢೀರ್ ಪ್ರತ್ಯಕ್ಷ

    ಶಿವಮೊಗ್ಗ: ಎಸ್.ಪಿ ಕಚೇರಿಯಿಂದ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಆನೆ ದಂತ ಕೊನೆಗೂ ಅನುಮಾನಾಸ್ಪದವಾಗಿ ಸಿಕ್ಕಿದೆ.

    ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೊಠಡಿಯೊಂದನ್ನು ಸ್ವಚ್ಛಗೊಳಿಸುವ ವೇಳೆಯಲ್ಲಿ ಇದು ಪತ್ತೆಯಾಗಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್ ಹೇಳಿದ್ದಾರೆ. ಆದರೆ, ದಂತದ ತಳಭಾಗದಲ್ಲಿ ಒಂದಷ್ಟು ಕತ್ತರಿಸಲಾಗಿದ್ದು, ಕತ್ತರಿಸಿರುವ ಗುರುತು ಸಹ ಹೊಸದಾಗಿದೆ. ಈ ದಂತ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರವು ಕಳೆದ ಜನವರಿಯಲ್ಲಿ ಸಿಐಡಿ ತನಿಖೆ ಒಪ್ಪಿಸಿದೆ.

    ಸಿಐಡಿ ತನಿಖೆ ಆರಂಭಗೊಳ್ಳುವ ಹಂತದಲ್ಲೇ ಎಸ್‍ಪಿ ಕಚೇರಿಯಲ್ಲೇ ದಂತ ಮೊಟಕು ದಂತ ಪತ್ತೆಯಾಗಿದ್ದು, ಇಲಾಖೆ ದಂತಕತೆ ಹೇಳುತ್ತಿದೆ ಎಂಬ ಶಂಕೆಗೆ ಕಾರಣವಾಗಿದೆ. 2011ರ ಫೆಬ್ರವರಿವರೆಗೂ ಎಸ್‍ಪಿ ಚೇಂಬರ್ ನಲ್ಲೇ ದಂತ ಇದ್ದ ಬಗ್ಗೆ ಪುರಾವೆಗಳಿವೆ. ನಂತರ ಇದೂವರೆಗೂ ಐವರು ಎಸ್‍ಪಿಗಳು ಬದಲಾಗಿದ್ದಾರೆ.

    ಎಸ್‍ಪಿ ಕಚೇರಿ ಆವರಣದಲ್ಲಿ ಇದ್ದ ಪುರಾತನ ಶಿಲ್ಪಗಳನ್ನು ಕುವೆಂಪು ವಿವಿ ಪ್ರಾಕ್ತನ ವಿಭಾಗಕ್ಕೆ ಕಳೆದ ವರ್ಷ ಒಪ್ಪಿಸುವ ಹಂತದಲ್ಲಿ ಈ ದಂತ ನಾಪತ್ತೆ ಆಗಿರುವುದು ಬೆಳಕಿಗೆ ಬಂದಿತ್ತು. ಇಲಾಖೆ ತನಿಖೆ ನಡೆದು ನಂತರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಂದಲೂ ತನಿಖೆ ನಡೆಯಿತು. ಆಗ ಪೊಲೀಸ್ ಇಲಾಖೆಗೆ ಸೇರಿದ ಎಲ್ಲಾ ಕಟ್ಟಡಗಳಲ್ಲೂ ಸಂಪೂರ್ಣ ಶೋಧ ನಡೆಸಲಾಗಿತ್ತು.

    ಆಗಲೂ ದಂತ ಪತ್ತೆ ಆಗದಿದ್ದಾಗ 22-5-2018ರಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ದಂತ ಕಳವು ಪ್ರಕರಣದ ಕುರಿತು ಅಧಿಕೃತವಾಗಿ ದೂರು ದಾಖಲಿಸಿ, ತನಿಖಾಧಿಕಾರಿಯನ್ನೂ ನೇಮಿಸಲಾಗಿತ್ತು. ಇಂತಹ ಯಾವ ತನಿಖೆ ವೇಳೆಯೂ ದೊರಕದ ದಂತ ಈಗ ದಿಢೀರನೇ ಎಸ್‍ಪಿ ಕಚೇರಿಯ ಹಳೆ ಸಾಮಗ್ರಿಗಳ ನಡುವೆ ಬಂದದ್ದಾರೂ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

    ದಂತ ನಾಪತ್ತೆ ಪ್ರಕರಣದಲ್ಲಿ ಅಮಾಯಕ ಪೊಲೀಸ್ ಪೇದೆಗಳ ಮೇಲೂ ಕ್ರಮ ಜರುಗಿಸಲಾಗಿತ್ತು. ಈ ದಂತ ನಾಪತ್ತೆ- ಪತ್ತೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಕೈವಾಡ ಇದೆ ಎಂಬ ಶಂಕೆ ವ್ಯಾಪಕವಾಗಿದೆ. ಕಳೆದು ಹೋದ ದಂತ ಪತ್ತೆಯಾಗಿದ್ದು, ಮಂಗಳವಾರ ಪತ್ತೆ ಆಗಿದ್ದು, ಹೇಗೆ ಎಂಬ ಬಗ್ಗೆಯೇ ಮತ್ತೊಂದು ತನಿಖೆ ಅಗತ್ಯವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗೆ ಗುಂಡಿಟ್ಟ ಪಾಪಿಗಳು..!

    ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗೆ ಗುಂಡಿಟ್ಟ ಪಾಪಿಗಳು..!

    ಸಾಂದರ್ಭಿಕ ಚಿತ್ರ

    ಚಾಮರಾಜನಗರ: ದಂತಕ್ಕಾಗಿ ಕಾಡೆನೆಯೊಂದಕ್ಕೆ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದು ಆನೆಯ ಎರಡು ದಂತಗಳನ್ನು ಅಪಹರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಧಾಮದ ಕೊತ್ತನೂರು ವಲಯದ ಚಿಕ್ಕಲ್ಲೂರು ಗಸ್ತಿನಲ್ಲಿ ಜರುಗಿದೆ.

    ವೀರಪ್ಪನ್ ಅಟ್ಟಹಾಸದ ನಂತರ ಇದೀಗ ಮತ್ತೆ ಮಲೆಮಹದೇಶ್ವರ ಬೆಟ್ಟದ ಭಾಗದಲ್ಲಿ ದಂತ ಚೋರರು ಹುಟ್ಟಿಕೊಂಡಿದ್ದಾರೆ. ಸುಮಾರು 50 ವರ್ಷದ ಗಂಡಾನೆಯ ದಂತಕ್ಕಾಗಿ ಚೋರರು ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ.

    ಆನೆಯ ದಂತದ ಭಾಗಕ್ಕೆ ಆ್ಯಸಿಡ್ ಹಾಕಿ ಎರಡು ದಂತವನ್ನು ತೆಗೆದುಕೊಂಡು ಹೋಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಆನೆಯ ಕಳೆ ಬರಹ ಪತ್ತೆಯಾಗಿದೆ. 2015ರಿಂದ ಇದೂವರೆಗೆ 5 ಆನೆಗಳನ್ನು ಕೊಂದು ದಂತಗಳನ್ನು ದಂತ ಚೋರರು ಅಪಹರಿಸಿದ್ದಾರೆ.

    ಒಟ್ಟಿನಲ್ಲಿ ವೀರಪ್ಪನ್ ಬಳಿಕ ಮತ್ತೆ ದಂತಚೋರರು ಆನೆಗಳನ್ನು ಕೊಲ್ಲುತ್ತಿರೋದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆನೆ ಮುಂದೆ ಬಾಹುಬಲಿ ಸ್ಟಂಟ್ ಮಾಡಲು ಹೋಗಿ ಫುಟ್ ಬಾಲ್ ನಂತೆ ಗಾಳಿಯಲ್ಲಿ ಹಾರಿಬಿದ್ದ! ವಿಡಿಯೋ

    ಆನೆ ಮುಂದೆ ಬಾಹುಬಲಿ ಸ್ಟಂಟ್ ಮಾಡಲು ಹೋಗಿ ಫುಟ್ ಬಾಲ್ ನಂತೆ ಗಾಳಿಯಲ್ಲಿ ಹಾರಿಬಿದ್ದ! ವಿಡಿಯೋ

    ತಿರುವನಂತಪುರಂ: ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಆನೆ ಏರುವಂತೆ ಸ್ಟಂಟ್ ಮಾಡಲು ಹೋಗಿ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡುಪುಳದಲ್ಲಿ ನಡೆದಿದೆ.

    ಯುವಕನೊಬ್ಬ ಪ್ಲಾಸ್ಟಿಕ್ ಕವರ್ ಹಿಡಿದು ಆನೆಯ ಹತ್ತಿರ ಹೋಗಿ ಬಾಳೆಹಣ್ಣು ತಿನ್ನಿಸುತ್ತಿದ್ದನು. ಯುವಕ ಒಂದಾದ ಮೇಲೆ ಒಂದು ಬಾಳೆಹಣ್ಣು ತಿನ್ನಿಸುತ್ತಿದ್ದಂತೆ ಆನೆ ಕೂಡ ಮತ್ತೆ ಬಾಳೆಹಣ್ಣು ಬೇಕೆಂದು ಸನ್ನೆ ಮಾಡಿ ಹೇಳುತಿತ್ತು.

    ಬಾಳೆ ಹಣ್ಣು ತಿನ್ನಿಸಲು ಹೋದಾಗ ಯುವಕನಿಗೆ ಸೊಂಡಿಲಿನ ಮೂಲಕ ಏರಿ ಆನೆ ಮೇಲೆ ಕುಳಿತುಕೊಳ್ಳುವ ಮನಸ್ಸಾಗಿದೆ. ಕೊನೆಯ ಬಾಳೆಹಣ್ಣು ತಿನ್ನಿಸಿದ ಮೇಲೆ ಯುವಕ ಆನೆಯ ದಂತ ಹಿಡಿದು ಸೊಂಡಿಲಿಗೆ ಮುತ್ತಿಟ್ಟಿದ್ದ. ಮೊದಲ ಮುತ್ತಿನ ಪ್ರಯತ್ನದಲ್ಲಿ ಆತ ಯಶಸ್ವಿಯಾಗಿದ್ದ.

    ಯುವಕ ಪುನಃ ಆ ರೀತಿ ಮಾಡಲು ಪ್ರಯತ್ನಿಸಲು ಹೋದಾಗ ಫೇಸ್‍ ಬುಕ್ ಲೈವ್ ನಲ್ಲಿದ್ದ ಸ್ನೇಹಿತ ಈ ರೀತಿ ಮಾಡಬೇಡ ಎಂದು ಎಚ್ಚರಿಕೆ ನೀಡಿದ್ದ. ನೀನು ಮದ್ಯಪಾನ ಮಾಡಿದ್ದಿ. ಆ ರೀತಿ ಮಾಡಬೇಡ. ಆನೆಗೆ ಹುಚ್ಚು ಹಿಡಿಯುತ್ತೆ ಎಂದು ಆತನ ಸ್ನೇಹಿತ ಹೇಳಿದ್ದಾನೆ.

    ಸ್ನೇಹಿತನ ಎಚ್ಚರಿಕೆಯ ಮಾತನ್ನು ಕೇಳದೇ ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಸೊಂಡಿಲಿನಿಂದ ಏರಿದಂತೆ ಪ್ರಯತ್ನಿಸಲು ಮುಂದಾಗಿದ್ದಾನೆ. ಸೊಂಡಿಲಿನ ಮೇಲೆ ಕಾಲು ಇಡುತ್ತಿದ್ದಂತೆ ರೊಚ್ಚಿಗೆದ್ದ ಆನೆ ಆತನ್ನು ತಿವಿದು ದೂರಕ್ಕೆ ಎಸೆದಿದೆ. ಫುಟ್‍ ಬಾಲ್ ನಂತೆ ಗಾಳಿಯಲ್ಲಿ ಹಾರಿ ಬಿದ್ದ ಯುವಕ ಬಳಿಕ ಪ್ರಜ್ಞೆ ಕಳೆದುಕೊಂಡಿದ್ದಾನೆ.

    ಸದ್ಯ ಯುವಕ ಪ್ರಾಣಪಾಯದಿಂದ ಪಾರಾಗಿದ್ದರೂ ಬಿದ್ದ ರಭಸಕ್ಕೆ ಬೆನ್ನು ಮೂಳೆ ಮುರಿದುಕೊಂಡಿದ್ದಾನೆ ಎಂದು ವರದಿಯಾಗಿದೆ.