Tag: ಥರ್ಮಲ್ ಸ್ಕ್ಯಾನರ್

  • ಉತ್ತರ ಕನ್ನಡದಲ್ಲಿ ಕೊರೊನಾ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆ- ಪರೀಕ್ಷೆ ಹೇಗೆ ಮಾಡ್ತಾರೆ?

    ಉತ್ತರ ಕನ್ನಡದಲ್ಲಿ ಕೊರೊನಾ ಪತ್ತೆಗೆ ಥರ್ಮಲ್ ಸ್ಕ್ಯಾನರ್ ಬಳಕೆ- ಪರೀಕ್ಷೆ ಹೇಗೆ ಮಾಡ್ತಾರೆ?

    ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಮುಂಜಾಗ್ರತಾ ಕ್ರಮ ವಹಿಸಿದೆ.

    ಜಿಲ್ಲೆಗೆ ನೆರೆಯ ಗೋವಾ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ಪ್ರವಾಸಕ್ಕೆ ಬರುತ್ತಾರೆ. ಇದರ ಜೊತೆಗೆ ಕಾರವಾರದ ವಾಣಿಜ್ಯ ಬಂದರುಗಳಿಗೆ ವಿದೇಶದ ಹಡಗುಗಳು ಬರುವುದರಿಂದ ಜಿಲ್ಲೆಯ ಪ್ರಮುಖ ಸ್ಥಳಗಳಿಗೆ ಥರ್ಮಲ್ ಸ್ಕ್ಯಾನರ್ ಅನ್ನು ಆರೋಗ್ಯ ಇಲಾಖೆ ನೀಡಿದೆ.

    ಎಲ್ಲೆಲ್ಲಿ ಥರ್ಮಲ್ ಸ್ಕ್ಯಾನರ್?:
    ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳವಾದ ಕಾರವಾರ, ಗೋಕರ್ಣ, ಮುರುಡೇಶ್ವರ, ದಾಂಡೇಲಿ, ಶಿರಸಿ, ಮುಂಡಗೋಡಿನ ಟಿಬೆಟಿಯನ್ ಕಾಲೋನಿಗೆ ಪ್ರಥಮ ಹಂತದಲ್ಲಿ ಎಂಟು ಥರ್ಮಲ್ ಸ್ಕ್ಯಾನರ್ ಗಳನ್ನು ನೀಡಲಾಗಿದೆ. ಇನ್ನೆರೆಡು ದಿನದಲ್ಲಿ ಜಿಲ್ಲೆಯ ಪ್ರತಿ ತಾಲೂಕುಗಳಿಗೂ  ಥರ್ಮಲ್ ಸ್ಕ್ಯಾನರ್ ಗಳನ್ನು ಆರೋಗ್ಯ ಇಲಾಖೆ ನೀಡಲಿದೆ.

    ಏನಿದು ಥರ್ಮಲ್ ಸ್ಕ್ಯಾನರ್?:
    ಥರ್ಮಲ್ ಸ್ಕ್ಯಾನರ್ ಮನುಷ್ಯನ ದೇಹದ ತಾಪಮಾನವನ್ನು ಅಳೆಯುವ ಸಾಧನ. ಮನುಷ್ಯನ ದೇಹದ ತಾಪಮಾನ ತುಸು ಹೆಚ್ಚುಕಡಿಮೆ 98.6 ಡಿಗ್ರಿ ಫ್ಯಾರನ್‍ಹೀಟ್ ಅಥವಾ 37 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ ಥರ್ಮಲ್ ಸ್ಕ್ಯಾನರ್ ನಿಂದ ತಪಾಸಣೆಗೆ ಒಳಪಟ್ಟ ವ್ಯಕ್ತಿಯ ದೇಹದ ತಾಪಮಾನ 98.6 ಡಿಗ್ರಿ ಫ್ಯಾರನ್‍ಹೀಟ್‍ಗಿಂತ ಅಧಿಕವಾಗಿದ್ದರೆ ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುತ್ತದೆ.

    ಥರ್ಮಲ್ ಸ್ಕ್ಯಾನರ್ ಯಾಕೆ?
    ಕೊರೊನಾ ವೈರಸ್ ಇರುವವರಿಗೆ ಜ್ವರ, ಕೆಮ್ಮು ಪ್ರಮುಖ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ಹಲವರು ತಮಗೆ ಜ್ವರ ಇರುವ ಕುರಿತು ಮಾಹಿತಿ ಕೊಡಲು ಹಿಂಜರಿಯುತ್ತಾರೆ. ಇದಲ್ಲದೇ ಈಗಿರುವ ಹಳೆಯ ತಂತ್ರಜ್ಞಾನ ಬಳಸಿ ಸಾವಿರಾರು ಜನರನ್ನು ಪರೀಕ್ಷೆ ಮಾಡಲು ವೈದ್ಯರಿಗೆ ಕಷ್ಟಸಾಧ್ಯ. ಹೀಗಾಗಿ ತಕ್ಷಣ ಪರೀಕ್ಷಿಸಲು ಜ್ವರದ ತೀವ್ರತೆ ತಿಳಿದುಕೊಳ್ಳಲು ಥರ್ಮಲ್ ಸ್ಕ್ಯಾನರ್ ತಕ್ಷಣದಲ್ಲಿ ಉಪಯೋಗಕ್ಕೆ ಬರುತ್ತದೆ. ಈ ಕಾರಣದಿಂದ ಇದರ ಬಳಕೆ ವೈದ್ಯರಿಗೆ ರೋಗಿಯ ದೇಹಸ್ಥಿತಿ ಅರಿಯಲು ಸಹಕಾರಿಯಾಗುತ್ತದೆ.

    ಜಿಲ್ಲೆಯ ಗೋಕರ್ಣದಲ್ಲಿ ಒಂದರಲ್ಲಿಯೇ ಆರೋಗ್ಯ ಇಲಾಖೆ ಒಂದು ದಿನದಲ್ಲಿ ದೇಶ ವಿದೇಶದಿಂದ ಬಂದ ಏಳು ಸಾವಿರ ಜನರನ್ನು ಪರೀಕ್ಷೆ ಮಾಡಿತ್ತು. ಥರ್ಮಲ್ ಸ್ಕ್ಯಾನರ್ ದಿಂದಲೇ ಅತಿ ಬೇಗ ಜ್ವರ ಪತ್ತೆಹಚ್ಚುವಲ್ಲಿ ಸಹಕಾರಿಯಾಗಿತ್ತು.

    ಜಿಲ್ಲೆಯಲ್ಲಿ ಕಟ್ಟೆಚ್ಚರ ಮುಂದುವರಿಕೆ:
    ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೂ ವೈದ್ಯರ ತಂಡ ರಚಿಸಿ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಹೋಟೆಲ್, ರೆಸಾರ್ಟ್ ಗಳಲ್ಲಿ ನೋಂದಾಯಿತ ಅತಿಥಿಗಳ ಮಾಹಿತಿ ಮೇಲೆ ಸರ್ವೆ ಕಾರ್ಯ ಮಾಡಲಾಗುತ್ತಿದ್ದು, ಇದರ ಜೊತೆಗೆ ವಿದೇಶಿ ಪ್ರವಾಸಿಗರ ಮಾಹಿತಿಯನ್ನು ಪೊಲೀಸ್ ಇಲಾಖೆ ಮೂಲಕ ಪಡೆದು ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

    ಜಿಲ್ಲೆಯಲ್ಲಿ ಈವರೆಗೂ ಕೊರೊನಾ ವೈರಸ್ ಸೊಂಕಿತರ ಪತ್ತೆಯಾಗಿಲ್ಲ. ಸೋಮವಾರ ಕೂಡ ವಿದೇಶಕ್ಕೆ ಹೋಗಿಬಂದ ಹಾಗೂ ವಿದೇಶಿಗರ 62 ಜನರನ್ನು ಪರೀಕ್ಷೆ ಮಾಡಲಾಗಿದೆ. ಯಾರಲ್ಲೂ ಯಾವುದೇ ತೊಂದರೆ ಇಲ್ಲ. ಆದರೂ ಜಿಲ್ಲೆಯ ಜನರು ಎಚ್ಚರಿಕೆಯಿಂದ ಇರಬೇಕು. ಸ್ವಚ್ಛತೆ ಜೊತೆಗೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು. ಇಲಾಖೆಯಲ್ಲಿ ವೈರಸ್‍ನೊಂದಿಗೆ ಹೋರಾಡಲು ಬೇಕಾದ ಎಲ್ಲಾ ಸಾಧನಗಳು ಇವೆ. ಮಾಸ್ಕ್, ಔಷಧಿ ಸಂಗ್ರಹವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕಕುಮಾರ್ ಮಾಹಿತಿ ನೀಡಿದ್ದಾರೆ.