Tag: ತ್ರೈಮಾಸಿಕ

  • ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆ – ಯಾವ ಕಂಪನಿ ಎಷ್ಟು ಫೋನ್‌ ಮಾರಾಟ ಮಾಡಿದೆ?

    ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆ – ಯಾವ ಕಂಪನಿ ಎಷ್ಟು ಫೋನ್‌ ಮಾರಾಟ ಮಾಡಿದೆ?

    ನವದೆಹಲಿ: ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 5 ಕೋಟಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಮಾರಾಟಗೊಂಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರತದಲ್ಲಿ ದಾಖಲೆ ನಿರ್ಮಾಣವಾಗಿದೆ.

    2019ರ ಈ ಅವಧಿಗೆ ಹೋಲಿಸಿದರೆ ಶೇ.8 ರಷ್ಟು ಬೆಳವಣಿಗೆಯಾಗಿದೆ. ಒಂದು ತ್ರೈಮಾಸಿಕದಲ್ಲಿ ಇಷ್ಟೊಂದು ಬೆಳವಣಿಗೆಯಾಗಿದ್ದು ದಾಖಲೆ ಎಂದು ಮಾರುಕಟ್ಟೆ ವಿಶ್ಲೇಷಣಾ ಕಂಪನಿ ಕ್ಯಾನಲಿಸ್‌ ಹೇಳಿದೆ.

    ಲಾಕ್‌ಡೌನ್‌ ಬಳಿಕ ನಿರ್ಬಂಧಗಳು ತೆರವುಗೊಂಡಿದ್ದು ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. 3 ತಿಂಗಳು ಲಾಕ್‌ಡೌನ್‌ ಅವಧಿಯಲ್ಲಿ ಅಂಗಡಿಗಳು ಮುಚ್ಚಿತ್ತು. ಬಳಿಕ ಗ್ರಾಹಕರು ಹೆಚ್ಚಿನ ಸಂಖ್ಯೆಯನ್ನು ಫೋನ್‌ ಖರೀದಿಸಿದ್ದರಿಂದ ಈ ಪ್ರಗತಿಯಾಗಿದೆ ಎಂದು ತಿಳಿಸಿದೆ.

     

    ಗಲ್ವಾನ್‌ ಘರ್ಷಣೆಯ ಬಳಿಕ ಚೀನಾ ಮತ್ತು ಭಾರತ ನಡುವಿನ ಸಂಬಂಧ ಹಳಸಿದ್ದರೂ ರೆ ಇದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ವರ್ಷ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಿ ಕಂಪನಿಗಳ ಪಾಲು ಶೇ.74 ರಷ್ಟು ಇದ್ದರೆ ಈ ವರ್ಷ ಶೇ.76ಕ್ಕೆ ಏರಿಕೆಯಾಗಿದೆ. ಈ ಮೂಲಕ ಶೇ.2 ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ ಜೂನ್‌ ತಿಂಗಳ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.4ರಷ್ಟು ಕುಸಿತ ಕಂಡಿದೆ. ಜೂನ್‌ ತ್ರೈಮಾಸಿಕದಲ್ಲಿ ಚೀನಿ ಕಂಪನಿಗಳ ಪಾಲು ಶೇ.80 ರಷ್ಟು ಇತ್ತು.

    ಚೀನಾದೊಂದಿಗಿನ ಘರ್ಷಣೆಯ ಬಳಿಕ ಚೀನಾ ಕಂಪನಿಗಳು ಮಾರುಕಟ್ಟೆ ಹೂಡುವ ಖರ್ಚನ್ನು ಕಡಿಮೆ ಮಾಡಿವೆ. ನಾವು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದೇವೆ ಎಂಬುದನ್ನು ಬಿಂಬಿಸಲು ಮುಂದಾಗುತ್ತಿವೆ ಎಂದು ತಿಳಿಸಿದೆ.

    ಯಾವ ಕಂಪನಿಯ ಪಾಲು ಎಷ್ಟಿದೆ?
    ಮೊದಲ ಸ್ಥಾನದಲ್ಲಿ ಕ್ಸಿಯೋಮಿ ಮುಂದುವರಿದ್ದರೆ ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಕಂಪನಿ ಇದೆ. ಚೀನಾದ ವಿವೋ, ರಿಯಲ್‌ಮೀ, ಒಪ್ಪೋ ಅನುಕ್ರಮವಾಗಿ ಮೂರು, ನಾಲ್ಕು, ಐದನೇ ಸ್ಥಾನ ಪಡೆದಿದೆ.

    ಕ್ಸಿಯೋಮಿ 1.31 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಶೇ.26.1 ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‌ಸಂಗ್‌ 1.02 ಕೋಟಿ ಫೋನ್‌ಗಳನ್ನು ಮಾರಾಟ ಮಾಡಿ ಮಾರುಕಟ್ಟೆಯಲ್ಲಿ ಶೇ.20.4 ರಷ್ಟು ಪಾಲನ್ನು ಪಡೆದುಕೊಂಡಿದೆ.

    ಉಳಿದಂತೆ ವಿವೋ 88 ಲಕ್ಷ(ಶೇ.17.6), ರಿಯಲ್‌ಮೀ 87 ಲಕ್ಷ(ಶೇ.17.4), ಒಪ್ಪೋ 61 ಲಕ್ಷ(ಶೇ.12.1) ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ. ಐಫೋನ್‌, ಒನ್‌ ಪ್ಲಸ್‌ ಸೇರಿದಂತೆ ಇತರೇ ಎಲ್ಲ 31 ಲಕ್ಷ(ಶೇ.6.3) ಫೋನ್‌ಗಳು ಮಾರಾಟವಾಗಿದೆ ಎಂದು ಕ್ಯಾನಲಿಸ್‌ ತಿಳಿಸಿದೆ.

  • ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಮುಂಬೈ: ದೇಶದ ನಂ.1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಪ್ರತಿ ಬಳಕೆದಾರನಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಂಡ ಎರಡನೇ ತ್ರೈಮಾಸಿಕದಲ್ಲಿ 131.7 ರೂ. ಆದಾಯ ಗಳಿಸಿದೆ.

    ಬಾಂಬೆ ಶೇರು ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಜಿಯೋ ಶೇ.11 ರಷ್ಟು ಪ್ರಗತಿ ಸಾಧಿಸಿದ್ದು, 681 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು ಆದಾಯದಲ್ಲಿ ಶೇ.13.9 ಏರಿಕೆಯಾಗಿದ್ದು 9,240 ಕೋಟಿ ರೂ. ಗಳಿಸಿದೆ. ಕಾರ್ಯಾಚರಣಾ ಲಾಭ ಶೇ.13.5 ಏರಿಕೆಯಾಗಿದ್ದು 3,563 ಕೋಟಿ ರೂ. ಗಳಿಸಿದೆ.

    ಪ್ರತಿ ಬಳಕೆದಾರನಿಂದ 131.7 ರೂ. ಆದಾಯ ಬಂದಿದ್ದು, ಕಳೆದ 4 ತ್ರೈಮಾಸಿಕಕ್ಕೆ ಹೋಲಿಸಿದರೆ ಕಡಿಮೆ ಆದಾಯ ಬಂದಿದೆ. ಜಿಯೋ ಫೋನ್ ಮೂಲಕ ಗ್ರಾಹಕರನ್ನು ಹೆಚ್ಚಿಸಲು ಮುಂದಾಗಿದ್ದರ ಜೊತೆಗೆ ಕಡಿಮೆ ಬೆಲೆಗೆ ಡೇಟಾ ಪ್ಯಾಕ್ ನೀಡಿದ ಪರಿಣಾಮ ಆದಾಯ ಕುಸಿದಿದೆ. ಇದರ ಜೊತೆಗೆ 501 ರೂ. ನೀಡಿ ಹೊಸ ಜಿಯೋ ಫೋನ್ ಖರೀದಿಸಲು ನೀಡಿದ ಆಫರ್ ನಿಂದಾಗಿಯೂ ಈ ಆದಾಯದಲ್ಲಿ ಕುಸಿತ ಕಂಡಿದೆ.

    ಈ ಹಿಂದಿನ ನಾಲ್ಕು ತ್ರೈಮಾಸಿಕದಲ್ಲಿ ಜಿಯೋ ಅನುಕ್ರಮವಾಗಿ 156 ರೂ., 154 ರೂ., 137 ರೂ., 135 ರೂ., ಸೆಪ್ಟೆಂಬರ್‍ನಲ್ಲಿ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರನಿಂದ 131.7 ರೂ. ಆದಾಯಗಳಿಸಿದೆ.

    ಎರಡನೇ ತ್ರೈಮಾಸಿಕದಲ್ಲಿ ಒಟ್ಟು 3 ಕೋಟಿ ಗ್ರಾಹಕರನ್ನು ಹೆಚ್ಚಿಸಿಕೊಂಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 25.2 ಕೋಟಿ ಜಿಯೋ ಗ್ರಾಹಕರಿದ್ದಾರೆ. ಫೀಚರ್ ಫೋನ್‍ಗಳ ಪೈಕಿ ಈಗ 4ಜಿ ಜಿಯೋ ಫೋನ್2 ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಈ ಸೆಟ್ ವಾಟ್ಸಪ್, ಫೇಸ್‍ಬುಕ್, ಯೂ ಟ್ಯೂಬ್ ಅಪ್ಲಿಕೇಶನ್ ಗಳನ್ನೂ ಸಪೋರ್ಟ್ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv