Tag: ತ್ರಿವಳಿ

  • ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ

    ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ

    – ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಗೆ ಮಿಡಿದ ಬಾಲಿವುಡ್ ನಟ

    ಯಾದಗಿರಿ: ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ ಕುಟುಂಬಕ್ಕೆ ಬಾಲಿವುಡ್ ನಟ ಸೋನು ಸೂದ್ ನೆರವಿನ ಹಸ್ತ ಚಾಚಿದ್ದಾರೆ.

    ಯಾದಗಿರಿ ತಾಲೂಕಿನ ರಾಮ ಸಮುದ್ರ ಗ್ರಾಮದ ಪದ್ಮಾ ಆಗಸ್ಟ್ 22 ರಂದು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಪತಿ ನಾಗರಾಜ್ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸ ಬಿಟ್ಟು ವಾಪಸ್ ಊರಿಗೆ ಬಂದಿದ್ದರು. ಊರಲ್ಲಿ ಕೆಲಸ ಸಿಗದೆ ನಾಗರಾಜ್ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ ಡಿಜಿಟಲ್ ಇಂಪ್ಯಾಕ್ಟ್- ತ್ರಿವಳಿ ಮಕ್ಕಳಿಗೆ ಹರಿದು ಬಂತು ನೆರವಿನ ಮಹಾಪೂರ

    ಇಂತಹ ಸಂಕಷ್ಟದ ನಡುವೆ ನಾಗರಾಜ್ ಪತ್ನಿ ಪದ್ಮಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತಾಯಿ ಮಕ್ಕಳು ಆರೋಗ್ಯವಾಗಿರೋದು ನಾಗರಾಜ್‍ಗೆ ಖುಷಿ ತಂದಿದೆ. ಈಗಾಗಲೇ ಪತ್ನಿ ಹೆರಿಗೆ ಖರ್ಚಿಗೆಂದು 30 ಸಾವಿರ ರೂ. ಕೂಡ ಸಾಲ ಪಡೆದಿದ್ದರು. ಹೀಗಾಗಿ ನಾಗರಾಜ್ ಕುಟುಂಬ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ.

    ನಾಗರಾಜ್ ಮೊದಲಿನ ಹೆಣ್ಣು ಮಗು ಸೇರಿದಂತೆ ನಾಲ್ವರು ಮಕ್ಕಳ ಭವಿಷ್ಯದ ಬಗ್ಗೆ ತೀವ್ರ ಚಿಂತೆಯಲ್ಲಿ ಸಹಾಯ ಹಸ್ತ ಕೇಳಿದ್ದರು. ಆಗ ಕೆಲ ಸ್ಥಳೀಯರು ಕೂಡ ಆರ್ಥಿಕ ಸಹಾಯ ಮಾಡಿದರು. ಈ ಸುದ್ದಿ ಪಬ್ಲಿಕ್ ಟಿವಿ ವೆಬ್ ಸೈಟ್‍ನಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಜಿಲ್ಲೆಯ ಹತ್ತಿಕುಣಿ ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ ಎಂಬವರು ವೆಬ್ ಸೈಟ್ ಕಟಿಂಗ್‍ಗಳನ್ನು, ಸೋನು ತಂಡಕ್ಕೆ ಮೆಸೇಜ್ ಮಾಡಿ ನಾಗರಾಜ್ ಪರಿಸ್ಥಿತಿ ಬಗ್ಗೆ ವಿವರಿಸಿದರು.

    ಕೂಡಲೇ ನಾಗರಾಜ್ ಜೊತೆ ಮಾತಾಡಿದ ಸೋನು ಸೂದ್ ತಂಡದ ಸದಸ್ಯ ಗೋವಿಂದ್ ಅಗರ್ವಾಲ್, ಎಲ್ಲಾ ಮಾಹಿತಿ ಪಡೆದು ನೆರವಿನ ಭರವಸೆ ನೀಡಿದ್ದಾರೆ. ಸದ್ಯ ಮೂರು ತಿಂಗಳ ದಿನಸಿ ಪದಾರ್ಥ ನೀಡಲು ಮುಂದಾಗಿರೋ ಸೋನು ತಂಡ, ಭವಿಷ್ಯದಲ್ಲಿ ಮಕ್ಕಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದೆ. ನೆರವು ನೀಡಲು ಮುಂದಾಗಿರುವ ತಂಡಕ್ಕೆ ನಾಗರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಮಲ್ಲಿಕಾರ್ಜುನ ರೆಡ್ಡಿ ಈ ಬಗ್ಗೆ ನಟ ಸೋನು ಸೂದ್ ಜೊತೆ ಮಾತನಾಡಿ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ನಂತರ ಸೋನು ಸೂದ್ ಕೂಡ ಮಲ್ಲಿಕಾರ್ಜುನ ರೆಡ್ಡಿ ಅವರ ಜೊತೆ ಮಾತನಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ತ್ರಿವಳಿ ಮಕ್ಕಳ ಪೋಷಕರ ನೋವಿಗೆ ನಟ ಸೋನು ಸೂದ್ ಕಾಳಜಿ ತೋರಿ ನೆರವಿನ ಭರವಸೆ ನೀಡಿದ್ದು, ಬಡ ಕುಟುಂಬಕ್ಕೆ ಖುಷಿಕೊಟ್ಟಿದೆ.

  • ಪಬ್ಲಿಕ್ ಟಿವಿ ಡಿಜಿಟಲ್ ಇಂಪ್ಯಾಕ್ಟ್- ತ್ರಿವಳಿ ಮಕ್ಕಳಿಗೆ ಹರಿದು ಬಂತು ನೆರವಿನ ಮಹಾಪೂರ

    ಪಬ್ಲಿಕ್ ಟಿವಿ ಡಿಜಿಟಲ್ ಇಂಪ್ಯಾಕ್ಟ್- ತ್ರಿವಳಿ ಮಕ್ಕಳಿಗೆ ಹರಿದು ಬಂತು ನೆರವಿನ ಮಹಾಪೂರ

    ಯಾದಗಿರಿ: ಏಕಕಾಲದಲ್ಲಿ ಮೂರು ಮಕ್ಕಳಿಗೆ ಜನ್ಮನೀಡಿ ಸುದ್ದಿಯಾಗಿದ್ದ ಜಿಲ್ಲೆಯ ರಾಮಸಮುದ್ರ ಗ್ರಾಮದ ಪದ್ಮಾ ಮತ್ತು ನಾಗರಾಜ್ ದಂಪತಿಗೆ ಸಹಾಯದ ಮಹಾಪೂರವೇ ಹರಿದು ಬಂದಿದೆ.

    ಪಬ್ಲಿಕ್ ಟಿವಿ ವೆಬ್‍ಸೈಟಿನಲ್ಲಿ ಸುದ್ದಿ ಬಿತ್ತರವಾದ ಕೇವಲ ಒಂದು ಗಂಟೆ ಅಂತರದಲ್ಲಿ ಹತ್ತಾರು ಜನ ಪದ್ಮಾ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಸುದ್ದಿ ನೋಡಿದ ಕೂಡಲೇ ಯಾದಗಿರಿ ಮತ ಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕೊರೊನಾನಿಂದ ಕೋವಿಡ್ ಆಸ್ಪತ್ರೆಯಲ್ಲಿದ್ದರೂ ಪದ್ಮಾ ಕುಟುಂಬದ ಸಂಕಷ್ಟಕ್ಕೆ ಮರುಗಿದ್ದಾರೆ. ಇದನ್ನೂ ಓದಿ: ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ವೈಯಕ್ತಿಕ ಧನಸಹಾಯ ಮಾಡಿದ ಶಾಸಕರು, ಕೂಡಲೇ ತಹಶೀಲ್ದಾರ್ ಚನ್ನಮಲ್ಲಪ್ಪರಿಗೆ ಕರೆ ಮಾಡಿ ಸರ್ಕಾರಿ ಸೌಲಭ್ಯ ಈ ಕೂಡಲೇ ಒದಗಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಜಿಲ್ಲಾಸ್ಪತ್ರೆ ಅವರ ಆಪ್ತ ಸಹಾಯಕ ಮತ್ತು ತಹಶೀಲ್ದಾರ್ ಚನ್ನಮಲ್ಲಪ್ಪರನ್ನು ಕಳುಹಿಸಲು ಮುಂದಾದರು. ಇದೇ ವೇಳೆ ತಹಶೀಲ್ದಾರ್ ಚನ್ನಮಲ್ಲಪ್ಪ ಸಹ ವೈಯಕ್ತಿಕ ಧನ ಸಾಹಾಯ ಮಾಡಿ ಮಾನವೀಯತೆ ಮೆರೆದರು. ಪದ್ಮಾ ಆಸ್ಪತ್ರೆಯಿಂದ ಬಿಡುಗಡೆಯಾದ ದಿನದಿಂದ ಅವರ ಕುಟುಂಬಕ್ಕೆ ಬೇಕಾಗುವ ಒಂದು ತಿಂಗಳ ರೇಷನ್ ವ್ಯವಸ್ಥೆ ಮಾಡುವ ಭರವಸೆಯನ್ನೂ ನೀಡಿದ್ದಾರೆ.

    ಹೆಸರು ಹೇಳಲು ಇಚ್ಚಿಸದ ಜಿಲ್ಲಾಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಸಹ ಪದ್ಮಾ ಕುಟುಂಬದ ಕಷ್ಟಕ್ಕೆ ಮಿಡಿದಿದ್ದಾರೆ. ಈಗಾಗಲೇ ಪದ್ಮಾ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿರುವ ಇವರು, ಜಿಲ್ಲಾಸ್ಪತ್ರೆಯಲ್ಲಿ ಪದ್ಮಾ ಅವರಿಗೆ ಪ್ರತ್ಯೇಕ ಕೊಠಡಿ ನೀಡಿ ಅದರ ಸಂಪೂರ್ಣ ವೆಚ್ಚ ಭರಿಸಲು ಮುಂದಾಗಿದ್ದಾರೆ. ಶೀಘ್ರವಾಗಿ ತಮ್ಮ ಸಂಕಷ್ಟ ಮಿಡಿದ ಪಬ್ಲಿಕ್ ಟಿವಿ ಮತ್ತು ಸಹಾಯ ಮಾಡಿದ ಶಾಸಕ, ತಹಶೀಲ್ದಾರರಿಗೆ ಪದ್ಮಾ ಮತ್ತು ಕುಟುಂಬಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.

  • ತ್ರಿವಳಿ ತಲಾಖ್ ಬಳಿಕ ನಿಖಾ ಹಲಾಲ, ಬಹುಪತ್ನಿತ್ವ ರದ್ದತಿಗೆ ಕೇಂದ್ರ ಚಿಂತನೆ!

    ತ್ರಿವಳಿ ತಲಾಖ್ ಬಳಿಕ ನಿಖಾ ಹಲಾಲ, ಬಹುಪತ್ನಿತ್ವ ರದ್ದತಿಗೆ ಕೇಂದ್ರ ಚಿಂತನೆ!

    ನವದೆಹಲಿ: ತ್ರಿವಳಿ ತಲಾಖ್ ನಿಷೇಧದ ಪರ ನಿಂತಿದ್ದ ಕೇಂದ್ರ ಸರ್ಕಾರ ಈಗ ಸದ್ಯ ಚಾಲ್ತಿಯಲ್ಲಿರುವ ನಿಖಾ ಹಲಾಲ ಹಾಗೂ ಬಹು ಪತ್ನಿತ್ವವನ್ನು ನಿಷೇಧ ಮಾಡಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಪರ ನಿಲ್ಲಲು ಚಿಂತನೆ ನಡೆಸಿದೆ.

    ಈ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ನಡೆಯುವ ವೇಳೆ ತೊಂದರೆ ಅನುಭವಿಸಿದ ಮಹಿಳೆಯರ ಪರ ನಿಲ್ಲುವ ಕುರಿತು ಕೇಂದ್ರ ಚಿಂತನೆ ನಡೆಸಿದೆ. ಈ ಎರಡು ಪದ್ಧತಿಗಳು ಮಹಿಳಾ ವಿರೋಧಿಯಾಗಿದ್ದು ಎಂದು ನಿಷೇಧ ಮಾಡಬೇಕೆಂದು ಕೆಲ ಮಹಿಳೆಯರು ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದ್ದು ಈ ವೇಳೆ ಸಂತ್ರಸ್ತ ಮಹಿಳೆಯರ ಪರ ನಿಲ್ಲಲು ಕೇಂದ್ರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಹಿಂದೆ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರ ಕಾನೂನು ಸಚಿವಾಲಯಕ್ಕೆ ಅಭಿಪ್ರಾಯ ತಿಳಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಅನ್ವಯ ಮುಸ್ಲಿಂ ವೈಯಕ್ತಿಕ ಕಾನೂನು(ಷರಿಯಾತ್) ನಿರ್ಬಂಧಗಳನ್ನು ಅಸಂವಿಧಾನಿಕ ಎಂದು ಘೋಷಿಸಲು ಸಾಧ್ಯವೇ ಎಂದು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿತ್ತು.

    ಏನಿದು ನಿಖಾ ಹಲಾಲ?
    ಒಮ್ಮೆ ವಿಚ್ಛೇದನ ಪಡೆದ ನಂತರ ದಂಪತಿ ಮತ್ತೊಮ್ಮೆ ಮದುವೆಯಾಗಬೇಕಾದರೆ, ಪತ್ನಿ ಬೇರೊಬ್ಬನನ್ನು ಮದುವೆಯಾಗಿ ನಂತರ ಅವನಿಂದ ವಿಚ್ಛೇದನ ಪಡೆದು ಮೊದಲಿನ ಸತಿಯನ್ನು ಮದುವೆಯಾಗುವುದಕ್ಕೆ ನಿಖಾ ಹಲಾಲ ಎಂದು ಕರೆಯಲಾಗುತ್ತದೆ.

    ಬಹುಪತ್ನಿತ್ವ ಪದ್ಧತಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ಅವಕಾಶ ನೀಡುತ್ತದೆ. ಈ ಎರಡು ಪದ್ಧತಿಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ನಿಷೇಧಿಸಬೇಕೆಂದು ಮನವಿ ಮಾಡಿ ಕೆಲ ಮಹಿಳೆಯರು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ತ್ರಿವಳಿ ತಲಾಖ್ ನಿಷೇಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆ (ಬಿಎಂಎಂಎ) ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ.

  • ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

    ತ್ರಿವಳಿ ತಲಾಖ್ ಕರಡು ಮಸೂದೆ ಸಿದ್ಧ: ಶಿಕ್ಷೆ ಏನು ಗೊತ್ತಾ?

    ನವದೆಹಲಿ: ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡಿದರೆ ಪತಿಗೆ ಮೂರು ವರ್ಷ ಶಿಕ್ಷೆ ನೀಡುವ ಕಾನೂನು ತರಲು ರೂಪಿಸಲಾಗಿರುವ ಮಸೂದೆಗೆ ಕೇಂದ್ರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ನೀಡಿದೆ.

    ಇದೇ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು. ಈ ಆದೇಶದ ಅನ್ವಯ ಕೇಂದ್ರ ಸರ್ಕಾರ ಮುಸ್ಲಿಮ್ ಮಹಿಳೆಯರ ಮದುವೆ, ಹಕ್ಕುಗಳ ರಕ್ಷಣೆಯ ಕರಡು ಮಸೂದೆ 2017ನ್ನು ಸಿದ್ದಪಡಿಸಿದ್ದು, ಈ ಚಳಿಗಾಲದ ಆಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ.

    ಕರಡು ಮಸೂದೆಯಲ್ಲಿ ತ್ರಿವಳಿ ತಲಾಖ್ ನೀಡಿದರೆ ಆ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂಬ ಅಂಶವಿದೆ. ತ್ರಿವಳಿ ತಲಾಖ್ ಅಥವಾ ತಲಾಕ್ ಇ ಬಿದ್ದತ್ ಅನ್ನು ಕಾಗ್ನಿಸೆಬಲ್ ಅಪರಾಧ ಎಂದು ಪರಿಗಣಿಸಬೇಕು. ಅಷ್ಟೇ ಅಲ್ಲದೇ ಜಾಮೀನು ನೀಡಬಾರದು. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ಪರಿಹಾರ ನೀಡಬೇಕು ಎನ್ನುವ ಅಂಶವನ್ನು ಸೇರಿಸಲಾಗಿದೆ.

    ಕರುಡು ಮಸೂದೆಯ ಪ್ರಕಾರ ಬಾಯಿ ಮಾತು, ಬರವಣಿಗೆ ಅಥವಾ ಯಾವುದೇ ಎಲೆಕ್ಟ್ರಾನಿಕ್ ಅಂದರೆ ಇಮೇಲ್, ಎಸ್‍ಎಂಎಸ್, ವಾಟ್ಸಪ್ ಮೂಲಕ ತಲಾಖ್ ಹೇಳಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.

    ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಹೇಳಿ ಸುಪ್ರೀಂ ಕೋರ್ಟ್ ಸಂಪೂರ್ಣ ರದ್ದುಗೊಳಿಸಿ ತೀರ್ಪು ನೀಡಿದ ಬಳಿಕವೂ ಮುಸ್ಲಿಮ್ ಸಮುದಾಯದಲ್ಲಿ ತ್ರಿವಳಿ ತಲಾಖ್ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿತ್ತು. ಕೋರ್ಟ್ ಆದೇಶದ ಅನ್ವಯ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮಸೂದೆ ಸಿದ್ಧಪಡಿಸಲು ಸಚಿವರ ಸಮಿತಿಯನ್ನು ರಚಿಸಿತ್ತು. ಇಂದು ಸಚಿವರ ಸಮಿತಿ ಸಿದ್ಧ ಪಡಿಸಿದ ಕರಡು ಮಸೂದೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ಒಪ್ಪಿಗೆ ನೀಡಿದೆ.

     

  • ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಲಕ್ನೋ: ತ್ರಿವಳಿ ತಲಾಖ್ ನಿಷೇಧಿಸಿ ಎಂದು ಉತ್ತರ ಪ್ರದೇಶದ ಮೂರು ತಿಂಗಳ ಗರ್ಭಿಣಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ತ್ರಿವಳಿ ತಲಾಖ್ ನಿಷೇಧಿಸಲು ನೀವು ಮುಂದಾಗಿದ್ದಕ್ಕೆ ನಾನು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತವನ್ನು ಹಾಕಿದ್ದೇನೆ. ಹೀಗಾಗಿ ತ್ರಿವಳಿ ತಲಾಖ್ ನಿಷೇಧಿಸಿ ಎಂದು ತ್ರಿವಳಿ ತಲಾಖ್ ಸಂತ್ರಸ್ತೆ ಎರಡು ಹೆಣ್ಣುಮಕ್ಕಳ ತಾಯಿ ಆಗಿರುವ ಶಗುಫ್ತಾ ಮೋದಿಗೆ ಪತ್ರ ಬರೆದಿದ್ದಾರೆ.

    ಈ ಪತ್ರದ ಪ್ರತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದಾರೆ.

    ಶಹನ್ ಪುರ ನಿವಾಸಿ ಶಗುಫ್ತಾ ಮತ್ತು ಶಂಶದ್ ನಡುವೆ 5 ವರ್ಷದ ಹಿಂದೆ ಮದುವೆಯಾಗಿದ್ದು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗು ಹೆಣ್ಣಾಗಲಿದೆ ಎಂದು ತಿಳಿದು ಪತಿ ಗರ್ಭಪಾತಕ್ಕೆ ಒತ್ತಾಯಿಸಿದ್ದಾನೆ. ಆದರೆ ಶಗುಫ್ತಾ ಪತಿಯ ಮಾತನ್ನು ವಿರೋಧಿಸಿದ್ದಾರೆ. ಇದಕ್ಕೆ ಸಿಟ್ಟಾದ ಶಂಶದ್ ತನ್ನ ಸಹೋದರರ ಜೊತೆಗೂಡಿ ಮನಬಂದಂತೆ ಥಳಿಸಿದ್ದಾನೆ. ಮಗುವನ್ನು ಭ್ರೂಣದಲ್ಲಿ ಹತ್ಯೆ ಮಾಡಲು ಹೊಟ್ಟೆಗೆ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಮೂರು ಬಾರಿ ತಲಾಖ್ ಹೇಳಿ ಈಗ ಮನೆಯಿಂದ ಹೊರಗೆ ಹಾಕಿದ್ದಾನೆ.

    ಈ ಸಂಬಂಧ ಶಂಶದ್ ಮತ್ತು ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 315ರ ಅಡಿ(ಭ್ರೂಣ ಹತ್ಯೆ) ಮಾರ್ಚ್ 24ರಂದು ಪ್ರಕರಣ ದಾಖಲಾಗಿದೆ.

    ಜೀವಂತವಾಗಿ ಜನಿಸುವುದನ್ನು ತಡೆಯುವ ಉದ್ದೇಶ ಅಥವಾ ಹುಟ್ಟಿನ ನಂತರ ಮಗುವಿನ ಸಾವಿಗೆ ಕಾರಣವಾಗುವ ಈ ಆರೋಪ ಸಾಬೀತಾದರೆ ಐಪಿಸಿಯ ಸೆಕ್ಷನ್ 315ರ ಅನ್ವಯ 10 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.