Tag: ತೌಕ್ತೆ ಚಂಡಮಾರುತ

  • ತೌಕ್ತೆ ಹಾನಿ – ಇಂದು ಉತ್ತರ ಕನ್ನಡಕ್ಕೆ ಆಗಮಿಸಲಿದೆ ಕೇಂದ್ರ ತಂಡ

    ತೌಕ್ತೆ ಹಾನಿ – ಇಂದು ಉತ್ತರ ಕನ್ನಡಕ್ಕೆ ಆಗಮಿಸಲಿದೆ ಕೇಂದ್ರ ತಂಡ

    ಕಾರವಾರ: ತೌಕ್ತೆ ಚಂಡಮಾರುತದ ಹಾನಿಯ ಅಧ್ಯಯನ ನಡೆಸಲು ಕೇಂದ್ರಸರ್ಕಾರದ ನಿಯೋಜಿತ ತಂಡವು ಇಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದೆ.

    ಕೇಂದ್ರ ಸರ್ಕಾರದ ಆರು ಜನ ಅಧಿಕಾರಿಗಳ ತಂಡ ಕಾರವಾರಕ್ಕೆ ಆಗಮಿಸಲಿದೆ. ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಜೊತೆ ಸಭೆ ನೆಡೆಸಲಿದ್ದಾರೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದಿಂದ ಆಗಿರುವ ಹಾನಿ ವಿವರ ಪಡೆದು ಗುರುವಾರ ಜಿಲ್ಲೆಯ ಹಾನಿಗೊಳಗಾದ ಭಟ್ಕಳ, ಹೊನ್ನಾವರ, ಕುಮಟಾ ಭಾಗಕ್ಕೆ ತಂಡ ಭೇಟಿ ನೀಡಲಿದೆ. ನಂತರ ಉಡುಪಿಯ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಲಿದೆ. ಇದನ್ನೂ ಓದಿ: ಜೂನ್ 21 ರಿಂದ ಬಿಗ್‍ಬಾಸ್ ಆಟ ಮತ್ತೆ ಶುರು

    ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೇ ತಿಂಗಳಲ್ಲಿ ತೌಕ್ತೆ ಚಂಡಮಾರುತದಿಂದಾಗಿ 102 ಕೋಟಿ ರುಪಾಯಿಗೂ ಹೆಚ್ಚು ನಷ್ಟವಾಗಿದ್ದು, ಹಲವು ಕಡೆ ಮನೆಗಳು ಹಾನಿಯಾದರೆ ಕಡಲ ಕೊರತದಿಂದ ಸಮುದ್ರದ ಅಂಚಿನಲ್ಲಿ ಸಾಕಷ್ಟು ಹಾನಿಯಾಗುವ ಜೊತೆ ಮೀನುಗಾರರ ಬೋಟುಗಳು ಸಹ ಹಾನಿಗೀಡಾಗಿದ್ದವು. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದ್ದರೂ ತಕ್ಷಣದ ಪರಿಹಾರವಾಗಿ ರಾಜ್ಯ ಸರ್ಕಾರ ಅಲ್ಪ ಹಾನಿಗೆ 10 ಸಾವಿರ , ಮನೆ ಹಾನಿಗೆ 1ಲಕ್ಷದ ವರೆಗೆ ಪರಿಹಾರ ನೀಡಲಾಗಿತ್ತು. ಹೆಚ್ವಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಇಂದು ಸಂಜೆ ಜಿಲ್ಲೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ನಂತರ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದ್ದಾರೆ.

  • ತೌಕ್ತೆ ಅಬ್ಬರ- ಹಡಗು ಮುಳುಗಡೆ 22 ಸಾವು, 188 ಜನರ ರಕ್ಷಣೆ, ಗುಜರಾತ್‍ನಲ್ಲಿ ಪ್ರಧಾನಿ ಮೋದಿ ಸಮೀಕ್ಷೆ

    ತೌಕ್ತೆ ಅಬ್ಬರ- ಹಡಗು ಮುಳುಗಡೆ 22 ಸಾವು, 188 ಜನರ ರಕ್ಷಣೆ, ಗುಜರಾತ್‍ನಲ್ಲಿ ಪ್ರಧಾನಿ ಮೋದಿ ಸಮೀಕ್ಷೆ

    – ಇಬನ್ನೂ 75 ಜನ ನಾಪತ್ತೆ, ಮುಂದುವರಿದ ನೌಕಾಪಡೆ ಕಾರ್ಯಾಚರಣೆ

    ನವದೆಹಲಿ: ಗುಜರಾತ್ ಹಾಗೂ ಮುಂಬೈನಲ್ಲಿ ತೌಕ್ತೆ ಅಬ್ಬರ ಹೆಚ್ಚಾಗಿದ್ದು, ಒಎನ್‍ಜಿಸಿಯ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. 188 ಜನರನ್ನು ರಕ್ಷಣೆ ಮಾಡಲಾಗಿದ್ದು, 75 ಜನ ಸಿಬ್ಬಂದಿ ಕಾಣೆಯಾಗಿದ್ದಾರೆ. ಇತ್ತ ಗುಜರಾತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸುತ್ತಿದ್ದಾರೆ.

    ಗುಜರಾತ್ ಹಾಗೂ ಪಕ್ಕದ ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುನಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಗುಜರಾತ್‍ನ ಗಿರ್-ಸೋಮನಾಥ್, ಭಾವನಗರ ಹಾಗೂ ಅಮ್ರೇಲಿ ಜಿಲ್ಲೆಗಳಲ್ಲಿ ಹಾಗೂ ದಿಯುನ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸರ್ವೇ ಬಳಿಕ ಅಹ್ಮದಾಬಾದ್‍ನಲ್ಲಿ ಪರಿಶೀಲನಾ ಸಭೆಯನ್ನು ಸಹ ನಡೆಸಿದ್ದಾರೆ.

    ತೌಕ್ತೆ ಮುಂಬೈನಲ್ಲಿ ಸಹ ಭಾರೀ ಅನಾಹುತ ಸೃಷ್ಟಿಸಿದ್ದು, ಮುಂಬೈನಿಂದ 35 ನಾಟಿಕಲ್ ಮೈಲಿ ದೂರದಲ್ಲಿ 261 ಜನರಿದ್ದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್(ಒಎನ್‍ಜಿಸಿ)ನ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. ಇನ್ನೂ 57 ಜನ ಕಾಣೆಯಾಗಿದ್ದಾರೆ. 188 ಜನರನ್ನು ಈ ವರೆಗೆ ರಕ್ಷಣೆ ಮಾಡಲಾಗಿದೆ. ಭಾರತೀಯ ನೌಕಾಪಡೆ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

    ಇದೀಗ ತೌಕ್ತೆ ಚಂಡಮಾರುತ ದುರ್ಬಲಗೊಂಡಿದ್ದು, ಬುಧವಾರ ಬೆಳಗ್ಗೆ ದಕ್ಷಿಣ ರಾಜಸ್ಥಾನ ಹಾಗೈ ಪಕ್ಕದ ಗುಜರಾತ್ ಪ್ರದೇಶಗಳಲ್ಲಿ ಅಬ್ಬರಿಸಿತ್ತು. ರಾಜಸ್ಥಾನದ ಉದಯಪುರದ ಪಶ್ಚಿಮ-ನೈಋತ್ಯದಲ್ಲಿ 60.ಕಿ.ಮೀ ಹಾಗೂ ಗುಜರಾತ್‍ನ 110 ಕಿ.ಮೀ.ದೂರದಲ್ಲಿ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

  • ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ತೌಕ್ತೆ ಚಂಡಮಾರುತ – ಗುಜರಾತ್‍ನಲ್ಲಿಂದು ಮೋದಿ ವೈಮಾನಿಕ ಸಮೀಕ್ಷೆ

    ಗಾಂಧಿನಗರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಗುಜರಾತ್‍ಗೆ ಭೇಟಿ ನೀಡಲಿದ್ದಾರೆ.

    ಗುಜರಾತ್, ಮುಂಬೈ, ಕರ್ನಾಟಕದ ಕೆಲವು ಭಾಗಗಳಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದ ಹಾನಿಗೊಂಡ ಪ್ರದೇಶಗಳನ್ನು ಪರಿಶೀಲಿಸಲು ಪ್ರಧಾನಿ ಮೋದಿಯವರು ಡಿಯುಗೆ ಭೇಟಿ ನೀಡಲಿದ್ದಾರೆ.

    ಬೆಳಗ್ಗೆ 9.30ರ ಸುಮಾರಿಗೆ ಮೋದಿಯವರು ದೆಹಲಿಯಿಂದ ಹೊರಡಲಿದ್ದು ಭಾವನಗರದಲ್ಲಿ ತಲುಪಿ, ಅಲ್ಲಿಂದ ಉನಾ, ಡಿಯು, ಜಫರಾಬಾದ್ ಮತ್ತು ಮಾಹುವಾಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಲಿದ್ದಾರೆ. ಸಮೀಕ್ಷೆಯ ನಂತರ ಮೋದಿಯವರು ಅಹಮದಾಬಾದ್ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

    ತೌಕ್ತೆ ಚಂಡಮಾರುತದಿಂದ ಸೋಮವಾರ ರಾತ್ರಿ ಡಿಯು ಮತ್ತು ಉನಾ ನಡುವಿನ ಸೌರಾಷ್ಟ್ರ ಪ್ರದೇಶದ ಗುಜರಾತ್ ಕರಾವಳಿಯಲ್ಲಿ ಭೂ ಕುಸಿತ ಉಂಟಾಗಿದೆ ಹಾಗೂ ಚಂಡಮಾರುತದಿಂದ 13 ಜನರು ಮೃತಪಟ್ಟಿದ್ದಾರೆ.

  • ಗೇಟ್ ವೇ ಆಫ್ ಇಂಡಿಯಾದಲ್ಲಿ ಅಬ್ಬರಿಸಿದ ತೌಕ್ತೆ- ಭಯಾನಕ ವೀಡಿಯೋಗೆ ನೆಟ್ಟಿಗರು ಶಾಕ್

    ಗೇಟ್ ವೇ ಆಫ್ ಇಂಡಿಯಾದಲ್ಲಿ ಅಬ್ಬರಿಸಿದ ತೌಕ್ತೆ- ಭಯಾನಕ ವೀಡಿಯೋಗೆ ನೆಟ್ಟಿಗರು ಶಾಕ್

    ಮುಂಬೈ: ತೌಕ್ತೆ ಚಂಡಮಾರುತವು ದೇಶದ ವಿವಿಧ ಭಾಗಗಳಿಗೆ ಹಾನಿಗೊಳಿಸಿದ್ದು, ಅರಬ್ಬಿ ಸಮುದ್ರದ ಬಲವಾದ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಅಪ್ಪಳಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋವನ್ನು ಗೇಟ್ ಆಫ್ ಇಂಡಿಯಾದ ಬಳಿ ಇರುವ ತಾಜ್‍ಮಹಲ್ ಹೋಟೆಲ್‍ನಿಂದ ಸೆರೆಹಿಡಿದಂತಿದ್ದು, ಅಲೆಗಳು ಗೇಟ್ ವೇ ಆಫ್ ಇಂಡಿಯಾದ ಗೋಡೆಗಳಿಗೆ ಜೋರಾಗಿ ಬಂದು ಅಪ್ಪಳಿಸುತ್ತಿರುವುದನ್ನು ಕಾಣಬಹುದಾಗಿದೆ.

    ವೀಡಿಯೋದಲ್ಲಿ ಅಲೆಗಳು ಸ್ಮಾರಕದ ಗೋಡೆಗಳ ಮೇಲೆ ರಭಸದಿಂದ ಅಪ್ಪಳಿಸುತ್ತಿದ್ದು, ಜೋರಾಗಿ ಗಾಳಿ ಬೀಸುತ್ತಿರುತ್ತದೆ. ಮುಂಬೈ ಕರಾವಳಿ ಸಮೀಪದಲ್ಲಿ ಚಂಡಮಾರುತ ಹಾದು ಹೋಗಿದ್ದು, ಸೋಮವಾರ ಮಧ್ಯಾಹ್ನ ಮುಂಬೈಯಲ್ಲಿ 114 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋಗೆ ಹಲವಾರು ವ್ಯೂಸ್ ಬಂದಿದ್ದು, ಈ ಭಯಾನಕ ದೃಶ್ಯ ವೈರಲ್ ಆಗುತ್ತಿದೆ

  • ತೌಕ್ತೆಯ ಅಬ್ಬರಕ್ಕೆ ನಲುಗಿದ 43 ಗ್ರಾಮಗಳು – ಇಳಿಮುಖವಾದ ಸಮುದ್ರದ ಅಬ್ಬರ

    ತೌಕ್ತೆಯ ಅಬ್ಬರಕ್ಕೆ ನಲುಗಿದ 43 ಗ್ರಾಮಗಳು – ಇಳಿಮುಖವಾದ ಸಮುದ್ರದ ಅಬ್ಬರ

    ಕಾರವಾರ: ಕಳೆದ ಎರಡು ದಿನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ದೊಡ್ಡ ನಷ್ಟ ಸಂಭವಿಸಿದೆ.

    ಚಂಡಮಾರುತದ ಅಬ್ಬರಕ್ಕೆ ಕರಾವಳಿಯ 43 ಗ್ರಾಮಗಳಲ್ಲಿ ಹಾನಿ ಸಂಭವಿಸಿದ್ದು, 153 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಮತ್ತು 22 ಮನೆ ತೀವ್ರ ಹಾಗೂ ಒಂದು ಮನೆ ಸಂಪೂರ್ಣ ನಾಶವಾಗಿದೆ. ತೌಕ್ತೆ ಅಬ್ಬರಕ್ಕೆ ಭಟ್ಕಳದ ಮೀನುಗಾರ ಮೃತಪಟ್ಟಿದ್ದಾನೆ.

    ಕರಾವಳಿ ಭಾಗದಲ್ಲಿ ಬಹುತೇಕ ಮೀನುಗಾರರು ನಷ್ಟ ಅನುಭವಿಸಿದ್ದು 83 ಬೋಟುಗಳು ಹಾನಿಯಾಗೊಳಗಾಗಿದ್ದು, ಮೂರು ಬೋಟುಗಳು ಸಂಪೂರ್ಣ ಧ್ವಂಸಗೊಂಡಿದೆ. ಕಡಲ ಅಲೆಯ ಹೊಡೆತಕ್ಕೆ 37 ಬಲೆಗಳು ಹಾನಿಯಾಗಿದ್ದರೆ, 8 ಬಲೆಗಳು ಸಂಪೂರ್ಣ ನಾಶವಾಗಿದೆ. ಇನ್ನು ಮಳೆ ಹಾಗೂ ಗಾಳಿ ಅಬ್ಬರಕ್ಕೆ ಜಿಲ್ಲೆಯಾದ್ಯಂತ 530 ವಿದ್ಯುತ್ ಕಂಬಗಳು ಧರೆಗುರುಳಿದ್ದರೆ, 139 ಟ್ರಾನ್ಸ್ ಫಾರ್ಮರ್‍ಗಳು ಹಾನಿಗೊಂಡಿದೆ.

    ಜಿಲ್ಲೆಯ ಭಟ್ಕಳ, ಅಂಕೋಲ, ಮುಂಡಗೋಡು ಸೇರಿ 3.57 ಹೆಕ್ಟೇರ್ ತೋಟಗಾರಿಕಾ ಭಾಗಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಹೊನ್ನಾವರ, ಭಟ್ಕಳ, ಕುಮಟಾ ಸೇರಿ ಒಟ್ಟು ಏಳು ಕಾಳಜಿ ಕೇಂದ್ರ ತೆರೆದಿದ್ದು, ಜಿಲ್ಲಾಡಳಿತ ಆಶ್ರಯ ನೀಡಿದೆ. ಇಂದು ಮಳೆ ಅಬ್ಬರ ಕಡಿಮೆಯಾಗಿದ್ದು, ಅಲೆಗಳ ಅಬ್ಬರ ಹಾಗೂ ಗಾಳಿಯ ಅಬ್ಬರ ಇಳಿಮುಖವಾಗುತ್ತಿದೆ.

  • ತೌಕ್ತೆ ಚಂಡಮಾರುತ – ಮುಂಬೈನಿಂದ ಗುಜರಾತ್ ತೀರದತ್ತ ಪಯಣ

    ತೌಕ್ತೆ ಚಂಡಮಾರುತ – ಮುಂಬೈನಿಂದ ಗುಜರಾತ್ ತೀರದತ್ತ ಪಯಣ

    ಮುಂಬೈ: ಮುಂಬೈನ ನೈರುತ್ಯ ದಿಕ್ಕಿನಿಂದ 160 ಕಿ.ಮೀ ದೂರದಲ್ಲಿ ತೌಕ್ತೆ ಚಂಡಮಾರುತವು ಅಬ್ಬರಿಸುತ್ತಿದ್ದು, ಬೆಳಗ್ಗೆ 11 ರಿಂದ ಮಧ್ಯಾಹ್ನ 2ರವರೆಗೂ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

    ರಾತ್ರಿ 8 ಮತ್ತು 9 ಗಂಟೆಗೆ ತೌಕ್ತೆ ಚಂಡ ಮಾರುತವು ಗುಜರಾತ್ ಕರಾವಳಿ ತೀರವನ್ನು ತಲುಪುವ ಸಾಧ್ಯತೆಯಿದೆ. ಭೂಕುಸಿತದ ಭೀತಿಯಿಂದ ಗುಜರಾತ್‍ನ ಭಾವನಗರ್ ಜಿಲ್ಲೆಯ ಪೋರಬಂದರ್ ಮತ್ತು ಮಾಹುವಾ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ 25 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

    ತೌಕ್ತೆ ಚಂಡಮಾರುತದಿಂದ ಮುಂಬೈನ ಬಾಂದ್ರಾ-ವರ್ಲಿ ಸಮೀಪದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇಂದು ಮುಂಜಾನೆಯಿಂದ ತೌಕ್ತೆ ಚಂಡಮಾರುತ ತೀವ್ರಗೊಳ್ಳುತ್ತಿದೆ.

  • ತೌಕ್ತೆ ಚಂಡಮಾರುತದ ಅಬ್ಬರ- ಬೆಳಗಾವಿಯಲ್ಲಿ ಮನೆ ಕುಸಿದು ಅಜ್ಜಿ, ಮೊಮ್ಮಗ ಸಾವು

    ತೌಕ್ತೆ ಚಂಡಮಾರುತದ ಅಬ್ಬರ- ಬೆಳಗಾವಿಯಲ್ಲಿ ಮನೆ ಕುಸಿದು ಅಜ್ಜಿ, ಮೊಮ್ಮಗ ಸಾವು

    ಬೆಳಗಾವಿ: ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದ್ದು, ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಎಡಬಿಡದೆ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಬಿದ್ದಿದ್ದು, ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ದೊಡ್ಡವ್ವಾ ರುದ್ರಪ್ಪಾ ಪಟ್ಟೆದ್(54) ಹಾಗೂ ಮೊಮ್ಮಗ ಅಭಿಷೇಕ್ ಪಟ್ಟೆದ್(3) ಸಾವನ್ನಪ್ಪಿದ್ದಾರೆ.

    ದೊಡ್ಡವ್ವ ಹಾಗೂ ಮೊಮ್ಮಗ ಮನೆಯಲ್ಲೇ ಇದ್ದರು, ಅದೃಷ್ಟವಶಾತ್ ಅಭಿಷೇಕ್ ತಂದೆ, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರೇ ಶವಗಳನ್ನು ಹೊರ ತೆಗೆದಿದ್ದು, ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತೌಕ್ತೆ ಚಂಡಮಾರುತದ ಅಬ್ಬರ, ಕೊಡಗಿನಲ್ಲಿ ನಿರಂತರ ಮಳೆ- ಆತಂಕದಲ್ಲಿ ಜನತೆ

    ತೌಕ್ತೆ ಚಂಡಮಾರುತದ ಅಬ್ಬರ, ಕೊಡಗಿನಲ್ಲಿ ನಿರಂತರ ಮಳೆ- ಆತಂಕದಲ್ಲಿ ಜನತೆ

    ಮಡಿಕೇರಿ: ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಹ ಗಾಳಿಯ ಅಬ್ಬರ ಜೋರಾಗಿದ್ದು, ತಡರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ.

    ಮಡಿಕೇರಿ, ಗೋಣಿಕೊಪ್ಪಲು, ಸಿದ್ದಾಪುರ, ಪೊನ್ನಂಪೇಟೆ, ವಿರಾಜಪೇಟೆ, ನಾಪೋಕ್ಲು, ಭಾಗಮಂಡಲ ಹಾಗೂ ತಲಕಾವೇರಿ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿತ್ತು. ಈಗ ಚಂಡಮಾರುತದ ಪರಿಣಾಮ ಮತ್ತೆ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಪ್ರಮುಖ ಕಾವೇರಿ ನದಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರಿನಮಟ್ಟ ಸ್ವಲ್ಪ ಏರಿಕೆಯಾಗಿದೆ.

    ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡಗಾಡು ಪ್ರದೇಶದ ಜನರಲ್ಲಿ ಮತ್ತೆ ಅತಂಕ ಮನೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಕೊಡಗಿನಲ್ಲಿ ಇದೀಗ ಚಂಡಮಾರುತ ಪರಿಣಾಮದಿಂದಾಗಿ ಜನರಲ್ಲಿ ಅತಂಕ ಮನೆಮಾಡಿದೆ. ಗಾಳಿ ಹೆಚ್ಚಾಗಿರುವ ಪರಿಣಾಮದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ಧರೆಗುರುಳುತ್ತಿದ್ದು, ವಿದ್ಯುತ್ ಇಲ್ಲದೆ ಗ್ರಾಮೀಣ ಭಾಗದ ಜನರು ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ಈಗಾಗಲೇ ಎನ್‍ಡಿಅರ್‍ಎಫ್ ತಂಡ ಅಗಿಮಿಸಿದ್ದು, ಮಳೆ ಅನಾಹುತ ಸಂಭವಿಸುವ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ.

  • ತೌಕ್ತೆ ಚಂಡವಾರುತಕ್ಕೆ ಮೀನುಗಾರ ಬಲಿ- ಹಲವು ಮನೆಗಳಿಗೆ ನುಗ್ಗಿದ ಸಮುದ್ರದ ನೀರು

    ತೌಕ್ತೆ ಚಂಡವಾರುತಕ್ಕೆ ಮೀನುಗಾರ ಬಲಿ- ಹಲವು ಮನೆಗಳಿಗೆ ನುಗ್ಗಿದ ಸಮುದ್ರದ ನೀರು

    ಕಾರವಾರ: ‘ತೌಕ್ತೆ’ ಚಂಡಮಾರುತ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಕೋಡಿಯಲ್ಲಿ ನೀರು ಪಾಲಾಗುತ್ತಿದ್ದ ದೋಣಿಯನ್ನು ದಡಕ್ಕೆ ತರಲು ಹೋದ ಮೀನುಗಾರ, ಅಲೆಗಳ ಅಬ್ಬರಕ್ಕೆ ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ.

    ಜಾಲಿಕೋಡಿ ನಿವಾಸಿ ಲಕ್ಷ್ಮಣ ಈರಪ್ಪ ನಾಯ್ಕ (60) ಮೃತರಾಗಿದ್ದಾರೆ. ದಡದಲ್ಲಿ ಲಂಗರು ಹಾಕಿದ್ದ ದೋಣಿಯೊಂದು ಅಲೆಗಳ ಹೊಡೆತಕ್ಕೆ ನೀರು ಪಾಲಾಗುತ್ತಿತ್ತು. ಅದನ್ನು ತಡೆದು ದಡದಿಂದ ಮೇಲೆ ತರಲು ನೀರಿಗೆ ಇಳಿದ್ದರು. ಆಗ ಅಪ್ಪಳಿಸಿದ ಅಲೆಗೆ ಮತ್ತೊಂದು ದೋಣಿಯು ಅವರನ್ನು ದಡದಿಂದ ಮೇಲೆ ತರಬೇಕಿದ್ದ ದೋಣಿಯ ನಡುವೆ ಸಿಲುಕಿಸಿತು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

    ಜಿಲ್ಲೆಯ ಕರಾವಳಿ ಭಾಗದಲ್ಲಿ ಅಲೆಗಳು ಹೆಚ್ಚು ಏಳುತಿದ್ದು ಲಂಗುರು ಹಾಕಿದ ಬೋಟುಗಳು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದು, ತೀರ ಪ್ರದೇಶದಲ್ಲಿ ಸಮುದ್ರದ ನೀರು ನುಗ್ಗುತ್ತಿದ್ದು ಮೀನುಗಾರರಲ್ಲಿ ಆತಂಕ ಮೂಡಿಸಿದೆ. ಕರಾವಳಿ ಭಾಗದಲ್ಲಿ ಮಳೆಯ ಅಬ್ಬರಕ್ಕಿಂತ ಗಾಳಿ ಹಾಗೂ ಸಮುದ್ರದ ಅಲೆಯ ಅಬ್ಬರ ಕಡಲ ತೀರದ ನಿವಾಸಿಗಳನ್ನು ಸಂತ್ರಸ್ತರನ್ನಾಗಿಸಿದೆ.

    ಕುಮಟಾದ ಹೊನ್ನಳ್ಳಿ, ನ್ಯೂ ಫಿಷ್ ಮಾರ್ಕೇಟ್, ಗುಂದ ಪ್ರದೇಶದಲ್ಲಿ ಸಮುದ್ರದ ನೀರು ಮನೆಗಳಿಗೆ ಹೊಕ್ಕಿದ್ದು ಐದಕ್ಕೂ ಹೆಚ್ಚು ಮನೆಗಳು ಸಮುದ್ರದ ನೀರಿನಿಂದ ಜಲಾವೃತವಾಗಿದೆ. ಕುಮಟಾದ ದಾರೇಶ್ವರ ಮಠದ ಬಳಿ ಸಮುದ್ರ ನೀರು ಉಕ್ಕಿ ಬೋಟುಗಳು ಹಾಗೂ ಬಲೆಗಳು ಕೊಚ್ವಿ ಹೋಗಿದೆ. ತೊಂದರೆಗೊಳಗಾದ ಪ್ರದೇಶಕ್ಕೆ ಕುಮಟಾದ ಎಸಿ ಎಂ.ಅಜೀತ್ , ತಹಶೀಲ್ದಾರ್ ಎಂ ಎನ್ ನಾಯ್ಕ, ಪುರಸಭಾ ಆಯುಕ್ತ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ಕೇರಳದಲ್ಲಿ ತೌಕ್ತೆ ಚಂಡಮಾರುತ, ಭಾರೀ ಪ್ರವಾಹ – ಕರ್ನಾಟಕಕ್ಕೂ ಎಫೆಕ್ಟ್, 7 ಜಿಲ್ಲೆಯಲ್ಲಿ ರೆಡ್ ಅಲರ್ಟ್

    ಕೇರಳದಲ್ಲಿ ತೌಕ್ತೆ ಚಂಡಮಾರುತ, ಭಾರೀ ಪ್ರವಾಹ – ಕರ್ನಾಟಕಕ್ಕೂ ಎಫೆಕ್ಟ್, 7 ಜಿಲ್ಲೆಯಲ್ಲಿ ರೆಡ್ ಅಲರ್ಟ್

    – ಉಡುಪಿಯಲ್ಲಿ ಕಡಲ್ಕೊರೆತ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೌದ್ರನರ್ತನದ ನಡುವೆ ವರುಣನ ಅರ್ಭಟ ಜೋರಾಗಿದೆ. ತೌಕ್ತೆ ಚಂಡಮಾರುತದ ಹಿನ್ನಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನ 2 ದಿನಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

    ಕೇರಳದಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚಿರುವಾಗಲೇ ಈಗ ಸೈಕ್ಲೋನ್ ಅಬ್ಬರ ಶುರುವಾಗಿದೆ. ಅರಬ್ಬೀ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಠಿಸಿದೆ. ದೇವರನಾಡಲ್ಲಿ ಭಾರೀ ಮಳೆಯಾಗುತ್ತಿದ್ದು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. ತಿರುನಂತಪುರಂ, ವಯನಾಡು, ಕೊಯಿಕ್ಕೋಡ್, ಕಾಸರಗೋಡು ಸೇರಿ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದ 8 ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿದ್ದು ರಸ್ತೆಗಳೆಲ್ಲಾ ನದಿಯಂತೆ ಭಾಸವಾಗ್ತಿದೆ. ಮನೆಗಳೆಲ್ಲಾ ಕೊಚ್ಚಿಹೋಗಿದೆ. ಸಮುದ್ರದಲ್ಲಿ ರಕ್ಕಸ ಅಲೆಗಳು ಏರುತ್ತಿದೆ.

    ನಾಡಿದ್ದು ತೌಕ್ತೆ ಚಂಡಮಾರುತ ಅಪ್ಪಳಿಸಲಿದ್ದು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‍ಗೂ ಈ ಎಫೆಕ್ಟ್ ತಟ್ಟಲಿದೆ. ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಚಂಡಮಾರುತದ ಎಫೆಕ್ಟ್ ಇರಲಿದ್ದು ಈಗಾಗಲೇ ಮಳೆ ಆರಂಭವಾಗಿದೆ. ಅಲ್ಲದೇ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನದಲ್ಲೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

    ಉಡುಪಿಯ ಮರವಂತೆ ಕಡಲತೀರದಲ್ಲಿ ಭಾರಿ ಹಾನಿಯಾಗಿದೆ. ದೊಡ್ಡ ದೊಡ್ಡ ಅಲೆಗಳ ಹೊಡೆತಕ್ಕೆ ಕಡಲ್ಕೊರೆತವಾಗಿ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಅಲೆಗಳ ತೀವ್ರತೆ ಮುಂದುವರಿದರೆ ಮೀನುಗಾರಿಕಾ ರಸ್ತೆಗೆ ಹಾನಿಯಾಗುವ ಸಾಧ್ಯತೆಯಿದೆ. ಇದರ ನಡುವೆ ಕೊಡಗಿನ ಭಾಗಮಂಡಲ, ಕೋರಂಗಾಲ ಸುತ್ತಮುತ್ತ ಹೆಚ್ಚು ಮಳೆಯಾಗಲಿದ್ದು, ಜನರು ಎಚ್ಚರದಿಂದ ಇರಬೇಕು. ಜನರು ಎರಡು ದಿನಗಳ ಕಾಲ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮೈಕ್‍ನಲ್ಲಿ ಮನವಿ ಮಾಡಿದೆ.

    ಕರಾವಳಿ ಜಿಲ್ಲೆ, ಮಲೆನಾಡಲ್ಲಿ ಮಾತ್ರವಲ್ಲದೇ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ.