Tag: ತೋಟಗಾರಿಕೆ ಇಲಾಖೆ

  • ಕಬ್ಬನ್ ಪಾರ್ಕ್ ನಲ್ಲಿ ಇನ್ನು ಮುಂದೆ ರೊಮ್ಯಾನ್ಸ್ ಮಾಡಿದ್ರೆ ಸಿಕ್ಕಿ ಬೀಳ್ತೀರಿ!

    ಕಬ್ಬನ್ ಪಾರ್ಕ್ ನಲ್ಲಿ ಇನ್ನು ಮುಂದೆ ರೊಮ್ಯಾನ್ಸ್ ಮಾಡಿದ್ರೆ ಸಿಕ್ಕಿ ಬೀಳ್ತೀರಿ!

    ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಎಲ್ಲೆಂದರಲ್ಲಿ ಜೋಡಿ ಹಕ್ಕಿ ಕುಳಿತಿರುವುದು ನಿಮಗೆ ಗೊತ್ತೆ ಇದೆ. ಆದರೆ ಕೆಲವರು ಈ ಸ್ಥಳವನ್ನು ರೊಮ್ಯಾನ್ಸ್ ಮಾಡುವ ಮೂಲಕ ದುರ್ಬಳಕೆ ಮಾಡುತ್ತಿದ್ದಾರೆ. ಈ ದುರ್ಬಳಕೆಯನ್ನು ತಡೆಯಲು ತೋಟಗಾರಿಕಾ ಇಲಾಖೆ ಈಗ ಮುಂದಾಗಿದೆ.

    ಹೌದು. ಪ್ರೇಮಿಗಳಿಂದ ಆಗುತ್ತಿರುವ ಮುಜುಗರವನ್ನು ತಪ್ಪಿಸಲು ತೋಟಗಾರಿಕೆ ಇಲಾಖೆ ಮತ್ತು ಬೆಸ್ಕಾಂ ಈಗ 300 ಎಕ್ರೆ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ.

    ರಾತ್ರಿ ಹಗಲು ಎನ್ನದೇ ಪಾರ್ಕ್‍ನಲ್ಲಿ ಪ್ರೇಮಿಗಳು ಓಡಾಟ ಹೆಚ್ಚಾಗಿದ್ದು. ಅಲ್ಲದೇ ಸಂಜೆ ಆಯಿತೆಂದರೆ ಮರದ ಕೆಳಗೆ ಲವರ್ಸ್‍ಗಳ ಪ್ರಣಯ ಶುರುವಾಗಿ ಬಿಡುತ್ತೆ. ಸಂಜೆ ಹೊತ್ತಿನಲ್ಲಿ ಕೆಲ ಜಾಗದಲ್ಲಿ ಲೈಟ್ ವ್ಯವಸ್ಥೆ ಇಲ್ಲದ ಕಾರಣ ಪ್ರೇಮಿಗಳ ಮೇಲೆ ಕಿಡಿಗೇಡಿಗಳು ದಾಳಿ ನಡೆಯುತ್ತಿವೆ. ಹೀಗಾಗಿ ಇವುಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬೆಸ್ಕಾಂನೊಂದಿಗೆ ಚರ್ಚಿಸಿ 300 ಎಕರೆ ಪಾರ್ಕ್‍ನಲ್ಲಿ ಲೈಟ್ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಕಬ್ಬನ್ ಪಾರ್ಕ್ ಉಪನಿದೇಶಕ ಮಹಾಂತೇಶ್ ಮರ್‍ಗೋಡ್ ಹೇಳಿದ್ದಾರೆ.

    ಕಬ್ಬನ್ ಪಾರ್ಕ್‍ನಲ್ಲಿ ಇತ್ತಿಚೆಗೆ ಅಪರಾಧ ಕೃತ್ಯಗಳ ನಡೆಯುತ್ತಿರುವುದರಿಂದ ಸಾರ್ವಜನಿಕರು ಪಾರ್ಕ್‍ನಲ್ಲಿ ವಿಶ್ರಾಂತಿ ಪಡೆಯಲು ಹೆದರುತ್ತಿದ್ದಾರೆ. ಇದರ ಜೊತೆಗೆ ಲವರ್ಸ್‍ಗಳ ಬಾಲಿವುಡ್ ರೀತಿಯಲ್ಲಿ ರೋಮ್ಯಾನ್ಸ್ ನಿಂದ ಕುಟುಂಬಸ್ಥರು ಬೇಸತ್ತಿದ್ದಾರೆ. ಹೀಗಾಗಿ ಸಾರ್ವಜನಿಕ ಹಿತ ದೃಷ್ಟಿಯಿಂದ ಪಾರ್ಕ್‍ನಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗುವುದು ಎಂದರು.

    ತೋಟಗಾರಿಕಾ ಇಲಾಖೆಯ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲವರ್ಸ್‍ಗಳಿಗೆ ಏಕಾಂತದ ಜಾಗವಾಗಿರುವ ಕಾರಣ ಈ ರೀತಿಯ ನಿರ್ಬಂಧ ಹೇರುವುದು ಸರಿಯಲ್ಲ. ಒಂದು ವೇಳೆ ನಿರ್ಬಂಧ ಹೇರಿದರೆ ಅದನ್ನು ಮುರಿಯದೇ ಇರಲಾರರು. ಲವರ್ಸ್‍ಗಳ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಕೆಲವರು ಹೇಳಿದ್ದಾರೆ.

    ಇನ್ನು ಕೆಲವರು ನಿರ್ಬಂಧದ ಪರವಾಗಿ ಮಾತನಾಡಿ ಲವರ್ಸ್‍ಗಳ ಮೇಲಿನ ದಾಳಿ ಹಾಗೂ ಅಸಭ್ಯ ವರ್ತನೆ ಅಲ್ಲದೇ ಕಿಡಿಗೇಡಿಗಳ ಕೃತ್ಯಕ್ಕೆ ಸಿಸಿಟಿವಿ ಕಣ್ಗಾವಲು ಒಂದು ಉತ್ತಮ ಸಾಧನ ಎಂದು ಹೇಳಿದ್ದಾರೆ.

    ಏನು ಇರುತ್ತೆ?
    ವಾಕಿಂಗ್ ಸ್ಥಳದಲ್ಲಿ ಎಲ್‍ಇಡಿ ಬಲ್ಪ್, ಆಡಿಯೋ ಸ್ಪೀಕರ್ ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲದೇ ವಿದ್ಯುತ್ ಕಂಬದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಜೊತೆಗೆ ಕುಳಿತುಕೊಳ್ಳಲು ಮತ್ತಷ್ಟು ಹೆಚ್ಚಿನ ಆಸನಗಳನ್ನು ಹಾಕಲಾಗುತ್ತದೆ. ಇಷ್ಟೇ ಅಲ್ಲದೇ ಪಾರ್ಕ್ ಬರುವ ಜನರಿಗೆ ಮನರಂಜನೆ ನೀಡಲು ಶಾಸ್ತ್ರೀಯ ಸಂಗಿತದ ಆಡಿಯೋವನ್ನು ಹಾಕಲು ಚಿಂತನೆ ನಡೆದಿದೆ.

    ಈ ಬಗ್ಗೆ ಶನಿವಾರ ಹಿರಿಯ ತೋಟಗಾರಿಕ ಅಧಿಕಾರಿ ಜಗದೀಶ್ ಮತ್ತು ಜಂಟಿ ನಿರ್ದೇಶಕರು ಪ್ರಗತಿ ಕಾರ್ಯ ಪರಿಶೀಲಿಸಿದರು. ಪಾರ್ಕ್ ಅನ್ನು ಯೂರೋಪಿಯನ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 2.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು, ಪಾರ್ಕಿಂಗ್ ವ್ಯವಸ್ಥೆ ಕೂಡ ಅಭಿವೃದ್ಧಿ ಪಡಿಸಲಾಗುವುದು. ಪಾರ್ಕ್‍ನ ಸುರಕ್ಷತೆ ದೃಷ್ಟಿಯಿಂದ ಸುತ್ತಲಿನ ಗೋಡೆಯನ್ನು 3-4 ಅಡಿ ಎತ್ತರಕ್ಕೆ ಏರಿಸಲಾಗುತ್ತದೆ. ಪಾರ್ಕ್‍ನಲ್ಲಿ ಪಾಮ್ ಹಾಗೂ ಅಶೋಕ ಮರಗಳ ನಾಟಿ ಮಾಡಿ ಪಾರ್ಕ್‍ನ ಸೌಂದರ್ಯವನ್ನು ಹೆಚ್ಚಿಸಲಾಗುತ್ತಿದೆ. ಒಂದು ವರ್ಷದ ಒಳಗಡೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.