Tag: ತೊಂದರೆ

  • ಗಾಳಿ, ಗುಡುಗು ಸಹಿತ ಧಾರಾಕಾರ ಮಳೆ – ಮತದಾನಕ್ಕೆ ಅಡ್ಡಿ

    ಗಾಳಿ, ಗುಡುಗು ಸಹಿತ ಧಾರಾಕಾರ ಮಳೆ – ಮತದಾನಕ್ಕೆ ಅಡ್ಡಿ

    -ಭಾರೀ ಪ್ರಮಾಣದ ಆಲಿಕಲ್ಲು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಯಿಂದಾಗಿ ಮತದಾನಕ್ಕೆ ಅಡ್ಡಿಯಾಗಿದೆ.

    ಮುಂಡಗೋಡಿನಲ್ಲಿ ಅರ್ಧ ಗಂಟೆಗಳಿಂದ ಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮತ ಚಲಾಯಿಸಲು ಬಂದ ಮತದಾರರಿಗೆ ತೊಂದರೆಯಾಗುತ್ತಿದೆ. ಒಂದು ವೇಳೆ ಮಳೆ ಹೀಗೆ ಮುಂದುವರಿದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾವಾರು ಮತದಾನ ಕಡಿಮೆಯಾಗುವ ಸಾಧ್ಯತೆ ಇದೆ.

    ಇತ್ತ ಶಿರಸಿಯಲ್ಲೂ ಗುಡುಗು ಸಹಿತ ಭಾರೀ ಮಳೆ ಪ್ರಾರಂಭವಾಗಿದ್ದು, ಮಳೆಯ ಅಬ್ಬರಕ್ಕೆ ಐದಕ್ಕೂ ಹೆಚ್ಚು ಮರಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅಬ್ಬರಕ್ಕೆ ಮತದಾರರು ಮತಗಟ್ಟೆಗೆ ಬರುತ್ತಿಲ್ಲ. ಮಳೆಯಿಂದ ಮತದಾನ ಇಳಿಮುಖವಾಗಿದೆ. ಒಂದು ಕಡೆ ಮಳೆಯಾದರೆ, ಮತ್ತೊಂಡೆ ಮಳೆಯ ಅಬ್ಬರಕ್ಕೆ ಶಿರಸಿ ನಗರದಲ್ಲಿ ಪವರ್ ಕಟ್ ಆಗಿದೆ. ಮತಗಟ್ಟೆಯ ಕೊಠಡಿಗಳಲ್ಲಿ ಕತ್ತಲು ಆವರಿಸಿದೆ. ಇದರಿಂದ ಮತದಾರರು ಮತದಾನಕ್ಕೆ ಬರದೇ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಬಳಿಕ ಇಳಿಮುಖವಾಗಿದೆ.

    ಹಳೇ ಭದ್ರವತಿ ಮತ್ತು ಹೊಸಮನೆ ಭಾಗದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಗುಡುಗು-ಸಿಡಿಲು ಮತದಾರರನ್ನು ಹೆದರಿಸಿದೆ. ಪರಿಣಾಮ ಮತಕೇಂದ್ರಗಳು ಖಾಲಿ ಖಾಲಿಯಾಗಿವೆ. ಸುಮಾರು ಅರ್ಧ ಗಂಟೆಯಿಂದ ಮಳೆ ಸುರಿಯುತ್ತಿದೆ. ಇದಲ್ಲದೇ ಮಳೆಯಿಂದಾಗಿ ಮತಗಟ್ಟೆಗಳು ಅಸ್ತವ್ಯಸ್ತವಾಗಿದ್ದು, ಎಲ್ಲೆಡೆ ನೀರು ತುಂಬಿ ಹರಿಯುತ್ತಿದೆ.

    ಇನ್ನೂ ಕಾಫಿನಾಡು ಮಲೆನಾಡು ಭಾಗದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆಯ ಕಳಸ, ಎನ್.ಆರ್.ಪುರದ ಬಾಳೆಹೊನ್ನೂರು ಸುತ್ತಮುತ್ತ ಗುಡುಗು-ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ರಣಬಿಸಿಲಿಗೆ ಬೇಸತ್ತಿದ್ದ ಮಲೆನಾಡಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ರೈತರು, ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಸ್ಮಾರ್ಟ್ ಫೋನ್‍ಗಳಲ್ಲಿ ಈ 10 ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

    ಸ್ಮಾರ್ಟ್ ಫೋನ್‍ಗಳಲ್ಲಿ ಈ 10 ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

    ಸ್ಮಾರ್ಟ್ ಫೋನ್ ಇಂದು ನಮ್ಮ ಜೀವನದ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಬಹಳಷ್ಟು ಜನ ಪ್ರತಿ ದಿನ ಸಾಕಷ್ಟು ಗಂಟೆ ಫೋನಿನಲ್ಲೇ ಕಾಲ ಕಳೆಯುತ್ತಾರೆ. ಅತಿಯಾದರೆ ಅಮೃತವೂ ವಿಷ ಆಗುತ್ತೆ ಎನ್ನುವುಂತೆ ಸ್ಮಾರ್ಟ್ ಫೋನ್ ಬಳಕೆಯೂ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಸ್ಮಾರ್ಟ್ ಫೋನಲ್ಲಿ ಮಾಡಲೇ ಬಾರದ 10 ಪ್ರಮುಖ ವಿಚಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    1. ಗಂಟೆಗಟ್ಟಲೇ ಫೋನ್ ಚಾರ್ಜಿಂಗ್:
    ಸ್ಮಾರ್ಟ್ ಫೋನ್‍ಗಳನ್ನು ಗಂಟೆ ಗಟ್ಟಲೇ ಚಾರ್ಜ್ ಮಾಡುವುದನ್ನು ಮಾಡಬಾರದು. ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಆದ ಬಳಿಕ ಕೂಡಲೇ ಚಾರ್ಜರ್ ಅನ್ನು ಅನ್‍ಪ್ಲಗ್ ಮಾಡಬೇಕು. ಚಾರ್ಜ್ ಆದ ನಂತರವೂ ಚಾರ್ಜ್ ಮಾಡುತ್ತಲೇ ಇದ್ದರೆ ಬ್ಯಾಟರಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

    2. ಶರ್ಟ್ ಜೇಬಲ್ಲಿ ಇಡಬೇಡಿ:
    ಸ್ಮಾರ್ಟ್ ಫೋನ್‍ಗಳಿದ್ದ ಹೊರಸೂಸುವ ತರಂಗಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ವೈದ್ಯರು ಸ್ಪಷ್ಟಪಡಿಸಿದ್ದು, ಅದರಲ್ಲಿ ಎದೆಯ ಹತ್ತಿರ ಬಳಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು. ಒಂದು ವೇಳೆ ಪದೇ ಪದೇ ಶರ್ಟ್ ಪ್ಯಾಕೇಟ್‍ನಲ್ಲಿ ಇಟ್ಟುಕೊಳ್ಳುವುದರಿಂದ ಹೃದಯಸ್ತಂಭನವಾಗುವ ಸಾಧ್ಯತೆಯಿದೆ ಎಂಬುದು ವರದಿಗಳಲ್ಲಿ ಸಾಬೀತಾಗಿದೆ. ಹೀಗಾಗಿ ಮೊಬೈಲ್‍ಗಳನ್ನು ಶರ್ಟ್ ಪಾಕೇಟ್‍ಗಳಲ್ಲಿ ಇರಿಸಿಕೊಳ್ಳಬಾರದು.

    3. ಚಾರ್ಜಿಂಗ್ ವೇಳೆ ಹೆಡ್‍ಫೋನ್ ಬಳಕೆ ಬೇಡ:
    ಫೋನನ್ನು ಚಾರ್ಜಿಂಗ್ ಹಾಕಿದ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೆಡ್‍ಫೋನ್‍ಗಳನ್ನು ಬಳಕೆ ಮಾಡಬಾರದು. ಚಾರ್ಜಿಂಗ್ ಆಗುತ್ತಿರುವ ವೇಳೆ ಮೊಬೈಲ್ ತರಂಗಳು ಹಾಗೂ ವಿದ್ಯುತ್ತಿನ ವ್ಯತ್ಯಾಸದಿಂದ ಉಂಟಾಗುವ ಕಂಪನದಿಂದ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಹಿಂದೆ ಭಾರತದಲ್ಲಿ ಚಾರ್ಜಿಂಗ್ ವೇಳೆ ಹೆಡ್‍ಫೋನ್ ಹಾಕಿದ್ದಾಗ ಫೋನ್ ಸ್ಟೋಟಗೊಂಡ ಪ್ರಕರಣಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

    4. ಮಲಗುವಾಗ ಫೋನ್ ಬೇಡ:
    ಸ್ಮಾರ್ಟ್ ಫೋನ್‍ಗಳನ್ನು ಹತ್ತಿರದಲ್ಲಿಟ್ಟುಕೊಂಡು ಮಲಗಲೇಬಾರದು. ಅಲ್ಲದೇ ತಲೆದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಳ್ಳಬಾರದು. ಮೊಬೈಲ್ ನೆಟ್‍ವರ್ಕ್‍ನ ತರಂಗಗಳು ತಮ್ಮ ಮೆದುಳಿನ ಮೇಲೆ ಪ್ರಭಾವ ಬೀರಿ, ನಮ್ಮ ನೆಮ್ಮದಿಯ ನಿದ್ದೆಗೆ ಭಂಗವನ್ನು ತರುತ್ತವೆ.

    5. ಸೂರ್ಯನಿಗೆ ಮುಖಮಾಡಿ ಚಾರ್ಜ್ ಮಾಡಬೇಡಿ:
    ಸ್ಮಾರ್ಟ್ ಫೋನ್‍ಗಳನ್ನು ಚಾರ್ಜಿಂಗ್ ಹಾಕುವಾಗ ಅದನ್ನು ನೆರಳು ಅಥವಾ ಸೂರ್ಯನ ಕಿರಣಗಳು ತಾಗದೇ ಇರುವಂತಹ ಸ್ಥಳದಲ್ಲಿ ಹಾಕಿರಿ. ಕಿಟಕಿಯ ಹತ್ತಿರ ಚಾರ್ಜಿಂಗ್ ಹಾಕುವುದು ಅಥವಾ ಸೂರ್ಯನ ಕಿರಣಗಳು ನೇರವಾಗಿ ಫೋನ್‍ಗೆ ಬೀಳುವ ಕಡೆ ಇಟ್ಟರೆ, ಸ್ಮಾರ್ಟ್‍ಫೋನ್‍ಗಳು ಹೆಚ್ಚೆಚ್ಚು ಬಿಸಿಯಾಗುವ ಸಂಭವವಿರುತ್ತದೆ. ಸುಮಾರು 45 ಡಿಗ್ರಿವರೆಗೂ ತಮ್ಮ ಶಾಖವನ್ನು ಸ್ಮಾರ್ಟ್ ಫೋನ್‍ಗಳು ಹೆಚ್ಚಿಸಿಕೊಳ್ಳುತ್ತವೆ.

    6. ಕಳಪೆ ಗುಣಮಟ್ಟದ ಚಾರ್ಜರ್ ಗಳನ್ನು ಬಳಸಬೇಡಿ:
    ಕಂಪೆನಿ ಫೋನಿನೊಂದಿಗೆ ನೀಡಿದ ಚಾರ್ಜರ್ ಅನ್ನು ಮಾತ್ರ ಬಳಸಿ. ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಕಳಪೆ ಗುಣಮಟ್ಟದ ಚಾರ್ಜರ್ ಬಳಸಲು ಹೋಗಬೇಡಿ. ಕಡಿಮೆ ಗುಣಮಟ್ಟ ಪವರ್ ಬ್ಯಾಂಕ್ ಖರೀದಿಸಬೇಡಿ. ಕಳಪೆ ಗುಣಮಟ್ಟದ ಚಾರ್ಜರ್ ಬಳಸಿ ಪ್ರತಿಷ್ಠಿತ ಕಂಪೆನಿಗಳ ಫೋನ್ ಗಳ ಸ್ಫೋಟಗೊಂಡಿರುವ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುವುದನ್ನು ನೀವು ಗಮನಿಸಿರಬಹುದು.

    7. ಚಾರ್ಜಿಂಗ್ ವೇಳೆ ಸ್ಮಾರ್ಟ್‍ಫೋನ್ ರಕ್ಷಣಾ ಕವಚ(ಕೇಸ್)ಗಳನ್ನು ತೆಗೆಯಿರಿ:
    ಸಾಧ್ಯವಾದರೆ ಮೊಬೈಲ್ ಚಾರ್ಜ್ ಮಾಡುವ ವೇಳೆ ಮೊಬೈಲ್ ಕೇಸ್‍ಗಳನ್ನು ತೆಗೆದು ಚಾರ್ಜ್ ಮಾಡಬೇಕು. ಇದರಿಂದ ಮೊಬೈಲ್ ಹೀಟ್ ಆಗುವ ಪ್ರಕ್ರಿಯೆ ಕಡಿಮೆಯಾಗಯತ್ತದೆ. ಹೀಗೆ ಮಾಡಿದರೆ ಮೊಬೈಲ್‍ಗೆ ವಾತಾವರಣದಲ್ಲಿನ ಗಾಳಿಯು ನೇರವಾಗಿ ಸೇರುವುದರಿಂದ ಮೊಬೈಲ್ ಹೀಟ್ ಆಗುವ ಪ್ರಮೇಯ ಇರುವುದಿಲ್ಲ.

    8.ಥರ್ಡ್ ಪಾರ್ಟಿ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಡಿ:
    ಆ್ಯಪ್ ಸ್ಟೋರ್ ಗಳನ್ನು ಹೊರತು ಪಡಿಸಿ ಇತರೆ ಯಾವುದೇ ಮೂಲಗಳಿಂದ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಡಿ. ವಿಶೇಷವಾಗಿ ಗೂಗಲ್ ಕಂಪೆನಿ ತನ್ನ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಸೇರ್ಪಡೆಯಾಗಲು ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿದೆ. ಈ ಮಾನದಂಡಗಳನ್ನು ಉಲ್ಲಂಘಿಸಿದ ಆ್ಯಪ್ ಗಳು ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವುದಿಲ್ಲ. ಆದರೆ ವೆಬ್ ಸೈಟ್ ಮೂಲಕ ಡೌನ್‍ಲೋಡ್ ಮಾಡಬಹುದು. ಈ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿದರೆ ಫೋನಿನಲ್ಲಿ ಡೇಟಾ ನಮಗೆ ಗೊತ್ತಿಲ್ಲದಂತೆ ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ.

    9. ನೀರಿಗೆ ಬಿದ್ದ ಕೂಡಲೇ ಹೆಡ್‍ಫೋನ್ ತೆಗೆಯಬೇಡಿ:
    ಒಂದು ವೇಳೆ ಚಾರ್ಜಿಂಗ್ ಹಾಕಿದಾಗ ಅಥವಾ ಹೆಡ್‍ಫೋನ್ ಸಹಿತ ಮೊಬೈಲ್ ನೀರಿನಲ್ಲಿ ಬಿದ್ದರೆ, ತಕ್ಷಣವೇ ಮೊಬೈಲನ್ನು ನೀರಿನಿಂದ ತೆಗಿಯಿರಿ. ಹೆಡ್‍ಫೋನ್ ಹಾಗೂ ಚಾರ್ಜರ್ ಕೇಬಲ್ ಅನ್ನು ನೀರಿನಲ್ಲೇ ತೆಗೆಯಬೇಡಿ. ನೀರಿನಲ್ಲಿ ಕೇಬಲ್ ತೆಗೆದರೆ ನೀರು ಮೊಬೈಲ್ ಒಳ ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈಗ ದುಬಾರಿ ಬೆಲೆಯ ಫೋನ್ ಗಳಿಗೆ ಜಲ ನಿರೋಧಕ ವಿಶೇಷತೆ ನೀಡಿದರೂ ಬಜೆಟ್ ಫೋನ್‍ಗಳ ಬಳಕೆ ವೇಳೆ ಎಚ್ಚರದಲ್ಲಿರಬೇಕಾಗುತ್ತದೆ.

    10. ಫೋನ್‍ಗಳನ್ನು ಅನ್‍ಲಾಕ್‍ನಲ್ಲಿಡಬೇಡಿ:
    ಸ್ಮಾರ್ಟ್ ಫೋನ್‍ಗಳಲ್ಲಿ ಎಲ್ಲಾ ವೈಯಕ್ತಿಕ ವಿಷಯಗಳನ್ನು ಸಂಗ್ರಹಿಸಿರುತ್ತೇವೆ. ಹೀಗಾಗಿ ಯಾವುದೇ ಕಾರಣಕ್ಕೂ ಫೋನ್‍ಗಳನ್ನು ಅನ್‍ಲಾಕ್ ಮಾಡಿ ಬಿಡಬೇಡಿ. ಕಡ್ಡಾಯವಾಗಿ ನಿಮಗೆ ಬೇಕಾದ ರೀತಿಯಲ್ಲಿ ಲಾಕಿಂಗ್ ವ್ಯವಸ್ಥೆ ಮಾಡಿಕೊಳ್ಳಿ. ಇದರ ಜೊತೆ ಫಿಂಗರ್ ಪ್ರಿಂಟ್ ಸೆನ್ಸರ್ ಹಾಗೂ ಫೇಸ್ ಲಾಕ್ ಗಳನ್ನು ಬಳಸಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇವಿಎಂ ಕೆಟ್ಟರೂ ಅವಧಿ ವಿಸ್ತರಿಸದ ಉಡುಪಿ ಜಿಲ್ಲಾಡಳಿತ: ಮತದಾರರ ಹಿಡಿಶಾಪ

    ಇವಿಎಂ ಕೆಟ್ಟರೂ ಅವಧಿ ವಿಸ್ತರಿಸದ ಉಡುಪಿ ಜಿಲ್ಲಾಡಳಿತ: ಮತದಾರರ ಹಿಡಿಶಾಪ

    ಉಡುಪಿ: ನಗರದ ಎರಡು ಕಡೆ ಮತಯಂತ್ರ ಕೈಕೊಟ್ಟಿದ್ದರೂ, ಮತದಾನದ ಅವಧಿಯನ್ನು ವಿಸ್ತರಿಸದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊಡವೂರಿನ ಎರಡು ಮತಯಂತ್ರಗಳು ಕೈಕೊಟ್ಟ ಪರಿಣಾಮ, ಎರಡು ಗಂಟೆ ಮತದಾನ ಸ್ಥಗಿತವಾಗಿತ್ತು. ಆದರೆ ಜಿಲ್ಲಾಡಳಿತ 2 ಗಂಟೆಗಳ ಅವಧಿಯನ್ನು ವಿಸ್ತರಣೆ ಮಾಡದೇ, 5 ಗಂಟೆಗೆ ಮತದಾನ ಮುಕ್ತಾಯವಾಗುತ್ತದೆ ಎಂದು ತಿಳಿಸಿದೆ.

    ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನಗೊಂಡ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಕೊಡವೂರಿನ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಮತಯಂತ್ರದ ದೋಷದಿಂದ ಎರಡು ಗಂಟೆ ಮತದಾನ ವಿಳಂಬವಾಗಿದೆ. ಹೀಗಾಗಿ ಹೆಚ್ಚುವರಿ 2 ಗಂಟೆಗಳ ಮತದಾನಕ್ಕೆ ಜಿಲ್ಲಾಡಳಿತ ಅವಕಾಶಮಾಡಿಕೊಡಬೇಕು. ಒಂದೊಂದು ಮತವೂ ಅಮೂಲ್ಯವಾಗಿದೆ ಎಂದು ಹೇಳಿದರು.

    ಕಳೆದ ಬಾರಿಯೂ ಮತಗಟ್ಟೆಯಲ್ಲಿ ಮತಯಂತ್ರ ಕೆಟ್ಟಿತ್ತು. ಅಧಿಕಾರಿಗಳಿಗೆ ಚುನಾವಣೆ ಬಗ್ಗೆ ಗಂಭೀರತೆ ಇಲ್ಲ. ನಮ್ಮೂರಿನಿಂದ ಮದುವೆಗೆ ಹೊರಟ 60 ಜನ ವೋಟ್ ಹಾಕಲು ಬಂದಿದ್ದರು. ಮತಯಂತ್ರ ಕೆಟ್ಟಿದ್ದಕ್ಕೆ ಅವರು ವಾಪಾಸ್ಸು ಹೋದರು ಮತ್ತೆ ಅವರು ಬರುವುದಿಲ್ಲವೆಂದು ಬಿಜೆಪಿ ಅಭ್ಯರ್ಥಿ ವಿಜಯ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಎರಡು ಕಡೆ ಮತಯಂತ್ರ ದೋಷ ಕಂಡುಬಂದಿದೆ. ಈಗಾಗಲೇ ನಮ್ಮ ಸಿಬ್ಬಂದಿ ದೋಷ ಸರಿಪಡಿಸಿದ್ದಾರೆ. ಅಲ್ಲದೇ ಬೇರೆ ಮತಯಂತ್ರವನ್ನು ಹಾಕಿದ್ದಾರೆ. ಎರಡು ಮತಗಟ್ಟೆಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಮತದಾರರು 5 ಗಂಟೆಯ ಒಳಗೆ ಟೋಕನ್ ಪಡೆದುಕೊಳ್ಳಬೇಕು. ಟೋಕನ್ ಪಡೆದುಕೊಂಡ ಮತದಾರರಿಗೆ ಮತದಾನಕ್ಕೆ ಅವಕಾಶಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಮತದಾನದ ಅವಧಿಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಮತದಾನ ಮಾಡುವುದು ಎಲ್ಲರ ಹಕ್ಕು ಮತ್ತು ಕರ್ತವ್ಯ. ಮತಯಂತ್ರ ದೋಷದಿಂದಾಗಿ ಉಂಟಾದ ಸಮಸ್ಯೆಗೆ ಮತದಾರರು ಸಹಕರಿಸಬೇಕೆಂದು ವಿನಂತಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv