Tag: ತೈಲ

  • ಹಡಗಿನ ಟ್ಯಾಂಕರ್ ಒಡೆದು, ಸಮುದ್ರ ಸೇರಿದ ತೈಲ

    ಹಡಗಿನ ಟ್ಯಾಂಕರ್ ಒಡೆದು, ಸಮುದ್ರ ಸೇರಿದ ತೈಲ

    ಮಂಗಳೂರು: ನಗರದ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‍ಎಂಪಿಟಿ) ಬಂದರಿನಲ್ಲಿ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ ಸುಮಾರು 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರಕ್ಕೆ ಸೇರಿದೆ.

    ಶ್ರೀಲಂಕಾದ ಕೊಲಂಬೋದಿಂದ ಬಂದಿದ್ದ ಎಂ.ವಿ. ಎಕ್ಸ್‌ಪ್ರೆಸ್‌ ಬ್ರಹ್ಮಪುತ್ರ ಹಡಗಿನ ಟ್ಯಾಂಕರ್ ಒಡೆದ ಪರಿಣಾಮ, 150 ಲೀಟರಿಗೂ ಅಧಿಕ ಪ್ರಮಾಣದ ತೈಲ ಸಮುದ್ರ ಸೇರಿದೆ. ನಗರದ ಎನ್‍ಎಂಪಿಟಿ ಬಂದರಿನಿಂದ ಕಂಟೈನರ್ ಲೋಡ್ ಮಾಡಿ ಹಿಂದಿರುಗುವ ವೇಳೆ ಈ ಅವಘಡ ನಡೆದಿದೆ.

    ಮಾಹಿತಿಗಳ ಪ್ರಕಾರ ಹಡಗನ್ನು ಟಗ್‍ನಲ್ಲಿ ಬಂದರಿನ ಜೆಟ್ಟಿಯಿಂದ ಹೊರಕ್ಕೆ ಒಯ್ಯಲಾಗುತ್ತಿತ್ತು. ಈ ವೇಳೆ ಜೆಟ್ಟಿಯ ಗೋಡೆ ಹಡಗಿನಲ್ಲಿದ್ದ ಟ್ಯಾಂಕರ್ ಗೆ ಬಡಿದ ಪರಿಣಾಮ, ಟ್ಯಾಂಕರ್ ನಿಂದ ತೈಲ ಸೋರಿಕೆಯಾಗಿದೆ. ಕೂಡಲೇ ಎಚ್ಚೆತ್ತ ಹಡಗಿನ ಸಿಬ್ಬಂದಿ ಹಾಗೂ ಸ್ಥಳೀಯರು ಸೋರಿಕೆಯನ್ನು ತಡೆದು, ಸಮುದ್ರದಲ್ಲಿ ತೈಲ ಹರಡದಂತೆ ಕ್ರಮ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇರಾಕ್‍ನಿಂದ ತೈಲ ಖರೀದಿಗೆ ನಿರ್ಬಂಧ- ಭಾರತಕ್ಕೆ ಅಮೆರಿಕದಿಂದ ಗುಡ್‍ನ್ಯೂಸ್

    ಇರಾಕ್‍ನಿಂದ ತೈಲ ಖರೀದಿಗೆ ನಿರ್ಬಂಧ- ಭಾರತಕ್ಕೆ ಅಮೆರಿಕದಿಂದ ಗುಡ್‍ನ್ಯೂಸ್

    ನವದೆಹಲಿ: ನಿರ್ಬಂಧದ ಬಳಿಕವೂ ಭಾರತ ಸೇರಿದಂತೆ ಒಟ್ಟು 8 ರಾಷ್ಟ್ರಗಳು ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಒಪ್ಪಿಗೆ ನೀಡಿದೆ.

    ಇರಾನ್ ಮೇಲೆ ನಿರ್ಬಂಧ ಜಾರಿಯಾದ ಬಳಿಕವೂ ಭಾರತ ಸೇರಿದಂತೆ ಜಪಾನ್, ಚೀನಾ ಹಾಗೂ ದಕ್ಷಿಣ ಕೊರಿಯಾ ಒಳಗೊಂಡ 8 ರಾಷ್ಟ್ರಗಳಿಗೆ ಇರಾನ್ ನೊಂದಿಗೆ ತೈಲ ಖರೀದಿಗೆ ಅನುವು ಮಾಡಿಕೊಡಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನವೆಂಬರ್ 4ರಿಂದ ಅಮೆರಿಕ ವಿಧಿಸಿರುವ ನಿರ್ಬಂಧಗಳು ಜಾರಿಗೆ ಬರಲಿದ್ದು, ನಿರ್ಬಂಧದ ನಂತರವೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಭಾರತ ಸೇರಿದಂತೆ ಎಂಟು ರಾಷ್ಟ್ರಗಳು ಅಮೆರಿಕಕ್ಕೆ ಒತ್ತಾಯಿಸಿತ್ತು.

    ಅಮೆರಿಕ ನಿರ್ಬಂಧ ಏಕೆ?
    2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಈಗ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು. ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ. ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೇ ತನ್ನ ಮಿತ್ರ ರಾಷ್ಟ್ರಗಳು ಸಹ ಇರಾನ್ ನೊಂದಿಗೆ ಖರೀದಿಯನ್ನು ಸ್ಥಗಿತಗೊಳಿಸಲಿವೆ ಎನ್ನುವ ನಿರೀಕ್ಷೆಹೊಂದಿದ್ದೇವೆ. ಇರಾನ್ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮುಂದುವರಿಸುವ ಯಾವುದೇ ದೇಶದೊಂದಿಗೆ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಿತ್ತು.

    ಇರಾನ್ ಜೊತೆ ತೈಲ ಖರೀದಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ಅಮೆರಿಕದ ಇರಾನ್ ನಿರ್ಬಂಧ ವಿಶ್ವದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಷ್ಟು ಪ್ರಮಾಣದ ತೈಲವನ್ನು ಇರಾನ್ ಹೊರತು ಪಡಿಸಿ, ಎಲ್ಲಿಂದ ಸಂಗ್ರಹಿಸುವುದು ಎನ್ನುವುದರ ಬಗ್ಗೆ ವಿವಿಧ ದೇಶಗಳು ಆತಂಕವನ್ನು ವ್ಯಕ್ತಪಡಿಸಿದ್ದವು.

    ಈಗ ತೈಲ ದರ ಕಡಿಮೆಯಾಗುತ್ತಿದ್ದರೂ, ಕೆಲ ದಿನಗಳ ಹಿಂದೆ ಭಾರೀ ಏರಿಕೆಯಾಗಿತ್ತು. ತೈಲ ಖರೀದಿಗೆ ನಿರ್ಬಂಧ ಹೇರಿದ ಸುದ್ದಿಯಿಂದಾಗಿ ಷೇರು ಮಾರುಕಟ್ಟೆಗೂ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೇ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತಿತ್ತು. ಈಗ ಈ ನಿರ್ಬಂಧದಿಂದ ಭಾರತವನ್ನು ಹೊರಗೆ ಇಟ್ಟ ಹಿನ್ನೆಲೆಯಲ್ಲಿ ತೈಲ ದರ ಏರಿಕೆಯ ಭೀತಿಯಿಂದ ಭಾರತೀಯರು ಪಾರಾಗಿದ್ದಾರೆ.

    ಎಲ್ಲ ದೇಶಗಳನ್ನು ತನ್ನ ಹಿಡಿತದಲ್ಲಿಡಲು ಅಮೆರಿಕ ಮುಂದಾಗುತ್ತಿದ್ದು, ಈ ಹಿಂದೆ ಭಾರತ ರಷ್ಯಾ ಜೊತೆಗಿನ ಎಸ್-400 ಟ್ರಯಂಫ್ ಖರೀದಿ ಸಮಯದಲ್ಲೂ ಹಸ್ತಕ್ಷೇಪ ನಡೆಸಿತ್ತು. ರಷ್ಯಾ, ಇರಾನ್ ಆರ್ಥಿಕ ವ್ಯವಹಾರ ನಡೆಸುವ ಕುರಿತು ದಿಗ್ಬಂಧನ ವಿಧಿಸಿರುವ ಅಮೆರಿಕ ವಿಶ್ವದ ಇತರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಇದನ್ನು ಮೀರಿ ಇತರ ದೇಶಗಳು ಈ ರಾಷ್ಟ್ರಗಳೊಂದಿಗೆ ಹೆಚ್ಚಿನ ಆರ್ಥಿಕ ಒಪ್ಪಂದ ಮಾಡಿಕೊಂಡರೆ ಆ ದೇಶಗಳ ಮೇಲೂ ದಿಗ್ಬಂಧನ ವಿಧಿಸುವ ಅವಕಾಶವನ್ನು `ಕಾಟ್ಸಾ’ ಒಪ್ಪಂದ ಮೂಲಕ ಅಮೆರಿಕ ಹೊಂದಿದೆ. ಭಾರತ ಅಮೆರಿಕದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಖರೀದಿಸುತ್ತಿರುವ ಕಾರಣ ಭಾರತದ ಮೇಲೆ ನಿರ್ಬಂಧ ಹೇರಲಿಕ್ಕಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

    ಏನಿದು ಕಾಟ್ಸಾ?
    ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.

    ವಿಶ್ವಸಂಸ್ಥೆಯ ಕಾಯ್ದೆಯಲ್ಲ:
    ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.

    ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗೋ ನಗರಗಳು

    ಭಾರತದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗೋ ನಗರಗಳು

    ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು ಹಲವು ರಾಜ್ಯಗಳು ವ್ಯಾಟ್ ತೆರಿಗೆಯನ್ನು ಇಳಿಸಿದ್ದರೂ ಪೆಟ್ರೋಲ್ ಬೆಲೆ 80 ರ ಗಡಿ ದಾಟಿದೆ. ಆದರೂ ದೇಶದ ಕೆಲವು ಕಡೆ ಪೆಟ್ರೋಲ್, ಡೀಸೆಲ್ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.

    ಪೆಟ್ರೋಲ್ ಬೆಲೆ ಎಲ್ಲಿ ಎಷ್ಟು?
    ದೇಶದಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪೆಟ್ರೋಲ್ ದರವಿದ್ದು ಅಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 88.67 ರೂ. ಇದೆ. ಬಿಹಾರದ ಪಾಟ್ನಾದಲ್ಲಿ 87.46 ರೂ. ಇದ್ದರೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ 87.03 ರೂ. ಇದೆ.

    ಅಂಡಮಾನ್ ನಿಕೋಬಾರ್ ರಾಜಧಾನಿ ಪೋರ್ಟ್ ಬ್ಲೇರ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 69.97 ರೂ. ಇದ್ದರೆ, ಗೋವಾದ ರಾಜಧಾನಿ ಪಣಜಿಯಲ್ಲಿ 74.97 ರೂ., ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ 79.71 ರೂ. ಇದೆ.

    ಡೀಸೆಲ್ ಬೆಲೆ ಎಲ್ಲಿ ಎಷ್ಟು?
    ತೆಲಂಗಾಣದಲ್ಲಿ ಡೀಸೆಲ್ ಮೇಲೆ 26.01% ವ್ಯಾಟ್ ತೆರಿಗೆ ಹಾಕಿದೆ. ಹೀಗಾಗಿ ದೇಶದಲ್ಲೇ ಅತಿ ಹೆಚ್ಚು ಡೀಸೆಲ್ ದರ ತೆಲಂಗಾಣದಲ್ಲಿದೆ. ಹೈದರಾಬಾದಿನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 79.73 ರೂ., ಅಮರಾವತಿಯಲ್ಲಿ 78.81 ರೂ., ತಿರುವನಂತಪುರಂನಲ್ಲಿ 78.47 ರೂ., ರಾಯ್ಪುರದಲ್ಲಿ 79.12 ರೂ., ಅಹಮದಾಬಾದ್ 78.66 ರೂ. ಇದೆ.  ಇದನ್ನೂ ಓದಿ: ಬಜೆಟ್ ನಂತ್ರ ಪೆಟ್ರೋಲ್, ಡೀಸೆಲ್ ಆದಾಯ ಭಾರೀ ಕುಸಿತ!

    ಅಂಡಮಾನ್ ನಿಕೋಬಾರ್ ರಾಜಧಾನಿ ಪೋರ್ಟ್ ಬ್ಲೇರ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 68.58 ರೂ., ಅರುಣಾಚಲ ಪ್ರದೇಶದ ರಾಜಧಾನಿ ಇಟನಗರ್ 70.44 ರೂ., ಮಿಜೋರಾಂ ರಾಜಧಾನಿ ಐಜ್ವಾಲ್ 70.53 ರೂ. ಇದೆ.

    ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಹಾಕಿದರೆ ರಾಜ್ಯ ಸರ್ಕಾರಗಳು ವ್ಯಾಟ್ ಹಾಕುತ್ತವೆ. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೆಲೆ 6% ವ್ಯಾಟ್ ಹಾಕಿದೆ. ಹೀಗಾಗಿ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಇಲ್ಲಿ ಲಭ್ಯವಿದೆ.

    ದೇಶದಲ್ಲಿರುವ ಮಹಾನಗರಗಳ ಪೈಕಿ ದೆಹಲಿಯಲ್ಲಿ ಅತಿ ಕಡಿಮೆ ಬೆಲೆ ಇದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.28 ರೂ. ಇದ್ದರೆ, ಡೀಸೆಲ್ ಬೆಲೆ 73.30 ರೂ. ಇದೆ.  ಇದನ್ನೂ ಓದಿ: ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗುತ್ತೆ: ಗಡ್ಕರಿ

  • ಆಂಧ್ರದಂತೆ ನಮ್ಮಲ್ಲೂ ಪೆಟ್ರೋಲ್, ಡೀಸೆಲ್ ಸೆಸ್ ಇಳಿಸಿ: ಸುಧಾಕರ್

    ಆಂಧ್ರದಂತೆ ನಮ್ಮಲ್ಲೂ ಪೆಟ್ರೋಲ್, ಡೀಸೆಲ್ ಸೆಸ್ ಇಳಿಸಿ: ಸುಧಾಕರ್

    ಬೆಂಗಳೂರು: ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್ ಕಡಿಮೆ ಮಾಡಿ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ ಸುಧಾಕರ್ ಸಿಎಂ ಕುಮಾರಸ್ವಾಮಿ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

    ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ದಯವಿಟ್ಟು ಅನುಸರಿಸಿ. ನಾಯ್ಡು ಅವರು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸೆಸ್ ತೆರಿಗೆಯನ್ನು 3-4% ಕಡಿತಗೊಳಿಸಿದ್ದಾರೆ. ಕರ್ನಾಟಕದಲ್ಲಿ ಪೆಟ್ರೋಲ್, ಡಿಸೇಲ್ ದರ ಭಾರತದ ಇತರ ರಾಜ್ಯಗಳಿಗಿಂತ ಅಧಿಕವಾಗಿದೆ. ಇದರಿಂದಾಗಿ ಬಡಜನರು, ರೈತರು ಹಾಗೂ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ತೈಲ ಬೆಲೆ ಏರಿಕೆ ವಿರೋಧಿಸಿ ಬಂದ್ ನಡೆಸುತ್ತಿರುವಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ರಾಜಸ್ಥಾನ ಸರ್ಕಾರ 4%ರಷ್ಟು ಇಳಿಕೆ ಮಾಡಿತ್ತು. ಅದರ ಬೆನ್ನಲ್ಲೇ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‍ಗೆ 2 ರೂ ಕಡಿಮೆ ಮಾಡಿದ್ದರು.  ಇದನ್ನು ಓದಿ: ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ?

    ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಇಳಿಕೆಯಾಗುವ ಸಾಧ್ಯತೆಯಿದೆ. ಭಾರತೀಯ ತೈಲ ಕಂಪೆನಿಗಳು ಮಾರ್ಚ್ 15ರಂದು ದರವನ್ನು ಪರಿಷ್ಕರಿಸಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 56 ಡಾಲರ್‍ನಿಂದ(3,700 ರೂ.) 54 ಡಾಲರ್‍ಗೆ (3,570 ರೂ.) ಇಳಿಕೆಯಾಗಿದ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲಗಳ ದರ ಇಳಿಕೆಯಾಗುವ ಸಾಧ್ಯತೆಯಿದೆ.

    ಪ್ರತಿ 15 ದಿನಗಳಿಗೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವನ್ನು ನೋಡಿಕೊಂಡು ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ಆದರೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆಗೆ ಮುಂದಾಗಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿತ್ತು.

    ಜನವರಿ 15ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ಇದ್ದರೆ, ಡೀಸೆಲ್ ಬೆಲೆ 63.16 ರೂ. ಇದೆ.

  • ತೈಲ ಸೋರಿಕೆಯಿಂದ ತತ್ತರಿಸಿದ ಚೆನ್ನೈ ಬೀಚ್ – ಜಲಚರಗಳ ಸಾವು, ಸಾವಿರಾರು ಜನರಿಂದ ಶುದ್ಧೀಕರಣ

    ಚೆನ್ನೈ: ಶನಿವಾರದಂದು ಚೆನ್ನೈನ ಕಾಮರಾಜರ್ ಬಂದರಿನಲ್ಲಿ ಎರಡು ಹಡಗುಗಳ ಮಧ್ಯೆ ಸಂಭವಿಸಿದ ಅಪಘಾತದಿಂದ ಸುಮಾರು 15-20 ಟನ್‍ನಷ್ಟು ತೈಲ ಸಮುದ್ರ ಸೇರಿದ್ದು, ಕಡಲತೀರದ ಸುಮಾರು 30 ಕಿಮೀ ಪ್ರದೇಶ ಹಾನಿಗೊಳಗಾಗಿದೆ.

    ಈ ಎರಡು ಹಡಗುಗಳು ಪೆಟ್ರೋಲಿಯಂ ಆಯಿಲ್ ಲೂಬ್ರಿಕೆಂಟ್ ಮತ್ತು ಎಲ್‍ಪಿಜಿಯನ್ನು ಹೊತ್ತು ಸಾಗುತ್ತಿದ್ದವು ಎಂದು ವರದಿಯಾಗಿದೆ. ಸಮುದ್ರದ ಸರಿಸುಮಾರು 30 ಕಿಲೋಮೀಟರ್ ಉದ್ದ ನೀರಿನಲ್ಲಿ ತೈಲ ತೇಲುತ್ತಿದ್ದು ಆಮೆ, ಮೀನುಗಳು ಸಾವನ್ನಪ್ಪಿವೆ. ಪರಿಸ್ಥಿತಿ ಗಂಭೀರವಾಗಿದ್ದು ಸಮುದ್ರದಲ್ಲಿರುವ ತೈಲ ಹೊರ ತೆಗೆಯಲು ಸಾವಿರಾರು ಜನ ಸಮುದ್ರಕ್ಕೆ ಇಳಿದಿದ್ದಾರೆ. ಸಮುದ್ರದ ನೀರಿನ ಮೇಲೆ ತೈಲ ತೇಲುತ್ತಿರೋದ್ರಿಂದ ನೂರಾರು ಹಡುಗುಗಳು ಕಾರ್ಯಸ್ಥಗಿತಗೊಳಿಸಿವೆ.ಯಂತ್ರಗಳಿಂದ ತೈಲವನ್ನು ಹೊರತೆಗೆಯುವುದು ವಿಫಲವಾದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಕೈಯ್ಯಿಂದಲೇ ಕೆಸರನ್ನು ಹೊರತೆಗೆಯುತ್ತಿದ್ದಾರೆ.

    ಈ ಅವಘಡದ ಬಗ್ಗೆ ಮಾತನಾಡಿರೋ ತಮಿಳುನಾಡು ಮೀನುಗಾರಿಕಾ ಇಲಾಖೆಯ ಸಚಿವ ಜಯಕುಮಾರ್, 60 ಟನ್‍ನಷ್ಟು ಕೆಸರು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಮೀನುಗಾರರು, ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1500 ಮಂದಿ ಸ್ವಯಂಸೇವಕರು ಸಮುದ್ರದಿಂದ ತೈಲವನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಶೇ. 85ರಷ್ಟು ಕೆಲಸ ಮುಗಿಗಿದೆ. ಇನ್ನುಳಿದ 20 ಟನ್ ಕೆಸರನ್ನು ಮುಂದಿನ ಎರಡು ದಿನಗಳಲ್ಲಿ ಹೊರತೆಗೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

    ತೈಲ ಸೋರಿಕೆಯ ವಿಷಯ ತಿಳಿದು ಜನರು ಮಾರುಕಟ್ಟೆಯಲ್ಲಿ ಮೀನು ಕೊಳ್ಳಲು ಹಿಂಜರಿಯುತ್ತಿದ್ದು, ವ್ಯಾಪಾರಕ್ಕೂ ದೊಡ್ಡ ಹೊಡೆತ ಬಿದ್ದಿದೆ.