Tag: ತೈಲ ಬೆಲೆ ಏರಿಕೆ

  • ತೈಲ ಬೆಲೆ ಏರಿಕೆಗೂ ಗ್ಯಾರಂಟಿ ಯೋಜನೆಗೂ ಸಂಬಂಧವಿಲ್ಲ: ಡಿಕೆಶಿ

    ತೈಲ ಬೆಲೆ ಏರಿಕೆಗೂ ಗ್ಯಾರಂಟಿ ಯೋಜನೆಗೂ ಸಂಬಂಧವಿಲ್ಲ: ಡಿಕೆಶಿ

    ಬೆಂಗಳೂರು: ತೈಲ ಬೆಲೆ ಏರಿಕೆಗೂ (Fuel Price Hike) ಗ್ಯಾರಂಟಿಗೂ ಸಂಬಂಧವಿಲ್ಲ. ಎಲ್ಲಾ ಗ್ಯಾರಂಟಿಗಳು (Guarantee Scheme) ಮುಂದುವರಿಯುತ್ತವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ.

    ಪರಿಶ್ರಮ ನೀಟ್ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಲೆ ಏರಿಕೆಗೆ ಗ್ಯಾರಂಟಿ ಕಾರಣ ಎಂದು ವಿಪಕ್ಷಗಳ ಹೇಳಿಕೆಗೆ ಯಾರು ಏನೇ ಹೇಳಿದರೂ ಬೆಲೆ ಏರಿಕೆಗೆ ಗ್ಯಾರಂಟಿ ಕಾರಣವಲ್ಲ. ಬೆಲೆ ಏರಿಕೆಯನ್ನು ಎಲ್ಲಾ ಸಂದರ್ಭದಲ್ಲಿ ಯಾವ ರೀತಿ ಮಾಡಬೇಕೋ ಆ ರೀತಿ ಮಾಡಿದ್ದೇವೆ. ಬಿಜೆಪಿ ಸರ್ಕಾರದಲ್ಲೂ ಬೆಲೆ ಏರಿಕೆ ಮಾಡಿದ್ದಾರೆ. ಆದರೆ ಅವರಂತೆ ನಾವು ಏರಿಸಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ – ತಂದೆಗೆ 25,000 ರೂ. ದಂಡ!

    ತೈಲ ಬೆಲೆ ಕಡಿಮೆ ಇದ್ದರೂ ಅವರು ಬೆಲೆ ಏರಿಕೆ ಮಾಡಿದ್ರು. ನಾವು ಅದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಂಡು ಪಕ್ಕದ ರಾಜ್ಯಗಳಿಗೆ ಬ್ಯುಸಿನೆಸ್ ಜಾಸ್ತಿ ಹೋಗುತ್ತಿತ್ತು. ಆ ದೃಷ್ಟಿಯಿಂದ ಪಕ್ಕದ ರಾಜ್ಯದಲ್ಲಿ ಬ್ಯುಸಿನೆಸ್ ಕಂಟ್ರೋಲ್ ಆಗಲಿ ಎಂದು ಮಾಡಿದ್ದೇವೆ. ಒಂದು ರಾಜ್ಯ ಬಿಟ್ಟು ಎಲ್ಲಾ ರಾಜ್ಯದಲ್ಲೂ ಜಾಸ್ತಿ ಇದೆ. ಗ್ಯಾರಂಟಿಗಳಿಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಎಲ್ಲಾ ಗ್ಯಾರಂಟಿಗಳು ಮುಂದುವರಿಯುತ್ತವೆ. ಅಭಿವೃದ್ಧಿ ಕೆಲಸಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು. ಇದನ್ನೂ ಓದಿ: ಸೂರಜ್ ರೇವಣ್ಣರ ವಿಚಾರದಲ್ಲೂ ನ್ಯಾಯಯುತ ತನಿಖೆ ಆಗಲಿ: ಆರ್ ಅಶೋಕ್

  • ಇಸ್ರೇಲ್‌-ಹಮಾಸ್ ಉಗ್ರರ ನಡುವೆ ವಾರ್‌; ತೈಲ ಬೆಲೆ ಏರಿಕೆ

    ಇಸ್ರೇಲ್‌-ಹಮಾಸ್ ಉಗ್ರರ ನಡುವೆ ವಾರ್‌; ತೈಲ ಬೆಲೆ ಏರಿಕೆ

    ಟೆಲ್‌ ಅವಿವ್‌: ಹಮಾಸ್ (Hamas) ಬಂಡುಕೋರರು ಮತ್ತು ಇಸ್ರೇಲ್‌ (Israel) ನಡುವಿನ ಮಿಲಿಟರಿ ಘರ್ಷಣೆಗಳು ಮಧ್ಯಪ್ರಾಚ್ಯದಾದ್ಯಂತ ರಾಜಕೀಯ ಅನಿಶ್ಚಿತತೆ ಸೃಷ್ಟಿಸಿದೆ. ಉತ್ಪನ್ನಗಳ ಸರಬರಾಜಿನಲ್ಲಿ ಸಮಸ್ಯೆ ಎದುರಾಗಿದ್ದು, ತೈಲ ಬೆಲೆಯಲ್ಲಿ (Oil Price) ಹೆಚ್ಚಳವಾಗಿದೆ.

    ಇಸ್ರೇಲ್ ಮತ್ತು ಗಾಜಾದಲ್ಲಿನ ಪರಿಸ್ಥಿತಿಯು ಮಧ್ಯಪ್ರಾಚ್ಯದ ಉತ್ಪಾದನೆಗಳಿಗೆ ಅಡ್ಡಿಪಡಿಸಿದೆ. ಹೀಗಾಗಿ ತೈಲ ಬೆಲೆಗಳು ಸೋಮವಾರ 4% ರಷ್ಟು ಜಿಗಿತ ಕಂಡಿದೆ. ತೈಲ ಬೆಲೆಯು ಬ್ಯಾರಲ್‌ಗೆ 249.67 ರೂ. ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಭೀಕರ ಸಂಘರ್ಷ – 1,100 ಸಾವು, ಸಂಗೀತ ಉತ್ಸವದಲ್ಲಿ 260 ಶವ ಪತ್ತೆ

    US ತೈಲದ ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI), ಒಂದು ಬ್ಯಾರೆಲ್‌ಗೆ 86 ಡಾಲರ್‌ ಅಂದರೆ 7,157 ರೂ. ಗಿಂತ ಹೆಚ್ಚಾಗಿದೆ. ಏಷ್ಯಾದ ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಕೂಡ ಏರಿತು.

    ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶಗಳು ತೈಲ ಉತ್ಪಾದಕರಲ್ಲ. ಆದರೆ ಮಧ್ಯಪ್ರಾಚ್ಯ ಪ್ರದೇಶವು ಜಾಗತಿಕ ಪೂರೈಕೆಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿದೆ. ಇರಾನ್ ಮತ್ತು ಸೌದಿ ಅರೇಬಿಯಾದಂತಹ ಹತ್ತಿರದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಿಗೆ ಯುದ್ಧದ ಪರಿಣಾಮ ತಟ್ಟಲಿದ್ದು, ತೈಲದ ಮೇಲಿನ ದರ ಹೆಚ್ಚಾಗಿದೆ. ಇದನ್ನೂ ಓದಿ: ಇಸ್ರೇಲ್ ಮೇಲೆ ದಾಳಿ – ಹಮಾಸ್ ಉಗ್ರರ ಅಟ್ಟಹಾಸಕ್ಕೆ 1 ಸಾವಿರ ಮಂದಿ ಬಲಿ

    ಗಲ್ಫ್ ಪ್ರದೇಶದಲ್ಲಿನ ಪ್ರಮುಖ ತೈಲ ರಫ್ತುದಾರರಿಗೆ ಹಾರ್ಮುಜ್ ಜಲಸಂಧಿಯು ನಿರ್ಣಾಯಕವಾಗಿದೆ. ಅವರ ಆರ್ಥಿಕತೆಯು ತೈಲ ಮತ್ತು ಅನಿಲ ಉತ್ಪಾದನೆ ಕೇಂದ್ರೀಕರಿಸಲ್ಪಟ್ಟಿದೆ. ರಷ್ಯಾ-ಉಕ್ರೇನ್‌ ಯುದ್ಧದಲ್ಲೂ ತೈಲ ಬೆಲೆ ಏರಿಕೆಯಾಗಿತ್ತು. 2022 ರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ತೈಲ ಬೆಲೆಗಳು ಗಗನಕ್ಕೇರಿತ್ತು. ಕಳೆದ ವರ್ಷ ಜೂನ್‌ನಲ್ಲಿ ಬ್ಯಾರೆಲ್‌ಗೆ 9,988 ರೂ.ಗೆ ತಲುಪಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ

    ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ

    ಕಜಕಿಸ್ತಾನ: ತೈಲ ಬೆಲೆ ಏರಿಕೆ ಖಂಡಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕಜಕಿಸ್ತಾನ ಸರ್ಕಾರದ ಕ್ಯಾಬಿನೆಟ್‌ ರಾಜೀನಾಮೆ ನೀಡಿದೆ.

    ತೈಲ ಉತ್ಪಾದನೆಯ ಮಧ್ಯ ಏಷ್ಯಾದ ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಇದನ್ನು ಖಂಡಿಸಿ ಜನರು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಹಿಂಸಾಚಾರಕ್ಕೆ ಸಿಲುಕಿದ್ದು, 100ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಅದಕ್ಕೂ ಬಗ್ಗದ ಜನತೆ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜೀನಾಮೆ ನೀಡಿದೆ. ಅಧ್ಯಕ್ಷ ಕಸ್ಸಿಮ್-ಜೊಮಾರ್ಟ್‌ ಟೊಕಾಯೆವ್‌ ಅವರು ಸರ್ಕಾರದ ರಾಜೀನಾಮೆ ಅಂಗೀಕರಿಸಿದ್ದಾರೆ. ಇದನ್ನೂ ಓದಿ: ಬಿಪಿನ್‌ ರಾವತ್‌ ಇದ್ದ ಹೆಲಿಕಾಪ್ಟರ್‌ ದುರಂತಕ್ಕೆ ಪೈಲಟ್‌ ದೋಷವೇ ಕಾರಣ

     

    ಬುಧವಾರ ಸರ್ಕಾರ ರಾಜೀನಾಮೆ ನೀಡಿದರೂ ಘರ್ಷಣೆ ನಿಂತಿಲ್ಲ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ವಿಫಲವಾಗಿದೆ. ಕ್ಷಣ ಕ್ಷಣವೂ ಪ್ರತಿಭಟನೆ ಹಿಂಸಾತ್ಮಕವಾಗಿ ಪರಿಣಮಿಸುತ್ತಿದೆ. ಬ್ಯಾಂಕ್, ಅಂಗಡಿ, ರೆಸ್ಟೋರೆಂಟ್‌ಗಳ ಮೇಲೆ ದಾಳಿಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

    ಈ ವರ್ಷದ ಆರಂಭದಲ್ಲಿ ಸರ್ಕಾರವು ಎಲ್‌ಪಿಜಿ ಮೇಲಿನ ಬೆಲೆ ಹೆಚ್ಚಳ ಮಾಡಿದ್ದರಿಂದ ಪ್ರತಿಭಟನೆ ಶುರುವಾಯಿತು. ಎಲ್‌ಪಿಜಿ ಮೇಲಿನ ಬೆಲೆ ನಿಯಂತ್ರಣವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಗ್ಯಾಸೋಲಿನ್‌, ಡೀಸೆಲ್‌ ಮತ್ತು ಇತರೆ ಗ್ರಾಹಕ ಸರಕುಗಳಿಗೆ ವಿಸ್ತರಿಸಲು ಪ್ರಾಂತೀಯ ಗವರ್ನರ್‌ಗಳಿಗೆ ಕಜಕಿಸ್ತಾನ ಅಧ್ಯಕ್ಷ ಆದೇಶಿಸಿದ್ದಾರೆ.

    ಕಜಕಿಸ್ತಾನದ ದಕ್ಷಿಣದ ನಗರಗಳಾದ ಶೈಮ್ಕೆಂಟ್‌ ಮತ್ತು ತಾರಾಜ್‌ನಲ್ಲಿ ಮಂಗಳವಾರ ರಾತ್ರಿಯಿಡೀ ಸರ್ಕಾರಿ ಕಟ್ಟಡಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಈ ಘರ್ಷಣೆಯಲ್ಲಿ 95 ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮೋದಿಗೆ ಭದ್ರತಾ ಲೋಪ – ಪಂಜಾಬ್ ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ: ಬೊಮ್ಮಾಯಿ

    2021ರಲ್ಲಿ ಎಲ್‌ಪಿಜಿ ಬೆಲೆ 1 ಲೀಟರ್‌ಗೆ 50 ಟೆಂಗೆ (ಅಂದಾಜು 8.53 ರೂಪಾಯಿ) ಇತ್ತು. ಈ ಬೆಲೆಯು ವರ್ಷದ ಕೊನೆಯಲ್ಲಿ 79-80 ಟೆಂಗೆಗೆ (ಅಂದಾಜು 13.64 ರೂಪಾಯಿ) ಏರಿಕೆಯಾಯಿತು. ನಂತರ 2022ರ ಆರಂಭದಲ್ಲಿ ಈ ಬೆಲೆ ಏಕಾಏಕಿ 120 ಟೆಂಗೆ (ಅಂದಾಜು 20.47 ರೂಪಾಯಿ)ಗೆ ಏರಿಕೆಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

  • ಕಾಂಗ್ರೆಸ್ ಸರ್ಕಾರ ಇದ್ದಾಗ ತೈಲ ಬೆಲೆ  ಏರಿಕೆ ಆಗಿಲ್ವಾ?: ಈಶ್ವರಪ್ಪ

    ಕಾಂಗ್ರೆಸ್ ಸರ್ಕಾರ ಇದ್ದಾಗ ತೈಲ ಬೆಲೆ ಏರಿಕೆ ಆಗಿಲ್ವಾ?: ಈಶ್ವರಪ್ಪ

    ಶಿವಮೊಗ್ಗ: ಪೆಟ್ರೋಲ್ ಡೀಸೆಲ್ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಅದೇ ರೀತಿ ಇಳಿಕೆ ಕೂಡ ಆಗುತ್ತದೆ. ಇದು ಕೇವಲ ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಅಲ್ಲ ಕಾಂಗ್ರೆಸ್ ಸರ್ಕಾರ ಇದ್ದಾಗಲು ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತೈಲ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿದ್ದಾರೆ.

    ತೈಲ ಬೆಲೆ ಏರಿಕೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತದೆ. ಅದೇ ರೀತಿ ಇಳಿಕೆ ಸಹ ಆಗುತ್ತದೆ. ಕೇವಲ ಬಿಜೆಪಿ ಸರ್ಕಾರ ಇದ್ದಾಗ ಮಾತ್ರ ಬೆಲೆ ಏರಿಕೆಯಾಗಿದೆಯಾ? ಕಾಂಗ್ರೆಸ್ ಸರ್ಕಾರ ಇದ್ದಾಗ ತೈಲ ಬೆಲೆ ಏರಿಕೆ ಆಗಿಲ್ಲವೇನು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ದರ ಏರಿಕೆ – 150 ರೂ. ಗಡಿ ದಾಟುತ್ತಾ ಪೆಟ್ರೋಲ್ ಬೆಲೆ?

    ಕಾಂಗ್ರೆಸ್ ಸರ್ಕಾರ ಇದ್ದಾಗಲೂ ತೈಲ ಬೆಲೆ ಏರಿಕೆ ಆಗಿತ್ತು. ಈಗಲೂ ಏರಿಕೆ ಆಗಿದೆ ಅಷ್ಟೇ. ನಾವೇನು ತೈಲ ಬೆಲೆ ಏರಿಕೆ ಆಗಿಲ್ಲ ಅಂತಾ ಹೇಳಿಲ್ಲ. ಅದನ್ನು ಗ್ರಾಹಕರಿಗೆ ಹೊರೆಯಾಗದ ರೀತಿ ಎಷ್ಟರಮಟ್ಟಿಗೆ ಕಡಿಮೆ ಮಾಡಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎಂದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

  • ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಭಾರೀ ಪ್ರತಿಭಟನೆ

    ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಭಾರೀ ಪ್ರತಿಭಟನೆ

    ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 100 ರೂ.ಗಳಿಗೆ ತಲುಪಿರುವುದಕ್ಕೆ ವಿಷಾದ ಹಾಗೂ ವಿರೋಧ ವ್ಯಕ್ತಪಡಿಸಿ ರಾಜ್ಯಾದ್ಯಂತ ಇಂದು ಆಮ್ ಆದ್ಮಿ ಪಕ್ಷದಿಂದ ಹಲವು ಕಡೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ರಾಮನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ಕಲಬುರಗಿ, ಯಾದಗಿರಿ, ಕೊಡಗು ಜಿಲ್ಲೆಗಳಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪೆಟ್ರೋಲ್ ಬಂಕ್ ಗಳ ಮುಂದೆ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.

    ಬೆಂಗಳೂರು ನಗರದಲ್ಲಿ ಸರ್ವಜ್ಞ ನಗರ, ಬೊಮ್ಮನಹಳ್ಳಿ, ಜಯನಗರ, ಸಿವಿ ರಾಮನ್ ನಗರ, ಮಹದೇವಪುರ, ಗಾಂಧಿನಗರ, ಚಿಕ್ಕಪೇಟೆ, ಜಯನಗರ, ಬಿಟಿಎಂ ಲೇಔಟ್, ಯಶವಂತಪುರ, ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ 62 ಪೆಟ್ರೋಲ್ ಬಂಕ್ ಗಳ ಮುಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಮಾಯಿಸಿ ಕೇಂದ್ರ ಸರ್ಕಾರದ ನಡೆಯನ್ನು ಘೋಷಣೆ, ಭಿತ್ತಿಪತ್ರಗಳ ಪ್ರದರ್ಶನ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಭಟಿಸಲಾಯಿತು.

    ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರೋಮಿ ಭಾಟಿ, ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ, ಮೋಹನ್ ದಾಸರಿ, ಶಾಂತಲಾ ದಾಮ್ಲೆ, ಜಗದೀಶ್ ವಿ. ಸದಂ, ನಂಜಪ್ಪ ಕಾಳೇಗೌಡ, ಬಿ ಟಿ ನಾಗಣ್ಣ, ಫಣಿರಾಜ್ ಸೇರಿದಂತೆ ಅನೇಕ ವಿಧಾನಸಭಾ ಅಧ್ಯಕ್ಷರುಗಳು ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.ಅಲ್ಲಲ್ಲಿ ಪೆಟ್ರೋಲ್ ಹಾಕಿಸಲು ಬರುತ್ತಿದ್ದ ಸಾರ್ವಜನಿಕರು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಭಾರೀ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

  • ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ: ಡಿ.ಕೆ.ಶಿವಕುಮಾರ್ ತರಾಟೆ

    ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ: ಡಿ.ಕೆ.ಶಿವಕುಮಾರ್ ತರಾಟೆ

    ಬೆಂಗಳೂರು:ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಸ್ಪತೆಯಲ್ಲಿ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನ ಕ್ಯೂ ನಿಲ್ಲುವಂತೆ ಮಾಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

    ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ಹಾಗೂ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

    ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತಿಯೊಂದು ವಿಚಾರಕ್ಕೂ ನಿಮ್ಮನ್ನೆಲ್ಲ ಕ್ಯೂ ನಿಲ್ಲಿಸಿದರಲ್ಲಾ ಅಂತಾ ಸಂಕಟವಾಗುತ್ತಿದೆ. ನೋಟು ರದ್ದು ಮಾಡಿ, ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ಕ್ಯೂ ನಿಲ್ಲಿಸಿ ಸಾಯಿಸಿದರು. ನಂತರ ಆಧಾರ್ ಜೋಡಣೆ ವಿಚಾರವಾಗಿ ಮತ್ತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ದೇಶಕ್ಕೆ ಮಹಾಮಾರಿ ಕರೆತಂದು, ಆಸ್ಪತ್ರೆ ಮುಂದೆ ಕ್ಯೂ, ಆಂಬುಲೆನ್ಸ್ ಗೂ ಕ್ಯೂ, ಔಷಧಿಗೂ ಕ್ಯೂ, ಆಕ್ಸಿಜನ್ ಗೂ ಕ್ಯೂ, ಕೊನೆಗೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು.

    ಈಗ ಆಹಾರ ಕಿಟ್ ಕೊಡಲು ನಾವು ನಿಮ್ಮನ್ನು ಕ್ಯೂ ನಿಲ್ಲಿಸಿದ್ದೇವೆ. ಇದು ಸರ್ಕಾರದ ಆಹಾರ ಕಿಟ್ ಅಲ್ಲ, ಕಾಂಗ್ರೆಸ್ ನಾಯಕರು ತಮ್ಮ ಶ್ರಮದಿಂದ ಸಂಪಾದಿಸಿದ ಸ್ವಂತ ಹಣದಲ್ಲಿ ನೀಡುತ್ತಿರುವ ಕಿಟ್. ಬೆಂಗಳೂರಿನಿಂದ ದಿಲ್ಲಿವರೆಗೆ ದೇಶದಲ್ಲಿ ನೀವು ಬದಲಾವಣೆ ತರಬೇಕು. ಇದನ್ನೂ ಓದಿ: ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಸಿಎಂ ಬಿ.ಎಸ್.ಯಡಿಯೂರಪ್ಪ

    ಚುನಾವಣೆ ಕಾರಣಕ್ಕೆ ನಾವು ಇಲ್ಲಿಗೆ ಬಂದು ಈ ಕಾರ್ಯಕ್ರಮ ಮಾಡುತ್ತಿಲ್ಲ. ದೇಶದೆಲ್ಲೆಡೆ ಜನ ಸಂಕಟದಲ್ಲಿದ್ದು, ಅವರಿಗೆ ಸಹಾಯ ಮಾಡಲು ನಾವು ಈ ಇಲ್ಲಿಗೆ ಬಂದಿದ್ದೇವೆ. ನಾವು ಮಾಡುವ ಸಹಾಯದಿಂದ ನಿಮ್ಮ ಜೀವನ ಉದ್ಧಾರವಾಗುತ್ತದೆ ಎಂದು ಹೇಳುತ್ತಿಲ್ಲ. ಆದರೆ ಕಷ್ಟದಲ್ಲಿರುವ ಜನರ ಭಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ.

    ಬಡವರು, ಮಧ್ಯಮ ವರ್ಗದವರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಚಿನ್ನ ಅಡವಿಟ್ಟು ಜೀವನ ಮಾಡಲು ಮುಂದಾಗಿದ್ದಾರೆ. ಅನೇಕರು ಉದ್ಯೋಗ ಕಳೆದುಕೊಂಡರು. ಉದ್ಯೋಗ ಕೊಡುತ್ತೇವೆ ಎಂದವರು ವಿದ್ಯಾವಂತರಿಗೆ ಪಕೋಡಾ ಮಾರಲು ಹೇಳಿದರು. ಪಕೋಡಾ ಮಾಡುವ ಅಡುಗೆ ಎಣ್ಣೆ ಬೆಲೆಯನ್ನು ರೂ.200ಕ್ಕೆ ಹೆಚ್ಚಿಸಿದ್ದಾರೆ. ಇಡೀ ದೇಶದ ಜನರನ್ನು ಬಡತನಕ್ಕೆ ನೂಕಿದ್ದಾರೆ.

    ದೇಶದಲ್ಲಿ ಪೆಟ್ರೋಲ್ ಮೂಲಬೆಲೆ 35 ರೂ., ಅದಕ್ಕೆ ತೆರಿಗೆ 65 ರೂ. ನೆರೆ ರಾಷ್ಟ್ರಗಳಲ್ಲಿ ಅರ್ಧದಷ್ಟಿದ್ದರೂ ನಮ್ಮಲ್ಲಿ ಮಾತ್ರ ಬೆಲೆ ಹೆಚ್ಚುತ್ತಲೇ ಇದೆ. ಈ ಸರ್ಕಾರ ದಿನಾ ಜನರ ಜೇಬು ಪಿಕ್ ಪಾಕೆಟ್ ಮಾಡುತ್ತಿದೆ. ಇದನ್ನೂ ಓದಿ: ಎಲ್ಲರಿಗೂ ಲಸಿಕೆ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು: ಜೋಶಿ

    ಆರ್ಥಿಕ ನೆರವು:
    ನಮ್ಮ ನಾಯಕರು ತಮ್ಮ ಸ್ವಂತ ಹಣದಲ್ಲಿ ನಿಮಗೆ ಸಹಾಯ ಮಾಡಲು ಮುಂದಾಗಿದ್ದಾರೆ. ನಮ್ಮ ನಾಯಕರೆಲ್ಲರೂ ಹಣ ಸೇರಿಸಿ ಈ ಕ್ಷೇತ್ರದ ಬಡ ಕುಟುಂಬಗಳಿಗೆ ತಲಾ 1 ಸಾವಿರ ರೂ. ನೀಡುತ್ತಿದ್ದಾರೆ. ಅವರಿಗೆ ಶಕ್ತಿ ತುಂಬಲು ನಾನಿಲ್ಲಿಗೆ ಬಂದಿದ್ದೇನೆ. ಈ ಹಣ ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸದೆ ಇರಬಹುದು. ಆದರೆ ಕಷ್ಟಕಾಲದಲ್ಲಿ ನಿಮ್ಮ ಜತೆ ನಿಲ್ಲಲು ನಮ್ಮ ನಾಯಕರು ಮುಂದೆ ಬಂದಿದ್ದಾರೆ. ಅನೇಕರಿಗೆ ಊಟಕ್ಕೆ, ಔಷಧಿಗೆ ಹಣವಿರುವುದಿಲ್ಲ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಈ ಹೆಜ್ಜೆ ಇಟ್ಟಿದ್ದಾರೆ. ಆ ಮೂಲಕ ನಿಮ್ಮ ಋಣ ತೀರಿಸುವ ಸಣ್ಣ ಪ್ರಯತ್ನ ಮಾಡುತ್ತಿದ್ದಾರೆ.

    ಕಳೆದ ಬಾರಿ ಹಾಲು ಕೇಳಿದವರಿಗೆ ಐಪಿಸಿ ಸೆಕ್ಷನ್ 307 ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿನ ಬಿಜೆಪಿ ನಾಯಕರು ಪೊಲೀಸರನ್ನು ಬಳಸಿಕೊಂಡು ಮೂರ್ನಾಲ್ಕು ಕೇಸ್ ಹಾಕಿಸಿದ್ದಾರೆ ಎಂದು ಒಬ್ಬರು ಹೆಣ್ಣು ಮಗಳು ಹೇಳುತ್ತಿದ್ದರು. ಆ ರೀತಿ ನಿಮಗೆ ಯಾರಾದರೂ ಯಾವುದೇ ತೊಂದರೆ ಕೊಟ್ಟರೆ ನಮ್ಮನ್ನು ಭೇಟಿ ಮಾಡಿ. ನಿಮ್ಮ ರಕ್ಷಣೆಗೆ ಕಾಂಗ್ರೆಸ್ ಸದಾ ನಿಲ್ಲಲಿದೆ. ಮುಂದಿನ ದಿನಗಳಲ್ಲಿ ಕಾರ್ಪೊರೇಷನ್ ಚುನಾವಣೆ ಬರುತ್ತಿದೆ, ವಿಧಾನಸಭೆ ಚುನಾವಣೆಯೂ ಬರಲಿದೆ. ನೀವು ಬಿಜೆಪಿಯವರಿಗೆ ಬುದ್ದಿ ಕಲಿಸಬೇಕು. ನಾವು ನಿಮ್ಮ ಜತೆ ಇರುತ್ತೇವೆ.

  • ಪ್ರಧಾನಿ ಮೋದಿ ಆಡಳಿತ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ: ಗುಂಡೂರಾವ್

    ಪ್ರಧಾನಿ ಮೋದಿ ಆಡಳಿತ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ: ಗುಂಡೂರಾವ್

    – ಚೌಕಿದಾರ ಅಲ್ಲ ಜನರ ಪಾಲಿನ ಕೆಟ್ಟ ಗ್ರಹಚಾರ

    ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್ ಬಳಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ದಿನೇಶ್ ಗುಂಡೂರಾವ್, ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ ಎಂದು ವ್ಯಂಗ್ಯ ಮಾಡಿದ್ದಾರೆ.

    ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಗುಂಡೂರಾವ್, ಚೇಳಿಗೆ ಯಜಮಾನಿಕೆ ನೀಡಿ ಮನೆಯವರೆಲ್ಲಾ ಕುಟುಕಿಸಿಕೊಳ್ಳುವಂತಾಗಿದೆ ಪ್ರಧಾನಿ ಮೋದಿಯವರ ಆಡಳಿತ. ಇದೊಂದು ರೀತಿ ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡಂತೆ. ಸ್ವಘೋಷಿತ ‘ಚೌಕಿದಾರ’ ಮೋದಿಯವರು ನಿಜವಾದ ‘ಚೌಕಿದಾರ’ರಲ್ಲ. ಬದಲಿಗೆ ಜನಸಾಮಾನ್ಯರ ಪಾಲಿನ ‘ಕೆಟ್ಟ ಗ್ರಹಚಾರ’ವಾಗಿದ್ದಾರೆ. ಮೋದಿಯವರ ಅಚ್ಚೇದಿನ್‍ನ ಸತ್ಯ ಜನರಿಗೆ ಈಗ ಅರಿವಾಗುತ್ತಿದೆ. ಬೆಲೆಯೇರಿಸಿ ಜನರ ಜೇಬು ಖಾಲಿ ಮಾಡುವುದೇ ಕೇಂದ್ರ ಸರ್ಕಾರದ ಒಂದಂಶದ ಕಾರ್ಯಕ್ರಮವಿದ್ದಂತೆ ಭಾಸವಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

    ಒಂದೇ ತಿಂಗಳ ಅವಧಿಯಲ್ಲಿ 4 ಬಾರಿ ಎಲ್‍ಪಿಜಿ ಬೆಲೆಯೇರಿಕೆಯಾಗಿದೆ. ಒಂದೊಂದು ರೂಪಾಯಿಗೂ ಪರಿತಪಿಸುತ್ತಿರುವ ಬಡಜನತೆ ಈ ಬೆಲೆಯೇರಿಕೆ ತಾಪ ಸಹಿಸಿಕೊಳ್ಳಲು ಹೇಗೆ ಸಾಧ್ಯ? ಈ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತಾದರೂ ಸಂವೇದನೆ ಬೇಡವೆ ಎಂದು ಪ್ರಶ್ನಿಸಿದ್ದಾರೆ.

    ಹೊಟ್ಟೆ-ಬಟ್ಟೆ ಕಟ್ಟಿ ಜೀವನ ನಡೆಸುತ್ತಿರುವ ಜನ ಈ ಸರ್ಕಾರದ ದುಡ್ಡಿನ ದುರಾಸೆಗೆ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಬೆಲೆಯೇರಿಕೆಯಿಂದ ದುಡಿದ ಹಣ ಉಳಿಸುವುದಿರಲಿ,ತಿಂಗಳ ಸಂಸಾರ ನಡೆಸುವುದೂ ಕಷ್ಟವಾಗಿದೆ. ಮಾತಲ್ಲೇ ಮಂಟಪ ಕಟ್ಟುವ ಬಣ್ಣದ ಮಾತುಗಳು ಜನರ ಹೊಟ್ಟೆ ತುಂಬಿಸುವುದಿಲ್ಲ. ಈ ಸತ್ಯವನ್ನು ಮೋದಿಯವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

    ಫೆಬ್ರವರಿಯಲ್ಲಿ 3 ಬಾರಿ ಏರಿಕೆ ಕಂಡಿದ್ದ ಅಡುಗೆ ಅನಿಲ ಸೋಮವಾರ ಕೂಡ 25 ರೂಪಾಯಿ ಏರಿಕೆ ಕಂಡಿದೆ. 14.2 ಕೆಜಿ ಸಿಲಿಂಡರ್ ಬೆಲೆ 822 ರೂಪಾಯಿ ಆಗಿದ್ದರೆ, 19 ಕೆಜಿಯ ವಾಣಿಜ್ಯ ಉದ್ದೇಶಿತ ಗ್ಯಾಸ್ ಸಿಲಿಂಡರ್ ದರ 1,666 ರೂಪಾಯಿ ಆಗಿಲ್ಲ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 7 ಪೈಸೆ ಇಳಿದಿದ್ದು ಲೀಟರ್‍ಗೆ 94.22 ರೂ ಇದೆ. ಡೀಸೆಲ್ ದರ 5 ಪೈಸೆ ಕಡಿಮೆಯೊಂದಿಗೆ 86.37 ರೂಪಾಯಿ ಆಗಿದೆ.

    ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಒತ್ತಾಯ: ತೈಲ ದರ ಹಾಗೂ ಹಾಗೂ ಗ್ಯಾಸ್ ದರ ಏರಿಕೆಗೆ ಆಟೋ ಚಾಲಕರು ತತ್ತರಿಸಿದ್ದು ಆಟೋ ಪ್ರಯಾಣದರ ಏರಿಕೆಗೆ ಚಾಲಕರು ಪಟ್ಟು ಹಿಡಿದಿದ್ದಾರೆ. ಸದ್ಯ ಬೆಂಗಳೂರಲ್ಲಿ 2 ಲಕ್ಷ ಆಟೋಗಳು ಸಂಚರಿಸುತ್ತಿದ್ದು, ಪ್ರಸ್ತುತ ಇರುವ ಪ್ರಯಾಣದರ 25ರೂ.ನಿಂದ 36 ರೂ.ಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದಾರೆ. 2013ರಲ್ಲಿ 1.9 ಕಿ.ಮೀಗೆ ಕನಿಷ್ಠ ದರ 20ರಿಂದ 25ರೂ.ಗೆ ಹೆಚ್ಚಿಸಲಾಗಿತ್ತು. ಬಳಿಕ 2019ರಲ್ಲೂ ಪ್ರಯಾಣದರ ಹೆಚ್ಚಳಕ್ಕೆ ಮನವಿ ಮಾಡಲಾಗಿತ್ತು. ಆದ್ರೆ ಸರ್ಕಾರ ಅನುಮತಿ ನೀಡಿರಲಿಲ್ಲ, ಆದ್ರೀಗ ತೈಲ ಮತ್ತು ಗ್ಯಾಸ್ ದರ ಏರಿಕೆ ಬೆನ್ನಲ್ಲೇ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ದರ ಪರಿಷ್ಕರಣೆಗೆ ಮನವಿ ಮಾಡಿದ್ದಾರೆ.

  • ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಆಪ್ ವಿನೂತನ ಪ್ರತಿಭಟನೆ

    ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಆಪ್ ವಿನೂತನ ಪ್ರತಿಭಟನೆ

    ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬೆಂಗಳೂರಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು. ನಗರದ ಮೌರ್ಯ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಬೇಳೆಕಾಳು, ಬ್ರೆಡ್, ಜಾಮ್, ಬೆಣ್ಣೆಯನ್ನು ಮಾರುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

    ಬೆಂಗಳೂರು ನಗರ ಘಟಕದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ವಿತ್ತಿಯ ಕೊರತೆ ಹೊಂದಿರುವ, ನವಜಾತ ಶಿಶುವಿನ ತಲೆಗೂ ಋಣಭಾರ ಹೊರಿಸುವ, ಜನಸಾಮಾನ್ಯರ ಮೇಲೆ ಕೃಷಿಕರ ಹೆಸರಿನಲ್ಲಿ ಬೇಳೆಕಾಳುಗಳ, ಕಣ್ಣಿಗೆ ಕಂಡ ಎಲ್ಲಾ ವಸ್ತುಗಳ ಮೇಲೆ ಸೆಸ್ ಭಾರ ಹೇರಿದ ನಿರ್ಮಲಾ ಸೀತರಾಮನ್ ಅವರ “ಸಾಲ”ದ ಬಜೆಟ್ ಇದಾಗಿದೆ. ಇದೊಂದು ಜನ ವಿರೋಧಿ, ಬೂಸಾ ಬಜೆಟ್ ಎಂದು ಕರೆಯಬಹುದು ಎಂದರು.

    ಮತ್ತೊಂದೆಡೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹಾಗೂ ಆಹಾರ ಸಾಮಾಗ್ರಿಗಳ ಮೇಲೆ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಸರ್ವ ಸಂಘಟನೆಗಳ ಒಕ್ಕೂಟದ ವತಿಯಿಂದ ಸಿಎಂ ಶಿವಕುಮಾರ್ ನಾಯಕ್ ನೇತೃತ್ವದಲ್ಲಿ ಎತ್ತಿನ ಗಾಡಿ ಓಡಿಸುವ ಮೂಲಕ ಪ್ರತಿಭಟಿಸಲಾಯಿತು.

  • ತೈಲ ಬೆಲೆ ಏರಿಕೆ ಎಚ್ಚರಿಕೆ!

    ತೈಲ ಬೆಲೆ ಏರಿಕೆ ಎಚ್ಚರಿಕೆ!

    ಬೆಂಗಳೂರು: ಅಮೆರಿಕ-ಇರಾನ್ ನಡುವಿನ ಪ್ರಕ್ಷುಬ್ದ ವಾತಾವರಣ ಭಾರತದ ಮೇಲೂ ಬೀಳಲಿದೆ. ಇರಾನ್-ಅಮೆರಿಕ ಕ್ಷಿಪ್ರ ದಾಳಿ ಯುದ್ಧದ ಕಡೆ ತಿರುಗಿದ್ದರೆ, ಆರ್ಥಿಕ ಹೊಡೆತ ಎದುರಾಗಲಿದೆ ಎಂದು ವಿಂಗ್ ಕಮಾಂಡರ್ ಅತ್ರಿ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿ ಅವರು, ಭಾರತದ ಆರ್ಥಿಕತೆಯ ಮೇಲೆ ಈ ಬೆಳವಣಿಗೆ ಹೆಚ್ಚು ಪರಿಣಾಮ ಬೀರಲಿದೆ. ಸದ್ಯ ಭಾರತ ಆರ್ಥಿಕವಾಗಿ ಕುಂಟುತ್ತಾ ಸಾಗಿದೆ. ಎರಡು ರಾಷ್ಟ್ರಗಳ ನಡುವೆ ಯುದ್ಧ ಪರಿಸ್ಥಿತಿ ಎದುರಾದರೆ ಇಡೀ ಪ್ರಪಂಚಕ್ಕೆ ಕಷ್ಟ ಎದುರಾಗುತ್ತದೆ. ಕಚ್ಚಾ ತೈಲದ ಬೆಲೆ ಭಾರೀ ದುಬಾರಿಯಾಗಲಿದೆ. ಯುದ್ಧ ಕಾಲ ಹಣಕಾಸಿನ ವೆಚ್ಚ ಹೆಚ್ಚಾಗಲಿದ್ದು, ಆಗ ಇರಾನ್ ತನ್ನ ರಫ್ತಿನ ಮೇಲಿನ ದರ ಏರಿಕೆ ಮಾಡಲಿದೆ. ಇದರ ಪರಿಣಾಮ ತೈಲ ಬೆಲೆಯೂ ಹೆಚ್ಚಾಗಲಿದೆ ಎಂದು ತಿಳಿಸಿದರು.

    ಹೀಗಾಗಿ ಇದನ್ನ ತಪ್ಪಿಸಲು ಪ್ರಧಾನಿ ಮೋದಿ ಶಾಂತಿದೂತನಂತೆ ಪ್ರವೇಶ ಮಾಡಬೇಕಿದೆ. ಇರಾನ್-ಅಮೆರಿಕ ಎರಡು ರಾಷ್ಟ್ರಗಳಲ್ಲಿ ಯಾರದ್ದು ತಪ್ಪಿದೆ ಎನ್ನುವುದನ್ನು ಒಪ್ಪಿಕೊಂಡರೆ ಅವರು ದೊಡ್ಡವರಾಗುತ್ತಾರೆ. ಸದ್ಯ ಭಾರತದ ಮಾತಿಗೆ ಬಾರೀ ಬೆಲೆಯಿದ್ದು, ಕೂಡಲೇ ಭಾರತ ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆದಿದೆ: ಬಿಎಸ್‍ವೈ ಕಿಡಿ

    ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆದಿದೆ: ಬಿಎಸ್‍ವೈ ಕಿಡಿ

    ಧಾರವಾಡ: ಸಮ್ಮಿಶ್ರ ಸರ್ಕಾರದಿಂದ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ, ಭಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

    ಜಿಲ್ಲೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ತಾವು ಹೇಳಿದಂತೆ ನಡೆದುಕೊಂಡಿಲ್ಲ. ಪ್ರತಿಯೊಂದು ವಿಷಯದಲ್ಲೂ ಗೊಂದಲ ಉಂಟುಮಾಡಿಕೊಳ್ತಾರೆ. ರಾಜ್ಯದಲ್ಲಿ ಬಹುತೇಕ ತಾಲೂಕಿನಲ್ಲಿ ಜನ ಬರಗಾಲದಿಂದ ತತ್ತರಿಸಿ ಸಂಕಷ್ಟದಲ್ಲಿದ್ದಾರೆ. ಈ ವೇಳೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ಸಾರ್ವಜನಿಕರ ಮೇಲೆ ಭಾರ ಬೀಳೋದಿಲ್ವ? ಈ ರೀತಿ ತೆರಿಗೆ ಹೆಚ್ಚಳ ಮಾಡಿ ಎಲ್ಲದಕ್ಕೂ ಸಾಲಮನ್ನಾ ಅಂತ ಕುಂಟು ನೆಪ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಸಚಿವರೊಬ್ಬರ ಇಲಾಖೆಯಲ್ಲೇ ಸುಮರು 76 ಲಕ್ಷ ರೂ. ಸಿಕ್ಕಿದೆ, ಇದು ಎಷ್ಟರ ಮಟ್ಟಿಗೆ ಸರಿ. ಈ ವಿಚಾರವಾಗಿ ತಕ್ಷಣ ಕ್ರಮ ತೆಗೆದುಕೊಳ್ಳೋದನ್ನ ಬಿಟ್ಟು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಬೇರೆ ಉತ್ತರ ನೀಡುತ್ತಾರೆ. ಸರ್ಕಾರದಲ್ಲಿ ಭಷ್ಟಾಚಾರ ತುಂಬಿ ತುಳುಕುತ್ತಿದೆ, ಅಭಿವೃದ್ಧಿ ಕಾರ್ಯ ಸ್ಥಗಿತವಾಗ್ತಿದೆ. ರಾಜ್ಯದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ನಡೆದಿದ್ದು, ಇದನ್ನ ನಾನು ಖಂಡಿಸುತ್ತೇನೆ. ಬರಗಾಲದಿಂದ ಜನ ಉದ್ಯೋಗವಿಲ್ಲದೆ ವಲಸೆ ಹೋಗ್ತಿದ್ದಾರೆ. ಈ ಬಗ್ಗೆ ಅನುದಾನ ಬಿಡುಗಡೆ ಮಾಡುವ ಯಾವುದೇ ಕೆಲಸವನ್ನು ಸರ್ಕಾರ ಮಾಡ್ತಿಲ್ಲ ಎಂದು ಬಿಎಸ್‍ವೈ ಹರಿಹಾಯ್ದಿದ್ದಾರೆ.

    ಧಾರವಾಡದಲ್ಲಿ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ಸನ್ಮಾನ ಕಾರ್ಯಕ್ರಮ ಇದೆ, ನನನ್ನು ಆಹ್ವಾನಿಸಿದ್ದಾರೆ ಅದಕ್ಕೆ ಬಂದಿದ್ದೇನೆ. ಮಾಧ್ಯಮದವರು ಕಳೆದ ಮೂರು ದಿನಗಳಿಂದ ಈ ಕಾರ್ಯಕ್ರಮಕ್ಕೆ ಸಹಕಾರ ಕೊಡುತ್ತಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಸ್ಯಾಂಡಲ್‍ವುಡ್ ಸ್ಟಾರ್ ನಟರ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತೆರಿಗೆ ಅಧಿಕಾರಿಗಳಿಗೆ ಯಾವುದು ಸೂಕ್ತ ಅನಿಸುತ್ತದೆಯೋ ಅದನ್ನ ಮಾಡ್ತಾರೆ. ಈ ಬಗ್ಗೆ ಕೇಂದ್ರವನ್ನು ಮಧ್ಯ ತರೋದು ಸರಿಯಲ್ಲ. ಈ ವಿಚಾರವಾಗಿ ತನಿಖೆ ಆಗುತ್ತಿದೆ. ಇದಕ್ಕೆ ಯಾವ ನಟರು ವಿರೋಧ ಮಾಡ್ತಿಲ್ಲ, ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv