Tag: ತೈಲ ಬಾವಿ

  • ನೈಸರ್ಗಿಕ ತೈಲ ಬಾವಿಗೆ ಬೆಂಕಿ- ಬಾನೆತ್ತರಕ್ಕೆ ಹೊಗೆ

    ನೈಸರ್ಗಿಕ ತೈಲ ಬಾವಿಗೆ ಬೆಂಕಿ- ಬಾನೆತ್ತರಕ್ಕೆ ಹೊಗೆ

    – ಬೆಂಕಿ ನಂದಿಸಲು ಇನ್ನೂ ನಾಲ್ಕಾರು ವಾರ ಬೇಕು
    – ಘಟನಾ ಸ್ಥಳದಿಂದ 6 ಸಾವಿರ ಜನರ ಸ್ಥಳಾಂತರ

    ಗುವಾಹಟಿ: ಕಳೆದ 14 ದಿನಗಳಿಂದ ಅನಿಲ ಸೋರಿಕೆಯಾಗುತ್ತಿರುವ ಅಸ್ಸಾಂ ಆಯಿಲ್ ಇಂಡಿಯಾ ಲಿಮಿಟೆಡ್(ಒಐಎಲ್)ನ ನೈಸರ್ಗಿಕ ಅನಿಲ ಉತ್ಪಾದನಾ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಅನಾಹುತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈವರೆಗೆ ಸುಮಾರು 2 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರಲಾಗಿದ್ದು, ಸುಮಾರು ಹತ್ತು ಕಿ.ಮೀ.ದೂರದಲ್ಲಿಯೂ ಬೆಂಕಿ ಕಾಣಿಸಿಕೊಳ್ಳುತ್ತಿದೆ.

    ಅಸ್ಸಾಂನ ತಿನ್ಸೂಕಿಯಾ ಜಿಲ್ಲೆಯ ಬಾಘ್‍ಜನ್ ಪ್ರದೇಶದಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್‍ನ ಅನಿಲ ಬಾವಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹತೋಟಿಗೆ ತರಲು ಇನ್ನೂ ನಾಲ್ಕು ವಾರಗಳ ಸಮಯ ಬೇಕಾಗುತ್ತದೆ ಎಂದು ಒಐಎಲ್ ತಿಳಿಸಿದೆ. ಮೇ 27ರಂದು ಸಂಭವಿಸಿದ ಸ್ಫೋಟದ ಬಳಿಕ ಅನಿಲ ಸೋರಿಯಾಗುತ್ತಿದೆ. ಹೀಗಾಗಿ ಆ ಪ್ರದೇಶದ ಸುತ್ತಲಿನ 1.5 ಕಿ.ಮೀ.ವ್ಯಾಪ್ತಿಯಲ್ಲಿನ ಸುಮಾರು 6 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಯಿಲ್ ಇಂಡಿಯಾ ಲಿಮಿಟೆಡ್ 30 ಸಾವಿರ ರೂ. ಪರಿಹಾರ ಘೋಷಿಸಿದೆ.

    ತಜ್ಞರ ತಂಡದ ಜೊತೆಗೆ ಸಭೆ ನಡೆಸಲಾಗುತ್ತಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲು ಇದು ಸೂಕ್ತ ಸಮಯವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಬಾವಿಯನ್ನು ಸುರಕ್ಷಿತವಾಗಿ ಮುಚ್ಚಬಹುದಾಗಿದೆ. ಆದರೆ ಈ ಸಂದರ್ಭದಲ್ಲಿ ಅಗಾಧ ಪ್ರಮಾಣದಲ್ಲಿ ನೀರಿನ ಅಗತ್ಯವಿದೆ. ಹೆಚ್ಚಿನ ಡಿಸ್ಚಾರ್ಜ್ ಪಂಪ್‍ಗಳ ಅವಶ್ಯವಿದೆ. ಅಲ್ಲದೆ ಡೆಬ್ರಿಸ್‍ನ್ನು ಸ್ವಚ್ಛಗೊಳಿಸಬೇಕಿದೆ ಎಂದು ಕಂಪನಿ ತಿಳಿಸಿದೆ.

    ಘಟನೆ ಕುರಿತು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ಪರಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಮಾತನಾಡಿದ್ದು, ಘಟನೆ ಕುರಿತು ವಿವರಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಸೋಮವಾರ ಸಿಂಗಾಪುರದಿಂದ ಆಗಮಿಸಿರುವ ವೆಲ್ ಕಿಲ್ಲಿಂಗ್ ವಿಶೇಷ ತಜ್ಞರು ಸಹ ಕಾರ್ಯಾಚರಣೆಗೆ ಸಾಥ್ ನೀಡುತ್ತಿದ್ದಾರೆ.

    ಅನಿಲ ಸೋರಿಕೆಯಿಂದಾಗಿ ಸುತ್ತಲಿನ ಗದ್ದೆಗಳು ಹಾಗೂ ಜೀವವೈವಿಧ್ಯಕ್ಕೆ ತೀವ್ರ ಹಾನಿಯುಂಟಾಗಿದೆ. ಪಕ್ಕದ ಹಳ್ಳಿಗಳ ಗದ್ದೆಗಳು, ಹಳ್ಳ, ಕೊಳಗಲು ಸಂಪೂರ್ಣ ಕಲುಶಿತಗೊಂಡಿವೆ. ಹೀಗಾಗಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.