Tag: ತೈಲ ಕಂಪನಿ

  • ಹೊಸ ವರ್ಷಕ್ಕೆ ಮುನ್ನವೇ ಸಿಹಿ ಸುದ್ದಿ – ಎಲ್‌ಪಿಜಿ ಸಿಲಿಂಡರ್‌ ಬೆಲೆ ಭಾರೀ ಇಳಿಕೆ

    ಹೊಸ ವರ್ಷಕ್ಕೆ ಮುನ್ನವೇ ಸಿಹಿ ಸುದ್ದಿ – ಎಲ್‌ಪಿಜಿ ಸಿಲಿಂಡರ್‌ ಬೆಲೆ ಭಾರೀ ಇಳಿಕೆ

    ನವದೆಹಲಿ: ಕ್ರಿಸ್ಮಸ್‌ ಮತ್ತು ಹೊಸ ವರ್ಷಕ್ಕೆ ಮುನ್ನವೇ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಎಲ್‌ಪಿಜಿ ಸಿಲಿಂಡರ್‌ (Cylinder) ಬೆಲೆ ಭಾರೀ ಇಳಿಕೆಯಾಗಿದೆ.

    ತೈಲ ಕಂಪನಿಗಳು (Oil Marketing Companies) ವಾಣಿಜ್ಯ ಬಳಕೆಯ (Commercial LPG) 19 ಕೆಜಿ ಸಿಲಿಂಡರ್‌ ಬೆಲೆ 39.50 ರೂ. ಇಳಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.

    ಪ್ರಸ್ತುತ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್‌ಗೆ 1,757.50 ರೂ. ದರವಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ತಿಂಗಳ ಮೊದಲ ದಿನ ಎಲ್‌ಪಿಜಿ ಸಿಲಿಂಡರ್‌ ಬೆಲೆ ಸಾಧಾರಣವಾಗಿ ಪರಿಷ್ಕರಣೆಗೊಳ್ಳುತ್ತವೆ.  ಇದನ್ನೂ ಓದಿ: ಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!

    ಪ್ರಸ್ತುತ ದಿನ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 905.50 ರೂ. ಇದೆ. ಉಜ್ವಲ ಯೋಜನೆ ಹೊಂದಿದ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ ಸಿಗುತ್ತಿದೆ. ಉಜ್ವಲ ಯೋಜನೆ ಅಡಿ ವರ್ಷಕ್ಕೆ ಒಟ್ಟು 12 ಸಿಲಿಂಡರ್‌ಗಳಿಗೆ ಈ ಸಬ್ಸಿಡಿ ಹಣ ನೀಡಲಾಗುತ್ತದೆ.

     

  • ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಸೌದಿ ಕಂಪನಿ ಜೊತೆ ಡೀಲ್ – ಭಾರತದ ಅತಿ ದೊಡ್ಡ ಎಫ್‍ಡಿಐ ಒಪ್ಪಂದಕ್ಕೆ ರಿಲಯನ್ಸ್ ಸಹಿ

    ಮುಂಬೈ: ರಿಲಯನ್ಸ್ ಕಂಪನಿ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ವಿದೇಶಿ ನೇರ ಹೂಡಿಕೆ(ಎಫ್‍ಡಿಐ) ಸಂಬಂಧ ಸೌದಿ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ.

    ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ  ಎಂದು ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಇದನ್ನೂ ಓದಿ: ಸೆ.5 ರಿಂದ ಜಿಯೋ ಬ್ರಾಡ್‍ಬ್ಯಾಂಡ್ ಕಮಾಲ್ – ಬೆಲೆ ಎಷ್ಟು? ವಿಶೇಷತೆ ಏನು?

    ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿದೆ.

    ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮಥ್ರ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.

    ತೈಲ, ಟೆಲಿಕಾಂ, ರಿಟೇಲ್ ಈ ಮೂರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯುತ್ತಿರುವ ದೇಶದ ಏಕೈಕ ಕಂಪನಿ ರಿಲಯನ್ಸ್ ಎಂದು ಮುಕೇಶ್ ಅಂಬಾನಿ ವಾರ್ಷಿಕ ಸಭೆಯಲ್ಲಿ ತಿಳಿಸಿದರು.

     

  • ಲೋಕೋಪಯೋಗಿ ಇಲಾಖೆ ಜೊತೆ ಮಾತುಕತೆ ಯಶಸ್ವಿ- ಟ್ಯಾಂಕರ್ ಮಾಲೀಕರ ಮುಷ್ಕರ ಅಂತ್ಯ

    ಲೋಕೋಪಯೋಗಿ ಇಲಾಖೆ ಜೊತೆ ಮಾತುಕತೆ ಯಶಸ್ವಿ- ಟ್ಯಾಂಕರ್ ಮಾಲೀಕರ ಮುಷ್ಕರ ಅಂತ್ಯ

    ಬೆಂಗಳೂರು: ಪೆಟ್ರೋಲ್ ಪೂರೈಕೆ ಮಾಡೋ ಲಾರಿ ನೌಕರರು ಮುಷ್ಕರ ಕೈಗೊಂಡ ಕುರಿತಂತೆ ತೈಲ ಕಂಪನಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಸಫಲವಾಗಿದೆ. ಹೀಗಾಗಿ ಸದ್ಯ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ಕೈ ಬಿಟ್ಟಿದ್ದಾರೆ.

    ಮಾತುಕತೆಯಲ್ಲಿ ಅಧಿಕಾರಿಗಳು ಹದಗೆಟ್ಟ ರಸ್ತೆ ರಿಪೇರಿ ಮಾಡುವ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮುಷ್ಕರ ಅಂತ್ಯವಾಗಿದ್ದು, ವಾಹನ ಸವಾರರಿಗೆ ರಿಲೀಫ್ ಸಿಕ್ಕಿದೆ.

    ಮುಷ್ಕರ ಯಾಕೆ?: ನಗರದ ಹೊಸಕೋಟೆ ಬಳಿಯ ದೇವನಗುಂಡಿ ತೈಲ ಘಟಕ ಹಾಗೂ ಟರ್ಮಿನಲ್ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವಂತೆ ಲಾರಿ ಚಾಲಕರು ಕಳೆದ ಎರಡು ವರ್ಷಗಳ ಹಿಂದೆಯೂ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ತೈಲ ಪೂರೈಕೆ ಸಂಸ್ಥೆಗಳು ಚಾಲಕರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಟ್ಯಾಂಕರ್ ಪಲ್ಟಿಯಾಗಿ ಚಾಲಕರೊಬ್ಬರು ಮೃತಪಟ್ಟಿದ್ದರು. ಇದರಿಂದ ಅನಿವಾರ್ಯವಾಗಿ ಚಾಲಕರು ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು.

    ಕಳೆದ ಬಾರಿ ಪ್ರತಿಭಟನೆ ನಡೆಸಿದ ವೇಳೆ ರಸ್ತೆ ದುರಸ್ಥಿ ಕಾರ್ಯ ನಡೆಸುವ ಭರವಸೆ ನೀಡಿದ್ದ ತೈಲ ಪೂರೈಕೆ ಸಂಸ್ಥೆಗಳು 500 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದವು. ಆದರೆ ಹಣ ಇದ್ದರು ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿರಲಿಲ್ಲ.


    ಪ್ರತಿಭಟನೆ ನಡೆಸುವ ಮೊದಲು ಟ್ಯಾಂಕರ್ ಚಾಲಕರ ಮನವೊಲಿಸಲು ತೈಲ ಕಂಪನಿಗಳು ಸಭೆ ನಡೆಸಿದ್ದವು. ಆದರೆ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆ ಆರಂಭವಾಗುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾನಿರತರು ತಿಳಿಸಿದ್ದರು. ಹೀಗಾಗಿ ದೇವನಗುಂದಿ ಸಮೀಪದ ತೈಲ ಘಟಕದ ಬಳಿ 1500ಕ್ಕೂ ಹೆಚ್ಚು ಟ್ಯಾಂಕರ್ ಚಾಲಕರು ಪ್ರತಿಭಟನೆ ಕೈಗೊಂಡಿದ್ದರು. ಈ ಹಿನ್ನೆಲೆಯಂದಾಗಿ ಇಂದು ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ತೈಲ ಪೂರೈಕೆ ಸ್ಥಗಿತವಾಗಲಿದೆ ಎಂಬುದಾಗಿ ವರದಿಯಾಗಿತ್ತು.