Tag: ತೇಜಸ್ ಎಕ್ಸ್ ಪ್ರೆಸ್

  • ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ನೀಡಿದ ಆಹಾರ ಸೇವಿಸಿ 24 ಜನ ಅಸ್ವಸ್ಥ

    ತೇಜಸ್ ಎಕ್ಸ್ ಪ್ರೆಸ್ ರೈಲಿನಲ್ಲಿ ನೀಡಿದ ಆಹಾರ ಸೇವಿಸಿ 24 ಜನ ಅಸ್ವಸ್ಥ

    ನವದೆಹಲಿ: ಗೋವಾ ಹಾಗೂ ಮುಂಬೈ ನಡುವೆ ಸಂಚರಿಸುವ ತೇಜಸ್ ಎಕ್ಸ್ ಪ್ರೆಸ್‍ ನಲ್ಲಿ ನೀಡಿದ ಆಹಾರವನ್ನು ಸೇವಿಸಿ 24 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ಭಾನುವಾರದಂದು ನಡೆದಿದೆ.

    ತೇಜಸ್ ಎಕ್ಸ್ ಪ್ರೆಸ್‍ ನ ರೈಲು ಸಂಖ್ಯೆ 22120ರಲ್ಲಿ ಪ್ರಯಾಣಿಕರು ನೀಡಿದ ಮಾಹಿತಿ ಮೇಲೆ ಫುಡ್ ಪಾಯ್ಸನಿಂಗ್ ಬಗ್ಗೆ ವರದಿಯಾಗಿದೆ. ಪ್ರಯಾಣಿಕರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಚಿಪ್ಲುನ್ ರೈಲ್ವೆ ನಿಲ್ದಾಣದ ಬಳಿ ರೈಲನ್ನು ನಿಲ್ಲಿಸಿ ರೈಲ್ವೆ ವೈದ್ಯರು ಪ್ರಯಾಣಿಕರಿಗೆ ಚಿಕಿತ್ಸೆ ನೀಡಿದ್ರು ಎಂದು ಐಆರ್‍ಸಿಟಿಸಿ ಹೇಳಿಕೆ ನೀಡಿದೆ.

    ಸುಮಾರು 24 ಪ್ರಯಾಣಿಕರನ್ನು ಮಹಾರಾಷ್ಟ್ರದ ಚಿಪ್ಲೂನ್‍ ನಲ್ಲಿ ಲೈಫ್‍ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆಂದು ಐಆರ್‍ಸಿಟಿಸಿ ವಕ್ತಾರರು ತಿಳಿಸಿದ್ದಾರೆ. ತೇಜಸ್ ಎಕ್ಸ್ ಪ್ರೆಸ್‍ ನ ಕೇಟರಿಂಗ್ ಸೇವೆಗೆ ಐಆರ್‍ಸಿಟಿಸಿ ಜೆಕೆ ಘೋಷ್ ಕಂಪೆನಿಗೆ ಲೈಸೆನ್ಸ್ ನೀಡಿತ್ತು.

    ಇದನ್ನೂ ಓದಿ:  ಭೂಮಿಯ ಮೇಲೆ ಚಲಿಸುವ ವಿಮಾನದ ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ರೈಲಿನಲ್ಲಿ ಸುಮಾರು 170 ಪ್ರಯಾಣಿಕರಿಗೆ ವೆಜಿಟೇರಿಯನ್ ಹಾಗೂ 130 ಪ್ರಯಾಣಿಕರಿಗೆ ನಾನ್ ವೆಜಿಟೇರಿಯನ್ ಉಪಹಾರ ನೀಡಲಾಗಿತ್ತು. ಆಸ್ಪತ್ರೆಗೆ ದಾಖಲಾದ ಬಹುತೇಕ ಪ್ರಯಾಣಿಕರು ಬೆಳಗ್ಗಿನ ತಿಂಡಿಗೆ ಆಮ್ಲೆಟ್ ಸೇವಿಸಿದ್ದರು ಎಂದು ಐಆರ್‍ಸಿಟಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆಹಾರ ಮಾದರಿಯನ್ನು ಭಾರತೀಯ ರೈಲ್ವೆಯು ಪರೀಕ್ಷೆಗೆ ಕಳಿಸಿದೆ.

    ಕೇಟರರ್ ಜೆಕೆ ಘೋಷ್ ಅವರ ಗುತ್ತಿಗೆ ಅಂತ್ಯಗೊಳಿಸಲು ರೈಲ್ವೆ ಸಚಿವಾಲಯ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷರಾದ ಅಶ್ವಾನಿ ಲೋಹಾನಿ ಹೇಳಿದ್ದಾರೆ.

    ತೇಜಸ್ ಎಕ್ಸ್ ಪ್ರೆಸ್‍ ದೇಶದ ಮೊದಲ ಸೆಮಿ ಹೈ ಸ್ಪೀಡ್, ಸಂಪೂರ್ಣ ಎಸಿ ರೈಲು ಸೇವೆಯಾಗಿದ್ದು, ಗೋವಾದ ಕರ್ಮಾಲಿ ರೈಲ್ವೆ ನಿಲ್ದಾಣ ಹಾಗೂ ಮುಂಬೈನ ಛತ್ರಪತಿ ನಿಲ್ದಾಣದ ನಡುವೆ ಸಂಚರಿಸುತ್ತದೆ. ಇದೇ ವರ್ಷ ಜೂನ್‍ ನಲ್ಲಿ ತೇಜಸ್ ಎಕ್ಸ್ ಪ್ರೆಸ್‍ ಲೋಕಾರ್ಪಣೆಗೊಂಡಿತ್ತು.

    ಇದನ್ನೂ ಓದಿ: ಗೋವಾದಿಂದ 3 ಗಂಟೆ ತಡವಾಗಿ ಹೊರಟರೂ 1 ನಿಮಿಷ ಮುಂಚಿತವಾಗಿ ಮುಂಬೈ ತಲುಪಿದ ತೇಜಸ್ ಎಕ್ಸ್ ಪ್ರೆಸ್

     

     

  • ಗೋವಾದಿಂದ 3 ಗಂಟೆ ತಡವಾಗಿ ಹೊರಟರೂ 1 ನಿಮಿಷ ಮುಂಚಿತವಾಗಿ ಮುಂಬೈ ತಲುಪಿದ ತೇಜಸ್ ಎಕ್ಸ್ ಪ್ರೆಸ್

    ಗೋವಾದಿಂದ 3 ಗಂಟೆ ತಡವಾಗಿ ಹೊರಟರೂ 1 ನಿಮಿಷ ಮುಂಚಿತವಾಗಿ ಮುಂಬೈ ತಲುಪಿದ ತೇಜಸ್ ಎಕ್ಸ್ ಪ್ರೆಸ್

    ಮುಂಬೈ: ಎಷ್ಟೇ ತಡವಾಗಿ ಹೊರಟರೂ ಸರಿಯಾದ ಸಮಯಕ್ಕೆ ಸ್ಥಳವನ್ನ ತಲುಪಿದ್ರೆ ಅಥವಾ ನಿಗದಿತ ಸಮಯಕ್ಕಿಂತ ಬೇಗನೆ ಅಲ್ಲಿಗೆ ತಲುಪಿದ್ರೆ ಜನರಿಗೆ ಆಶ್ಚರ್ಯವಾಗುತ್ತೆ. ತೇಜಸ್ ಎಕ್ಸ್ ಪ್ರೆಸ್ ರೈಲಿನ ವಿಷಯದಲ್ಲಿ ಆಗಿದ್ದೂ ಇದೇ.

    ಭಾನುವಾರದಂದು ತೇಜಸ್ ಎಕ್ಸ್ ಪ್ರೆಸ್ ರೈಲು ಗೋವಾದಿಂದ ಬೆಳಿಗ್ಗೆ 7.30ಕ್ಕೆ ಹೊರಡಬೇಕಿತ್ತು. ಆದ್ರೆ ರೈಲು ಹೊರಟಿದ್ದು 10.30ಕ್ಕೆ. ಅಂದ್ರೆ 3 ಗಂಟೆಯಷ್ಟು ತಡವಾಗಿ ತೇಜಸ್ ಎಕ್ಸ್‍ಪ್ರೆಸ್ ಗೋವಾದಿಂದ ಹೊರಟಿತ್ತು. ಆದರೂ ಸಂಜೆ 7.44ಕ್ಕೆ ಸರಿಯಾಗಿ, ನಿಗದಿತ ಸಮಯಕ್ಕಿಂತ ಒಂದು ನಿಮಿಷ ಮುಂಚಿತವಾಗಿ ರೈಲು ಮುಂಬೈ ನಿಲ್ದಾಣಕ್ಕೆ ಆಗಮಿಸಿತ್ತು.

    ಕರ್ಮಾಲಿಯಿಂದ ಕುಡಾಲ್‍ವರೆಗೆ ಗಂಟೆಗೆ 153 ಕಿ.ಮೀ ವೇಗದಲ್ಲಿ ಚಲಿಸಿ ನಂತರ ಕುಡಾಲ್‍ನಿಂದ ರತ್ನಗಿರಿವರೆಗೆ ಗಂಟೆಗೆ 137 ಕಿ.ಮೀ ವೇಗದಲ್ಲಿ ಹಾಗೂ ರತ್ನಗಿರಿಯಿಂದ ಪನ್ವೇಲ್‍ಗೆ ಗಂಟೆಗೆ 125 ಕಿಮೀ ವೇಗದಲ್ಲಿ ಚಲಿಸುವ ಮೂಲಕ ತೇಜಸ್ ರೈಲು ತಡವಾಗಿ ಹೊರಟಿದ್ದರಿಂದ ವ್ಯರ್ಥವಾಗಿದ್ದ ಸಮಯವನ್ನ ಸರಿದೂಗಿಸಿತ್ತು.

    ಮುಂಬೈ ಹಾಗೂ ಕರ್ಮಾಲಿ ನಡುವೆ ಸಂಚರಿಸುವ 19 ಕೋಚ್‍ಗಳ ತೇಜಸ್ ಎಕ್ಸ್ ಪ್ರೆಸ್ ರೈಲು ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸಬಲ್ಲುದಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನ ಒಳಗೊಂಡಿರುವ ಈ ರೈಲಿನಲ್ಲಿ ಸಿಸಿಟಿವಿ, ಫೈರ್ ಡಿಟೆಕ್ಷನ್, ಜಿಪಿಎಸ್ ಆಧರಿತ ಪ್ರಯಾಣಿಕರ ಮಾಹಿತಿ ಪ್ರದರ್ಶನ ವ್ಯವಸ್ಥೆ ಹಾಗೂ ಬಯೋ ವ್ಯಾಕ್ಯೂಮ್ ಶೌಚಾಲಯದ ವ್ಯವಸ್ಥೆಯೂ ಇದೆ. ಪ್ರತಿಯೊಂದು ಸೀಟ್‍ನಲ್ಲೂ ಎಲ್‍ಇಡಿ ಟಿವಿ ಹಾಗೂ ಕಾಲ್ ಬೆಲ್ ಕೂಡ ಇದೆ. ಕೋಚ್‍ಗಳಲ್ಲಿ ಸ್ವಯಂಚಾಲಿತ ಬಾಗಿಲುಗಳಿವೆ. ಪ್ರತಿ ಕೋಚ್‍ನಲ್ಲೂ ಕಾಫಿ-ಟೀ ತಯಾರಿಸೋ ಯಂತ್ರಗಳು ಹಾಗೂ ಸ್ನ್ಯಾಕ್ ಟೇಬಲ್‍ಗಳಿವೆ.