Tag: ತೆರಿಗೆ ವಿನಾಯತಿ

  • ‘ಡೇರ್ ಡೆವಿಲ್ ಮುಸ್ತಾಫಾ’ ನ ಕೈ ಹಿಡೀತಾರಾ ಸಿಎಂ ಸಿದ್ದರಾಮಯ್ಯ

    ‘ಡೇರ್ ಡೆವಿಲ್ ಮುಸ್ತಾಫಾ’ ನ ಕೈ ಹಿಡೀತಾರಾ ಸಿಎಂ ಸಿದ್ದರಾಮಯ್ಯ

    ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ‘ಡೇರ್ ಡೆವಿಲ್ ಮುಸ್ತಾಫಾ’ ಕೃತಿ ಆಧರಿಸಿದ ಶಶಾಂಕ್ ನಿರ್ದೇಶನದ ಈ ಯಶಸ್ವಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಚಿತ್ರತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮನವಿ ಸಲ್ಲಿಸಿದೆ. ತೆರಿಗೆ ವಿನಾಯಿತಿ (Tax Exemption) ನೀಡಿದರೆ, ಸಿನಿಮಾ ಮತ್ತಷ್ಟು ಜನರಿಗೆ ತಲುಪಲು ಸಾಧ್ಯವಾಗಬಹುದು ಹಾಗೂ ಕಡಿಮೆ ದರದಲ್ಲಿ ಚಿತ್ರ ತೋರಿಸಲು ಉತ್ಸಾಹ ಬರಬಹುದು ಎಂದು ಈ ಸಂದರ್ಭದಲ್ಲಿ ಚಿತ್ರತಂಡ ಹೇಳಿಕೊಂಡಿದೆ.  ಚಿತ್ರಕಥಾ ಲೇಖಕ ಅನಂತ್, ನಿರ್ದೇಶಕ ಶಶಾಂಕ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಸೇರಿದಂತೆ ಹಲವರು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

    ಕಂಟೆಂಟ್ ಆಧಾರಿತ ಒಳ್ಳೆಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕಪ್ರಭು ಯಾವತ್ತೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಗಾಂಧಿನಗರದಲ್ಲಿದೆ. ಇದು ಡೇರ್ ಡೆವಿಲ್ ಮುಸ್ತಾಫಾ (Dare devil Mustafa) ಸಿನಿಮಾ ವಿಚಾರದಲ್ಲಿ ಪ್ರೂವ್ ಆಗಿದೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ (Poorchandra Tejaswi) ಕಥೆಯಾಧಾರಿತ ಸಿನಿಮಾವಾಗಿರುವ ಡೇರ್ ಡೆವಿಲ್ ಮುಸ್ತಾಫಾ ಭರಪೂರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಿನಿಮಾ ಪ್ರೇಮಿಗಳಿಂದ ಹಾಗೂ ವಿಮರ್ಶಕರಿಂದಲೂ ಅಪ್ಪುಗೆ ಪಡೆದಿರುವ ಹೃದಯ ಬೆಸೆಯುವ ಕಥೆ ಯಶಸ್ವಿಯಾಗಿ ಹಲವು  ವಾರಗಳ ಪ್ರದರ್ಶನ ಕಂಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಯಶಸ್ವಿ ಕಾರ್ಯಕ್ರಮ ಆಯೋಜಿಸಿತ್ತು. ಕೇಕ್ ಕಟ್ ಮಾಡಿ ಸಕ್ಸಸ್ ಖುಷಿಯನ್ನು ಮಾಧ್ಯಮದವರ ಜೊತೆ ಹಂಚಿಕೊಂಡರು.

    ಡಾಲಿ ಧನಂಜಯ್ (Dolly Dhananjay) ಮಾತನಾಡಿ, ನಾನು ಇಲ್ಲಿ ಕುಳಿತು ಈ ಗೆಲುವನ್ನು ಸಂಭ್ರಮವನ್ನು ನೋಡಲು ಬಂದೆ. ನಾನು ಮಾತನಾಡುವುದು ಏನು ಇಲ್ಲ. ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ರಿಲೀಸ್ ಗೆ ಮಾತ್ರ ಸಿನಿಮಾಗಳು ಖರ್ಚು ಮಾಡಲು ಆಗುವುದಿಲ್ಲ. ಮಾಧ್ಯಮದವರು ಸಿನಿಮಾ ಜೊತೆಗೆ ನಿಂತಿದ್ದೀರಾ. contribution is the greatest philosophy ಎಂಬುದನ್ನು ನಾನು ನಂಬಿದ್ದೇನೆ. ಒಳ್ಳೆದು ಏನೂ ಆಗುತ್ತಿದೆ ಎಂದಾಗ ನಾವು ಅದರ ಭಾಗವಾಗುವುದು ತುಂಬಾ ಮುಖ್ಯ. ಪೂರ್ಣಚಂದ್ರ ತೇಜಸ್ವಿ ಅವರನ್ನು ಸೆಲೆಬ್ರೆಟ್ ಮಾಡಲು ಸಿಕ್ಕ ಅವಕಾಶ. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆ ಎಂದು ತಿಳಿಸಿದರು.

    ನಿರ್ದೇಶಕ ಶಶಾಂಕ್ ಸೋಗಲ್ (Shashank Sogal)  ಮಾತನಾಡಿ, ಒಳ್ಳೆ ಸಿನಿಮಾ ಮಾಡಬೇಕು ಅಂತ ಫೋಕಸ್ ಮಾಡಿದ್ದೆ. ಎಂಜಿನಿಯರಿಂಗ್ ಓದುವಾಗ ಕನ್ನಡ ಸಿನಿಮಾ ಹೋಗ್ತೀವೆ ಎಂದಾಗ ನಮ್ಮನ್ನು ಬೇರೆ ರೀತಿ ನೋಡುವವರು. ಆಗ ತುಂಬಾ ಕೋಪ ಬರುವುದು. ಒಳ್ಳೆ ಸಿನಿಮಾ ಮಾಡಬೇಕು ಎಂಬ ಒಂದೆ ಉದ್ದೇಶವಿತ್ತು. ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಜನ ಸ್ವೀಕರಿಸಿದ್ದಾರೆ ಎಂದರೆ ಅದು ಒಳ್ಳೆ ಕೃತಿಯಾಗಿದೆ ಎಂದು ತಿಳಿದುಕೊಳ್ಳುತ್ತೇನೆ. ಆ ಒಂದೊಳ್ಳೆ ಉದ್ದೇಶದಿಂದ ಎಷ್ಟು ಒಳ್ಳೆ ಸ್ನೇಹಿತರು ಸಿಕ್ಕಿದ್ದಾರೆ. ಸಿನಿಮಾಗೆ ಎಲ್ಲೆಡೆಯಿಂದ ರೆಸ್ಪಾನ್ಸ್ ಸಿಗುತ್ತಿದೆ. ಧನಂಜಯ್ ಸರ್ ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿರುವುದು. ಜನಕ್ಕೆ ರೀಚ್ ಆಗುತ್ತಿರುವುದು ಖುಷಿಕೊಟ್ಟಿದೆ. ವೀಕೆಂಡ್ ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಹೊರ ದೇಶದಲ್ಲಿಯೂ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ ಎಂದರು.

    ರಾಮಾನುಜ ಅಯ್ಯಂಗಾರಿ ಪಾತ್ರಧಾರಿ ಆದಿತ್ಯ ಅಶ್ರೀ, ರಾಮಾನುಜ ಅಯ್ಯಂಗಾರಿ ಪಾತ್ರದ ಮೇಲೆ ಪ್ರೀತಿ ಸಿಟ್ಟು ಎಲ್ಲದನ್ನೂ ಮಾಡಿಕೊಂಡಿದ್ದಾರೆ. ಸಿನಿಮಾ ನೋಡಿದ ಮೇಲೆ ಎಲ್ಲರೂ ಎತ್ತಿ ಕೊಂಡಾಡುತ್ತಿದ್ದೀರಾ. 18 ವರ್ಷಕ್ಕೆ ಇಂಡಸ್ಟ್ರೀಗೆ ಬಂದೆ. ಎಷ್ಟೋ ಅವಮಾನ, ಕಾಯುವಿಕೆ ಬಳಿಕ ಒಂದೊಳ್ಳೆ ಪಾತ್ರ ಸಿಕ್ಕಿದೆ. ಜನ ಗುರುತಿಸುತ್ತಿದ್ದಾರೆ. ಈ ಸಿನಿಮಾದಿಂದ ಇನ್ನೊಂದು ಚಿತ್ರದಲ್ಲಿ ನಾಯಕ ನಟಿಸುವ ಅವಕಾಶ ಪಡೆದಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದರು.

    ಮುಸ್ತಾಫಾ ಪಾತ್ರಧಾರಿ ಶಿಶಿರ್‌ ಬೈಕಾಡಿ ಮಾತನಾಡಿ, ಇಂತಹ ಒಳ್ಳೆ ತಂಡದ ಜೊತೆ ಸಿನಿಮಾ ಮಾಡಲು ಅದೃಷ್ಟ ಮಾಡಿದ್ದೇನೆ. ನನ್ನ ಮೊದಲ ಸಿನಿಮಾಗೆ ಇಷ್ಟು ಮಟ್ಟದ ರೆಸ್ಪಾನ್ಸ್ ಸಿಕ್ಕಿರುವುದು ಖುಷಿಕೊಟ್ಟಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಜನ ಸ್ವೀಕರಿಸುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಜನ ತುಂಬಾ ಪ್ರೀತಿ ಮಾಡ್ತಿದ್ದಾರೆ ಎಂದು ಸಂಸತಪಟ್ಟರು.

    ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ. ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.

     

    ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ರಾಜ್ಯ ಹಾಗೂ ಹೊರ ದೇಶದಲ್ಲಿ 80ಕ್ಕೂ ಹೆಚ್ಚು ಸೆಂಟರ್ ಗಳಲ್ಲಿ ಮೂರನೇ ವಾರವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದುಬೈ, ಅಮೆರಿಕಾ, ಯುರೋಪ್ ದೇಶದಲ್ಲಿ ರಿಲೀಸ್ ಆಗಿರುವ ಪೂರ್ಣಚಂದ್ರ ತೇಜಸ್ವಿ ಕಥೆಗೆ ಭರಪೂರ ಪ್ರತಿಕ್ರಿಯೆ ದೊರೆಯುತ್ತಿದೆ.

  • ದಿ ಕೇರಳ ಸ್ಟೋರಿ ಸಿನಿಮಾ: ತೆರಿಗೆ ವಿನಾಯತಿ ಘೋಷಿಸಿದ ಸರಕಾರ

    ದಿ ಕೇರಳ ಸ್ಟೋರಿ ಸಿನಿಮಾ: ತೆರಿಗೆ ವಿನಾಯತಿ ಘೋಷಿಸಿದ ಸರಕಾರ

    ದಾ ಶರ್ಮಾ (The Kerala Story) ಮುಖ್ಯಭೂಮಿಕೆಯ ‘ದಿ ಕೇರಳ ಸ್ಟೋರಿ’ ಸಿನಿಮಾ ನಿನ್ನೆಯಷ್ಟೇ ರಿಲೀಸ್ ಆಗಿದೆ. ಚಿತ್ರಕ್ಕೆ ಬಾಕ್ಸ್ ಆಫೀಸಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಈ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಂತೆಯೇ ಚಿತ್ರಕ್ಕೆ ಜೀವ ಬಂದಂತಾಗಿದೆ. ಹಲವರು ಚಿತ್ರದ ಬಗ್ಗೆ ಮತ್ತೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ.

    ದಿ ಕಾಶ್ಮೀರ ಫೈಲ್ಸ್ ಸಿನಿಮಾದ ರೀತಿಯಲ್ಲೇ ದಿ ಕೇರಳ ಸ್ಟೋರಿ ಸಿನಿಮಾವನ್ನು ಜನರು ಸ್ವೀಕರಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ, ಅಷ್ಟೊಂದು ಪ್ರತಿಕ್ರಿಯೆ ಬಂದಂತೆ ಕಾಣುತ್ತಿಲ್ಲ. ದೇಶದಾದ್ಯಂತ ದಿನದ ಗಳಿಕೆ 7-8 ಕೋಟಿ ಎಂದು ಅಂದಾಜಿಸಲಾಗಿದೆ. ಆದರೂ, ಈ ಸಿನಿಮಾವನ್ನು ಎಲ್ಲರಿಗೂ ತಲುಪಿಸಬೇಕು ಎನ್ನುವ ಕಾರಣಕ್ಕಾಗಿ ಮಧ್ಯಪ್ರದೇಶ ಸರಕಾರವು ತೆರಿಗೆ ವಿನಾಯತಿ (Tax Exemption) ಘೋಷಣೆ ಮಾಡಿದೆ. ಇದನ್ನೂ ಓದಿ:ಬಣ್ಣದ ಲೋಕಕ್ಕೆ ಡಾ ಬ್ರೋ- ‘ಡೇರ್ ಡೆವಿಲ್ ಮುಸ್ತಾಫಾ’ಗೆ ಬೆಂಬಲ

    ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲಿ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.

    ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

  • ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾಗೆ ಕರ್ನಾಟಕ ಸರಕಾರವು ತೆರಿಗೆ ವಿನಾಯತಿ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಿನಿಮಾವನ್ನು ವೀಕ್ಷಿಸಿ ಎರಡ್ಮೂರು ದಿನಗಳು ಕಳೆದ ನಂತರ ಇಂಥದ್ದೊಂದು ನಿರ್ಧಾರ ಪ್ರಕಟಿಸಿದ್ದಾರೆ. ಈ ಬೆನ್ನೆಲ್ಲೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದು ಈಗ ವೈರಲ್ ಆಗಿದೆ. ಅಷ್ಟಕ್ಕೂ ಮಂಸೋರೆ ಅವರ ಅಸಮಾಧಾನ ಯಾರ ಮೇಲೆ? ಅವರ ಪತ್ರವನ್ನೇ ಓದಿ..

    ಕರ್ನಾಟಕದ ಮುಖ್ಯಮಂತ್ರಿಗಳಾದ Chief Minister of Karnataka ಬಸವರಾಜ ಬೊಮ್ಮಾಯಿ ಅವರಿಗೆ ನಮಸ್ಕಾರ.

    ನನ್ ಹೆಸರು,

    ಮಂಸೋರೆ,  ಕನ್ನಡ ಸಿನೆಮಾ ನಿರ್ದೇಶಕ.

    ತಾವು ಕನ್ನಡ ಸಿನೆಮಾ, ಚಾರ್ಲಿ 777ಗೆ ನಿರ್ಮಾಪಕರ ಕೋರಿಕೆಯ ಮೇರೆಗೆ , ಸದರಿ ಸಿನೆಮಾಗೆ 100% ಜಿಎಸ್‌ಟಿ ಇಂದ ವಿನಾಯಿತಿ ಕೊಟ್ಟಿರುವುದು ತುಂಬಾ ಸಂತೋಷದ ವಿಷಯ. ಕನ್ನಡ ಸಿನೆಮಾಗಳ ಏಳಿಗೆಗೆ ಇದು ಅತ್ಯವಶ್ಯಕ. ಜೊತೆಗೆ ಈ ಹಿಂದೆ ಯಾವುದೋ ಅನ್ಯ ಭಾಷೆಯ ಸಿನೆಮಾಗು ತಾವು 100% ಜಿಎಸ್‌ಟಿ ತೆರಿಗೆ ವಿನಾಯಿತಿ ಕೊಟ್ಟಿದ್ದೀರಿ ಎಂದು ಯಾವುದೋ ಸುದ್ದಿ ಪತ್ರಿಕೆಯಲ್ಲಿ ಓದಿದ ನೆನಪು. ಈಗ ಈ ಪತ್ರವನ್ನು ತಮಗೆ ಬರೆಯುತ್ತಿರುವುದರ ಕಾರಣವನ್ನು ಮೊದಲಿಗೆ ತಮಗೆ ವಿವರಿಸುತ್ತೇನೆ. ತಾವು ಮುಖ್ಯಮಂತ್ರಿ ಆಗುವ ಮೊದಲು, ತಮ್ಮ ಬಿಜೆಪಿ ಸರ್ಕಾರ ಬರುವ ಮೊದಲು ಕನ್ನಡದ ಸಿನೆಮಾಗಳಿಗೆ ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ (ಹೊರ ರಾಜ್ಯದಲ್ಲಿ ಚಿತ್ರೀಕರಣವಾಗುವುದಾದರೆ ಅದಕ್ಕೆ ಸೂಕ್ತ ಕಾರಣ ಕೊಡಬೇಕಿತ್ತು) ಎಲ್ಲಾ ಕನ್ನಡ ಸಿನೆಮಾಗಳಿಗೆ 100% ತೆರಿಗೆ ವಿನಾಯಿತಿ ಇತ್ತು ಎಂಬ ವಿಷಯ ತಮಗೆ ಗೊತ್ತಿತ್ತೇ?

    ಕನ್ನಡದ ಸಿನೆಮಾಗಳಿಗೆ ಇದ್ದ ಈ ವಿನಾಯಿತಿಯನ್ನು ಕನ್ನಡಿಗರ ಕೈಯಿಂದ (ಕನ್ನಡದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದು ಕಿತ್ತುಕೊಂಡಿದ್ದು) ನಿಮ್ಮದೇ ಆದ ಬಿಜೆಪಿ ಸರ್ಕಾರ ಎಂಬುದು ನಿಮಗೆ ತಿಳಿದಿದೆಯೇ? ಅದು ಜಿಎಸ್‌ಟಿ ಎಂಬ ಹೆಮ್ಮಾರಿಯ ಹೆಸರಲ್ಲಿ ಎಂಬುದು ತಮಗೆ ತಿಳಿದಿದೆಯೇ? ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್

    ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರು ಕನ್ನಡ ಸಿನೆಮಾಗಳ ಮೇಲೆ ಮನರಂಜನಾ ತೆರಿಗೆ ವಿಧಿಸಲು ಹೋದಾಗ, ನಮ್ಮೆಲ್ಲರ ಪಾಲಿನ ಅಣ್ಣಾವ್ರು, ಡಾ. ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗವನ್ನೇ ತ್ಯಜಿಸಿ ತಮ್ಮ ಹಳ್ಳಿಗೆ ಹೋಗುವ ನಿರ್ಧಾರ ಮಾಡುತ್ತಾರೆ, ಆಗ ಮುಖ್ಯಮಂತ್ರಿಗಳೇ ಅಣ್ಣಾವ್ರ ಮನೆಗೆ ಹೋಗಿ ಅವರ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅವರ ಮನವೊಲಿಸಿ ಅವರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಮತೆ ಒಪ್ಪಿಸುತ್ತಾರೆ ಹಾಗು ತೆರಿಗೆ ವಿಧಿಸುವ ತಮ್ಮ ನಿಲುವನ್ನು ಹಿಂತೆಗೆದುಕೊಳ್ಳುತ್ತಾರೆ. (ಹಿರಿಯ ಪತ್ರಕರ್ತರಾದ ಬಿ.ವಿ.ವೈಕುಂಠರಾಜು ರವರ ಸಿನೆಮಾತು ಪುಸ್ತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ  ಉಲ್ಲೇಖಿಸಲಾಗಿದೆ) ಅದೇ ಮುಂದೆ ಕನ್ನಡ ಹಾಗೂ ಕನ್ನಡ ನೆಲದಲ್ಲಿ ತಯಾರಾಗುವ ಎಲ್ಲಾ ಸಿನೆಮಾಗಳಿಗೂ 100% ತೆರಿಗೆ ವಿನಾಯಿತಿ ನೀಡಲಾಗುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಂತಹ ಮಹಾನುಭಾವರ ನಿರ್ಧಾರದಿಂದ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದ ಸೌಲಭ್ಯವನ್ನು ಕಿತ್ತುಕೊಂಡಿದ್ದು ಜಿಎಸ್‌ಟಿ ನೆಪದಲ್ಲಿ ನಿಮ್ಮದೇ ಬಿಜೆಪಿ ಸರ್ಕಾರ ಎಂಬುದು ತಮಗೆ ತಿಳಿದಿದೆಯೇ?

    ಈಗ ವಾಪಸ್ಸು ನಿಮ್ಮ ಆಡಳಿತದ ಸರ್ಕಾರದ ವಿಷಯಕ್ಕೆ ಬರುವುದಾದರೆ, ಶ್ವಾನದ ಕಾಳಜಿಯಿಂದ ತಾವು ಆ ‘ಒಂದು’ ಕನ್ನಡ ಸಿನೆಮಾಗೆ ಮಾತ್ರ 100% ಜಿಎಸ್‌ಟಿ ತೆರಿಗೆ ವಿನಾಯಿತಿ ನೀಡಲು ಆ ಹಣವನ್ನು ತಾವು ತಮ್ಮ ಜೇಬಿನಿಂದ ನೀಡುತ್ತಿದ್ದೀರ ಎಂದು ತಿಳಿಯಲು ಡಾ.ಬಿ.ಆರ್.ಅಂಬೇಡ್ಕರ್ ಸರ್ ಬರೆದಿರುವ, ಸಾಂವಿಧಾನಿಕ ಹಕ್ಕನ್ನು ಪಡೆದಿರುವ ಕರ್ನಾಟಕದ ಪ್ರಜೆಗಳಾಗಿ ಕೇಳಿತ್ತಿದ್ದೇನೆ, ದಯವಿಟ್ಟು ತಿಳಿಸಿ.

    ಶ್ವಾನದಷ್ಟೇ ಅಮೂಲ್ಯವಾದ ಜೀವ ಪಡೆದಿರುವ ಮಾನವೀಯ, ಮನುಷ್ಯತ್ವದ ಅಂಶ ಎತ್ತಿ ಹಿಡಿಯುವ ನೂರಾರು ಕನ್ನಡ ಸಿನೆಮಾಗಳು ಪ್ರತೀ ವರ್ಷ ತಯಾರಾಗುತ್ತಿವೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವಾಗುತ್ತಿರುವ ಅನೇಕ ಕನ್ನಡ ಚಿತ್ರಗಳು ಕನ್ನಡ ನೆಲದಲ್ಲಿ ತಯಾರಾಗುತ್ತಿವೆ. ಉದಾ : ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯ ವೈಕುಂಟಕ್ಕೆ, ಅಮೃತಮತಿ, ನೀಲಿ ಹಕ್ಕಿ ಇನ್ನೂ ಬಹಳಷ್ಟು ಸಿನೆಮಾ ಇದೆ. ಜೊತೆಗೆ ಅಂತರ್ರಾಷ್ಟ್ರೀಯ ಚಿತ್ರೋತ್ಸವಕ್ಕೆ ಹೋಗದಿದ್ದರೂ ಸಹ, ಅನೇಕ ಕನ್ನಡ ಸಿನೆಮಾಗಳು ಅತ್ತ್ಯುತ್ತಮವಾದ ಮಾನವೀಯ ಗುಣವುಳ್ಳ ಸಿನೆಮಾಗಳು ಕಳೆದ ನಾಲ್ಲೈದು ವರ್ಷಗಳಲ್ಲೇ ಸಾಕಷ್ಟಿವೆ, ಅದು ಯಾವುದಕ್ಕೂ ನೀಡದ ೧೦೦% ತೆರಿಗೆ ವಿನಾಯಿತಿ ಕೇವಲ ಒಂದು ಸಿನೆಮಾಗೆ ನೀಡುವುದು ನಮ್ಮೆಲ್ಲರ ಮೆಚ್ಚಿನ ಅಣ್ಣಾವ್ರ ಆಶಯಕ್ಕೆ ತದ್ವಿರುದ್ಧವಾದದ್ದು ಎಂದು ತಮಗೆ ಮನವರಿಕೆ ಮಾಡಲು ಇಚ್ಚಿಸುತ್ತೇನೆ. ಚಾರ್ಲಿ ಸಿನೆಮಾದ ನಿರ್ಮಾಪಕರೂ ಸೇರಿದಂತೆ ಕನ್ನಡದ ಯಾರೊಬ್ಬ ನಿರ್ಮಾಪಕರು ಅಣ್ಣಾವ್ರ ಆಶಯ ಮೀರಿ, ಕನ್ನಡ ಚಿತ್ರರಂಗವನ್ನು ಹೊರಗಿಟ್ಟು, ಸ್ವಾರ್ಥಿಗಳಂತೆ ತಮ್ಮ ಸಿನೆಮಾಗೆ ಮಾತ್ರ ೧೦೦% ತೆರಿಗೆ ವಿನಾಯಿತಿ ಕೊಡಬೇಕೆಂದು ಹಂಬಲಿಸಲಾರರು, ತಮ್ಮಲ್ಲಿ ಬೇಡಿಕೊಳ್ಳಲಾರರು ಎಂದು ನನ್ನ ಬಲವಾದ ನಂಬಿಕೆ. ಇದು ಕನ್ನಡ ಚಿತ್ರರಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ನಿರ್ಮಾಪಕರ, ತಂತ್ರಜ್ಞ, ಶ್ರಮಿಕ ಹಾಗೂ ಕಲಾವಿದರ ಅನ್ನದ ಪ್ರಶ್ನೆಯಾಗಿರುವುದರಿಂದ ಹಾಗೂ ನಮ್ಮ ನೆಚ್ಚಿನ ಅಣ್ಣಾವ್ರು ಡಾ. ರಾಜ್ಕುಮಾರ್ ಅವರ ಆಶಯವೂ ಆಗಿರುವ ಕಾರಣದಿಂದಾಗಿ ಕನ್ನಡದ, ಕನ್ನಡದ ನೆಲದಲ್ಲೇ ಸಂಪೂರ್ಣವಾಗಿ ತಯಾರಾಗುವ ಪ್ರತೀ ಸಿನೆಮಾಗೂ ಈ ಹಿಂದೆ ಇದ್ದಂತೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುತ್ತೀರಾ ಎಂಬ ನಂಬಿಕೆಯಿಂದ ಈ ಪತ್ರ ಬರೆಯುತ್ತಿದ್ದೇನೆ.

    ಸಿನೆಮಾ ನಿರ್ದೇಶಕ

    ಮಂಸೋರೆ

    Live Tv

  • ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಆದಿತ್ಯನಾಥ್

    ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಆದಿತ್ಯನಾಥ್

    ನಾಳೆ ವಿಶ್ವದಾದ್ಯಂತ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ರಿಲೀಸ್ ಆಗುತ್ತಿದೆ. ಒಂದು ಕಡೆ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ನಿಷೇಧ ಹೇರಲಾಗಿದೆ. ಭಾರತದಲ್ಲಿ ಈ ಸಿನಿಮಾಗೆ ಕೆಲ ಕಡೆ ತೆರಿಗೆ ವಿನಾಯತಿ ಘೋಷಿಸಲಾಗುತ್ತಿದೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

    ನಿನ್ನೆಯಷ್ಟೇ ಗಣ್ಯರಿಗಾಗಿ ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಿದ್ದರು ನಟ ಅಕ್ಷಯ್ ಕುಮಾರ್. ಈ ಪ್ರದರ್ಶನದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತಾ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಿನಿಮಾ ವೀಕ್ಷಿಸಿದ ನಂತರ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಎಲ್ಲರೂ ನೋಡಬೇಕಿದೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ ಯೋಗಿ ಆದಿತ್ಯನಾಥ್. ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿಯೂ ಇವರು ತೆರಿಗೆ ವಿನಾಯತಿ ಘೋಷಿಸಿದ್ದರು. ಆನಂತರ ಅನೇಕ ರಾಜ್ಯಗಳು ದಿ ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯತಿ ಘೋಷಿಸಿದ್ದವು.