Tag: ತೆರಿಗೆ ಇಲಾಖೆ

  • ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

    ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

    ಟಿ ಅನುಷ್ಕಾ ಶರ್ಮಾ ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಇಲಾಖೆಗಳ ನಡೆಗೆ ಬೇಸತ್ತು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ಸುಳ್ಳು ತೆರಿಗೆ ಹಾಕಿ, ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಈ ಹಿಂದೆ ತೆರಿಗೆ ಇಲಾಖೆಯು ಮಾರಾಟಕ್ಕೆ ಸಂಬಂಧಿಸಿದಂತೆ 2012-13 ಹಾಗೂ 2013-14ನೇ ಸಾಲಿನ ತೆರಿಗೆಯನ್ನು ಪಾವತಿಸುವಂತೆ ಮಾರಾಟಾ ತೆರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದರು. ಇದನ್ನು ಪ್ರಶ್ನೆ ಮಾಡಿ ನಟಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    ಅನುಷ್ಕಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪಾಲ್ಗೊಂಡಿದ್ದಾರೆ. ನಿರೂಪಣೆ ಮಾಡಿದ್ದಾರೆ. ದೇಶ ವಿದೇಶಗಳ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರೂ, ಮಾರಾಟ ತೆರಿಗೆಯನ್ನು ಪಾವತಿಸಿಲ್ಲ. ಹಾಗಾಗಿ ಕೂಡಲೇ ಪಾವತಿಸಬೇಕು ಎಂದು ಮಾರಾಟ ತೆರಿಗೆ ಆಯುಕ್ತರು ಸೂಚಿಸಿದ್ದರು.

    ಈ ಕಾರ್ಯಕ್ರಮಗಳು ಹಾಗೂ ಸಮಾರಂಭಗಳು ಮಾರಾಟ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಮತ್ತು ಆಯಾ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ಅನುಷ್ಕಾ ಹೊಂದಿಲ್ಲವೆಂದು ಇವರ ತೆರಿಗೆ ಸಲಹೆಗಾರರು ಮೊದಲು ಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ, ಸ್ವತಃ ಅನುಷ್ಕಾ ಅವರೇ ಅರ್ಜಿ ಸಲ್ಲಿಸಬೇಕು ಎಂದು ಬಾಂಬೆ ಹೈಕೋರ್ಟ್ ಸಲಹೆ ನೀಡಿತ್ತು. ಕೋರ್ಟ್ ಸಲಹೆ ಮೇರೆಗೆ ಅನುಷ್ಕಾ ಅವರೇ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಇದನ್ನೂ ಓದಿ: ಗೆಳೆಯ ವಸಿಷ್ಠ ಸಿಂಹಗೆ ವಿಭಿನ್ನವಾಗಿ ವಿಶ್ ಮಾಡಿದ ಡಾಲಿ ಧನಂಜಯ್

    ತಾವು ಮಾಡಿರುವ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ತಾವು ಮಾರಾಟ ಮಾಡಿಲ್ಲ. ಅದರ ಹಕ್ಕುಗಳು ತಮ್ಮ ಬಳಿ ಇಲ್ಲ. ಕಾರ್ಯಕ್ರಮಗಳನ್ನು ಮಾಡಿದ ಸಂಸ್ಥೆಗಳೇ ಅದರ ರೈಟ್ಸ್ ಹೊಂದಿರುವುದರಿಂದ ಸುಖಾಸುಮ್ಮನೆ ತಮಗೆ ನೋಟಿಸ್ ನೀಡಲಾಗಿದೆ. ಈ ನೋಟಿಸ್ ಅನ್ನು ಕೈ ಬಿಡಬೇಕು ಎಂದು ಕೋರ್ಟ್ ಗೆ ಅನುಷ್ಕಾ ಮನವಿ ಮಾಡಿದ್ದಾರೆ. ಈ ಕುರಿತು ಮಾರಾಟ ತೆರಿಗೆ ಇಲಾಖೆಗೆ ಉತ್ತರಿಸುವಂತೆ ಕೋರ್ಟ್ ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ಯಾನ್ ಕಾರ್ಡ್ ಕಳೆದುಕೊಂಡ ಪೀಟರ್ಸನ್‌ಗೆ ಸಹಾಯ ಮಾಡಿದ ಭಾರತೀಯ ತೆರಿಗೆ ಇಲಾಖೆ

    ಪ್ಯಾನ್ ಕಾರ್ಡ್ ಕಳೆದುಕೊಂಡ ಪೀಟರ್ಸನ್‌ಗೆ ಸಹಾಯ ಮಾಡಿದ ಭಾರತೀಯ ತೆರಿಗೆ ಇಲಾಖೆ

    ನವದೆಹಲಿ: ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಭಾರತಕ್ಕೆ ಭೇಟಿ ನೀಡಲು ಬೇಕಾದ ಪ್ಯಾನ್ ಕಾರ್ಡ್‌ನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಯಾರದರೂ ಸಹಾಯ ಮಾಡುವ ಬಗ್ಗೆ ಟ್ವೀಟ್ ಮಾಡಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಈಗ ಭಾರತೀಯ ಆದಾಯ ತೆರಿಗೆ ಇಲಾಖೆ ಸಹಾಯ ಮಾಡಿದೆ.

    ಪೀಟರ್ಸನ್ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದ ನಂತರ ಐಪಿಎಲ್ ಪಂದ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ಯಾನ್ ಕಾರ್ಡ್‌ನ್ನು ಕಳೆದುಕೊಂಡಿರುವ ಬಗ್ಗೆ ದುಃಖವನ್ನು ಹಂಚಿಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?: ಭಾರತ ದಯವಿಟ್ಟು ಸಹಾಯ ಮಾಡಿ, ನಾನು ನನ್ನ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದೇನೆ ಮತ್ತು ಸೋಮವಾರ ಭಾರತಕ್ಕೆ ಪ್ರಯಾಣಿಸುತ್ತಿದ್ದೇನೆ. ಆದರೆ ಕೆಲಸಕ್ಕಾಗಿ ನನಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ದಯವಿಟ್ಟು ನನಗೆ ಸಹಾಯ ಮಾಡಲು ನಾನು ಆದಷ್ಟು ಬೇಗ ಸಂಪರ್ಕಿಸಬಹುದಾದ ಯಾರಿಗಾದರೂ ದಯವಿಟ್ಟು ನನ್ನನ್ನು ನಿರ್ದೇಶಿಸಬಹುದೇ? ಎಂದು ತಿಳಿಸಿದ್ದಾರೆ. ಪೀಟರ್ಸನ್ ನಂತರ ತಮ್ಮ ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿದ್ದಾರೆ. ದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಯತ್ನ: ಸಂಜಯ್ ರಾವತ್

    ಈ ಬಗ್ಗೆ ಭಾರತೀಯ ಆದಾಯ ತೆರಿಗೆ ಇಲಾಖೆಯೆ ಅಧಿಕೃತ ಖಾತೆ ಪ್ರತಿಕ್ರಿಯಿಸಿದ್ದು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ನಿಮ್ಮ ಪ್ಯಾನ್ ವಿವರಗಳಿದ್ದರೆ, ಪ್ಯಾನ್ ಕಾರ್ಡ್‌ನ್ನು ನಕಲು ಇದ್ದರೆ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ದಯವಿಟ್ಟು ಈ ಲಿಂಕ್‌ಗಳಿಗೆ ಭೇಟಿ ನೀಡಿ ಎಂದು ತಿಳಿಸಿದೆ. ಇದಕ್ಕೆ ಧನ್ಯವಾದ ತಿಳಿಸಿರುವ ಪೀಟರ್ಸನ್ ಅವರು ಮಾಹಿತಿಗಳನ್ನು ಇಮೇಲ್ ಮಾಡಿರುವುದಾಗಿ ತಿಳಿಸಿದ್ದಾರೆ. ದನ್ನೂ ಓದಿ: ಬಿಜೆಪಿ ಬೆಂಗಾವಲು ಪಡೆ ಮೇಲೆ ಎಸ್‍ಪಿ ಗೂಂಡಾಗಳಿಂದ ದಾಳಿ: ಕೇಶವ್ ಪ್ರಸಾದ್ ಮೌರ್ಯ

    ಮಾಜಿ ಇಂಗ್ಲೆಂಡ್ ನಾಯಕ ಪೀಟರ್ಸನ್‌ಗೆ ಟ್ವಿಟರ್‌ನಲ್ಲಿ ಸುಮಾರು 3.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕಳೆದ ತಿಂಗಳ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಪೀಟರ್ಸನ್ ಕಾಣಿಸಿಕೊಂಡಿದ್ದರು. ಇವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್‌ಜೈಂಟ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಟವಾಡಿದ್ದಾರೆ.

  • ಇಬ್ಬರ ಬ್ಯಾಗಿನಲ್ಲಿ ಬರೋಬ್ಬರಿ 81 ಲಕ್ಷ ಹಣ ಪತ್ತೆ

    ಇಬ್ಬರ ಬ್ಯಾಗಿನಲ್ಲಿ ಬರೋಬ್ಬರಿ 81 ಲಕ್ಷ ಹಣ ಪತ್ತೆ

    ಭುವನೇಶ್ವರ: ಟ್ವಿನ್ ಸಿಟಿ ಕಮಿಷನರೇಟ್ ಪೊಲೀಸರು ಶನಿವಾರ ರಾತ್ರಿ ಒಡಿಶಾದ ಕಟಕ್ ನಗರದ ಬಾದಂಬಾಡಿ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳಿಂದ ಬರೋಬ್ಬರಿ 81 ಲಕ್ಷ ರೂ. ಹಣವನ್ನು ವಶ ಪಡಿಸಿಕೊಂಡಿದ್ದಾರೆ.

    ಬಂಧಿತರು ಪಶ್ಚಿಮ ಬಂಗಾಳದ ಮದಿನಿಪುರ ಜಿಲ್ಲೆಯವರು ಎಂದು ಗುರುತಿಸಲಾಗಿದ್ದು, ಅವರಿಬ್ಬರು ತಾವೂ ಆಭರಣ ವ್ಯಾಪಾರಿಗಳು ಎಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇಬ್ಬರು ಶನಿವಾರ ತಡರಾತ್ರಿ ಬ್ಯಾಗ್‍ನಲ್ಲಿ ಹಣವನ್ನು ತುಂಬಿಕೊಂಡು ಸಾಗಿಸುತ್ತಿದ್ದರು. ಇಬ್ಬರು ಬದಂಬಾಡಿ ಪೊಲೀಸ್ ಠಾಣೆ ಬಳಿ ಬರುತ್ತಿದ್ದಂತೆ ಅನುಮಾನದ ಮೇರೆಗೆ ಪೊಲೀಸರು ಅವರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರ ಬಳಿಯಿದ್ದ ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಆಗ ಬ್ಯಾಗಿನಲ್ಲಿ ಬರೋಬ್ಬರಿ 81 ಲಕ್ಷ ನಗದು ಪತ್ತೆಯಾಗಿದ್ದು, ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಇಬ್ಬರು ವ್ಯಕ್ತಿಗಳಿಂದ ಹಣ ವಶಪಡಿಸಿಕೊಂಡ ಬಗ್ಗೆ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಆರೋಪಿಗಳು ಈ ಹಣವನ್ನು ತಮ್ಮ ವ್ಯವಹಾರದಲ್ಲಿ ಹೂಡಿಕೆ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

  • ಬೀದಿ ವ್ಯಾಪಾರಿಯ ಆದಾಯ 60 ಲಕ್ಷಕ್ಕೂ ಹೆಚ್ಚು- ಐಟಿಯಿಂದ ನೋಟಿಸ್ ಜಾರಿ

    ಬೀದಿ ವ್ಯಾಪಾರಿಯ ಆದಾಯ 60 ಲಕ್ಷಕ್ಕೂ ಹೆಚ್ಚು- ಐಟಿಯಿಂದ ನೋಟಿಸ್ ಜಾರಿ

    ಲಕ್ನೋ: ಬೀದಿಯಲ್ಲಿ ಕಚೋರಿ, ಸಮೋಸ ಮಾರಾಟದ ಮೂಲಕ ವಾರ್ಷಿಕ 60 ಲಕ್ಷದಿಂದ 1 ಕೋಟಿ ರೂ. ಆದಾಯ ಪಡೆಯುತ್ತಿದ್ದ ಬೀದಿ ವ್ಯಾಪಾರಿ ಮೇಲೆ ತೆರಿಗೆ ಇಲಾಖೆಯ ಕಣ್ಣುಬಿದ್ದಿದ್ದು, ವ್ಯಾಪಾರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಉತ್ತರ ಪ್ರದೇಶದ ಅಲಿಗಢ್‍ನಲ್ಲಿರುವ ಬೀದಿ ವ್ಯಾಪಾರಿ ಮುಖೇಶ್ ಅವರು ಕೇವಲ ಕಚೋರಿ, ಸಮೋಸ ಮಾರಾಟ ಮಾಡುವುದರ ಮೂಲಕವೇ ಕೋಟ್ಯಧಿಪತಿ ಆಗಿದ್ದಾರೆ.

    ಹೌದು. ಅಲಿಗಢ್‍ನಲ್ಲಿರುವ ಸೀಮಾ ಸಿನಿಮಾ ಹಾಲ್ ಬಳಿ `ಮುಖೇಶ್ ಕಚೋರಿ’ ಹೆಸರಿನ ಅಂಗಡಿಯನ್ನು ಮುಖೇಶ್ ನಡೆಸುತ್ತಿದ್ದಾರೆ. ಇವರು ತಯಾರಿಸುವ ಕಚೋರಿ, ಸಮೋಸದ ರುಚಿಗೆ ಇಲ್ಲಿನ ತಿಂಡಿ ಪ್ರಿಯರು ಫಿದಾ ಆಗಿದ್ದು, ಪ್ರತಿದಿನ ಇಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ.

    ಕೆಲವು ದಿನಗಳ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಗೆ ಮುಖೇಶ್ ಆದಾಯದ ಮೇಲೆ ಯಾರೋ ದೂರು ನೀಡಿದ್ದರು. ಹೀಗಾಗಿ ರಾಜ್ಯ ತೆರಿಗೆ ಇಲಾಖೆಯು ಮುಖೇಶ್ ಮಾರಾಟದ ಬಗ್ಗೆ ದೂರು ಸ್ವೀಕರಿಸಿ, ಈ ಬಗ್ಗೆ ಪರಿಶೀಲನೆ ನಡೆಸಲು ಕೆಲವು ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿತ್ತು. ಬಳಿಕ ತೆರಿಗೆ ಅಧಿಕಾರಿಗಳು ಪಕ್ಕದ ಅಂಗಡಿಯಲ್ಲಿ ನೆಲೆಯೂರಿ ಮುಖೇಶ್ ಪ್ರತಿದಿನ ಎಷ್ಟು ವ್ಯಾಪಾರ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಿ ದಿನನಿತ್ಯದ ವ್ಯವಹಾರದ ಲೆಕ್ಕಾಚಾರ ಹಾಕಿದ್ದಾರೆ.

    ಈ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಮತ್ತು ಮಾರಾಟವಾದ ಆಹಾರ ಪದಾರ್ಥಗಳ ಸಂಖ್ಯೆಯನ್ನು ಆಧರಿಸಿ ಅವರ ಅಂದಾಜಿನ ಪ್ರಕಾರ, ಮುಖೇಶ್ ಅವರ ವಾರ್ಷಿಕ ವಹಿವಾಟು ಸುಮಾರು 60 ಲಕ್ಷದಿಂದ 1 ಕೋಟಿ ರೂ.ವರೆಗೂ ಇದೆ ಎನ್ನಲಾಗಿದೆ.

    ಅಷ್ಟೇ ಅಲ್ಲದೆ ಮುಖೇಶ್ ತನ್ನ ಅಂಗಡಿಯನ್ನು ಜಿಎಸ್‍ಟಿ ಅಡಿಯಲ್ಲಿ ನೋಂದಾಯಿಸಿರಲಿಲ್ಲ. ಸುಮಾರು 12 ವರ್ಷಗಳಿಂದ ಈ ವ್ಯಾಪಾರ ನಡೆಸುತ್ತಿದ್ದರೂ ಈವರೆಗೇ ಯಾವುದೇ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿರಲಿಲ್ಲ. ಆದ್ದರಿಂದ ಐಟಿ ಮುಖೇಶ್‍ಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ

  • ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ – 12 ಉನ್ನತ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

    ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ – 12 ಉನ್ನತ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

    ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಮೋದಿ ಸರ್ಕಾರ 12 ಮಂದಿ ತೆರಿಗೆ ಅಧಿಕಾರಗಳಿಗೆ ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಸೂಚಿಸಿದೆ.

    ಭಾರತೀಯ ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಮುಖ್ಯ ಕಮೀಷನರ್ ಸ್ಥಾನದಲ್ಲಿರುವ ಹಿರಿಯ ಅಧಿಕಾರಗಳು, ಹಣಕಾಸು ಸಚಿವಾಲಯದ ಪ್ರಧಾನ ಆಯುಕ್ತರು ಮತ್ತು ಆದಾಯ ತೆರಿಗೆ ಇಲಾಖೆಯ ಕಮೀಷನರ್ ಸೇರಿ ಒಟ್ಟು 12 ಜನ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಿದೆ.

    ಈ 12 ಅಧಿಕಾರಿಗಳ ಪೈಕಿ ಕೆಲವರ ಮೇಲೆ ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪವಿದೆ. ಕೆಲವರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ 56 (ಜೆ) ನಿಯಮದ ಅಡಿ ನಿವೃತ್ತಿ ಹೊಂದಬೇಕು ಎಂದು ಹಣಕಾಸು ಸಚಿವಾಲಯ ನಿರ್ದೇಶನ ಮಾಡಿದೆ.

    ಈ 12 ಜನ ಅಧಿಕಾರಿಗಳ ಪಟ್ಟಿಯಲ್ಲಿ ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿ ಅಶೋಕ್ ಅಗರ್‍ವಾಲ್ ಇದ್ದಾರೆ. ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿಗೆ ಸಹಾಯ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಅಶೋಕ್ ಅಗರ್‍ವಾಲ್ ಮೇಲಿದೆ. ಇಬ್ಬರು ಮಹಿಳಾ ಐಆರ್‍ಎಸ್ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳದ ನೀಡಿದ್ದಾರೆ ಎಂಬ ಆರೋಪ ಬಂದಿರುವ ಎಸ್.ಕೆ ಶ್ರೀವಾಸ್ತವ ಅವರಿಗೂ ನಿವೃತ್ತಿ ಪಡೆಯುವಂತೆ ಸೂಚಿಸಲಾಗಿದೆ.

    ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಪಾದಿಸಿದ 1985 ಬ್ಯಾಚಿನ ಐಆರ್‍ಎಸ್‍ನ ಅಧಿಕಾರಿ ಹೋಮಿ ರಾಜ್ವಂಶ್ ಮತ್ತು ತಮಗೆ ಬೇಕಾದ ರೀತಿಯಲ್ಲಿ ಆದೇಶಗಳನ್ನು ನೀಡುತ್ತಿದ್ದ ಆರೋಪದ ಮೇಲೆ ಬಿ.ಬಿ ರಾಜೇಂದ್ರ ಪ್ರಸಾದ್ ಅವರನ್ನು ಕೊಡ ನಿವೃತ್ತರಾಗಬೇಕು ಎಂದು ಹಣಕಾಸು ಸಚಿವಾಲಯ ಸೂಚನೆ ನೀಡಿದೆ.

    ಇವರನ್ನು ಬಿಟ್ಟರೆ ಅಜಯ್ ಕುಮಾರ್ ಸಿಂಗ್, ಅಲೋಕ್ ಕುಮಾರ್ ಮಿತ್ರ, ಚಂದನ್ ಸೈನಿ ಭಾರ್ತಿ, ಅಂಡಸು ರವಿಂದರ್, ವಿವೇಕ್ ಬಾತ್ರಾ, ಸ್ವತಭ ಸುಮನ್ ಮತ್ತು ರಾಮ್ ಕುಮಾರ್ ಭಾರ್ಗವ ಅವರು ಕೂಡ ಪಟ್ಟಿಯಾಲ್ಲಿದ್ದಾರೆ ಎಂದು ವರದಿಯಾಗಿದೆ.

    ಹಣಕಾಸು ಇಲಾಖೆಯ 56 (ಜೆ) ನಿಯಮದ ಹಲವು ದಶಕಗಳಿಂದ ಅಸ್ವಿತ್ವದಲ್ಲಿದ್ದು ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಆದರೆ ಈಗ ಈ ನಿಯಮದ ಅಡಿ ನಿವೃತ್ತಿ ಪಡೆಯಲು ಸೂಚಿಸಿದ್ದು ಮಹತ್ವ ಎನಿಸಿಕೊಂಡಿದೆ.

  • ವಾಹನ ತಪಾಸಣೆ ವೇಳೆ 1.70 ಕೋಟಿ ಹಣ ಪತ್ತೆ

    ವಾಹನ ತಪಾಸಣೆ ವೇಳೆ 1.70 ಕೋಟಿ ಹಣ ಪತ್ತೆ

    ಚತ್ತೀಸ್‍ಗಢ: ಪ್ರತಿದಿನ ವಾಹನಗಳ ತಪಾಸಣೆ ವೇಳೆ ಪೊಲೀಸರು ರಾಯ್ಪುರದಲ್ಲಿ ಬರೋಬ್ಬರಿ 1.70 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

    ವಾಹನವೊಂದರಲ್ಲಿ ಹಣ ಸಾಗಾಣೆ ಮಾಡುತ್ತಿದ್ದರು. ಈ ವೇಳೆ ರಾಯ್ಪುರದಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ. ಈ ಸಂಬಂಧ ಹವಾಲಾ ನೆಟ್ವರ್ಕ್ ಮೂಲಕ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಬಂಧಿತರು ಹವಾಲಾ ದಂಧೆ ಮೂಲಕ ತಾವೂ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಗುಜರಾತ್‍ನ ಚೇತನ್ ಭಾಯ್ ಸೂಚನೆ ಮೇರೆಗೆ ಈ ಹಣವನ್ನು ಸಾಗಾಣೆ ಮಾಡುತ್ತಿದ್ದೇವೆ ಎಂದು ತಿಳಿಸಿರುವುದಾಗಿ ರಾಯ್‍ಪುರ್ ಎಸ್‍ಪಿ ಪ್ರಫೂಲ್ ಠಾಕೂರ್ ಹೇಳಿದ್ದಾರೆ.

    ಬಂಧಿತ ಆರೋಪಿಗಳು ಗುಜರಾತ್‍ನ ಪರ್ಟರ್ ಪ್ರದೇಶದವರಾಗಿದ್ದು, ದೇವೇಂದ್ರ ನಗರ ವಲಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಈ ಕೆಲಸ ಮಾಡಲು ತಿಂಗಳ ವೇತನ ಮತ್ತು ಕಮಿಷನ್ ಕೂಡ ನೀಡಲಾಗುತ್ತಿದೆ ಎಂದು ಠಾಕೂರ್ ತಿಳಿಸಿದ್ದಾರೆ.

    ಆರೋಪಿಗಳು ತನ್ನ ಮನೆಯ ವಿಳಾಸ ಹೇಳಿದ ಬಳಿಕ ಅಲ್ಲಿ ಕೂಡ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ನೋಟ್ ಕೌಟಿಂಗ್ ಯಂತ್ರ ಮತ್ತು 1.35 ಲಕ್ಷ ರೂ. ಹಣ ಸಿಕ್ಕಿದೆ. ಸದ್ಯಕ್ಕೆ ತೆರಿಗೆ ಇಲಾಖೆಯ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಸ್ಯಾಂಡಲ್‍ವುಡ್‍ಗೆ ಐಟಿ ಶಾಕ್ ನೀಡಿದ್ದು ಯಾಕೆ? – ನಿರ್ಮಾಪಕರು, ನಟರ ಮನೆ ಮೇಲಿನ ದಾಳಿಗೆ ಕಾರಣ ಇಲ್ಲಿದೆ

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್‍ವುಡ್ ನಟರು ಮತ್ತು ನಿರ್ಮಾಪಕ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

    ಸ್ಯಾಂಡಲ್‍ವುಡ್ ಇತಿಹಾಸದಲ್ಲೇ ಇದು ಅತಿದೊಡ್ಡ ಐಟಿ ದಾಳಿಯಾಗಿದ್ದು ನಟರಾದ ಪುನೀತ್, ಯಶ್, ಸುದೀಪ್, ಶಿವರಾಜ್ ಕುಮಾರ್, ನಿರ್ಮಾಪಕರಾದ ಸಿಆರ್ ಮನೋಹರ್, ರಾಕ್‍ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಜಯಣ್ಣ ನಿವಾಸದ ಮೇಲೆ ದಾಳಿ ನಡೆದಿದೆ.

    ದಾಳಿ ನಡೆಸಿದ್ದು ಯಾಕೆ?
    ರಿಯಲ್ ಎಸ್ಟೇಟ್ ಮತ್ತು ಫೈನ್ಯಾನ್ಶಿಯರ್ಸ್‍ ಗಳು ಬ್ಲಾಕ್ ಮನಿಯನ್ನು ವೈಟ್ ಮನಿ ಮಾಡಲು ಸಿನಿಮಾದಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇವರೆಲ್ಲ ಹೆಸರಾಂತ ನಿರ್ಮಾಪಕರ ಮೂಲಕ ದೊಡ್ಡ ದೊಡ್ಡ ಬಜೆಟ್ ಸಿನಿಮಾಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರು ಥಿಯೇಟರ್, ವಿತರಕರ ಮೂಲಕ ಕೋಟ್ಯಂತರ ರೂಪಾಯಿ ಸುಳ್ಳು ಲೆಕ್ಕ ನೀಡಿ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ದಾಳಿ ನಡೆದಿದೆ.

    ನಟರ ಮನೆ ಮೇಲೆ ದಾಳಿ ನಡೆಸಿದ್ದು ಯಾಕೆ?
    ಈಗ ನಟರು ಚಲನಚಿತ್ರದಲ್ಲಿ ಷೇರನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಲಾಭ ನಷ್ಟಕ್ಕೆ ನಿರ್ಮಾಪಕರು ಮಾತ್ರ ಹೊಣೆ ಆಗಿರುತ್ತಿದ್ದಾರೆ. ಹೀಗೆ ಬಂದ ಲಾಭವನ್ನು ಬ್ಲಾಕ್ ಮೂಲಕ ವೈಟ್ ಮಾಡುತ್ತಿದ್ದಾರೆ. ಕೇವಲ ಆದಾಯ ತೆರಿಗೆ ವಂಚನೆ ಮಾತ್ರ ಅಲ್ಲ. ಚಿತ್ರದಲ್ಲಿ ಬಂದ ಲಾಭವನ್ನು ಗೌಪ್ಯವಾಗಿಟ್ಟು ಬ್ಲಾಕ್ ಮನಿಯನ್ನು ವೈಟ್ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಈ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಲೆಕ್ಕ ಪತ್ರಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

    ಸುದೀಪ್, ಶಿವರಾಜ್ ಕುಮಾರ್ ಅಭಿನಯದ ‘ದಿ ವಿಲನ್’ ಅಕ್ಟೋಬರ್ 18 ರಂದು ಬಿಡುಗಡೆಯಾಗಿದ್ದರೆ, ಯಶ್ ಅಭಿನಯದ ‘ಕೆಜಿಎಫ್’ ಡಿಸೆಂಬರ್ 21 ರಂದು ಬಿಡುಗಡೆಯಾಗಿತ್ತು. ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ.

    ಐಟಿ ದಾಳಿ ನಡೆಸಿದ ಮಾತ್ರಕ್ಕೆ ತೆರಿಗೆ ವಂಚನೆ ನಡೆಸಿದ್ದಾರೆ ಎಂದರ್ಥವಲ್ಲ. ತಮ್ಮ ಆದಾಯಕ್ಕೆ ಸರಿಯಾಗಿ ಮಾಹಿತಿ ನೀಡಿದರೆ ಯಾರೂ ಹೆದರುವ ಅಗತ್ಯವಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್

    ಸ್ಯಾಂಡಲ್‍ವುಡ್ ಗೆ ಐಟಿ ಶಾಕ್, ಇತ್ತ ಡಿಕೆಶಿ ತಾಯಿಗೂ ಶಾಕ್

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್‍ವುಡ್ ನಟರ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶಾಕ್ ಕೊಟ್ಟಿದ್ದರೆ, ಇತ್ತ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಐಟಿ ಶಾಕ್ ಕೊಟ್ಟಿದೆ.

    ಸಚಿವ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಅವರಿಗೆ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿದೆ. ಗೌರಮ್ಮ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕನಕಪುರದ ದೊಡ್ಡ ಆಲಹಳ್ಳಿಯ ನಿವಾಸದಲ್ಲಿ ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿ ಹೋಗಿದ್ದಾರೆ. ಇದನ್ನೂ ಓದಿ: Exclusive: ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ಐಟಿ ಕೇಳಿದ ಪ್ರಶ್ನೆಗಳು ಏನು..?

    2017ರ ನವೆಂಬರ್ 6 ರಂದು ಡಿಕೆ ಶಿವಕುಮಾರ್ ಪತ್ನಿ ಉಷಾ, ಸಹೋದರ ಡಿ ಕೆ ಸುರೇಶ್, ತಾಯಿ ಗೌರಮ್ಮ, ಇಬ್ಬರು ಪುತ್ರಿಯರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಎಂಎಲ್‍ಸಿ ರವಿ, ಡಿಕೆಶಿ ಮಾವನ ಮಗ, ಡಿಕೆಶಿ ತಾಯಿ ಗೌರಮ್ಮ ಅವರ ಅಣ್ಣನ ಮಗ, ದವನಂ ಜ್ಯುವೆಲ್ಲರ್ಸ್ ಮಾಲೀಕ ಹರೀಶ್, ಶರ್ಮಾ ಟ್ರಾವೆಲ್ಸ್ ಮಾಲೀಕ ಸುನಿಲ್ ಶರ್ಮಾ, ಗ್ಲೋಬಲ್ ಕಾಲೇಜು ನಿರ್ದೇಶಕ ನಂದೀಶ್ ಸೇರಿ ಒಟ್ಟು 15 ಮಂದಿ ವಿಚಾರಣೆಗೆ ಹಾಜರಾಗಿ ಐಟಿ ಅಧಿಕಾರಿಗಳ ಪ್ರಶ್ನೆ ಉತ್ತರ ನೀಡಿದ್ದರು.

    ಕುಟುಂಬ ಸದಸ್ಯರು ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾದ ಬಳಿಕ ಅಂದು ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, ನಾನು ತೆರೆದ ಪುಸ್ತಕ, ನಾನು ಸಾಕಷ್ಟು ವಿಚಾರಣೆ ನೋಡಿದ್ದೇನೆ. ಜಾರಿ ನಿರ್ದೇಶನಾಲಯ(ಇಡಿ), ಸಿಬಿಐ ಕೊಡಬೇಕು ಎಂದು ಇದ್ದರೆ ಕೊಡಲಿ. ನಾನು ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಹೇಳಿದ್ದರು.

    ತನಿಖೆಗೆ ನಾನು ನನ್ನ ಕುಟುಂಬದವರು ಸಹಕಾರ ನೀಡಿದ್ದೇವೆ. ನ್ಯಾಯಯುತವಾಗಿ ತನಿಖೆ ನಡೆಯುವ ವಿಶ್ವಾಸವಿದೆ. ನಾವು ಸಂವಿಧಾನ ಒಪ್ಪಿದ್ದೇವೆ. ಕಾನೂನಿಗೆ ಗೌರವ ಕೊಡುತ್ತೇನೆ. ನಾನೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದು ಯಾವುದನ್ನು ಮುಚ್ಚಿಡಲ್ಲ. ಅಧಿಕಾರಿಗಳ ಪ್ರಶ್ನೆಗೆ ಉತ್ತರ ನೀಡುವುದು ನಮ್ಮ ಕರ್ತವ್ಯ. ಐಟಿ ಅಧಿಕಾರಿಗಳಿಗೆ ನಾವು ಈ ಹಿಂದೆ ನೀಡಿದ ಮಾಹಿತಿ ಸಾಲದೇ ಇದ್ದಿದ್ದಕ್ಕೆ ಇಂದು ನಮ್ಮನ್ನು ವಿಚಾರಣೆಗೆ ಕರೆಸಿದ್ದಾರೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100 ಲಾಕರ್‌ನಲ್ಲಿತ್ತು 25 ಕೋಟಿ ರೂ. ಹಣ!

    100 ಲಾಕರ್‌ನಲ್ಲಿತ್ತು 25 ಕೋಟಿ ರೂ. ಹಣ!

    ನವದೆಹಲಿ: ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆಯು ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಕಟ್ಟಡಗಳ ಮೇಲೆ ದಾಳಿ ನಡೆಸಿ 100 ಲಾಕರ್ ಗಳಲ್ಲಿದ್ದ ಬರೋಬ್ಬರಿ 25 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ.

    ದೆಹಲಿಯ ಚಾಂದನಿಚೌಕ್ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಒಟ್ಟು 8 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಬೃಹತ್ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಹವಾಲಾ ವ್ಯಾಪಾರಿಗಳು ತಮ್ಮ ಹಣವನ್ನು ಭದ್ರವಾಗಿ ಕಾಪಾಡಿಕೊಳ್ಳಲು ಈ ರೀತಿ ಖಾಸಗಿ ಲಾಕರ್ ಗಳನ್ನು ಬಳಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು, 100 ಲಾಕರ್ ಗಳಲ್ಲಿ 25 ಕೋಟಿ ರೂ. ನಗದನ್ನು ಐಟಿ ಇಲಾಖೆ ವಶಪಡಿಸಿಕೊಂಡಿದೆ.

    ತಂಬಾಕು ವ್ಯಾಪಾರಿಗಳು, ರಾಸಾಯನಿಕ ವ್ಯಾಪಾರಿಗಳು ಮತ್ತು ಒಣ ಹಣ್ಣಿನ ವಿತರಕರು ಸೇರಿದಂತೆ ದೆಹಲಿ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ಹಣ ಎನ್ನುವ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಉದ್ಯಮಿಗಳು ಹವಾಲಾ ವ್ಯವಹಾರ ನಡೆಸುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.

    ಸದ್ಯಕ್ಕೆ ಐಟಿ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆ ಶುರುಮಾಡಿದ್ದಾರೆ. ಈ ವರ್ಷದಲ್ಲಿ ತನಿಖಾ ಸಂಸ್ಥೆಗಳು ನಡೆಸಿದ ಮೂರನೇ ಪ್ರಮುಖವಾದ ‘ಲಾಕರ್ ಕಾರ್ಯಾಚರಣೆ’ ಇದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv