ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನಾಪತ್ತೆಯಾಗಿದ್ದಾರೆ.
ಪರಶುರಾಮ ಲಮಾಣಿ(35) ಹಾಗೂ ರಮೇಶ ಲಮಾಣಿ (38) ನಾಪತ್ತೆಯಾಗಿರುವ ಮೀನುಗಾರರು. ಗುರುವಾರ ಸಂಜೆ ತೆಪ್ಪದ ಮೂಲಕ ಮೂವರು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರೀ ಮಳೆಗಾಳಿಗೆ ತೆಪ್ಪ ಮುಗಿಚಿ ಬಿದ್ದಿದೆ. ಹೀಗಾಗಿ ಮೂವರ ಪೈಕಿ ಅಕ್ಷಯ ಲಮಾಣಿ ಎಂಬಾತ ಈಜಿ ದಡ ಸೇರಿದ್ದಾನೆ.
ಆದರೆ ಉಳಿದ ಇಬ್ಬರೂ ಇನ್ನೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಭೇಟಿ ಕೊಲ್ಹಾರ ತಹಶೀಲ್ದಾರ್ ಎಂ ಎಸ್ ಭಾಗವಾನ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಪತ್ತೆಯಾಗಿರುವವರಿಗಾಗಿ ಸ್ಥಳಿಯ ಮೀನುಗಾರರ ಸಹಾಯದೊಂದಿಗೆ ಶೋಧ ನಡೆಸಲಾಗುತ್ತಿದೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಡಗು ವಿರಾಜಪೇಟೆ ಮೂಲದ ಸಚಿನ್ ಕಣ್ಮರೆಯಾಗಿರುವ ಟೆಕ್ಕಿ. ಸಚಿನ್ ಮತ್ತು ಆರ್‌ಟಿ ನಗರದ ಉಲ್ಲಾಸ್ ಇಬ್ಬರೂ ಟೆಕ್ಕಿಗಳಾಗಿದ್ದು, ಶುಕ್ರವಾರ ರಾತ್ರಿ ಕಲ್ಕೆರೆಯಲ್ಲಿ ಪಾರ್ಟಿ ಮಾಡಿದ್ದರು. ಮುಂಜಾನೆ ಸುಮಾರು 3 ಗಂಟೆಗೆ ಇಬ್ಬರು ಕೆಲ್ಕೆರೆ ಕೆರೆ ಏರಿ ಮೇಲೆ ಬಂದಿದ್ದರು. ಈ ವೇಳೆ ಕೆರೆ ಏರಿ ಮೇಲೆ ತೆಪ್ಪ ಕಂಡು ತೆಪ್ಪದಲ್ಲಿ ವಿಹಾರಕ್ಕೆ ಹೊರಟ್ಟಿದ್ದರು.
ತೆಪ್ಪದಲ್ಲಿ ಹೋಗುವಾಗ ಹುಟ್ಟು ಜಾರಿ ನೀರಿಗೆ ಬಿದ್ದಿದೆ. ಈ ವೇಳೆ ಕೈಯಲ್ಲಿ ತೆಪ್ಪ ನಡೆಸುವಾಗ ತೆಪ್ಪ ಮಗುಚಿ ಇಬ್ಬರು ಟೆಕ್ಕಿಗಳು ಕೆರೆಗೆ ಬಿದ್ದಿದ್ದಾರೆ. ಟೆಕ್ಕಿ ಉಲ್ಲಾಸ ಈಜಿ ದಡ ಸೇರಿದ ಬದುಕುಳಿದ್ದಾರೆ. ಆದರೆ ಸಚಿನ್ ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ತಕ್ಷಣ ಉಲ್ಲಾಸ್ ತನ್ನ ಅಣ್ಣನಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬಂದು ಕಲ್ಕೆರೆ ಕೆರೆಯಲ್ಲಿ ಟೆಕ್ಕಿ ಸಚಿನ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಮಧ್ಯಾಹ್ನನವಾದರೂ ಸಚಿನ್ ಪತ್ತೆಯಾಗಿಲ್ಲ.
ಉಲ್ಲಾಸ್ ಬ್ಯಾಗ್ ಹಾಕಿಕೊಂಡಿದ್ದರು. ಹೀಗಾಗಿ ಬ್ಯಾಗ್ ಹಾಕಿದ್ದರಿಂದ ಸೇಫ್ ಆಗಿ ಉಲ್ಲಾಸ್ ದಡ ಸೇರಿದ್ದಾರೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಈ ನಡೆದ ಘಟನೆ ನಡೆದಿದೆ. ಸಚಿನ್ ಮಾನ್ಯತಾ ಟೆಕ್ ಪಾರ್ಕ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅಲ್ಲದೇ ಸಚಿನ್‍ಗೆ ಈಜು ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಆದರೆ ತೆಪ್ಪ ಮಗುಚಿದಾಗ ಈಜಿ ದಡ ತಲುಪಲು ವಿಫಲರಾಗಿದ್ದಾರೆ.
ರಾತ್ರಿ ಸುಮಾರು 12 ಗಂಟೆಗೆ ಬೀಟ್ ಬಂದಿದ್ದೆ. ಬಳಿಕ ಮತ್ತೆ 3 ಗಂಟೆಗೆ ಬೀಟ್‍ಗೆ ಬಂದೆ. ಆದರೆ ಈ ವೇಳೆ ರಸ್ತೆ ಪಕ್ಕ ಕುಳಿತುಕೊಂಡು ಓರ್ವ ಅಳುತಿದ್ದರು. ಏನಾಯ್ತು ಅಂತ ಕೇಳಿದಾಗ ಕೆರೆಯಲ್ಲಿ ಮುಳುಗಿರುವ ಬಗ್ಗೆ ಹೇಳಿದರು. ರಾತ್ರಿ ಪಾರ್ಟಿ ಮಾಡೊಕೆ ಬಂದಿದ್ದಾರೆ. ಕುಡಿದು ಹೋದಾಗ ಈ ಘಟನೆ ಆಗಿದೆ. ಶುಕ್ರವಾರ ನಾನೊಬ್ಬನೇ ಇದ್ದೆ. ನಾನು ಬರುವ ವೇಳೆಗಾಗಲೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು. ಯಾರನ್ನೂ ಕೂಡ ಕೆರೆ ಒಳಗೆ ಬಿಡೋದಿಲ್ಲ. ಇವರು ಕುಡಿದು ಬಂದು ತೆಪ್ಪ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆರೆಯ ಸೆಕ್ಯೂರಿಟಿ ರಾಜೇಶ್ ಹೇಳಿದ್ದಾನೆ.
ಅಪರೂಪಕ್ಕೆ ಗೆಳೆಯರು ಭೇಟಿ:
ಸಚಿನ್ ಮತ್ತು ಉಲ್ಲಾಸ್ ಇಬ್ಬರ ಅಪರೂಪಕ್ಕೆ ಭೇಟಿಯಾಗಿದ್ದರು. ಈ ಹಿಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಇಬ್ಬರು ಬೇರೆ ಕಂಪನಿಗೆ ಕೆಲಸ ಬದಲಾಯಿಸಿದ್ದರು. ಅದರಂತೆ ಸಚಿನ್ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಉದ್ಯೋಗದಲ್ಲಿದ್ದರು. ವೀಕೆಂಡ್ ಹಿನ್ನೆಲೆಯಲ್ಲಿ ಶುಕ್ರವಾರ ಇಬ್ಬರು ಭೇಟಿಯಾಗಿದ್ದರು. ಈ ವೇಳೆ ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿಕೊಂಡು ಕೆರೆಯಲ್ಲಿ ವಿಹಾರ ಮಾಡುವುದಕ್ಕೆ ಇಬ್ಬರು ಬಂದಿದ್ದರು. ಆಗ ಸಚಿನ್ ಬಲವಂತ ಮಾಡಿ ಉಲ್ಲಾಸ್ ಕರೆತಂದಿದ್ದರು. ಈ ಹಿಂದೆ ಒಂದು ಬಾರಿ ಇದೇ ರೀತಿ ತೆಪ್ಪದಲ್ಲಿ ವಿಹಾರ ಹೋಗಿ ಬಂದಿದ್ದರು. ಅದೇ ರೀತಿ ರಾತ್ರಿ ತೆಪ್ಪದಲ್ಲಿ ವಿಹಾರ ಮಾಡಲು ಬಂದಿದ್ದರು. ಇಬ್ಬರು ಬಂದ ವೇಳೆ ಈ ಅವಘಡ ಸಂಭವಿದೆ.
ಉಲ್ಲಾಸ್ ಹಾಗೂ ಸಚಿನ್ ಕೆರೆ ಮಧ್ಯದ ಐಲ್ಯಾಂಡ್‍ಗೆ ತೆರಳಲು ಮುಂದಾಗಿದ್ದರು. ಆದರೆ ಸಚಿನ್ ಹೆಚ್ಚು ಭಾರವಿದ್ದ, ಹೀಗಾಗಿ ಒಂದೇ ಕಡೆ ತೆಪ್ಪ ವಾಲಿತ್ತು. ಆದ್ದರಿಂದ ಕೆರೆ ಏರಿಯಿಂದ 100 ಮೀಟರ್ ತೆರಳುತ್ತಿದ್ದಂತೆ ತೆಪ್ಪ ಆಯ ತಪ್ಪಿದೆ. ಈ ವೇಳೆ ನೀರಿನಲ್ಲೇ ಹುಟ್ಟನ್ನು ಬಿಟ್ಟಿದ್ದಾರು. ಆಗ ತೆಪ್ಪದೊಳಗೆ ನೀರು ತುಂಬಿ ಮುಗುಚಿ ಬಿದ್ದಿತ್ತು. ಇಬ್ಬರು ನುರಿತ ಈಜಿಗಾರರಲ್ಲ, ಸಾಧಾರಣ ಈಜು ಕಲಿತಿದ್ದರು. ಸಚಿನ್ ಹೆಚ್ಚು ಭಾರ ಹಾಗೂ ಮದ್ಯಪಾನ ಮಾಡಿದ್ದರಿಂದ ಈಜಲಾಗದೇ ನೀರಿನಲ್ಲಿ ಮುಳುಗಿರೋ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.
ವರ್ಷದ ಹಿಂದೆ ಮದುವೆ:
ಉಲ್ಲಾಸ್ ಹಾಗೂ ಸಚಿನ್ ಇಬ್ಬರೂ ವರ್ಷದ ಹಿಂದೆ ಮದುವೆಯಾಗಿದ್ದರು. ಕಲ್ಕೆರೆಯ ಯುವತಿಯನ್ನು ಉಲ್ಲಾಸ್ ಮದುವೆಯಾಗಿದ್ದರು. ಅಲ್ಲದೇ ಉಲ್ಲಾಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿಯ ಸಹೋದರ ಕೃಷ್ಣಪ್ಪರ ಅಳಿಯರಾಗಿದ್ದಾರೆ. ಉಲ್ಲಾಸ್ ಹೆಂಡತಿ, ಉಲ್ಲಾಸ್ ಮತ್ತು ಅವರ ಸ್ನೇಹಿತ ಕೆರೆ ಬಳಿ ಹೋಗಿದ್ದರಂತೆ. ಆದರೆ ತೆಪ್ಪ ಮಗುಚಿ ಸಚಿನ್ ಕಾಣಿಸುತ್ತಿಲ್ಲ ಎಂದು ಅಪ್ಪನ ಬಳಿ ವಿಚಾರ ಹೇಳಿದ್ದಾರೆ. ಕೂಡಲೇ ಉಲ್ಲಾಸ್ ಮಾವ ಕೃಷ್ಣಪ್ಪ ಮೀನುಗಾರರಿಗೆ ಫೋನ್ ಮಾಡಿ ಕೆರೆ ಬಳಿ ಬಂದಿದ್ದಾರೆ. ಕಾರಿನಲ್ಲಿ ಇಡೀ ಪ್ರದೇಶವನ್ನು ಒಂದು ರೌಂಡ್ ಬಂದಿದ್ದಾರೆ. ಸಚಿನ್ ಕಾಣದಾದಾಗ ಅವರ ಪತ್ನಿ ಮತ್ತು ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಈ ಘಟನೆಯ ಹಿನ್ನೆಲೆಯನ್ನು ಉಲ್ಲಾಸ್ ಮಾವ ಕೃಷ್ಣಪ್ಪ ಸಂಪೂರ್ಣವಾಗಿ ವಿವರಿಸಿದ್ದಾರೆ.
ಚಿಕ್ಕಮಗಳೂರು: ಸೇತುವೆ ಸಂಪರ್ಕ ಕಡಿತಗೊಂಡು ಜನರು ಭಯದಿಂದ ತೆಪ್ಪದಲ್ಲಿ ಸಾಗುತ್ತಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಎನ್‍ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ-ಬಾಳೆಗದ್ದೆಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಆಶ್ಲೇಷ ಮಳೆ ಹಾಗೂ ಭದ್ರೆ ನದಿಯಿಂದ ಹಾಳಾಗಿ ಹೋಗಿದೆ. ಇದೀಗ ಬಾಳೆಗದ್ದೆ ಗ್ರಾಮದ 70-80 ಮನೆ ಹಾಗೂ 200 ಜನ ನಗರಕ್ಕೆ ಬರಲು ತೆಪ್ಪವನ್ನು ಆಶ್ರಯಿಸಿದ್ದಾರೆ. 10 ವರ್ಷಗಳ ಹಿಂದೆ ತೆಪ್ಪದಲ್ಲಿ ಸಾಗುವಾಗ ತೆಪ್ಪ ಮಗುಚಿ ಮೂವರು ಮೃತಪಟ್ಟಿದ್ದರು.
ಅಂದು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆ ಇದಾಗಿದ್ದು, ರಾಜ್ಯದ ಅತಿ ದೊಡ್ಡ ಎರಡನೇ ಸೇತುವೆ ಕೂಡ ಆಗಿದೆ. ಆದರೆ ಇಂದು ಭದ್ರೆಯ ಅಬ್ಬರಕ್ಕೆ ಮುರಿದು ಬಿದ್ದು ಮತ್ತೊಂದು ಅನಾಹುತಕ್ಕೆ ಆಹ್ವಾನ ನೀಡಿದಂತಿದೆ. ಕೂಡಲೇ ಸರ್ಕಾರ ಇಲ್ಲಿಗೆ ಆದಷ್ಟು ಬೇಗ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಿವಾಸಿಗಳು ಮತ್ತೆ ತೆಪ್ಪದ ಮೊರೆ ಹೋಗಿದ್ದಾರೆ. ಎಲ್‍ಕೆಜಿಯಿಂದ ಡಿಗ್ರಿ ಓದುವ ಮಕ್ಕಳು ಕೂಡ ಇದೇ ತೆಪ್ಪದಲ್ಲಿ ಶಾಲೆಗೆ ಹೋಗಿಬರಬೇಕು. ಹೆತ್ತವರು ದಿನ ಬಂದು ತೆಪ್ಪದಲ್ಲಿ ಮಕ್ಕಳನ್ನು ಸಾಗಿಸಿ ಹೋಗುತ್ತಿದ್ದಾರೆ. ಬಾಳೆಗದ್ದೆ ಗ್ರಾಮದಿಂದ ಬೇರೆ ಮಾರ್ಗವಿದ್ದರೂ ಅದು, 12-15 ಕಿ.ಮೀ. ದೂರವಾಗುತ್ತದೆ ಅಲ್ಲದೆ ದಟ್ಟಕಾನನದೊಳಗೆ ಹೋಗಬೇಕಾಗುತ್ತದೆ. ಅಲ್ಲಿ 24 ಗಂಟೆಯೂ ದಾರಿ ಮಧ್ಯೆ ಹುಲಿ, ಆನೆ, ಕಾಡುಕೋಣ ಸೇರಿದಂತೆ ಎಲ್ಲಾ ಪ್ರಾಣಿಗಳು ಇರುತ್ತದೆ. ಜನ ಓಡಾಡೋದಕ್ಕೆ ಅಸಾಧ್ಯ. ಹಾಗಾಗಿ ಜನ ಅನಿವಾರ್ಯವಾಗಿ ಜೀವದ ಹಂಗು ತೊರೆದು ತೆಪ್ಪದಲ್ಲಿ ಬದುಕು ದೂಡುತ್ತಿದ್ದಾರೆ.
ಅಂದು 50 ಲಕ್ಷದಲ್ಲಿ ಮುಗಿದಿದ್ದ ಈ ಸೇತುವೆಗೆ ಇಂದು 1.20 ಲಕ್ಷ ಬೇಕಾಗಿದೆ. ಸದ್ಯಕ್ಕೆ ಅರಣ್ಯ ಸಿಬ್ಬಂದಿಗಳು ಇದೇ ಜಾಗದಲ್ಲಿ ಸ್ಥಳೀಯರ ನೆರವಿಗೆ ಬಂದಿದ್ದಾರೆ. ಸ್ಥಳಕ್ಕೆ ಶಾಸಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ, ಸೇತುವೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಆದರೆ ಜನ ಸೇತುವೆ ಮುಂದಿನ ಮಳೆಗಾಲಕ್ಕೆಲ್ಲ ತುರ್ತಾಗಿ ನಿರ್ಮಿಸಿಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ಬಡತನ ಎಂಬುದು ಮನುಷ್ಯನ ಕೈಯಲ್ಲಿ ಏನ್ ಬೇಕಾದರೂ ಮಾಡಿಸುತ್ತದೆ ಎಂಬುವುದಕ್ಕೆ ಈ ಮಹಿಳೆಯರೇ ಸಾಕ್ಷಿ. ಮೂರು ಹೊತ್ತು ನೆಮ್ಮದಿಯಾಗಿ ಊಟ ಮಾಡಲು ಮೂವರು ಮಹಿಳೆಯರು ತೆಪ್ಪದಲ್ಲಿ ಕೆರೆಗೆ ಸಾಗಿ ಮೀನು ಹಿಡಿಯುತ್ತಿದ್ದಾರೆ.
ಈ ಸಾಹಸಿ ಮಹಿಳೆಯರು ಕಂಡು ಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೆಂಕಟಾಪುರ ಕೆರೆಯಲ್ಲಿ. ಇಲ್ಲಿನ ಆಂಧ್ರ ಮೂಲದ ಈ ಮಹಿಳೆಯರು ಸಾಹಸ ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಆ ಮಹಿಳೆಯರು ಗಂಡ-ಮಕ್ಕಳು ಸಂಸಾರ ಎಲ್ಲವನ್ನು ಕಟ್ಟಿಕೊಂಡು ತೆಪ್ಪ ಏರಿದ್ದಾರೆ ಅಂದರೆ ಸಾಕು ಹೊಟ್ಟೆ ತುಂಬುವವರೆಗೂ ಭೂಮಿ ಮೇಲೆ ಬರಲ್ಲ. ಪ್ರತಿ ದಿನ ಬದುಕಿನ ಬಂಡಿ ಸಾಗಿಸಲು ಇರುವ ಹಳೆ ತೆಪ್ಪದಲ್ಲೇ ಕೆರೆಗೆ ಸಾಗುವ ಮಹಿಳೆಯರು ಭರ್ಜರಿ ಮೀನುಗಳನ್ನು ಹಿಡಿದು ಮರಳಿ ದಡಕ್ಕೆ ವಾಪಸಾಗುತ್ತಾರೆ. ಪ್ರತಿದಿನ ಕೆರೆಗೆ ಸಾಗಿ ಮೀನು ತರುವ ಮಹಿಳೆಯರ ಕಾಯಕ ಕಂಡ ಜನ ಮಹಿಳೆಯರ ಸಾಹಸ ಕಂಡು ಮೆಚ್ಚುಗೆ ಜೊತೆ ಆಶ್ಚರ್ಯ ಮತ್ತು ಆತಂಕವನ್ನೂ ವ್ಯಕ್ತಪಡಿಸ್ತಾರೆ.
ಬದುಕಿನ ಬಂಡಿ ಸಾಗಿಸಲು ಗಂಡ ಮಕ್ಕಳು ಕುಟುಂಬ ಸಮೇತ ಚಿಕ್ಕಬಳ್ಳಾಪುರ ಜಿಲ್ಲೆಯತ್ತ ಬಂದಿರೋ ಈ ಮಹಿಳೆಯರು ಪ್ರತಿದಿನ ಒಂದಲ್ಲ ಒಂದು ಕೆರೆಯಲ್ಲಿ ಮೀನು ಹಿಡಿಯುವ ಕಾಯಕ ಮಾಡುತ್ತಾರೆ. ಮೀನು ಸಾಕಿರುವ ಗುತ್ತಿಗೆದಾರನಿಗೆ ತಂದ ಮೀನು ಕೊಟ್ಟು ತಲಾ ಕೆಜಿಗೆ 20 ರೂಪಾಯಿ ಪಡೆಯುತ್ತಾರೆ. ಹೀಗೆ ಬಂದ ಹಣದಿಂದಲೇ ತಮ್ಮ ಜೀವನ ಸಾಗಿಸುತ್ತಾ ತೆಪ್ಪದಲ್ಲೊಂದು ಬದುಕು ಕಂಡುಕೊಂಡಿದ್ದಾರೆ.
ಒಟ್ಟಿನಲ್ಲಿ ಮಹಿಳೆಯರು ಯಾರಿಗೇನು ಕಮ್ಮಿಯಿಲ್ಲ ಬಾಹ್ಯಾಕಾಶಕ್ಕೆ ಹಾರಿದವರು ಉಂಟು, ಆಗಸದಲ್ಲಿ ವಿಮಾನ ಹಾರಿಸದವರು ಉಂಟು ಆದರೆ ಕಡುಬಡತನದ ಈ ಮಹಿಳೆಯರು ತಮ್ಮ ಬದುಕಿನ ಬಂಡಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ತೆಪ್ಪದಲ್ಲೊಂದು ಬದುಕು ಕಟ್ಟಿಕೊಂಡಿದ್ದಾರೆ. ಇವರ ಬದುಕು ಸಾಹಸ ಹಲವು ಮಂದಿಗೆ ಸ್ಪೂರ್ತಿಯಾಗಲಿದೆ.
ಮೂಡಿಗೆರೆ ತಾಲೂಕಿನ ಹಿರೆಕೂಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರುದ್ರಯ್ಯ ಅವರು ಉಬ್ಬಸದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ತೆಪ್ಪದ ಮೂಲಕ ಕಳುಹಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಮಂಗಳೂರಿಗೆ ಕರೆದೊಯ್ದಿದ್ದಾರೆ.
ಕೆಲ ತಿಂಗಳ ಹಿಂದೆ ಮೃತದೇಹವನ್ನು ಕೂಡ ಇದೇ ರೀತಿ ಸಾಗಿಸಿದ್ದರು. ಇಲ್ಲಿನ ಜನರು ಮೂರ್ನಾಲ್ಕು ದಶಕಗಳಿಂದ ಇದೇ ರೀತಿ ಬದುಕುತ್ತಿದ್ದಾರೆ. ತೆಪ್ಪ ಇಲ್ಲದಿದ್ದರೆ ಇವರಿಗೇ ಬದುಕೇ ಇಲ್ಲ. ಮಳೆಗಾಲದಲ್ಲಿ ಮಕ್ಕಳು ವಾರಗಟ್ಟಲೆ ಶಾಲೆಗೆ ಹೋಗುವುದಿಲ್ಲ. ಮನೆಗೆ ಒಂದು ಬೆಂಕಿ ಪೊಟ್ಟಣ ಬೇಕಂದ್ರೂ ನದಿ ದಾಟಿಯೇ ಬರಬೇಕು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಸ್ಥಳಕ್ಕೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಭೇಟಿ ನೀಡಿದ್ದು, ರಸ್ತೆ ಅಥವಾ ತೂಗು ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಶಾಸಕರ ಭರವಸೆ, ಭರವಸೆಯಾಗಿಯೇ ಉಳಿದಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸಾಕಷ್ಟು ಮನವಿ ಕೂಡ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಯಾರೊಬ್ಬರು ಬಡಜನರ ಮನವಿಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಹಾವೇರಿ: ತುಂಗಭದ್ರಾ ನದಿಯ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದ 9 ತೆಪ್ಪಗಳನ್ನ ವಶಪಡಿಸಿಕೊಂಡು ಸುಟ್ಟು ಹಾಕಿದ ಘಟನೆ ಹಾವೇರಿ ತಾಲೂಕು ಕಂಚಾರಗಟ್ಟಿ ಗ್ರಾಮದ ಬಳಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ತುಂಗಭದ್ರಾ ನದಿ ತೀರದಲ್ಲಿ ತೆಪ್ಪಗಳ ಮೂಲಕ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಹಾವೇರಿಯ ತಹಶೀಲ್ದಾರರು ಬಿದಿರಿನ ತೆಪ್ಪಗಳನ್ನ ವಶಕ್ಕೆ ಪಡೆದು, ನದಿ ತೀರದಲ್ಲಿ ಸುಟ್ಟು ಹಾಕಿದ್ದಾರೆ.
ಇದೇ ವೇಳೆ ಮರಳು ಗಣಿಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳು ಪರಾರಿಯಾಗಿದ್ದಾರೆ. ಹಾವೇರಿ ತಹಶೀಲ್ದಾರರ ನವೀನ ಹುಲ್ಲೂರು ಹಾಗೂ ಉಪತಹಶೀಲ್ದಾರ್ ಗವಿಸಿದ್ದಪ್ಪ ಸೇರಿದಂತೆ ಅಧಿಕಾರಿಗಳು ಕಾರ್ಯಚರಣೆ ಭಾಗವಹಿಸಿದ್ದಾರೆ.
ರಾಮನಗರ: ಕೆರೆಯಲ್ಲಿ ಮೀನು ಹಿಡಿಯಲು ಬಲೆ ಬೀಸಲು ಹೋದ ಯುವಕರಿಬ್ಬರು ತೆಪ್ಪ ಮುಗುಚಿ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ನಡೆದಿದೆ.
ಬಿಡದಿ ಸಮೀಪದ ಅವರೆಗೆರೆ ಗ್ರಾಮದ ನಿವಾಸಿಗಳಾದ ರವಿ (20) ಹಾಗೂ ಉಮೇಶ್ (31) ಮೃತ ದುರ್ದೈವಿಗಳು.
ಶನಿವಾರ ಸಂಜೆ ನೆಲ್ಲಿಗುಡ್ಡೆ ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬೀಸಲು ತೆಪ್ಪದಲ್ಲಿ ತೆರಳಿದ್ದರು. ರಾತ್ರಿಯಾದರೂ ಸಹ ಇಬ್ಬರೂ ಮನೆಗೆ ಬಂದಿರಲಿಲ್ಲ. ಅಲ್ಲದೇ ಗ್ರಾಮದಲ್ಲೂ ಅವರಿಬ್ಬರ ಸುಳಿವು ಇರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಸ್ಥಳೀಯರಲ್ಲಿ ವಿಚಾರಿಸಿದಾಗ ಮೀನು ಹಿಡಿಯಲು ನೆಲ್ಲಿಗುಡ್ಡೆ ಕೆರೆಗೆ ಹೋಗಿದ್ದಾರೆ ಎಂದು ತಿಳಿಸಿದ್ದರು.
ರವಿ ಹಾಗೂ ಉಮೇಶ್ ಕುಟುಂಬದವರು ಬಿಡದಿ ಪೋಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ನಂತರ ಪೊಲೀಸರು ಘಟನೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಥಳದಲ್ಲಿ ಯಾವುದೇ ತೆಪ್ಪವೂ ಇರಲಿಲ್ಲ. ಇದರಿಂದ ತೆಪ್ಪ ಮುಗುಚಿ ಸಾವನ್ನಪ್ಪಿರಬಹುದು ಎಂದು ಶಂಕಿಸಿ ಸ್ಥಳಕ್ಕೆ ಅಗ್ನಿ ಶಾಮಕ ದಳವನ್ನು ಕರೆಸಿ ಶೋಧ ಕಾರ್ಯ ನಡೆಸಲು ಪ್ರಾರಂಭಿಸಿದ್ದಾರೆ. ಕೆರೆಯಲ್ಲಿ ಶವಶೋಧ ನಡೆಸುವ ವೇಳೆ ಮೊದಲಿಗೆ ತೆಪ್ಪ ಸಿಕ್ಕಿದೆ. ಬಳಿಕ ಇಬ್ಬರು ಸಾವನ್ನಪ್ಪಿರುವುದು ಖಾತ್ರಿಯಾಗಿ ಶೋಧ ನಡೆಸಿದಾಗ ಇಬ್ಬರ ಮೃತದೇಹಗಳು ಬಲೆಯಲ್ಲಿ ಸಿಲುಕಿದ್ದು, ಹೊರತೆಗೆಯಲಾಗಿದೆ.
ಶನಿವಾರ ನಗರದಲ್ಲಿ ಮಳೆಯಾಗಿದ್ದು, ಇದರಿಂದ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಏಕಾಏಕಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಬಲೆಯ ಒಳಗೆ ಸಿಲುಕಿ ಕೆರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬಿಡದಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.