Tag: ತೆಂಗಿನ ಎಣ್ಣೆ

  • ಬಸ್‌, ಮೆಟ್ರೋ ದರ ಏರಿಕೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಏರಿಕೆ! – ತೆಂಗಿನ ಎಣ್ಣೆ ದರ ದಿಢೀರ್‌ ಏರಿಕೆಯಾಗಿದ್ದು ಯಾಕೆ?

    ಬಸ್‌, ಮೆಟ್ರೋ ದರ ಏರಿಕೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಏರಿಕೆ! – ತೆಂಗಿನ ಎಣ್ಣೆ ದರ ದಿಢೀರ್‌ ಏರಿಕೆಯಾಗಿದ್ದು ಯಾಕೆ?

    ಬೆಂಗಳೂರು: ಬಸ್, ಮೆಟ್ರೋ, ಹಾಲು ದರ ಏರಿಕೆಯ ಬೆನ್ನಲ್ಲೇ ಈಗ ಅಡುಗೆ ಎಣ್ಣೆಗೆ (Cooking Oil) ಬೆಲೆ ಏರಿಕೆಯ ಬರೆ ಬಿದ್ದಿದೆ. ಅದರಲ್ಲೂ ತೆಂಗಿನಕಾಯಿ ಎಣ್ಣೆ (Coconut Oil) ದರ ಲೀಟರ್‌ಗೆ 300 ರೂ. ಗಡಿ ದಾಟಿದೆ.

    ಯಾವುದೇ ಅಡುಗೆ ಮಾಡಬೇಕಾದರೂ ಅಡುಗೆ ಎಣ್ಣೆ ಬೇಕೇ ಬೇಕು. ಆದರೆ ಖಾದ್ಯ ತೈಲ ಬೆಲೆ ಕಳೆದ ಒಂದು ತಿಂಗಳಿಂದ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ತಿಂಗಳ ಹಿಂದಿನ ಬೆಲೆಗೂ ಈಗಿನ ಬೆಲೆಗೂ 10 – 20 ರೂ. ಏರಿಕೆಯಾಗಿದೆ.

    ಜಾಗತಿಕ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಎಣ್ಣೆಯ ದರ ಏರಿಕೆಯಾಗಿದೆ. ಪ್ರಮುಖವಾಗಿ ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆಯಲ್ಲಿ 10-20 ರೂ. ರೂ. ಹೆಚ್ಚಾಗಿದೆ ಎನ್ನುತ್ತಾರೆ ಖಾದ್ಯತೈಲ ವ್ಯಾಪಾರಿಗಳು.

    ತೆಂಗಿನ ಎಣ್ಣೆ ದರ ಏರಿಕೆ ಯಾಕೆ?
    ಸಾಧಾರಣವಾಗಿ ಮಾರ್ಚ್‌ ಮಧ್ಯಭಾಗದಿಂದ ರಾಜ್ಯದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಆದರೆ ಈ ಬಾರಿ ಜನವರಿ ಕೊನೆಯಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದ್ದು ಎಳೆನೀರಿಗೆ ಹೆಚ್ಚು ಬಳಕೆಯಾಗುತ್ತಿವೆ. ಇದರ ಜೊತೆ ಕೊಬ್ಬರಿಯ ದರವೂ ಏರಿಕೆಯಾಗಿದೆ.

    1 ವರ್ಷದಿಂದ ಕ್ವಿಂಟಾಲ್‌ಗೆ 8 ರಿಂದ 8,500 ರೂ. ಇದ್ದ ಕೊಬ್ಬರಿ ಪ್ರಸ್ತುತ 14,500 ರಿಂದ 15 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಎಳನೀರು ಯಥೇಚ್ಛವಾಗಿ ಮಾರಾಟವಾಗುತ್ತಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರ ನೇರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. ಇದರಿಂದಾಗಿ ತೆಂಗಿನ ಎಣ್ಣೆ ದರ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ಲೀಟರ್‌ ತೆಂಗಿನಕಾಯಿ ಎಣ್ಣೆ ಬೆಲೆಯಲ್ಲಿ 50 ರೂ. ಹೆಚ್ಚಾಗಿದೆ.

    ಅಡುಗೆ ಎಣ್ಣೆಯನ್ನು ಅಕ್ರಮವಾಗಿ ಗೋಡಾನ್‌ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ಬಗ್ಗೆ ಆಹಾರ ಹಾಗೂ ನಾಗರೀಕ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಎಪಿಎಂಸಿ ವ್ಯಾಪಾರಿಗಳ ಸಂಘ ಒತ್ತಾಯಿಸಿದೆ.

  • ತೆಂಗಿನ ಎಣ್ಣೆ ಬಳಸಿ ಮಾಡಿ ಚಿಕನ್ ರೋಸ್ಟ್

    ತೆಂಗಿನ ಎಣ್ಣೆ ಬಳಸಿ ಮಾಡಿ ಚಿಕನ್ ರೋಸ್ಟ್

    ಚಿಕನ್‍ನಿಂದ ಮಾಡುವ ಹತ್ತು ಹಲವು ಪದಾರ್ಥಗಳನ್ನು ನೀವು ಸೇವಿಸಿರಬಹುದು. ಆದರೆ ನಾವು ಇಂದು ಹೇಳಲು ಹೊರಟಿರುವ ಚಿಕನ್ ರೋಸ್ಟ್ ನಿಮ್ಮ ಮನೆ ಮಂದಿಗೆ ಎಲ್ಲರಿಗೂ ಇಷ್ಟವಾಗುತ್ತದೆ. ಈ ಖಾದ್ಯ ನಿಮ್ಮ ಬಾಯಿ ರುಚಿ ಹೆಚ್ಚಿಸುವಲ್ಲಿ ಸಂಶಯವಿಲ್ಲ. ಹಾಗಿದ್ದರೆ ಇನ್ಯಾಕೆ ತಡ ಬನ್ನಿ ಮನೆಯಲ್ಲಿ ಸರಳವಾಗಿ ಚಿಕನ್ ರೋಸ್ಟ್ ಹೇಗೆ ಮಾಡುವುದು ಎನ್ನುವುದನ್ನು ನೋಡೋಣ…

    ಬೇಕಾಗುವ ಸಾಮಗ್ರಿಗಳು:
    * ಚಿಕನ್ – 1 ಕೆಜಿ
    * ಮೆಣಸಿನ ಪುಡಿ – 1 ಚಮಚ
    * ಗರಂ ಮಸಾಲ – 1 ಚಮಚ
    * ಅರಿಶಿನ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಕೊತ್ತಂಬರಿ ಸೊಪ್ಪು, ಪುದೀನ ಪೇಸ್ಟ್ – ಸ್ವಲ್ಪ
    * ಕೊಬ್ಬರಿ ಎಣ್ಣೆ- 1 ಕಪ್

    ಮಾಡುವ ವಿಧಾನ:

    * ಚಿಕನ್ ತೊಳೆದಿಟ್ಟುಕೊಳ್ಳಬೇಕು.

    * ಒಂದು ಪಾತ್ರೆಯಲ್ಲಿ ಮೆಣಸಿನಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಮತ್ತು ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.


    * ಈ ಮಸಾಲೆ ಮಿಶ್ರಣವನ್ನು ಒಂದು ಗಂಟೆ ನೆನೆಸಿಟ್ಟುಕೊಳ್ಳಬೇಕು. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    * ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ ಚಿಕನ್, ತಯಾರಿಸಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿದರೆ ಚಿಕನ್ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

     

  • ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷರಲ್ಲಿ ಕೂದಲಿಗೆ ಸಂಬಂಧಿಸಿದಂತೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮನೆ ಮದ್ದು ಈರುಳ್ಳಿ.

    ಹೌದು. ಈರುಳ್ಳಿ ನಿಮ್ಮ ಕಣ್ಣಲ್ಲಿ ನೀರು ತರಿಸಬಹುದು, ಆದರೆ ಇದು ತಲೆ ತುಂಬಾ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿಗೆ ನಿಮ್ಮ ತಲೆಗೂದಲು ಉದುರುವಿಕೆಯನ್ನು ತಡೆಗಟ್ಟುವ ಶಕ್ತಿಯಿದೆ. ಹೀಗಾಗಿ ಮನೆಯಲ್ಲಿಯೇ ಸುಲಭವಾಗಿ ಈರುಳ್ಳಿ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಕೂದಲು ದಟ್ಟವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ.

    ಬೇಕಾಗುವ ಸಾಮಗ್ರಿಗಳು:
    ಕೊಬ್ಬರಿ ಎಣ್ಣೆ- 200 ಮಿ.ಲೀ
    ಬೇವಿನ ಎಲೆಗಳು- 1 ಕಪ್
    ಈರುಳ್ಳಿ- ಅರ್ಧ ಕಪ್

    ಮಾಡುವ ವಿಧಾನ
    * ಮೊದಲು ಕರಿಬೇವಿನ ಎಲೆ ಹಾಗೂ ಈರುಳ್ಳಿಯನ್ನು ನೀರು ಬಳಸದೆ ರುಬ್ಬಿಕೊಳ್ಳಿ.

    * ಇತ್ತ ಒಂದು ಪಾತ್ರೆಗೆ ತೆಂಗಿನ ಎಣ್ಣೆಯನ್ನು ಹಾಕಿ ನಂತರ ರುಬ್ಬಿದ ಈರುಳ್ಳಿ ಹಾಗೂ ಕರಿಬೇವಿನ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸ್ವಲ್ಪ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಉರಿ ನಿಲ್ಲಿಸಿ ರಾತ್ರಿ ಇಡೀ ಹಾಗೆಯೇ ಇಟ್ಟುಬಿಡಿ.

    * ಬೆಳಗ್ಗೆ ಇದನ್ನು ಸೋಸಿ ಎಣ್ಣೆ ಮತ್ತು ಮಿಶ್ರಣವನ್ನು ಬೇರ್ಪಡಿಸಿ. ಇದು ಸ್ವಲ್ಪ ದಪ್ಪವಾಗಿರುತ್ತದೆ. ಹೀಗಾಗಿ ಜರಡಿ ಮೂಲಕ ಹಾದುಹೋಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

    * ಹೀಗೆ ತೆಗೆದ ಎಣ್ಣೆಯನ್ನು ಒಂದು ಬಾಟ್ಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ವಾರದಲ್ಲಿ ಒಂದು ಸಲ ಹಚ್ಚಿದರೆ ನಿಮ್ಮ ಕೂದಲು ಸೊಂಪಾಗಿ ಹಾಗೂ ಉದ್ದವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ.

  • ತೆಂಗಿನ ಎಣ್ಣೆಯಿಂದ ಸ್ಯಾನಿಟೈಸರ್ ಸಂಶೋಧಿಸಿದ ವಿದ್ಯಾರ್ಥಿ

    ತೆಂಗಿನ ಎಣ್ಣೆಯಿಂದ ಸ್ಯಾನಿಟೈಸರ್ ಸಂಶೋಧಿಸಿದ ವಿದ್ಯಾರ್ಥಿ

    ತುಮಕೂರು: ಕೊರೊನಾ ತಡೆಗೆ ಈಗ ಸ್ಯಾನಿಟೈಸರ್ ಕೂಡ ಒಂದು ಮದ್ದಾಗಿದೆ. ಹೀಗಾಗಿ ಕಲ್ಪತರು ನಾಡಿನ ವಿದ್ಯಾರ್ಥಿಯೋರ್ವ ತೆಂಗಿನ ಎಣ್ಣೆ ಬಳಸಿಕೊಂಡು ಸ್ಯಾನಿಟೈಸರ್ ಸಂಶೋಧಿಸಿದ್ದಾರೆ.

    ಜಗತ್ತನೇ ನಡುಗಿಸುತ್ತಿರೋ ಕೊರೊನಾ ವೈರಸ್ ತಡೆಗಟ್ಟೋಕೆ ಮತ್ತೊಂದು ರೀತಿಯ ಸ್ಯಾನಿಟೇಸರ್ ಹೊರತರೋಕೆ ವಿದ್ಯಾರ್ಥಿ ಕಾಯುತ್ತಿದ್ದಾರೆ. ತುಮಕೂರು ನಗರದ ಎಸ್‍ಐಟಿ ಕಾಲೇಜಿನ ಎಂಜಿನಿಯರಿಂಗ್ ಬಯೋಕೆಮಿಕಲ್ ವಿಭಾಗದ ವಿಧ್ಯಾರ್ಥಿ ಎಚ್.ಎನ್.ಚಿದಾನಂದ್ ಹೊಸ ಸ್ಯಾನಿಟೈಸರ್ ಸಂಶೋಧಿಸಿದ್ದು, ಆ ಮೂಲಕ ಗಮನ ಸೆಳೆದಿದ್ದಾರೆ.

    ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ‘ಕಲ್ಪಶುದ್ಧಿ’ ಎಂಬ ಹೆಸರಿನ ಸ್ಯಾನಿಟೈಸರ್ ಜನರಿಗೆ ತಲುಪಲಿದೆ. ಎಸ್‍ಐಟಿಯಲ್ಲಿ ಜೈವಿಕ ತಂತ್ರಜ್ಞಾನ ವ್ಯಾಸಂಗ ಪೂರ್ಣಗೊಳಿಸಿರುವ ಚಿದಾನಂದ್, ಮತ್ತೊಂದು ಹೆಜ್ಜೆ ಮುಂದಿಟ್ಟು ತೆಂಗಿನ ಎಣ್ಣೆಯಲ್ಲಿ ಸ್ಯಾನಿಟೈಸ್ ರೂಪಿಸಿದ್ದು, ಅನುಮತಿಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಪೇಟೆಂಟ್ ಪಡೆಯುವ ದಿಕ್ಕಿನಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ತೊಡಗಿದ್ದಾರೆ.

    ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆ್ಯಸಿಡ್ ಅಂಶ ಇರುತ್ತದೆ. ಇದು ಕೊರೊನಾ ಸೋಂಕಿನ ಲಿಪಿಡ್ ಲೆಯರ್ ನಾಶಗೊಳಿಸುತ್ತದೆ. ಸಾಮಾನ್ಯವಾಗಿ ಕೊರೊನಾ ಸೇರಿದಂತೆ ಬಹುತೇಕ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳಲ್ಲಿ ಲಿಪಿಡ್ ಲೆಯರ್ ಇರುತ್ತದೆ. ಕೊರೊನಾ ಸೋಂಕಿನಲ್ಲಿ ಈ ಲಿಪಿಡ್ ಲೆಯರ್ ಇದೆ. ತೆಂಗಿನ ಎಣ್ಣೆಗೆ ಶೇ.70ರಷ್ಟು ಆಲ್ಕೊಹಾಲ್ ಮತ್ತು ಲೆಮನ್ ಆಯಿಲ್ ಸೇರಿಸಿ ಸ್ಯಾನಿಟೈಸ್ ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಆಯುಷ್ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು. ಅವರು ಇದನ್ನು ಸಂಶೋಧನೆಗೂ ಒಳಪಡಿಸಬಹುದು. ಆ ಪ್ರಕ್ರಿಯೆಗಳು ಮುಗಿದ ಮೇಲೆ ಬಿಡುಗಡೆ ಮಾಡುತ್ತೇನೆ ಎಂದು ಚಿದಾನಂದ್ ತಿಳಿಸಿದ್ದಾರೆ.

    ಸರ್ಕಾರ ನಿಗದಿಪಡಿಸಿರುವ 100 ಎಂಎಲ್ ಸ್ಯಾನಿಟೈಸರ್ ಗೆ 50 ರೂ. ರಂತೆ ದರ ನಿಗದಿಪಡಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ತೆಂಗನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಈ ಮೂಲಕ ತೆಂಗಿಗೂ ಮತ್ತಷ್ಟು ಬೆಲೆ ಬರುವ ಸಾಧ್ಯತೆ ಇದೆ. ಈಗಾಗಲೇ ಇವರ ಸ್ಯಾನಿಟೈಸರ್ ವಿಚಾರ ಸರ್ಕಾರದ ಅಂಗಳ ತಲುಪಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದಾರೆ.

  • ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ಚೀನಾದಲ್ಲಿ ಸೃಷ್ಟಿಯಾಗಿ ಇಂದು ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾಗೆ ವಿಜ್ಞಾನಿಗಳು ಔಷಧಿ ಕಂಡು ಹಿಡಿಯಲು ಪ್ರಯತ್ನ ನಡೆಸುತ್ತಿದ್ದು, ಯಶಸ್ವಿ ಆಗುತ್ತದೋ ಇಲ್ಲವೋ ಎನ್ನುವುದು ತಿಳಿದುಬರಬೇಕಿದೆ. ಈ ಮಧ್ಯೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಈ ಕೊರೊನಾವನ್ನು ತಡೆಗಟ್ಟಬಹುದು ಎಂದು ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ.

    ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು ಎಂದಾಗ ಯಾವುದನ್ನು ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚು ಸಿಗುತ್ತದೆ ಎನ್ನುವ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಪ್ರಶ್ನೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಸುಲಭವಾಗಿ ಹೇಳಬಹುದು. ಆದರಲ್ಲೂ ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎನ್ನುವ ವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡಲಾಗಿದ್ದು, ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯಿಂದ ಕೊರೊನಾ ತಡೆಗಟ್ಟಬಹುದು ಎಂದು ಹೇಳುತ್ತಿಲ್ಲ. ಆದರೆ ಇವುಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ರೋಗಗಳನ್ನು ತಡೆಯಬಹದು ಎನ್ನುವುದಷ್ಟೇ ಈ ಲೇಖನದ ಉದ್ದೇಶ.

    ವಿಶ್ವದೆಲ್ಲೆಡೆ ಕೊರೊನಾ ವೈರಸ್ ಮಾರಕ ಸೋಂಕು ಜ್ವರದ ಭೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಾರಕ ಸೋಂಕು ರೋಗಕ್ಕೆ ಯಾವುದೇ ಮದ್ದಾಗಲಿ ಅಥವಾ ಲಸಿಕೆಗಳಾಗಲಿ ಲಭ್ಯವಿಲ್ಲ. ಈ ಮಾರಿ ಜ್ವರ ಹಬ್ಬದಂತೆ ಹಲವಾರು ಜಾಗರೂಕತೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಮುಂಜಾಗೃತಾ ಕಾನೂನು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಎಲ್ಲರಲ್ಲೂ ಈ ಸೋಂಕು ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿ ಇರುತ್ತದೆ. ಇದಕ್ಕೆ ಉದಾಹರಣೆ ಏನೆಂದರೆ ಕೊರೊನಾ ವೈರಸ್ ಸೋಂಕು ಬಂದವರಲ್ಲಿ ಶೇ.90ರಷ್ಟು ಜನ ಜ್ವರ ಲಕ್ಷಣವಿಲ್ಲದೆ ಓಡಾಡುತ್ತಿರುತ್ತಾರೆ. ಅಂದರೆ, ಹಲವಾರು ಕಾರಣಗಳಿಂದ ಶೇ.10ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗಿರುತ್ತದೆ.

    ನಾವು ಉಸಿರಾಡಿದಾಗ ಈ ವೈರಸ್ ಮೂಗಿನ ಮೂಲಕ ಶ್ವಾಸಕೋಶಕ್ಕೆ ಹೋಗಿ ಅಂಗಾಂಶವನ್ನು ಧ್ವಂಸಮಾಡಿ ಉಸಿರಾಡಂತೆ ಮಾಡುತ್ತದೆ. ನಾವು ಉಸಿರಾಡುವುದನ್ನು ನಿಲ್ಲಿಸುವುದು ಅಸಾಧ್ಯ. ಆದುದರಿಂದ ವೈರಸ್ ದೇಹದೊಳಗೆ ಹೋಗದಂತೆ ಅಥವಾ ಹೋದರೆ ಉಸಿರಾಡುವ ಅಂಗಗಳನ್ನು ಹೇಗೆ ರಕ್ಷಿಸುವುದು ಬಗೆ ಚಿಂತನೆ ಮಾಡಬೇಕಿದೆ. ಪ್ರಕೃತಿಯಲ್ಲಿ ಸೋಂಕು ನಿರೋಧಕ ಶಕ್ತಿಯನ್ನು ಮನುಷ್ಯನಲ್ಲಿ ಹೆಚ್ಚಿಸುವ ಗುಣ ವಿಶೇಷವಿರುವ ವಿವಿಧ ಗಿಡ ಮೂಲಿಕೆಗಳಲ್ಲಿ ಮತ್ತು ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಇವೆ.

    ತೆಂಗಿನ ಎಣ್ಣೆ ಕರಾವಳಿ ಪ್ರದೇಶಗಳಲ್ಲಿ ತೆಂಗಿನ ಕಾಯಿ, ಎಣ್ಣೆ ಮತ್ತು ಸಿಯಾಳ ದಿನನಿತ್ಯ ಉಪಯೋಗಿಸುವುದು ವಾಡಿಕೆಯಿತ್ತು. ತೆಂಗಿನ ಮರವನ್ನು ಭೂಲೋಕದ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದ ಶುಭ ಸಮಾರಂಭಗಳಲ್ಲಿ, ಧಾರ್ಮಿಕ ಪೂಜೆ ಪುರಸ್ಕಾರಗಳಲ್ಲಿ ತೆಂಗಿನ ಕಾಯಿ ಮಹತ್ವವಾದ ಸ್ಥಾನ ಪಡೆದಿದೆ. ದೇವರ ನೈವೇದ್ಯಕ್ಕೆ ತೆಂಗಿನ ಕಾಯಿ ಇರಲೇಬೇಕು. ನಮ್ಮ ಪೂರ್ವಜರು ಆರೋಗ್ಯಕ್ಕೆ ಉತ್ತಮವಾದುದ್ದನ್ನು ದೇವರಿಗೆ ಸಮರ್ಪಣೆ ಮಾಡಿ ಮತ್ತೆ ತಾವು ಸೇವಿಸುತ್ತಿದ್ದರು. ಹಾಗೆಯಾದರೂ ಜನರು ಉತ್ತಮ ಕ್ರಮ, ಪದಾರ್ಥಗಳನ್ನು ಅಳವಡಿಸಿಕೊಳ್ಳಿ ಎನ್ನುವ ಉದ್ದೇಶ ಅವರದ್ದು ಇದ್ದಿರಬೇಕು.

    ಆಧುನಿಕ ಜೀವನ ಶೈಲಿ, ಪಾಶ್ಚಿಮಾತ್ಯ ಅನುಕರಣೆ ಮತ್ತು ಹಿಂದೆ ಕೆಲವು ಹಲವು ವೈಜ್ಞಾನಿಕವಾಗಿ ಸರಿಯಾದ ಸಂಶೋಧನೆ ನಡೆಸದಿರುವುದರಿಂದ ಪಾರಂಪರಿಕವಾಗಿ ನಡೆಸುತ್ತಿದ್ದ ಅನುಸರಣೆಯು ಮಾಯವಾಗುತ್ತಿದೆ. ಅದೃಷ್ಟವಶಾತ್ ಇತ್ತೀಚೆಗೆ ವಿಜ್ಞಾನಿಗಳ ಸಂಶೋಧನೆಯಿಂದಾಗಿ ಸತ್ಯಾಸತ್ಯತೆಗಳು ಬೆಳಕಿಗೆ ಬರುತಿದೆ. ತೆಂಗಿನ ಎಣ್ಣೆಯನ್ನು ಹಾಳಾಗದ ಹಾಗೆ ಬಹು ದಿನ ಇಡಲು ಕೃತಕವಾಗಿ (ಹೈಡ್ರೋಜಿನೇಷನ್) ಸಂಸ್ಕರಿಸುತ್ತಾರೆ. ಇದರಿಂದಾಗಿ ಎಣ್ಣೆಯ ಪ್ರಕೃತಿ ಸಹಜವಾದ ಗುಣಗಳು ನಾಶವಾಗುತ್ತದೆ. ಪ್ರಕೃತಿ ಸಹಜವಾದ ಗುಣಗಳು ನಾಶವಾಗಿ ಆರೋಗ್ಯಕ್ಕೆ ಕೆಡುಕು ಉಂಟುಮಾಡುತ್ತದೆ. ಈಗ ತೆಂಗಿನ ಎಣ್ಣೆಯನ್ನು ಹಳೆಯ ಕಾಲದಂತೆ, ಕೋಲ್ಡ್ ಪ್ರೆಸ್ ಮಾಡಿ ತೆಗೆಯುತ್ತಾರೆ. ಇದನ್ನು ವರ್ಜಿನ್ ತೆಂಗಿನ ಎಣ್ಣೆ ಎನ್ನುತ್ತಾರೆ. ಮೊದಲು ತೆಂಗಿನ ಎಣ್ಣೆ ಹೃದ್ರೋಗ ಹೆಚ್ಚಲು ಕಾರಣ ಎನ್ನುವ ವಿಜ್ಞಾನಿಗಳು, ವರ್ಜಿನ್ ತೆಂಗಿನ ಎಣ್ಣೆ ಹೃದ್ರೋಗ ಬರದಂತೆ ತಡೆಯಬಲ್ಲದು ಎಂಬದುನ್ನು ತೋರಿಸಿದ್ದಾರೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ (ಫ್ಯಾಟಿ ಆಸಿಡ್) ಎನ್ನುವ ಕೊಬ್ಬಿನಾಂಶ ಹಲವಾರು ವೈರಸನ್ನು ಜೀವಕೋಶದಲ್ಲಿ ಬೆಳೆಯುದನ್ನು ತಡೆಗಟ್ಟಬಲ್ಲದು ಎಂದು ಹಲವು ಮಂದಿ ತೋರಿಸಿಕೊಟ್ಟಿದ್ದಾರೆ.

    ಲಾರಿಕ್ ಆಸಿಡ್ ಪ್ರಚೋದನೆಯಿಂದ ಜೀವಕೋಶದಲ್ಲಿ 7-10 ಹೆಚ್ಚು ಪಟ್ಟು ಟ್ರೈ ಎಸೈಲ್ ಗ್ಲಿಸರೊಲ್ ಎಂಬ ರಾಸಾಯನಿಕ ಪದಾರ್ಥವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಜೀವಕೋಶಕ್ಕೆ ಏನೂ ತೊಂದರೆಯಾಗುವುದಿಲ್ಲ. ಜೀವಕೋಶದಲ್ಲಿ ಅಧಿಕ ಮಟ್ಟದ ಟ್ರೈ ಎಸೈಲ್ ಗ್ಲಿಸರೊಲ್‍ಇರುವುದರಿಂದ ವೈರಸ್ ಪ್ರ್ರೊಟಿನ್‍ಗಳು ಗಳು ಸಮರ್ಪಕ ರೀತಿಯಲ್ಲಿ ಜೋಡಣೆಯಾಗದೇ ನಿಷ್ಕ್ರಿಯವಾಗುತ್ತದೆ. ಅದು ಅಲ್ಲದೆ ವೈರಸ್ ತನ್ನದೇ ಆದ ಪ್ರೋಟಿನ್ ಸುರಿಸುವಂತೆ ಮಾಡುತ್ತದೆ. ಈ ಪ್ರೋಟಿನ್ಸ್ ವೈರಸನ್ನು ಜೀವಕೋಶದ ಹೊರ ಪದರದಲ್ಲಿ ನೆಲೆಯಾಗಲು ಬೇಕಾಗುತ್ತದೆ. ಆದರೆ ಈ ಕ್ರಿಯೆಯನ್ನು ಲಾರಿಕ್ ಆಸಿಡ್ ತಡೆಗಟ್ಟಿ ವೈರಸ್ ಜೀವಕೋಶದ ಒಳಗೆ ಹೋಗಿ ಹಾನಿ ಉಂಟು ಮಾಡುವುದನ್ನು ತಪ್ಪಿಸುತ್ತದೆ.

    ಲಾರಿಕ್ ಆಸಿಡ್ ತೆಗೆದ ಮೇಲೂ 4-7 ಗಂಟೆಗಳವರೆಗೂ ಮೇಲೆ ವಿವರಿಸಿದ ಪರಿಣಾಮ ಫಲಕಾರಿಯಾಗಿರುತ್ತದೆ. ತೇಗಿನ ಎಣ್ಣೆಯಲ್ಲಿ ಮಾತ್ರ ಲಾರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಇದೆ. ತೆಂಗಿನ ಎಣ್ಣೆಯ ಕೊಬ್ಬಿನಾಂಶದಲ್ಲಿ ಶೇ.50 ರಷ್ಟು ಲಾರಿಕ್ ಆಸಿಡ್ ಇದೆ. ತೆಂಗಿನ ಎಣ್ಣೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀವಕೋಶ ಮತ್ತು ಅಂಗಾಂಶಗಳ ಪುನರ್ ಜೀವನಕ್ಕೆ ಸಹಕಾರಿಯಾಗಿದೆ. ಉದುರಿತವನ್ನು ಕಡಿಮೆಮಾಡುತ್ತದೆ. ಎಣ್ಣೆಯ ಪದರವು ವೈರಸಿಗೆ ತಡೆ ಗೋಡೆಯಾಗಿರುತ್ತದೆ. ಜೀವಕೋಶ, ಅಂಗಾಂಶಗಳಿಗೆ ಎಣ್ಣೆ ಆಹಾರವಾಗಿ ತ್ವರಿತ ಶಕ್ತಿಯನ್ನು ಒದಗಿಸಿ ವೈರಸನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ.

     

    ದೇಹಕ್ಕೆ ಬರುವ ಸೋಂಕನ್ನು ತಡೆಗಟ್ಟಲು ತೆಂಗಿನ ಎಣ್ಣೆ ಹೇಗೆ ಉಪಯೋಗಿಸಬೇಕೆಂದು ತಿಳಿಸುವೆ. ಬೆಳಿಗ್ಗೆ ಎದ್ದ ಮೇಲೆ ಮತ್ತು ಸಂಜೆ ಅಥವಾ ಮಲಗುವುದಕ್ಕೆ ಮೊದಲು ತೆಂಗಿನ ಎಣ್ಣೆಯನ್ನು ತಲೆ ಮೇಲೆ ಮಾಡಿ ಮೂಗಿನ ಎರಡೂ ಹೊಳ್ಳೆಯ ಒಳಗೆ ಹಾಕಿ. ಬಾಯಿಗೆ ಬಂದರೆ ಚಿಂತೆ ಮಾಡಬೇಡಿ. ತಲೆ ಮೇಲೆ ಮಾಡಿ ಹಾಗೆ ಐದು ನಿಮಿಷ ಕುಳಿತುಕೊಳ್ಳಿ. ಎರಡನೆಯದಾಗಿ, ಬರಿಯ ಹೊಟ್ಟೆಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಬರೇ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಅರ್ಧ ಗಂಟೆಯ ನಂತರ ಕುಡಿಯುವುದು, ತಿನ್ನುವುದು ಮಾಡಬಹುದು. ಕಣ್ಣಿಗೂ, ಕಿವಿಗೂ ಒಂದೆರಡು ತೊಟ್ಟು ಹಾಕಬಹುದು. ತೆಂಗಿನ ಕಾಯಿಯನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸಿ.

    ಲೇಖಕರ ಬಗ್ಗೆ:
    ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಡಾ ನಾಗಭೂಷಣ ಅವರು ಪ್ರಸ್ತುತ ಅಮೇರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ. ಮುಂಬೈ ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸಂಶೋಧನೆ ನಡೆಸಿದವರು. ಅಲ್ಲಿಯೇ ಡಾಕ್ಟರೇಟ್ ಪದವಿಯನ್ನು ಗಳಿಸಿ ಅಮೆರಿಕಾದ ಶೇಷ್ಠ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದವರು. ಇವರು ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ಸಂಶೋಧನೆ ಮಾಡಿ ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ (1984) ಅರಶಿನವು ಕ್ಯಾನ್ಸರ್ ಅನ್ನು ತಡೆಗಟ್ಟಬಲ್ಲದೆಂದು ಕಂಡುಹಿಡಿದವರು. ಈ ಸಂಶೋಧನೆಗಾಗಿ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್, ನವದೆಹಲಿಯಿಂದ ಚಿನ್ನದ ಪದಕ ಪಡೆದಿರುತ್ತಾರೆ. ಅಲ್ಲದೆ ದೇಶ ವಿದೇಶಗಳಲ್ಲಿ 20ಕ್ಕೂ ಹೆಚ್ಚು ಪಾರಿತೋಷಕಗಳನ್ನು ಪಡೆದಿದ್ದಾರೆ.

    ಈ ವಿಚಾರದ ಬಗ್ಗೆ ಪ್ರಶ್ನೆ, ಅನುಮಾನಗಳಿದ್ದರೆ digital@writemenmedia.com ಪ್ರಶ್ನೆ ಕೇಳಬಹುದು. ಲೇಖಕರು ಉತ್ತರಿಸುತ್ತಾರೆ.

    [ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]