ತುಮಕೂರು: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡರು ಪೊಲೀಸ್ ಠಾಣೆಯ ಮುಂದೆ ಮಲಗಿ ಪ್ರತಿಭಟನೆ ಮಾಡಿದ್ದು, ಚಿಕ್ಕಪುಟ್ಟ ವಿಚಾರಕ್ಕೆಲ್ಲ ಪ್ರತಿಭಟನೆ ನಡೆಸಿ ಪೊಲೀಸರಿಗೆ ತೊಂದರೆ ಮಾಡಿದ್ದಾರೆ.
ಬಿಜೆಪಿ ಮುಖಂಡನನ್ನು ಜಿಲ್ಲೆಯ ಕ್ಯಾತಸಂದ್ರದ ಪೊಲೀಸರು ದೂರೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದರು. ಇದರಿಂದ ಸಿಡಿಮಿಡಿಗೊಂಡ ಬಿ. ಸುರೇಶ್ ಗೌಡ, ಕ್ಯಾತಸಂದ್ರದ ಪೊಲೀಸ್ ಠಾಣೆಯ ದ್ವಾರದ ಮೆಟ್ಟಿಲಿನಲ್ಲಿ ಮಲಗಿ ಅತಿರೇಕದ ಪ್ರತಿಭಟನೆ ಮಾಡಿದ್ದಾರೆ.

ದ್ವಾರದಲ್ಲಿ ಮಲಗಿದಲ್ಲದೆ ಪಿಎಸ್‍ಐ ರಾಜು ಅವರನ್ನು ಒಳಗೆ ಬಿಡದೆ ಕೆಲಕಾಲ ಹೊರಗಡೆಯೇ ನಿಲ್ಲುವಂತೆ ಮಾಡಿ ಪೊಲೀಸರಿಗೆ ತೊಂದರೆಯನ್ನು ನೀಡಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತ ಹನುಮಂತರಾಜು ಅವರನ್ನು ಬಿಟ್ಟುಕಳಿಸುವ ಭರವಸೆ ನೀಡಿದಾಗ ಮಲಗಿದ್ದ ಗೌಡರು ಎದ್ದು ಪಿಎಸ್‍ಐ ಅವರನ್ನು ಒಳಗಡೆ ಬಿಟ್ಟಿದ್ದಾರೆ.
ತಾಲೂಕು ಪಂಚಾಯ್ತಿಯ ಬಿಜೆಪಿ ಮಾಜಿ ಸದಸ್ಯ ಹನುಮಂತರಾಜು ವಿರುದ್ಧ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಿವು ಎಂಬವರ ನಡುವೆ ಪೈಪ್ ಲೈನ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಆದ್ದರಿಂದ ಶಿವು ಅವರು ಹನುಮಂತರಾಜು ಅವರ ಮೇಲೆ ದೂರು ನೀಡಿದ್ದರು. ಹೀಗಾಗಿ ಹನುಮಂತರಾಜು ಅವರನ್ನು ಪೊಲೀಸರು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದರು.

ಜೆಡಿಎಸ್ ಶಾಸಕ ಗೌರಿಶಂಕರ್ ಒತ್ತಡದಿಂದ ಬಿಜೆಪಿ ಮುಖಂಡನ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಅನ್ನೋದು ಸುರೇಶ್ ಗೌಡರ ಆರೋಪವಾಗಿತ್ತು. ಅದಕ್ಕಾಗಿಯೆ ತಮ್ಮ ಪಕ್ಷದವರನ್ನು ಬಿಡಿಸಲು ಸುರೇಶ್ ಗೌಡ ಅವರು ಈ ರೀತಿ ರಂಪಾಟ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv










