Tag: ತುಳು

  • ಪ್ರತ್ಯೇಕ ತುಳುನಾಡು ಬೇಡಿಕೆ ಕುಚೋದ್ಯ, ಸಾಂವಿಧಾನಿಕ ಮಾನ್ಯತೆಗೆ ನನ್ನ ಹೋರಾಟವಿದೆ: ಕರಂದ್ಲಾಜೆ

    ಪ್ರತ್ಯೇಕ ತುಳುನಾಡು ಬೇಡಿಕೆ ಕುಚೋದ್ಯ, ಸಾಂವಿಧಾನಿಕ ಮಾನ್ಯತೆಗೆ ನನ್ನ ಹೋರಾಟವಿದೆ: ಕರಂದ್ಲಾಜೆ

    ಉಡುಪಿ: ತುಳುವಿಗೆ ಸಂವಿಧಾನದ ಮಾನ್ಯತೆ ಸಿಗಬೇಕು. ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ. ಆದರೆ ತುಳುರಾಜ್ಯ ಕುಚೋದ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ನಾನು ಮನವಿ ಸಲ್ಲಿಸಿದ್ದೇನೆ. ಎರಡು ಬಾರಿ ಸಂಸತ್ ನಲ್ಲಿ ಪ್ರಸ್ತಾಪ ಮಾಡಿದ್ದೇನೆ. ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏನೆಲ್ಲ ಮಾಡಬೇಕು ಆ ಪ್ರಯತ್ನ ಮಾಡುತ್ತೇವೆ ಎಂದರು. ಇದನ್ನೂ ಓದಿ: 8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್

    ನಾವು ಕರ್ನಾಟಕದವರು. ತುಳುರಾಜ್ಯ ಎಂಬ ಕುಚೋದ್ಯದ ಬೇಡಿಕೆ ಮತ್ತು ಆಶಯಗಳಿಗೆ ನಮ್ಮ ಯಾವುದೇ ಬೆಂಬಲ ಇಲ್ಲ. ಕರ್ನಾಟಕ ಏಕೀಕರಣವಾದ ಮೇಲೆ ನಾವೆಲ್ಲ ಒಟ್ಟಾಗಿ ಇರಬೇಕಾದವರು. ಒಡಕಿನ ಮಾತುಗಳನ್ನು ಮಹಾರಾಷ್ಟ್ರ ದುರುಪಯೋಗ ಮಾಡುವ ಸಾಧ್ಯತೆಯಿದೆ. ತುಳುನಾಡು ಎಂಬ ಬೇಡಿಕೆ ಸರಿಯಲ್ಲ. ಯಾರೂ ಪ್ರತ್ಯೇಕತೆ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.

    ಕರ್ನಾಟಕದಲ್ಲಿ ತುಳು ಭಾಷೆಗೆ ಗೌರವ ಸಿಗಬೇಕು. ತುಳು ಭಾಷೆಗಾಗಿ ನಮ್ಮ ಹೋರಾಟ ಇದೆ. ತುಳು ಭಾಷಾ ಅಭಿಮಾನಿಗಳು, ಹೋರಾಟಗಾರರು ಕವಿಗಳು ಕೃತಿಕಾರರ ಮನಸ್ಸಿನ ಭಾವನೆ ಏನೆಂದು ನನಗೆ ತಿಳಿದಿದೆ. ತುಳು ಭಾಷಿಗಳಾಗಿ ಏನೆಲ್ಲ ಮಾಡಬೇಕು ಖಂಡಿತಾ ಮಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

  • ತುಳು ಚಿತ್ರರಂಗದಲ್ಲಿ ಹೊಸತನದ ಅಲೆಯೆಬ್ಬಿಸಿದ ಗಮ್ಜಾಲ್!

    ತುಳು ಚಿತ್ರರಂಗದಲ್ಲಿ ಹೊಸತನದ ಅಲೆಯೆಬ್ಬಿಸಿದ ಗಮ್ಜಾಲ್!

    ಗಿರಿಗಿಟ್ ಸಿನಿಮಾ ಮೂಲಕ ತುಳು ಸಿನಿಮಾರಂಗದಲ್ಲಿ ಸೂಪರ್ ಸಕ್ಸಸ್ ಕಂಡ ನಟ ರೂಪೇಶ್ ಶೆಟ್ಟಿ, ಇದೀಗ `ಗಮ್ಜಾಲ್’ ಎಂಬ ಹಿಟ್ ಸಿನಿಮಾ ನೀಡಿ ಮತ್ತೊಂದು ಸಕ್ಸಸ್ ತಮ್ಮದಾಗಿಸಿಕೊಂಡಿದ್ದಾರೆ.

    ರೂಪೇಶ್ ಶೆಟ್ಟಿ ರಚಿಸಿ ನಟಿಸಿರುವ, ನವೀನ್ ಶೆಟ್ಟಿ ಹಾಗೂ ಸುಮನ್ ಸುವರ್ಣ ನಿರ್ದೇಶನದ `ಗಮ್ಜಾಲ್’ ಸಿನಿಮಾ ಬಿಡುಗಡೆಯಾಗಿ ತುಳು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದೆ. ಚಿತ್ರ ತೆರೆಕಂಡು ದಕ್ಷಿಣ ಕನ್ನಡದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‍ಗಳಿಕೆಯಲ್ಲೂ ಕೂಡ ಸೌಂಡ್ ಮಾಡುತ್ತಿದೆ. ಈ ಮೂಲಕ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಎಂಬ ಖ್ಯಾತಿಯನ್ನು `ಗಮ್ಜಾಲ್’ ಸಿನಿಮಾ ತನ್ನದಾಗಿಸಿಕೊಂಡಿದೆ.

    `ಗಮ್ಜಾಲ್’ ಚಿತ್ರಕ್ಕೆ ಸಿಗುತ್ತಿರುವ ಜನರ ಪ್ರೀತಿಯನ್ನು ಕಂಡ ಚಿತ್ರತಂಡ ಬೇರೆ ಕಡೆಗಳಲ್ಲೂ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿತ್ತು. ಸ್ಯಾಂಡಲ್‍ವುಡ್ ಖ್ಯಾತ ವಿತರಕ ಜಯಣ್ಣ `ಗಮ್ಜಾಲ್’ ಸಿನಿಮಾವನ್ನು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ವಿತರಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಹನ್ನೆರಡು ಸೆಂಟರ್‍ಗಳಲ್ಲಿ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ರೂಪೇಶ್ ನಿರ್ದೇಶಿಸಿ ನಟಿಸಿದ್ದ ಗಿರಿಗಿಟ್ ಸಿನಿಮಾವನ್ನೂ ಕೂಡ ಜಯಣ್ಣ ಬೆಂಗಳೂರಿನಲ್ಲಿ ವಿತರಣೆ ಮಾಡಿದ್ದರು.

    ಕಾಮಿಡಿ ಸಿನಿಮಾಗಳೇ ಪ್ರಧಾನವಾಗಿದ್ದ ತುಳು ಚಿತ್ರರಂಗದಲ್ಲಿ ಮೊದಲ ಬಾರಿ ಪ್ರಯೋಗಾತ್ಮಕ ಸಿನಿಮಾವೊಂದು ತೆರೆಕಂಡಿದೆ. ಚಿತ್ರದಲ್ಲಿ ಎರಡು ಕಥೆಗಳಿದ್ದು, ತಂದೆ, ತಾಯಿಯ ಪ್ರಾಮುಖ್ಯತೆ ಹಾಗೂ ಸಂಬಂಧಗಳ ಬೆಲೆಯನ್ನು ಅರ್ಥೈಸುವ ಕಥಾಹಂದರವನ್ನು `ಗಮ್ಜಾಲ್’ ಸಿನಿಮಾ ಹೊಂದಿದೆ.

    ಬೆಂಗಳೂರಿನಲ್ಲಿ ಥಿಯೇಟರ್‍ಗಳಿಗೆ ಭೇಟಿ ನೀಡಿದಾಗ ಚಿತ್ರಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಹಾಗೂ ಪ್ರೋತ್ಸಾಹದ ಬಗ್ಗೆ ಮಾತನಾಡಿರುವ ನಟ ರೂಪೇಶ್ ಶೆಟ್ಟಿ ತುಳು ಸಿನಿರಸಿಕರು ಉತ್ತಮ ಸಿನಿಮಾಕ್ಕೆ ಬೆಂಬಲ ನೀಡೇ ನೀಡುತ್ತಾರೆ ಎಂಬ ಭರವಸೆಯಲ್ಲಿ ಸಿನಿಮಾ ರಿಲೀಸ್ ಮಾಡಿದ್ವಿ. ಆ ಭರವಸೆ ನಿಜವಾಗಿದ್ದು ಜನ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದರಿಂದ ಬೇರೆ ಸಿನಿಮಾ ಬಿಡುಗಡೆಗೂ ಧೈರ್ಯ ಸಿಕ್ಕಂತಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಪ್ರಸನ್ನ ಬೈಲೂರು ಸಂಭಾಷಣೆ, ಜೋಯೆಲ್ ರೆಬೆಲೊ, ಡ್ಯಾರೆಲ್ ಮಸ್ಕರ್ಯಾನ್ಸ್ ಸಂಗೀತ ಹಾಗೂ ಡ್ಯಾರೆಲ್ ಮಸ್ಕರ್ಯಾನ್ಸ್ ಹಿನ್ನೆಲೆ ಸಂಗೀತ, ನಿರಂಜನ್ ದಾಸ್ ಛಾಯಾಗ್ರಹಣ, ರಾಹುಲ್ ವಸಿಷ್ಠ ಸಂಕಲನ, ರೂಪೇಶ್ ಶೆಟ್ಟಿ ಮತ್ತು ಸುಮನ್ ಸುವರ್ಣ ಸಾಹಿತ್ಯ `ಗಮ್ಜಾಲ್’ ಚಿತ್ರಕ್ಕಿದೆ. ಕರೀಶ್ಮಾ ಅಮೀನ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಪ್ರಸನ್ನ ಬೈಲೂರು, ಸಂದೀಪ್ ಶೆಟ್ಟಿ ಮಣಿಬೆಟ್ಟು, ಉಮೇಶ್ ಮಿಜಾರ್, ವಿಶ್ವನಾಥ್ ಅಸೈಗೊಳಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಒಟ್ಟಿನಲ್ಲಿ `ಗಮ್ಜಾಲ್’ ಸಿನಿಮಾ ಯಶಸ್ಸು ತುಳು ಚಿತ್ರರಂಗದ ಸಿನಿಮಾ ಚಟುವಟಿಕೆಗಳಿಗೆ ಹೊಸ ಹುರುಪು ಹಾಗೂ ಭರವಸೆಯನ್ನು ನೀಡಿದೆ ಎಂದರೆ ಅದು ತಪ್ಪಾಗಲಾರದು.

  • ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ – ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ

    ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ – ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ

    ಉಡುಪಿ: ಶ್ರೀ ಕೃಷ್ಣ ಮಠದ ಬೋರ್ಡ್ ಬದಲಾವಣೆ ವಿಚಾರ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಬೋರ್ಡ್ ನಲ್ಲಿ ಕನ್ನಡ ಕಾಣೆಯಾಗಿರುವ ಬಗ್ಗೆ ಕನ್ನಡಪರ ಸಂಘಟನೆಗಳು ಮಠದ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟಾಗುತ್ತಲ್ಲೇ ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ ನೀಡಿದೆ.

    ಕೃಷ್ಣ ಮಠದ ಪುನಶ್ಚೇತನಗೊಳಿಸುವ ಜವಾಬ್ದಾರಿ ಹೊತ್ತಿರುವ ಕಲಾವಿದ ಪುರುಷೋತ್ತಮ ಅಡ್ವೆ ಮಾತನಾಡಿದ್ದಾರೆ. ಉಡುಪಿ ಕೃಷ್ಣ ಮಠವನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಪುನಶ್ಚೇತನದ ಸಂದರ್ಭ ಮಖ್ಯದ್ವಾರದ ಪ್ಲಾಸ್ಟಿಕ್ ಬೋರ್ಡ್ ತೆಗೆಯಲಾಗಿದೆ. ಮರದಲ್ಲಿ ತಯಾರಿಸಿ ಬೋರ್ಡ್ ಅಳವಡಿಸುವ ಯೋಜನೆ ಇದೆ. ದ್ವಾರದ ಮೇಲ್ಭಾಗದಲ್ಲಿ ಕನ್ನಡ ಬೋರ್ಡ್ ಅಳವಡಿಸುತ್ತೇವೆ. ಕೆಳಭಾಗದಲ್ಲಿ ಸಂಸ್ಕೃತ, ತುಳುವಿನಲ್ಲಿ ಬೋರ್ಡ್ ಅಳವಡಿಸಲಾಗುವುದು. ಈ ಬಗ್ಗೆ ಪರ್ಯಾಯ ಅದಮಾರು ಮಠಾಧೀಶರು ಸೂಚನೆಯನ್ನು ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು.

    ಬೋರ್ಡ್ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಲಕ್ಷದೀಪೋತ್ಸವ ಬಂದಿದೆ. ಮಠದ ಮುಖ್ಯದ್ವಾರಕ್ಕೆ ಬೋರ್ಡ್ ಅಳವಡಿಸಬೇಕಾದ ಪ್ರಮೇಯ ಬಂತು. ಕನ್ನಡದ ಬೋರ್ಡ್ ಇನ್ನಷ್ಟೇ ತಯಾರು ಆಗಬೇಕಾಗಿದೆ. ಸಂಸ್ಕೃತ ಮತ್ತು ತುಳುವಿನ ಬೋರ್ಡ್ ಮೊದಲೇ ಸಿದ್ಧವಾಗಿರುವ ಕಾರಣ ಅದನ್ನು ಅಳವಡಿಸಲಾಗಿದೆ. ತುಳುವಿಗೆ ಮಾನ್ಯತೆ ಕೊಡುವ ಉದ್ದೇಶದಿಂದ ಈ ಬೋರ್ಡ್ ಅಳವಡಿಸಲಾಗಿದೆ. ಕನ್ನಡ ಬೋರ್ಡ್ ಸಿದ್ಧವಾದ ಕೂಡಲೇ ಅದನ್ನು ಮೇಲ್ಭಾಗದಲ್ಲಿ ಅಳವಡಿಸುತ್ತೇವೆ ಎಂದರು.

  • ಕೃಷ್ಣ ಮಠದ ಫಲಕದಲ್ಲಿ ಕನ್ನಡ ಕಾಣೆ – ಸಂಸ್ಕೃತ, ತುಳು ಪ್ರತ್ಯಕ್ಷ

    ಕೃಷ್ಣ ಮಠದ ಫಲಕದಲ್ಲಿ ಕನ್ನಡ ಕಾಣೆ – ಸಂಸ್ಕೃತ, ತುಳು ಪ್ರತ್ಯಕ್ಷ

    – ಕನ್ನಡಾಭಿಮಾನಿ ಮಠದ ಭಕ್ತರಿಗೆ ಬೇಸರ

    ಉಡುಪಿ: ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪದ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಕನ್ನಡ ಮಾಯವಾಗಿದೆ. ಉಡುಪಿ ಶ್ರೀಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಕಾಣೆಯಾಗಿದೆ.

    ಈ ಹಿಂದೆ ಕೃಷ್ಣಮಠದ ಮುಖ್ಯ ಮಹಾದ್ವಾರದಲ್ಲಿ ಕನ್ನಡದಲ್ಲಿ ಕೃಷ್ಣಮಠ ಎಂಬ ದೊಡ್ಡ ಫಲಕವನ್ನು ಹಾಕಲಾಗಿತ್ತು. ಈಗ ಉಡುಪಿಯಲ್ಲಿ ಅದಮಾರು ಮಠದ ಪರ್ಯಾಯ ನಡೆಯುತ್ತಿದೆ. ಮಠವನ್ನು ನವೀಕರಣ ಮಾಡುವ ಜೊತೆಗೆ ಕನ್ನಡದ ಬೋರ್ಡು ಕಳಚಿ ಹೊಸ ಬೋರ್ಡ್ ಅಳವಡಿಸಿದ್ದಾರೆ.

    ಹೊಸ ಫಲಕದಲ್ಲಿ ಕನ್ನಡ ಕಾಣೆಯಾಗಿದೆ. ತುಳು ಮತ್ತು ಸಂಸ್ಕೃತದಲ್ಲಿ ಶ್ರೀಕೃಷ್ಣಮಠ ಎಂದು ಬರೆಯಲಾಗಿದೆ. ಶ್ರೀಕೃಷ್ಣಮಠ ರಜತಪೀಠ ಪುರ ಎಂದು ತುಳುವಿನಲ್ಲೂ, ಶ್ರೀಕೃಷ್ಣಮಠ ರಜತಪೀಠ ಪುರಂ ಎಂದು ಸಂಸ್ಕೃತದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ – ಪರ್ಯಾಯ ಅದಮಾರು ಮಠದಿಂದ ಸ್ಪಷ್ಟನೆ

    ಈ ಬಗ್ಗೆ ಕನ್ನಡ ಅಭಿಮಾನಿಗಳು ಮಠದ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೃಷ್ಣಮಠದಲ್ಲಿ ಕನ್ನಡಕ್ಕೆ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

     

  • ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆ

    ತುಳು ಚಿತ್ರ ನಟ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆ

    ಮಂಗಳೂರು: ತುಳು ಚಿತ್ರ ನಟ, ರೌಡಿ ಶೀಟರ್‌ ಸುರೇಂದ್ರ ಬಂಟ್ವಾಳ್ ಅವರನ್ನು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

    ಬಿ.ಸಿ.ರೋಡ್ ಬಳಿಯ ಫ್ಲಾಟ್‌ನಲ್ಲಿ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಇಂದು ಬೆಳಗ್ಗೆ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

    ಕೆಲ ತುಳು ಚಿತ್ರಗಳಲ್ಲಿ ನಟಿಸಿದ್ದ ನಟ ಸುರೇಂದ್ರ ಬಂಟ್ವಾಳ್ ಹಣಕಾಸು ವ್ಯವಹಾರ ಮಾಡುತ್ತಿದ್ದರು. ಹಣಕಾಸು ವಿಚಾರಕ್ಕೆ ಜೊತೆಗಿದ್ದ ವ್ಯಕ್ತಿಗಳು ಬಂಟ್ವಾಳ್ ಅವರನ್ನು ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಕನ್ನಡ ಚಿತ್ರ ಸವರ್ಣದೀರ್ಘ ಸಂಧಿ ಸೇರಿದಂತೆ ಹಲವು ತುಳು ಚಿತ್ರಗಳಲ್ಲಿ ನಟಿಸಿದ್ದ ಸುರೇಂದ್ರ ಬಂಟ್ವಾಳ್ ಕಳೆದ 2018ರ ಜೂನ್‌ನಲ್ಲಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದರು.

    ಬಂಟ್ವಾಳ ಪೇಟೆಯಲ್ಲಿ ತಲವಾರು ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬಂಟ್ವಾಳ್ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ‌ಮೇಲೆ ಸುರೇಂದ್ರ ಹೊರಬಂದಿದ್ದರು.

  • ಕಾಸರಗೋಡಿನಲ್ಲಿ ತುಳುವರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ: ಸಚಿವ ಕೋಟ

    ಕಾಸರಗೋಡಿನಲ್ಲಿ ತುಳುವರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ: ಸಚಿವ ಕೋಟ

    ಮಂಗಳೂರು: ಕಾಸರಗೋಡಿನ ತುಳು-ಕನ್ನಡಿಗರ ಸ್ನೇಹ ಅನನ್ಯ. ತುಳುವ ನೆಲದವರೇ ಇಲ್ಲಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿದ್ದಾರೆ. ಆದುದರಿಂದಲೇ ಭಾಷೆ ಮತ್ತು ಸಂಸ್ಕೃತಿಗೆ ಪೆಟ್ಟು ಬಿದ್ದಾಗ ನಿರಂತರವಾಗಿ ದಿಟ್ಟತನದಿಂದ ಹೋರಾಟ ಮಾಡುತ್ತಾರೆ. ತುಳು ಕಾವ್ಯಗಳನ್ನು ವಾಚನ ಮತ್ತು ಪ್ರವಚನದ ಮೂಲಕ ಪ್ರಚಾರ ಪಡಿಸುತ್ತಿರುವುದು ತುಳು ಭಾಷೆಯ ಬೆಳವಣಿಗೆಗೆ ಒಂದು ಉತ್ತಮ ವೇದಿಕೆ. ತುಳು ಅಕಾಡೆಮಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

    ತುಳುವಲ್ರ್ಡ್ ಮತ್ತು ಜಾನಪದ ಪರಿಷತ್ ಗಡಿನಾಡ ಘಟಕದ ಸಂಯುಕ್ತಾಶ್ರಯದಲ್ಲಿ ಕಾಸಗೋಡಿನಲ್ಲಿ ನಡೆದ ಗಡಿನಾಡ ಜಾನಪದ ಮೇಳ ಮತ್ತು ತುಳು ಕಾವ್ಯಯಾನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ತುಳುವ ವಾಲ್ಮೀಕಿ ಎಂದು ಹೆಸರು ಪಡೆದ ಮಂದಾರ ಕೇಶವ ಭಟ್ಟರು ಬರೆದ ಬೀರದ ಬೋಲ್ಪು ಕಾವ್ಯದ ಪುಸ್ತಕವನ್ನು ಪ್ರವಚನಕಾರರಿಗೆ ನೀಡಿ ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ. ಆರ್. ಸುಬ್ಬಯ ಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

    ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಜೇಶ್ವರ ಶಾಸಕ ಎಂ.ಸಿ. ಕಮರುದ್ದೀನ್. ಡಾ. ತಲ್ಲೂರು ಶಿವರಾಮ ಶೆಟ್ಟಿ, ಪೈವಳಿಕೆ ಅರಮನೆಯ ರಂಗತ್ರಯ ಬಲ್ಲಾಳ್, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಅಜಿತ್ ಎಂ.ಸಿ ಲಾಲ್ ಬಾಗ್, ಪ್ರೊ. ಎ ಶ್ರೀನಾಥ್ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಡಾ. ಮೂಡಂಬೈಲು ರವಿ ಶೆಟ್ಟಿ ಕತಾರ್, ಲಯನ್ ಗೋಪಾಲ ಸಿ. ಬಂಗೇರ ಉಡುಪಿ, ಜ್ಯೋತಿಷ್ಯ ರತ್ನ ಅಶೋಕ್ ಪುರೋಹಿತ ಮುಂಬೈ ಮೊದಲಾದವರಿಗೆ ಗಡಿನಾಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ತುಳು ಕಾವ್ಯವಾಚನದಲ್ಲಿ ತುಳುವ ವಾಲ್ಮೀಕಿ ಶ್ರೀ ಮಂದಾರ ಕೇಶವ ಭಟ್ ಬರೆದ  ಬೀರದ ಬೋಲ್ಪು ಕಾವ್ಯದ ಆಯ್ದ ಪದ್ಯಗಳನ್ನು ಶಿವಪ್ರಸಾದ್ ಎಡಪದವು ಮತ್ತು ಶಾಲಿನಿ ಹೆಬ್ಬರ್ ವಾಚಿಸಿದರು. ಡಾಕ್ಟರ್ ದಿನಕರ ಪಚ್ಚನಾಡಿ ಅವರು ಪ್ರವಚಿಸಿದರು. ಡಾ. ರಾಜೇಶ್ ಆಳ್ವ ಬದಿಯಡ್ಕ ತುಳು ಕಾವ್ಯಯಾನದ ಉದ್ದೇಶ ಲಕ್ಷ್ಯಗಳನ್ನು ತಿಳಿಸಿದರು. ಬಳಿಕ ಕೇರಳ ಕರ್ನಾಟಕದ ವಿವಿಧ ಜಾನಪದ ತಂಡಗಳಿಂದ ಜಾನಪದ ಕಲಾ ಪ್ರದರ್ಶನ ನಡೆಯಿತು.

  • ತುಳುವಿನಲ್ಲೇ ಮಾತಾಡಿ ರಂಜಿಸಿದ ‘ಅವನೇ ಶ್ರೀಮನ್ನಾರಾಯಣ’

    ತುಳುವಿನಲ್ಲೇ ಮಾತಾಡಿ ರಂಜಿಸಿದ ‘ಅವನೇ ಶ್ರೀಮನ್ನಾರಾಯಣ’

    ಮಂಗಳೂರು: ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಚಾರಕ್ಕಾಗಿ ನಾಯಕ ನಟ ರಕ್ಷಿತ್ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಸುಚಿತ್ರಾ ಥಿಯೇಟರಿಗೆ ಆಗಮಿಸಿದ ರಕ್ಷಿತ್ ಶೆಟ್ಟಿ, ಪ್ರೇಕ್ಷಕರನ್ನು ಭೇಟಿಯಾದರು.

    ತಮ್ಮ ಮಾತೃಭಾಷೆಯಾದ ತುಳುವಿನಲ್ಲೇ ಮಾತು ಆರಂಭಿಸಿದ ರಕ್ಷಿತ್ ಶೆಟ್ಟಿ, ಚಿತ್ರಕ್ಕೆ ಹೆಚ್ಚು ಪ್ರಚಾರ ನೀಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದರು. ಇದೇ ವೇಳೆ ಚಿತ್ರ ಪ್ರೇಮಿಗಳು ರಕ್ಷಿತ್ ಜೊತೆ ಸೆಲ್ಫಿಗೆ ಮುಗಿಬಿದ್ದರು.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಹೀಗೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಹೆಮ್ಮೆ ಎನಿಸಿದೆ. ಜನರು ಹೆಚ್ಚು ಥಿಯೇಟರಿಗೆ ಆಗಮಿಸಿ ಚಿತ್ರ ನೋಡಬೇಕು. ಪೈರಸಿ ಕಾಟ ನಮ್ಮ ಚಿತ್ರಕ್ಕೂ ತಗುಲಿದ್ದು, ಅದನ್ನು ನೀಗಿಸಲು ಪೈರಸಿ ಟೀಂ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ವೇಳೆ ಚಿತ್ರದ ನಿರ್ದೇಶಕರು ಮತ್ತು ನಾಯಕಿ ನಟಿ ಶಾನ್ವಿ ಜೊತೆಗಿದ್ದರು.

  • #TuluOfficialinKA_KL ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಗಲಿ – ಟ್ವಿಟ್ಟರ್ ನಲ್ಲಿ ಅಭಿಯಾನ

    #TuluOfficialinKA_KL ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಿಗಲಿ – ಟ್ವಿಟ್ಟರ್ ನಲ್ಲಿ ಅಭಿಯಾನ

    ಬೆಂಗಳೂರು: ಕರಾವಳಿ ಕರ್ನಾಟಕದ ಜನರ ತುಳು ಭಾಷೆಗೆ ಅಧಿಕೃತವಾಗಿ ಮಾನ್ಯತೆಗಾಗಿ ಟ್ವಿಟ್ಟರ್ ನಲ್ಲಿ #TuluOfficialinKA_KL ಅಭಿಯಾನ ಆರಂಭಿಸಲಾಗಿದೆ. ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸಲಾಗಿದೆ.

    ಈ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ಪ್ರಮುಖರು, ರಾಜಕೀಯ ಗಣ್ಯರು ಸಾಥ್ ನೀಡುತ್ತಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ, ನಟರಾದ ಜಗ್ಗೇಶ್, ನಿರೂಪ್ ಭಂಡಾರಿ, ರಕ್ಷಿತ್ ಶೆಟ್ಟಿ ಕಲಾವಿದ ವಿಲಾಸ್ ನಾಯಕ್, ರಾಜಕೀಯ ಪ್ರಮುಖರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್ ಸೇರಿದಂತೆ ಕರಾವಳಿ ಭಾಗದ ಜನರು ಟ್ವಿಟ್ಟರ್ ಅಭಿಯಾನದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಜಗ್ಗೇಶ್: #ತುಳು ಸಹೋದರರೆ ಉಸಾರ್ ಉಲ್ಲೇರ, ಬೊಕ್ಕ ತುಳು ಭಾಷೆಯ ವಿಷಯ ಯಾನ್ ಲಾ ನಿಮ್ಮೊಟ್ಟಿಗೆ ಬರ್ಪೇ. ಹೌದು ತುಳು ಭಾಷೆ ಭಾರತದ ಸನಾತನ ಭಾಷೆ. ಸನಾತನ ಕನ್ನಡದ ಸಹೋದರ ಭಾಷೆ ಉಳಿಯಲು ತುಳು ಭಾಷೆಯ ಎಲ್ಲಾಪಕ್ಷದ ನಾಯಕರು ಚಿಂತಕರು ಸಾಹಿತಿಗಳು ಮಾಧ್ಯಮದಲ್ಲಿರುವವರು ನಟ-ನಟಿ ಪ್ರಾಮಾಣಿಕವಾಗಿ ಯತ್ನಿಸಬೇಕು. ಭಾಷೆ ಉಳಿದರೆ ಸನಾತನ ಭಾವನೆ ಉಳಿಯುತ್ತದೆ. ಇದನ್ನೂ ಓದಿ: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಧರ್ಮಾಧಿಕಾರಿ ಮನವಿ

    ನಳಿನ್ ಕುಮಾರ್ ಕಟೀಲ್: ತುಳು ಭಾಷೆನ್ ಸಂವಿಧಾನೊದ 8ನೇ ಪರಿಚ್ಛೇದೊಗು ಸೇರ್ಪಾವೊಡು ಪನ್ಪಿನವು ನಮ್ಮ ಅರಿಕೆ. ಇತ್ತೆ ರಾಜ್ಯ ಬೊಕ್ಕ ಕೇಂದ್ರೊಡು ಬಿಜೆಪಿ ಸರ್ಕಾರ ಉಪ್ಪುನೇರ್ದಾವರ ತುಳು ಭಾಷೆನ್ ಸಂವಿಧಾನೊದ 8ನೇ ಪರಿಚ್ಛೇದೊಗು ಸೇರ್ಪಾವಿನ ಬೇಲೆ ಅಪುಂಡು ಪನ್ಪಿ ನಂಬಿಕೆ ಎಂಕುಂಡು.

    ಶೋಭಾ ಕರಂದ್ಲಾಜೆ: ಪೊರ್ಲುದ ಭಾಷೆ ತುಳುಗ್ ಅಧಿಕೃತ ಸ್ಥಾನಮಾನ ತಿಕ್ಕೊಡು, ನಮ್ಮ ಅಪ್ಪೆ ಭಾಷೆನ್ ಸಂವಿಧಾನತ 8ನೇ ಪರಿಚ್ಛೇದಗ್ ಸೇರ್ಪಾವುನ ಮಾತ ಪ್ರಯತ್ನಗ್ ಎನ್ನ ಬೆರಿಸಾಯ ಏಪಲಾ ಉಪ್ಪುಂಡು. ತುಳು ಭಾಷೆಗಾದ್ ನಡಪ್ಪುನ ಮಾತ ಹೋರಾಟಕುಲ ಎನ್ನ ಸಾಕಾರ ಏಪಲ ಕೊರ್ಪೆ. ನಮ್ಮ ಭಾಷೆ, ನಮಕ್ ಪೆರ್ಮೆ!

    https://twitter.com/ShobhaBJP/status/1170676492100964352

    ಪ್ರಮೋದ್ ಮಧ್ವರಾಜ್: ಪಕ್ಷಾತೀತವಾಗಿ ಕರಾವಳಿ ಭಾಗದ ರಾಜಕೀಯ ಮುಖಂಡರು ಭಾಷೆಗಾಗಿ ಒಂದಾಗಬೇಕಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಾಷೆಯ ಶ್ರೀಮಂತಿಕೆಯನ್ನು ತೋರಿಸಬೇಕಿದೆ. ಈ ಕುರಿತು ವಾಟ್ಸಪ್ ಗ್ರೂಪ್ ರಚಿಸಿಕೊಂಡು ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕಿದೆ. ಒಂದಾಗಿ ನಮ್ಮ ಬೇಡಿಕೆಗಳನ್ನು ಜನಪ್ರತಿನಿಧಿಗಳ ಮುಂದೆ ತೆಗೆದುಕೊಂಡು ಹೋಗಬೇಕು. ಮೊದಲು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನ ಪಡೆದುಕೊಳ್ಳಬೇಕು.

    ವಿಲಾಸ ನಾಯಕ್: ಹೃದಯಕ್ಕೆ ಹತ್ತಿರವಾದ ಭಾಷೆ ತುಳು. ನಾನು ಕರ್ನಾಟಕದ ಕರಾವಳಿ ಭಾಗದವನು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ತುಳು ವಿಭಿನ್ನ ಸಂಪ್ರದಾಯ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತಿಕೆಯನ್ನು ಹೊಂದಿದೆ. ಹಾಗಾಗಿ ತುಳು ಭಾಷೆಯನ್ನು ಗುರುತಿಸಿ ವಿಶೇಷ ಸ್ಥಾನಮಾನ ನೀಡಬೇಕು.

    ಅಣ್ಣಾಮಲೈ: ತುಳು ದ್ರಾವಿಡ ಭಾಷೆಗಳಲ್ಲಿ ಒಂದು ಎಂಬುದನ್ನು ಇತಿಹಾಸ ಮತ್ತು ಸಂಪ್ರದಾಯ ಹೇಳುತ್ತದೆ. ಆ ಪ್ರದೇಶದಲ್ಲಿ ಸೇವೆಯನ್ನು ಸಲ್ಲಿಸಿದ್ದರಿಂದ ಭಾಷೆಯ ಶ್ರೀಮಂತಿಕೆ ಮತ್ತು ಅದ್ಧೂರಿತನವನ್ನು ಗಮನಿಸಿದ್ದೇನೆ. ಸಿರಿ, ಕೋಟಿ ಮತ್ತು ಚನ್ನಯ್ಯ ಕಥೆಯಿಂದ ತುಳು ಭಾಷೆಯ ಶ್ರೀಮಂತಿಕೆ ಅರ್ಥವಾಗುತ್ತದೆ. ಹಾಗಾಗಿ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ಅರ್ಹತೆಯನ್ನು ಹೊಂದಿದೆ.

    ರಕ್ಷಿತ್ ಶೆಟ್ಟಿ: ನಮ್ಮ ಭಾಷೆ, ಸಂಪ್ರದಾಯ, ಸಂಸ್ಕೃತಿಗಾಗಿ ನಡೆಯುತ್ತಿರುವ ಅಭಿಯಾನದಲ್ಲಿ ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಕೇವಲ ಸಾಮಾಜಿಕ ಜಾಲತಾಣದ ಮೂಲಕ ಅಭಿಯಾನ ಆರಂಭಿಸಿದ್ರೆ ಭಾಷೆಗೆ ಮಾನ್ಯತೆ ಸಿಗಲಾರದು. ಇದಕ್ಕಾಗಿ ತುಳು ಸಮುದಾಯದ ಎಲ್ಲರು ಜೊತೆಗೂಡಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಬೇಕಿದೆ ಎಂದು ತಿಳಿಸಿದ್ದಾರೆ.

    ಅನೂಪ್ ಭಂಡಾರಿ: ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲೊಂದು. ಇದು ಆಧಿಕೃತ ಭಾಷೆಯಾಗಬೇಕೆಂಬುದು ಕವಿ ಕಯ್ಯಾರರ ಆಶಯವೂ ಆಗಿತ್ತು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ತುಳು ಭಾಷೆಗ್ ಅಧಿಕೃತ ಭಾಷೆದ ಸ್ಥಾನ ಮಾನೊನು ಕೊರೊಡುಂದು ಒತ್ತಾಯ ಮಲ್ಪುವೊ ಎಂದು ಬರೆದುಕೊಂಡಿದ್ದಾರೆ.

    ನಿರೂಪ್ ಭಂಡಾರಿ: ಪೊರ್ಲುದ ತುಳು ಭಾಷೆಗ್ ಅಧಿಕೃತ ಸ್ಥಾನಮಾನ ಕೂಡಲೇ ತಿಕ್ಕೊಡು. ಪಂಚ ದ್ರಾವಿಡ ಭಾಷೆಯಲ್ಲೊಂದಾದ ತುಳುಭಾಷೆಯನ್ನು ಎಂಟನೆಯ ಪರಿಚ್ಛೇದಕ್ಕೆ ಸೇರಿಸ ಬೇಕೆಂಬ ಬೇಡಿಕೆ ನ್ಯಾಯ ಸಮ್ಮತ. ಅದಕ್ಕೆ ನಮ್ಮೆಲ್ಲರ ಬೆಂಬಲ ಇದೆ.

    ಸಿಂಪಲ್ ಸುನಿ: ತುಳು ಭಾಷೆ ಒರಿಪಯಾರೆ ಎಂಕ್ಲ್ ನ ಸಹಾಯ ಏಪಲ ಉಂಡು. ನಿಕುಲು ದುಂಬು ಪೊಲೆ, ಬೆರಿ ಸಹಾಯ ಆದ್ ಎಂಕುಲು ಉಲ್ಲ. ಭಾಷೆಗಳು ಆಯಾ ಭಾಗದ ಜೀವ, ಸೊಗಡು, ಸೊಬಗು, ಸಂಪ್ರದಾಯದ ಅಸ್ತಿತ್ವ. ತುಳು ಭಾಷೆ ಉಳಿಸಲು ನಮ್ಮ ಸಹಾಯ ಯಾವಾಗಲೂ ಇದೆ. ನಿಮ್ಮ ಬೆನ್ನ ಹಿಂದೆ ನಾವಿದ್ದೇವೆ.

  • ಕಟಪಾಡಿ ಕಟ್ಟಪ್ಪೆ ತುಳು ಚಿತ್ರದ ಆಡಿಯೋ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಕಟಪಾಡಿ ಕಟ್ಟಪ್ಪೆ ತುಳು ಚಿತ್ರದ ಆಡಿಯೋ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಮಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಸ್ಯಾಂಡಲ್‍ವುಡ್‍ನಿಂದ ಕೋಸ್ಟಲ್‍ವುಡ್ ಕಡೆಗೆ ಬಂದಿದ್ದು ಮಂಗಳೂರಿನಲ್ಲಿ ತುಳು ಚಿತ್ರವೊಂದರ ಆಡಿಯೋ ರಿಲೀಸ್ ಮಾಡಿದರು.

    ತುಳು ಚಿತ್ರ ‘ಕಟಪಾಡಿ ಕಟ್ಟಪ್ಪೆ’ ಅನ್ನುವ ತುಳು ಚಿತ್ರದ ಆಡಿಯೋ ರಿಲೀಸ್‍ನ್ನು ಮಂಗಳೂರಿನ ಪುರಭವನದಲ್ಲಿ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ತುಳು ಭಾಷೆಯನ್ನು ಮುಂದಿನ ದಿನಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಹೇಳಿದ್ರು.

    ಅದ್ಧೂರಿ ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ತುಳು ಚಿತ್ರರಂಗ ಹಾಗೂ ತುಳು ಭಾಷೆಯನ್ನು ಹಾಡಿ ಹೊಗಳಿದರು. ತನ್ನ ತಾಯಿಯೂ ತುಳುವರಾಗಿದ್ದು, ನಾನು ಮುಂದಿನ ದಿನದಲ್ಲಿ ತುಳು ಮಾತನಾಡಲು ಪ್ರಯತ್ನಿಸುತ್ತೇನೆ. ಕನ್ನಡ ಚಿತ್ರರಂಗದಿಂದ ತುಳು ಚಿತ್ರದ ಆಡಿಯೋ ರಿಲೀಸ್‍ಗೆ ನಾವೆಲ್ಲ ಬರುವಷ್ಟು ತುಳು ಚಿತ್ರರಂಗ ಬೆಳೆದಿದೆ. ಕರ್ನಾಟಕದಲ್ಲೇ ಇನ್ನೊಂದು ಭಾಷೆಯ ಚಿತ್ರದ ಆಡಿಯೋ ರಿಲೀಸ್ ಮಾಡೋದು ಖುಷಿ ತಂದಿದೆ. ಯಾವ ರಾಜ್ಯದಲ್ಲೂ ಎರಡು ಮೂರು ಭಾಷೆ ಇಲ್ಲ. ಹಾಗೆನೇ ಎರಡು ಭಾಷೆಯ ಚಿತ್ರರಂಗ ಇಲ್ಲ ಅದು ಈ ರಾಜ್ಯದಲ್ಲಿ ಮಾತ್ರ ಇರೋದು. ಕನ್ನಡ ಚಿತ್ರರಂಗಕ್ಕೆ ದುಡ್ಡು ಹಾಕುವ ನಿರ್ಮಾಪಕರು ಮಂಗಳೂರಿನಲ್ಲಿದ್ದರೂ ತಮ್ಮದೇ ಭಾಷೆಯನ್ನು ಉಳಿಸಬೇಕೆಂದು ತುಳು ಚಿತ್ರಗಳನ್ನು ಮಾಡುತ್ತಿರುವ ನಿರ್ಮಾಪಕರುಗೆ ಹ್ಯಾಟ್ಸ್ ಆಫ್ ಎಂದರು.

    ರಾಜೇಶ್ ಬ್ರಹ್ಮಾವರ ನಿರ್ಮಾಣದ ಕಟಪಾಡಿ ಕಟ್ಟಪ್ಪೆ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆ ಮೂಡಿಸಿದ್ದು, ಈ ಚಿತ್ರದ ಆಡಿಯೋ ರಿಲೀಸನ್ನೂ ಕಿಚ್ಚ ಸುದೀಪ್ ರಿಲೀಸ್ ಮಾಡಿರೋದು ಇದೀಗ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

  • ತುಳು ಭಾಷೆ, ತುಳುನಾಡಿನ ಜನರ ವಿರುದ್ಧ ನಿಂದನೆ- ಕರವೇ ಮುಖಂಡನ ವಿರುದ್ಧ ಆಕ್ರೋಶ

    ತುಳು ಭಾಷೆ, ತುಳುನಾಡಿನ ಜನರ ವಿರುದ್ಧ ನಿಂದನೆ- ಕರವೇ ಮುಖಂಡನ ವಿರುದ್ಧ ಆಕ್ರೋಶ

    ಮಂಗಳೂರು: ಕರಾವಳಿಯ ತುಳು ಭಾಷೆ ಮತ್ತು ತುಳುನಾಡಿನ ಜನರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡನೊಬ್ಬ ಅಶ್ಲೀಲ ಭಾಷೆಯಲ್ಲಿ ನಿಂದಿಸಿರುವುದು ಇದೀಗ ತುಳುವರ ಆಕ್ರೋಶಕ್ಕೆ ಕಾರಣವಾಗಿದೆ.

    ಕರವೇ ನಾರಾಯಣ ಗೌಡ ಬಣದ ಬೆಂಗಳೂರು ನಗರ ಕಾರ್ಯದರ್ಶಿ ಅಂತ ಹೇಳ್ಕೊಂಡಿರೋ ಜಾನ್ ಕರವೇ ಎಂಬಾತ ಫೇಸ್‍ಬುಕ್ ನಲ್ಲಿ ಈ ರೀತಿಯ ಅವಹೇಳನ ಮಾಡಿದ್ದಾನೆ. ತುಳು ಭಾಷೆ ಮಾತನಾಡೋರು ಆಂಗ್ಲರ ಸಂತಾನದವರು. ಗೋವಾದ ಮೂಲಕ ಆಂಗ್ಲರು ಬಂದಾಗ ಕರ್ನಾಟಕಕ್ಕೆ ಆಶ್ರಯ ಬೇಡಿ ಬಂದ ನರಿಗಳು. ನೀವು ಕನ್ನಡಿಗರ ಎಕ್ಕಡ.. ಹೀಗೆ ತೀರಾ ಅವಾಚ್ಯವಾಗಿ ನಿಂದಿಸಿ ಬರೆದಿರುವುದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಕೊಡಗಿನಲ್ಲೂ ತುಳು ಭಾಷೆಯ ಬಗ್ಗೆ ಅವಮಾನಿಸಿದ್ದನ್ನು ಖಂಡಿಸಲಾಗಿದ್ದು, ಕೊಡವ ನಾಡ ಅಟೊನಾಮಸ್ ಕೌನ್ಸಿಲ್ ಟ್ರಸ್ಟ್ ಎಸ್‍ಪಿಗೆ ದೂರು ನೀಡಿದೆ. ಜಾನ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ಇತ್ತ ಕರಾವಳಿಯಲ್ಲೂ ವಿವಿಧ ಸಂಘಟನೆಗಳು ಜಾನ್ ವರ್ತನೆಯನ್ನು ಖಂಡಿಸಿದ್ದು, ಕೂಡಲೇ ಬಂಧಿಸುವಂತೆ ಆಗ್ರಹ ವ್ಯಕ್ತವಾಗಿದೆ.

    ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆಯ ಕರಾವಳಿ ಘಟಕ ಕೂಡ ಜಾನ್ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ತುಳುವರು ತಿರುಗಿ ಬಿದ್ದರೆ ನಿನ್ ಸಂಘಟನೆ ಇರಲ್ಲ ಅಂತಾ ಕಿಡಿಕಾರಿದ್ದಾರೆ.