Tag: ತುಳು ಚಿತ್ರರಂಗ

  • ಸೋನಲ್ ಬಣ್ಣದ ಹೆಜ್ಜೆಗೆ ಐದು ವಸಂತದ ಸಂಭ್ರಮ!

    ಸೋನಲ್ ಬಣ್ಣದ ಹೆಜ್ಜೆಗೆ ಐದು ವಸಂತದ ಸಂಭ್ರಮ!

    ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದ ಮೂಲಕವೇ ನಾಯಕಿಯಾಗಿ ಗುರುತಾದವರು ಸೋನಲ್ ಮೊಂತೆರೋ. ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವಾರು ಪ್ರತಿಭೆಗಳನ್ನು ಕೊಡುಗೆಯಾಗಿ ಕೊಡಮಾಡಿರುವ ಮಂಗಳೂರಿನ ಹುಡುಗಿ ಸೋನಲ್. ಹೊರ ಜಗತ್ತಿನ ಪಾಲಿಗೆ ಪಂಚತಂತ್ರದ ಪ್ರಭೆ ಮಾತ್ರವೇ ಸೋನಲ್ ಸುತ್ತ ಗೋಚರಿಸುತ್ತೆ. ನಟಿಸಿದ ಮೊದಲ ಚಿತ್ರದಿಂದಲೇ ಟೇಕಾಫ್ ಆದ ಬಗ್ಗೆ ಹಲವರಲ್ಲೊಂದು ಅಚ್ಚರಿಯೂ ಇದೆ. ವಾಸ್ತವವಾಗಿ ಮಾಡೆಲಿಂಗ್ ಲೋಕದಿಂದ ತುಳು ಚಿತ್ರರಂಗವನ್ನು ಹಾದು ಬಂದು ಕನ್ನಡದಲ್ಲಿ ನೆಲೆ ಕಂಡುಕೊಂಡಿರುವ ಸೋನಲ್ ಈ ಹಂತ ತಲುಪಿಕೊಳ್ಳಲು ಒಂದಷ್ಟು ಸರ್ಕಸ್ಸು ನಡೆಸಿದ್ದಾರೆ. ಅಷ್ಟೆಲ್ಲ ಪರಿಶ್ರಮ ಮತ್ತು ತುಂಬು ಆಹ್ಲಾದವನ್ನು ಮೆತ್ತಿಕೊಂಡಂತಿರೋ ಸೋನಲ್‍ರ ಬಣ್ಣದ ಹೆಜ್ಜೆಗೀಗ ಭರ್ತಿ ಐದು ವರ್ಷ ತುಂಬಿದೆ.

    ಸೋನಲ್ ಮೊಂತೆರೋ ಈಗ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದಾಗ ತುಳು ಚಿತ್ರಪ್ರೇಮಿಗಳಿಗೆ ಬಿಟ್ಟರೆ ಬೇರೆಲ್ಲರಿಗೂ ಈಕೆ ಅಪರಿಚಿತೆಯಾಗಿದ್ದರು. ಆದರೆ ಅದರಲ್ಲಿನ ಪಾತ್ರ ಮತ್ತು ಅದನ್ನವರು ನಿರ್ವಹಿಸಿದ್ದ ರೀತಿಗಳನ್ನೆಲ್ಲ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಕೆಲವೊಮ್ಮೆ ಕೆಲ ನಟ ನಟಿಯರು ಹಲವಾರು ವರ್ಷಗಳ ಕಾಲ ಸೈಕಲ್ಲು ಹೊಡೆದರೂ ದಕ್ಕಿಸಿಕೊಳ್ಳಲಾಗದಂಥಾ ಗೆಲುವನ್ನು ಸೋನಲ್ ಪಂಚತಂತ್ರದ ಮೂಲಕ ಗಿಟ್ಟಿಸಿಕೊಂಡಿದ್ದರು.

    ಇದೊಂದೇ ಸಿನಿಮಾದ ನಂತರದಲ್ಲಿ ಅವರು ಪಡೆದುಕೊಳ್ಳುತ್ತಾ ಸಾಗಿ ಬರುತ್ತಿರೋ ಅವಕಾಶಗಳನ್ನು ಕಂಡರೆ ಯಾರೇ ಆದರೂ ಚಕಿತರಾಗುವಂತಿದೆ. ಯಾಕೆಂದರೆ, ದೊಡ್ಡ ಸಿನಿಮಾಗಳಲ್ಲಿ, ಸ್ಟಾರ್ ನಟರ ಜೊತೆ ನಟಿಸೋ ಅವಕಾಶಗಳನ್ನು ಸೋನಲ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿಯೂ ಅವರು ನಾಯಕಿಯರಲ್ಲೊಬ್ಬರಾಗಿದ್ದಾರೆ. ಅದೇ ಹೊತ್ತಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಬುದ್ಧಿವಂತ-2 ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಪರಭಾಷೆಗಳಿಂದಲೂ ಕೂಡಾ ಸೋನಲ್‍ಗೆ ಬಿಗ್ ಆಫರ್‌ಗಳು ಬರಲಾರಂಭಿಸಿವೆ. ಇಂಥಾದ್ದೊಂದು ಸಂಕ್ರಮಣ ಕಾಲದಲ್ಲಿಯೇ ತಮ್ಮ ಸಿನಿಮಾ ಯಾನಕ್ಕೆ ಐದು ವರ್ಷ ತುಂಬಿದ ಖುಷಿಯೂ ಅವರನ್ನಾವರಿಸಿಕೊಂಡಿದೆ.

    ಮಂಗಳೂರಿನ ಚೆಲುವೆ ಸೋನಲ್ ಮೊಂತೇರೋ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದೇ ಮಾಡೆಲಿಂಗ್ ಲೋಕದ ಮುಖಾಂತರ. ಮಂಗಳೂರು ಮಂದಿಗೆ ಯಕ್ಷಗಾನ, ನಾಟಕ ಮತ್ತು ಸಿನಿಮಾ ಗೀಳು ಇದ್ದೇ ಇರುತ್ತದೆ. ಅಂಥಾ ವಾತಾವರಣದಲ್ಲಿಯೇ ಬೆಳೆದು ಬಂದಿದ್ದ ಸೋನಲ್ ಮನಸು ಕಲಿಕೆಯ ದಿನಗಳಲ್ಲಿಯೇ ಬಣ್ಣದ ಲೋಕದತ್ತ ವಾಲಿಕೊಂಡಿತ್ತು. ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದವರು ತುಳುವಿನ ಚಿತ್ರದಲ್ಲಿ ನಾಯಕಿಯಾಗೋ ಅವಕಾಶ ಪಡೆದುಕೊಂಡಿದ್ದರು. ಆ ಮೊದಲ ಚಿತ್ರವೇ ನೂರು ದಿನ ಯಶಸ್ವೀ ಪ್ರದರ್ಶನ ಕಾಣುವ ಮೂಲಕ ತುಳು ನಾಡಿನ ತುಂಬ ಸೋನಲ್ ಹೆಸರುವಾಸಿಯಾಗಿದ್ದರು.

    ಆ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಸೋನಲ್ ಅವರ ಮಹಾ ಕನಸಾಗಿತ್ತು. ಅದೇ ಗುಂಗಿನಲ್ಲಿ ಚಿತ್ರರಂಗದೊಳಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸಿದರೂ ಆರಂಭದಲ್ಲಿ ದೊರೆತದ್ದು ಸಣ್ಣ ಪುಟ್ಟ ಅವಕಾಶಗಳು ಮಾತ್ರ. ಅದರ ನಡುವೆಯೂ ಅಭಿಸಾರಿಕೆ, ಎಂಎಲ್‍ಎ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರಾದರೂ ಹೇಳಿಕೊಳ್ಳುವಂಥ ಗೆಲುವೇನೂ ಸಿಕ್ಕಿರಲಿಲ್ಲ. ಆದರೆ ಒಂದಷ್ಟು ಕಾಲದ ಸರ್ಕಸ್ಸುಗಳೆಲ್ಲವೂ ಸಾರ್ಥಕವಾಗುವಂಥ ಗೆಲುವನ್ನು ಪಂಚತಂತ್ರ ತಂದುಕೊಟ್ಟಿದೆ. ಸದ್ಯ ಲಾಕ್‍ಡೌನ್ ಸಮಯವನ್ನು ಬಹು ಕಾಲದ ನಂತರ ಕುಟುಂಬಿಕರ ಜೊತೆ ಕಳೆಯುತ್ತಿರೋ ಸೋನಲ್ ಅದರ ನಡುವೆಯೇ ಮುಂದಿನ ಸಿನಿಮಾಗಳಿಗೆ ತಯಾರಿ ನಡೆಸುತ್ತಿದ್ದಾರೆ. ಈ ಔದರ ಸಂಭ್ರಮವನ್ನವರು ಮುಂದಿನ ದಿನಗಳಲ್ಲಿ ಮತ್ತೊಂದಷ್ಟು ಚಿತ್ರಗಳೊಂದಿಗೆ ಸಂಪನ್ನಗೊಳಿಸಿಕೊಳ್ಳಲಿದ್ದಾರೆ.

  • ಉಡುಪಿ: ನಿರೂಪಕಿ ಅನುಶ್ರೀಗೆ ಮದುವೆ!

    ಉಡುಪಿ: ನಿರೂಪಕಿ ಅನುಶ್ರೀಗೆ ಮದುವೆ!

    ಉಡುಪಿ: ಕಿರುತೆರೆಯ ನಂಬರ್ ಒನ್ ನಿರೂಪಕಿ ಅನುಶ್ರೀಗೆ ಲವ್ವಾಗಿದ್ದು ಹಳೇ ಸುದ್ದಿ. ಉಡುಪಿಯಲ್ಲಿ ಮದುವೆಯಾಗಿದ್ದು ಬಿಸಿ ಬಿಸಿ ಸುದ್ದಿ. ಆ್ಯಂಕರ್ ಅನುಶ್ರೀ ತಾಳಿ ಕಟ್ಟಿಸಿಕೊಂಡಿದ್ದಾರೆ. ಸಪ್ತಪದಿ ತುಳಿದಿದ್ದಾರೆ. ಅನುಶ್ರಿಗೆ ಮದುವೆಯಾಗೇ ಹೋಯ್ತಾ ಅಂತ ಪಡ್ಡೆ ಹುಡುಗ್ರೆಲ್ಲ ಶಾಕ್ ಆದ್ರೆ ನಾವ್ ಜವಾಬ್ದಾರರಲ್ಲ.

    ಬಾಯಿ ತೆಗೆದ್ರೆ ಪಟಾಕಿ ತರ ಸಿಡಿಯೋ ಅನುಶ್ರೀ ಮ್ಯಾರೇಜ್ ಸ್ಟೋರಿ ಇದು. ಶಂಕರಪುರ ಮಲ್ಲಿಗೆ ಮುಡಿಗಿಟ್ಟು ಜರತಾರಿ ಸೀರೆ ಉಟ್ಟು- ಬಾಸಿಂಗ ಕಟ್ಟಿಕೊಂಡು ಅನುಶ್ರೀ ಪಕ್ಕಾ ಮದುಮಗಳ ಲುಕ್ ನಲ್ಲಿ ಕಾಣಿಸಿಕೊಂಡರು. ಆದ್ರೆ ಇದು ರಿಯಲ್ ಮದುವೆಯಲ್ಲ, ರೀಲ್ ಮದುವೆ.

    ಉಡುಪಿಯ ಮಣಿಪಾಲದ ಆರ್‍ಎಸ್‍ಬಿ ಸಭಾ ಭವನದಲ್ಲಿ ಮದುವೆ ಮನೆಯ ಸೆಟ್ ಹಾಕಲಾಗಿತ್ತು. ಮದುವೆಗೆ ಗಣ್ಯರ ಆಗಮನ, ಹೂವಿನಿಂದ ಸಿಂಗರಿಸಿದ್ದ ಸೆಟ್, ಓಲಗ ಎಲ್ಲಾ ಇತ್ತು. ಕೋಸ್ಟಲ್‍ವುಡ್‍ನ ಬಹು ಬಜೆಟ್ ಚಿತ್ರ `ಕೋರಿ ರೊಟ್ಟಿ’ಯಲ್ಲಿ ಅನುಶ್ರೀ ಅಭಿನಯಿಸುತ್ತಿದ್ದಾರೆ. ಉಡುಪಿಯ ರಜನೀಶ್ ನಾಯಕನಾಗಿ ನಟಿಸಿ- ನಿರ್ದೇಶನ ಮಾಡುತ್ತಿದ್ದಾರೆ. ದುಬೈ ಉದ್ಯಮಿಗಳು ಚಿತ್ರಕ್ಕೆ ದುಡ್ಡು ಹಾಕಿದ್ದಾರೆ. ಒಂದು ತಿಂಗಳ ಕಾಲ ನಿರಂತರ ಚಿತ್ರೀಕರಣ ಉಡುಪಿ- ಮಂಗಳೂರಿನಲ್ಲಿ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್‍ನ ಚಿತ್ರೀಕರಣ ನಡೆಯಿತು.

    ಮದುವೆ ಮನೆಯ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಲಾಯ್ತು. ಮೂಲತಃ ಕರಾವಳಿಯವರಾಗಿದ್ರೂ ಅನುಶ್ರೀ ಇದೇ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೀಲ್ ಮದುವೆಯಾಯ್ತು, ರಿಯಲ್ ಮದುವೆ ಯಾವಾಗ? ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ, ನಾನು ಸಿಕ್ಕಾಪಟ್ಟೆ ಯಂಗ್. ಮನೆ ಕಟ್ಟಿಯಾಯ್ತು. ಮದುವೆಗೆ ಕಾಲ ಕೂಡಿ ಬಂದಾಗ ಒಳ್ಳೆ ಹುಡುಗ ಸಿಕ್ಕಿದ ಕೂಡಲೇ ಮದುವೆಯಾಗ್ತೇನೆ. ನನ್ ಮದುವೆ ಫಿಕ್ಸಾದ ಕೂಡಲೇ ಮೊದಲು ಪಬ್ಲಿಕ್ ಟಿವಿಗೆ ಇನ್ಫರ್ಮೇಷನ್ ಕೊಡ್ತೇನೆ ಅಂತ ಹೇಳಿದ್ರು.

    ತುಳು ಚಿತ್ರರಂಗದ ಪ್ರಸಿದ್ಧ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಕನ್ನಡದ ಹಿರಿಯ ನಟ ಹರೀಶ್ ರಾಯ್, ಇಳಾ ವಿಟ್ಲ- ಸ್ಥಳೀಯ ರಂಗಭೂಮಿ ನಟ, ನಟಿಯರು ಕೋರಿ ರೊಟ್ಟಿಯಲ್ಲಿ ಬಣ್ಣಹಚ್ಚಿದ್ದಾರೆ. ಕೋರಿ ರೊಟ್ಟಿ ಚಿತ್ರದಲ್ಲಿ ಸ್ಥಳೀಯ ಪ್ರತಿಭೆಗಳ ದಂಡೇ ಇದೆ.

    ಈ ಹಿಂದಿನ ಎಲ್ಲಾ ತುಳು ಚಿತ್ರಗಳಿಗೆ ಹೋಲಿಸಿದ್ರೆ ಇದು ದೊಡ್ಡ ಬಜೆಟ್‍ನ ಚಿತ್ರ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರ ಮೂಡಿ ಬರಲಿದೆ. ಇಲ್ಲಿನ ಜನ ಕಾಮಿಡಿಯನ್ನು ಹೆಚ್ಚು ಇಷ್ಟಪಡುವುದರಿಂದ ಇಲ್ಲೂ ಆ ಫ್ಲೇವರ್ ಜಾಸ್ತಿ ಇರುತ್ತದೆ ಅಂತ ಚಿತ್ರದ ನಾಯಕ ನಟ, ನಿರ್ದೇಶಕ ರಜನೀಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.

    ಇನ್ನೂ ಮೂರು ದಿನ ಇದೇ ರೀತಿ ಶೃಂಗಾರ ಮಾಡಿಕೊಂಡು ಅನುಶ್ರೀ ಇರ್ತಾರಂತೆ. ಮದುವೆ ಮನೆಗೆ ರೌಡಿಗಳು ಎಂಟ್ರಿ ಕೊಟ್ಟು ಮದುವೆ ಗಂಡಿನ ಜೊತೆ ಹೊಡೆದಾಟ ಮಾಡುವ ಸೀಕ್ವೆನ್ಸ್ ಶೂಟ್ ನಡೆಯಲಿದ್ಯಂತೆ. ಕೋರಿ ರೊಟ್ಟಿಗೂ ಮೊದಲು ಸದ್ಯ ಶೂಟ್ ನಡೆಯುತ್ತಿರುವ ಸಂದರ್ಭದಲ್ಲೂ ತುಳು ಚಿತ್ರಗಳಲ್ಲಿ ನಟಿಸುವಂತೆ ಸುಮಾರು ಆಫರ್‍ಗಳು ಅನುಶ್ರೀಗೆ ಬಂದಿದೆ. ಆದ್ರೆ ಅದ್ಯಾವುದನ್ನೂ ಅವರು ಒಪ್ಪಿಕೊಂಡಿಲ್ಲವಂತೆ. ಒಳ್ಳೆ ಕಥೆ, ಒಳ್ಳೆ ಡೈರೆಕ್ಟರ್ ಸಿಕ್ಕರೆ ತುಳುವಿನಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುತ್ತೇನೆ ಅಂತಾರೆ ಚಟ್ ಪಟ್ ಪಟಾಕಿ ಅನುಶ್ರೀ. 

    https://www.youtube.com/watch?v=bt7ACuLnq3I&feature=youtu.be