Tag: ತುಪ್ಪ

  • ರಾಜ್ಯದ 2 ಕಡೆಗಳಲ್ಲಿ ತುಪ್ಪ ಸೇಫ್ ಅಲ್ಲ – ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ

    ರಾಜ್ಯದ 2 ಕಡೆಗಳಲ್ಲಿ ತುಪ್ಪ ಸೇಫ್ ಅಲ್ಲ – ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ

    – ಬೆಂಗ್ಳೂರು, ಬಾಗಲಕೋಟೆಯ 2 ತುಪ್ಪ ತಯಾರಿಕಾ ಘಟಕಕ್ಕೆ ನೋಟಿಸ್

    ಬೆಂಗಳೂರು: ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾದ ತುಪ್ಪ (Ghee) ಕಲಬೆರಕೆ ವಿವಾದ ಬೆಳಕಿಗೆ ಬರುವುದಕ್ಕೂ ಮುನ್ನವೇ ರಾಜ್ಯದಲ್ಲಿ ತುಪ್ಪ ಕಲಬೆರಕೆ ಆಗಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಇಲಾಖೆ 40 ಕಡೆ ತುಪ್ಪ ಸಂಗ್ರಹ ಮಾಡಿ ಟೆಸ್ಟ್ ಮಾಡಿದಾಗ ರಾಜ್ಯದ 2 ಕಡೆ ತುಪ್ಪ ಕಲಬೆರಕೆ ಆಗಿರುವುದು ಬಯಲಾಗಿದೆ.

    ಆಹಾರ ಮತ್ತು ಸುರಕ್ಷತಾ ಇಲಾಖೆ ಆಗಸ್ಟ್ ತಿಂಗಳಲ್ಲಿ ತುಪ್ಪವನ್ನ ಟೆಸ್ಟ್ ಮಾಡಿದೆ. ರಾಜ್ಯಾದ್ಯಂತ 40 ಕಡೆ ಮಾದರಿ ಸಂಗ್ರಹಿಸಿ, ಬೆಂಗಳೂರು (Bengaluru) ಮತ್ತು ಬಾಗಲಕೋಟೆಯಲ್ಲಿ (Bagalkot) ತುಪ್ಪ ಸೇಫ್ ಅಲ್ಲ ಎಂದು ವರದಿ ನೀಡಿದೆ.

    ಎಲ್ಲಿಯ ತುಪ್ಪ ಸೇಫ್‌ ಅಲ್ಲ ಎಂಬ ವರದಿ ಬಂದಿರುವ ಕಡೆ ತುಪ್ಪ ತಯಾರಿಕಾ ಘಟಕಕ್ಕೆ ಆಹಾರ ಮತ್ತು ಸುರಕ್ಷತಾ ಇಲಾಖೆ ನೋಟಿಸ್ ನೀಡಿದೆ. 30 ದಿನಗಳ ಒಳಗೆ ತುಪ್ಪ ಅಸುರಕ್ಷತೆ ಅಲ್ಲ ಎಂದು ಸಾಬೀತುಪಡಿಸಿಕೊಳ್ಳಲು ಇಲಾಖೆ ಸೂಚಿಸಿದೆ. ಈ ಬಗ್ಗೆ ಮೈಸೂರಿನ ಲ್ಯಾಬ್‍ನಲ್ಲಿ ಖಚಿತತೆಯ ಪರೀಕ್ಷೆ ನಡೆಯುತ್ತಿದೆ.

    ದೇಶಾದ್ಯಂತ ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗಿದೆ ಎನ್ನಲಾದ ಕಲಬೆರಕೆ ತುಪ್ಪ ವಿವಾದ ಸೃಷ್ಟಿಸಿದೆ. ಕಳಪೆ ಗುಣಮಟ್ಟದ ತುಪ್ಪ, ಪ್ರಾಣಿಗಳ ಕೊಬ್ಬು ಇರುವ ಬಗ್ಗೆ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ರಾಜ್ಯದ ನಂದಿನಿ ತುಪ್ಪ ಹೊರತುಪಡಿಸಿ, ಉಳಿದ ತುಪ್ಪಗಳನ್ನು ಟೆಸ್ಟ್ ಮಾಡಲು ಆರೋಗ್ಯ ಸಚಿವರು ಸೂಚಿಸಿದ್ದರು.

    ತುಪ್ಪದ ಪರೀಕ್ಷೆ ನಡೆಯೋದು ಹೇಗೆ?
    * ತುಪ್ಪವನ್ನ ಒಂದು ಕೆಮಿಕಲ್‍ಗೆ ಅಳವಡಿಸುತ್ತಾರೆ
    * ತುಪ್ಪವನ್ನ ಕೆಮಿಕಲ್‍ಗೆ ಹಾಕಿ 7 ದಿನ ಹಾಗೆಯೇ ಇಡುತ್ತಾರೆ
    * ಕೆಮಿಕಲ್‍ಗೆ ಹಾಕಿದ ತುಪ್ಪ ಮೂರು ಬಣ್ಣಗಳಾಗಿ ಬದಲಾಗುತ್ತೆ
    * ಕೆಂಪು, ಹಳದಿ, ಬಿಳಿ ಬಣ್ಣ ಬಂದರೆ ಅನ್‍ಸೇಫ್
    * ಫ್ಯಾಟ್ ಪ್ರಮಾಣ 90% ದಾಟಿದ್ರೆ ಅನ್‍ಸೇಫ್
    * ಎರಡು ಪ್ರದೇಶಗಳ ತುಪ್ಪದ ಫ್ಯಾಟ್ 90% ದಾಟಿದೆ

  • Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ತಿರುಪತಿ: ತಿಮ್ಮಪ್ಪನ ಮಹಾಪ್ರಸಾದ ಲಡ್ಡುನಲ್ಲಿ (Tirupati Laddu Row) ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಸಿಎಂ ಆರೋಪಕ್ಕೆ ಪೂರಕವಾಗಿ ಟಿಟಿಡಿ (TTD) ಇಓ ಶ್ಯಾಮಲರಾವ್ ಹೇಳಿಕೆ ನೀಡಿದ್ದಾರೆ. ತಮಿಳುನಾಡು (Tamilnadu) ಮೂಲದ ಎಆರ್ ಫುಡ್ಸ್ ಸರಬರಾಜು ಮಾಡಿದ ತುಪ್ಪ (Ghee) ಕಲಬೆರಕೆಯಿಂದ ಕೂಡಿತ್ತು. ತಕ್ಷಣವೇ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ, ಲಡ್ಡುಗೆ ಬಳಸುವ ತುಪ್ಪದ ಗುಣಮಟ್ಟ ಪರೀಕ್ಷೆಗೆ ಟಿಟಿಡಿ ಸ್ವಂತ ಲ್ಯಾಬ್ ಹೊಂದಿಲ್ಲ. ಅಧಿಕಾರಿಗಳು ಈ ಹಿಂದೆ ಪರೀಕ್ಷೆ ಮಾಡಿರಲಿಲ್ಲ. ಬರೀ 411 ರೂಪಾಯಿಗೆ ಕೆಜಿ ತುಪ್ಪ ಸರಬರಾಜು ಮಾಡಿದ್ದಾರೆ. ಈ ದರಕ್ಕೆ ಉತ್ತಮ ಗುಣಮಟ್ಟದ ತುಪ್ಪ ಪೂರೈಕೆ ಸಾಧ್ಯನಾ ಎಂದು ಎಂದು ಶ್ಯಾಮಲರಾವ್ ಪ್ರಶ್ನಿಸಿದ್ದಾರೆ.

    ದೇಗುಲದ ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತಲು ಅವರಂತೂ, ಕಳೆದ ಐದು ವರ್ಷದಿಂದ ಈ ಮಹಾ ಪಾಪ ನಡೆಯುತ್ತಿತ್ತು ಎಂದು ಆಪಾದಿಸಿದ್ದಾರೆ. ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪಿಸುವಂತೆ ಕೇಂದ್ರವನ್ನು ಡಿಸಿಎಂ ಪವನ್ ಕಲ್ಯಾಣ್ ಆಗ್ರಹಿಸಿದ್ದಾರೆ. ಆಡಳಿತಾರೂಢ ಟಿಡಿಪಿ ನಾಯಕರೆಲ್ಲಾ ಜಗನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ನಂದಿನಿ ತುಪ್ಪ ಕಡ್ಡಾಯ: ಮುಜುರಾಯಿ ಇಲಾಖೆ ಆದೇಶ

    ಕಲಬೆರೆಕೆ ತುಪ್ಪ ಕಳುಹಿಸಿಲ್ಲ:
    ನಾವು ಟಿಟಿಡಿಗೆ ಕಲಬೆರೆಕೆ ತುಪ್ಪ ಕಳುಹಿಸಿಲ್ಲ. ಇಲ್ಲಿಯವರೆಗೆ ನಮ್ಮ ವಿರುದ್ಧ ಯಾವುದೇ ದೂರುಗಳಿಲ್ಲ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ನಾವು ಕಾನೂನು ಸಮರ ನಡೆಸುತ್ತೇವೆ ಎಂದು ಎಆರ್‌ ಫುಡ್ಸ್‌ ಹೇಳಿದೆ.

     

  • ಪೇಡ ಖರೀದಿ ನೆಪದಲ್ಲಿ 15 ಕೆ.ಜಿ ತುಪ್ಪ ಹೊತ್ತೊಯ್ದ!

    ಪೇಡ ಖರೀದಿ ನೆಪದಲ್ಲಿ 15 ಕೆ.ಜಿ ತುಪ್ಪ ಹೊತ್ತೊಯ್ದ!

    ಬೆಂಗಳೂರು: ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಚಾಲಾಕಿ ಕಳ್ಳನೊಬ್ಬ ಪೇಡ ಖರೀದಿ ನೆಪದಲ್ಲಿ 15 ತುಪ್ಪವನ್ನೇ ಹೊತ್ತೊಯ್ದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ಕೆಂಗೇರಿ ಕೊಮ್ಮಘಟ್ಟ ನಂದಿನಿ ಪಾರ್ಲರ್ ನಲ್ಲಿ (Nandini Parlour) ಚಾಲಾಕಿ ಕಳ್ಳ ತನ್ನ ಕೈಚಳಕ ತೋರಿದ್ದಾನೆ. ಕಳ್ಳನ ಕರಾಮತ್ತು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಡೆದಿದ್ದೇನು..?: ನಂದಿನಿ ಪಾರ್ಲರ್ ಬಂದ ಚಾಲಾಕಿ, ಮನೆಯಲ್ಲಿ ಫಂಕ್ಷನ್ ಇದೆ. ಹೀಗಾಗಿ 15 ಕೆಜಿ ತುಪ್ಪ ಕೊಡಿ ಎಂದಿದ್ದಾನೆ. ಅದರಂತೆ ಅಂಗಡಿಯವರು 15 ಕೆ.ಜಿ ತುಪ್ಪವನ್ನು ಕೊಟ್ಟಿದ್ದಾರೆ. ನಂತರ ಏನು ಬೇಕು ಎಂದಿದ್ದಾರೆ ಆಗ, ಪೇಡ ಬೇಕು ಅಂತಾ ಚಾಲಾಕಿ ಕಳ್ಳ ಹೇಳಿದ್ದಾನೆ. ಇದನ್ನೂ ಓದಿ: KSRTC ಬಸ್ ಕಿಟಕಿಯಿಂದ ಉಗುಳೋಕೆ ಹೋಗಿ ಮಹಿಳೆಯ ತಲೆ ಲಾಕ್!‌

    ಅಂಗಡಿಯವರು ಪೇಡ ಕೊಡಲೆಂದು ಅಂಗಡಿಯೊಳಗೆ ತಿರುಗಿದಾಗ ಖತರ್ನಾಕ್ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇತ್ತ ಅಂಡಿಯವರು ಪೇಡ ಕೊಡಲೆಂದು ತಿರುಗಿದಾಗ ಗ್ರಾಹಕ ಜಾಗ ಖಾಲಿ ಮಾಡಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ.

    ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಗೆ ಮಾಲೀಕರು ದೂರು ನೀಡಿದ್ದಾರೆ. ದೂರು ಸ್ವೀಕರಿಸುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

  • 1 ಕೆ.ಜಿ ತುಪ್ಪವನ್ನು 5,000 ರೂ.ಗೆ ಮಾರುತ್ತಿದ್ದೇನೆ: ಯತ್ನಾಳ್

    1 ಕೆ.ಜಿ ತುಪ್ಪವನ್ನು 5,000 ರೂ.ಗೆ ಮಾರುತ್ತಿದ್ದೇನೆ: ಯತ್ನಾಳ್

    ಬೆಳಗಾವಿ: ನಾನು ದೇಶೀಯ ಆಕಳಿನ ತುಪ್ಪವನ್ನು (Ghee) ಕೆಜಿಗೆ 5,000 ರೂ.ನಂತೆ ಮಾರುತ್ತಿದ್ದೇನೆ. ನನ್ನ ಬಳಿ ಗಿರ್ ತಳಿಯ 250 ಹಸುಗಳಿವೆ. ಅದರ ತುಪ್ಪವನ್ನು ಕೆಜಿಗೆ 2,500 ರೂ. ನಂತೆ ಮಾರುತ್ತಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆ ನೀಡಿದ್ದಾರೆ.

    ಬೆಳಗಾವಿಯಲ್ಲಿ (Belagavi) ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಜೋಳ ಬೆಳೆದರೆ ಗೋ ಸಂಪತ್ತು ಉಳಿಯುತ್ತದೆ. ತೊಗರಿಯಿಂದ ಗೋ ಸಂಪತ್ತು ಉಳಿಯುವುದಿಲ್ಲ. ನನ್ನದೇ ಒಂದು ಗೋಶಾಲೆ ಇದೆ. ತುಪ್ಪ ಮಾರುವುದರೊಂದಿಗೆ ವಿಭೂತಿ, ಕರ್ಪೂರ ಹಾಗೂ ಕುಂಕುಮವನ್ನು ತಯಾರಿಸುತ್ತಿದ್ದೇನೆ. ಅಲ್ಲದೇ ಸಾಬೂನು ಕೂಡಾ ತಯಾರು ಮಾಡುತ್ತಿದ್ದೇನೆ. ಗೋಮೂತ್ರವನ್ನು ಸಹ 130 ರೂ.ಗೆ ಮಾರುತ್ತಿದ್ದೇನೆ. ಆಕಳಿನ ಮಜ್ಜಿಗೆಯನ್ನು 30 ರೂ.ಗೆ ಹಾಗೂ ದೇಶೀಯ ಆಕಳಿನ ಹಾಲನ್ನು 100 ರೂ.ಗೆ ಮಾರುತ್ತಿದ್ದೇನೆ. ನಮ್ಮಲ್ಲಿ ಗೋ ಸಂಪತ್ತು ಉಳಿಯ ಬೇಕಾದರೆ ಜೋಳಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಕಡಲೆಕಾಯಿ ಪರಿಷೆಯಲ್ಲಿ ಹಣ ವಸೂಲಿ ಮಾಡುತ್ತಿದ್ದವರ ಮೇಲೆ ಕ್ರಮ: ರಾಮಲಿಂಗಾ ರೆಡ್ಡಿ ಭರವಸೆ

    ನಮ್ಮ ಭಾಗದಲ್ಲಿ ಅಕ್ಕಿಯ ಬದಲಾಗಿ ಜೋಳ ಕೊಡಿ. 10 ಕೆಜಿ ಅಕ್ಕಿ ಇನ್ನೂ ಬಂದಿಲ್ಲ. ನರೇಂದ್ರ ಮೋದಿ 5 ವರ್ಷ 5 ಕಿಲೋ ಅಕ್ಕಿಯನ್ನು ಈ ದೇಶದ ಬಡವರಿಗೆ ಕೊಡುವಂತಹ ಕೆಲಸ ಮಾಡಿದ್ದಾರೆ. 5 ಕಿಲೋ ಅಕ್ಕಿಯ ಬದಲು ಜೋಳ ಕೊಡಿ ಎಂದು ನಾನು ಆಹಾರ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಇವತ್ತು ವಿದೇಶಕ್ಕೆ ಹೋದರೂ ಜೋಳದ ರೊಟ್ಟಿ ಸಿಗುತ್ತದೆ. ಕೆಲವರು ಜೋಳದ ರೊಟ್ಟಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂದು ಬರಗಾಲದಿಂದ ರೈತರು ಹಸುಗಳನ್ನು (Cow) ಸಾಕಲಾಗದೆ ಗೋಶಾಲೆಗೆ ಅಥವಾ ರಸ್ತೆಯ ಬದಿಯಲ್ಲಿ ಬಿಡುತ್ತಾರೆ. ಇನ್ನೂ ಕೆಲವರು ಕಟುಕರ ಕೈಗೆ ಕೊಡುತ್ತಾರೆ. ಆದ್ದರಿಂದ ಜೋಳಕ್ಕೆ ಬೆಂಬಲ ಬಲ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಶೋಕ್ ಹೆಸರಿನ ನಾಮಫಲಕ ಇರೋವರೆಗೂ ಆ ಕೊಠಡಿಗೆ ಹೋಗಲ್ಲ: ಎಸ್‌ಆರ್ ವಿಶ್ವನಾಥ್ ಮುನಿಸು

  • ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ

    ಅಯೋಧ್ಯೆಗೆ ಜೋಧ್‌ಪುರದಿಂದ 600 ಕೆಜಿ ಪರಿಶುದ್ಧ ತುಪ್ಪ ರವಾನೆ

    ಜೈಪುರ: ಜನವರಿಯಲ್ಲಿ ನಡೆಯಲಿರುವ ಅಯೋಧ್ಯೆ ರಾಮಮಂದಿರದ (Ayodhya Ram Mandir) ಲೋಕಾರ್ಪಣೆಗೆ ಭರದ ಸಿದ್ದತೆಗಳು ನಡೆದಿವೆ. ರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗಾಗಿ ರಾಜಸ್ಥಾನದ ಜೋಧ್‌ಪುರದಿಂದ (Jodhpur) 600 ಕೆಜಿಯಷ್ಟು ಪರಿಶುದ್ಧ ತುಪ್ಪವನ್ನು (Ghee) ಅಯೋಧ್ಯೆಗೆ ಕಳಿಸಲಾಗಿದೆ.

    ಈ ತುಪ್ಪವನ್ನು ವಿಶೇಷವಾಗಿ ತಯಾರಿಸಲಾದ 108 ಕಲಶಗಳಲ್ಲಿ 11 ರಥಗಳ ಮೂಲಕ ಅಯೋಧ್ಯೆಗೆ ಮಂತ್ರಘೋಷಗಳ ಮೂಲಕ ಕಳುಹಿಸಿಕೊಡಲಾಗಿದೆ. ಸಾಂದೀಪನಿ ರಾಮಧರ್ಮ ಗೋಶಾಲೆ ಈ ತುಪ್ಪವನ್ನು ಕಳುಹಿಸಿಕೊಟ್ಟಿದೆ.  ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆ ಬೆನ್ನಲ್ಲೇ ಭಾವುಕರಾಗಿದ್ದ ಪ್ರಧಾನಿ ಮೋದಿ

    ಪ್ರಾಣ ಪ್ರತಿಷ್ಠೆಯ ಸಮಯದಲ್ಲಿ ನಡೆಸಲಾಗುವ ಮಹಾಯಜ್ಞ ಮತ್ತು ಆರತಿಗಾಗಿ ವಿಶೇಷ ತುಪ್ಪವನ್ನು ಬಳಸಲಾಗುತ್ತದೆ. ಗೋಶಾಲೆಯಲ್ಲಿರುವ ದೇಸಿ ಹಸುವಿನಿಂದ ಈ ತುಪ್ಪವನ್ನು ತಯಾರಿಸಲಾಗಿದೆ.

    ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾರ್ಚ್ 10 ರವರೆಗೆ 48 ದಿನಗಳ ಕಾಲ ನಡೆಯಲಿದ್ದು, ಜನವರಿ 22 ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಜ.22 ರಂದು ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

     

  • ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ

    ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ

    ಸಿಹಿ ಇರಲಿ, ಖಾರ ಇರಲಿ ಅದಕ್ಕೆ ಸ್ವಲ್ಪ ತುಪ್ಪವನ್ನು (Ghee) ಹಾಕಿಕೊಂಡು ಆಸ್ವಾದಿಸಿದರೆ ರುಚಿಯೇ ಬೇರೆ ತರ ಇರುತ್ತೆ. ನಮ್ಮ ಹಿರಿಯರು ತಮ್ಮ ಆಹಾರ ಪದಾರ್ಥಗಳಲ್ಲಿ ತುಪ್ಪವನ್ನು ಸೇವಿಸುತ್ತಿದ್ದರು. ಈ ತುಪ್ಪವನ್ನು ಹಿತಮಿತವಾಗಿ ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಆರೋಗ್ಯದ (Health) ಸುಧಾರಣೆಗೆ ಅನೇಕ ಪ್ರಯೋಜನವಿದೆ.

    ಕಾಂತಿಯುತ ಚರ್ಮ: ತುಪ್ಪವು ಚರ್ಮವನ್ನು (Skin) ಕಾಂತಿಯುತವಾಗಿ ಮತ್ತು ಸುಂದರವಾಗಿಡುತ್ತದೆ. ತುಪ್ಪವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ತುಪ್ಪವು ವಯಸ್ಸಾದ ಚಿಹ್ನೆಗಳನ್ನು ತಡೆಯುತ್ತದೆ. ಜೊತೆಗೆ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ತುಪ್ಪವು ಚರ್ಮ ಮತ್ತು ಕೂದಲಿಗೆ ಹೊಳಪನ್ನು ತರುತ್ತದೆ.

    ಮೆದುಳಿನ ಆರೋಗ್ಯ: ತುಪ್ಪದಲ್ಲಿ ಹೆಚ್ಚಿನ ಖನಿಜಗಳು ಹಾಗೂ ಸ್ಯಾಚುರೇಟೆಡ್ ಕೊಬ್ಬುಗಳು ಇರುತ್ತವೆ. ಇದರಿಂದಾಗಿ ತುಪ್ಪವನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಮುಟ್ಟಾಗುತ್ತವೆ. ಜೊತೆಗೆ ನರಗಳ ಹಾಗೂ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದಾಗಿ ತುಪ್ಪವನ್ನು ಪ್ರತಿನಿತ್ಯ ಹಿತ ಮಿತವಾಗಿ ಬಳಸುವುದು ಅತ್ಯವಶ್ಯವಾಗಿದೆ.

    ಜೀರ್ಣಕ್ರಿಯೆ: ತುಪ್ಪವು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನೀವು ರೊಟ್ಟಿ, ಚಪಾತಿ ಅಥವಾ ಯಾವುದಾದರೂ ನಾರಿನ ಪದಾರ್ಥದ ಜೊತೆಗೆ ತಿನ್ನುವುದರಿಂದ ಅದನ್ನು ಸುಲಭವಾಗಿ ಜೀರ್ಣಕ್ರಿಯೆ ಮಾಡಲು ಸಹಕಾರಿಯಾಗಿದೆ. ಹಾಗೂ ಚಯಾಪಚಯವೂ ಸರಿಯಾದ ರೀತಿಯಲ್ಲಿ ಆಗುತ್ತದೆ. ಗ್ಯಾಸ್ ಆದವರು ತುಪ್ಪವನ್ನು ಸೇವಿಸಬೇಕು. ಇದು ಉತ್ತಮ ಜೀರ್ಣಕ್ರಿಯೆಗೆ ಸಂಬಂಧಿಸಿರುವುದರಿಂದ ಗ್ಯಾಸ್ ಬಹುಬೇಗ ಕಡಿಮೆ ಮಾಡಿ, ದೇಹದ ಆರೋಗ್ಯವನ್ನು ಕಾಪಾಡುತ್ತದೆ.

    ರೋಗಗಳ ವಿರುದ್ಧ ಹೋರಾಟ: ತುಪ್ಪದಲ್ಲಿ ಬಹಳಷ್ಟು ಬ್ಯುಟರಿಕ್ ಆಮ್ಲವಿರುತ್ತದೆ. ಇದು ರೋಗದ ವಿರುದ್ಧ ಹೋರಾಡುವ ಜೀವಸತ್ವಗಳನ್ನು ದೇಹದಲ್ಲಿ ಹೆಚ್ಚಿಸುತ್ತದೆ. ತುಪ್ಪವು ಪ್ರಮುಖ ಕೊಬ್ಬಿನಾಮ್ಲಗಳು ಮತ್ತು ಕೊಬ್ಬು ಕರಗುವ ಜೀವಸತ್ವಗಳ ಗಮನಾರ್ಹ ಮೂಲವಾಗಿದೆ. ಇದನ್ನೂ ಓದಿ: ಎಕ್ಕದ ಗಿಡದಿಂದ ಆರೋಗ್ಯಕ್ಕೆ ಸಿಗುತ್ತೆ ಹಲವಾರು ಪ್ರಯೋಜನ

    ಜ್ಞಾಪಕ ಶಕ್ತಿ ಹೆಚ್ಚಿಸುತ್ತೆ: ತುಪ್ಪದಲ್ಲಿರುವ ವಸ್ತುಗಳು ಆಲೋಚನಾ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಜೀವಕೋಶಗಳು ಮತ್ತು ಅಂಗಾಂಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ತುಪ್ಪವನ್ನು ತಿನ್ನುವುದು ಜೀವಕೋಶಗಳ ಪುನರುತ್ಪಾದನೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ನಮ್ಮ ದೇಹದ ಗುಣಪಡಿಸುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು

    Live Tv
    [brid partner=56869869 player=32851 video=960834 autoplay=true]

  • ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ

    ತುಪ್ಪದಲ್ಲಿ ಮಾಡಿ ಸವಿಯಿರಿ ರವೆ ಉಂಡೆ

    ವೆ ಉಂಡೆ ಮಾಡುವುದು ತುಂಬಾ ಸುಲಭ. ಮನೆಗೆ ಅತಿಥಿ ಬಂದಾಗ ಏನಾದರೂ ದಿಢೀರ್ ಎಂದು ಸಿಹಿ ಮಾಡಬೇಕು ಎಂದರೆ ಈ ತಿಂಡಿಯನ್ನು ಟ್ರೈ ಮಾಡಿ. ಏಕೆಂದರೆ ಈ ರೆಸಿಪಿ ಮಾಡಲು ಸುಲಭ. ಅಚ್ಟೇ ಅಲ್ಲದೇ ಇದನ್ನು ತಿನ್ನಲು ತುಂಬಾ ರುಚಿಯಾಗಿ ಇರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ರವೆ – 1 ಕಪ್
    * ತುಪ್ಪ – ¼ ಕಪ್
    * ಕತ್ತರಿಸಿದ ಗೋಡಂಬಿ – 6
    * ಒಣದ್ರಾಕ್ಷಿ – 2 ಟೇಬಲ್ ಸ್ಪೂನ್
    * ತೆಂಗಿನಕಾಯಿ ತುರಿ – ¼ ಕಪ್

    * ಸಕ್ಕರೆ – 1 ಕಪ್
    * ನೀರು – ¼ ಕಪ್
    * ಏಲಕ್ಕಿ ಪುಡಿ – ¼ ಟೀಸ್ಪೂನ್
    * ಹಾಲು – 2 ಟೇಬಲ್ ಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ದೊಡ್ಡ ಪ್ಯಾನ್‍ನಲ್ಲಿ ಕತ್ತರಿಸಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ. ಒಣದ್ರಾಕ್ಷಿ ಮತ್ತು ಗೋಡಂಬಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಅವುಗಳನ್ನು ತಟ್ಟೆಗೆ ವರ್ಗಾಯಿಸಿ ಮತ್ತು ಪಕ್ಕಕ್ಕೆ ಇರಿಸಿ.
    * ಬಾಣಲೆಯಲ್ಲಿ ರವಾ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ತಿಳಿ ಕಂದು ಬಣ್ಣಕ್ಕೆ ಬದಲಾಯಿಸುವವರೆಗೆ ಮತ್ತು ಪರಿಮಳ ಬರುವವರೆಗೆ ಹುರಿಯಿರಿ.
    * ನೀರ ಮತ್ತು ಸಕ್ಕರೆ ಸೇರಿಸಿ ಪಾಕವನ್ನು ತಯಾರಿಸಿ. ಸಕ್ಕರೆ ಕರಗುವವರೆಗೂ ಬೇರೆಸಿ 5 ನಿಮಿಷಗಳ ಕಾಲ ಕುದಿಸಿ.


    * ತೆಂಗಿನಕಾಯಿ ತುರಿಯನ್ನು ಹುರಿದುಕೊಳ್ಳಿ. ಅದಕ್ಕೆ ರವಾ, ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಮತ್ತು ಸಕ್ಕರೆ ಪಾಕ ಮತ್ತು ಹಾಲನ್ನು ಸೇರಿಸಿ ಹುರಿಯಿರಿ.
    * ನಂತರ ಆ ಮಿಶ್ರಣವನ್ನು ತೆಗೆದು ಕೈಗೆ ತುಪ್ಪ ಹಚ್ಚಿಕೊಂಡು ಉಂಡೆಗಳ ಮಾಡಿಕೊಳ್ಳಿ

  • ಯುವಕರಿಗೆ ಉದ್ಯೋಗ, ಬಡವರಿಗೆ 1 ಕೆಜಿ ಉಚಿತ ತುಪ್ಪ: ಅಖಿಲೇಶ್ ಯಾದವ್ ಭರವಸೆ

    ಯುವಕರಿಗೆ ಉದ್ಯೋಗ, ಬಡವರಿಗೆ 1 ಕೆಜಿ ಉಚಿತ ತುಪ್ಪ: ಅಖಿಲೇಶ್ ಯಾದವ್ ಭರವಸೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಬಡವರಿಗೆ ಒಂದು ಕಿಲೋ ‘ತುಪ್ಪ’ ಜೊತೆಗೆ ಐದು ವರ್ಷಗಳ ಕಾಲ ಉಚಿತ ಪಡಿತರವನ್ನು ನೀಡುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದ್ದಾರೆ.

    ಪಡಿತರ ಪಡೆಯುತ್ತಿರುವ ಬಡವರು ಚುನಾವಣೆಯವರೆಗೂ ಮಾತ್ರ ಅದನ್ನು ಪಡೆಯುತ್ತಾರೆ. ಚುನಾವಣೆಯ ನಂತರ ಪಡಿತರ ಲಭ್ಯವಾಗುವುದಿಲ್ಲ. ಮೊದಲು ನವೆಂಬರ್‌ವರೆಗೂ ಪಡಿತರ ನೀಡಬೇಕಾಗಿತ್ತು. ಆದರೆ ಯುಪಿ ಚುನಾವಣೆ ಘೋಷಣೆಯಾದ ಬಳಿಕ ಅದನ್ನು ಮಾರ್ಚ್‍ವರೆಗೆ ನೀಡಲು ಬಿಜೆಪಿ ತಿಳಿಸಿದೆ.

    ರಾಯ್ ಬರೇಲಿಯಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್ ಅವರು, ಮಾರ್ಚ್‍ನಲ್ಲಿ ಚುನಾವಣೆ ಮುಗಿಯುತ್ತದೆ ಎಂದು ತಿಳಿದಿರುವ ಕಾರಣ ದೆಹಲಿಯ ಬಜೆಟ್‍ನಲ್ಲಿ ಪಡಿತರಕ್ಕಾಗಿ ಹಣವನ್ನು ಮೀಸಲಿಟ್ಟಿಲ್ಲ ಎಂದಿದ್ದಾರೆ.  ಇದನ್ನೂ ಓದಿ: ಈಶಾನ್ಯ ಭಾರತದವರ ಜೀವನ ಶೈಲಿಯ ಮೇಲೆ ಬಿಜೆಪಿ ಹಸ್ತಕ್ಷೇಪ: ಪ್ರಿಯಾಂಕಾ ಗಾಂಧಿ

    ಈ ಹಿಂದೆ ಸಮಾಜವಾದಿ ಪಕ್ಷ ಬಡವರಿಗೆ ಪಡಿತರ ನೀಡುತ್ತಿತ್ತು. ಎಸ್‍ಪಿ ಸರ್ಕಾರ ಇರುವವರೆಗೂ ನಮ್ಮ ಬಡವರಿಗೆ ಪಡಿತರ ನೀಡುತ್ತೇವೆ. ಅದರೊಂದಿಗೆ ಸಾಸಿವೆ, ಎಣ್ಣೆ ಜೊತೆಗೆ ವರ್ಷದಲ್ಲಿ ಎರಡು ಸಿಲಿಂಡರ್ ಕೊಡುತ್ತೇವೆ. ನಮ್ಮ ಬಡವರ ಆರೋಗ್ಯ ಸುಧಾರಿಸಲು ಒಂದು ಕಿಲೋಗ್ರಾಂ ತುಪ್ಪವನ್ನು ಸಹ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಬಿಜೆಪಿ ಸರ್ಕಾರ ವಿತರಿಸುತ್ತಿರುವ ಪಡಿತರ ಗುಣಮಟ್ಟ ಕಳಪೆಯಾಗಿದೆ. ಉಪ್ಪಿನಲ್ಲಿ ಗಾಜಿನ ಕಣಗಳು ಪತ್ತೆಯಾಗಿರುವ ಬಗ್ಗೆಯೂ ವರದಿಯಾಗಿದೆ. ಅಲ್ಲದೇ ಗುಜರಾತ್‍ನಿಂದ ಉಪ್ಪು ಬರುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ 11 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಮತ್ತು ಎಸ್‍ಪಿ ಸರ್ಕಾರವು ಆ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವಕರಿಗೆ ಉದ್ಯೋಗಗಳನ್ನು ಒದಗಿಸುತ್ತದೆ ಎಂದಿದ್ದಾರೆ.  ಇದನ್ನೂ ಓದಿ: ಹಿಂದೂಗಳು ಹಣೆಗೆ ಕುಂಕುಮ ಇಡುತ್ತಾರೆ, ನಾವು ಅದನ್ನು ಪ್ರಶ್ನೆ ಮಾಡುತ್ತೇವಾ: ಮುಸ್ಲಿಂ ವಿದ್ಯಾರ್ಥಿಗಳು

    ಬಿಜೆಪಿ ನಾಯಕರು ಮನೆ, ಮನೆಗೆ ತೆರಳಿ ಮತ ಕೇಳುತ್ತಿದ್ದರು ಮತ್ತು ಬಿಜೆಪಿ ಹಿರಿಯ ನಾಯಕರು ಕರಪತ್ರಗಳನ್ನು ಹಂಚುತ್ತಿದ್ದರು. ಆದರೆ ಈಗ ಆ ಪ್ರಚಾರವನ್ನು ನಿಲ್ಲಿಸಲಾಗಿದೆ. ಏಕೆಂದರೆ ಅವರು ಕೆಲವು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನರು ಖಾಲಿ ಗ್ಯಾಸ್ ಸಿಲಿಂಡರ್‌ಗಳನ್ನು ತೋರಿಸಿದ್ದಾರೆ. ಖಾಲಿ ಸಿಲಿಂಡರ್‌ಗಳನ್ನು ತೋರಿಸಿದ ದಿನದಿಂದ ಅವರ ಮನೆ-ಮನೆ ಪ್ರಚಾರ ನಿಂತುಹೋಗಿದೆ.

    ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಬಿಜೆಪಿ ಸರ್ಕಾರದಲ್ಲಿ ಅತಿ ಹೆಚ್ಚು ಕಸ್ಟಡಿ ಸಾವುಗಳು ಸಂಭವಿಸಿವೆ. ಈ ಡಬಲ್ ಇಂಜಿನ್ ಸರ್ಕಾರದಲ್ಲಿ ಭ್ರಷ್ಟಾಚಾರವೂ ದುಪ್ಪಟ್ಟಾಗಿದೆ ಎಂದು ಆರೋಪಿಸಿದ್ದಾರೆ.

  • ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ಯುಗಾದಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿತ್ತು. ಹಬ್ಬವನ್ನು ವಿಜೃಂಭಣೆಯಾಗಿ ಆಚರಿಸಿದ ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು. ಈ ವೇಳೆ ಅರವಿಂದ್ ಹಾಗೂ ಪ್ರಶಾಂತ್ ಮಧ್ಯೆ ತುಪ್ಪದ ವಿಚಾರಕ್ಕೆ ಮತ್ತೆ ವಾಗ್ವಾದ ನಡೆದಿದೆ.

    ಊಟ ಮಾಡುವ ವೇಳೆ ವೈಷ್ಣವಿ ಎಲ್ಲರಿಗೂ ಒಂದು ಕಡೆಯಿಂದ ತುಪ್ಪ ಬಡಿಸಿಕೊಂಡು ಬರುತ್ತಿರುತ್ತಾರೆ. ಈ ವೇಳೆ ಅರವಿಂದ್‍ಗೆ ಎರಡು ಬಾರಿ ತುಪ್ಪ ಬಡಿಸಿದ್ಯಾ ಎಂದು ಪ್ರಶಾಂತ್ ಹೇಳುತ್ತಾರೆ.

    ಆಗ ಅರವಿಂದ್ ನೀವು ನನ್ನ ತಟ್ಟೆ ಯಾಕೆ ನೋಡುತ್ತೀರಾ? ನೀವು ಊಟ ಮಾಡಿ, ನಿಮಗೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ. ನನ್ನ ಸುದ್ದಿಗೆ ಯಾಕೆ ಬರುತ್ತೀರಾ, ಅರವಿಂದ್‍ಗೆ ಎರಡು ಬಾರಿ ಹಾಕಿದ್ಯಾ, ನಾಲ್ಕು ಬಾರಿ ಹಾಕಿದ್ಯಾ ಅಂತ ನೀವು ಹಾಕಿಸಿಕೊಳ್ಳಿ ಪ್ರಶಾಂತ್‍ರವರೇ ಎನ್ನುತ್ತಾರೆ. ಈ ವೇಳೆ ಮನೆಯ ಸದಸ್ಯರು ಪರವಾಗಿಲ್ಲ ಇಂದು ಜಗಳ ಬೇಡ ಎಂದು ಸಮಾಧಾನ ಪಡಿಸುತ್ತಾರೆ. ಆಗ ಪ್ರಶಾಂತ್‍ರವರು ಯಾವಾಗಲೂ ನನ್ನ ತಂಟೆಗೆ ಬರುತ್ತಾರೆ. ಯುಗಾದಿಗಾದರೂ ಬಿಟ್ಟು ಬಿಡಿ ಎಂದು ಕೆಂಡಾಕಾರಿದ್ದಾರೆ.

    ನಂತರ ಈ ಬಗ್ಗೆ ಬಾತ್ ರೂಮ್ ಏರಿಯಾದಲ್ಲಿ ಚಕ್ರವರ್ತಿ ಆ ರೀತಿ ಒಪನ್ ಕಮೆಂಟ್ ಮಾಡಬಾರದು ಎಂದು ಅರವಿಂದ್‍ಗೆ ಹೇಳಿದಾಗ, ಅವರೇ ಮಾಡುತ್ತಾರೆ. ನಾವು ಅವರಷ್ಟು ಮಾಡುವುದಿಲ್ಲ. ಅವರು ಮಾಡುವಾಗ ನಾವು ಮುಚ್ಚಿಕೊಂಡು ಇರುವುದಿಲ್ವಾ ಎನ್ನುತ್ತಾರೆ. ಆಗ ಚಕ್ರವರ್ತಿ ನಾನು ಹೇಳುವುದೆಂದರೆ ಎಲ್ಲರ ಎದುರಿಗೆ ಒಪನ್ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಊಟ ತಿಂಡಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಬಂದರೆ ಆ ವಿಚಾರವನ್ನು ಖಾಸಗಿಯಾಗಿ ಇಡುತ್ತೇನೆ ಎಂದು ಹೇಳುತ್ತಾರೆ.