Tag: ತುಂಗಾರತಿ

  • ತುಂಗಭದ್ರ ತಟದಲ್ಲಿ ವಿಜೃಂಭಣೆಯಿಂದ ಜರುಗಿದ ಆರತಿ ಮಹೋತ್ಸವ

    ತುಂಗಭದ್ರ ತಟದಲ್ಲಿ ವಿಜೃಂಭಣೆಯಿಂದ ಜರುಗಿದ ಆರತಿ ಮಹೋತ್ಸವ

    – ಸಚಿವರು, ಸಂಸದರು, ಶಾಸಕರಿಂದ ತುಂಗಭದ್ರೆಗೆ ಬಾಗಿನ ಸಮರ್ಪಣೆ

    ಕೊಪ್ಪಳ: ಇಲ್ಲಿನ ಪೌರಾಣಿಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಸಮೀಪದ ತುಂಗಭದ್ರ ನದಿ (Tungabhadra River) ತಟದಲ್ಲಿ ವಿರ್ಜಂಭಣೆಯಿಂದ ತುಂಗಾರತಿ (Tunga Aarti) ಮಹೋತ್ಸವ ನಡೆಯಿತು.

    ಇದೇ ಮೊದಲ ಬಾರಿಗೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದ ತುಂಗಭದ್ರ ನದಿತೀರದಲ್ಲಿ ತುಂಗಭದ್ರ ಆರತಿ ಮಹೋತ್ಸವ ನಡೆಯಿತು. ಗಂಗಾ ಆರತಿ ಮಹೋತ್ಸವದಲ್ಲಿ ಭಾಗಿಯಾಗಿದ್ದ 15 ಅರ್ಚಕರು ತುಂಗಭದ್ರಾ ಆರತಿ ಮಹೋತ್ಸವ ನಡೆಸಿಕೊಟ್ಟರು. ಮಹೋತ್ಸವ ಅಕ್ಷರಶಃ ವಾರಣಾಸಿಯ ಗಂಗಾರತಿ ನೆನಪಿಸುವಂತಿತ್ತು. ತುಂಗಭದ್ರಾ ಆರತಿಗಾಗಿ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದ ವತಿಯಿಂದ ಸುಮಾರು ಎರಡು ಸಾವಿರ ಆರತಿಗಳನ್ನು ಭಕ್ತರಿಗೆ ಉಚಿತ ನೀಡಲಾಗಿತ್ತು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷವಿಕ್ಕಿ 5 ಹುಲಿಗಳ ಸಾವು ಕೇಸ್:‌ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

    ಮಹೋತ್ಸವದ ಪ್ರಯುಕ್ತ ಚಂಡಿಕಾ ಹೋಮ, ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ, ಮಾಹಿಳೆಯರಿಂದ ವಿಶೇಷ ಕುಂಭ ಮೆರವಣಿಗೆ, ನದಿ ತೀರದಲ್ಲಿ ದೇವಸ್ಥಾನದ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಪೂಜೆ ಕಾರ್ಯಕ್ರಮ ನಡೆಯಿತು. ಈ ಮೊದಲು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬಳಿಕ ನದಿ ತಟದ ವೇದಿಕೆಯಲ್ಲಿ ಹೊಸಪೇಟೆಯ ಅಂಜಲಿ ಕಲಾ ತಂಡದಿಂದ ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

    ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಂಸದ ಕೆ.ರಾಜಶೇಖರ ಹಿಟ್ನಾಳ, ಎಂಎಲ್ಸಿ ಹೇಮಲತಾ ನಾಯಕ ಹಾಗೂ ಇತರೆ ಜನಪ್ರತಿನಿಧಿಗಳು ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಮಾಡಿದರು.

  • ಮಂತ್ರಾಲಯದಲ್ಲಿ ತುಂಗಾರತಿ ಸಂಭ್ರಮ – ರಾಯರ ಮಠದಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ

    ಮಂತ್ರಾಲಯದಲ್ಲಿ ತುಂಗಾರತಿ ಸಂಭ್ರಮ – ರಾಯರ ಮಠದಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ

    ರಾಯಚೂರು: ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಮಂತ್ರಾಲಯದಲ್ಲಿ ಕಾರ್ತಿಕ ಶುದ್ಧ ಪೌರ್ಣಮಿ ಹಿನ್ನೆಲೆ ಪುಣ್ಯನದಿ ತುಂಗಭದ್ರೆಗೆ ಆರತಿ ಬೆಳಗುವ ಮೂಲಕ ತುಂಗಾರತಿ ಕಾರ್ಯಕ್ರಮ ಹಾಗೂ ಮಠದ ಪ್ರಾಕಾರದಲ್ಲಿ ಲಕ್ಷದೀಪೋತ್ಸವ ಶುಕ್ರವಾರ ರಾತ್ರಿ ಅದ್ದೂರಿಯಾಗಿ ನಡೆಯಿತು.

    ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ತುಂಗಾರತಿ ಕಾರ್ಯಕ್ರಮದ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳು ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ಇದಕ್ಕೂ ಮೊದಲು ಉತ್ಸವ ಮೂರ್ತಿ ಪ್ರಹ್ಲಾದರಾಜರನ್ನು ಶ್ರೀಮಠದಿಂದ ತುಂಗಭದ್ರಾ ನದಿ ತೀರಕ್ಕೆ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು. ಶ್ರೀಗಳು ತುಂಗಭದ್ರಾ ನದಿಗೆ ವಿಶೇಷ ಪೂಜೆ ಆರತಿ ನೆರವೇರಿಸಿದರು.

    ದೀಪಗಳನ್ನ ನದಿಯಲ್ಲಿ ತೇಲಿಬಿಡಲಾಯಿತು. ತುಂಗಾರತಿ ಮುಗಿದ ನಂತರ ಶ್ರೀ ಮಠದ ಪ್ರಾಕಾರದಲ್ಲಿ ಜ್ವಾಲಾ ತೋರಣ ನೆರವೇರಿಸಲಾಯಿತು. ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೀಪೋತ್ಸವ ಕಣ್ತುಂಬಿಕೊಂಡರು.

  • ತುಂಗಾರತಿಯೊಂದಿಗೆ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ

    ತುಂಗಾರತಿಯೊಂದಿಗೆ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ

    ಬಳ್ಳಾರಿ: ಐತಿಹಾಸಿಕ ಹಂಪಿ ಉತ್ಸವಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇರುವಂತೆಯೇ, ಹಂಪಿ ನದಿ ತೀರದಲ್ಲಿ ತುಂಗಾರತಿ ಮಾಡುವ ಮೂಲಕ ಹಂಪಿ ಉತ್ಸವಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಅಧಿಕೃತ ಚಾಲನೆ ನೀಡಿದರು. ವಿಜಯನಗರ ಪರಂಪರೆಯನ್ನು ಮುಂದುವರಿಸುವ ತುಂಗಾರತಿ ಕಾರ್ಯಕ್ರಮವನ್ನು ನದಿತಟದಲ್ಲಿ ನೋಡಲು ಜನಸಾಗರವೇ ಹರಿದು ಬಂದಿತ್ತು.

    ಮಾರ್ಚ್ 2 ಮತ್ತು 3ರಂದು ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಉಲ್ಲೇಖಸಿದಂತೆ ಹಂಪಿ ದಸರಾ ಉತ್ಸವದ ವೇಳೆ ಈ ರೀತಿ ತುಂಗಾರತಿ ಮಾಡುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದರಂತೆ ಆ ಪರಂಪರೆಯನ್ನು ಮುಂದುವರಿಸೋ ನಿಟ್ಟಿನಲ್ಲಿ ಇದೀಗ ಹಂಪಿ ಉತ್ಸವದ ವೇಳೆ ತುಂಗಾರತಿ ಮಾಡುವ ಪರಂಪರೆಯನ್ನು ಹುಟ್ಟು ಹಾಕಲಾಗಿದೆ. ಅಲ್ಲದೆ ತುಂಗಾರತಿ ಮೂಲಕವೇ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಸಚಿವ ಡಿಕೆ.ಶಿವಕುಮಾರ್ ಹಿಂದಿನ ಪರಂಪರೆಯನ್ನು ನಮ್ಮ ಸರ್ಕಾರ ಮುಂದುವರಿಸುತ್ತಿದೆ. ಎಂ.ಪಿ. ಪ್ರಕಾಶ್ ಅವರ ಆಶಯದಂತೆ ಪ್ರತಿ ವರ್ಷ ಅದ್ಧೂರಿಯಾಗಿ ಉತ್ಸವ ನಡೆಯುತ್ತದೆ ಎಂದರು.

    ದಿವಂಗತ ಎಂ.ಪಿ. ಪ್ರಕಾಶ್ ಅವರ ಕನಸಿನ ಕೂಸೆಂದು ಬಿಂಬಿಸಲಾಗುವ ಹಂಪಿ ಉತ್ಸವವನ್ನು ಪ್ರತಿ ವರ್ಷ ನವೆಂಬರ್ 3, 4 ಮತ್ತು 5ರಂದು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಉಪಚುನಾವಣೆ ಮತ್ತು ಬರದ ನೆಪವೊಡ್ಡಿ ಉತ್ಸವ ರದ್ದು ಮಾಡಲು ಯೋಚನೆ ಮಾಡಲಾಗಿತ್ತು. ಆದರೆ ಕಲಾವಿದರ ಮತ್ತು ಹೋರಾಟಗಾರರ ಪ್ರತಿಭಟನೆಯಿಂದಾಗಿ ಇದೀಗ ಎರಡು ದಿನಗಳ ಕಾಲ ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಉತ್ಸವದ ಉದ್ಘಾಟನೆಗೆ ನಟ ದರ್ಶನ್ ಮುಖ್ಯ ಅತಿಥಿಯಾಗಿ ಬಂದು ಉತ್ಸವವನ್ನು ರಂಗೇರಿಸಿದರೆ, ಗಾಯಕ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರುಗನ್ನು ತರಲಿದ್ದಾರೆ.

    ಹಲವು ಅಡ್ಡಿ ಆತಂಕಗಳ ನಿವಾರಣೆ ಬಳಿಕ ಇದೀಗ ಹಂಪಿ ಉತ್ಸವ ನಡೆಯಲು ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಹಂಪಿ ಬೈಸ್ಕೈ, ಪಾರಂಪರಿಕ ನಡಿಗೆ, ಕುಸ್ತಿ, ಕುದುರೆ ಓಟ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಈ ಬಾರಿ ವಿಶೇಷವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv