Tag: ತುಂಗಾ

  • ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ಲೇಡಿ ಸಿಂಗಂ ಇನ್ನಿಲ್ಲ!

    ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ಲೇಡಿ ಸಿಂಗಂ ಇನ್ನಿಲ್ಲ!

    ದಾವಣಗೆರೆ: ಇಡೀ ಪೊಲೀಸ್ ಇಲಾಖೆಯಲ್ಲಿಯೇ ನೀರವ ಮೌನ. ದಾವಣಗೆರೆಯ ಪೊಲೀಸ್ ಇಲಾಖೆ ಲೇಡಿ ಸಿಂಗಂ ಅಂತಲೇ ಹೆಸರಾಗಿದ್ದ 13 ವರ್ಷದ ತುಂಗಾ ಇನ್ನು ನೆನಪಷ್ಟೇ.

    ಹೌದು. ತುಂಗಾಳನ್ನು ಕಳೆದುಕೊಂಡ ಸಿಬ್ಬಂದಿ ಕಂಬನಿ ಮಿಡಿಯುತ್ತಿದ್ದಾರೆ. ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈಕೆ ನಿಸ್ಸೀಮಳಾಗಿದ್ದಳು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಳು. ಅದಾದ ಎರಡು ದಿನಕ್ಕೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯರು ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗ್ಯೂ ದೃಢಪಟ್ಟಿತ್ತು. ಚಿಕಿತ್ಸೆ ನೀಡಿದರು. ಆದರೆ ಬಿಳಿ ರಕ್ತ ಕಣ ಕಡಿಮೆಯಾಗಿದ್ರಿಂದ ತುಂಗಾ ಇದೀಗ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ

    ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ 12 ವರ್ಷಗಳ ಕಾಲ ತುಂಗಾ ಸೇವೆ ಸಲ್ಲಿಸಿದ್ದಾಳೆ. 71 ಕೊಲೆ ಪ್ರಕರಣಗಳು, 35 ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಭೇದಿಸಿದ್ದಾಳೆ. ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣಗಳನ್ನು ಕೂಡ ತುಂಗಾ ಕಂಡುಹಿಡಿದಿದ್ದಳು. ಅಪರಾಧಿಗಳ ವಾಸನೆ ಹಿಡಿದು 13 ಕಿಲೋ ಮೀಟರ್ ಕ್ರಮಿಸಿ ಅಪರಾಧಿಗಳನ್ನು ಹಿಡಿದ ಕೀರ್ತಿ ತುಂಗಾಗಿದೆ.

    ಅಗಲಿದ ತುಂಗಾಳಿಗೆ ಜಿಲ್ಲಾ ಡಿಎಆರ್ ಗ್ರೌಂಡ್‍ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಎಸ್‍ಪಿ ಸಿ.ಬಿ ರಿಷ್ಯಂತ್ ಸೇರಿದಂತೆ ಹಲವು ಅಧಿಕಾರಿಗಳು ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದ್ರು. ತುಂಗಾಳ ಅಗಲಿಕೆಯಿಂದ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಚಾಣಾಕ್ಷ ತನದಿಂದ ಪ್ರಕರಣಗಳನ್ನು ಭೇದಿಸುತ್ತಿದ್ದ ಶ್ವಾನ ಇನ್ನು ನೆನಪು ಮಾತ್ರ.

    Live Tv
    [brid partner=56869869 player=32851 video=960834 autoplay=true]

  • ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರ ಸ್ನಾನಕ್ಕೆ ಬ್ರೇಕ್

    – ತಾಲೂಕು ಆಡಳಿತದಿಂದ ಆದೇಶ

    ಶಿವಮೊಗ್ಗ: ದಕ್ಷಿಣ ಭಾರತದ ವಾರಾಣಸಿ ಎಂದೇ ಖ್ಯಾತಿ ಪಡೆದಿರುವ ತುಂಗಾ-ಭದ್ರಾ ನದಿಯ ಸಂಗಮವಾಗಿರುವ ಕೂಡ್ಲಿಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಪುಷ್ಕರ ಸ್ನಾನಕ್ಕೆ ಬ್ರೇಕ್ ಬಿದ್ದಿದೆ. ಕೋವಿಡ್-19 ಸೋಂಕು ಹರಡುವ ಭೀತಿ ಹಿನ್ನೆಲೆ ಈ ಬಾರಿಯ ಪುಷ್ಕರವನ್ನು ನಿಷೇಧಿಸಿ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಪ್ರಾಚೀನ ಕಾಲದಿಂದಲೂ ಪೂಜೆ, ಧ್ಯಾನ ಮತ್ತು ಶಾಂತಿಯ ಪ್ರಮುಖ ತಾಣವಾಗಿರುವ ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ತುಂಗಾ ಮತ್ತು ಭದ್ರಾ ಎರಡು ನದಿಗಳ ಸಂಗಮವಾಗಿದೆ. ದೇಶದಲ್ಲಿ ನದಿಗಳು ಸೇರುವ ಪವಿತ್ರ ಸ್ಥಳಗಳಲ್ಲಿ ಪುಷ್ಕರ ನಡೆಯುವುದು ಸಂಪ್ರದಾಯವಾಗಿದ್ದು, ಇಂದಿನಿಂದ 12 ದಿನಗಳ ಕಾಲ ಈ ಪುಷ್ಕರ ಸಂಭ್ರಮ ನಡೆಯುತ್ತದೆ. ಗುರುವು ಇಂದಿನಿಂದ ತನ್ನ ಪಥ ಬದಲಾಯಿಸುತ್ತಿದ್ದು, ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಪುಣ್ಯ ದಿನಗಳಂದು ಸಾವಿರಾರು ವರ್ಷಗಳ ಪುರಾಣ ಪ್ರಸಿದ್ಧ ತಾಣವಾಗಿರುವ ಕೂಡ್ಲಿಯಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಪುಷ್ಕರ ಸ್ನಾನ ನಡೆಯುವುದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ರೇಕ್ ಬಿದ್ದಿದೆ.

    ಇಂದಿನಿಂದ ಆರಂಭವಾಗಬೇಕಿದ್ದ ಪುಷ್ಕರ ಸ್ನಾನಕ್ಕೆ ನಿರ್ಬಂಧ ಹೇರಲಾಗಿದ್ದು, ಕೂಡ್ಲಿ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮ ಪಂಚಾಯಿತಿ ಈ ಬಾರಿಯ ಪುಷ್ಕರವನ್ನು ನಿಷೇಧಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಹೊರಗಿನಿಂದ ಬರುವವರಿಗೆ ಪ್ರವೇಶ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಪುಷ್ಕರ ಸ್ನಾನ ಮಾಡಿದರು.

    ರಾಜ್ಯದ ವಿವಿಧೆಡೆಯಿಂದ ಜನ ಆಗಮಿಸಿ ಪುಷ್ಕರದ ದಿನಗಳಲ್ಲಿ ಸ್ನಾನ ಮಾಡಲು ಆಗಮಿಸುತ್ತಿದ್ದರು. ಇಂದಿನ ಯೋಗದ ದಿನ ಸಂಗಮದಲ್ಲಿ ಸ್ನಾನ ಮಾಡಿದರೆ ರೋಗ-ರುಜಿನಗಳು ಮಾಯವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ. ತಾಲೂಕು ಆಡಳಿತದ ಕ್ರಮಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಪುಷ್ಕರ ನಡೆಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.

  • ಪ್ರವಾಹದಿಂದಾಗಿ 2 ದಿನ ಶೃಂಗೇರಿ ಶೌಚಾಲಯದಲ್ಲಿದ್ದ ವ್ಯಕ್ತಿಯ ರಕ್ಷಣೆ

    ಪ್ರವಾಹದಿಂದಾಗಿ 2 ದಿನ ಶೃಂಗೇರಿ ಶೌಚಾಲಯದಲ್ಲಿದ್ದ ವ್ಯಕ್ತಿಯ ರಕ್ಷಣೆ

    ಚಿಕ್ಕಮಗಳೂರು: ಶೃಂಗೇರಿಯಲ್ಲಿ ತುಂಗಾ ನದಿಯ ಪ್ರವಾಹಕ್ಕೆ ಸಿಲುಕಿ 2 ದಿನ ಶೌಚಾಲಯದಲ್ಲೇ ಪ್ರಾಣ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವಲ್ಲಿ ರಕ್ಷಣಾತಂಡ ಯಶಸ್ವಿಯಾಗಿದೆ.

    ವಿನೋದ್ ಮಂಡ್ಲೆ ರಕ್ಷಣೆಯಾದ ವ್ಯಕ್ತಿ. ವಿನೋದ್ ಮೂಲತಃ ಬಿಹಾರ್ ಮೂಲದವರಾಗಿದ್ದು, ಶೃಂಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ  ಬುಧವಾರ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ತುಂಗಾನದಿಯ ಪ್ರವಾಹದಲ್ಲಿ ಸಿಕ್ಕಿಕೊಂಡ ವಿನೋದ್ ಜೀವ ಉಳಿಸಿಕೊಳ್ಳಲು ಗಾಂಧಿ ಮೈದಾನದಲ್ಲಿರುವ ಶೌಚಾಲಯದಲ್ಲೇ ಆಶ್ರಯ ಪಡೆದುಕೊಂಡಿದ್ದಾರೆ.

    ಪ್ರವಾಹದ ಪ್ರಮಾಣ ಕಡಿಮೆಯಾಗದೇ ಕಳೆದ ಎರಡೂ ದಿನಗಳಿಂದಲೂ ಶೌಚಾಲಯದಲ್ಲೇ ಸಿಲುಕಿಕೊಂಡಿದ್ದರು. ಶೌಚಾಲಯದಲ್ಲಿ ವ್ಯಕ್ತಿ ಸಿಲುಕಿಕೊಂಡಿರುವ ವಿಷಯ ತಿಳಿದ ಎ.ಎನ್.ಎಫ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ವಿನೋದ್ ನನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv