Tag: ತುಂಗಭದ್ರಾ

  • ಮುನ್ನೆಚ್ಚರಿಕೆ ನೀಡದೆ ತುಂಗಭದ್ರಾ ನದಿಗೆ ಭಾರೀ ಪ್ರಮಾಣದ ನೀರು- ರೈತರು ಆಕ್ರೋಶ

    ಮುನ್ನೆಚ್ಚರಿಕೆ ನೀಡದೆ ತುಂಗಭದ್ರಾ ನದಿಗೆ ಭಾರೀ ಪ್ರಮಾಣದ ನೀರು- ರೈತರು ಆಕ್ರೋಶ

    ರಾಯಚೂರು: ತುಂಗಭದ್ರಾ ಜಲಾಶಯದಿಂದ ಎರಡು ಲಕ್ಷ ಕ್ಯೂಸೆಕ್‍ನಷ್ಟು ಪ್ರಮಾಣದ ನೀರು ನದಿಗೆ ಹರಿಸಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಸಿಂಧನೂರು, ಮಾನ್ವಿ ತಾಲೂಕಿನಲ್ಲಿ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ಕೋಟ್ಯಾಂತರ ರೂಪಾಯಿ ಬೆಳೆ ನಷ್ಟವಾಗಿದೆ. ಜಮೀನಿನಲ್ಲಿನ ಪಂಪ್ ಸೆಟ್‍ಗಳು ಸಹ ಮುಳುಗಡೆಯಾಗಿದೆ. ನದಿ ಪಾತ್ರದ ಗ್ರಾಮಗಳು ಪ್ರವಾಹ ಪರಿಸ್ಥಿತಿಯಿಂದ ಕಂಗೆಟ್ಟಿವೆ. ಮುನ್ನೆಚ್ಚರಿಕೆಯನ್ನ ನೀಡದೆ ಏಕಾಏಕಿ ಭಾರೀ ಪ್ರಮಾಣದ ನೀರನ್ನ ತುಂಗಭದ್ರಾ ನದಿಗೆ ಹರಿಸಿರುವುದಕ್ಕೆ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾನ್ವಿ ತಾಲೂಕಿನ ಹೆಡವಿಯಾಳ, ಚೀಕಲಪರ್ವಿ, ಮದ್ಲಾಪುರ, ಕಾತರಕಿ ಗ್ರಾಮದ ಭತ್ತ ಹಾಗೂ ಹತ್ತಿಬೆಳೆ ನದಿಪಾಲಾಗಿದೆ. ಚೀಕಲಪರ್ವಿಯಲ್ಲಿರುವ ವಿಜಯದಾಸರ ಕಟ್ಟೆ ಜಲಾವೃತವಾಗಿದೆ. ವಿಜಯದಾಸರು ತಪ್ಪಸ್ಸು ಮಾಡಿದ ಸ್ಥಳ ಈಗ ಬಹುತೇಕ ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುರು ರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ದಂಡೆಯಲ್ಲಿರುವ ಮಠದ ಆವರಣದಲ್ಲಿನ ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ರಾಯರ ಆರಾಧನೆ ಹಿನ್ನೆಲೆ ಸ್ನಾನ ಘಟ್ಟದಲ್ಲಿ ಮಾಡಿದ್ದ ವ್ಯಸ್ಥೆಗಳೆಲ್ಲಾ ಅಸ್ತವ್ಯಸ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಭೋರ್ಗರೆಯುತ್ತಿರುವ ನದಿಯಲ್ಲಿ ಹುಚ್ಚು ಸಾಹಸಗೈದು ಯುವಕರಿಂದ ಧ್ವಜಾರೋಹಣ!

    ಕೊಪ್ಪಳ: ಭೋರ್ಗರೆದು ಹರಿಯುತ್ತಿರುವ ನದಿಯಲ್ಲಿ ಹುಲಗಿ ಗ್ರಾಮದ ಯುವಕರು ಹುಚ್ಚು ಸಾಹಸ ಮಾಡಿ ಧ್ವಜವನ್ನು ಹಾರಿಸಿದ್ದಾರೆ.

    ಯುವಕರು ಅಪಾಯಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರ ನದಿಯಲ್ಲಿ ಈಜಿ, ನದಿಯ ಮಧ್ಯದಲ್ಲಿ ಕಲ್ಲುಗಳನ್ನು ಜೋಡಿಸಿ ಧ್ವಜವನ್ನು ನೆಟ್ಟಿದ್ದಾರೆ.

    ಈ ದೃಶ್ಯವನ್ನು ನೋಡುತ್ತಿದ್ದ ಗ್ರಾಮಸ್ಥರು ಸಾಹಸ ಮಾಡಲು ಹೋಗಬೇಡಿ ಎಂದು ಎಚ್ಚರಿಕೆ ನೀಡಿದ್ದರೂ ಯುವಕರು ನದಿಯ ಮಧ್ಯದಲ್ಲೇ ಧ್ವಜವನ್ನು ಹಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ರೀತಿ ಸಾಹಸ ಮಾಡಿ ದೇಶ ಪ್ರೇಮ ತೋರಿಸುವ ಅಗತ್ಯವಿಲ್ಲ. ಹೆಚ್ಚು ಕಡಿಮೆಯಾಗಿ ಪ್ರಾಣಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನೀವು ರಾಷ್ಟ್ರ ಧ್ವಜವನ್ನು ಹಾರಿಸದೇ ಇದ್ದರೂ ಬೇಸರವಿಲ್ಲ. ಆದರೆ ದಯವಿಟ್ಟು ಈ ರೀತಿಯ ಹುಚ್ಚು ಸಾಹಸವನ್ನು ಯಾರು ಮಾಡಲು ಹೋಗಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಂಗಾಭದ್ರ ನದಿಯು ಅಪಾಯದಮಟ್ಟವನ್ನು ಮೀರಿ ಹರಿಯುತ್ತಿದೆ. ಈಗಾಗಲೇ ತುಂಗಭದ್ರಾ ಜಲಾಶಯವು ಸಹ ತುಂಬಿದ್ದು, ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತುಂಗಭದ್ರಾ ಜಲಾಶಯ ಎಲ್ಲಾ ಗೇಟ್ ಓಪನ್ – ಗಂಗಾವತಿ ಕಂಪ್ಲಿ ಸೇತುವೆ ಮುಳುಗಡೆ

    ತುಂಗಭದ್ರಾ ಜಲಾಶಯ ಎಲ್ಲಾ ಗೇಟ್ ಓಪನ್ – ಗಂಗಾವತಿ ಕಂಪ್ಲಿ ಸೇತುವೆ ಮುಳುಗಡೆ

    ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಜಲಾಶಯದ ಎಲ್ಲಾ ಗೇಟುಗಳ ಮೂಲಕ ನೀರನ್ನು ನದಿಗೆ ಹರಿದು ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಕಂಪ್ಲಿ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ.

    ಅಧಿಕ ಪ್ರಮಾಣದ ನೀರು ಹರಿಸಿದ ಪರಿಣಾಮ ಮಂಗಳವಾರ ರಾತ್ರಿಯೇ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಅಲ್ಲದೇ ಮುನ್ನೆಚ್ಚರಿಕಾ ದೃಷ್ಟಿಯಿಂದ ಸೇತುವೆ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಚಿಕ್ಕ ಜಂತಕಲ್ ಸೇತುವೆಯನು 1961ರಲ್ಲಿ ನಿರ್ಮಿಸಲಾಗಿದ್ದು, ಕಳೆದ 10 ವರ್ಷದ ಹಿಂದೆ ಈ ಸೇತುವೆ ಶೀತಲಗೊಂಡ ಬಗ್ಗೆ ಗಂಗಾವತಿ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿತ್ತು. ಇದೇ ವೇಳೆ ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ನಿಷೇಧ ಮಾಡಲು ಮನವಿ ಸಲ್ಲಿಸಿಲಾಗಿತ್ತು. ಆದರೆ ಈ ಕುರಿತು ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುತ್ತಿದ್ದು, ಸೇತುವೆ ಭಾರೀ ವಾಹನ ಓಡಾಟಕ್ಕೆ ನಿಷೇಧಸಲು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಪ್ರತಿ ಸಾರಿ ತುಂಗಾಭದ್ರಾ ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟಾಗಲೆಲ್ಲಾ ಸೇತುವೆ ಮೇಲೆ ನೀರು ಹರಿದು ಬರುತ್ತಿದ್ದು ಪ್ರಯಾಣಿಕರಿಗೆ ಸಂಕಷ್ಟ ತಂದಿದೆ. ಗಂಗಾವತಿಯಿಂದ ಕೇವಲ 5 ಕಿಮೀ ದೂರದಲ್ಲಿರುವ ಕಂಪ್ಲಿಗೆ ತೆರಳಲು ಈ ಮಾರ್ಗ ಹತ್ತಿರವಾಗಿದ್ದು, ಸಂಪರ್ಕ ಕಡಿತಗೊಂಡರೆ ಸುಮಾರು 50 ಕಿಮೀ ಹೆಚ್ಚು ಪ್ರಯಾಣ ನಡೆಸಬೇಕಾಗುತ್ತದೆ.

    ಸದ್ಯ ಈ ಮಾರ್ಗದ ಪರ್ಯಾಯವಾಗಿ ಗಂಗಾವತಿಯ ಕಡೆಬಾಗಿಲು ಬುಕ್ಕಸಾಗರ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದೇ ವೇಳೆ ನದಿಯಲ್ಲಿ ಹೆಚ್ಚು ನೀರು ಹರಿದುಹೋಗುತ್ತಿರುವುದರಿಂದ ಸಾರ್ವಜನಿಕರು ಅಪಾಯವನ್ನು ಲೆಕ್ಕಿಸದೇ ಸೆಲ್ಫಿ ಕ್ಲಿಕ್ಕಿಸುತ್ತಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲುವೆ ತಡೆಗೋಡೆ ಒಡೆದು ಜಿ.ಪಂ ಕಾಂಗ್ರೆಸ್ ಸದಸ್ಯನ ದರ್ಪ ಅಡಗಿಸಿದ ರೈತರು

    ಕಾಲುವೆ ತಡೆಗೋಡೆ ಒಡೆದು ಜಿ.ಪಂ ಕಾಂಗ್ರೆಸ್ ಸದಸ್ಯನ ದರ್ಪ ಅಡಗಿಸಿದ ರೈತರು

    ರಾಯಚೂರು: ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರೊಬ್ಬರು ತುಂಗಭದ್ರಾ ಎಡದಂಡೆ ಕಾಲುವೆಗೆ ತಡೆಗೋಡೆ ಕಟ್ಟಿ, ತಮ್ಮ ಜಮೀನಿಗೆ ನೀರು ಹರಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ್ರೆ, ಸಾರ್ವಜನಿಕರ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಆಕ್ರೋಶಗೊಂಡ ರೈತರು ಕಾಲುವೆಗೆ ಕಟ್ಟಲಾಗಿದ್ದ ತಡೆಗೋಡೆಯನ್ನು ಒಡೆದು ಹಾಕಿದ್ದಾರೆ.

    ಯಾರು ಈ ಜನಪ್ರತಿನಿಧಿ: ಸಿಂಧನೂರಿನ ಗುಡದೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ದುರಗಪ್ಪ ಗುಡಗಲದಿನ್ನಿ ಅಕ್ರಮವಾಗಿ ನೀರು ಪಡೆಯುತ್ತಿರುವ ಜನಪ್ರತಿನಿಧಿ. ತುಂಗಭದ್ರಾ ಎಡದಂಡೆ ಕಾಲುವೆಯ 49 ನೇ ಉಪಕಾಲುವೆಗೆ ತಡೆಗೊಡೆ ಕಟ್ಟಿ, ತಮ್ಮ 12 ಎಕರೆ ಜಮೀನಿಗೆ ನೀರು ಹರಿಸಿಕೊಂಡಿದ್ದರು.

    ತಡೆಗೋಡೆ ಕಟ್ಟಿದ್ದರಿಂದ ಕೆಳಭಾಗದ ಕೋಳಬಾಳ, ಕನ್ನೂರು, ಹೆಡಗಿಬಾಳ ಕ್ಯಾಂಪ್, ಮದ್ದಾಪುರ, ಎಲೆಕೂಡ್ಲಿಗಿ, ಗೋನಾಳ ಸೇರಿ ಇನ್ನೂ ಹಲವು ಗ್ರಾಮದ ರೈತರ ಜಮೀನಿಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಕಾಲುವೆಗೆ ನೀರು ಬಿಟ್ಟಿದ್ದರೂ ತಮ್ಮ ಹೊಲಗಳ ಸಮೀಪದ ಕಾಲುವೆಗೆ ನೀರು ಬಾರದಿದ್ದಕ್ಕೆ ಸಂದೇಹ ವ್ಯಕ್ತಪಡಿಸಿ, ಕೆಲವು ರೈತರು ಕಾಲುವೆ ಪರಿಶೀಲನೆ ಮಾಡಿದ್ದರು. ಈ ವೇಳೆ ದುರಗಪ್ಪ ಗುಡಗಲದಿನ್ನಿ ಕಾಲುವೆಗೆ ತಡೆಗೊಡೆ ಕಟ್ಟಿದ್ದು ತಿಳಿದು, ನೀರು ಬಿಡುವಂತೆ ಅವರು ಕೇಳಿದ್ದರು. ಆದರೆ ಇದಕ್ಕೆ ಒಪ್ಪದ ದುರಗಪ್ಪ ಗೂಂಡಾಗಿರಿ ದರ್ಪ ಮೆರೆದಿದ್ದರು.

    ಕೆಲವು ರೈತರು ದುರಗಪ್ಪ ಗುಡಗಲದಿನ್ನಿ ವಿರುದ್ಧ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಪೊಲೀಸರ ಎದುರೇ ರೈತರೇ ಕಾಂಕ್ರೀಟ್‍ನಿಂದ ಕಟ್ಟಿದ್ದ ತಡೆಗೋಡೆಯನ್ನು ಒಡೆದುಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ತುಂಗಭದ್ರಾ ನದಿ ಪ್ರವಾಹಕ್ಕೆ ಸಿಲುಕಿದ್ದ ಮಹಾರಾಷ್ಟ್ರ ಪೊಲೀಸರು ಬಚಾವ್!

    ತುಂಗಭದ್ರಾ ನದಿ ಪ್ರವಾಹಕ್ಕೆ ಸಿಲುಕಿದ್ದ ಮಹಾರಾಷ್ಟ್ರ ಪೊಲೀಸರು ಬಚಾವ್!

    ಬಳ್ಳಾರಿ: ನದಿಗೆ ಸ್ನಾನಕ್ಕೆ ತೆರಳಿ, ನೀರುಪಾಲಾಗಿದ್ದ ಮಹಾರಾಷ್ಟ್ರ ಪೊಲೀಸರು ಅದೃಷ್ಟವಶಾತ್ ಬದುಕುಳಿದ ಘಟನೆ ಹಂಪಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.

    ಐವರು ಮಹಾರಾಷ್ಟ್ರ ಪೊಲೀಸರು ವಿರೂಪಾಕ್ಷ ದೇವರ ದರ್ಶನಕ್ಕಾಗಿ ಹಂಪಿಗೆ ಬಂದಿದ್ದರು. ಈ ವೇಳೆ ಎಲ್ಲರೂ ಸ್ನಾನ ಮಾಡಲು ತುಂಗಭದ್ರಾ ನದಿಗೆ ಇಳಿದಿದ್ದು, ಈಜಲು ಮುಂದಾಗಿದ್ದ ವೇಳೆ ಪ್ರವಾಹಕ್ಕೆ ಸಿಲುಕಿದ್ದರು. ಇದನ್ನು ಕಂಡ ಸ್ಥಳೀಯರು ಹಾಗೂ ಮೀನುಗಾರರು ತಕ್ಷಣವೇ ನದಿಯಲ್ಲಿ ದೋಣಿ ಮೂಲಕ ತೆರಳಿ ಅವರನ್ನು ರಕ್ಷಿಸಿದ್ದಾರೆ.

    ಸದ್ಯ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಕುಡಿಯುವ ನೀರಿಗೂ ಬಂತು ಹಸಿರು ಬಣ್ಣ- ಬಳ್ಳಾರಿ ಮಂದಿಗೆ ಜೀವಜಲದ ಭೀತಿ

    ಕುಡಿಯುವ ನೀರಿಗೂ ಬಂತು ಹಸಿರು ಬಣ್ಣ- ಬಳ್ಳಾರಿ ಮಂದಿಗೆ ಜೀವಜಲದ ಭೀತಿ

    ಬಳ್ಳಾರಿ: ವೈಜ್ಞಾನಿಕವಾಗಿ ನೀರಿಗೆ ಬಣ್ಣವಿಲ್ಲ. ಆದ್ರೆ ಹೈದ್ರಾಬಾದ್ ಕರ್ನಾಟಕ ಅದರಲ್ಲೂ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಮಾತ್ರ ಹಸಿರು ಬಣ್ಣಕ್ಕೆ ತಿರುಗಿದೆ.

    ದಾವಣಗೆರೆ, ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿರುವ ಕಾರ್ಖಾನೆಗಳು ಹೊರಬಿಡುವ ತ್ಯಾಜ್ಯ ನೀರಿನಿಂದಾಗಿ ಜಲಾಶಯದ ಹಿನ್ನೀರಲ್ಲಿ ಮಿಶ್ರಣಗೊಂಡು ಡ್ಯಾಂನಲ್ಲಿರುವ ನೀರು ಕಲುಷಿತಗೊಂಡಿದೆ. ಮುಂಗಾರು ಮಳೆ ಅಭಾವದಿಂದಾಗಿ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ.

    ಇದೇ ಹೊತ್ತಲ್ಲೇ ಬಳ್ಳಾರಿಯಲ್ಲಿ ಕುಡಿಯುವ ನೀರಿನ ಮೂಲವಾಗಿರುವ ಡ್ಯಾಂನಲ್ಲಿರುವ ಅಲ್ಪಸ್ವಲ್ಪ ನೀರು ಕೂಡಾ ಕಲುಷಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ಮಧ್ಯೆ ಡ್ಯಾಂ ಅಧಿಕಾರಿಗಳು ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

    ಡ್ಯಾಂ ನೀರು ಶುಚಿಗೊಳಿಸುವ ಕೆಲಸವನ್ನು ಸರ್ಕಾರ ಮಾಡ್ಬೇಕಿದೆ. ಇಲ್ಲವಾದ್ರೆ ಇದೇ ನೀರನ್ನೇ ಜೀವಜಲ ಎಂದು ನಂಬಿ ಸೇವಿಸುವ ಜನಸಾಮಾನ್ಯರು, ಜಾನುವಾರುಗಳಿಗೆ ತೊಂದರೆಯಾದರೂ ಅಚ್ಚರಿಯಿಲ್ಲ.

  • 43ನೇ ದಿನಕ್ಕೆ ತುಂಗಭದ್ರ ನೌಕರರ ಪ್ರತಿಭಟನೆ – ಇಂದು ರಾಯಚೂರು ಬಂದ್

    43ನೇ ದಿನಕ್ಕೆ ತುಂಗಭದ್ರ ನೌಕರರ ಪ್ರತಿಭಟನೆ – ಇಂದು ರಾಯಚೂರು ಬಂದ್

    – ಹೋರಾಟಕ್ಕೆ 23 ಸಂಘಟನೆಗಳ ಬೆಂಬಲ

    ರಾಯಚೂರು: ತುಂಗಭದ್ರಾ ಹಂಗಾಮಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಯಚೂರು ಬಂದ್‍ಗೆ ಕರೆ ನೀಡಿದ್ದಾರೆ. ಹೋರಾಟ 43ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರ ಹೋರಾಟಕ್ಕೆ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಬಂದ್‍ಗೆ ಕರೆ ನೀಡಿದ್ದಾರೆ.

    ಹೋರಾಟಕ್ಕೆ ಈಗಾಗಲೇ 23 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಬೈಕ್ ಮೆರವಣಿಗೆ ಮೂಲಕ ಕಾರ್ಮಿಕರು ಬಂದ್ ಆಚರಣೆಗೆ ಮುಂದಾಗಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸುವುದು ಹಾಗೂ ವೇತನ ಹೆಚ್ಚಳದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಂದ್‍ಗೆ ಕರೆ ನೀಡಲಾಗಿದೆ.

    ತುರ್ತು ಸೇವೆಗಳನ್ನ ಹೊರತುಪಡಿಸಿ ಉಳಿದೆಲ್ಲಾ ಸೇವೆಗಳ ಸಂಪೂರ್ಣ ಬಂದ್‍ಗೆ ಹೋರಾಟಗಾರರು ಮುಂದಾಗಿದ್ದಾರೆ. ಬೆಳಗಿನ ಜಾವದಿಂದ ಬಂದ್‍ಗೆ ಮಿಶ್ರಪ್ರತಿಕ್ರಿಯೇ ವ್ಯಕ್ತವಾಗುತ್ತಿದೆ. ಇಡೀ ದೇಶಾದ್ಯಂತ ಬಿಡುಗಡೆಯಾಗಿರುವ ಬಾಹುಬಲಿ-2 ಸಿನೆಮಾ ರಾಯಚೂರಿನ ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಪ್ರದರ್ಶನಕ್ಕೆ ಬಂದ್ ಅಡ್ಡಿಯಾಗುವ ಸಾಧ್ಯತೆಯಿದೆ.

  • ಹೋಳಿಯಾಟವಾಡಿ ನದಿ ಸ್ನಾನಕ್ಕೆ ಹೋದವ ಶವವಾದ

    ಹೋಳಿಯಾಟವಾಡಿ ನದಿ ಸ್ನಾನಕ್ಕೆ ಹೋದವ ಶವವಾದ

    ಕೊಪ್ಪಳ: ಹೋಳಿ ಹಬ್ಬದಂದು ಬಣ್ಣದ ಓಕುಳಿ ಆಡಿ ನಂತರ ನದಿ ಸ್ನಾನಕ್ಕೆ ಹೋದ ಯುವಕ ಜಲಸಮಾಧಿ ಆದ ಘಟನೆ ಕೊಪ್ಪಳ ತಾಲೂಕಿನ ನೇಲಗಿಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

    25 ವರ್ಷದ ಬಸವರಾಜ್ ಮ್ಯಾಳಿ ಮೃತ ಯುವಕ. ಭಾನುವಾರದಂದು ಹೋಳಿ ಆಡಿದ ನಂತರ ಬಸವರಾಜ್ ಮತ್ತು ಆತನ ಸ್ನೇಹಿತರು ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಬಸವರಾಜ್ ಮತ್ತು ಮಾರುತಿ ಎಂಬ ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದಾರೆ. ನದಿಯ ದಡದಲ್ಲಿದ್ದ ಮೀನುಗಾರರು ಮಾರುತಿಯನ್ನು ರಕ್ಷಣೆ ಮಾಡಿದ್ದಾರೆ. ಆದ್ರೆ ಬಸವರಾಜ್ ಮೃತಪಟ್ಟಿದ್ದಾರೆ.

    ಬಸವರಾಜ್ ಮೃತ ದೇಹಕ್ಕಾಗಿ ಸುಮಾರು 30 ಕ್ಕೂ ಹೆಚ್ಚು ನುರಿತ ಈಜುಗಾರರು ಕಾರ್ಯಾಚರಣೆ ಮಾಡಿದ್ದರೂ ಮೃತ ದೇಹ ಇನ್ನೂ ಪತ್ತೆಯಾಗಿಲ್ಲ. ಭಾನುವಾರ ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪುನಃ ಕಾರ್ಯಾಚರಣೆ ಆರಂಭಗೊಂಡಿದೆ.

    ಸಾಮಾನ್ಯವಾಗಿ ಈ ಭಾಗದ ಯುವಕರು ಹೋಳಿ ನಂತರ ಸ್ನಾನಕ್ಕೆ ನದಿಗೆ ಹೋಗುತ್ತಾರೆ. ಆದ್ರೆ ಈ ಬಾರಿ ನದಿಯಲ್ಲಿ ಹೆಚ್ಚು ಹೂಳಿರುವುದರಿಂದ ಹೊಳಿನಲ್ಲಿ ಬಸವರಾಜ ಮೃತ ದೇಹ ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ. ಅಳವಂಡಿ ಠಾಣಾ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟು, ಪರಶೀಲನೆ ನಡೆಸಿದ್ದಾರೆ.