Tag: ತೀಸ್ತಾ ಸೆತಲ್ವಾಡ್‌

  • ಗುಜರಾತ್ ಗಲಭೆ ಪ್ರಕರಣದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀಸ್ತಾ ಸೆತಲ್ವಾಡ್ ಬಂಧನ

    ಗುಜರಾತ್ ಗಲಭೆ ಪ್ರಕರಣದಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ತೀಸ್ತಾ ಸೆತಲ್ವಾಡ್ ಬಂಧನ

    ಮುಂಬೈ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿದೆ.

    ಸ್ವಯಂ ಸೇವಾ ಸಂಸ್ಥೆಯೊಂದರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ತೀಸ್ತಾ ಸೆತಲ್ವಾಡ್ ಅವರ ನಿವಾಸಕ್ಕೆ ಭೇಟಿ ನೀಡಿದ ಗುಜರಾತಿನ ಭಯೋತ್ಪಾದನಾ ನಿಗ್ರಹದಳ ಅವರನ್ನು ಬಂಧಿಸಿದೆ. ನಂತರ ಆಕೆಯನ್ನು ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

    2002ರ ಗುಜರಾತ್ ಗಲಭೆ ಬಗ್ಗೆ ತೀಸ್ತಾ ಸೆತಲ್ವಾಡ್, ಪೊಲೀಸರಿಗೆ ಆಧಾರ ರಹಿತ ಮಾಹಿತಿ ನೀಡಿದ್ದಾರೆ. ಅಲ್ಲದೆ ಪ್ರಧಾನಿ ಮೋದಿಯವರ ಪ್ರತಿಷ್ಠೆಗೆ ಕಳಂಕ ತರುವಂತೆ ಅವರು ಪ್ರಚಾರ ನಡೆಸಲು ಸಹಾಯ ಮಾಡಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ತೀಸ್ತಾ ಅವರನ್ನು ಬಂಧಿಸಲಾಗಿದೆ.

    2002ರ ಗುಜರಾತ್ ಗಲಭೆಯಲ್ಲಿ ದೊಡ್ಡ ಪಿತೂರಿ ನಡೆದಿದೆ ಎಂದು ಹತ್ಯೆಯಾದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಗಲಭೆಗೆ ಸಂಬಂಧಿಸಿ ಮೋದಿ ಸೇರಿ 64 ಜನರಿಗೆ ಎಸ್‌ಐಟಿ ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿ ಜಾಫ್ರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರಲ್ಲಿ ತೀಸ್ತಾ ಕೂಡ ಒಬ್ಬರಾಗಿದ್ದರು. ಗಲಭೆ ನಡೆದ ಅವಧಿಯಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅಮಿತ್ ಶಾ, ನಾನು ತೀರ್ಪನ್ನು ಬಹಳ ಎಚ್ಚರಿಕೆಯಿಂದಲೇ ಓದಿದ್ದೇನೆ. ಅದರಲ್ಲಿ ತೀಸ್ತಾ ಸೆತಲ್ವಾಡ್ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅವರು ನಡೆಸುತ್ತಿರುವ ಎನ್‌ಜಿಓ ಹೆಸರು ನನಗೆ ನೆನಪಿಲ್ಲ. ಆದರೆ ಗಲಭೆಯ ಬಗ್ಗೆ ಆಧಾರ ರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಿರುವ ಬಗ್ಗೆ ಮಾಹಿತಿ ಇತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ.

    Live Tv